New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು

'ಜಾಗತೀಕರಣಗೊಂಡ ಹೊಸಗಾಲದಲ್ಲಿ ಹಲವು ಬಗೆಯ ಆರ್ಥಿಕ ಒತ್ತಡಗಳನ್ನೂ ಕುಸಿತಗಳನ್ನೂ ಅನುಭವಿಸುತ್ತಿದ್ದಾಗ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಈ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ದಾಟಿಸಿಕೊಟ್ಟವರು ಯಾಗಾ ವೇಣುಗೋಪಾಲ ರೆಡ್ಡಿಯವರು. ಇವರಂಥವರು ಅಮೆರಿಕಾದ ಕೇಂದ್ರ ಬ್ಯಾಂಕಿನಲ್ಲಿ ಇದ್ದಿದ್ದರೆ, ಪ್ರಾಯಶಃ ಅಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿರಲಿಲ್ಲವೆಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಸ್ ಹೇಳಿದ್ದಾರೆ. ಸಾಧಾರಣ ಅಧಿಕಾರಿಯೊಬ್ಬ ಮೇಲೇರುತ್ತ ಈ ನಾಡಿನ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥನಾದ ಕಥೆ, ಆ ಹಾದಿಯಲ್ಲಿ ಎದುರಾದ ಹಲವು ರೋಚಕ ಅನುಭವಗಳ ಕಥನ ಈ ಪುಸ್ತಕದೊಳಗಿದೆ.' ಕೆ. ವಿ. ಅಕ್ಷರ

New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು
ಎಂ. ಎಸ್. ಶ್ರೀರಾಮ್​
Follow us
ಶ್ರೀದೇವಿ ಕಳಸದ
| Updated By: ganapathi bhat

Updated on:Mar 12, 2021 | 6:33 PM

ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಹೊಸ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com   

ಪರಿಕಲ್ಪನೆ-ನಿರ್ವಹಣೆ : ಶ್ರೀದೇವಿ ಕಳಸದ

ರಿಸರ್ವ್​ ಬ್ಯಾಂಕಿನ ಗವರ್ನರ್ ಆಗಿದ್ದ ವೈ.ವಿ. ರೆಡ್ಡಿ ಅವರ ಆತ್ಮಕಥನ ‘ಭಿನ್ನ ಅಭಿಪ್ರಾಯ’ವನ್ನು ಕನ್ನಡಕ್ಕೆ ನಿರೂಪಿಸಿದ್ದಾರೆ ಕಥೆಗಾರ, ಆರ್ಥಿಕ ತಜ್ಞ ಎಂ.ಎಸ್​. ಶ್ರೀರಾಮ್. ಹೆಗ್ಗೋಡಿನ ಅಕ್ಷರ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಇ-ಆವೃತಿ ಈಗಾಗಲೇ ಅನಾವರಣಗೊಂಡಿದ್ದು, ಸದ್ಯದಲ್ಲೇ ಪುಸ್ತಕದ ಅಂಗಡಿಗಳಲ್ಲೂ ಲಭ್ಯವಾಗಲಿದೆ. 

ಜಾಗತೀಕರಣಗೊಂಡ ಹೊಸಗಾಲದಲ್ಲಿ ಹಲವು ಬಗೆಯ ಆರ್ಥಿಕ ಒತ್ತಡಗಳನ್ನೂ ಕುಸಿತಗಳನ್ನೂ ಅನುಭವಿಸುತ್ತಿದ್ದಾಗ ಭಾರತದ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಈ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ದಾಟಿಸಿಕೊಟ್ಟವರು ಯಾಗಾ ವೇಣುಗೋಪಾಲ ರೆಡ್ಡಿಯವರು. ಇವರಂಥವರು ಅಮೆರಿಕಾದ ಕೇಂದ್ರ ಬ್ಯಾಂಕಿನಲ್ಲಿ ಇದ್ದಿದ್ದರೆ, ಪ್ರಾಯಶಃ ಅಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತಿರಲಿಲ್ಲವೆಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಸ್ ಹೇಳಿದ್ದಾರೆ. ತೆಲುಗು ಮತ್ತು ಇಂಗ್ಲಿಷಿನಲ್ಲಿ ಪ್ರಕಟವಾದ ಡಾ. ವೈ.ವಿ. ರೆಡ್ಡಿಯವರ ಆತ್ಮಕಥನಗಳೆರಡನ್ನೂ ಕೂಡಿಸಿ ಸಂಗ್ರಹಿಸಿ ಕನ್ನಡೀಕರಿಸಿದವರು ಕಥೆಗಾರ ಎಂ.ಎಸ್. ಶ್ರೀರಾಮ್, ಅದೀಗ ಕನ್ನಡದಲ್ಲಿ ಪ್ರಕಟಗೊಳ್ಳುತ್ತಿದೆ. ಸಾಧಾರಣ ಅಧಿಕಾರಿಯೊಬ್ಬ ಮೇಲೇರುತ್ತ ಈ ನಾಡಿನ ಅತ್ಯುನ್ನತ ಸಂಸ್ಥೆಯ ಮುಖ್ಯಸ್ಥನಾದ ಕಥೆ, ಆ ಹಾದಿಯಲ್ಲಿ ಎದುರಾದ ಹಲವು ರೋಚಕ ಅನುಭವಗಳ ಕಥನ ಈ ಪುಸ್ತಕದೊಳಗಿದೆ. ಅಕ್ಷರ ಕೆ.ವಿ. ಅಕ್ಷರ ಪ್ರಕಾಶನ

ಕಥಾನಾಯಕನೊಂದಿಗೆ ಕಾರ್ಯನಿರ್ವಹಣೆ: ಎನ್.ಟಿ.ಆರ್. ತಂದ ಬದಲಾವಣೆಗಳು

ಆಗ ಕಂದಾಯಕ್ಕೆ ತಾಲೂಕು, ಅಭಿವೃದ್ಧಿಗೆ ಬ್ಲಾಕುಗಳು ಪ್ರಾಥಮಿಕ ಘಟಕಗಳಾಗಿದ್ದುವು. ಗ್ರಾಮೀಣ ಜನರಿಗೆ ಎರಡೂ ಒಂದೇ ಎಂಬಂತೆ ಕಾಣುತ್ತಿತ್ತು. ತಾಲೂಕು ಬ್ರಿಟಿಷರ ಕಾಲದ್ದಾಗಿತ್ತು. ಬ್ಲಾಕು 1950-60ರ ಕಾಲದಿಂದ ಇದ್ದುವು. ನಂತರದ ಮೂವತ್ತು ವರ್ಷಗಳಲ್ಲಿ ಜನಸಂಖ್ಯೆ ಬೆಳೆದು ಅವಶ್ಯಕತೆಗಳು ಬೆಳೆದರೂ ತಾಲೂಕು, ಬ್ಲಾಕುಗಳೇ ಮುಂದುವರೆದುವು. ಹೀಗಾಗಿ ಸರ್ಕಾರಿ ಕಚೇರಿಗಳು ಜನರಿಗೆ ದೂರಾಗಿದ್ದುವು. ಪ್ರತಿ ತಾಲೂಕು ಅಥವಾ ಬ್ಲಾಕನ್ನುಮೂರ್ನಾಲ್ಕು ಭಾಗವಾಗಿ ವಿಂಗಡಿಸಬೇಕೆಂದು ಎನ್.ಟಿ.ಆರ್. ಯೋಚಿಸಿದರು. ಪ್ರಜೆಗಳಿಗೆ ಸರ್ಕಾರ ಎಟುಕುವಂತಿರಬೇಕು ಎಂಬುದು ಅವರ ಉದ್ದೇಶ. ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಪ್ರಾಂತೀಯ ಯೋಜನೆಯ ಬಗ್ಗೆ ಬರೆದಿದ್ದನ್ನು ಚರ್ಚಿಸಲು ಕರೆದಾಗ ತಮ್ಮ ಚಿಂತನೆಯನ್ನು ಹೇಳಿದರು.

