ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com
ಪರಿಕಲ್ಪನೆ: ಶ್ರೀದೇವಿ ಕಳಸದ
ಶಿವಮೊಗ್ಗದ ಟಿ. ಎಸ್. ಶ್ರವಣಕುಮಾರಿ ಅವರು ವಾಸಿಸುತ್ತಿರುವುದು ಬೆಂಗಳೂರಿನಲ್ಲಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿದ್ದ ಅವರು ನಿವೃತ್ತಿ ನಂತರ ಬರೆಯಲು ಶುರುಮಾಡಿದರು. ಮುಕ್ತವಾಗಿ ಓಡಾಡಲು ಸ್ವಾತಂತ್ರ್ಯ, ಅವಕಾಶ ಇರಲಿಲ್ಲವಾದ್ದರಿಂದ ನನ್ನ ಬರವಣಿಗೆಗಳ ಮಿತಿಯ ಅರಿವಿದೆ. ಆದರೂ ನನಗೀಗ ಇದೇ ಹಿರಿನಂಟು ಎನ್ನುತ್ತಾರೆ ಅವರು. ಒಂದು ಕಥಾ ಸಂಕಲನ ಮತ್ತು ಒಂದು ಪ್ರವಾಸ ಕಥನ ಪ್ರಕಟಿಸಿದ್ದಾರೆ.
ನೆನಪಿನ ಹಾದಿಯಲ್ಲಿ ಕಾಣುವಷ್ಟೂ ದೂರ ಹಿಂತಿರುಗಿ ನೋಡಿದರೆ ಮೊತ್ತಮೊದಲು ಕಾಣುವುದು ಏನೋ ಹೇಳಬೇಕೆಂಬ ತುಡಿತದ, ಆಸೆಯ, ನಿರೀಕ್ಷೆಯ ಬೆಳಕು ತುಂಬಿಕೊಂಡ ಮೂರ‍್ನಾಲ್ಕು ವರ್ಷದ ಹುಡುಗಿಯ ಕಣ್ಣುಗಳಲ್ಲಿ ನಿಧಾನವಾಗಿ ತುಂಬುತ್ತಿದ್ದ ಕಣ್ಣೀರು, ಹತಾಶೆ. ಯಾರಿಂದಲೂ ಪ್ರೀತಿ, ಸ್ವಾಂತನ ದೊರೆಯದೆ ಭಯ, ಅಸಹಾಯಕತೆ, ಅಭದ್ರತೆ ಎಲ್ಲವನ್ನೂ ಗಂಟಲಲ್ಲೇ ನುಂಗಿ ಕುಗ್ಗಿಹೋಗುತ್ತಿದ್ದ, ಮನದಲ್ಲಿ ನಡೆಯುತ್ತಿದ್ದುದನ್ನು ವಿವರಿಸಲಾಗದ ಮನಸ್ಥಿತಿ. ತಾನೇ ಸಮಾಧಾನ ಮಾಡಿಕೊಂಡು ಮೌನಕ್ಕೆ ಜಾರುತ್ತಿದ್ದ ಮನದಲ್ಲೇ ಉಳಿದುಹೋದ ಹೇಳಬೇಕೆಂದಿದ್ದ ಮಾತುಗಳು. ವಿಸ್ಮಯದ ಸಂಗತಿಯೆಂದರೆ ಅಪ್ಪ, ಅಮ್ಮ, ಅಣ್ಣ, ತಂಗಿ ಎಲ್ಲರೂ ಇದ್ದೂ ಬಾಲ್ಯದುದ್ದಕ್ಕೂ ಒಬ್ಬಂಟಿಯಾಗೇ ಉಳಿದು ಹೋದ ನನ್ನದೇ ವ್ಯಥೆಯಿದು.
ನನ್ನಪ್ಪ ಯಾಕೆ ಅಸಹಾಯಕರಾದರು?
ಕುಟುಂಬ ಸದಸ್ಯರಲ್ಲದ ಮೂರನೆಯಾಕೆ ಒಬ್ಬರು ಸದಾ ಕಾಲವೂ ಕೈಯಲ್ಲೊಂದು ಸ್ಕೇಲನ್ನೋ, ಬೀಸಣಿಕೆಯ ಹಿಡಿಯನ್ನೋ, ಛತ್ರಿಯ ಕೋಲನ್ನೋ ಹಿಡಿದು ಹೆದರಿಸಿ ʻಏನು ಹೇಳಿದರೆ ಸರಿಯೋ, ಏನು ಮಾತಾಡಿದರೆ ತಪ್ಪೋʼ ಎನ್ನುವ ದ್ವಂದ್ವವನ್ನು, ಕೀಳರಿಮೆಯನ್ನು, ಭಯದ ಪ್ರಜ್ಞೆಯನ್ನು ಬೇರೂರಿಸಿ, ಆತ್ಮವಿಶ್ವಾಸವನ್ನು ಕೊಂದದ್ದೇಕೆನ್ನುವುದು ಇಂದಿಗೂ ಅರ್ಥವಾಗಿಲ್ಲ. ಎಲ್ಲದಕ್ಕೂ ಹೀಯಾಳಿಸುತ್ತಾ, ಏನು ಉಡಬೇಕು, ತೊಡಬೇಕು, ಉಣಬೇಕು, ಯಾರೊಂದಿಗೆ ಎಷ್ಟು, ಏನು ಮಾತಾಡಬೇಕು, ಯಾರು ಸ್ನೇಹಿತರು, ಯಾವ ಸ್ಕೂಲು, ಮಾಧ್ಯಮ, ಏನು ಕಲಿಯಬೇಕು ಕಡೆಗೆ ನನ್ನ ಜನ್ಮದಿನಾಂಕ, ಹೆಸರನ್ನೂ ತಮ್ಮಿಚ್ಛೆಗೆ ತಕ್ಕಂತೆ ಬದಲಾಯಿಸಿ ಇಂದಿಗೂ ನನ್ನ ಹುಟ್ಟಿದದಿನ, ಹೆಸರುಗಳಂತಹ ವೈಯಕ್ತಿಕ ವಿಷಯಗಳ ಬಗ್ಗೆಯೂ ಸಾಕಷ್ಟು ಗೊಂದಲಗಳನ್ನೂ, ತಾಪತ್ರಯಗಳನ್ನೂ ತಂದೊಡ್ಡಿ ಅವರು ಅದಾವ ‘ಪುರುಷಾರ್ಥ’ ಸಾಧಿಸಿದರೋ ತಿಳಿಯದು. ಅರವತ್ತು ವರ್ಷವಾಗಿ, ಇಷ್ಟೆಲ್ಲಾ ಹಾದಿಯನ್ನು ಕ್ರಮಿಸಿದ ನಂತರವೂ, ಈಗಲೂ ಆಕ್ರಮಿಸಿಕೊಂಡೇ ಇರುವ ಅವರ ಪ್ರಭಾವದಿಂದ ಪ್ರಾಯಶಃ ಈ ಜನ್ಮದಲ್ಲಿ ಮುಕ್ತಿಯಿಲ್ಲ. ನಮ್ಮಪ್ಪನಿಗೇನೋ ನಾವೆಲ್ಲಾ ಮಕ್ಕಳ ಬಗ್ಗೆಯೂ ವಿಪರೀತ ಪ್ರೀತಿ, ಹೆಮ್ಮೆ, ಅಭಿಮಾನ. ಆದರೆ ಆಕೆಯ ತಡೆಗೋಡೆಯನ್ನು ಒಡೆದು ನಮ್ಮೆಡೆಗೆ ಬರದಂತೆ ಅವರನ್ನು ತಡೆದದ್ದು ಯಾವ ಸಂಕೋಚ, ಬಂಧನ, ಅಸಹಾಯಕತೆ, ದಾಕ್ಷಿಣ್ಯ, ಭಯ ಎನ್ನುವುದು ಇಂದಿಗೂ ಅರ್ಥವಾಗಿರದ ಸಂಗತಿ. ಯಾರ ಬೆಂಬಲವಿಲ್ಲದಿದ್ದರೂ, ನನ್ನದೇ ರೀತಿಯಲ್ಲಿ ಪ್ರತಿಭಟಿಸುತ್ತಿದ್ದುದರಿಂದ ಆಕೆಯ ದೃಷ್ಟಿಯಲ್ಲಿ ನಾನು ಘಟವಾಣಿ, ಹಟಮಾರಿ, ಮೊಂಡು! ಸಮಾಜದ ಕಣ್ಣಲ್ಲಿ ಆಕೆ ಮಹತ್ವದ ಸಮಾಜ ಸೇವಕಿ, ಮಹಿಳಾಪರ ಹೋರಾಟಗಾರ್ತಿ. ಇಂದಿಗೂ ಆಕೆಯ ಜೀವನದ ತತ್ವ ಮತ್ತು ಅನುಷ್ಠಾನದಲ್ಲಿದ್ದ ದ್ವಂದ್ವ ನನಗೊಂದು ಪ್ರಶ್ನೆಯೇ!
