ಜೀವವೆಂಬ ಜಾಲದೊಳಗೆ; ಪ್ರಕೃತಿ ನೀಡಿರುವ ಈ ಶ್ಯಾಂಪೂ ಸೋಪು ಕಂಡೀಷನರು

|

Updated on: Mar 25, 2022 | 3:50 PM

Cosmetics : ಈಗಲೂ ಸಹ ಈ ಸೀಗೇಕಾಯಿಗಳಿಗೆ ಪ್ರಸಾಧನ ಕಂಪನಿಗಳಿಂದ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ತಲೆ ತೊಳೆದಾದ ನಂತರ ಕಂಡೀಷನರ್ ರೀತಿಯಲ್ಲಿ ಉಪಯೋಗಿಸುತ್ತಿದ್ದ ಮತ್ತಿಯ ಸೊಪ್ಪಿನ ಗಂಪಿಗೂ.

ಜೀವವೆಂಬ ಜಾಲದೊಳಗೆ; ಪ್ರಕೃತಿ ನೀಡಿರುವ ಈ ಶ್ಯಾಂಪೂ ಸೋಪು ಕಂಡೀಷನರು
Follow us on

ಜೀವವೆಂಬ ಜಾಲದೊಳಗೆ | Jeevavemba Jaaladolage : ಸೂಪರ್ ಮಾರ್ಕೆಟ್​ಗಳಲ್ಲಿ ಹೊಸಹೊಸ ಉತ್ಪನ್ನಗಳನ್ನು ನೋಡುತ್ತಾ ಅಲೆಯುವುದು ನನಗಿಷ್ಟದ ಅಭ್ಯಾಸಗಳಲ್ಲಿ ಒಂದು. ಹೀಗೆ ನೋಡುತ್ತಿರುವಾಗ ಕೂದಲಿನ ಆರೈಕೆಗಳ ವಿಭಾಗಕ್ಕೆ ಬಂದೆ. ಅಬ್ಬಾ ಅದೆಷ್ಟು ವಿಧದ ಶಾಂಪೂಗಳು, ಕಂಡೀಷನರ್, ಎಣ್ಣೆಗಳು, ಜೆಲ್, ಕ್ರೀಮ್, ಬಣ್ಣಗಳು! ಗುಂಗುರು ಕೂದಲಿಗೊಂದು ಶಾಂಪೂ, ಅದನ್ನು ನೇರವಾಗಿಸಲು ಇನ್ನೊಂದು ಶಾಂಪೂ, ಎಣ್ಣೆ ಜಿಡ್ಡಿನ ಕೂದಲು ಹಾರಾಡುವಂತೆ ಮಾಡಲು ಬೇರೆ ಶಾಂಪೂ, ಹಾರಾಡುವ ಕೂದಲನ್ನು ಕೂರಿಸಲು ಇನ್ನೊಂದು ಶಾಂಪೂ… ನೂರಾರು ವಿಧಗಳು! ಸರಿ ಕೂದಲು ತೊಳೆದಾದರೆ ಮುಗಿಯಲಿಲ್ಲ, ಅದನ್ನು ಮೃದುವಾಗಿಸಲು ಮತ್ತೆ ಕಂಡೀಷನರ್! ಅದರಲ್ಲೂ ನೂರಾರು ವಿಧಗಳು! ಈ ಕಂಡೀಷನರ್ ನೋಡುತ್ತಿದ್ದಂತೆ ನನ್ನ ಮನಸ್ಸು ನಮ್ಮ ಬಾಲ್ಯದ ಬಚ್ಚಲುಮನೆಗೆ ಹೊರಟುಹೋಯಿತು.
ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ (Suma Sudhakiran) 

 

(ಜಾಲ 7)

