Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಾವೆಲ್ಲಾ ಕೋವಿಡ್ ‘ವರಿಯರ್ಸ್’ ಅವರೆಲ್ಲಾ ‘ವಾರಿಯರ್ಸ್’

|

Updated on: May 22, 2021 | 1:09 PM

‘ಪರಿಚಯದ ಡಾಕ್ಟರರೊಬ್ಬರನ್ನು ಪರಿಸ್ಥಿತಿ ಹೇಗಿದೆ ಎಂದು ಕೇಳಿದರೆ ಅವರು, 'ದಯಮಾಡಿ ಎಲ್ಲರೂ ಕೋವಿಡ್-ಸುರಕ್ಷತೆ ಪ್ಲಾನ್ ಪಾಲಿಸಿರಿ. ದಿನವೂ ನಮಗೆ ಕೊಡುತ್ತಿರುವ ಮಾಹಿತಿ ಮತ್ತು ತರಬೇತಿಗಳನ್ನು ನೋಡಿದರೆ ಇದೊಂದು ಬಹುದೊಡ್ಡ ಸಾಂಕ್ರಾಮಿಕ ರೋಗವಾಗಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ನಮ್ಮಲ್ಲಿ ಸಮರ್ಪಕವಾದ ವ್ಯವಸ್ಥೆ ಇಲ್ಲ. ನಾವೆಲ್ಲರೂ ಜಾಗರೂಕತೆ ವಹಿಸುವುದೇ ನಮಗಿರುವ ದಾರಿ' ಎಂದಿದ್ದರು.‘ ಡಾ. ವಿನತೆ ಶರ್ಮಾ

Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ನಾವೆಲ್ಲಾ ಕೋವಿಡ್ ‘ವರಿಯರ್ಸ್’ ಅವರೆಲ್ಲಾ ‘ವಾರಿಯರ್ಸ್’
ಡಾ. ವಿನತೆ ಶರ್ಮಾ
Follow us on

ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.

ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com

*

ಮೂಲತಃ ಬೆಂಗಳೂರಿನವರಾದ ಡಾ. ವಿನತೆ ಶರ್ಮ ಆಸ್ಟ್ರೇಲಿಯಾದ ಬ್ರಿಸ್ಬೆನ್​ನಲ್ಲಿ ವಾಸವಾಗಿದ್ದಾರೆ. ಸಾಹಿತ್ಯ, ಹೊರಾಂಗಣ ಸಾಹಸ ಚಟುವಟಿಕೆ, ಮನಃಶಾಸ್ತ್ರ, ತಳಸಮುದಾಯಗಳ ಅಧ್ಯಯನ, ಪ್ರವಾಸ, ತೋಟಗಾರಿಕೆ ಇವರ ಆಸಕ್ತಿಯ ವಿಷಯಗಳು. ಸದ್ಯ ಮನಶಾಸ್ತ್ರ (ಅರೆಕಾಲಿಕ) ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನೆರಡು ಮಕ್ಕಳನ್ನು ಆಸ್ಥೆಯಿಂದ ಬೆಳೆಸುತ್ತಿರುವ ಇವರು ಸ್ವಅಸ್ತಿತ್ವದ ಬಗ್ಗೆ ಅಪಾರ ಪ್ರಜ್ಞೆಯುಳ್ಳವರಾಗಿದ್ದಾರೆ. ‘ನಾವೆಲ್ಲಾ ಕೋವಿಡ್ ವರಿಯರ್ಸ್ (worriers), ಅವರೆಲ್ಲಾ ಕೋವಿಡ್ ವಾರಿಯರ್ಸ್ (warriors)!’ ಯಾಕೆ ಅವರು ಹೀಗೆ ಹೇಳುತ್ತಿರುವುದು? ಓದಿ.

