Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ; ‘ನಾನ್ರೀ ಮಾತಾಡ್ತಿರೋದು ಕೊಡ್ರಿ ಬೆಡ್ ಅವ್ರಿಗೆ‘
Covid Bed : ‘ನನಗೆ ಪೊಲಿಟಿಕಲ್ ಪವರ್ ಬಳಸಿಕೊಂಡು ಬಂದವರ ಜೀವದ ಬೆಲೆಯೂ ಒಂದೇ, ಸಾಮಾನ್ಯರ ಜೀವದ ಬೆಲೆಯೂ ಒಂದೇ. ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡ್ತಿವೋ ಅಷ್ಟು ನಿಷ್ಠುರ ಆಗ್ತಾ ಹೋಗ್ತೀವಿ. ಜನ, ಜನನಾಯಕರುಗಳಿಗೂ ವಿಲನ್ ತರಹ ಕಾಣ್ತೀವಿ. ಕೊರೊನಾ ಮೊದಲ ಅಲೆಗಿಂತ ಈ ಎರಡನೇ ಅಲೆಯಲ್ಲಿ ಸಾವು-ನೋವಿನ ಜೊತೆಗೆ ರೋಗಿಗಳನ್ನು ಸಂಬಾಳಿಸೋದು ಕಷ್ಟವಾಗಿದೆ.’ ಡಾ. ಇಂದ್ರಾಣಿ ವಿ.
ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.
ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com
ಬಳ್ಳಾರಿಯಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಯಾಗಿರುವ ಡಾ. ಇಂದ್ರಾಣಿ. ವಿ. ಅವರದು ಒಟ್ಟು ಇಪ್ಪತ್ತೆರಡು ವರ್ಷಗಳ ವೈದ್ಯಕೀಯ ವೃತ್ತಿ ಅನುಭವ. ಹನ್ನೊಂದು ವರ್ಷ ಗ್ರಾಮೀಣ ಪ್ರದೇಶ, ಹನ್ನೊಂದು ವರ್ಷ ನಗರ ಪ್ರದೇಶ. ಓದು ಮತ್ತು ಚಿತ್ರಕಲೆ ಇವರ ಹವ್ಯಾಸ. ಹಂಪಿಯಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿರುವ ಲೇಖಕಿ ಮಂಜುಳಾ ಎಚ್. ಇಂದ್ರಾಣಿಯವರ ಸದ್ಯದ ದುಗುಡದೊಂದಿಗೆ ಸಮಾಜದ ಕೆಲ ಕಟುಸತ್ಯಗಳನ್ನೂ ಇಲ್ಲಿ ನಿರೂಪಿಸಿದ್ದಾರೆ.
*
ಬೆಳಗ್ಗೆ ಆರು ಗಂಟೆಗೆ ಮನೆ ಬಿಟ್ರೆ ಮನೆ ಸೇರೋದು ರಾತ್ರಿನೇ. ಮನೆಗೆ ಬಂದ್ರೂ ರೋಗಿಯಿಂದ ಹಿಡಿದು ರಾಜಕಾರಣಿಗಳ ತನಕ ಫೋನ್; ಐಸಿಯು ಬೆಡ್ ಬೇಕು, ವೆಂಟಿಲೆಟರ್ ಬೆಡ್ ಬೇಕು. ಡಾಕ್ಟರ್ ಹತ್ರ ಆ ರೋಗಿಗಳ ಪರಿಸ್ಥಿತಿ ವಿಚಾರಿಸಿದರೆ ಸದ್ಯಕ್ಕೆ ವೆಂಟಿಲೆಟರ್ ಬೆಡ್ ಎಂಬುದಾಗಿಯೇ ಇರುತ್ತದೆ. ಆದ್ರೂ ಪೊಲಿಟಿಕಲ್ ಪವರ್ ಬಳಸಿಕೊಂಡು ಹಟ ಮಾಡಿ ಬೆಡ್ ಅವಶ್ಯಕತೆ ಇರೋ ರೋಗಿಗಳನ್ನ ಇಂಥವರು ವಂಚಿತರನ್ನಾಗಿಸಿಬಿಡ್ತಾರೆ. ಆಸ್ಪತ್ರೆಯಲ್ಲಿನ ಬೆಡ್ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಿದ್ರೂ ಅರ್ಥ ಮಾಡಿಕೊಳ್ಳೋದೇ ಇಲ್ಲ. ಅಧಿಕಾರದ ಧ್ವನಿಯಲ್ಲೇ ಮಾತಾಡ್ತಾರೆ, ನಾ ಹೇಳ್ತಿದಿನ್ರಿ, ನನ್ ಮಾತಿಗೆ ಬೆಲೆ ಇಲ್ವಾ ಅಂತ ಜೋರು ಮಾಡ್ತಾರೆ.