ನಮ್ಮ ಬಾಲ್ಯದಲ್ಲಿ ಅದಾಗಲೇ ಬಚ್ಚಲುಮನೆಯಲ್ಲಿ ವಿಧವಿಧ ರೀತಿಯ ಸೋಪುಗಳು ಅಡಿಯಿಟ್ಟಾಗಿತ್ತು, ಆದರಿನ್ನೂ ಶಾಂಪೂಗಳ ಬಳಕೆ ಅಷ್ಟಾಗಿ ಇರಲಿಲ್ಲ. ತಲೆಗೆ ಸ್ನಾನ ಮಾಡಬೇಕೆಂದರೆ ಸೋಪು ಅಥವಾ ಸೀಗೇಕಾಯಿ ಪುಡಿ  ಹಚ್ಚಿ ತಿಕ್ಕುವುದು  ನಂತರ ಮತ್ತಿ ಸೊಪ್ಪಿನ ಗಂಪು ತಲೆಗೆ ಹಾಕಿ ಚೆನ್ನಾಗಿ ತಿಕ್ಕಿ ತೊಳೆಯುವುದು, ಇವತ್ತಿನ ಯಾವ ಕಂಡೀಷನರ್ ಗೆ ಕಡಿಮೆ ಇಲ್ಲದಂತೆ ಕೂದಲು ನಯವಾಗುತ್ತಿತ್ತು. ಅಲ್ಲದೆ ತಲೆಯೂ ತಂಪಾಗಿ ಆನಂದದ ಅನುಭವವಾಗುತ್ತಿತ್ತು.

ಮೊದಲೆಲ್ಲಾ ಮಲೆನಾಡಿನ ಹಳ್ಳಿಯ ಮನೆಗಳ ಹಿಂದೆ ಚಿಕ್ಕ ಬೆಟ್ಟವಿರುವುದು, ಅಲ್ಲಿ ಒಂದಿಷ್ಟು ಕಾಡು ಮರಗಳು, ಔಷಧೀಯ ಸಸ್ಯಗಳು ಇರುವುದು ಸಾಮಾನ್ಯವಾಗಿತ್ತು. ಬೆಟ್ಟದನೆಲ್ಲಿ, ತೇಗ, ಮತ್ತಿ, ಹೊನ್ನೆ, ತಾರೆ, ಆಳಲೆ ಮೊದಲಾದ ಮರಗಳು ಅವುಗಳನ್ನು ಹಬ್ಬಿ ಬೆಳೆಯುತ್ತಿದ್ದ ಅಮೃತಬಳ್ಳಿ, ಸೀಗೆ ಬಳ್ಳಿ, ಪರಿಗೆ ಬಳ್ಳಿಗಳೂ, ಬೇಸಿಗೆಯಲ್ಲಿ ರುಚಿಯಾದ ಹಣ್ಣುಗಳನ್ನು ಉಣಬಡಿಸುತ್ತಿದ್ದ ಕೌಳಿಮಟ್ಟಿ, ಹಲಗೆ ಹಣ್ಣು, ಮುಳ್ಳಣ್ಣುಗಳ ಗಿಡಗಳೂ ಅಲ್ಲಿರುತ್ತಿದ್ದ ಅಸಂಖ್ಯಾತ ಸಸ್ಯರಾಶಿಗಳಲ್ಲಿ ಹೆಸರಿಸಬಹುದಾದ ಕೆಲವು ಸಸ್ಯಗಳು.