*

ಈಗಂತೂ ಪ್ರತಿದಿನವೂ ಭಾರತದಲ್ಲಿ ಜರುಗುತ್ತಿರುವ ಕೋವಿಡ್ ಕೋಲಾಹಲವನ್ನು ಕುರಿತು ಕೇಳುವುದು, ಓದುವುದು ಪರಿಪಾಠವಾಗಿಬಿಟ್ಟಿದೆ. ಜೊತೆಗೆ ಬೇಸರ, ಆತಂಕ, ಖೇದದ ತೆಳುಲೇಪವಿರುವ ಜೀವನ. ಸಾವುನೋವು ಅವರನ್ನೆಲ್ಲ ಹಿಂಡಿಹಿಪ್ಪೆ ಮಾಡುತ್ತಿದೆ. ಬಂಧುಬಳಗದವರು, ಸ್ನೇಹಿತರ ವಲಯದಲ್ಲಿ, ಬೆಂಗಳೂರಿನ ತವರಿನ ಆಸುಪಾಸಿನಲ್ಲಿ ಹಲವಾರು ದಶಕಗಳ ಒಡನಾಟವಿದ್ದವರು, ದೂರದ ಪರಿಚಯವಿದ್ದವರು. ಅವರುಗಳ ಆಸ್ಪತ್ರೆ ಅಲೆತ, ವೆಂಟಿಲೇಟರ್, ಆಮ್ಲಜನಕ ಸಿಲಿಂಡರಿಗಾಗಿ ಹುಡುಕಾಟ, ವ್ಯೆದ್ಯರ ಸಲಹೆಗಾಗಿ ತಡಕಾಟ, ಯಾವುದನ್ನು ನಂಬುವುದು ಬಿಡುವುದು ಅನ್ನುವ ತಡಬಡಿಕೆ. ಪ್ರತಿದಿನದ ಜೀವನವೇ ನರಕವಾಗಿಬಿಟ್ಟಿದೆ ಎಂಬುದರ ನಿಜ. ನಿಜವಾಗಿಯೂ ಅವರೆಲ್ಲ ಕೋವಿಡ್ ವಾರಿಯರ್ಸ್ (warriors). ಅವರ ನಿಜಗಳನ್ನು ಬರೀ ಕೇಳಿಯಷ್ಟೇ ಅರ್ಥಮಾಡಿಕೊಳ್ಳುವ ಹೆಣಗಾಟದ ನನ್ನ ಪ್ರಯತ್ನ ನನ್ನನ್ನು ರಿಮೋಟ್ ಕೋವಿಡ್ ವರಿಯರ್ (worrier) ಆಗಿಸಿಬಿಟ್ಟಿದೆ. ಇದು ನಾನು ಅನುಭವಿಸುತ್ತಿರುವ ನಾಣ್ಯದ ಮುಖ. ನಾಣ್ಯದ ಆ ಕಡೆ ಮುಖದಲ್ಲಿರುವವರು ಕೋವಿಡ್ ವಾರಿಯರ್ಸ್ (warriors). ಸಾವುನೋವುಗಳನ್ನು ಸ್ವತಃ ಅನುಭಸುತ್ತಿರುವವರು ಮತ್ತು ಪರಿಸ್ಥಿತಿಗೆ ಸಾಕ್ಷಿಯಾಗಿರುವವರು, ಕೋವಿಡ್ ಪೀಡಿತರಿಗೆ ಸಹಾಯ ಮಾಡುತ್ತಿರುವವರು.