ಅಲ್ಲಿಯವರೆಗೆ ವೈಜ್ಞಾನಿಕವಾಗಿ ನಡೆದಿದ್ದ ಅಧ್ಯಯನಗಳನ್ನು ಉಪಯೋಗಿಸಿ ವಿಭಜನೆಯನ್ನು ಮಾಡಬೇಕಿತ್ತು. ತಾಲೂಕುಗಳನ್ನು ವಿಭಜಿಸುವುದರಿಂದ ಅಧಿಕಾರದ ವಿಕೇಂದ್ರೀಕರಣವಾಗುತ್ತದೆ ಮತ್ತು ಜನರ ಕೆಲಸ ಸರಳವೂ ಆಗುತ್ತದೆ ಅನ್ನಿಸಿತ್ತು. ಹಳ್ಳಿಯ ಮಟ್ಟದಲ್ಲಿ ಜನರೇ ಆರಿಸಿದ ಪ್ರತಿನಿಧಿಗಳಿರುವುದೂ ಒಳ್ಳೆಯದೇ. ಭೌಗೋಳಿಕವಾಗಿ ಸರಹದ್ದುಗಳು ಬದಲಾಗುತ್ತದೆ. ಇದರಿಂದ ಅವರ ಪಕ್ಷ ಸ್ಥಾನಗಳನ್ನು ಕಳೆದುಕೊಳ್ಳಬಹುದು. ಆಡಳಿತಾತ್ಮಕವಾಗಲ್ಲದೇ ಬರೇ ರಾಜಕೀಯ ಹಿಡಿತವಿರುವ ಹಾಗೆ ಬದಲಾವಣೆ ಮಾಡಿದರೆ, ನ್ಯಾಯಾಂಗ ಅದನ್ನು ಪ್ರಶ್ನಿಸಬಹುದು. ಹೀಗೆ ಎಲ್ಲಾ ಅಂಶಗಳನ್ನೂ ಸಮಗ್ರವಾಗಿ ವಿಶ್ಲೇಷಿಸಿ ಕ್ರಮಬದ್ಧವಾಗಿ ವಿಭಜನೆ ಮಾಡುವುದೊಂದೇ ಮಾರ್ಗವಾಗಿತ್ತು. ರಾಜಕೀಯವಾಗಿ ತಮಗೆ ಅನಾನುಕೂಲವಾದರೂ ಪರವಾಗಿಲ್ಲ, ವ್ಯವಸ್ಥೆ ಬದಲಾಗಲೇಬೇಕೆಂದು ಎನ್.ಟಿ.ಆರ್. ಹೇಳಿದರು. ಆಡಳಿತಕ್ಕೆ ಮಂಡಲ ಮುಖ್ಯಾಲಯವನ್ನು ಸ್ಥಾಪಿಸುವುದೆಲ್ಲಿ, ಗಡಿಗಳು ಹೇಗಿರಬೇಕು ಎನ್ನುವುದೂ ಸವಾಲೇ. ಇಡೀ ಮಾಹಿತಿ, ಭೂಪಟಗಳು, ಕಂಪ್ಯೂಟರ್ ವಿಶ್ಲೇಷಣೆ, ಜಿಲ್ಲಾಧಿಕಾರಿಗಳೊಂದಿಗೆ ಸಭೆಯ ಮೂಲಕ ಎಲ್ಲವನ್ನೂ ಶಾಸ್ತ್ರೀಯವಾಗಿ ಅಧ್ಯಯನ ಮಾಡಿ ಯಾವ ಹೊಸ ತೊಂದರೆಗಳೂ ಉದ್ಭವಿಸದಂತೆ ಹೊಸ ವ್ಯವಸ್ಥೆಯನ್ನು ರೂಪಿಸಿದೆವು. ಮಂತ್ರಿಮಂಡಲ ಈ ವ್ಯವಸ್ಥೆಯನ್ನು ಒಪ್ಪಿತು. ನಾವು ಊಹಿಸಿದ ಹಾಗೆಯೇ, ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಮೊಕದ್ದಮೆಗಳು ದಾಖಲಾದವು. ಈ ಯೋಜನೆ ವೈಜ್ಞಾನಿಕ ಹಾಗೂ ತರ್ಕಬದ್ಧವಾಗಿದ್ದರಿಂದ ನ್ಯಾಯಾಲಯದಲ್ಲಿ ಜಯ ದೊರೆಯಿತು. ಹಳೆಯ ವ್ಯವಸ್ಥೆ ಕುಸಿದು ಹೊಸ ವ್ಯವಸ್ಥೆ ಏರ್ಪಟ್ಟಿತು. ಹೊಸ ಸಮೀಕರಣಗಳಾದವು. ರಾಜಕೀಯವಾಗಿ ಎನ್.ಟಿ.ಆರ್.ಗೆ ಅನುಕೂಲವೇ ಆಯಿತಾದರೂ, ಆ ಬಗ್ಗೆ ನನಗೆ ಆಸಕ್ತಿಯಿರಲಿಲ್ಲ. ಹೊಸ ಮಂಡಲ ವ್ಯವಸ್ಥೆ ಆಡಳಿತಕ್ಕೆ ಒಳಿತನ್ನೇ ಮಾಡಿ ಜನರಿಗೆ ಹತ್ತಿರವಾಯಿತೆಂದು ನಂಬಿದೆ.