Senegalia rugata  ಎಂಬ ವೈಜ್ಞಾನಿಕ ಹೆಸರಿನ ಸೀಗೇಕಾಯಿ ಒಂದು ಗಟ್ಟಿ ಕಾಂಡವುಳ್ಳ, ದೊಡ್ಡ ಮರಗಳಿಗೆ ಹಬ್ಬಿ ಬೆಳೆವ ಬಳ್ಳಿ. ಬಳ್ಳಿಯ ತುಂಬ ಮುಳ್ಳುಗಳಿರುತ್ತವೆ. ಎಲೆಗಳು ಹುಣಸೆ ಎಲೆಗಳಂತೆಯೆ ಕಾಣಿಸುತ್ತವೆ. ಕಾಯಿಗಳೂ ಕೂಡಾ ಹುಣಸೆ ಹಣ್ಣಿನ ಗಾತ್ರದಲ್ಲಿರುತ್ತವೆ. ಕಾಯಿ, ಹಣ್ಣಾಗಿ ಉದುರಿದಂತೆಲ್ಲ ಆರಿಸಿ ತಂದು ಬಿಸಿಲಿನಲ್ಲಿ ಒಣಗಿಸಿ ಒರಳಿಗೆ ಹಾಕಿ ಕುಟ್ಟಿ ಪುಡಿ ಮಾಡಿಟ್ಟುಕೊಂಡರೆ ಸೋಪುಗಳಿಲ್ಲದ ಕಾಲದಲ್ಲಿ ವರ್ಷಪೂರ್ತಿ ಇದೇ ಸ್ವಚ್ಛಗೊಳಿಸುವ ಸಾಧನ. ಈಗಲೂ ಸಹ ಈ ಸೀಗೇಕಾಯಿಗಳಿಗೆ ಪ್ರಸಾಧನ ಕಂಪನಿಗಳಿಂದ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ವಿವಿಧ ಶಾಂಪೂ ಸೋಪುಗಳಲ್ಲಿ ಸೀಗೇಕಾಯಿಯನ್ನು ಬಳಸುತ್ತಾರೆ. ಅಲ್ಲದೆ  ಸೀಗೇಕಾಯಿ ಪುಡಿ ಕೂಡಾ ಅಂಗಡಿಗಳಲ್ಲಿ ದೊರಕುತ್ತದೆ. ಆದರೆ ಯಾಕೋ ನಮ್ಮ ಮಲೆನಾಡಿನಲ್ಲಿ ಹೆಚ್ಚಿನ ಬಚ್ಚಲು ಮನೆಗಳಿಂದ ಈ ಪುಡಿ ಕಾಣೆಯಾಗಿದೆ. ಹಾಗೆಯೆ ಹಿಂದೆ ಬೆಟ್ಟದಲ್ಲಿ ಇದ್ದ ಬಳ್ಳಿಗಳೂ ಸಹ! ಇರಲಿ ಬದಲಾವಣೆ ಜಗದ ನಿಯಮವಲ್ಲವೆ?

ತಲೆ ತೊಳೆದಾದ ನಂತರ ಕಂಡೀಷನರ್ ರೀತಿಯಲ್ಲಿ ಉಪಯೋಗಿಸುತ್ತಿದ್ದುದು ಮತ್ತಿಯ ಸೊಪ್ಪಿನ ಗಂಪು.

ಒಂದು ಮುಷ್ಟಿಯಷ್ಟು ಮತ್ತಿಸೊಪ್ಪನ್ನು ಕೊಯ್ದು ತಂದು, ತೊಳೆದು, ಒಂದು ಪಾತ್ರೆಯ ನೀರಿನಲ್ಲಿ ಅದನ್ನು ಸ್ವಲ್ಪ ಹೊತ್ತು ನೆನೆಸಿಡುತ್ತಿದ್ದರು. ನಂತರ ಸೊಪ್ಪನ್ನು ಚೆನ್ನಾಗಿ ಕಿವಿಚುತ್ತಿದ್ದರು. ಲೊಳೆಲೊಳೆಯಾದ ತಂಪಾದ ದ್ರವ ಸಿಗುತ್ತಿತ್ತು. ಇದೇ ಮತ್ತಿಗಂಪು.  ತಲೆಗೆ ಸ್ನಾನ ಮಾಡುವಾಗ ಸೋಪು ಅಥವಾ ಸೀಗೇಪುಡಿ ಹಾಕಿ ತೊಳೆದ ನಂತರ ಕೊನೆಯಲ್ಲಿ ಈ ಗಂಪನ್ನು ತಲೆಗೆ ಹಾಕಿ ಚೆನ್ನಾಗಿ ತಿಕ್ಕಿ ನೀರು ಹಾಕಿ ತೊಳೆಯುತ್ತಿದ್ದರು. ತಲೆಗೂ ತಂಪು, ಕೂದಲೂ ನಯ. ಪರಿಸರ ಸ್ನೇಹಿ ಕೂಡ.

ಈ ಮತ್ತಿ ಒಂದು ಅದ್ಭುತವಾದ ಮರ. ಇದರಲ್ಲಿ ಎರಡು ವಿಧಗಳಿದ್ದು, ಒಂದು ಬಿಳಿ ಮತ್ತಿ ಅಥವಾ ಹೊಳೆ ಮತ್ತಿ ಅಥವಾ ಅರ್ಜುನ ವೃಕ್ಷ ಎಂಬ ಹೆಸರಿನ ಮರ. ಇದು ಆಯುರ್ವೇದದ ಔಷಧಿಗಳಲ್ಲಿ ಬಹು ಉಪಯೋಗಿಯಾಗಿದೆ. ಇನ್ನೊಂದು ಕೆಂಪು ಮತ್ತಿ ಅಥವಾ Terminalia tomentosa ಎಂಬ ವೈಜ್ಞಾನಿಕ ನಾಮಧೇಯದ ಮರ ನಾನು ಹೇಳುತ್ತಿರುವ ಗಂಪಿನ ಸೊಪ್ಪಿನ ಮರ.

