ನಮ್ಮ ಒಂದು ಧ್ವನಿ ಲಕ್ಷಾಂತರ ಧ್ವನಿಗಳನ್ನು ಪ್ರತಿನಿಧಿಸುತ್ತಿರುತ್ತದೆ. ಮರ್ಯಾದೆ, ವ್ಯವಸ್ಥೆ ಎನ್ನುವ ಮಹಾಸಂಕೋಲೆಯನ್ನು ಕಳಚಿ ಮುಕ್ತವಾಗಿ ಸಂಕಟಗಳನ್ನು ಹೊರಹಾಕುವುದನ್ನು ಕಲಿಯದಿದ್ದರೆ, ನಾವಷ್ಟೇ ಅಲ್ಲ ನಮ್ಮ ಮುಂದಿನ ಪೀಳಿಗೆಯವರು ಉಸಿರಾಡುವುದೂ ಕಷ್ಟವಾಗುತ್ತದೆ; ಸಹನೆಯೇ ನಮ್ಮ ಮೂಲಗುಣ, ಕೆಲಸವೇ ದೇವರು, ಕುಟುಂಬವೇ ಪ್ರಧಾನ ಅಸ್ತಿತ್ವ ಎಂದು ಸಾರಿಕೊಂಡು ಬಂದ ಮಹಾನ್ ದೇಶ ನಮ್ಮದು. ಆದರೆ ಇದನ್ನು ಜೀವನದೊಂದಿಗೆ ಜೀವವನ್ನೂ ಒತ್ತೆ ಇಡುವಂಥ ಪರಿಸ್ಥಿತಿಯಲ್ಲಿರುವ ಆರೋಗ್ಯ ಮತ್ತು ಸಾರ್ವಜನಿಕ ಸೇವಾ ಕ್ಷೇತ್ರಗಳ ದೃಷ್ಟಿಯಲ್ಲಿ ಯೋಚಿಸಿ. ಗಂಟಲಿನ ಪಡಕಗಳತನಕ ಬಂದುಕುಳಿತ ನೋವುಗಳಿಗೆ ಸಮಸ್ಯೆಗಳಿಗೆ ಮುಕ್ತಿ ಕೊಟ್ಟರೆ ಮಾತ್ರ ಮುಂದಿನ ಹೆಜ್ಜೆಗಳನ್ನಿಡಲು ತ್ರಾಣ ದಕ್ಕುವುದು, ವಾಸ್ತವ ಸಂಗತಿಗಳಿಗೆ ಪರಿಹಾರ ಸಿಗುವುದು. ಈ ಹಿನ್ನೆಲೆಯಲ್ಲಿ ರೂಪಿಸಿರುವ ‘ಟಿವಿ9 ಕನ್ನಡ ಡಿಜಿಟಲ್ : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ’ ಸರಣಿಯಲ್ಲಿ ವೈದ್ಯರುಗಳ, ಶುಶ್ರೂಷಕರ, ಪ್ರಯೋಗಾಲಯ ಸಿಬ್ಬಂದಿ, ಸಹಾಯಕರ ಮತ್ತು ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡವರ ಬದುಕು ಬವಣೆ ಮತ್ತು ಅಂತರಂಗದ ತುಣುಕುಗಳು ಇಲ್ಲಿರುತ್ತವೆ.