ಒಂದೇ ಕಲ್ಲಿಗೆ ಎರಡು ಹಕ್ಕಿಗಳಾ? ತಾಲೂಕು-ಬ್ಲಾಕುಗಳ ವ್ಯವಸ್ಥೆಯನ್ನು ರದ್ದು ಮಾಡುತ್ತ, ಎನ್.ಟಿ.ಆರ್ ಗ್ರಾಮ ಲೆಕ್ಕಿಗನ ವ್ಯವಸ್ಥೆಯನ್ನೂ ರದ್ದು ಮಾಡಿದರು. ಹಳ್ಳಿಗಳಲ್ಲಿ ಕರಣಂ–ಮನ್ಸಬುಗಳದ್ದೇ ಮುಖ್ಯರಾಗಿದ್ದರು. ತೆಲಂಗಾಣಾದಲ್ಲಿ ಪಟ್ವಾರಿ–ಪಟೇಲರಿದ್ದರು. ಆರ್ಥಿಕ ಮತ್ತು ಭೂಮಿಯ ವ್ಯವಹಾರಗಳನ್ನು ಕರಣಂಗಳು ನೋಡಿಕೊಂಡರೆ, ಕಾನೂನು ಮತ್ತು ಸುವ್ಯವಸ್ಥೆಯ ವಿಚಾರಗಳನ್ನು ಮನ್ಸಬುಗಳು ನೋಡಿಕೊಳ್ಳುತ್ತಿದ್ದರು. ಈ ಪದವಿಗಳು ವಂಶಪಾರಂಪರ್ಯವಾಗಿ ಅಥವಾ, ದುಡ್ಡು, ಭೂಹಿಡುವಳಿ, ಜಾತಿ, ಖ್ಯಾತಿಯಿದ್ದ ಕುಟುಂಬಗಳಿಗೆ ಸಲ್ಲುತ್ತಿದ್ದುವು. ಅದನ್ನು ರದ್ದು ಮಾಡಿ ದಬ್ಬಾಳಿಕೆ ಮಾಡುತ್ತಿದ್ದವರಿಗೆ ಬದಲಾಗಿ ಜವಾಬ್ದಾರಿಯುತ ಸರಕಾರಿ ಅಧಿಕಾರಿಗಳು ಈ ಕೆಲಸವನ್ನು ಮಾಡಬೇಕೆನ್ನುವುದು ಅವರ ಆಶಯ. ಪರಂಪರಾಗತ ದರ್ಪ ಬಿಟ್ಟು ಪ್ರತಿಭೆಯ ಆಧಾರದ ಮೇಲೆ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಹಳ್ಳಿಯಲ್ಲಿ ಅಧಿಕಾರಿಗಳಾದರೆ ಭ್ರಷ್ಟಾಚಾರ ಕಮ್ಮಿಯಾಗುತ್ತದೆಂದೂ ಶ್ರೀಸಾಮಾನ್ಯರ ಕಷ್ಟನಷ್ಟಗಳ ಬಗ್ಗೆ ಸರಿಯಾಗಿ ವ್ಯವಹರಿಸುತ್ತಾರೆಂದು ಎನ್.ಟಿ.ಆರ್. ನಂಬಿದ್ದರು.

ಹೊಸ ಆಡಳಿತ ವ್ಯವಸ್ಥೆ ಜಾರಿಯಾದರೆ, ಅಲ್ಲಿಯವರೆಗೂ ಅಧಿಕಾರವನ್ನು ಆಕ್ರಮಿಸಿಕೊಂಡಿದ್ದ ಜಾತಿಗಳ ಪ್ರಾಬಲ್ಯವೂ ಗ್ರಾಮಗಳಲ್ಲಿ ಇಲ್ಲವಾಗುತ್ತಿತ್ತ! ಕಂದಾಯ ಇಲಾಖೆಯ ಆಡಳಿತವನ್ನು ಆಮೂಲಾಗ್ರವಾಗಿ ಬದಲಾಯಿಸಲು ಸನ್ನದ್ಧರಾದರು. ಇದನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿಯಾರೆಂಬ ಕಾಳಜಿಯಿತ್ತು. ಈ ಬಗ್ಗೆ ನನ್ನ ಸಲಹೆ ಕೇಳಿದರು. ಇದರ ಕಾನೂನುಬದ್ಧತೆಯ ಬಗ್ಗೆ ಮುಂಬೈನ ಪ್ರಮುಖ ನ್ಯಾಯವಾದಿ ನಾನಿ ಪಾಲ್ಖೀವಾಲಾರ ಜೊತೆಯೂ ಚರ್ಚಿಸಿದರು. ಊಹಿಸಿದಂತೆ, ಅಧಿಕಾರಿಗಳಿಂದ, ಮತ್ತು ರಾಜಕಾರಣಿಗಳಿಂದ ಇದಕ್ಕೆ ತೀವ್ರ ವಿರೋಧ ಬಂತು. ಅದನ್ನು ಪರಿಗಣಿಸದೆ ಮುಂದುವರೆದರು! ಇದೊಂದು ಸುಧಾರಣೆಯಿಂದ ಹಲವು ಉದ್ದೇಶಗಳನ್ನು ಸಾಧಿಸಿದ್ದಾಯಿತು. ಭೌಗೋಳಿಕ ಗಡಿಗಳನ್ನು ಬದಲಾಯಿಸಿದ್ದರಿಂದ ಕಾಂಗ್ರೆಸ್ ಬಲಹೀನವಾಗಿ ತೆಲುಗುದೇಶಂ ಪ್ರಬಲವಾಯಿತು. ಹಳ್ಳಿಗಳಲ್ಲಿ ದರ್ಬಾರು ಮಾಡುತ್ತಿದ್ದ ಕರಣಂ-ಮುನಸಬುಗಳೆಲ್ಲಾ ನಿರ್ವೀರ್ಯರಾದರು.

ಜಿಲ್ಲಾ ಸ್ತರದಲ್ಲಿ ಯೋಜನಾ ವಿಭಾಗವನ್ನು ಬಲಪಡಿಸಿ ಯೋಜನಾ ಮಂಡಳಿಗಳನ್ನು ರಚಿಸಿ ಅವಕ್ಕೆ ಜಿಲ್ಲಾಧಿಕಾರಿಗಳು ಸಾರಥ್ಯ ವಹಿಸುವಂತೆ ಮಾಡಿದವರು ಎನ್.ಟಿ.ಆರ್. ಇದು ನನ್ನ ನೈಪುಣ್ಯಕ್ಕೆ ಸಂಬಂಧಿಸಿದ ವಿಷಯವಾಗಿತ್ತು. ಎನ್.ಟಿ.ಆರ್. ಕೈಗೊಂಡ ಮೂಲಭೂತ ಬದಲಾವಣೆಗಳನ್ನು ಅವರ ಪಕ್ಷದ ಶಾಸಕರೇ ವಿರೋಧಿಸಿದ್ದರು. ಅವರ ಕಾರ್ಯನಿರ್ವಹಣೆಯ ಶೈಲಿಯ ಬಗ್ಗೆಯೂ ಪಕ್ಷಕ್ಕೆ ಅಸಂತೃಪ್ತಿಯಿತ್ತು. ಆದರೂ ಅನೇಕ ಗುಣಾತ್ಮಕ ಬದಲಾವಣೆಗಳನ್ನು ಸಾಕಾರಗೊಳಿಸಲು ಎನ್.ಟಿ.ಆರ್. ಪ್ರಾಮಾಣಿಕವಾಗಿ ಪ್ರಯತ್ನಿಸಿದರು.