ಇದನ್ನೂ ಓದಿ : Science and Environment : ಜೀವವೆಂಬ ಜಾಲದೊಳಗೆ: ವಶೀಕರಣ ವಿದ್ಯೆ ಕಲಿಯಬೇಕೆ? ಇವರುಗಳನ್ನು ಸಂಪರ್ಕಿಸಿ

ಮತ್ತಿಯ ಮರ ದಕ್ಷಿಣ ಮತ್ತು ಈಶಾನ್ಯ ಏಷ್ಯಾ ಖಂಡದ ಕಾಡುಗಳಲ್ಲಿ ಕಂಡುಬರುತ್ತದೆ. ನಮ್ಮ ಕರ್ನಾಟಕದ ಮಲೆನಾಡು ಮತ್ತು ಅರೆಮಲೆನಾಡಿನ ಭಾಗಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಅನುಕೂಲಕರವಾದ ವಾತಾವರಣವಿದ್ದರೆ ಸುಮಾರು 30 ಮೀಟರ್ ಎತ್ತರ ಬೆಳೆಯಬಲ್ಲದು ಎನ್ನುತ್ತಾರೆ.

ಮೊಸಳೆಯ ಚರ್ಮದಂತಹ ತೊಗಟೆಯಿರುವುದರಿಂದ “ಕ್ರೊಕೊಡೈಲ್ ಬಾರ್ಕ್ ಟ್ರೀ” ಎಂಬ ಸಾಮಾನ್ಯ ಹೆಸರಿದೆ. ಕಾಂಡವು ಗಟ್ಟಿಮುಟ್ಟಾಗಿರುವುದರಿಂದ ಮನೆಯ ಕಿಟಕಿ ಬಾಗಿಲುಗಳು,ಪೀಠೋಪಕರಣಗಳು, ರೈಲ್ವೇ ಹಳಿಗಳ ತಯಾರಿಕೆಗೆ ಬಳಸುತ್ತಾರೆ.

ಅಗಲವಾದ ಅಂಡಾಕಾರದ ಎಲೆಗಳು ರೆಂಬೆಗೆ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಜೋಡಣೆಗೊಂಡಿವೆ. ದಟ್ಟ ಹಸಿರು ಬಣ್ಣದ  ಎಲೆಗಳಲ್ಲಿ ನೀರಿನ ಅಂಶ ಲೋಳೆಯಂತಹ ದ್ರವವಾಗಿ ಸಂಗ್ರಹಗೊಂಡಿರುತ್ತದೆ. ಎಲೆಗಳಷ್ಟೇ ಅಲ್ಲದೆ ನೀರಿನ ಅಭಾವ ಇರುವೆಡೆ ಬೆಳೆವ ಕೆಲವು ಮರಗಳ ಕಾಂಡದಲ್ಲಿ ಕೂಡ ನೀರಿನಂಶ ಸಂಗ್ರಹವಾಗಿರುತ್ತದೆಂದು ಬಂಡೀಪುರ ಕಾಡಿನಲ್ಲಿ ಅರಣ್ಯ ಇಲಾಖೆ ನಡೆಸಿದ ಸರ್ವೆಯೊಂದರಲ್ಲಿ ತಿಳಿದುಬಂದಿದೆ. ಆದರೆ ನಮ್ಮ ಮಲೆನಾಡಿನಲ್ಲಿ ಬೆಳೆವ ಮರಗಳಲ್ಲಿ ಹೀಗೆ ಕಾಂಡದಲ್ಲಿ ನೀರು ಸಂಗ್ರಹಗೊಳ್ಳುವುದು ಗಮನಕ್ಕೆ ಬಂದಿಲ್ಲ.