ಇದೆಲ್ಲ ಭಾರತದ ಸದ್ಯದ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವ ಮಾತು. ಇದಕ್ಕೆ ತದ್ವಿರುದ್ಧವಾಗಿ ಇರುವುದು ನಾನಿರುವ ಆಸ್ಟ್ರೇಲಿಯಾ ದೇಶ. ಕೇವಲ 25 ಮಿಲಿಯನ್ ಜನಸಂಖ್ಯೆಯಿರುವ ಈ ವಿಶಾಲ ದೇಶದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ಬಹುಮಟ್ಟಿಗೆ ತಡೆಗಟ್ಟಿದ್ದಾರೆ. ಹೋದವರ್ಷದ ಮೊದಲನೇ ಕೋವಿಡ್ ಅಲೆಯಲ್ಲಿ ಎಲ್ಲರೂ ಕಂಗೆಟ್ಟಿದ್ದರು. ಸರಕಾರಗಳ ಜೊತೆ ಸಾಮಾನ್ಯ ಜನರೂ ಕೂಡ ತಬ್ಬಿಬ್ಬಾಗಿದ್ದರು. ತಿಂಗಳುಗಟ್ಟಲೆ ನಮ್ಮಲ್ಲೂ ಲಾಕ್ ಡೌನ್ ಆಗಿ, ರಾಜ್ಯಗಳ ನಡುವೆ ಇರುವ ಗಡಿಗಳನ್ನು ಮುಚ್ಚಿ, ಜನರ ಓಡಾಟವನ್ನು ಬಂದ್ ಮಾಡಿ, ಕೋವಿಡ್ ಒಂದು ಸುನಾಮಿಯಾಗದಂತೆ ಕಟ್ಟುನಿಟ್ಟಿನ ಎಚ್ಚರ ವಹಿಸಿದ್ದರು. ಆಗ ಅನುಭವಿಸಿದ ಕಷ್ಟನಷ್ಟಗಳು ಮರುಕಳಿಸಬಾರದು ಎಂದು ಪ್ರಜ್ಞಾಪೂರ್ವಕವಾಗಿ ಎಲ್ಲರೂ ಜಾಗ್ರತೆ ವಹಿಸಿದ್ದರಿಂದ ಈ ವರ್ಷ ನಾವು ಸಣ್ಣ ಪುಟ್ಟ ಲಾಕ್​ಡೌನ್​ ಬಿಟ್ಟರೆ ಹೆಚ್ಚುಕಡಿಮೆ ಕೋವಿಡ್-ಮುಕ್ತ ದೇಶವೆಂದು ಕರೆಸಿಕೊಳ್ಳುತ್ತಿದ್ದೇವೆ. ಆದರೂ, ಪ್ರತಿದಿನದ ಜೀವನದಲ್ಲಿ ಕೋವಿಡ್-ಸುರಕ್ಷತೆ ಅನ್ನೋ Action plan ಪ್ರಕಾರವೇ ನಡೆದುಕೊಳ್ಳುತ್ತಿದ್ದೇವೆ. ಇಂಥಾ ಒಂದು ‘ಕ್ಷೇಮ’ದ ವಾತಾವರಣದಲ್ಲಿ ಇದ್ದುಕೊಂಡು ಭಾರತದಲ್ಲಿ ನಡೆಯುತ್ತಿರುವ ಹಾಹಾಕಾರವನ್ನು ಟಿವಿಯಲ್ಲಿ ನೋಡುತ್ತಾ, ಫೋನಿನಲ್ಲಿ ಮಾತನಾಡುತ್ತಾ, ವಾಟ್ಸಪ್ಪಿನಲ್ಲಿ ಓದುತ್ತ ಇರುವುದೆಂದರೆ ಒಳಗೊಳಗೇ ಒಂದು ಕಂದಕವುಂಟಾಗಿದೆ.

ಆಗಾಗ ಅಲ್ಲೊಂದು ಇಲ್ಲೊಂದು ಸೋಂಕು ಪ್ರಕರಣಗಳು ಮಾತ್ರ ಕಾಣಿಸುತ್ತಿರುವ ಆಸ್ಟ್ರೇಲಿಯಾದಲ್ಲಿ ಕೋವಿಡ್ ವಾರಿಯರ್ಸ್ ಇದ್ದರೇ, ಹೇಗಿದ್ದರು ಎನ್ನುವ ಪ್ರಶ್ನೆ. ಈ Past tense ಬಳಕೆಯೇ ಯಾಕೋ ಗಾಬರಿ ಹುಟ್ಟಿಸುತ್ತದೆ. ಅಂದರೆ, ಸಾಂಕ್ರಾಮಿಕ ಸೋಂಕಿನ ಭಯವನ್ನು ನಾವು ಗೆದ್ದಿದ್ದೀವಾ? ಹಾಗೆಂದುಕೊಂಡು ರಿಲ್ಯಾಕ್ಸ್ಡ್ ಮತ್ತು ಕೂಲ್ ಆಗಿದ್ದೀವಾ? ಇಲ್ಲ. ಅದು ಹೇಗೆ ಸಾಧ್ಯ? ತವರಿನಲ್ಲಿ ಸಾವುನೋವು ಸಂಭವಿಸುತ್ತಿದ್ದಾಗ ಮನಸ್ಸು ಚಡಪಡಿಸುತ್ತಿದೆ. ರಕ್ತಸಂಬಂಧಿಕರು ಸತ್ತ ಸುದ್ದಿ ಕೇಳಿ ಸ್ತಂಭಿತಳಾಗಿದ್ದೀನಿ. ಅದನ್ನು ಬರಿ ಕೇಳಿ ಅದರ ಬಗ್ಗೆ ಸಂವೇದನೆಗಳು ಹುಟ್ಟಬೇಕಾದರೆ ಮೆದುಳಿಗೆ, ಹಾರ್ಮೋನುಗಳಿಗೂ, ಮನಸ್ಸಿಗೂ ಯಾಕೋ ಒಂಥರಾ ಗೊಂದಲ.