ಆದರೆ ನನಗೆ ಇಲ್ಲಿ ಪೊಲಿಟಿಕಲ್ ಪವರ್ ಬಳಸಿಕೊಂಡು ಬಂದವರ ಜೀವದ ಬೆಲೆನೂ ಒಂದೇ, ಸಾಮಾನ್ಯರ ಜೀವದ ಬೆಲೆನೂ ಒಂದೇ. ನಾವು ಎಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡ್ತಿವೋ ಅಷ್ಟು ನಿಷ್ಠುರ ಆಗ್ತಾ ಹೋಗ್ತೀವಿ. ಜನ, ಜನನಾಯಕರುಗಳಿಗೂ ವಿಲನ್ ತರಹ ಕಾಣ್ತೀವಿ. ಕೊರೊನಾ ಮೊದಲ ಅಲೆಗಿಂತ ಈ ಎರಡನೇ ಅಲೆಯಲ್ಲಿ ಸಾವು-ನೋವಿನ ಜೊತೆಗೆ ರೋಗಿಗಳನ್ನು ಸಂಬಾಳಿಸೋದು ಕಷ್ಟವಾಗಿದೆ. ಮೊದಲ ಅಲೆಯಲ್ಲಿ ಇಂಥ ಘಟನೆಗಳು ನಡೆದಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ತುಂಬಾ ಸಲ ಮೀಟಿಂಗ್ಗಳಲ್ಲಿ ಈ ವಿಚಾರಗಳನ್ನು ಡಿ.ಸಿ. ಅವರಲ್ಲಿ ಹೇಳಿದಾಗ, ಪ್ರಾಮಾಣಿಕವಾಗಿ ಕೆಲಸ ಮಾಡ್ತಿರೋದ್ರಿಂದ ನಿಮಗೆ ಈ ಹುದ್ದೆ ಕೊಟ್ಟಿರೋದು, ಭಯಪಡಬೇಡಿ ಅಂತ ಧೈರ್ಯ ತುಂಬ್ತಾರೆ ನಿಜ. ಆದರೂ ಮನೆಗೆ ಹೋಗಿ ಮಲಗಿದಾಗ ಅದೇ ಆತಂಕ, ಒತ್ತಡ. ನಿದ್ದೆ ಬರಲ್ಲ. ಬರೀ ಆಸ್ಪತ್ರೆ ಬಗ್ಗೆ, ರೋಗಿಗಳ ಬಗ್ಗೆ, ಅಧಿಕಾರಿಗಳ ಬಗ್ಗೆ, ಧಮ್ಕಿ ಹಾಕುವ ರಾಜಕಾರಣಿಗಳ ಬಗ್ಗೆ ತಲೆಯಲ್ಲಿ ಸುತ್ತತಿರತ್ತೆ. ನೋಡುವವರ ಕಣ್ಣಿಗೆ ಅಧಿಕಾರ ಚೆಂದ ಅನ್ಸುತ್ತೆ, ಆದರೆ ಈ ಕುರ್ಚಿಯಲ್ಲಿ ಕೂತು ಕೆಲಸ ಮಾಡುವುದು ಎಂದರೆ, ಜೀವದ ಮೇಲಿನ ಆಸೆ ಬಿಟ್ಟಿರಬೇಕು. ಇರ್ಲಿ, ನಾನು ಸತ್ರೂ ಪರವಾಗಿಲ್ಲ ನ್ಯಾಯದ ಪರವಾಗಿ ಕೆಲಸ ಮಾಡಿ ಸಾಯ್ತಿದೀನಿ ಅನ್ನೋ ತೃಪ್ತಿಯಿಂದ ಕೆಲಸ ಮಾಡ್ತಿದೀನಿ.
