ನಾನೆಂಬ ಪರಿಮಳದ ಹಾದಿಯಲಿ: ನಾನೊಬ್ಬ ರೈತ ಮಹಿಳೆ ಮತ್ತಿದೇ ನನ್ನ ಅಸ್ತಿತ್ವ

‘ಮಗಳ ಕೈ ಕುತ್ತಿಗೆ ಬೋಳಾಗಿದೆಯಲ್ಲಾ ಎಂದು ನೊಂದುಕೊಂಡು ತಮಗೆ ಅನುಕೂಲವಾದಾಗ ಅಪ್ಪ ಅಮ್ಮ ಕಷ್ಟಪಟ್ಟು ಮಾಡಿಸಿಕೊಟ್ಟ ಸರ, ಓಲೆ, ಬಳೆಗಳು ನೆನಪಾದವು. ಎಲ್ಲವನ್ನೂ ಬ್ಯಾಂಕಿಗೆ ತೆಗೆದುಕೊಂಡು ಹೋದೆ. ಮತ್ತೂ ಸಾಕಾಗಲಿಲ್ಲ. ಕೊನೆಗೆ ಅದಕ್ಕೆ ಮಾಂಗಲ್ಯಸರವನ್ನೂ ಸೇರಿಸಿದೆ. ಮ್ಯಾನೇಜರ್ ನೋಟದಿಂದ ನನ್ನ ಕಣ್ಣು ತುಂಬಿಬಂದಿತ್ತು. ನನ್ನ ದೃಷ್ಟಿಯಲ್ಲಿ ತಾಳಿಯೆಂಬುದು ಕೇವಲ ಚಿನ್ನದ ತುಂಡಾಗಿತ್ತು ಅಷ್ಟೇ. ಹನ್ನೆರಡು ವರ್ಷಗಳ ಹಿಂದೆ ಹೀಗೆ ಬ್ಯಾಂಕ್ ಸೇರಿದ ತಾಳಿ ಸಹಿತವಾದ ನನ್ನ ಒಡವೆಗಳು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಸುತ್ತಾಡುತ್ತಲೇ ಇವೆ.‘ ಉಷಾ ಕಟ್ಟೆಮನೆ

ನಾನೆಂಬ ಪರಿಮಳದ ಹಾದಿಯಲಿ: ನಾನೊಬ್ಬ ರೈತ ಮಹಿಳೆ ಮತ್ತಿದೇ ನನ್ನ ಅಸ್ತಿತ್ವ
Follow us
|

Updated on:Jan 29, 2021 | 5:03 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಲೇಖಕಿ ಉಷಾ ಕಟ್ಟೆಮನೆ ಅವರ ಪರಿಮಳದ ಜಾತ್ರೆ ಇಲ್ಲಿದೆ…

ಪರಿಮಳಕ್ಕೆ ಒಂದು ವಿಶೇಷ ಗುಣವಿದೆ. ಅದು ಮೆಲ್ಲಮೆಲ್ಲನೆ ಪಂಚೇಂದ್ರಿಯಗಳನ್ನು ಆವರಿಸಿಕೊಳ್ಳುತ್ತದೆ. ಮೊದಲು ಅದು ಅಗೋಚರವಾಗಿ ಗಾಳಿಯಲ್ಲಿ ತೇಲಿಬಂದು ನಾಸಿಕವನ್ನು ಸ್ಪರ್ಶಿಸಿ ಕಣ್ಣನ್ನು ಪ್ರಚೋದಿಸುತ್ತದೆ. ನಾವು ಅದರ ಜಾಡನ್ನು ಅರಸಿ ಹೋಗುತ್ತೇವೆ. ಕಾಣಲು ಸಿಕ್ಕರೆ, ಕೈಗಳಿಂದ ಮುಟ್ಟಲು ಸಾಧ್ಯವಾದರೆ ಅದು ನಮ್ಮ ಭಾಗ್ಯ. ಕೈಗೆ ಎಟುಕಲಾರದಷ್ಟು ಎತ್ತರದಲ್ಲಿದ್ದರೆ? ಅದು ಬೇಕೇಬೇಕು ಎಂದಾದರೆ ಅದನ್ನು ತಲುಪುವ ಏಣಿಯನ್ನು ನಾವು ಹುಡುಕಲೇಬೇಕು. ಸಾಹಸಿಗಳಾಗಿದ್ದರೆ ಆ ಭಾಗ್ಯ ನಮ್ಮ ಕೈಗಳಿಗೆ ಅಂಟಿಯೇ ಅಂಟುತ್ತದೆ. ಭಾವ ಸ್ಪರ್ಶಕ್ಕೆ ನಿಲುಕುತ್ತದೆ. ಬಹುತೇಕ ಎಲ್ಲರ ಬದುಕಿನಲ್ಲಿಯೂ ಇಂತಹ ಹರಿಯುವಿಕೆಗಳು ಇದ್ದೇ ಇರುತ್ತವೆ. ಅದನ್ನು ಆಲಿಸುವ ಸೂಕ್ಷತೆ ನಮ್ಮಲ್ಲಿದ್ದರೆ ನೂರಾರು ಕಥೆಗಳು ನಮ್ಮೆದುರು ಬಿಚ್ಚಿಕೊಳ್ಳುತ್ತವೆ. ಒಂದಂತೂ ಸತ್ಯ ಪರಿಮಳಕ್ಕೆ ಹಾತೊರೆದರೆ ಏಕಾಂಗಿ ಪಯಣವಿರಬೇಕು; ಕಲ್ಲುಮುಳ್ಳಿನ ಹಾದಿಯನ್ನು ತುಳಿಯಲೇಬೇಕು.

ಹೆಣ್ಣೊಬ್ಬಳು ಯೌವನದಲ್ಲಿ ಪರಿಮಳದ ಜಾಡು ಹಿಡಿದು ಹೊರಟರೆ ಅವಳು ಅಭಿಸಾರಿಕೆಯಾಗಬಹುದು ಆದರೆ ಮಧ್ಯವಯಸ್ಸಿನ ಅಂಚಿನಲ್ಲಿ ಪರಿಮಳಕ್ಕೆ ಕಣ್ಮುಚ್ಚಿ ಅನೂಹ್ಯದತ್ತ ಮುಖಮಾಡಿದರೆ ಅದು ಅಧ್ಯಾತ್ಮದ ಮಿಂಚಾಗಬಹುದು ಆದರೆ ಎಲ್ಲರೂ ಅಕ್ಕ ಆಗಲಾರರು. ಕಮಲಾ ಸುರೈಯ್ಯಾ ಆಗಲಾರರು. ಒಂದೇ ಮಾತಿನಲ್ಲಿ ಹೇಳುವುದೆಂದರೆ ನಾನು ಹೈಸ್ಕೂಲ್ ಮೆಟ್ಟಲು ಹತ್ತಿ ಕಾಲೇಜು ಕಲಿತದ್ದೇ ಒಂದು ಸಾಧನೆ. ಪ್ರತಿದಿನ ಎಂಟೆಂಟು ಹದಿನಾರು ಮೈಲಿ ಪಯಣ. ಸೂರ್ಯೋದಯದೊಡನೆ ಮನೆಬಿಟ್ಟರೆ ಮನೆ ತಲುಪುವುದು ಸೂರ್ಯಾಸ್ತವಾಗಿ ದಟ್ಟ ಕತ್ತಲು ಆವರಿಸಿದ ಮೇಲೆಯೇ. ಯಾರ್ಯಾರದೋ ಮನೆಯಲ್ಲಿದ್ದುಕೊಂಡು ಅವರ ಔದಾರ್ಯದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿದೆ. ಸ್ನಾತಕೋತ್ತರ ಪದವಿಯನ್ನು ಹಿಂದುಳಿದ ವರ್ಗದ ಹಾಸ್ಟೇಲಿನಲ್ಲಿದ್ದುಕೊಂಡು ಪಡೆದೆ. ಆ ಆರ್ಥಿಕ ಅಸ್ಥಿರತೆ ಈ ಕ್ಷಣದವರೆಗೂ ಮುಂದುವರಿದಿದೆ.