ಸೌಜನ್ಯ : ಅಂತರ್ಜಾಲ

ನಾನು Allied Health sector ನಲ್ಲಿ ಕೆಲಸ ಮಾಡುವವಳು. ಅಂದರೆ, ಆರೋಗ್ಯ ಕ್ಷೇತ್ರದಲ್ಲಿ ನಾನು ನೇರವಾಗಿ ಕೆಲಸ ಮಾಡುತ್ತಿಲ್ಲ. ಕಳೆದ ವರ್ಷ ಲಾಕ್​ಡೌನ್​ ಆದಾಗ ಮೂರು ತಿಂಗಳಿನಲ್ಲೇ ನಮ್ಮ ಬ್ರಿಸ್ಬನ್ ನಗರ ಮತ್ತು ಕ್ವೀನ್ಸ್​ಲ್ಯಾಂಡ್ ರಾಜ್ಯ ಚೇತರಿಸಿಕೊಂಡಿತ್ತು. ರಾಜ್ಯದ ಮಹಿಳಾ ಮುಖ್ಯಮಂತ್ರಿ ಬಹಳ ಶಿಸ್ತು ಮತ್ತು ಖಂಡಿತವಾದಿ ಎಂದು ಕರೆಸಿಕೊಳ್ಳುತ್ತಾರೆ. ಅವರ ಮೊಟ್ಟಮೊದಲ ಆದ್ಯತೆ ಕ್ವೀನ್ಸ್ ಲ್ಯಾಂಡ್ ರಾಜ್ಯದ ಜನರ ಪ್ರಾಣ, ಆರೋಗ್ಯ ಮತ್ತು ಸುರಕ್ಷತೆ ಎಂದು ಆಕೆ ಒತ್ತಿ ಒತ್ತಿ ಹೇಳಿದ್ದರು. ರಾಜ್ಯದ ಗಡಿಗಳನ್ನು ಮುಚ್ಚಿ ನೆರೆಹೊರೆ ರಾಜ್ಯಗಳಿಂದ ಬರುವ ಸಂಚಾರವನ್ನು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿದಾಗ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ದೇಶದ ಪ್ರಧಾನಿ ಕೂಡ ಈಕೆಯ ನಾಯಕತ್ವವನ್ನು ಪ್ರಶ್ನಿಸಿ ಟೀಕಿಸಿದ್ದರು. ಪಕ್ಕದ ನ್ಯೂ ಸೌತ್ ವೇಲ್ಸ್ (ರಾಜಧಾನಿ ಸಿಡ್ನಿ) ಮತ್ತು ಕೆಳಗಿನ ವಿಕ್ಟೋರಿಯಾ (ರಾಜಧಾನಿ ಮೆಲ್ಬೋರ್ನ್) ರಾಜ್ಯಗಳ ಜನರು ಬಹು ಬೇಸರಿಸಿದ್ದರು. ಕಾರಣ ಲಾಕ್ ಡೌನ್ ತಿಂಗಳುಗಳು ಆಸ್ಟ್ರೇಲಿಯಾದ ಚಳಿಗಾಲ. ದಕ್ಷಿಣದ ಆ ರಾಜ್ಯಗಳಿಂದ ಸಾವಿರಾರು ಮಂದಿ ಚಳಿಯ ತೀವ್ರತೆಯನ್ನು ತಪ್ಪಿಸಿಕೊಳ್ಳಲು Sunshine ರಾಜ್ಯವೆಂದು ಪ್ರಖ್ಯಾತಿಯಾದ ಕ್ವೀನ್ಸ್​ಲ್ಯಾಂಡ್ ರಾಜ್ಯಕ್ಕೆ ಬರುತ್ತಾರೆ. ಅನೇಕರಿಗೆ ಇಲ್ಲಿ ಹಾಲಿಡೇ ಹೋಮ್ಸ್ ಇವೆ. ಅವರಲ್ಲಿ ಹೆಚ್ಚಿನವರು ಹಿರಿಯ ವಯಸ್ಕರು. ಲಾಕ್​ಡೌನ್​  ಕಟ್ಟಲೆಯಿಂದ ಇವರುಗಳು ಬರಲಾರದೆ, ಕೋವಿಡ್ ಭಯದ ಜೊತೆಗೆ ಚಳಿಗಾಲ ಅವರ ಆರೋಗ್ಯವನ್ನು ಬಿಗಡಾಯಿಸಿ ಅವರ ಮಾನಸಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಿ ಹಾಹಾಕಾರವೆದ್ದಿತ್ತು. ನಮ್ಮ ರಾಣಿರಾಜ್ಯದಲ್ಲಿ ಲಾಕ್ ಡೌನ್ ಮುಗಿದರೂ ಅವರಲ್ಲಿ ತಿಂಗಳಾನುಗಟ್ಟಲೆ ಮುಂದುವರೆದು, ವಿಶೇಷವಾಗಿ ಮೆಲ್ಬೋರ್ನ್ ನಗರದಲ್ಲಿ, ಅವರು ಕಂಗಾಲಾಗಿದ್ದರು.