ಒಂದು ದಿನ ಫೋನ್ ಬಂತು. ‘ಮೇಡಮ್ ಪೇಶೆಂಟ್ ತುಂಬಾ ಕ್ರಿಟಿಕಲ್, ಐಸಿಯು ಬೇಡ್ ಬೇಕು’ ಅಂತ. ಕಾಲ್ ಮಾಡಿ ಡಾಕ್ಟರಿಗೆ ವಿಚಾರಿಸಿ ಕನ್ಫರ್ಮ್ ಮಾಡಿಕೊಂಡಾಗ, ನಿಜವಾಗಿಯೂ ರೋಗಿಯ ಪರಿಸ್ಥಿತಿ ಗಂಭೀರವೇ ಇತ್ತು. ಐಸಿಯು ಬೆಡ್ ಅವಶ್ಯಕತೆ ಇಲ್ಲದ ರೋಗಿಯೊಬ್ಬನಿಗೆ ಬೆಡ್ ಬಿಟ್ಟು ಕೊಡುವಂತೆ ಕೇಳಿಕೊಂಡೆ. ಆದರೆ ಆ ಮನುಷ್ಯ ಏನು ಮಾಡಿದರೂ ಜಗ್ಗಲಿಲ್ಲ. ಅಬ್ಬಾ! ಮನುಷ್ಯನ ಸ್ವಾರ್ಥವೇ. ಇತ್ತಕಡೆಯಿಂದ ಗಂಭೀರ ಪರಿಸ್ಥಿತಿಯಲ್ಲಿರೋ ಇರುವ ರೋಗಿಯ ಹೆಂಡತಿ ಅಳುತ್ತ ಫೋನ್, ‘ಮೇಡಮ್ ಕೈ ಮುಗಿತೀನಿ ನನ್ನ ಗಂಡನ್ನ ಬದುಕಿಸಿ ಕೊಡಿ ಅಂತ.’ ಯಾರಿಗೂ ಏನೂ ಹೇಳೋಕೆ ಆಗದಿರೋ ಅಸಹಾಯಕ ಪರಿಸ್ಥಿತಿ. ಹೀಗೆಲ್ಲಾ ಆದಾಗ ಅನಾಯಾಸವಾಗಿ ಜೀವ ಕಣ್ಮುಂದೆನೇ ಹೋಗುವ ಸಾಧ್ಯತೆ ಇರುತ್ತೆ. ಒಬ್ಬರ ಜೀವಕ್ಕೆ ಮರುಗದ ಮನುಷ್ಯ ಮನುಷ್ಯನೆ? ಕೊನೆಗೆ ಹೊಣೆ ಯಾರು?
ಇಂಥ ಅಸಹಾಯಕ ಭಾವ ಇಡಿಯಾಗಿ ಆವರಿಸಿ ನೊಂದುಕೊಂಡಾಗ ಮತ್ತೆ ತಲೆಯಲ್ಲಿ ಸುತ್ತೋದು ರೋಗಿಗಳ ಮಾತುಗಳು, ಮನೆಯವರ ಮಾತುಗಳು. ಆ ಚಿತ್ರಣಗಳೇ ಕಣ್ಮುಂದೆ ಬಂದು ಜೀವ ಹಿಂಡಿಬಿಡ್ತಾವೆ. ಈ ಒದ್ದಾಟದ ಮಧ್ಯೆಯೇ ಮತ್ತೆ ಫೋನ್ಗಳು. ಮತ್ತೆ ನಾವೇ ಸಮಾಧಾನ ಮಾಡಿಕೊಂಡು ಅವಶ್ಯವಿರುವವರಿಗೆ ಬೆಡ್ ವ್ಯವಸ್ಥೆ ಮಾಡುವ ಕೆಲಸವನ್ನ ಮುಂದುವರಿಸಬೇಕಾಗುತ್ತೆ. ಬೆಂಗಳೂರು, ಮುಂಬೈ ಪ್ರದೇಶಗಳ ಬೆಡ್ ಕಾಳಸಂತೆಯ ತರಹ ಇಲ್ಲಿ ಒಂದು ಪ್ರಕರಣವೂ ಆಗದಂತೆ ಕೆಲಸ ಮಾಡ್ತಿದೀನಿ ಅನ್ನೋ ಸಮಾಧಾನ ಇದೆ.
ಕೆಲವೊಂದು ಸಲ ಐಸಿಯು ಬೆಡ್ ತುಂಬಾ ಅವಶ್ಯಕತೆ ಇಲ್ಲದೇ ಇದ್ದಾಗ ಚಿಕ್ಕವಯಸ್ಸಿನ ರೋಗಿಗಳು, ತಾವಾಗಿಯೇ ಬೆಡ್ ಬಿಟ್ಟು ಕೊಟ್ಟಿದ್ದಿದೆ. ನನಗಿಂತ ಆ ರೋಗಿಗೆ ಹೆಚ್ಚು ಅವಶ್ಯಕತೆ ಇದೆ ಅನ್ನೋ ತಿಳಿವಳಿಕೆ ಇದೆಯಲ್ಲ ಅಷ್ಟು ಸಾಕು ಈಗಿನ ಪೀಳಿಗೆಗೆ. ಆದರೆ, ನಮ್ ಕೆಲಸ ನಾವು ಮಾಡ್ತೀವಿ. ನಾವೂ ಎಲ್ಲರಂತೆ ಮನುಷ್ಯರು ಅಷ್ಟೇ. ಸಂದರ್ಭಗಳಿಂದ ಕೆಲವರಿಗೆ ದೇವರು ಅನ್ನಿಸಬಹುದು ಇನ್ನೂ ಕೆಲವರಿಗೆ ನಿಷ್ಠುರತೆಯಿಂದ ಕೆಟ್ಟವರನ್ನಿಸಬಹುದು.