                              ಹಿರಿಯ ಲೇಖಕಿ ಡಾ. ವಿಜಯಮ್ಮ ಅವರಿಂದ ನಾಟಕ ರಚನೆಗಾಗಿ ಬಹುಮಾನ ಸ್ವೀಕರಿಸುತ್ತಿರುವ ಉಷಾ ಕಟ್ಟೆಮನೆ

ಎಲ್ಲಾ ಹುಡುಗಿಯರಂತೆ ನನಗೂ ಕನಸುಗಳಿದ್ದವು. ಸಹಜವಾಗಿಯೇ ಅಲ್ಲಿ ಆತ್ಮಸಖನಿದ್ದ. ಸಮಾಜಮುಖಿ ಸಾಹಿತ್ಯದ ಓದಿತ್ತು. ಸಮಾಜದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕೆಂಬ ಕನಸಿತ್ತು. ಮಕ್ಕಳು, ಸಂಸಾರ, ದುಡ್ಡು, ಕಾರು ಬಂಗ್ಲೆಗಳ ಬಗ್ಗೆ ಎಂದೂ ಯೋಚಿಸಲೇ ಇಲ್ಲ. ಅದೇ ಮನೋಭಾವದ ಹುಡುಗನ ಜೊತೆ ಮದುವೆಯೂ ಮಾಡಿಕೊಂಡೆ. ಎರಡು ಮಕ್ಕಳಾದವು. ಭ್ರಮೆಗಳು ಒಂದೊಂದಾಗಿ ಕಳಚಿ ಬೀಳತೊಡಗಿದವು. ಅಂತರ್ಜಾತೀಯ ಪ್ರೇಮವಿವಾಹವಾದ ಕಾರಣ ನಾನಾಗಿಯೇ ತವರು ಮನೆಯಿಂದಲೂ ಗಂಡನ ಮನೆಯಿಂದಲೂ ಅಂತರ ಕಾಯ್ದುಕೊಂಡೆ. ವರ್ತಮಾನದಲ್ಲಿ ನಿಂತು ನೋಡಿದಾಗ ಈಗ ಅನ್ನಿಸುತ್ತಿದೆ; ನನ್ನೊಳಗೇ ಹುದುಗಿರುವ ಕೀಳರಿಮೆಯೇ ಅದಕ್ಕೆ ಮುಖ್ಯ ಕಾರಣವಾಗಿತ್ತು. ಯಾರ ಸಹಾಯವೂ ಇಲ್ಲದೆ ಮಕ್ಕಳನ್ನು ಬೆಳೆಸಿದೆ. ಒಂದು ವಿಚಿತ್ರ ಸನ್ನಿವೇಶದಲ್ಲಿ ಮೊದಲ ಮಗುವಿನ ಬಾಣಂತನ ಗಂಡನ ಮನೆಯಲ್ಲಿ ಆಯ್ತು. ಎರಡನೇ ಮಗುವಿನ ಬಾಣಂತನ ನಾನೇ ಮಾಡಿಕೊಂಡೆ. ಮನೆಗೆಲಸದವರನ್ನೂ ಇಟ್ಟುಕೊಳ್ಳಲಿಲ್ಲ. ಆತ್ಮವಿಶ್ವಾಸ ಉತ್ತುಂಗದಲ್ಲಿದ್ದ ಕಾಲವದು!