ಸಾಧಾರಣ ರೂಪಿನ, ಬಣ್ಣದ, ಪ್ರತಿಭಾಶಾಲಿಯಲ್ಲದ, ಸ್ವಮರುಕದಿಂದ ಕುಗ್ಗಿ ಹೋಗಿದ್ದ ನನಗೆ ಅನಿವಾರ್ಯವಾಗಿ ಜನರೊಂದಿಗೆ ಬೆರೆಯಲೇಬೇಕಾದ ಸಂದರ್ಭ ಬಂದಾಗ ‘Odd Man Out’ ಎಂದನಿಸುತ್ತಿದ್ದದ್ದು ಸುಳ್ಳಲ್ಲ. ಅಂತಹ ಸನ್ನಿವೇಶದಲ್ಲಿ ಸಂತೈಸುತ್ತಿದ್ದದ್ದು ಓದುವ ಹವ್ಯಾಸ. ಮಾತಾಡುವ ಹಿಂಜರಿಕೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಎಲ್ಲಿಗೆ ಹೋದರೂ, ಏನಾದರೊಂದನ್ನು ಓದುತ್ತಾ ಕುಳಿತು ಪುಸ್ತಕದಹುಳುವೆಂಬ ಬಿರುದನ್ನು ಸಂತೋಷದಿಂದಲೇ, ಹೆಮ್ಮೆಯಿಂದಲೇ ಪಡೆದುಕೊಂಡಿದ್ದೆ. ಪದವಿಗೆ ಬಂದ ಮೇಲೆ ಅಧ್ಯಾಪಕರ ಪ್ರೋತ್ಸಾಹದಿಂದ ಆವರಿಸಿಕೊಂಡಿದ್ದ ಆತ್ಮಮರುಕ ನಿಧಾನವಾಗಿ ತೆಳುವಾಗುತ್ತಾ, ಕಾಲೇಜಿನ ವಿಚಾರಗೋಷ್ಠಿಗಳಲ್ಲಿ, ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ, ಬಹುಮಾನಗಳನ್ನು ಗಳಿಸುತ್ತಾ ಹೋಗಿದ್ದು ನಾನೆಂಬ ಪರಿಮಳದ ಹಾದಿಯಲ್ಲಿ ಇಟ್ಟ ಮೊದಲ ಹೆಜ್ಜೆ! ಅಂದಿನವರೆಗೆ ನನ್ನನ್ನು ಕೇವಲವಾಗಿ ನೋಡಿದ್ದ ʻಆಕೆಯʼ ಮತ್ತು ಹಲವರ ಕಣ್ಣಲ್ಲಿ ʻಇವಳಲ್ಲೂ ಏನೋ ಒಂದಿದೆʼ ಎನ್ನುವ ಭಾವ. ಪದವಿಯಲ್ಲಿ ಯಾವ ಸೆಮಿಸ್ಟರುಗಳಲ್ಲೂ ಎಡವದೆ, ಮೊದಲ ದರ್ಜೆಯಲ್ಲಿ ಪಾಸಾದ ಕಾಲೇಜಿನ ಮೂವರಲ್ಲಿ ನಾನೊಬ್ಬಳಾಗಿದ್ದೆ. ನಾನಿನ್ನೂ ಪದವಿಯ ಎರಡನೆಯ ವರ್ಷದಲ್ಲಿದ್ದಾಗಲೇ ತಂದೆ ಬ್ಯಾಂಕಿನಿಂದ ನಿವೃತ್ತಿಯಾಗಿದ್ದರು. ಪಿಂಚಣಿಯೂ ಇಲ್ಲದ ಸಂದರ್ಭ. ಪದವಿಯ ಪ್ರಮಾಣ ಪತ್ರಕ್ಕೆ ಇಪ್ಪತ್ತೈದು ರೂಪಾಯಿ ಕಟ್ಟಬೇಕೆಂದಾಗ ಅದನ್ನಿಟ್ಟು ಪೂಜೆ ಮಾಡಬೇಕೆ? ಮಾರ್ಕ್ಸ್ ಕಾರ್ಡೇ ಸಾಕು ಎನ್ನುವಂತಹ ಪರಿಸ್ಥಿತಿ!
ಆರು ರೂಪಾಯಿಗಳ ದಿನಗೂಲಿ
ಅಲ್ಲಿಯವರೆಗೂ ಪದವಿಯ ನಂತರ ನನ್ನ ಮದುವೆ ಮಾಡುವುದೊಂದನ್ನೇ ಹೆಗ್ಗುರಿಯಾಗಿರಿಸಿಕೊಂಡಿದ್ದ ನಮ್ಮಮ್ಮನಿಗೆ ಹಣದ ಮುಗ್ಗಟ್ಟಿನ ಅನುಭವ ಬೇರೆಯದೇ ಪ್ರಪಂಚವನ್ನು ತೋರಿಸಿತ್ತು. ಹುಟ್ಟಿದಾಗಿನಿಂದಲೂ ಓದು ಮುಗಿದ ತಕ್ಷಣ ಮದುವೆಯೆಂಬುದನ್ನೇ ಕೇಳಿ, ಕೇಳಿ, ಮುಂದಿನ ಭವಿಷ್ಯದ ಯಾವ ಕಲ್ಪನೆಯೂ ಇಲ್ಲದೆ, ಮದುವೆಯಾದ ಮೇಲಾದರೂ ʻನನ್ನನ್ನು ನಾನಿರುವಂತೆಯೇ ಪ್ರೀತಿಸುವ ಗಂಡʼ ಸಿಕ್ಕಿದರೆ ಸಾಕೆಂಬ ಮನಸ್ಥಿತಿಯನ್ನು ತಲುಪಿದ್ದೆ. ಆಗಿನ ಹಣದ ಮುಗ್ಗಟ್ಟು ಹೇಗಿತ್ತೆಂದರೆ ಡಿಗ್ರಿ ಮುಗಿದ ತಕ್ಷಣ ಲೋಕೋಪಯೋಗಿ ಇಲಾಖೆಯಲ್ಲಿ ದಿನಕ್ಕೆ ಆರು ರೂಪಾಯಿಗಳ ದಿನಗೂಲಿಗೆ ಟೈಪಿಂಗ್ ಕೆಲಸಕ್ಕೆ ಹೋಗುತ್ತಿದ್ದೆ. ತಿಂಗಳಿಗೆ ಬರುತ್ತಿದ್ದ ನೂರಿಪ್ಪತ್ತರಿಂದ ನೂರೈವತ್ತು ರೂಪಾಯಿಗಳಿಗೂ ಮನೆಯಲ್ಲಿ ತುಂಬಾ ಮಹತ್ವವಿದ್ದ ಕಾಲವದು. ಆ ಸಮಯದಲ್ಲಿ ಅಣ್ಣನಿಗೂ ಬ್ಯಾಂಕಿನಲ್ಲಿ ಕೆಲಸ ಸಿಕ್ಕರೂ ಬೇರೆ ಊರಿನಲ್ಲಿ ನೇಮಕಾತಿಯಾಗಿದ್ದು, ಮನೆ ನಡೆಸುವಲ್ಲಿ ಸ್ವಲ್ಪ ಮಟ್ಟಿಗಿನ ಅಡಚಣೆಯೇ ಇತ್ತು. ಬ್ಯಾಂಕಿನ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳುವಂತೆ ಪ್ರೋತ್ಸಾಹ ನೀಡಿದ್ದು ತಂದೆ. ಯಾರ ವಶೀಲಿಯೂ ಇಲ್ಲದೆ, ಹತ್ತುಸಾವಿರಕ್ಕೂ ಹೆಚ್ಚು ಜನರು ಬರೆದಿದ್ದ ಪರೀಕ್ಷೆಯಲ್ಲಿ ಪಾಸಾಗಿ, ಆಯ್ಕೆಯಾದ ಕೇವಲ ಮೂವತ್ಮೂರು ಜನರಲ್ಲಿ ಒಬ್ಬಳಾಗಿ ಭಾರತೀಯ ಸ್ಟೇಟ್‌ಬ್ಯಾಂಕಿನಲ್ಲಿ ಕಾಲಿಟ್ಟಿದ್ದು ನನ್ನಲ್ಲಿ ತುಂಬಿದ ಆತ್ಮವಿಶ್ವಾಸ ಪರಿಮಳದ ಹಾದಿಯ ಮುಂದಿನ ಹೆಜ್ಜೆ.
ಮುಂದಿನ ಒಂದೆರಡು ವರ್ಷಗಳಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದೆ. ನಾನಿರುವ ಹಾಗೆಯೇ ಒಪ್ಪಿಕೊಂಡು ಪ್ರೀತಿಸುವ ಗಂಡನೇ ಸಿಕ್ಕಿದ್ದು ಪುಣ್ಯವೇ ಸರಿ. ಬರೆಯುವುದಿರಲಿ, ಓದುವ ಅಭಿರುಚಿಯೂ ಇರದಿದ್ದರೂ, ನನ್ನ ಹವ್ಯಾಸವನ್ನು ಅವರು ಗೌರವಿಸುವ ಪರಿಗೆ ಶರಣು. ಅವರ ಆಸಕ್ತಿಯ, ಕ್ರಿಕೆಟ್ಟಾಗಲೀ, ಸುದ್ದಿಗಳಾಗಲೀ, ರಾಜಕೀಯವಾಗಲೀ ನನ್ನನ್ನೆಂದೂ ರಂಜಿಸಿಲ್ಲ. ಇಬ್ಬರ ಆಸಕ್ತಿಯೂ ಪರಸ್ಪರ ವಿರುದ್ಧ ದಿಕ್ಕಿಗೇ ಇದ್ದರೂ, ಇದುವರೆಗೂ ಒಮ್ಮೆಯೂ ಅದರ ಸಲುವಾಗಿ ಒಂದು ಘರ್ಷಣೆಯೂ ನಡೆದಿಲ್ಲದೇ ಇರುವುದು ನಾವಿಬ್ಬರೂ ಪರಸ್ಪರರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ ಎನ್ನುವುದಕ್ಕೆ ಪುರಾವೆಯಲ್ಲವೇ! ಶಿವಮೊಗ್ಗದಿಂದ ಬೆಂಗಳೂರಿನಂತಹ ಮಹಾನಗರವನ್ನು ಸೇರಿ ಇನ್ನೂ ಇಲ್ಲಿನ ಜನಜೀವನವನ್ನು ಬೆರಗುಗಣ್ಣಿನಿಂದ ನೋಡುತ್ತಿರುವಾಗಲೇ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ನನ್ನವರಿಗೆ ಬಡ್ತಿಯಾಗಿ ಅವರು ಊರನ್ನು ಬಿಡಬೇಕಾಯಿತು.
ಕೈಚಾಚಿ ಕೇಳಿಕೊಂಡ ಮಾತದು
ಗಂಡನ ಮನೆಯದು ಆರು ಗಂಡು, ಎರಡು ಹೆಣ್ಣು ಮಕ್ಕಳಿದ್ದ ಅವಿಭಕ್ತ ಕುಟುಂಬ. ಮೂರನೆಯ ಸೊಸೆ ನಾನು. ರಕ್ತದ ಕ್ಯಾನ್ಸರಿನಿಂದ ಬಳಲುತ್ತಿದ್ದ ಮಾವ ಹದಿನೈದು ದಿನಕ್ಕೋ, ತಿಂಗಳಿಗೋ ಒಮ್ಮೆ ಕಿದ್ವಾಯಿ ಆಸ್ಪತ್ರೆಗೆ ಬರಬೇಕಾಗಿತ್ತು. ಕೆಲವೊಮ್ಮೆ ವಾರ, ಹತ್ತು ದಿನ ಉಳಿಯಬೇಕಾಗುತ್ತಿತ್ತು. ಹಾಗಾಗಿ ನಮ್ಮ ಮನೆ ಬೆಂಗಳೂರಿನಲ್ಲಿ ಇರುವುದು ಅನಿವಾರ್ಯವಾಗಿತ್ತು. ನಾನಾಗ ಚೊಚ್ಚಲ ಬಸುರಿ. ದಿನವೂ ಬೆಳಗ್ಗೆ ಏಳು ಗಂಟೆಗೆ ಮನೆಬಿಟ್ಟರೆ ತುಮಕೂರಿನಿಂದಿವರು ವಾಪಸ್ಸು ಬರುತ್ತಿದ್ದದ್ದು ರಾತ್ರಿ ಒಂಬತ್ತು ಗಂಟೆಯ ಮೇಲೇ. ಎಷ್ಟೋ ವೇಳೆ ನಡುರಾತ್ರಿಯಾಗಿರುತ್ತಿತ್ತು. ಈಗಿನಂತೆ ಉತ್ತಮವಾದ ರಸ್ತೆಯಿರಲಿಲ್ಲ. ತಡವಾದ ದಿನಗಳಲ್ಲಿ ದಾರಿಯಲ್ಲಾದ ಯಾವುದೋ ಅಪಘಾತದ, ಸಾವಿನ ಕಾರಣಗಳು. ರಾತ್ರಿ ಹತ್ತು ದಾಟಿದೊಡನೆ ದೀಪವಾರಿಸಿ ಪುಟ್ಟ ವರಾಂಡದ ಕತ್ತಲಲ್ಲಿ ಕುಳಿತು ಗ್ರಿಲ್‌ನಿಂದ ಹೊರಗೆ ಒಂದೆರಡು ಫರ್ಲಾಂಗ್ ದೂರದವರೆಗೂ ಕಾಣುತ್ತಿರುವ ರಸ್ತೆಯ ಕಡೆಗೇ ಗಂಟೆಗಟ್ಟಲೆ ಕಣ್ಣುನೆಡುವಾಗ ಹೊಟ್ಟೆಯಲ್ಲೆಲ್ಲಾ ಕಪ್ಪೆಯ ಕುಣಿತ. ತಿರುವಿನಲ್ಲಿ ಇವರನ್ನು ಕಂಡ ಮೇಲೆ ಸಮಾಧಾನದ ನಿಟ್ಟುಸಿರು, ಊಟ. ರಾತ್ರಿ ಎಷ್ಟು ಹೊತ್ತಿಗೇ ಮಲಗಿದರೂ ಬೆಳಗಿನ ಜಾವ ಏಳದೇ ಇಬ್ಬರಿಗೂ ವಿಧಿಯಿಲ್ಲ. ಡಾಕ್ಟರ ಬಳಿಗೆ ತಪಾಸಣೆಗೆ ಹೋಗುವಾಗಲೂ ಒಬ್ಬಳೇ ಹೋಗುವುದು ಅನಿವಾರ್ಯವಾಗಿತ್ತು. ಚೊಚ್ಚಲ ಬಸಿರನ್ನು ಸಂಭ್ರಮಿಸಿದ ನೆನಪೇ ನನಗಿಲ್ಲ.