ಬಹಳ ಬೇಸರದ ವಿಷಯ ಅಂದ್ರೆ, ತಮ್ಮ ತಂದೆ-ತಾಯಿಗಳ ಪರಿಸ್ಥಿತಿ ಗಂಭೀರ ಇದ್ದಾಗ ನೋಡಿಕೊಳ್ಳೋದಕ್ಕೆ ಮಕ್ಕಳು ಹಿಂದೇಟು ಹಾಕ್ತಿದಾರೆ. ಆಸ್ಪತ್ರೆಗೆ ನಾವು ಬರಲ್ಲ, ಬೇರೆ ಯಾರನ್ನಾದರೂ ನೇಮಿಸಿ ಎಷ್ಟು ಬೇಕೋ ಅಷ್ಟು ದುಡ್ಡು ಕೊಡ್ತೀವಿ ಅಂತಿದಾರೆ. ಆದರೆ ಮಗ-ಮಗಳ ಪ್ರೀತಿ, ಅಂತಃಕರಣ ದುಡ್ಡು ಕೊಟ್ಟು ನಿರೀಕ್ಷಿಸೋದಕ್ಕೆ ಆಗತ್ತಾ? ಹೀಗಾಗಿ ವಯಸ್ಸಾದವರು ಬೇಗನೇ ಖಿನ್ನತೆಗೆ ಜಾರಿ ಜೀವ ಬಿಡ್ತಿದಾರೆ. ಇನ್ನು, ಅಪ್ಪ-ಅಮ್ಮ ಒಂದು ಆಸ್ಪತ್ರೆಯಲ್ಲಿದ್ರೆ ಮಗ-ಸೊಸೆ ಇನ್ನೊಂದು ಆಸ್ಪತ್ರೆಯಲ್ಲಿರ್ತಾರೆ. ಹೀಗಿರೋವಾಗ, ನಮ್ಮ ತಂದೆ-ತಾಯಿ ಸೀರಿಯಸ್ಸಿದಾರೆ ಮೇಡಮ್ ದಯವಿಟ್ಟು ಏನಾದರೂ ಮಾಡಿ ಅಂತ ಹೇಳ್ತಾರೆ. ನೀವು ನಾಲ್ಕು ಜನ ಒಂದೇ ಕಡೆ ಇರೋ ತರಹ ಅರೇಂಜ್ ಮಾಡ್ತಿನಿ ಅಂದ್ರೆ, ಬೇಡ ನಾನು ನನ್ನ ಹೆಂಡ್ತೀನ ನೋಡ್ಕೊಬೇಕು ಇಲ್ಲೇ ಇರ್ತಿನಿ. ತಂದೆ-ತಾಯಿ ನೋಡ್ಕೊಳೋಕೆ ಯಾರಿಗಾದ್ರೂ ಹೇಳಿ ಅಂತ ಎಂಎಲ್ಎ ಕಡೆಯಿಂದ ಫೋನ್ ಮಾಡಿ ಒತ್ತಡ ಹಾಕ್ತಾರೆ. ಇದೆಂಥ ಕರುಳ-ಬಳ್ಳಿ ಸಂಬಂಧ? ನಾನು ನನ್ನ ಹೆಂಡ್ತಿ ನೋಡ್ಕೊಬೇಕು ಅನ್ನೋ ಮಗನಿಗೆ ತಂದೆ-ತಾಯಿ ಮುಖ್ಯ ಆಗೋದೆ ಇಲ್ಲವಾ? ಎಂತಹ ಕಾಲದಲ್ಲಿ ಬದುಕ್ತಾ ಇದೀನಿ ಅನ್ನಿಸಿಬಿಡುತ್ತೆ. ಸಂಬಂಧಗಳ ಬಗ್ಗೆ ಮನವರಿಕೆ ಮಾಡಿಸೋಕೆ ಹೋದರೆ ಕೇಳಿಸಿಕೊಳ್ಳೋದೇ ಇಲ್ಲ, ಇನ್ನು ಅರ್ಥ ಮಾಡಿಕೊಳ್ತಾರಾ?