ಮಲೆನಾಡಿನಲ್ಲಿ ಒಂಟಿಮನೆಯಲ್ಲಿ ಬೆಳೆದವಳು ನಾನು. ಒಂಟಿತನ ಅನಿವಾರ್ಯವಾಗಿತ್ತು. ಹಾಗಾಗಿ ಮರಗಿಡಗಳೊಡನೆ, ನದಿತೊರೆಗಳೊಡನೆ, ಪಶುಪಕ್ಷಿಗಳೊಡನೆ ಆತ್ಮಸಂಗಾತವಿತ್ತು. ನದಿದಂಡೆಯ ಮೇಲಿನ ವಿಶಾಲವಾದ ಅಡಿಕೆ ತೋಟದಿಂದ ಅಪ್ಪನ ಅಣತಿಯಂತೆ ಅಡಿಕೆ ಹೆಕ್ಕಿ ಮನೆಯಂಗಳಕ್ಕೆ ತಂದು ಹಾಕುವುದು ನನಗಾಗ ಬಲು ದೊಡ್ಡ ಶಿಕ್ಷೆಯಂತಿತ್ತು. ಮನೆಯೊಂದ ಅಂಗಳಕ್ಕೆ ಕಾಲಿಟ್ಟರೆ ಎದುರುಗಡೆ ಮಲೆತು ನಿಂತಿರುವ ಕುಮಾರ ಪರ್ವತ. ಹಿಂದೆ ತಿರುಗಿದರೆ ಕುಮಾರಧಾರೆಯ ಉಪನದಿ ಬಸವನಗುಡಿ ಹೊಳೆ. ಬಲಕ್ಕೆ ಹೊರಳಿದರೆ ಹಚ್ಚಹಸುರಿನ ವಿಶಾಲವಾದ ಭತ್ತದ ಗದ್ದೆ. ಎಡಕ್ಕೆ ತಿರುಗಿದರೆ ಸದಾ ದನಗಳಿಂದ ತುಂಬಿರುತ್ತಿದ್ದ ದನದ ಹಟ್ಟಿ. ಇವೆಲ್ಲಾ ನನ್ನ ಬಾಲ್ಯದ ಒಡನಾಡಿಗಳು. ಅಹಾ! ಅವರೊಡನೆ ಮಾತಾಡಿಕೊಳ್ಳುತ್ತಾ ಬೆಳೆದ ಅ ದಿವ್ಯ ಕ್ಷಣಗಳು. ಅಂದಿನ ಆ ಒಂಟಿತನವನ್ನು ಇಂದಿನ ಏಕಾಂತವಾಗಿ ಪರಿವರ್ತಿಸಿಕೊಂಡ ಹಾದಿಯಲ್ಲಿ ಅನೇಕ ಜಾತ್ರೆ, ದೊಂಬಿ, ಕಾಮಬಿಲ್ಲುಗಳನ್ನು ಕಂಡಿದ್ದೇನೆ. ವೃತ್ತಾಕಾರವಾಗಿ ಸುತ್ತಾಡುತ್ತಾ ಮತ್ತೆ ಆರಂಭದ ಬಿಂದುವಿಗೇ ಬಂದು ನಿಂತಿದ್ದೇನೆ. ನನ್ನ ಸೊಂಟದಲ್ಲಿಯೂ ವೃತ್ತಗಳು ಸುತ್ತಿಕೊಂಡಿವೆ.