ಮಾರ್ಚ್ ಎಪ್ರಿಲ್ ತಿಂಗಳುಗಳಲ್ಲಿ ಎಲೆ ಉದುರಿ ಹೊಸ ತಳಿರುಗಳು ಚಿಗುರುತ್ತವೆ.  ಮೇ-ಜೂನ್ ಹೊತ್ತಿಗೆ ಹೂಗೊಂಚಲುಗಳು ಕಾಣಿಸಿಕೊಳ್ಳುತ್ತವೆ. ಕಾಯಿಗಳು ಮೂಡಿ, ಅಕ್ಟೋಬರ್-ನವೆಂಬರ್ ವೇಳೆಗೆ ಬೆಳೆಯುತ್ತವೆ.

ಕಾಯಿಗಳ ರಚನೆಯೂ ವಿಶಿಷ್ಟವಾಗಿದೆ. ಐದು ಏಣುಗಳನ್ನು ಹೊಂದಿದ್ದು ಬೆಳೆದು ಬಲಿತ ಮೇಲೆ ಇವು ರೆಕ್ಕೆಗಳಂತೆ ಕೆಲಸ ಮಾಡುತ್ತವೆ. ಗಾಳಿಯಲ್ಲಿ ಬೀಜಪ್ರಸರಣವಾಗಲು ಈ ರಚನೆ ಸಹಾಯಕವಾಗುತ್ತದೆ. ದೇಶದ ಈಶಾನ್ಯ ಭಾಗಗಳ ಕಾಡಿನಲ್ಲಿ ಈ ಮರದ ಮೇಲೆ ಟಸ್ಸಾರ್ ರೇಷ್ಮೆ ಹುಳುಗಳು ಬೆಳೆಯುತ್ತವೆಯೆಂದೂ, ಮತ್ತಿಯ ಎಲೆಗಳು ಟಸ್ಸಾರ್ ರೇಷ್ಮೆ ಹುಳುಗಳಿಗೆ ಆಹಾರವೆಂದೂ ದಾಖಲಾಗಿದೆ.

ನಮ್ಮ ಮಲೆನಾಡಿನಲ್ಲಿ ಇವುಗಳ ಎಲೆಗಳು ಬಹುಪಯೋಗಿಯಾಗಿತ್ತು. ತಲೆಗೆ ಸ್ನಾನ ಮಾಡುವಾಗ ಇವು ತೀರಾ ಅವಶ್ಯಕ ಸಾಮಗ್ರಿಯಾಗಿದ್ದವು. ಅಲ್ಲದೆ ಕೊಟ್ಟಿಗೆಯ ನೆಲಕ್ಕೆ ಸೊಪ್ಪು ಹಾಸುವ ಅಭ್ಯಾಸವಿರುವವರು ಈ ಸೊಪ್ಪನ್ನು ಹಾಕುತ್ತಿದ್ದರು. ಮಾರನೆಯ ದಿನ ಅದು ಗೊಬ್ಬರದ ಗುಂಡಿಗೆ ಸೇರಿ, ನಿಧಾನವಾಗಿ ಕೊಳೆತು ಒಳ್ಳೆಯ ಗೊಬ್ಬರವಾಗುತ್ತಿತ್ತು. ಅಡಿಕೆ ತೋಟಕ್ಕೆ ಇದೇ ಗೊಬ್ಬರ. ಇತ್ತೀಚೆಗೆ ಹೀಗೆ ಕೊಟ್ಟಿಗೆಗೆ ಸೊಪ್ಪು ಹಾಸುವ ಕ್ರಮ ಇಲ್ಲ. ಅಲ್ಲದೆ ಮನೆಯ ಹಿಂದಿನ ಸೊಪ್ಪಿನ ಬೆಟ್ಟಗಳೂ ಸಹ ಅಡಿಕೆ, ನೀಲಗಿರಿ, ಅಕೇಶಿಯಾ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆವ ತಾಣಗಳಾಗಿ ಮಾರ್ಪಾಡಾಗಿರುವುದರಿಂದ ಮರ ಕಾಣಸಿಗುವುದೂ ಸಹ ಕಡಿಮೆಯಾಗಿದೆ.

(ಮುಂದಿನ ಜಾಲ : 8.4.2022)

ಹಿಂದಿನ ಜಾಲ : Science and Environment : ಜೀವವೆಂಬ ಜಾಲದೊಳಗೆ: ‘ಕೆಂಪಿ ಮಾಸ ತಿಂದುಬಿಟ್ಟಿರುತ್ತೆ, ಜಾಸ್ತಿ ನಂಜಿಗೆ ಕೊಡಬೇಕು’