ತಂತ್ರಜ್ಞಾನದ ಆಹ್ವಾನ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸುವ ಬಗ್ಗೆ ಎನ್.ಟಿ.ಆರ್. ಉತ್ಸಾಹ ತೋರುತ್ತಿದ್ದರು ಇದು ಬಹಳ ಮಂದಿಗೆ ತಿಳಿಯದ ವಿಷಯ. ಮಾಹಿತಿ ತಂತ್ರಜ್ಞಾನದ ತರಬೇತಿಯಲ್ಲಿ ಆಂಧ್ರಪ್ರದೇಶ ಅಗ್ರಸ್ಥಾನದಲ್ಲಿತ್ತು. ರಾಷ್ಟ್ರೀಯ ಮಾಹಿತಿವಿಜ್ಞಾನ ಕೇಂದ್ರದ (ಎನ್.ಐ.ಸಿ) ಪ್ರಾಂತೀಯ ಕಚೇರಿಯನ್ನು ಹೈದರಾಬಾದಿನಲ್ಲಿ ಸ್ಥಾಪಿಸುವಂತೆಆಗ್ರಹಿಸಿ ಅದರಲ್ಲಿ ಅವರು ಯಶಸ್ವಿಯೂ ಆದರು. ಕೇಂದ್ರ ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಸ್ತರದಲ್ಲಿ ಉಚಿತವಾಗಿ ಮಾಹಿತಿ ತಂತ್ರಜ್ಞಾನದ ಸೇವೆಗಳನ್ನು ಒದಗಿಸಲಿತ್ತು. ಕೇಂದ್ರದ ಪ್ರಯತ್ನಗಳು ನಡೆಯಲಿ. ಅದು ರಾಜ್ಯ ಸರ್ಕಾರದ ಕೆಲಸವನ್ನು ತಡೆಯುವುದಿಲ್ಲ. ಆ ಸೇವೆಗಳನ್ನು ನಾವು ಪೂರಕವಾಗಿ ಬಳಸಿಕೊಂಡರೆ ರಾಜ್ಯಕ್ಕೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆಂದು ನಂಬಿದೆವು. ಇದರಿಂದ ಪ್ರಯೋಜನಗಳಿದ್ದುವು – ಕಂಪ್ಯೂಟರ್ ಒಂದು ಪೆನ್ನಿನಂತೆ – ಅದನ್ನು ಬಳಸುವವರಿಗೆಲ್ಲ ಅದು ತಮ್ಮದೇ ಅನ್ನಿಸಬೇಕು. ರಾಜ್ಯ ಸರ್ಕಾರದ ಕಚೇರಿಗಳೆಲ್ಲವೂ ಗಣಕೀಕೃತವಾಗಬೇಕು. ಪ್ರತಿಯೊಂದು ಕಂಪ್ಯೂಟರ್ ಕೂಡಾ ಜಾಲದ ಸಂಪರ್ಕದಲ್ಲಿರಬೇಕು. ಹೆಚ್ಚು ಮಾಹಿತಿಯನ್ನು ಉಪಯೋಗಿಸುವ ಜಿಲ್ಲಾ ಕಚೇರಿ ಮತ್ತು ಯೋಜನಾವಿಭಾಗದಲ್ಲಿ, ಗಣಕೀಕರಣಕ್ಕೊಳಪಡುವ ತೆರಿಗೆ ವಿಭಾಗದಲ್ಲಿ ಕಂಪ್ಯೂಟರುಗಳನ್ನು ಆದ್ಯತೆಯ ಮೇರೆಗೆ ತಂದಿರಿಸಬೇಕೆಂದು ವಾದಿಸಿದೆವು. ವಿಪರೀತ ಓವರ್ ಟೈಂ ಭತ್ಯೆ ನೀಡುತ್ತಿದ್ದ ವಿಭಾಗದಲ್ಲಿ ಕಂಪ್ಯೂಟರಿನಿಂದ ದುಡ್ಡಿನ ಉಳಿತಾಯವೂ ಆಗುವುದೆಂದು ನಾವು ನಂಬಿದೆವು. ಮುಂಗಡಪತ್ರಗಳನ್ನು ತಯಾರಿಸಲು ಮತ್ತು ಸರ್ಕಾರಿ ಮುದ್ರಣಾಲಯಗಳಲ್ಲಿ ಇದು ಹೆಚ್ಚಿನ ಉಪಯೋಗಕ್ಕೆ ಬಂದಿತ್ತು.

ಎನ್.ಟಿ.ಆರ್. ವಿಚಿತ್ರ ದ್ವಂದ್ವದ ಬದುಕನ್ನು ಜೀವಿಸುತ್ತಿದ್ದರು. ಒಂದೆಡೆ ಪೌರಾಣಿಕ ಪಾತ್ರಗಳಲ್ಲಿ ಮಿಂಚಿದ ಮಹಾನಾಯಕರಾಗಿ ಹಳೆಯ ಕಾಲಕ್ಕೆ ಒಯ್ಯುತ್ತಿದ್ದರು. ಮತ್ತೊಂದೆಡೆ ಆಧುನಿಕ ತಂತ್ರಜ್ಞಾನವನ್ನು ಆಹ್ವಾನಿಸುವ ಮುಂಚೂಣಿಯಲ್ಲಿದ್ದರು. ಅವರಿಗೆ ಕಂಪ್ಯೂಟರುಗಳ ಬಗ್ಗೆ ವಿಶೇಷ ಅರಿವು ಇರಲಿಲ್ಲವಾದರೂ, ಕಂಪ್ಯೂಟರಿಗೂ ಆಧುನಿಕತೆಗೂ ಕೊಂಡಿ ಹಾಕಿ ಸಣ್ಣಮಕ್ಕಳ ಉತ್ಸಾಹ ತೋರಿದ್ದರು. ನಮ್ಮ ರಾಜ್ಯದಲ್ಲಿ ಈ ಯಂತ್ರಗಳಿರಬೇಕೆಂಬ ಉತ್ಸಾಹ ತೋರಿದ್ದರಿಂದ, ಆಂಧ್ರಪ್ರದೇಶ ಗಣಕ ಸೇವಾಸಂಸ್ಥೆ ಸ್ಥಾಪಿತಗೊಂಡಿತು. ಸರ್ಕಾರ ಹಣ ಪೋಲು ಮಾಡುತ್ತಿದೆಯೆಂದರು ವಿರೋಧಪಕ್ಷಗಳು ತೀವ್ರವಾಗಿ ಟೀಕಿಸಿದರೂ ಎನ್.ಟಿ.ಆರ್. ಮುಂದುವರೆದರು. ಆಧುನಿಕ ಗಣಕೀಕೃತ ಆಡಳಿತದಲ್ಲಿ ಆಂಧ್ರಪ್ರದೇಶ ಮುಂಚೂಣಿಗೆ ಬರಲು ಕಾಷಾಯ ವಸ್ತ್ರ ಧರಿಸಿ, ರಾಕ್ಷಸೀ ಪ್ರವೃತ್ತಿಯ ವಿರುದ್ಧ ಹೋರಾಡುವ ಶ್ರೀಕೃಷ್ಣಭಗವಾನನಂತೆಇದ್ದ ವ್ಯಕ್ತಿ ತಂತ್ರಜ್ಞಾನದ ಮೇಲಿಟ್ಟಿದ್ದ ನಂಬಿಕೆಯೇ ಕಾರಣವಾಯಿತು.