                ತೋಟದ ಮನೆಯಲ್ಲಿ ಮುದ್ದಿನ ನಾಯಿಮರಿಗಳೊಂದಿಗೆ ಉಷಾ

ಕೈಯ್ಯಲ್ಲಿ ವಿದ್ಯೆ ಇತ್ತು. ಕೆಲಸ ಸಿಕ್ಕಿಯೇ ಸಿಗುತ್ತದೆ ಎಂಬ ಭರವಸೆಯಿತ್ತು. ‘ನಿನಗೊಂದು ಕೆಲಸ ಕೊಡಿಸುವುದು ಕಷ್ಟವೇ’ ಎಂದು ಗಂಡ ಭರವಸೆಯನ್ನೂ ನೀಡಿದ. ನಂಬಿದೆ. ಇದ್ದ ಕೆಲಸವನ್ನು ಬಿಟ್ಟು ಸಿಂಗಲ್ ಪೇರೆಂಟ್​ನಂತೆ ಮಕ್ಕಳನ್ನು ಬೆಳೆಸಿದೆ. ಅವುಡುಗಚ್ಚಿ ಸಂಸಾರವನ್ನು ನಿಭಾಯಿಸುತ್ತಿದ್ದೆ. ಯಾವಾಗ ಗಂಡ ಪದೇಪದೆ ಕೆಲಸ ಬಿಡುವುದನ್ನು ರೂಢಿಸಿಕೊಂಡನೋ ಸಣ್ಣದೊಂದು ಆತಂಕ ಕಾಡತೊಡಗಿತು. ಯಾವ ಉಳಿತಾಯವೂ ಇರಲಿಲ್ಲ. ಕೊನೆಗೆ ಒಂದು ಇನ್ಷೂರೆನ್ಸ್ ಪಾಲಿಸಿಯೂ ಇರಲಿಲ್ಲ. ಈ ಬಗ್ಗೆ ಸಾಕಷ್ಟು ಸಲ ಹೇಳಿದರೂ ಆತ ಗಮನ ಕೊಡಲೇ ಇಲ್ಲ. ಹೀಗಾದರೆ ಒಂದು ದಿನ ಬೀದಿಗೆ ಬೀಳುತ್ತೇವೆ ಎಂದು ಅನ್ನಿಸತೊಡಗಿತು. ಆ ಭಾವ ಬೆಳೆಯುತ್ತಾ ಹೋಯ್ತು. ಅದು ಗಟ್ಟಿ ಸ್ತಂಭವಾದಾಗ ನಾನು ಅತಿಯಾಗಿ ಮೆಚ್ಚಿದ್ದ ಉಪನ್ಯಾಸಕ ವೃತ್ತಿಗೆ ಮರಳೋಣವೆಂದರೆ ವಯಸ್ಸು ಮೀರಿ ಹೋಗಿತ್ತು. ಪತ್ರಿಕೋದ್ಯಮ ನನ್ನನ್ನು ತಿರಸ್ಕರಿಸಿತ್ತು. ಯಾಕಾಗಿ, ಯಾರಿಗಾಗಿ ಬರೆಯಬೇಕು? ಎಂಬ ಜಿಜ್ಞಾಸೆಯಲ್ಲಿ ಬರವಣಿಗೆ ಹಳಿ ತಪ್ಪಿತು. ಉದ್ಯೋಗಕ್ಕೆ ಬೇಕಾದ ಯಾವ ಕೌಶಲವೂ ನನ್ನಲ್ಲಿರಲಿಲ್ಲ.

ಬದುಕು ಸ್ಥಗಿತಗೊಂಡಿದೆ ಎಂಬ ಭಾವ ಆವರಿಸಿದಾಗ ಭೌತಿಕ ಚಲನೆ ಆರಂಭವಾಗಬೇಕು. ಚಾರಣ, ಪ್ರವಾಸ, ರಂಗಭೂಮಿ ಮುಂತಾದವುಗಳಲ್ಲಿ ಸಕ್ರಿಯವಾಗುತ್ತಾ ಹೋದೆ. ಈಶಾನ್ಯ ರಾಜ್ಯಗಳೂ ಸೇರಿದಂತೆ ಹಿಮಾಲಯದಂಚಿನ ಎಲ್ಲಾ ರಾಜ್ಯಗಳನ್ನು ಸುತ್ತಾಡಿದೆ. ಮುಂದಿನ ನಡೆ ಸ್ಪಷ್ಟವಾಗುತ್ತಾ ಬಂತು. ಮಣ್ಣಿನೆಡೆಗೆ ಸಂಪೂರ್ಣ ಹೊರಳಿಕೊಳ್ಳುವ ನಿರ್ಧಾರ ಮಾಡಿದೆ. ಮಣ್ಣನ್ನು ನಂಬಿದವರಿಗೆ ಅದು ಎಂದೂ ಮೋಸಮಾಡುವುದಿಲ್ಲ. ಒಂದು ಹಿಡಿ ಬೀಜ ಬಿತ್ತಿದರೆ ಅದರ ಸಹಸ್ರಾರು ಪಟ್ಟು ಹಿಂದಿರುಗಿ ನೀಡುತ್ತದೆ. ಹೊಟ್ಟೆಗಿಲ್ಲದೆ ಸಾಯುವ ಅಥವಾ ಸಾಯಿಸಿಕೊಳ್ಳುವ ಸಂದರ್ಭವೇ ಬಾರದು. ಮಣ್ಣನ್ನೇ ಗಟ್ಟಿಯಾಗಿ ಅಪ್ಪಿಕೊಳ್ಳಲು ತೀರ್ಮಾನಿಸಿದೆ. ನಾನು ಬಾಲ್ಯವನ್ನು ಕಳೆದ ಪರಿಸರದಂತಹದೇ ಜಾಗಕ್ಕಾಗಿ ಹುಡುಕಾಟ ನಡೆಸಿದೆ. ಕೊನೆಗೂ ಪಶ್ಚಿಮ ಘಟ್ಟದಂಚಿನ ನದಿ ದಂಡೆಯ ಮೇಲಿನ ಅಡಿಕೆ ತೋಟವೊಂದಕ್ಕೆ ಮಾರು ಹೋದೆ. ಆದರೆ ದುಡ್ಡು ಬೇಕಲ್ಲಾ?