ಆ ತಿಂಗಳುಗಳಲ್ಲಿ ನನ್ನ ಸೈಕಾಲಜಿ ಆನ್​ಲೈನ್​ ತರಗತಿಗಳಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಮನಃಕ್ಲೇಶವನ್ನು ಕುರಿತು, ಮನೆಯಲ್ಲೇ ಕೆಲಸ ಮಾಡುತ್ತಾ ಇರುವ ತಮ್ಮಗಳ ಸ್ಥಿತಿ ಮತ್ತು ತಮ್ಮ ಶಾಲಾ ಮಕ್ಕಳ ಕಲಿಕೆ ಮತ್ತು ಅವರ ಮಾನಸಿಕ ಆರೋಗ್ಯವನ್ನು ಚರ್ಚಿಸುತ್ತಿದ್ದರು. Sunshine ರಾಜ್ಯದಲ್ಲಿ ನಾನು ಕೂತು ಅವರಿಗೆ ಸಾಂತ್ವನ ಹೇಳುವುದು ವಿಚಿತ್ರವೆನಿಸಿತ್ತು. ಒಂದು ಕಡೆ ಈ ರೀತಿ ನಾನು ಸಾಂತ್ವನ ಹೇಳುವುದು. ಮತ್ತೊಂದು ಕಡೆ ಅವರು ರಾಜ್ಯಗಳ ನಡುವೆ ಇರುವ ರಾಜಕೀಯ ನಿರ್ಧಾರಗಳ ಅಂತರಗಳು ಪ್ರಜೆಗಳ ಜೀವನವನ್ನು ನಿಯಂತ್ರಿಸುತ್ತಿರುವುದರ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ನನ್ನ ಪಾತ್ರದ ಮಿತಿಯಲ್ಲಿ ನಾನು ಈ ಎಲ್ಲವನ್ನೂ ಜಾಗರೂಕತೆಯಿಂದ ನಿಭಾಯಿಸಬೇಕಿತ್ತು. ವಿದ್ಯಾರ್ಥಿಗಳಿಗೆ ಸಮಾಧಾನ ಹೇಳುತ್ತಾ ಅವರ ಕೋವಿಡ್ ಕಥೆಗಳ ಮಿನಿ ಆವೃತ್ತಿಗಳನ್ನು ಕೇಳುವುದು ಅಯೋಮಯವಾಗಿತ್ತು.