‘ಪುಟ್ಟಾ ನಾನೊಂದು ಮಾತು ಕೇಳ್ತೀನಿ ನಡೆಸಿಕೊಡ್ತೀಯಾ’ ಹೆರಿಗೆಗೆ ತವರಿಗೆ ಹೊರಟಿದ್ದಾಗ ನಮ್ಮಿಬ್ಬರ ಕಡೆಯ ಭೇಟಿಯಲ್ಲಿ ಮಾವ ನನ್ನತ್ತ ಕೈಚಾಚಿ ಕೇಳಿದ ಮಾತಿದು. ‘ಅಣ್ಣಾ, ನೀವು ಕೇಳ್ಕೋಬೇಡಿ, ಹೇಳಿ ಸಾಕು. ಖಂಡಿತಾ ಮಾಡ್ತೀನಿ’ ಎಂದೆ. ಅವರು ಮಮಕಾರದಿಂದ ನನ್ನನ್ನು ʻಪುಟ್ಟಾʼ ಎಂದು ಕರೆಯುತ್ತಿದ್ದರು; ನಾನು ಅಷ್ಟೇ ಪ್ರೀತಿಯಿಂದ ʻಅಣ್ಣಾʼ ಎಂದೇ ಕರೆಯುತ್ತಿದ್ದೆ. ‘ನೀನು ವಾಪಸ್ಸು ಮಗುವನ್ನು ಕರ್ಕೊಂಡು ಬರೋ ಹೊತ್ತಿಗೆ ನಾನು ಬದುಕಿರಲ್ಲ ಅಂತ ಅನ್ನಿಸ್ತಿದೆ. ನಿಮ್ಮತ್ತೆ ಒಬ್ಳೇ ಆಗ್ಬಿಡ್ತಾಳೆ; ಇನ್ನೂ ಮೂವರ ಓದು ಮುಗ್ದಿಲ್ಲ, ನಾಲ್ಕು ಮದುವೆಗಳಾಗ್ಬೇಕು ಮನೆಯಲ್ಲಿ, ಮಕ್ಳೆಲ್ಲಾ ಅವ್ರ ಕಾಲ್ಮೇಲೆ ಅವ್ರು ನಿಂತ್ಕೊಳೋ ಹಾಗಾಗ್ಬೇಕು. ಒಬ್ಬೊಬ್ರ ಸ್ವಭಾವ ಒಂದೊಂಥರಾ. ಎಲ್ರನ್ನೂ ಹೊಂದಿಸ್ಕೊಂಡು ಹೋಗ್ಬೇಕು. ಗಂಡು ಮಕ್ಳು ಓಡಾಡ್ಬೋದು, ದುಡ್ಡು ಕಾಸಿಗೆ ನಿಂತ್ಕೋಬೋದು. ಹೆಂಗಸರ ಜವಾಬ್ದಾರಿಗಳೇ ಬೇರೆ ಪುಟ್ಟಾ. ಎಲ್ಲ ಜವಾಬ್ದಾರಿಗಳಲ್ಲೂ ಅತ್ತೆ ಜೊತೆಗೆ ನಿಂತ್ಕೋತೀನಿ ಅಂತ ಮಾತ್ಕೊಡ್ತೀಯಾ ನಂಗೆ’ ಅಂದರು. ಅವರ ಕೈಗಳನ್ನು ಕಣ್ಣಿಗೊತ್ತಿಕೊಂಡು ಭರವಸೆ ನೀಡಿದೆ. ಅವರು ನನ್ನ ಮೇಲಿಟ್ಟ ನಂಬಿಕೆ, ವಾತ್ಸಲ್ಯ, ಮಮತೆ, ವಿಶ್ವಾಸವೇ ಪ್ರಾಯಶಃ ಮುಂದೆ ಎಷ್ಟೆಷ್ಟೋ ಪ್ರಸಂಗಗಳಲ್ಲಿ ನೋವಾದರೂ, ಅಪಮಾನವಾದರೂ, ಅಪನಂಬಿಕೆಗಳನ್ನು, ಅನುಮಾನಗಳನ್ನು, ನನ್ನ ಅಸ್ತಿತ್ವವನ್ನೇ ಪ್ರಶ್ನಿಸುವ ಸಂದರ್ಭಗಳನ್ನು ಎದುರಿಸಿದರೂ ನಡೆಯುವ ಹಾದಿಯಲ್ಲಿ ಧೈರ್ಯವನ್ನು, ಮನೋಬಲವನ್ನು ನೀಡಿದ್ದು ಅಂದುಕೊಂಡಿದ್ದೇನೆ.
ಹೀಗೆ ಮಾವನಿಂದ ಬೀಳ್ಕೊಂಡು ಒಂಬತ್ತನೇ ತಿಂಗಳಲ್ಲಿ ತವರಿಗೆ ಹೋದ ಹದಿನೈದೇ ದಿನಕ್ಕೆ ಮಗಳು ಹುಟ್ಟಿದ್ದಳು. ಮಗುವಿಗಿನ್ನೂ ತಿಂಗಳಾಗಿರುವಾಗ ಮಾವ ತೀರಿಕೊಂಡರು. ಪುಟ್ಟ ಕಂದನ ಆಟಪಾಟವನ್ನು ಸಂಭ್ರಮದಿಂದ ಅನುಭವಿಸುವ ಮನಸ್ಥಿತಿಯಿರಲಿಲ್ಲ. ನಾಲ್ಕು ತಿಂಗಳು ತುಂಬಿದಾಕ್ಷಣ, ಜೊತೆಗೊಬ್ಬ ಸಹಾಯಕಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಅದೇ ಸಮಯದಲ್ಲಿ ಅತ್ತೆಗೆ ಎದೆನೋವು ಶುರುವಾಯಿತು. ಚಿಕಿತ್ಸೆಗೆಂದು ಬೆಂಗಳೂರಿಗೆ ಕರೆದುಕೊಂಡು ಬಂದೆವು. ಮಾವ ಅಂದು ಹೆದರಿದ್ದ ಹಾಗೆಯೇ ಅತ್ತೆಗೆ ಹೃದಯಾಘಾತವಾಗಿ ನರ್ಸಿಂಗ್‌ಹೋಂನಲ್ಲಿದ್ದವರು ತಿಂಗಳೊಳಗೇ ತೀರಿಕೊಂಡರು. ಆರೇ ತಿಂಗಳಲ್ಲಿ ಕುಟುಂಬದ ಎರಡು ಆಧಾರ ಸ್ಥಂಭಗಳೂ ಒಟ್ಟಿಗೆ ಕಳಚಿಬಿದ್ದಿದ್ದವು. ಸವಾಲುಗಳ ಸರಪಳಿ. ಜವಾಬ್ದಾರಿಗಳ ಸಾಲೇ ಎದುರಿಗಿತ್ತು. ಗುಬ್ಬಿಯಲ್ಲಿ ಭಾವ, ವಾರಗಿತ್ತಿ ನೋಡಿಕೊಳ್ಳುತ್ತಿದ್ದ ಮೂಲ ಮನೆ; ಮುಂದಿನ ಕೆಲಸಗಳಿಗಾಗಿ ಅದರ ಶಾಖೆಯನ್ನು ನಿಭಾಯಿಸಲು ನಾನು ಬೆಂಗಳೂರಿನ ಮನೆಯಲ್ಲಿರುವುದು, ಇವರು ವರ್ಗವಾಗಿ ಊರೂರಿಗೆ ಹೋಗುವುದು ಅನಿವಾರ್ಯವಾಗಿತ್ತು. ಊರಲ್ಲಿ ಅನುಕೂಲವಿಲ್ಲದ್ದರಿಂದ ಎಲ್ಲವೂ ಬೆಂಗಳೂರಲ್ಲೇ ನಡೆಯಬೇಕಾಯಿತು. ಚಿಕ್ಕ ಮಗು, ವೃತ್ತಿ, ಜೊತೆಗೆ ಕೌಟುಂಬಿಕ ಜವಾಬ್ದಾರಿ ಎಲ್ಲಕ್ಕೂ ಹೆಗಲು ಕೊಡುವುದು ಅಭ್ಯಾಸವಾಗಿಹೋಯಿತು. ಮುಂದಿನ ವರ್ಷವೇ ನನ್ನ ತಂದೆಯೂ ತೀರಿಕೊಂಡದ್ದು ಇನ್ನೊಂದು ಆಘಾತ. ತಂಗಿಯ ಮದುವೆಯಾಗಿತ್ತಷ್ಟೆ. ಅಣ್ಣನದಾಗಿರಲಿಲ್ಲ. ಅಣ್ಣನ ಮದುವೆ, ತಂಗಿಯ ಎರಡು ಬಾಣಂತನಗಳು ಈ ಜವಾಬ್ದಾರಿಗಳಿಗೂ ಹೆಗಲಿತ್ತೆ.