ತುಣುಕುಗಳು ಎಂದು ಹೇಳಲು ಕಾರಣವಿದೆ; ನಮಗಾದ ಅನ್ಯಾಯ, ನೋವು ನಿರೀಕ್ಷೆಗಳನ್ನು ವ್ಯಕ್ತಪಡಿಸಿ ರಾತ್ರೋರಾತ್ರಿಯೇ ಪರಿಹಾರೋಪಾಯಗಳನ್ನು ಪಡೆದುಕೊಳ್ಳುವಂಥ ಅಭಿವೃದ್ಧಿ ಹೊಂದಿದ ದೇಶದಲ್ಲಿ ನಾವಿನ್ನೂ ಇಲ್ಲ. ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ದುಡಿಮೆಯಲ್ಲಿ ಹತ್ತಾರು ಕೈಗಳು ಹೇಗೆ ಉಣ್ಣುತ್ತಿವೆಯೋ ಹಾಗೆ ವ್ಯವಸ್ಥೆಯ ಪರಿಧಿಯಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳು ಸ್ವಾರ್ಥದ ಬಾಯಿಗಳನ್ನು ತೆರೆದಿಟ್ಟುಕೊಂಡೇ ಈಜಾಡುತ್ತಿವೆ, ಇಂಥ ಸಂಕಷ್ಟಮಯ ಸಂದರ್ಭದಲ್ಲಿಯೂ. ಹೀಗಿರುವಾಗ ಸಾಕಷ್ಟು ವಿಷಯಗಳನ್ನು ಅದುಮಿಟ್ಟುಕೊಂಡೇ ಬದುಕುವ ಅನಿವಾರ್ಯ ಹಲವರಿಗಿದೆ ಬಂದೊದಗಿದೆ. ಆದರೂ ಸಂವೇದನಾಶೀಲ, ಪ್ರಾಮಾಣಿಕ ಮನಸ್ಸುಗಳು ತಮ್ಮ ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಲ್ಲಿ ಪ್ರಯತ್ನಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಇನ್ನೂ ಕೆಲವರು ಇತರರ ಒಳತೋಟಿಗಳನ್ನು ಅಕ್ಷರಕ್ಕೆ ಹಿಡಿದಿಡಲು ಸಹಾಯ ಮಾಡಿದ್ದಾರೆ. ಓದುಗರಾದ ನಿಮಗೂ ನಿಮ್ಮ ನಿಮ್ಮ ಊರುಗಳಲ್ಲಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿಕೊಂಡಿರುವ ಯಾರ ಆಂತರ್ಯಕ್ಕೂ ಅಕ್ಷರಗಳ ಮೂಲಕ ಧ್ವನಿಯಾಗುವ ಅವಕಾಶ ಕೂಡ ಇಲ್ಲಿದೆ. ಇ ಮೇಲ್ : tv9kannadadigital@gmail.com
‘ನಗುತ್ತೇನೆ ಮರೆಯಲ್ಲಿ’, ‘ರಸ್ತೆಯಲ್ಲಿಯೇ ಮೇ ಫ್ಲವರ್’, ‘ಸೂಜುಮೆಣಸು ಕೆಸುವಿನೆಲೆ’, ‘ಕನಸಿನ ಕಾಡಿಗೆ’, ‘ಬಿಳಿ ಜುಮಕಿ ಮತ್ತು ಹರಳುಗಳು’ ಈ ಪುಸ್ತಕಗಳ ಲೇಖಕಿ ಸಿಂಧುಚಂದ್ರ ಹೆಗಡೆ ಅವರು ಸದ್ಯ ಶಿರಸಿಯ ಕೆಡಿಸಿಸಿ ಬ್ಯಾಂಕ್ನಲ್ಲಿ ವ್ಯವಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ಕಾಲದಲ್ಲಿ ಆನ್ಲೈನ್ರಹಿತ ಬ್ಯಾಂಕುಗಳಲ್ಲಿ ಕೆಲಸ ನಿರ್ವಹಿಸುವ ಸಂಕಷ್ಟಕರ ಸನ್ನಿವೇಶ, ಅಸಹಾಯಕ ಪರಿಸ್ಥಿತಿ ಮತ್ತು ಆತಂಕವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್ ನೌಕರರಿಗೂ ಆದಷ್ಟು ಬೇಗ ವ್ಯಾಕ್ಸಿನ್ ಸಿಕ್ಕಲ್ಲಿ ಅವರೂ ನಿರಾತಂಕವಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತಾರೆ ಎನ್ನುವುದು ಈ ಸರಣಿಯ ವಿಶೇಷ ಕಾಳಜಿ.