shelfigeruva munna

ಎನ್​.ಟಿ. ರಾಮರಾವ್

ಶಾಸಕರ ಸ್ಥಳೀಯ ಅಭಿವೃದ್ಧಿ ಯೋಜನೆಯಾಗಿ ಪರಿವರ್ತನೆಗೊಂಡ ಕ್ರಿಟಿಕಲ್ ಬ್ಯಾಲೆನ್ಸಿಂಗ್ ಸ್ಕೀಮ್  ಭರವಸೆ ಹುಟ್ಟಿಸುವ ಆಲೋಚನೆಗಳು ಆರಂಭದಲ್ಲಿ ಯಶಸ್ವಿಯಾದಂತೆ ಕಂಡರೂ ಬಹು ಬೇಗನೇ ದಿಕ್ಕಾಪಾಲಾಗುವುದು ಸಾಧ್ಯ. ಅಂಥದ್ದೊಂದು ಯೋಜನೆಯೇ ಕ್ರಿಟಿಕಲ್ ಬ್ಯಾಲೆನ್ಸಿಂಗ್ ಸ್ಕೀಮ್. ಬಹಳಷ್ಟು ಯೋಜನೆಗಳು ಸುಮಾರಷ್ಟು ಪ್ರಗತಿ ಕಂಡು ನಿರ್ಣಾಯಕ ಹಂತದಲ್ಲಿ ನಿಂತುಹೋಗುತ್ತಿದ್ದುವು. ಇಂಥ ಯೋಜನೆಗಳಿಗೆ ಒಂದಷ್ಟು ಉತ್ತೇಜನ ಕೊಟ್ಟರೆ ಅವು ಮುಕ್ತಾಯ ಹಂತ ತಲುಪಬಹುದು. ಇದಕ್ಕೆಂದು ಸ್ವಲ್ಪ ದುಡ್ಡನ್ನು ತೆಗೆದಿಡಬೇಕೆಂದು ಪ್ರತಿಪಾದಿಸಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ. ಪ್ರತಿ ಜಿಲ್ಲೆಗೂ ಒಂದಿಷ್ಟು ಹಣವಿತ್ತು. ಅದನ್ನು ಹೇಗೆ ಬಳಸಬೇಕು ಎನ್ನುವುದರ ಬಗ್ಗೆ ವಿವರವಾದ ಸೂಚನೆಗಳಿದ್ದುವು. ಸ್ಥಗಿತಗೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ಮಾತ್ರ ಇದನ್ನು ಉಪಯೋಗಿಸಬಹುದಿತ್ತು. ಸಾಮಾನ್ಯ ಆಯವ್ಯಯ ಪದ್ಧತಿಗೆ ಇದು ಒಗ್ಗುವುದಿಲ್ಲವೆಂದು ಮುಖ್ಯಮಂತ್ರಿಗಳ ಆಪ್ತರು ಹೇಳಿದರು. ಆದರೆ ವಿರೋಧವನ್ನು ತಳ್ಳಿಹಾಕಿ ಯೋಜನೆಯನ್ನು ಜಾರಿ ಮಾಡಿದರು. ಇದು ಚೆನ್ನಾಗಿಯೇ ನಡೆಯಿತು. ಇದರಿಂದಾಗಿ ಅನೇಕ ಯೋಜನೆಗಳು ಪೂರ್ಣಗೊಂಡವು. ಕ್ರಮೇಣ ಕೆಲವು ಶಾಸಕರು ಹಣ ವಿತರಣೆಯಾಗುತ್ತಿರುವ ಪ್ರಕ್ರಿಯೆಯ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಲಾರಂಭಿಸಿದರು. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂಬ ಗೊಣಗಾಟ ಪ್ರಾರಂಭವಾಯಿತು. ಬೇಗನೇ ಈ ಕ್ರಿಟಿಕಲ್ ಬ್ಯಾಲೆನ್ಸಿಂಗ್ ಸ್ಕೀಮ್ ಶಾಸಕರ ಕ್ಷೇತ್ರದಲ್ಲಿ ಅವರ ಹುಕುಂಗೆ ತಕ್ಕಂತೆ ಅನುದಾನವನ್ನು ಬಳಸುವ ಯೋಜನೆಯಾಯಿತು. ಅನೇಕ ವರ್ಷಗಳ ನಂತರ ಈ ಯೋಜನೆಯ ಆತ್ಮ ಕೇಂದ್ರಕ್ಕೆ ಪರಕಾಯಪ್ರವೇಶ ಮಾಡಿತು. ಇದೇ ರೀತಿಯ ಯೋಜನೆಯನ್ನು ಭಾರತ ಸರಕಾರ ರೂಪಿಸಿ, ಪ್ರತಿ ಸಂಸತ್ ಸದಸ್ಯರಿಗೂ ಒಂದಿಷ್ಟು ಅನುದಾನ ಕೊಟ್ಟು ಅವರ ಕ್ಷೇತ್ರದಲ್ಲಿ ಅವರಿಗಿಷ್ಟ ಬಂದ ಯೋಜನೆಯ ಮೇಲೆ ಖರ್ಚು ಮಾಡುವುದಕ್ಕೆ ಅನುವು ಮಾಡುಕೊಟ್ಟಿತು. ಕ್ರಿಟಿಕಲ್ ಬ್ಲಾಲೆನ್ಸಿಂಗ್ ಸ್ಕೀಮ್​ ಪ್ರಾರಂಭವಾದದ್ದು ಶಾಸಕರು ತಮ್ಮಿಷ್ಟದಂತೆ ತಮಗೆ ಬೇಕಾದ ಯೋಜನೆಗಳಿಗೆ ಅನುದಾನ ದಯಪಾಲಿಸುವ ಯೋಜನೆಯಾಗಿಬಿಟ್ಟಿತ್ತು. ಈ ರೀತಿ ಹೇಗೆಂದರೆ ಹಾಗೆ ಬಗ್ಗಿಸಬಲ್ಲ ಯೋಜನೆ ರೂಪಗೊಳ್ಳಲು ಪರೋಕ್ಷವಾಗಿ ಕಾರಣನಾದೆ ಎನ್ನುವ ಪಾಪಭಾವನೆ ನನ್ನಲ್ಲಿದೆ.

ಎರಡು ರೂಪಾಯಿಗೆ ಕಿಲೋ ಅಕ್ಕಿ ಎನ್.ಟಿ.ಆರ್. ಹಲವು ಜನಪ್ರಿಯ ಯೋಜನೆಗಳನ್ನು ಜಾರಿಮಾಡಿದ್ದರು. ಮುಖ್ಯವಾಗಿ ಪಡಿತರ ಪದ್ಧತಿಯಲ್ಲಿ ಬಡಜನರಿಗೆ ಎರಡು ರೂಪಾಯಿಗೆ ಒಂದು ಕಿಲೋ ಅಕ್ಕಿಯನ್ನು ವಿತರಿಸುವ ಕಾರ್ಯಕ್ರಮವನ್ನು – ಕೇಂದ್ರ ಸರಕಾರದ ವಿರೋಧವಿದ್ದರೂ ಯೋಜನೆಯನ್ನು ಜಾರಿ ಮಾಡಿದರು. ಈ ಯೋಜನೆಯ ಬಗ್ಗೆ ಅವರಿಗೆ ಪೂರ್ಣ ನಂಬಿಕೆಯಿತ್ತು. ಕಡಿಮೆ ಬೆಲೆಯ ಆಹಾರ ಸರಬರಾಜಿಗಿಂತ, ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸುವುದು ಉತ್ತಮವೆಂದು ಅನೇಕ ಬಾರಿ ವಾದಿಸಿದ್ದೆ. ನಮ್ಮಲ್ಲಿದ್ದ ಮಾಹಿತಿಯಂತೆ ಕಡುಬಡವರಿಗೆ ಎರಡು ರೂಪಾಯಿ ಬೆಲೆಯಲ್ಲೂ ಅಕ್ಕಿಯನ್ನು ಕೊಳ್ಳಲು ಕಷ್ಟವಿತ್ತು. ಉದ್ಯೋಗ ಖಾತ್ರಿ ಯೋಜನೆಯು ಭೂರಹಿತರು ಮತ್ತು ಮಹಿಳೆಯರನ್ನು ಸಬಲಗೊಳಿಸುತ್ತದೆ ಎಂಬುದು ನನ್ನ ನಂಬಿಕೆ. ಆದರೆ ಆ ಯೋಜನೆಯನ್ನು ಪಡಿತರ ಸರಬರಾಜಿಗೆ ಬದಲಾಗಿ, ಅಥವಾ ಸಮಾನಾಂತರವಾಗಿ ನಡೆಸಲು ಎನ್.ಟಿ.ಆರ್. ಒಪ್ಪಲಿಲ್ಲ. ಇದಕ್ಕೆ ಅವರು ನೀಡುತ್ತಿದ್ದ ಕಾರಣವೂ ಒಂದು ಆಸಕ್ತಿಕರವಾದ ಒಳನೋಟವನ್ನು ಒದಗಿಸಿತು.