ದಾರೀಲಿ ಯಾರಾದರೂ ಆಟೋ ಹತ್ತಿಸುತ್ತಾರೆ
‘ನಿನ್ಜೊತೆ ಯಾರು ಬಂದಿದಾರಮ್ಮಾ?’ ಎರಡನೆಯ ಬಸುರಿನ ಏಳನೇ ತಿಂಗಳಲ್ಲಿ ಡಾಕ್ಟರು ಕೇಳಿದರು. ‘ಮಗಳು ಬಂದಿದಾಳೆ’ ಎಂದೆ. ತಲೆಚಚ್ಚಿಕೊಂಡರು. ‘ಅವ್ಳುನ್ನಲ್ಲ ಕೇಳಿದ್ದು, ದೊಡ್ಡವ್ರು ಯಾರು ಬಂದಿದಾರೆ ಜೊತೆಗೆ? ದಿನ ಬಿಟ್ಟು ದಿನ ಐದು ಇಂಜೆಕ್ಷನ್ ತೊಗೊಂಡ್ಹೋಗ್ಬೇಕು. ಬರುವಾಗ ಹೇಗ್ಬಂದೆ?’ ಅಂದರು. ‘ನಡ್ಕೊಂಡು’ ಅಂದೆ. ಇನ್ನೊಮ್ಮೆ ತಲೆಚಚ್ಚಿಕೊಂಡರು. ‘ಅಲ್ಲಮ್ಮಾ ಇಂಜೆಕ್ಷನ್ ತೊಗೊಂಡು ಹೋಗೋವಾಗ ದಾರೀಲೇನಾದ್ರೂ ತಲೆ ತಿರ್ಗಿ ಬಿದ್ರೆ ಏನ್ಮಾಡ್ತೀಯಾ?’ ಅಂದರು. ‘ಮಗಳಿಗೆ ಮನೆ ಅಡ್ರೆಸ್ ಗೊತ್ತಿದೆ. ದಾರೀಲಿ ಓಡಾಡೋವ್ರು ಯಾರಾದ್ರೂ ಆಟೋ ಹತ್ತಿಸ್ತಾರೆ’ ಅಂದೆ. ‘ನಿನ್ಕತೆ ಕೇಳಕ್ಕೆ ನಾನಿಲ್ಲಿ ಕೂತಿಲ್ಲ; ನಾಡಿದ್ದು ಬರೋವಾಗ ಯಾರಾದ್ರೂ ದೊಡ್ಡವ್ರನ್ನ ಜೊತೆಗೆ ಕರ್ಕೊಂಡು ಬಾ ಅಷ್ಟೇ’ ಎಂದು ಇಂಜೆಕ್ಷನ್ ಚುಚ್ಚಿ ಕಳಿಸಿದರು. ತಲೆಯಾಡಿಸಿ ಬಂದೆ. ಜೊತೆಗೆ ಬರಲು ಯಾರಿದ್ದರು ಮನೆಯಲ್ಲಿ?! ನನ್ನ ಎರಡನೆಯ ಬಸುರಿನ ಸಂಭ್ರಮದ ಕತೆ ಹೀಗೆ. ಮಗುವನ್ನು ಕರೆದುಕೊಂಡು ಬಂದ ಮೇಲಿನ ಕತೆ ಬೇರೆಯದಾಗೇನೂ ಇರಲಿಲ್ಲ. ಆರ್ಥಿಕವಾಗಿಯೂ ಈಗಿನಷ್ಟು ಸಬಲರಾಗಿದ್ದ ದಿನಗಳಲ್ಲ. ಪ್ರತಿ ಖರ್ಚಿಗೂ ಅದರ ಔಚಿತ್ಯದ ಪ್ರಶ್ನೆ ಎದುರು ನಿಲ್ಲುತ್ತಿತ್ತು. ಎಲ್ಲಾ ಕಳೆಯುವ ಲೆಕ್ಕಗಳ ಜೊತೆಗೇ ಅದು ಹೇಗೋ ಮೈತುಂಬಾ ಸಾಲವನ್ನೂ ಕೂಡಿಕೊಂಡು ಸ್ವಂತ ಗೂಡನ್ನು ಮಾಡಿಕೊಂಡಿದ್ದೂ ಒಂದು ಸಾಧನೆಯೇ!
ಗುಬ್ಬಿಯ ಮನೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗುತ್ತಿದ್ದ ನನ್ನ ಬಾವನವರು ಅತ್ತೆ, ಮಾವ ಹೋದ ಹತ್ತು ವರ್ಷಕ್ಕೆ ಕಾಲವಾಗಿದ್ದು ನಮ್ಮ ಕುಟುಂಬ ಎದುರಿಸಿದ ಇನ್ನೊಂದು ದೊಡ್ಡ ದುರಂತ. ಇನ್ನೂ ಕುಟುಂಬದ ಜವಾಬ್ದಾರಿಗಳು ಮುಗಿದಿರಲಿಲ್ಲ. ಸರದಿಯಲ್ಲಿ ಮಧ್ಯದಲ್ಲೆಲ್ಲೋ ಇದ್ದ ನಾವೇ ಈಗ ಇದ್ದಕ್ಕಿದ್ದಂತೆ ಮನೆಗೆ ದೊಡ್ಡವರಾಗಿಬಿಟ್ಟಿದ್ದೆವು. ಬ್ಯಾಂಕಿನಲ್ಲಿ ಒಳ್ಳೆಯ ಕೆಲಸಗಾರ್ತಿಯೆಂಬ ಹೆಸರನ್ನು ಸಂಪಾದಿಸಿದ್ದೆ. ವೃತ್ತಿ, ಒಬ್ಬಳೇ ಸಂಸಾರವನ್ನು ನಡೆಸುವ, ಚಿಕ್ಕಮಕ್ಕಳನ್ನು ಪಾಲಿಸಬೇಕಾದ ಜವಾಬ್ದಾರಿ, ಜೊತೆಗೆ ಒಟ್ಟು ಕುಟುಂಬದ ಹಲವು ಹತ್ತು ಸಮಸ್ಯೆಗಳು. ಎಷ್ಟೋ ಸಲ ಬೇಸರ ಬಂದು ‘ಈ ಬಾರಿ ನಾನೂ ವರ್ಗ ಮಾಡಿಸಿಕೊಂಡು ನೀವಿರುವ ಕಡೆಯೇ ಬಂದುಬಿಡುತ್ತೇನೆ, ಸಾಕಾಗಿದೆ ಒಬ್ಬಳಿಗೇ’ ಎಂದಿದ್ದಿದೆ. ‘ನಿಮ್ಮನ್ನೆಲ್ಲಾ ಇಲ್ಲಿ ಬಿಟ್ಟು ನಾನು ಸುಖವಾಗಿದ್ದೀನಾ’ ಎಂದಿವರು ಕೇಳಿದರೆ ನನ್ನಲ್ಲಿ ಉತ್ತರವಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ‘ಇದೆಲ್ಲಾ ಯಾವ ಪುರುಷಾರ್ಥಕ್ಕೆ? Only a Thankless Job’ ಎನಿಸಿದರೂ ಜೀವನದಿಂದ ಓಡಿಹೋಗುವಂತಿಲ್ಲವಲ್ಲ. ಇಷ್ಟು ಹೊತ್ತಿಗೆ ʻಜೀವನವೆಂದರೆ ಬರಿಯ ಜವಾಬ್ದಾರಿಗಳ, ಕರ್ತವ್ಯಗಳ ನಿರ್ವಹಣೆಯಷ್ಟೇ, ಸಂತೋಷದಿಂದ, ಸಮಾಧಾನದಿಂದ ಮಾಡುವ ತಾಳ್ಮೆಯನ್ನು ಮನಃಸ್ಥಿತಿಯನ್ನು ಕಾಪಾಡಿಕೊಳ್ಳಬೇಕಷ್ಟೇʼ ಅನ್ನುವ ನಿಲುವಿಗೆ ಬಂದಿದ್ದೆ.
ಈ ಬಲೆಯಲ್ಲಿ ನನ್ನ Space ಗೆ ಸಮಯವೇ ಇರಲಿಲ್ಲ. ಇದೆಲ್ಲದರ ಮಧ್ಯೆಯೂ ಸಾಹಿತ್ಯದ ಅಭಿರುಚಿಗೆ ಸ್ವಲ್ಪವಾದರೂ ದಾರಿ ಕಾಣುತ್ತಿದ್ದದ್ದು ಬ್ಯಾಂಕಿನ ಕನ್ನಡ ಸಂಘದ ಚಟುವಟಿಕೆಗಳಲ್ಲಿ. ಒಂದಷ್ಟು ಕಾಲ ಕಾರ್ಯದರ್ಶಿಯಾಗಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ. ಪ್ರತಿ ವರ್ಷವೂ ರಾಜ್ಯೋತ್ಸವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸುತ್ತಿದ್ದೆ. ಇಂಥ ಚಟುವಟಿಕೆಗಳಿಂದಾಗಿ ಹಲವು ಬಾರಿ ಬೇಬಿ ಸಿಟಿಂಗಿನಿಂದ ಮಕ್ಕಳನ್ನು ಕರೆತರಲು ತಡವಾಗಿ, ನನ್ನನ್ನು ಕಂಡಕೂಡಲೇ ಬಂದು ಅಪ್ಪಿಕೊಂಡು ‘ಯಾಕಮ್ಮಾ ಲೇಟು?’ ಎಂದಾಗ ಪಾಪಪ್ರಜ್ಞೆ ಮೂಡುತ್ತಿತ್ತು. ಏಕೋ ನಾನು ಹೆಚ್ಚಾಗಿ ಇದರಲ್ಲೇ ಮುಳುಗಿ ಮಕ್ಕಳನ್ನು ಅಲಕ್ಷಿಸುತ್ತಿದ್ದೇನೇನೋ ಅನ್ನಿಸಿಬಿಟ್ಟಿತು. ಮನೆಯ ಹತ್ತಿರದ ಶಾಖೆಗೆ ವರ್ಗ ಮಾಡಿಸಿಕೊಂಡು ಬಂದೆ. ಸಾಹಿತ್ಯದ ಆಸಕ್ತಿಗೆ ಸದ್ಯಕ್ಕೆ ವಿರಾಮ ಕೊಟ್ಟೆ.