ಹೋದವರ್ಷ ಕೋವಿಡ್ ಅಲೆಯನ್ನು Primary healthcare ಸಿಬ್ಬಂದಿ ಹೇಗೆ ನಿಭಾಯಿಸಿದರು ಅನ್ನೋ ಪ್ರಶ್ನೆಯನ್ನ ನನಗೆ ಪರಿಚಯವಿರುವ ಒಬ್ಬ ಸಮುದಾಯ ಮಿಡ್ ವೈಫ್ ಬಳಿ ಕೇಳಿದೆ. ಆಕೆ ನಗರದಿಂದ 45 ಕಿಲೋಮೀಟರ್ ದೂರವಿರುವ ಪ್ರಾದೇಶಿಕ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವುದು. ಜನಸಂಖ್ಯೆ ಬಹಳ ಕಡಿಮೆ. ಸರಕಾರಕ್ಕೆ ಕೊರೋನಾ ವೈರಸ್ ಹರಡಬಹುದು ಎನ್ನುವ ವಿಚಾರ ತಿಳಿದ ಕೂಡಲೇ ಅದನ್ನು ತಡೆಗಟ್ಟಲು ಆಸ್ಪತ್ರೆಯನ್ನು ಸಜ್ಜುಗೊಳಿಸಿ, ಸಿಬ್ಬಂದಿಗೆ ತರಬೇತಿ ಕೊಡಲಾರಂಭಿಸಿದರಂತೆ. ತಾನು ನೋಡಿಕೊಳ್ಳುತ್ತಿದ್ದ ಗರ್ಭಿಣಿಯರಿಗೆ ವಿಷಯ-ಮನವರಿಕೆ ಮತ್ತು ಅರಿವು ಮೂಡಿಸುವಿಕೆಯನ್ನು ಮಾಡುವಾಗ ಎಚ್ಚರ ವಹಿಸಬೇಕಿತ್ತು. ಗರ್ಭಿಣಿಯರ ಮಾನಸಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮವಾಗಬಾರದು ಎನ್ನುವುದು ಮುಖ್ಯವಾಗಿತ್ತು. ಹೆರಿಗೆಯ ಸಮಯದಲ್ಲಿ ಆಕೆಯ ಜೊತೆಗಿರಲು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಅನುಮತಿಯಿತ್ತು. ಹೆರಿಗೆಯಾದ ನಂತರ ತಾಯಿ-ಮಗು ಚೆಕ್ಅಪ್ ಅಥವಾ ವ್ಯಾಕ್ಸಿನೇಷನ್​ಗೆಂದು ಬರುವಾಗ ಕೂಡ ಅದೇ ರೂಲ್ಸು. ಜೊತೆಗೆ ಕೋವಿಡ್-ಸುರಕ್ಷತೆಯನ್ನು ಅನುಸರಿಸಬೇಕು. ಇದೆಲ್ಲದರಿಂದ ಆಸ್ಪತ್ರೆ ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ, ಕೆಲಸ ಮತ್ತು ಪ್ರತಿವಾರ ಕೋವಿಡ್ ಬಗ್ಗೆ ತರಬೇತಿ. ಸುಮಾರು ಹತ್ತು ತಿಂಗಳು ಇದೇ ಪರಿಪಾಠವಿದ್ದು ಕೂತರೆ, ನಿಂತರೆ, ನಿದ್ರಿಸಿದ್ದರೆ ಅದೇ ಮರುಕಳಿಸುತ್ತಾ ಎಲ್ಲರೂ ಒಂದು ತರಹದ Covid-Zombie ಗಳಾಗಿದ್ದರು. ಆದರೆ, ತಮ್ಮ ಪೇಷಂಟ್​ಗಳಿಗೆ  ಇದರ ಪರಿಣಾಮ ತಟ್ಟಬಾರದು ಅನ್ನುವ ವಿಶ್ವಪ್ರಯತ್ನವನ್ನೂ ಅವರು ಮಾಡಬೇಕಿತ್ತು.