ಹಿಂದೆ ನಮ್ಮ ಪ್ರೊಡಕ್ಷನ್ ಹೌಸ್​ನಿಂದ ಕನ್ನಡ ಟಿವಿಯೊಂದಕ್ಕೆ ಕಾರ್ಯಕ್ರಮವನ್ನು ಮಾಡಿಕೊಡುತ್ತಿದ್ದೆವು. ಅದರಿಂದ ಸ್ವಲ್ಪ ದುಡ್ಡು ಬಂದಿತ್ತು. ಅದಕ್ಕೆ ನನ್ನ ತವರು ಮನೆಯಿಂದ ಸ್ವಲ್ಪ ದುಡ್ಡು ಸೇರಿಸಿದೆ, ಸಾಕಾಗಲಿಲ್ಲ. ಕೊನೆಗೆ ನನ್ನ ಅಪ್ಪ-ಅಮ್ಮ ನನಗೆ ಕೆಲವು ಒಡವೆಗಳನ್ನು ಮಾಡಿಕೊಟ್ಟಿದ್ದು ನೆನಪಾಯ್ತು. ಅವು ಮಗಳ ಕೈ ಕುತ್ತಿಗೆ ಬೋಳಾಗಿದೆಯಲ್ಲಾ ಎಂದು ನೊಂದುಕೊಂಡು ತಮಗೆ ಅನುಕೂಲವಾದಾಗ ಕಷ್ಟಪಟ್ಟು ಮಾಡಿಸಿಕೊಟ್ಟ ಸರ, ಓಲೆ, ಬಳೆಗಳಾಗಿದ್ದವು. ಅವನ್ನೆಲ್ಲ ಬ್ಯಾಂಕಿಗೆ ತೆಗೆದುಕೊಂಡು ಹೋದೆ. ಮತ್ತೂ ಸಾಕಾಗಲಿಲ್ಲ. ಕೊನೆಗೆ ಅದಕ್ಕೆ ಮಾಂಗಲ್ಯಸರವನ್ನೂ ಸೇರಿಸಿದೆ.

ನನಗೀಗಲೂ ನೆನಪಿದೆ. ಬಸವೇಶ್ವರ ಕೋಅಪರೇಟಿವ್ ಸೊಸೈಟಿಯ ಮ್ಯಾನೇಜರ್ ಎದುರಿನಲ್ಲಿ ನನ್ನೆಲ್ಲಾ ಒಡವೆಗಳನ್ನು ಇಟ್ಟಿದ್ದೆ. ಅವರು ನನ್ನನ್ನೊಮ್ಮೆ ಮಾಂಗಲ್ಯಸರವನ್ನೊಮ್ಮೆ ನೋಡುತ್ತಾ ಚಿನ್ನದ ಮೌಲ್ಯಮಾಪನಕ್ಕಾಗಿ ಆಚಾರಿಯನ್ನು ಕರೆಸಿದರು. ಮ್ಯಾನೇಜರ್ ನೋಟದಿಂದ ನನ್ನ ಕಣ್ಣು ತುಂಬಿಬಂದಿತ್ತು. ನನ್ನ ದೃಷ್ಟಿಯಲ್ಲಿ ತಾಳಿಯೆಂಬುದು ಕೇವಲ ಚಿನ್ನದ ತುಂಡಾಗಿತ್ತು ಅಷ್ಟೇ. ಹನ್ನೆರಡು ವರ್ಷಗಳ ಹಿಂದೆ ಹೀಗೆ ಬ್ಯಾಂಕ್ ಸೇರಿದ ತಾಳಿ ಸಹಿತವಾದ ನನ್ನ ಒಡವೆಗಳು ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಸುತ್ತಾಡುತ್ತಲೇ ಇವೆ. ಇನ್ನೂ ನನ್ನ ಬಳಿಗೆ ಬಂದಿಲ್ಲ.