ಕಾಲುಗಳನ್ನೇ ಕಟ್ಟಿಹಾಕಿದ ಕಾಲ
ಮುಂದೆ ಮತ್ತೊಂದು ಹಂತ. ‘ನಿಮಗೆ ರೊಮಟಾಯ್ಡ್ ಅರ್ಥ್‌ರೈಟಿಸ್’. ನಾನು ತಂದುಕೊಟ್ಟಿದ್ದ ವೈದ್ಯಕೀಯ ವರದಿಗಳನ್ನು ನೋಡಿದ ಡಾಕ್ಟರು ನನ್ನ ಆರೋಗ್ಯದ ಫೈಲಿನಲ್ಲಿ ಮೊದಲ ಪುಟ ತೆರೆದು ಸ್ಫುಟವಾಗಿ ಬರೆದರು. ಶುರುವಾಗಿದ್ದು ಹೀಗೆ… ಹಾಲಿನಲ್ಲಿದ್ದ ಟೆಲಿಫೋನ್ ಕರೆಯುತ್ತಿತ್ತು. ಕೋಣೆಯಲ್ಲಿ ಕುಳಿತಿದ್ದವಳಿಗೆ ಎದ್ದು ಹೋಗಿ ಕರೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ನಿಲ್ಲಲು ಸಾಧ್ಯವಾಗುತ್ತಲೇ ಇಲ್ಲ. ಅಷ್ಟರಲ್ಲಿ ಯಾರೊಂದಿಗೋ ಮಾತಾಡುತ್ತಾ ನಿಂತಿದ್ದವರು ಒಳಬಂದು ನನಗಾಗಿ ಬಂದಿದ್ದ ಕರೆಯನ್ನು ತೆಗೆದುಕೊಂಡು ‘ಬಂದು ಮಾತಾಡ್ತೀಯಾ?’ ಎಂದರು. ‘ನಿಲ್ಲಕ್ಕಾಗ್ತಿಲ್ಲ; ಮತ್ತೆ ಮಾತಾಡ್ತೀನೀಂತ ಹೇಳಿಟ್ಬಿಡಿ’ ಎಂದೆ. ಏನಾಗಿದೆಯೆಂದು ಅರ್ಥವಾಗಲಿಲ್ಲ; ಇವರಿಗೆ ದಿಗ್ಭ್ರಮೆ. ಏನೂ ಕಾರಣವಿಲ್ಲದೆ ಮೂಳೆ ಮುರಿದಂತೆ ಕಾಲು ನೋಯುತ್ತಿತ್ತು, ಎಳೆಯುತ್ತಿತ್ತು. ನೋವಿನ ಮಾತ್ರೆಯನ್ನು ನುಂಗಿದೆ; ಅಯೋಡೆಕ್ಸ್ ಬಳಿದುಕೊಂಡೆ. ಕಾಲನ್ನು ಹೇಗಿಡಲೂ ಸಾಧ್ಯವಾಗುತ್ತಿಲ್ಲ. ಒಂದೆರಡು ಗಂಟೆಗಳಾದ ಮೇಲೆ ಮಂಚದ ಕಟ್ಟನ್ನು, ಕುರ್ಚಿಯನ್ನು, ಗೋಡೆಯನ್ನು ಹಿಡಿದುಕೊಂಡು ಎದ್ದೆ. ಮರುದಿನಕ್ಕೆ ಸ್ವಲ್ಪ ಪರವಾಗಿಲ್ಲ. ಎರಡು ದಿನಗಳಲ್ಲಿ ಹಾಗೇ ಸರಿಹೋಯಿತು. ಸರಿಹೋಯಿತು ಎಂದುಕೊಳ್ಳುವಾಗ ಇನ್ನೊಮ್ಮೆ, ಮತ್ತೆಂದೋ ಇಂಥದೇ ಅನುಭವಗಳು. ಬೆಳಗ್ಗೆ ಎದ್ದಾಗ ಕೈಕಾಲುಗಳು ಸೆಟೆದುಕೊಂಡಂತೆ. ಕಷ್ಟಪಟ್ಟು ಕೆಲಸಕ್ಕೆ ತೊಡಗಿಕೊಂಡರೆ ಸ್ವಲ್ಪ ಹೊತ್ತಿನಲ್ಲಿ ಪರವಾಗಿಲ್ಲ ಅನ್ನಿಸುತ್ತಿತ್ತು. ಮೆಟ್ಟಿಲು ಹತ್ತಿಳಿಯುವಾಗ ನೋವು. ಇದೇಕೋ ಸರಿಯಿಲ್ಲ ಎನ್ನಿಸಿ ಫಿಸಿಷಿಯನ್ ಬಳಿಗೆ ಹೋದಾಗ ಅನಾರೋಗ್ಯದ ಈ ಹೊಸಪರ್ವ ಶುರುವಾಗಿತ್ತು! ಅದರ ಎಲ್ಲಾ ಲಕ್ಷಣಗಳನ್ನು, ಪರಿಣಾಮಗಳನ್ನು ಕೇಳಿಸಿಕೊಂಡೆ. ನನಗಾಗ ಮೂವತ್ನಾಲ್ಕು ವರ್ಷ, ದೊಡ್ಡ ಮಗಳಿಗೆ ಹತ್ತು, ಚಿಕ್ಕವಳಿಗೆ ಏಳು ವರ್ಷ. ಬಿಡುವೇ ಇಲ್ಲದೆ ಕಾಲಿಗೆ ಚಕ್ರ ಕಟ್ಟಿಕೊಂಡು ದುಡಿಯುತ್ತಿದ್ದವಳು ಅಂತಹ ಒಂದು ಕಾಯಿಲೆ ನನ್ನೊಳಗೆ ಸೇರಿಕೊಳ್ಳಲು ಯಾವಾಗ ಅವಕಾಶ ಮಾಡಿಕೊಟ್ಟಿದ್ದೆ?!