ಆದರೆ, ಈ ಕೋವಿಡ್ ಜನರಲ್ಲಿ ಪ್ರಾಣಭಯವನ್ನು ಮೂಡಿಸೋದರ ಜೊತೆ ಸಂಬಂಧಗಳ ಬೆಲೆಯನ್ನೂ ತಿಳಿಸಿಕೊಡ್ತಿದೆ. ನಮ್ಮ ಮನೆ ಕೆಲಸದವಳಿಗೆ ಪಾಸಿಟಿವ್ ಬಂದಿತು. ನನ್ನ ಒಬ್ಬ ಮಗಳು ಎಂಬಿಬಿಎಸ್ ಕೊನೇ ವರ್ಷ. ಇನ್ನೊಬ್ಬಳು ಸೆಕೆಂಡ್ ಪಿಯು. ಎಷ್ಟೋ ಸಲ ಬೇಳೆ ಕುದಿಸಿಟ್ಟಿರ್ತೀನಿ. ಸಾಂಬಾರ್ ಮಾಡೋಕೆ ಆಗದೇ ಹೊರಟು ಬಂದುಬಿಡ್ತೀನಿ. ಸಾಂಬಾರ್ ಮಾಡಿಲ್ವಾ ಅಮ್ಮ ಎಂದು ಮಕ್ಕಳು ಕೇಳಿದಾಗಲೇ ಹೌದಲ್ಲ! ಅಂತ ನೆನಪಾಗೋದು. ಹೀಗೆ ನಮ್ಮ ಕುಟುಂಬಕ್ಕೆ ಕನಿಷ್ಟ ಸಮಯವನ್ನೂ ಕೊಡೋದಕ್ಕೆ ಆಗ್ತಿಲ್ಲ. ಆದರೂ ಮಕ್ಕಳಿಬ್ಬರೂ ಸಪೋರ್ಟ್ ಮಾಡ್ತಿದಾರೆ. ನನ್ನ ಗಂಡ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡ್ತಿದಾರೆ. ನಾವಿಬ್ಬರೂ ಪ್ರಾಮಾಣಿಕವಾಗಿಯೇ ಕೆಲಸ ಮಾಡುತ್ತಾ ಬಂದವರು. ಸದ್ಯಕ್ಕಂತೂ ತುಂಬಾ ಅಧಿಕಾರಿಗಳನ್ನು ಎದುರು ಹಾಕಿಕೊಂಡು ಬಡವರು-ಶ್ರೀಮಂತರು ಅಂತನ್ನದೆ ಒಂದೇ ಸಮನಾಗಿ ಕೆಲಸ ಮಾಡ್ತಿರೋದರಿಂದ ಮುಂದಿನ ನಮ್ಮ ಜೀವನ ಹೇಗೋ ಏನೋ. ಯಾವ ಸಮಯದಲ್ಲಿ ಯಾರು ಏನು ಮಾಡುತ್ತಾರೋ ಅಂತ ಅನ್ನೋ ಆತಂಕ ಇದ್ದೇ ಇದೆ. ಬದುಕಿರೋ ತನಕ ನ್ಯಾಯದ ಪರ ಕೆಲಸ ಮಾಡ್ತೀನಿ. ಇದಿಷ್ಟೇ ಹೇಳಬಲ್ಲೆ. ಇಷ್ಟುದಿನ ಮನಸೊಳಗಿಟ್ಟುಕೊಂಡಿದ್ದ ಮಾತುಗಳನ್ನು ನೀವು ಕೇಳಿಸಿಕೊಂಡು ನನ್ನ ಒತ್ತಡ ಕಡಿಮೆ ಮಾಡಿದಿರಿ ಧನ್ಯವಾದ ಮಂಜುಳಾ. ಧನ್ಯವಾದ ಟಿವಿ9 ಕನ್ನಡ ಡಿಜಿಟಲ್ ಬಳಗ.
ಇದನ್ನೂ ಓದಿ : Covid Diary : ಫೆನ್ನಿರಾಯನೆಂಬ ಸಮಾಜಸೇವಕನೂ ಮತ್ತವನ ‘ಅದು’ ಕ್ಲಿನಿಕ್ಕಿಗೆ ಬಂದ ದಿನ
Published On - 1:07 pm, Wed, 2 June 21