ಭೂಮಿಯನ್ನೇನೋ ಕೊಂಡೆ. ಶಾಶ್ವತವಾಗಿ ಅಲ್ಲಿ ನೆಲೆಸುವ ನಿರ್ಧಾರ ಮಾಡಲಿಲ್ಲ. ಬೆಂಗಳೂರಿನ ಸೆಳೆತ ಇನ್ನೂ ಇತ್ತು. ಆದ್ರೆ ಯಾವಾಗ ಅರ್ಥಿಕ ಸ್ಥಿತಿ ತೀರಾ ಹದಗೆಟ್ಟು ಹೋಯ್ತೋ ಆಗ ಸ್ವತಃ ಕೈಗೆ ಮಣ್ಣನ್ನು ಮೆತ್ತಿಕೊಂಡೆ. ಕನಸುಗಳನ್ನು ಬಿತ್ತಲು ಆರಂಭಿಸಿದೆ. ಅನೇಕ ಅಡೆತಡೆಗಳು ಬಂದವು. ಊರು ಸಹಕಾರ ನೀಡಲಿಲ್ಲ. ಅಣ್ಣ ತವರು ಮನೆಯಿಂದ ಲಾರಿಯಲ್ಲಿ ತುಂಬಿಕೊಂಡು ಕೂಲಿಯಾಳುಗಳನ್ನು ತಂದ. ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ. ಮಾರ್ಗದರ್ಶನ ಮಾಡಿದ. ಆರ್ಥಿಕವಾಗಿ ಚೂರು ಚೇತರಿಸಿಕೊಂಡೆ. ವಿಶಾಲವಾದ ಮನೆಯಲ್ಲಿದ್ದವರು ಸಿಂಗಲ್ ಬೆಡ್ ರೂಂನ ಮನೆಗೆ ಶಿಪ್ಟ್ ಆಗಿ ಬೆಂಗಳೂರಿನ ಖರ್ಚನ್ನೂ ಸರಿತೂಗಿಸತೊಡಗಿದೆ. ಮಣ್ಣಿನಲ್ಲಿ ಅರಳಿದವಳು, ಮತ್ತೆ ಮಣ್ಣನ್ನೇ ನಂಬಿದೆ. ಸೋಲೊಪ್ಪಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ.

ಒಂಟಿತನ ನನ್ನ ಸ್ಥಾಯಿಭಾವ. ಹೇಳಿಕೊಳ್ಳುವಂತ ಗೆಳೆಯ-ಗೆಳತಿಯರಿಲ್ಲ. ನನಗೆ ಜನರೊಡನೆ ಬೆರೆಯಲು ಬರುವುದಿಲ್ಲ. ಅದು ನನ್ನ ಬಹುದೊಡ್ಡ ವೀಕ್​ನೆಸ್​. ಏಕಕಾಲದಲ್ಲಿ ನನಗೆ ಹಲವಾರು ಜನರ ಜೊತೆ ಒಡನಾಡಲು ಸಾಧ್ಯವಾಗದು. ಮೊದಮೊದಲು ಆಕರ್ಷಕವಾಗಿ ಕಂಡ ಸೋಷಿಯಲ್ ಮೀಡಿಯಾ ಭ್ರಮಾಲೋಕ ಎಂದು ಅನ್ನಿಸತೊಡಗಿತು. ಇಲ್ಲಿಯ ಹೆಚ್ಚಿನ ಜನರು ನನ್ನ ಗೆಳೆತನದ ಕೊಂಡಿಯಿಂದ ಕಳಚಿಕೊಂಡರು. ನನಗೂ ನಿರಾಳ ಭಾವ. ನಿಸರ್ಗದ ಜೊತೆ ಮಾತ್ರ ಹೃದಯಸಂವಾದ ಸಾಧ್ಯ ಎಂಬುದು ವೇದ್ಯವಾಗತೊಡಗಿತು.