ಹೀಗಾಯಿತೆಂದು ಯಾವುದು ನಿಲ್ಲಲು ಸಾಧ್ಯ? ವೃತ್ತಿ, ಮನೆಕೆಲಸ, ಮಕ್ಕಳನ್ನು ನೋಡಿಕೊಳ್ಳುವುದು ಎಲ್ಲವೂ ನಡೆಯಲೇಬೇಕು. ಹೋಮಿಯೋಪತಿಯಲ್ಲಿ ಖಂಡಿತವಾಗಿ ವಾಸಿಯಾಗುತ್ತದೆ, ಅಡ್ಡಪರಿಣಾಮಗಳಿಲ್ಲ ಎಂದರು. ವರ್ಷಕಾಲ ತೆಗೆದುಕೊಂಡರೂ ಉಲ್ಬಣಿಸುತ್ತಾ ಹೋಗಿ ನಡೆಯಲೇ ಸಾಧ್ಯವಾಗದಂತಾಯಿತು. ಆಯುರ್ವೇದದ ಮೊರೆಹೊಕ್ಕೆ. ಮೂರು ವರ್ಷಕಾಲ ಅವರು ಅಪಥ್ಯವೆಂದು ಕೊಟ್ಟಿದ್ದ ಉದ್ದಪಟ್ಟಿಯನ್ನು ಅನುಸರಿಸಿದ್ದಕ್ಕೆ ತೂಕ ಇಳಿಯಿತಷ್ಟೇ, ಕುರ್ಚಿ, ಗೋಡೆ, ವಾಕರ್ ಹಿಡಿದುಕೊಂಡು ನಡೆಯುವುದು ತಪ್ಪಲಿಲ್ಲ. ಎಂಟು ಚದುರದ ಮನೆಯ ಕೋಣೆಯಿಂದ ಅಡುಗೆಮನೆಗೆ ಹೋಗಲು ಕನಿಷ್ಟ ಐದುನಿಮಿಷಗಳು. ಬ್ಯಾಂಕಿನ ಬಾಗಿಲಿಂದ ತಳ್ಳುವ ಕುರ್ಚಿಯನ್ನು ತಳ್ಳಿಕೊಂಡು ಹೋಗಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ಏಳುನಿಮಿಷಗಳು. ಇಂಚಿಂಚಾಗಿ ಸರಿಯುತ್ತಿದ್ದೆ. ಮಹಡಿಯ ಮೇಲಿದ್ದ ಶೌಚಾಲಯಕ್ಕೆ ಹೋಗಲು ಸಾಧ್ಯವಿಲ್ಲದ್ದರಿಂದ ಬೆಳಗ್ಗೆ ಅರ್ಧಲೋಟ ಕಾಫಿ, ತಿಂಡಿಯ ನಂತರ ಅರ್ಧಲೋಟ ನೀರನ್ನು ಬಿಟ್ಟರೆ ಸಂಜೆ ಮನೆಗೆ ಮರಳುವ ತನಕ ಯಾವುದೇ ದ್ರವ ಪದಾರ್ಥವಿಲ್ಲ. ಪ್ರತಿ ಮೂಳೆಯ ಸಂಧಿನಲ್ಲೂ ಸದಾಕಾಲವೂ ಬಾಧಿಸುತ್ತಲೇ ಇರುವ ನೋವು, ಉರಿ. ಮಡಚಲಾಗದ ಬೆರಳುಗಳು, ಮೊಳೆಯ ಮೇಲೆ ಮೊಣಕಾಲನ್ನಿಟ್ಟು ಭಾರ ಬಿಟ್ಟಿರುವಂತಹ ನೋವು. ಜೀವನವೇ ಜಿಗುಪ್ಸೆ ಬರುವಂತಾಯಿತು. ದಿನವೂ ಹೋಗುವ, ಬರುವ ಸಮಯಕ್ಕೆ ಆಟೋ ಸಿಗುತ್ತಿರಲಿಲ್ಲ, ಹತ್ತಿರದ ದಾರಿಗೆ ಬರಲು ಒಪ್ಪುತ್ತಿರಲಿಲ್ಲ. ಒಂದು ದಿನ ಒಬ್ಬ ಆಟೋದವನು ಎರಡೂವರೆ ಪಟ್ಟು ಕೇಳಿದ. ಕನಿಷ್ಟ ದೂರವೂ ಇಲ್ಲದ ಜಾಗಕ್ಕೆ ಅಷ್ಟೊಂದೇಕೆ? ಬೇಕಾದರೆ ಒಂದೈದು ರೂಪಾಯಿ ಹೆಚ್ಚು ಕೊಡುತ್ತೇನೆಂದಿದ್ದಕ್ಕೆ ಬೈದುಕೊಂಡು ಬಂದವನು ಇನ್ನೂ ಅರ್ಧ ಫರ್ಲಾಂಗ್ ಇರುವಾಗಲೇ ಕೇಳಿದಷ್ಟು ಕೊಡದಿದ್ದರೆ ಮುಂದೆ ಬರುವುದೇ ಇಲ್ಲವೆಂದು ನಿಲ್ಲಿಸಿಬಿಟ್ಟ. ತುಂಬಾ ಅವಮಾನವೆನಿಸಿತು. ವಿಧಿಯಿಲ್ಲದೆ ಕೊಟ್ಟು ಲಿಫ್ಟಿನ ಬಾಗಿಲಿನ ಬಳಿ ಇಳಿದೆ. ಅಂದು ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡು, ಹೀಗಾದ ಮೇಲೆ ಪಕ್ಕಕ್ಕಿಟ್ಟಿದ್ದ ಲೂನಾವನ್ನು ಧೈರ್ಯವಾಗಿ ಹೊರತೆಗೆದೆ. ಏನಾದರೂ ಆದರೆ ದಿನವೂ ಓಡಾಡುವ ದಾರಿಯಲ್ಲಿ ಯಾರಾದರೂ ಪರಿಚಿತರು ಇರುತ್ತಾರಲ್ಲ ಎನ್ನುವ ಭರವಸೆ! ನಡೆವ ಹಾದಿಯ ತುಂಬಾ ಮುಳ್ಳೇ… ಮಧ್ಯದಲ್ಲಿ ಹುಲ್ಲನ್ನು ಹುಡುಕುತ್ತಿದ್ದೆ.
ಭಾರತೀಯರಂತೆ ಯೋಚಿಸದಿರಿ!
ಸಲಹೆ ನೀಡಿದ ಡಾಕ್ಟರನ್ನೆಲ್ಲಾ ಕಂಡೆವು. ಹಾಗೆಯೇ ಒಬ್ಬ ಪ್ರಖ್ಯಾತ ಮೂಳೆತಜ್ಞರನ್ನು ಕೂಡಾ. ಎಕ್ಸ್‌ರೇ ನೋಡಿದೊಡನೆ ‘ಎರಡೂ ಮೊಣಕಾಲುಗಳ ಜಾಯಿಂಟ್‌ಗಳಲ್ಲಿರಬೇಕಾದ ಅಂತರವಿಲ್ಲ; ಕೂಡಿಕೊಂಡಿವೆ. ಆಪರೇಶನ್ ಆಗದಿದ್ದರೆ ಈ ಜನ್ಮದಲ್ಲಿ ನಡೆಯಲು ಸಾಧ್ಯವಿಲ್ಲ. ಜೀವಮಾನವಿಡೀ ಹಾಸಿಗೆಯಲ್ಲೇ ಕಳೆಯುತ್ತೀರಿ. ಭಾರತೀಯರಂತೆ ಯೋಚಿಸದೆ, ಪಾಶ್ಚಾತ್ಯರಂತೆ ಇದು ನಿರುಪಯುಕ್ತ, ತೆಗೆದುಹಾಕಿ ಬದಲಾಯಿಸಿಕೊಳ್ಳುತ್ತೇನೆ ಎಂದು ಯೋಚಿಸಿ ಆದಷ್ಟು ಬೇಗ ತೀರ್ಮಾನವನ್ನು ತೆಗೆದುಕೊಳ್ಳಿ. ಶಸ್ತ್ರಚಿಕಿತ್ಸೆಯಿಲ್ಲದೆ ಯಾರಾದರೂ ನಿಮ್ಮನ್ನು ನಡೆಸಿದರೆ ನಾನು ಈ ವೃತ್ತಿಯನ್ನೇ ಬಿಟ್ಟುಬಿಡುತ್ತೇನೆ’ ಎಂದು ಸವಾಲು ಹಾಕಿದರು. ನಮಗೆ ಹೇಗನ್ನಿಸಬೇಕು?! ಆದರೂ ಧೈರ್ಯವಹಿಸಿ ಕೇಳಿದೆ ‘ಮುಂದೆ ಮೊಣಕೈಗೆ, ಭುಜ, ಕುತ್ತಿಗೆಗೆ ಬಂದರೆ?’ ‘ಅವಕ್ಕೂ ಆಪರೇಶನ್ ಮಾಡಲೇಬೇಕು. ಇಂಗ್ಲೆಂಡ್‌ನಲ್ಲಿ ಒಬ್ಬಾಕೆಗೆ 36 ಜಾಯಿಂಟ್‌ಗಳನ್ನು ರಿಪ್ಲೇಸ್ ಮಾಡಿದೀನಿ. ಆಪರೇಶನ್ ಆದ ಮೇಲೆ ಹನ್ನೆರಡರಿಂದ ಹದಿನೈದು ವರ್ಷ ಯೋಚನೆಯಿಲ್ಲ. ಆಮೇಲೆ ಮತ್ತೊಮ್ಮೆ ಮಾಡಬೇಕಾಗತ್ತಷ್ಟೇ’ ಹೆಮ್ಮೆಯಿಂದ ಹೇಳಿದರು. ʻಈಗ ಮೂವತ್ತಾರು ವರ್ಷ ಅಂದರೆ ಐವತ್ತು ವರ್ಷಕ್ಕೆ ಮತ್ತೊಮ್ಮೆ. ಮುಗಿಯುವ ಕತೆಯಲ್ಲʼ ಅನ್ನಿಸಿ ‘ಯೋಚಿಸುತ್ತೇವೆ’ ಎಂದು ಎದ್ದುಬಂದೆವು.