‘ಹಳ್ಳಿಯಲ್ಲಿ ಈಗಾಗಲೇ ರೈತರಿಗೆ ಕೃಷಿಕೆಲಸಗಳಿಗೆ ಕೂಲಿಜನ ಸಿಗುವುದು ಕಷ್ಟವಾಗಿದೆ. ನಾವು ಉದ್ಯೋಗ ಖಾತ್ರಿಯನ್ನೂ ಕೊಟ್ಟರೆ, ರೈತರ ಜೀವನ ದುಸ್ತರವಾಗಿಬಿಡುತ್ತದೆ.’ ಎಂದರು. ರೈತರ ಮತ್ತು ಕೂಲಿಗಳ ಹಿತಾಸಕ್ತಿಯ ವಿಷಯಕ್ಕೆ ಬಂದಾಗ ಎನ್.ಟಿ.ಆರ್. ರೈತರ ಪರ ಎನ್ನುವುದು ವೇದ್ಯವಾಗಿತ್ತು. ಬ್ಲೇಡುಗಳು ಸ್ಕೂಟರುಗಳನ್ನು ತಯಾರಿಸುವುದು ನಮ್ಮ ಕೆಲಸವಾ? ವ್ಯಾನುಗಳನ್ನು ತಯಾರಿಸುವ ಆಲ್ವಿನ್ ನಿಸಾನ್ ಕಂಪನಿಯ ವಿಸ್ತರಣೆಗೆಂದು ಬಂದ ಪ್ರಸ್ತಾವನೆ ಅಂತಿಮ ಘಟ್ಟಕ್ಕೆ ಬಂದಿತ್ತು. ವಿವರಗಳನ್ನು ಚರ್ಚಿಸಲು ಜಪಾನಿಗೆ ಹೋಗಬೇಕಿತ್ತು. ಆದರೆ ಇದು ಸರಿ ಅನ್ನಿಸಲಿಲ್ಲ. ಇದರಿಂದ ರಾಜ್ಯದ ಮೇಲೇ ಹೆಚ್ಚಿನ ಭಾರ ಬೀಳುವಂತಿತ್ತು. ಆ ವಿಷಯವನ್ನು ಎನ್.ಟಿ.ಆರ್. ಗೆ ವಿವರಿಸಿದೆ. ಜಪಾನಿ ಯೆನ್‌ನಲ್ಲಿ ಸಾಲ ಪಡೆದು ಮುಂದುವರೆದರೆ ನಮ್ಮ ಮೇಲಿನ ಋಣಭಾರ ಹೆಚ್ಚಾಗುವ ಅಪಾಯವಿದೆಯೆಂದು ಹೇಳಿದೆ.

‘ರೇಜರ್ ಬ್ಲೇಡು, ಸ್ಕೂಟರುಗಳನ್ನು ತಯಾರು ಮಾಡುವುದು ಸರಕಾರದ ಕೆಲಸವಾ? ಪ್ರಜಾಧನವನ್ನು ಅದಕ್ಕಾಗಿ ದುರ್ವಿನಿಯೋಗ ಮಾಡಬಾರದು. ಬೇಡ. ಮೊದಲು ಆ ಉದ್ಯಮವನ್ನು ಮಾರಿಬಿಡೋಣ’ ಅಂದರು. ಹಾಗೆ ಮಾಡಿದರೆ ಕಡಿಮೆ ಬೆಲೆಗೆ ಷೇರುಗಳನ್ನು ಮಾರಬೇಕಾಗುತ್ತೆ, ಜೊತೆಗೆ ಕಾರ್ಮಿಕ ಸಂಘಗಳ ವಿರೋಧವನ್ನೂ ಎದುರಿಸಬೇಕಾದ ಅಪಾಯವಿದೆ ಎಂದೆ.

‘ಎಷ್ಟೇ ನಷ್ಟ ಬಂದರೂ ಭರಿಸೋಣ. ಯಾರೇ ವಿರೋಧಿಸಿದರೂ ಪರವಾಗಿಲ್ಲ. ಆದರೆ ಪ್ರಜಾಧನ ಪೋಲಾಗಬಾರದು. ಶಾಲೆ, ಆಸ್ಪತ್ರೆಗಳ ಮೇಲೆ ವಿನಿಯೋಗಿಸಬೇಕಾದ ಹಣವನ್ನು ಈ ಚಟುವಟಿಕೆಯಲ್ಲಿ ಹೂಡಬಾರದು’ಎಂದರು. ಅರ್ಥಾತ್. ಆಲ್ವಿನ್-ನಿಸಾನ್‌ನ ಸರಕಾರಿ ಪಾಲನ್ನು ಮಾರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ತೀರ್ಮಾನವಾಯಿತು. ಅದಕ್ಕಾಗಿ ಒಂದು ಸಮಿತಿ ರಚಿಸಿದೆವು. ಕಾರ್ಮಿಕರಿಗೆ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಿದೆವು. ಈ ಪ್ರಕ್ರಿಯೆಯಲ್ಲಿ ಮಹೀಂದ್ರಾ ಸಂಸ್ಥೆ ಅದನ್ನು ಕೊಂಡಿತು. ಸರ್ಕಾರಿ ಸಂಸ್ಥೆಗಳ ಖಾಸಗೀಕರಣದ ಮೊದಲ ಪ್ರಯತ್ನಗಳಲ್ಲಿ ಇದೊಂದುಎನ್ನಬಹುದು. ಆನಂತರ ‘ಆಂಧ್ರಪ್ರದೇಶ್ ಸ್ಕೂಟರ್ಸ್’ ಸಂಸ್ಥೆಯನ್ನು ಕೂಡಾ ಮಾರುವ ಜವಾಬ್ದಾರಿಯನ್ನು ನನಗೆ ಕೊಟ್ಟರು. ಮಾರಾಟದ ಪ್ರಕ್ರಿಯೆ ಸುಗಮವಾಗಲೆಂದು ನನ್ನನ್ನು ಕಂಪನಿಯ ಆಡಳಿತ ಮಂಡಳಿಯಲ್ಲಿ ಸೇರಿಸಿದರು. ಕಾರಣಾಂತರದಿಂದಅದು ವಿಫಲವಾಯಿತು.

shelfigeruva munna

ವೈ. ವಿ. ರೆಡ್ಡಿ.