ಆರೋಗ್ಯಕ್ಷೇತ್ರಕ್ಕೆ ಈ ದೇಶದಲ್ಲಿ ಬಹು ದೊಡ್ಡ ಪ್ರಾಮುಖ್ಯತೆಯಿದೆ. ಪಾಲಿಸಿಗಳಿಂದ ಹಿಡಿದು ಪ್ರಾಕ್ಟೀಸ್ ತನಕ ಆರೋಗ್ಯಕ್ಷೇತ್ರವನ್ನು ಮುಂಚೂಣಿಯಲ್ಲಿರಿಸಲು ಪ್ರಯತ್ನಿಸುತ್ತಾರೆ. ಆರೋಗ್ಯ ಇಲಾಖೆಯ ಕೆಲಸವೆಂದರೆ ಒಳ್ಳೆ ಕೆಲಸವೆಂದು ಭಾವಿಸುತ್ತಾರೆ. ಆದರೂ ಕೂಡ, ಈ ದೇಶದಲ್ಲಿ ಆರೋಗ್ಯ ಸೇವೆಯು ಉಚಿತವಲ್ಲ. ಕೆಲವೊಂದು ಕಡೆ ಮಾತ್ರ ಜನರಲ್ ಫಿಸಿಷಿಯನ್ (ಜಿಪಿ) ಗಳು ಬಲ್ಕ್ ಬಿಲ್ಲಿಂಗ್ ಮಾಡುತ್ತಾರೆ. ಹೆಚ್ಚಿನವರು ಫೀಸ್ ವಿಧಿಸುತ್ತಾರೆ. ಕೋವಿಡ್ ಸಮಯದಲ್ಲಿ ಮುಖಾಮುಖಿ Consultation ರದ್ದಾಗಿ, ಡಾಕ್ಟರುಗಳು ಫೋನಿನಲ್ಲಿ ಮಾತ್ರ ಪೇಷಂಟುಗಳನ್ನು ಮಾತನಾಡಿಸುತ್ತಿದ್ದರು. ಆಗಲೂ ಕೂಡ ಫೀಸ್ ಕೊಟ್ಟಿದ್ದೆವು. ಪ್ರಜೆಗಳಿಗೆ ಉಚಿತ ವ್ಯೆದ್ಯಕೀಯ ಸೇವೆಯನ್ನು ಕೊಡಲಾರದ ಇದು ಯಾವ ಸೀಮೆ ಲೆಕ್ಕದಲ್ಲಿ ಶ್ರೀಮಂತ ಮುಂದುವರಿದ ದೇಶವೆಂದು ಕರೆಸಿಕೊಳ್ಳುತ್ತದೆ ಎಂದು ಅಸಮಾಧಾನವಾಗಿತ್ತು. ಎಲ್ಲೆಲ್ಲೂ Contactless ಜೀವನವಾಗಿದ್ದ ಕಾಲದಲ್ಲಿ ಡಾಕ್ಟರುಗಳ ಸಾಂತ್ವನವನ್ನು ಫೋನಿನಲ್ಲಿ ಕೇಳುವುದು ಮುಂದಿನ ಭವಿಷ್ಯದ ದಿನಗಳಲ್ಲಿ ಇದುವೇ ರೂಢಿಯಾಗುವ ಸೂಚನೆಯಾಗಿತ್ತು.

ಹೋದ ವರ್ಷದ ಕೋವಿಡ್ ದಿನಗಳಲ್ಲಿ ನನ್ನ ಪರಿಚಯದ ಡಾಕ್ಟರರೊಬ್ಬರನ್ನು ಪರಿಸ್ಥಿತಿ ಹೇಗಿದೆ ಎಂದು ಕೇಳಿದರೆ ಅವರು, ‘ದಯಮಾಡಿ ಎಲ್ಲರೂ ಕೋವಿಡ್-ಸುರಕ್ಷತೆ ಪ್ಲಾನ್ ಪಾಲಿಸಿರಿ. ದಿನವೂ ನಮಗೆ ಕೊಡುತ್ತಿರುವ ಮಾಹಿತಿ ಮತ್ತು ತರಬೇತಿಗಳನ್ನು ನೋಡಿದರೆ ಇದೊಂದು ಬಹುದೊಡ್ಡ ಸಾಂಕ್ರಾಮಿಕ ರೋಗವಾಗಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಅಂತಹ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ನಮ್ಮಲ್ಲಿ ಸಮರ್ಪಕವಾದ ವ್ಯವಸ್ಥೆ ಇಲ್ಲ. ನಾವೆಲ್ಲರೂ ಜಾಗರೂಕತೆ ವಹಿಸುವುದೇ ನಮಗಿರುವ ದಾರಿ’ ಎಂದಿದ್ದರು. ನಿಜ, ನಮ್ಮ ನಮ್ಮ ಸ್ವಹಿತಗಳನ್ನು ಪಕ್ಕಕ್ಕಿಟ್ಟು, ಆಳುವ ಪ್ರಭುತ್ವ ಮತ್ತು ನಾಗರಿಕ ಸಮಾಜ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವೆಲ್ಲರೂ ಒಗ್ಗಟ್ಟಾಗಿ ಸ್ಪಂದಿಸಬೇಕು.

ಇದನ್ನೂ ಓದಿ :Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ‘ನಕೋ ಸಾಬ್‘ ಎನ್ನುವ ನಮ್ಮ ದೇಶದ ಶ್ರಮಿಕ ಅದೆಷ್ಟು ಸ್ವಾಭಿಮಾನಿ

Published On - 1:08 pm, Sat, 22 May 21