ನಿಮಗೆ ಆಗದ ಹತ್ತಿರದವರೇ ಮಾಟ ಮಾಡಿಸಿದ್ದಾರೆ. ಪರಿಹಾರಗಳನ್ನು ಮಾಡಿಸಿಕೊಳ್ಳದಿದ್ದರೆ ಕೆಲವೇ ತಿಂಗಳುಗಳಲ್ಲಿ ಹಾಸಿಗೆ ಹಿಡಿಯುವುದು ಖಂಡಿತಾ’ ಮೈದುನ ಕರೆದುಕೊಂಡು ಹೋಗಿದ್ದ ಪ್ರಖ್ಯಾತ ನಾಡಿ ಜೋತಿಷಿ, ‘ಬರೆದುಕೊಡುತ್ತೇನೆ ಬೇಕಾದರೆ. ಯಾರು ಎಂದು ಹೇಳಲೇ’ ಅಂದರು. ನನ್ನವರು ನನ್ನೆಡೆ ನೋಡಿದರು. ಒಂದು ಕ್ಷಣ ಬಿಟ್ಟು, ‘ಅದರಲ್ಲಿ ಆಸಕ್ತಿಯಿಲ್ಲ. ಮಾಟ ಮಾಡಿಸುವಂತ ಶತ್ರುಗಳು ಯಾರೂ ನನಗಿಲ್ಲ. ಹಾಗೆ ಯಾರೋ ಒಬ್ಬರಿಗೆ ಸಿಟ್ಟಿದ್ದರೂ, ನೂರು ಆತ್ಮೀಯ ಹೃದಯಗಳು ಒಳ್ಳೆಯದನ್ನೇ ಬಯಸುತ್ತವೆ. ಕೆಟ್ಟದಾಗುವುದು ನಿಜವಾದರೆ ಹಾರೈಕೆಯಿಂದ ಒಳ್ಳೆಯದೂ ಆಗಬಹುದಲ್ಲವೇ’ ಎಂದೆ. ‘ನಿಮ್ಮಿಷ್ಟ’ ಎಂದರು. ಎದ್ದು ಬಂದೆವು.
ಅದಾವ ಅಮೃತ ಘಳಿಗೆಯೋ ಮುಂದಿನ ವಾರದಲ್ಲಿ ನಾನೀಗ ಅನುಸರಿಸುತ್ತಿರುವ ಡಾಕ್ಟರನ್ನು ನೋಡುವ ಸಂದರ್ಭವೊದಗಿ ಬಂತು. ಡಾಕ್ಟರು ಎಕ್ಸ್‌ರೇ ಪರಿಶೀಲಿಸುತ್ತಿರುವಾಗ ನಾವಿಬ್ಬರು, ನನ್ನಣ್ಣ ಮತ್ತು ದೊಡ್ಡ ಬಾವ ಆಪರೇಶನ್ ಬಗ್ಗೆಯೇ ಹೇಳುತ್ತಾರೆ ಎಂದುಕೊಂಡು ನೋಡುತ್ತಿದ್ದೆವು. ಅದನ್ನು ಮೇಜಿನ ಮೇಲಿಟ್ಟು ‘ಆಪರೇಶನ್ ಏನೂ ಬೇಕಿಲ್ಲ; ಬರೆದುಕೊಡುವ ಔಷಧವನ್ನು ನಿಯಮವಾಗಿ ತೆಗೆದುಕೊಳ್ಳಿ. ಜೊತೆಗೆ ಹೇಳುವ ಫಿಸಿಯೋಥೆರಪಿ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳಿ. ಮುಂದಿನ ಸಲ ಬರುವಾಗ ನಡೆದು ಬರುತ್ತೀರಿ’ ಅಂದರು. ದೇವರೇ ಎದುರಿಗೆ ಕಂಡಂತಾಗಿ ನಾಲ್ವರೂ ಒಮ್ಮೆಗೇ ಕೈಮುಗಿದಿದ್ದೆವು. ‘ನಿಮ್ಮ ಸ್ಥಿತಿ ಕಾಲು ಮುರಿದ ಖುರ್ಚಿಯಂತಿದೆ. ಒಂದಷ್ಟು ರಿಪೇರಿಯಿಂದ ಕುಣಿಯುವ ಹಾಗಲ್ಲದಿದ್ದರೂ, ಕುಳಿತುಕೊಳ್ಳುವ ಹಾಗೆ ಮಾಡಬಹುದು. ತಿರುಪತಿ ಬೆಟ್ಟ ಹತ್ತುವ ಆಸೆ ಬೇಡ. ಆಫೀಸಿನ ಮಟ್ಟಿಗೆ ಮನೆಮಟ್ಟಿಗೆ ಖಂಡಿತವಾಗಿ ನಿಭಾಯಿಸುತ್ತೀರಿ’ ಎಂದಾಗ ಹೃದಯತುಂಬಿ ಬಂದಿತ್ತು. ಅವರ ಮಾತು ನಿಜವಾಯಿತು. ದೊಡ್ಡಮ್ಮ ಹಾಕಿದ ದಿನಾಂಕದೊಳಗೆ ಸ್ವತಂತ್ರವಾಗಿ ನಾಲ್ಕು ಹೆಜ್ಜೆಯಿಟ್ಟಿದ್ದೆ. ನಾನು ನಡೆದಿದ್ದನ್ನು ಕಂಡು ಸಮಾಧಾನ ಪಟ್ಟುಕೊಂಡ ಅಮ್ಮ ಮುಂದಿನ ಎರಡೇ ವರ್ಷಗಳಲ್ಲಿ ಕ್ಯಾನ್ಸರಿನಿಂದ ತೀರಿಕೊಂಡದ್ದು ಒಂದು ದೊಡ್ಡ ಆಘಾತ!
ತಡವಾಯಿತೆ?
ಈಗ್ಗೆ ಇಪ್ಪತ್ತಾರು ವರ್ಷಗಳಾದವು ಹೀಗಿರುತ್ತಾ… ನನ್ನವರು ನನಗಾಗಿ ಸ್ವಯಂನಿವೃತ್ತಿ ಪಡೆದುಕೊಂಡು ಹನ್ನೆರಡು ವರ್ಷಗಳಾದವು. ನನ್ನ ನಿವೃತ್ತಿಯಾಗಿ ಮೂರು ವರ್ಷಗಳಾದವು. ಮಕ್ಕಳ ಮದುವೆ ಮುಗಿಯಿತು, ಮೊಮ್ಮಕ್ಕಳು ಬಂದರು. ಅಮೆರಿಕಾ ಸುತ್ತಿದ್ದಾಯಿತು. ಸಮಾನ ಮನಸ್ಕ ಗುಂಪಿನೊಂದಿಗೆ ಬೆರೆಯಲು ಸಾಧ್ಯವಾಯಿತು. ಕ್ರಮೇಣ ನನಗೆ ನನ್ನ ಆಸಕ್ತಿಯಲ್ಲಿ ತೊಡಗಿಕೊಳ್ಳಲು ಅನುವಾಯಿತು. ಲಲಿತ ಪ್ರಬಂಧ ಬರೆಯಲು ಶುರುಮಾಡಿದೆ, ಪ್ರಕಟಗೊಂಡವು. ಕಥೆ ಬರೆದೆ ಹಲವು ಬಹುಮಾನಗಳು ಬಂದವು. ನಂತರ ‘ಅಸ್ಪಷ್ಟ ತಲ್ಲಣಗಳು’ ಕಥಾ ಸಂಕಲನ, ‘ಅಮೇರಿಕಾ–ಬೊಗಸೆಯಲ್ಲಿ ಕಂಡಷ್ಟು, ನೆನಪಿನಲಿ ಉಳಿದಷ್ಟು’ ಪುಸ್ತಕಗಳು ಪ್ರಕಟವಾದವು.
ತಡವಾಗಿ ಬರಹಗಾರ್ತಿಯಾಗಿ ಸಾಹಿತ್ಯ ಲೋಕವನ್ನು ಪ್ರವೇಶಿಸಿದ್ದೇನೆ. ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯ, ಅವಕಾಶ ಇಲ್ಲದಿರುವುರಿಂದ ನನ್ನ ಅನುಭವಗಳ, ಬರವಣಿಗೆಗಳ ಮಿತಿಯ ಅರಿವೂ ಇದೆ. ಇರುವಷ್ಟು ದಿನ ಅಕ್ಷರಲೋಕವೇ ನನ್ನ ಹಿರಿನಂಟು.
ಇದನ್ನೂ ಓದಿ: ಇಷ್ಟೆಲ್ಲವಾದರೂ ನನಗೆ ನಾನಾರೆಂಬುದು ಬೇಕು
ಇದನ್ನೂ ಓದಿ : ಆ್ಯಟಿಟ್ಯೂಡ್ ಎಂಬ ಬ್ರಹ್ಮಾಸ್ತ್ರ ಪಡೆದುಕೊಂಡಿದ್ದು ಹೀಗೆ
Published On - 4:01 pm, Thu, 18 February 21