1984-85 ವಾರ್ಷಿಕ ಯೋಜನೆಯನ್ನು ರೂಪಿಸಲು ಕುಳಿತೆವು ‘ಸಂವಿಧಾನದಲ್ಲಿ ಕೇಂದ್ರದ ಮಾತಿಲ್ಲ’ ಇದು ಎನ್.ಟಿ.ಆರ್. ನಿಲುವು. ರಾಜ್ಯ ಸರಕಾರದ ಪ್ರಾಥಮಿಕತೆಯ ಬಗ್ಗೆ ಮಾತಾಡುತ್ತಾ ಕೇಂದ್ರದಲ್ಲಿದ್ದ ಕಾಂಗ್ರೆಸ್ ವಿರೋಧಿ ಪಕ್ಷಗಳಿಗೆ ಎನ್‌.ಟಿ.ಆರ್ ನಾಯಕತ್ವವನ್ನೂ ನೀಡಿದರು. ಅವರ ನಿಲುವಿನಿಂದ ಯೋಜನಾ ಕಾರ್ಯದರ್ಶಿಯಾಗಿದ್ದ ನನಗೆ ಕಷ್ಟವಾಗುತ್ತಿತ್ತು. ದಿನಬೆಳಗಾದರೆ ಕೇಂದ್ರ ಸರ್ಕಾರದೊಂದಿಗೂ ಯೋಜನಾ ಆಯೋಗದೊಂದಿಗೂ ಕೆಲಸ ಮಾಡುತ್ತಾ ನಮ್ಮ ರಾಜ್ಯಕ್ಕೆ ಎಷ್ಟು ಸಾಧ್ಯವೋ ಅಷ್ಟು ಸಂಪನ್ಮೂಲ ಸಿಗುವಂತೆ ಮಾಡಬೇಕಿತ್ತು! ‘ಇಂದಿರಾ ಅವರೇ ಇಂಡಿಯಾ, ಇಂಡಿಯಾವೇ ಇಂದಿರಾ’ ಎನ್ನುವ ಘೋಷಣೆಯ ನಡುವಿನಲ್ಲಿ ಆಕೆಯನ್ನು ವಿರೋಧಿಸುತ್ತ ಎನ್.ಟಿ.ಆರ್. ಅಧಿಕಾರಕ್ಕೆ ಬಂದಿದ್ದರು. ಇದರಿಂದಾಗಿ ರಾಜ್ಯದ ಯೋಜನಾ ವಿಭಾಗದಲ್ಲಿ ಕೆಲಸ ಸಂಕೀರ್ಣವಾಯಿತು. ಪ್ರತಿಕೂಲ ರಾಜ್ಯವನ್ನು ಪ್ರತಿನಿಧಿಸುತ್ತ ಭಾರತ ಸರ್ಕಾರ ಮತ್ತು ಯೋಜನಾ ಆಯೋಗದಿಂದ ಆರ್ಥಿಕ ನೆರವನ್ನು ಪಡೆಯಬೇಕಾದ ಜವಾಬ್ದಾರಿ ನನ್ನ ಮೇಲಿತ್ತು. ಇದರಿಂದ ರಾಜ್ಯಕ್ಕೆ ಯಾವ ಧಕ್ಕೆಯೂ ಆಗದಂತೆ ನೋಡಿಕೊಳ್ಳಬೇಕಿತ್ತು. ಹಾಗೆಯೇ ಅಲ್ಲಿಂದ ಆರ್ಥಿಕ ಸಂಪನ್ಮೂಲಗಳು ಬಂದಾಗ ರಾಜ್ಯದ ಸ್ವಾಯತ್ತತೆಯನ್ನು ಸ್ವಾತಂತ್ರವನ್ನೂ ಅಡವಿಡುತ್ತಿಲ್ಲ ಎಂದು ರಾಜ್ಯಸರಕಾರಕ್ಕೂ ಮನದಟ್ಟು ಮಾಡಿಕೊಡಬೇಕು.

‘ಹೊಸ ಯೋಜನೆಗಳನ್ನು ಪ್ರಕಟಿಸುವುದಕ್ಕೆ ಬದಲು ಈಗಿರುವ ಯೋಜನೆಗಳನ್ನೇ ಮುಂದುವರೆಸುವುದೇ ವಾಸಿ. ಅದರಿಂದ ನಮ್ಮ ಆರ್ಥಿಕತೆಗೂ, ವ್ಯವಸ್ಥೆಗೂ ಒಳ್ಳೆಯದಾಗುತ್ತದೆ’ ಎಂದು ಯೋಜನಾ ಆಯೋಗದ ಅಧಿಕಾರಿಗಳು ಹೇಳಿದರು. ಆದರೆ ನಮ್ಮ ರಾಜ್ಯದ ಯೋಜನೆ ನಮ್ಮ ಮಂತ್ರಿಮಂಡಲ, ನಮ್ಮ ಮುಖ್ಯಮಂತ್ರಿಗಳ ಅಭಿಪ್ರಾಯ, ಆದ್ಯತೆಗಳನ್ನು ಪ್ರತಿನಿಧಿಸಬೇಕಿತ್ತು. ಯೋಜನಾ ಆಯೋಗದ ಅಧಿಕಾರಿಗಳೊಂದಿಗೆ ಸಭೆ ಪ್ರಾರಂಭವಾಯಿತು. ಅವರು ಅಲ್ಲಿಯವರೆಗೂ ನಿರ್ವಹಿಸುತ್ತಿದ್ದ ಯೋಜನೆಗಳನ್ನು ಮುಂದುವರೆಸಬೇಕೆಂದೇ ಪಟ್ಟುಹಿಡಿದರು. ಕಡೆಗೆ ಖಡಾಖಂಡಿತವಾಗಿ ಹೇಳಿದೆ ‘ಇರೋ ಯೋಜನೆಗಳನ್ನೇ ಮುಂದುವರೆಸಬೇಕೆಂದು ಆಂಧ್ರಪ್ರದೇಶ ಪ್ರಜೆಗಳಿಗೆ ಇದ್ದಿದ್ದರೆ ಹಿಂದಿನ ಸರ್ಕಾರವನ್ನೇ ಮರುಚುನಾಯಿಸುತ್ತಿದ್ದರೆನ್ನುವುದು ನಮ್ಮ ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲದ ಅಭಿಪ್ರಾಯ. ಕೇಂದ್ರವೂ ಕಾಲಾಕಾಲಕ್ಕೆ ತನ್ನ ಪ್ರಾಥಮಿಕ ಆದ್ಯತೆಗಳನ್ನು ಬದಲಾಯಿಸುತ್ತಿರುತ್ತದೆ. ಈಗಿರುವ ಯೋಜನೆಗಳು ಮತ್ತು ಹೊಸ ಕಾರ್ಯಕ್ರಮಗಳ ನಡುವೆ ಒಂದು ಸಮತೋಲನವನ್ನು ತಂದು ಅದರ ಲಾಭನಷ್ಟಗಳನ್ನು ನೋಡಿ ಮುಂದುವರೆಯೋಣ’ ಅಂದೆ.