*
ಫೆಬ್ರವರಿ 2020 , ಆಗಷ್ಟೇ ನಮ್ಮೂರ ಜಾತ್ರೆ ಮುಗಿದಿತ್ತು. ಕೊರೋನಾ ವೈರಸ್ ಬೆಂಗಳೂರಿನ ತನಕ ಬಂದು ಮುಟ್ಟಿದೆ ಎಂಬ ಸುದ್ದಿ ಎಲ್ಲೆಲ್ಲೂ ಹರಡಿತ್ತು. ಶಿರಸಿ ಜಾತ್ರೆಯಲ್ಲಿ ಸೇರಿದ್ದ ಲಕ್ಷಲಕ್ಷ ಜನರಲ್ಲಿ ಬೆಂಗಳೂರಿನವರು ಏನಿಲ್ಲವೆಂದರೂ ಸಾವಿರ ಜನವಾದರೂ ಬಂದಿರುತ್ತಾರೆ. ಜಾತ್ರೆ ಮುಗಿದ ಮಾರನೇ ದಿನದಿಂದ ಇದರ ಪರಿಣಾಮ ಗೊತ್ತಾಗುತ್ತೆ ನೋಡಿ ಎಂದು ಯಾರೂ ಹೆದರಿಸುತ್ತಿದ್ದರು. ಆದರೆ ಅವರೆಲ್ಲಾ ಹೇಳಿದ ರೀತಿಯಲ್ಲಿ ಆ ತಿಂಗಳಲ್ಲಿ ಏನೂ ಅವಘಡಗಳು ಸಂಭವಿಸಲಿಲ್ಲ. ಆದರೆ ಮಾರ್ಚ್ ತಿಂಗಳಿನಲ್ಲಿ ಶುರುವಾಯ್ತು ಭೀತಿಯ ವಾತಾವರಣ. ಅಲ್ಲೊಬ್ಬರಿಗೆ ಪಾಸಿಟಿವ್ ಅಂತೆ, ಇಲ್ಲೊಬ್ಬರಿಗೆ ಪಾಸಿಟಿವ್ ಅಂತೆ ಎನ್ನುವುದರೊಂದಿಗೆ ನಮ್ಮೂರಿನೊಳಗೆ ಬಂದ ಕೊರೋನಾ ನಾನು ಕೆಲಸ ಮಾಡುವ ಬ್ಯಾಂಕಿನೊಳಗೂ ಕಾಲಿಟ್ಟಿತು.
ಇಡೀ ದೇಶವೇ ಲಾಕ್ಡೌನ್ ಆಗಿದ್ದಂತಹ ಕಾಲ ಅದು. ಮಾರ್ಚ್ ಕೊನೆಯ ವಾರವಾಗಿತ್ತು. ತುರ್ತು ಅಗತ್ಯದ ಸೇವೆಗಳನ್ನು ಹೊರತುಪಡಿಸಿ ಬಾಕಿ ಎಲ್ಲಾ ಲಾಕ್ಡೌನ್ ಎಂದು ಘೋಷಿಸಲಾಗಿತ್ತು. ತುರ್ತು ಸೇವೆಗಳಲ್ಲಿ ಬ್ಯಾಂಕಿಂಗ್ ಕೂಡ ಸೇರಿಸಲ್ಪಟ್ಟಿದೆ ಎಂಬ ಸುದ್ದಿ ಕಿವಿಗೆ ಬಿದ್ದಾಗ ನಾವೆಲ್ಲರೂ ಸಣ್ಣಗೆ ನಡುಗಿದ್ದು ನಿಜ. ಸ್ಯಾನಿಟೈಸರ್, ಮಾಸ್ಕ್ ಗಳ ತೀವ್ರ ಕೊರತೆಯ ನಡುವೆಯೇ ಇಡೀ ದೇಶ ಸ್ತಬ್ಧಗೊಂಡಂತಹ ಸಂದರ್ಭದಲ್ಲಿ ಒಂದು ರೀತಿಯ ಭಯದ ವಾತಾವರಣದಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸುತ್ತಿದ್ದೆವು. ಆ ರೀತಿ ಖಾಲಿ ಖಾಲಿ ರಸ್ತೆಗಳಲ್ಲಿ ನಾವು ಪೊಲೀಸರಿಗೆ ಐಡಿ ಕಾರ್ಡ್ ತೋರಿಸುತ್ತಾ ಸಂಚರಿಸಿದ್ದು ನಿಜಕ್ಕೂ ಮರೆಯಲಾರದಂತಹ ಸಂದರ್ಭ. ಕಳೆದ ವರ್ಷದ ಪರಿಸ್ಥಿತಿ ಈಗಿನಂತಿರಲಿಲ್ಲ, ಸಂಪೂರ್ಣ ಭಿನ್ನವಾಗಿತ್ತು, ಕೋವಿಡ್ ರೋಗಿಗಳೆಂದರೆ ತೀರಾ ಅಮಾನವೀಯವಾಗಿ ಅಕ್ಕಪಕ್ಕದವರೇ ಕಂಡಂತಹ ಸಂದರ್ಭಗಳು ಕಣ್ಣೆದುರಿಗೆ ಒಂದೊಂದಾಗಿ ಎದುರಿಗೆ ಬರುತ್ತಿದ್ದವು. ನಮ್ಮ ಬ್ಯಾಂಕಿನ ಸಿಬ್ಬಂದಿಯೋರ್ವರಿಗೆ ಪಾಸಿಟಿವ್ ಎಂದು ತಿಳಿದಾಗ, ಇಡೀ ಬ್ಯಾಂಕಿನ ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ನನ್ನ ಅಕ್ಕಪಕ್ಕ ಕುಳಿತಿದ್ದ ಸಿಬ್ಬಂದಿಗಳಿಗೂ ಪಾಸಿಟಿವ್ ಬಂದಂತಹ ಸಂದರ್ಭ. ನಾವು ನೆಗೆಟಿವ್ ಬಂದವರೆಲ್ಲಾ ಪುನಃ ಕರ್ತವ್ಯಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸಿದ ಆತಂಕದ ದಿನಗಳು, ಮಾರ್ಚ ಅಂತ್ಯವಾದ್ದರಿಂದ ಲೆಕ್ಕಪತ್ರ ಮುಕ್ತಾಯವನ್ನು ಮಾಡಲೇಬೇಕಾದ ಅನಿವಾರ್ಯತೆ, ಹಕ್ಕಿಗಳೂ ಹಾರಾಟವನ್ನು ನಿಲ್ಲಿಸಿಬಿಟ್ಟಿವೆಯೋ ಎಂಬಷ್ಟರ ಮಟ್ಟಿಗೆ ನಿಶ್ಚಲವಾಗಿದ್ದ ಪರಿಸರದಲ್ಲಿ ಓಡಾಟ, ಟಿವಿ ಚಾನೆಲ್ಗಳಲ್ಲಿ ಬರುತ್ತಿದ್ದ ಭಯ ಹುಟ್ಟಿಸುತ್ತಿದ್ದ ಸುದ್ದಿಗಳು. ಎಲ್ಲವೂ ಸೇರಿ ಒಂದು ರೀತಿಯ ಮಾನಸಿಕ ಒತ್ತಡದಲ್ಲಿ ನಾವೆಲ್ಲರೂ ಬೆಂದಿದ್ದಂತೂ ನಿಜ.