ಹುಕ್ಕಾದ ಹುಕಿಯಲ್ಲಿ…

‘ಟಿವಿ9 ಕನ್ನಡ ಡಿಜಿಟಲ್’ ವಾರದ ಹಿಂದೆಯೇ ಈ ಬರಹವನ್ನು ಕೇಳಿತ್ತು. ನಾನಾಗ ನನ್ನ ಜಮೀನಿನಲ್ಲಿ ಅಡಿಕೆ ಮರಗಳಿಗೆ ಗೊಬ್ಬರ ಹಾಕಿಸುತ್ತಿದ್ದೆ. ನಿರಾಕರಿಸಲಿಲ್ಲ. ಮುಂದೂಡುತ್ತಾ ಬಂದೆ. ನನ್ನ ಆದ್ಯತೆ ಏನು ಎಂಬುದು ನನಗೆ ಮನದಟ್ಟಾಗಿತ್ತು. ಈಗ ತೋಟದ ಕೆಲಸ ಸದ್ಯಕ್ಕೆ ನಿಲುಗಡೆಯಾಗಿದೆ. ವಾರಕ್ಕೆರಡು ಬಾರಿ ಗಿಡಗಳಿಗೆ ನೀರುಣಿಸಿದರೆ ಸಾಕು. ಅಡಿಕೆ ಈಗ ಹಿಂದೆಂದೂ ಕಾಣದಷ್ಟು ಬೆಲೆಯನ್ನು ಕಾಣುತ್ತಿದೆ. ಅಂಗಳದಲ್ಲಿರುವ ಅಡಿಕೆಯನ್ನು ಜತನದಿಂದ ಕಾಪಾಡಿಕೊಳ್ಳಬೇಕಾಗಿದೆ. ಅಡಿಕೆ ನನಗೀಗ ಸಂಜೀವಿನಿಯಂತೆ ಕಾಣುತ್ತಿದೆ.

ನನ್ನ ಕನಸು ನನ್ನ ವರ್ತಮಾನ ನನ್ನ ಭವಿಷ್ಯ, ನನ್ನ ಐಡೆಂಟಿಟಿ ಎಲ್ಲವೂ ಈಗ ತೋಟವೇ ಆಗಿ ಹೋಗಿದೆ. ನನ್ನ ಮಕ್ಕಳಿಗೂ ಕೂಡಾ ಅದರ ಬಗ್ಗೆ ಮೋಹ ಹುಟ್ಟಿದೆ. ಹಾಗಾಗಿ ಈಗ ಪರಿಮಳದ ಜಾತ್ರೆಯಲ್ಲಿದ್ದೇನೆ.

ಈ ಲೋಕದೊಡನೆ ನನ್ನನ್ನು ಬಂದಿಸಿಟ್ಟಿರುವ ಸಂಗತಿಗಳು ಮೂರು. ಒಂದು ನನ್ನ ಮಕ್ಕಳು. ಎರಡು ನನ್ನ ನಾಯಿ ಚುಕ್ಕಿ, ಅದೂ ವೃದ್ದಾಪ್ಯದಲ್ಲಿದೆ. ಹನ್ನೆರಡು ತುಂಬಿ ಹದಿಮೂರಕ್ಕೆ ಕಾಲಿಡುತ್ತಿದ್ದಾಳೆ. ಮೂರನೆಯದು ನನ್ನ ತೋಟ. ಮೊದಲಿನೆರಡಕ್ಕೆ ಕೊನೆಯದೇ ಅಸ್ಥಿಭಾರ.

***

ಪರಿಚಯ : ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಬಾಳುಗೋಡು ಗ್ರಾಮದ ಕೂಜುಗೋಡು ಕಟ್ಟೆಮನೆ ಮನೆತನದ ಉಷಾ ಅವರು ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ವೃತ್ತಿ ಬದುಕನ್ನು ಆರಂಭಿಸಿದರು. ನಂತರ ಪತ್ರಕರ್ತರಾಗಿ, ಬರಹಗಾರ್ತಿಯಾಗಿ ಮುಂದುವರಿದು ಈಗ ಪೂರ್ಣ ಪ್ರಮಾಣದ ಕೃಷಿಕರಾಗಿದ್ದಾರೆ.

ನಾನೆಂಬ ಪರಿಮಳದ ಹಾದಿಯಲಿ: ಇಷ್ಟೆಲ್ಲವಾದರೂ ನನಗೆ ನಾನಾರೆಂಬುದು ಬೇಕು

Published On - 4:58 pm, Fri, 29 January 21