ಆ ವರ್ಷ ನಾವು ದೊಡ್ಡಗಾತ್ರದ ಯೋಜನೆಯನ್ನು ಸಲ್ಲಿಸಿದೆವು. ಅದಕ್ಕನುಗುಣವಾಗಿ ಧನಸಂಪನ್ಮೂಲ ಒದಗಿಸುವುದು ಕಷ್ಟವೆಂದು ಕೇಂದ್ರದ ಅಧಿಕಾರಿಗಳಿಗೂ ಗೊತ್ತಿತ್ತು. ಅವರು ಅದನ್ನು ಹೇಳಿದರು. ನಾನದಕ್ಕೆ ‘ನಾವು ಎಲ್ಲವನ್ನೂ ವಿಶ್ಲೇಷಿಸಿಯೇ ಯೋಜನೆಯನ್ನು ಮಂಡಿಸಿದ್ದೇವೆ. ನಿಮ್ಮ ಅನುಮತಿ ಸಾಕು. ಇದನ್ನು ಜಾರಿಮಾಡುವುದು ಕಷ್ಟವಲ್ಲ’ ಎಂದೆ. ಚರ್ಚೆ ಮುಂದುವರೆದಾಗ ಹೇಳಿದೆ ‘ನಿಜಕ್ಕೂ ನಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ನಿಮಗಿರುವ ಮಾಹಿತಿ ನಾವು ಕೊಟ್ಟದ್ದು. ಇದನ್ನು ಬಿಟ್ಟು ನಿಮಗೆ ಬೇರೆ ಮಾಹಿತಿಯಿಲ್ಲ. ಹೀಗಿರುವಾಗ ರಾಜ್ಯದಲ್ಲಿ ಸಂಪನ್ಮೂಲಗಳು ಕಡಿಮೆಯಾದರೆ ನಾವೇ ಯೋಜನೆಗಳನ್ನು ಸರಿಮಾಡಿಕೊಳ್ಳುತ್ತೇವೆ. ನೀವು ನಮಗೆ ಕೊಡಬೇಕಾದ ನೆರವಿನ ಬಗ್ಗೆ ಯೋಚಿಸಿ. ನಮಗಿರುವ ಸಂಪನ್ಮೂಲಗಳ ಬಗ್ಗೆ ನಮ್ಮ ಅಂದಾಜನ್ನು ಗೌರವಿಸಿ, ಸಾಕು.’ ಅಂತ ಕಟುವಾಗಿಯೇ ಹೇಳಿದೆ. ಏಳನೆಯ ಪಂಚವಾರ್ಷಿಕ ಯೋಜನೆಯ ವಿಷಯದಲ್ಲಿ ಕೇಂದ್ರ-ರಾಜ್ಯದ ನಡುವೆ ಒಮ್ಮತ ಏರ್ಪಡಲಿಲ್ಲ. ಆಗ ರಾಜ್ಯಗಳು ಅಗತ್ಯವೆನಿಸಿದಾಗಲೆಲ್ಲಾ ಸಾಲಮಾಡುತ್ತಿದ್ದುವು. ಅದನ್ನು ಎನ್.ಟಿ.ಆರ್. ವಿರೋಧಿಸಿದರು. ರಾಜ್ಯಗಳು ಅತ್ಯವಶ್ಯಕವಾದ ಪರಿಸ್ಥಿತಿಯಲ್ಲಿ ಬೇಕಾಬಿಟ್ಟಿ ಸಾಲ ಮಾಡದೇ ಒಂದು ಸೂತ್ರದನುಸಾರ ನಡೆಯಬೇಕೆಂದರು. ಕೇಂದ್ರವು ಗಾಡ್ಗೀಳ್ ಸೂತ್ರವನ್ನು ಪಾಲಿಸಿದಂತೆ ಒಂದು ವ್ಯವಸ್ಥೆಯಿರಬೇಕು. ಅಷ್ಟೇ ಅಲ್ಲ, ಕೇಂದ್ರವು ಮಾಡುವ ಸಾಲ – ರಾಜ್ಯ ಸರ್ಕಾರಗಳಿಗೆ ಹಂಚುವ ಮೊತ್ತಕ್ಕೆ ಸಮಾನವಾಗಿರಬೇಕು, ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪಡೆದ ಸಾಲವು ರಾಜ್ಯಗಳಿಗೆ ಹಂಚಿಕೆಯಾಗಬೇಕೆನ್ನುವ ನಿಲುವನ್ನು ಹೊಂದಿದ್ದರು. ಒಬ್ಬ ವೃತ್ಥಿಪರನೆಂಬ ನೆಲೆಯಲ್ಲಿ ನನಗೆ ಇವು ಸಂಕೀರ್ಣ ವಿಷಯಗಳೆಂದು ಗೊತ್ತಿತ್ತು. ಆದರೆ ರಾಜಕೀಯ ದೃಷ್ಟಿಕೋನದಿಂದ ಇದನ್ನು ನೋಡುತ್ತಿದ್ದ ಎನ್.ಟಿ.ಆರ್. ಹಿಡಿದ ಪಟ್ಟನ್ನು ಬಿಡಲಿಲ್ಲ. ಆಗ ಮನಮೋಹನ ಸಿಂಗ್​ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಅವರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಎನ್.ಟಿ.ಆರ್. ಪಂಚವಾರ್ಷಿಕ ಯೋಜನೆಯನ್ನು ವಿರೋಧಿಸದಿದ್ದರೂ ಅದನ್ನು ಸಮರ್ಥಿಸುವುದೂ ಇಲ್ಲ ಅಂತ ನಮಗೆ ಅನ್ನಿಸಿತ್ತು. ಆ ನಂತರ ಕೆಲ ಕಾರ್ಯಕ್ರಮಗಳಿಗೆ ಕೇಂದ್ರದ ಸಹಾಯ ಸ್ವೀಕರಿಸುವುದರಲ್ಲಿ ತಪ್ಪೇನೂ ಇಲ್ಲವೆಂದೂ ಸ್ವೀಕರಿಸದಿದ್ದರೆ ದೀರ್ಘಕಾಲದ ಅನುಕೂಲಗಳು ತಪ್ಪಿಹೋಗಿ ಪ್ರಗತಿಗೆ ಪೆಟ್ಟು ಬೀಳುವುದೆಂದು ಎನ್.ಟಿ.ಆರ್.ಗೆ ವಿವರಿಸಿದೆ. ಆತ ತಮ್ಮ ಹಟವನ್ನು ಸಡಿಲಿಸಿದರು. ಅದರ ಫಲವಾಗಿ ತೆಲುಗು ಗಂಗಾ ಯೋಜನೆ ಬಂತು.

***

ಪರಿಚಯ: ಲೇಖಕ ಎಂ.ಎಸ್. ಶ್ರೀರಾಮ್ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಕೆಲ ವರ್ಷ ಕೆಲಸ ಮಾಡಿ ನಂತರ ಬೆಂಗಳೂರಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಮ್ಯಾನೇಜ್ ಮೆಂಟ್ನಿಂದ ಡಾಕ್ಟರೇಟ್ ಪದವಿ ಪಡೆದರು. ನಂತರ ಆನಂದದ ಇನ್​ಸ್ಟಿಟ್ಯೂಟ್​ ಆಫ್ ರೂರಲ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದಿನ ಬೇಸಿಕ್ ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿ, ಅಹಮದಾಬಾದಿನ ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಮ್ಯಾನೇಜ್ಮೆಂಟ್ನಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನ ಐಐಎಂ ಅವರ ಕಾರ್ಯತಾಣ. ಇವರ ಕಥಾ ಸಂಕಲನಗಳು: ‘ಮಾಯಾದರ್ಪಣ’, ‘ಅವರವರ ಸತ್ಯ’, ‘ತೇಲ್ ಮಾಲಿಶ್’, ‘ಸಲ್ಮಾನ್ ಖಾನ್ ನ ಡಿಫಿಕಲ್ಟೀಸು’. ಪ್ರಬಂಧ ಸಂಕಲನ:  ‘ಕನಸು ಕಟ್ಟುವ ಕಾಲ’, ‘ಶನಿವಾರ ಸಂತೆ.’

ಇದನ್ನೂ ಓದಿ : New Book; ಅಚ್ಚಿಗೂ ಮೊದಲು: ಬಸಪ್ಪನ ಪ್ರಪಂಚವೇ ಆ ಬೇರೆಯವರು

Published On - 5:46 pm, Fri, 12 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