ಮಾಸ್ಕ್ ಹಾಕಿಕೊಂಡು ಕಾರ್ಯ ನಿರ್ವಹಿಸುವುದಿನ್ನೂ ರೂಢಿ ಆಗದೇ ಇದ್ದುದರಿಂದ ತಲೆನೋವು ಮತ್ತು ಉಸಿರುಕಟ್ಟಿದಂತಾಗಿ ವಿಪರೀತ ಹಿಂಸೆಯಾಗುತ್ತಿತ್ತು. ತೀರಾ ಸಣ್ಣ ಅಂಕೆ ಸಂಖ್ಯೆಗಳನ್ನು ಮಾಸ್ಕ್ನಿಂದ ಪ್ರಭಾವಿತವಾಗುತ್ತಿದ್ದ ಕನ್ನಡಕದ ಮಸುಬು ಗ್ಲಾಸಿನಿಂದ ಓದಲಾಗದ, ಬರೆಯಲಾಗದ ಅಸಹಾಯಕತೆ ಬೇರೆ ಒಂದೆಡೆ . ಲೆಕ್ಕಪತ್ರದಲ್ಲಿ ಕೊಂಚ ಹೆಚ್ಚು ಕಡಿಮೆಯಾದರೂ ಅದಕ್ಕೆಲ್ಲಾ ವೈಯಕ್ತಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುವಂತಹ ಹೊಣೆಗಾರಿಕೆಯನ್ನು ಹೆಗಲ ಮೇಲೆ ಹೊತ್ತುಕೊಂಡು, ಯಾವುದೋ ಕಾಣದ ವೈರಾಣುವಿಗೆ ಹೆದರಿಕೊಳ್ಳುತ್ತಾ, ಫೋನ್, ಫೈಲ್, ಕಂಪ್ಯೂಟರ್, ಕ್ಯಾಲ್ಕುಲೇಟರ್, ಪೆನ್, ಕ್ಯಾಶ್, ಚೆಕ್, ಕರಾರು ಪತ್ರ, ಲಾಕರ್ ಕೀಲಿ, ರಿಜಿಸ್ಟರ್, ಯಾವುದೇ ಕಾಗದ ಪತ್ರ, ಏನನ್ನೂ ಮುಟ್ಟಿದರೂ ಅಸುರಕ್ಷತೆಯ ಭಾವನೆಯಲ್ಲಿ ಮುಳುಗೇಳುತ್ತಾ ಕಾರ್ಯ ನಿರ್ವಹಿಸಿದ್ದು ಮತ್ತು ನಿರ್ವಹಿಸುತ್ತಿರುವುದು ನನ್ನಂತಹ ಎಲ್ಲಾ ಬ್ಯಾಂಕಿನ ನೌಕರರ ಅನುಭವ.
ಮನೆಯಲ್ಲಿ ಮಗಳನ್ನು ಮುಟ್ಟಲೂ ಆಗದಿದ್ದಂತಹ ದಿನಗಳು. ಏಕೆಂದರೆ ನಾನು ನಿತ್ಯ ಹೊರಗೆ ಹೋಗಿ ಬರುತ್ತಿದ್ದುದರಿಂದ ನನ್ನಿಂದ ಅವಳಿಗೇನಾದರೂ ತೊಂದರೆ ಆದರೆ ಎಂಬ ಭಯವೂ ಇತ್ತು. ನಿನ್ನ ಅಮ್ಮ ದಿನವೂ ಬ್ಯಾಂಕಿಗೆ ಹೋಗಿ ಬಂದು ಮಾಡುತ್ತಾರೆ ಎಂದು ಅಕ್ಕಪಕ್ಕದ ಮಕ್ಕಳು ಮಗಳೊಂದಿಗೆ ಆಡಲು ಹಿಂದೆಮುಂದೆ ನೋಡಿದಂತಹ ಸಂದರ್ಭ ಸಹ ಒಂದು ಹಂತದಲ್ಲಿ ಎದುರಾಗಿತ್ತು. ವೈಯಕ್ತಿಕವಾಗಿ ಪರಿಚಯವಿದ್ದ, ಎಲ್ಲಾ ಸಮಯದಲ್ಲೂ ಮೇಡಂ ಮೇಡಂ ಎಂದು ಗೌರವಯುತವಾಗಿ ಮಾತನಾಡಿಸುತ್ತಿದ್ದ ಕಿರಾಣಿ ಅಂಗಡಿಯವರೇ , ನಿಮ್ಮ ಬ್ಯಾಂಕಿನ ಕೆಲವು ಸಿಬ್ಬಂದಿಗಳಿಗೆ ಕೊರೋನಾ ಬಂದಿದೆಯಂತೆ, ನೀವು ನಮ್ಮ ಅಂಗಡಿಗೆ ಬರಬೇಡಿ ಎಂದು ಕಳೆದ ವರ್ಷ ಹೇಳಿದ್ದು ಮೊನ್ನೆ ಮೊನ್ನೆ ಹೇಳಿದಂತಿದೆ. ನನ್ನ ಅಮ್ಮನಮನೆ ನಮ್ಮನೆಯ ಸಮೀಪವೇ ಇದ್ದರೂ ಅವರ ಮನೆಯ ಗೇಟಿನ ಹೊರಗೆ ನಿಂತು ಅವರನ್ನು ಮಾತನಾಡಿಸುತ್ತಿದ್ದೆ, ನನ್ನಿಂದ ಅವರಿಗೆ ತೊಂದರೆಯಾದೀತೆಂಬ ಭಾವನೆ ಮನಸ್ಸಿನ ಮೂಲೆಯಲ್ಲಿ ಅಚ್ಚೊತ್ತಿಬಿಟ್ಟಿತ್ತು. ಸಾಮಾಜಿಕ ಜಾಲತಾಣಗಳಲ್ಲಿ, ಲಾಕ್ಡೌನ್ ರಜೆಯ ಬಗ್ಗೆ, ವರ್ಕ್ ಫ್ರಂ ಹೋಂ ಬಗ್ಗೆ , ಅಪರೂಪಕ್ಕೆ ಮನೆಯಿಂದ ಹೊರಬಿದ್ದವರ ಅನುಭವಗಳ ಬಗ್ಗೆ ಯಥೇಚ್ಛ ಜೋಕ್ಗಳು, ಪೋಸ್ಟ್ ಗಳು ಹರಿದಾಡುತ್ತಿದ್ದರೆ ಯಾವುದಕ್ಕೂ ಪ್ರತಿಕ್ರಿಯಿಸಲಾಗದಿದ್ದಂತಹ ಮನಃಸ್ಥಿತಿಯೊಂದು ನಿರ್ಮಾಣವಾಗಿಬಿಟ್ಟಿತು.
ಮನೆಯಲ್ಲಿ ಕುಳಿತು ಈ ಬಾರಿ ರಾಶಿ ರಾಶಿ ಓದಲು ಅವಕಾಶ ಸಿಕ್ಕಿತು, ಬರೆಯಲು ಸಾಧ್ಯವಾಯಿತು ಎಂಬ ಬರಹಗಳನ್ನು ಓದಿದಾಗಲ್ಲೆಲ್ಲಾ ನನಗಿದು ಸಾಧ್ಯವಾಗಲಿಲ್ಲವಲ್ಲ ಎಂಬ ಸಣ್ಣ ಅಸೂಯೆಯೂ ಇಣುಕಿತು. ಈ ಬಾರಿ ಲಾಕ್ಡೌನ್ನಲ್ಲಿ ಏನು ಬರೆದಿರಿ ಎಂದು ಯಾರಾದರೂ ಕೇಳಿದರೆ ಅಳು ಒತ್ತರಿಸಿ ಬಂದಂತಾಗುತ್ತಿತ್ತು. ಇಂಥ ಸಂಕಟದ ಸಮಯದಲ್ಲಿ ಏನು ಹೊಮ್ಮಲು ಸಾಧ್ಯ? ಕಳೆದ ಜುಲೈನಲ್ಲಿ ನಮ್ಮ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಕೋವಿಡ್ ಟೆಸ್ಟ್ಗೆ ಒಳಗಾದಾಗ, ರಿಪೋರ್ಟ್ ಬರುವ ಮುನ್ನವೇ ನಾನು ಮನೆಯಲ್ಲಿ ಒಂದು ಕೋಣೆಯಲ್ಲಿ ಐಸೊಲೇಷನ್ಗೆ ಒಳಗಾಗಿದ್ದೆ. ನನ್ನಿಂದ ಮನೆಯವರಿಗೆ ತೊಂದರೆಯಾಗಬಹುದು ಎಂಬ ವಿಚಾರ ಪದೇಪದೆ ಕಾಡುತ್ತಿತ್ತು. ಆಗಿನ್ನೂ ನಮ್ಮ ಊರಿನಲ್ಲಿ ಕೋವಿಡ್ ಸೋಂಕಿತರು ಹೋಂ ಐಸೊಲೇಷನ್ಗೆ ಒಳಪಡುವ ವ್ಯವಸ್ಥೆ ಜಾರಿಗೆ ಬಂದಿರಲಿಲ್ಲ. ಆದ್ದರಿಂದ ಯಾವುದಕ್ಕೂ ತಯಾರಿಯಲ್ಲಿರೋಣ ಎಂದುಕೊಂಡು, ಒಂದು ಬ್ಯಾಗಿನಲ್ಲಿ ಏನೇನು ಬೇಕು ಎಲ್ಲವನ್ನೂ ಪ್ಯಾಕ್ ಮಾಡಿಕೊಂಡು, ಮನೆಯ ಮೇಲಿನ ಕೋಣೆಯಲ್ಲಿ ಬಂಧಿಯಾಗಿಬಿಟ್ಟಿದ್ದೆ. ಅದಾಗಲೇ ನನ್ನ ಸಹಸಿಬ್ಬಂದಿಯೊಬ್ಬರು ಪಾಸಿಟಿವ್ ಬಂದು ಐಸೊಲೇಷನ್ ಸೆಂಟರ್ನಲ್ಲಿದ್ದರು. ಅವರ ಬಳಿ ಏನೇನು ತರಬೇಕು ಎಂದೆಲ್ಲಾ ಕೇಳಿಕೊಂಡು ನಾನು ಮಾನಸಿಕವಾಗಿ ತಯಾರಾಗಿಬಿಟ್ಟಿದ್ದೆ. ಏಕೆಂದರೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ರಿಪೋರ್ಟ್ ಬಂದವರು ನಮ್ಮ ಬ್ಯಾಂಕಿನಲ್ಲೇ ಮೂರು ಜನ ಇದ್ದರು. ನನ್ನ ಪಕ್ಕದಲ್ಲಿದ್ದವರಿಗೇ ಕೊರೋನಾ ಪಾಸಿಟಿವ್ ಬಂದಿದ್ದರಿಂದ ನಾನೂ ಐಸೊಲೇಶನ್ ಸೆಂಟರ್ಗೆ ಹೋಗುವುದೇ ಎಂದು ನಿಶ್ಚಯಿಸಿಬಿಟ್ಟಿದ್ದೆ.
ಆಗೆಲ್ಲಾ ಸೋಂಕಿತರನ್ನು ಆ್ಯಂಬುಲೆನ್ಸಿನಲ್ಲಿ ಬಂದು ಕರೆದೊಯ್ಯುವ ಪರಿಪಾಠವಿತ್ತು. ಈ ಮೊದಲೇ ಹೋಗಿದ್ದವರು ಅದರ ಪರಿಣಾಮಗಳನ್ನು ವಿವರಿಸಿದ್ದರು. ಸೋಂಕಿತರಿಗೆ ಪಿಪಿಇ ಕಿಟ್ ತೊಡಿಸಿ ಕರೆದೊಯ್ಯುವುದು, ಅದನ್ನು ಪಕ್ಕದ ಮನೆಯವರು ವಿಡಿಯೋ ಮಾಡುವುದು, ನಂತರ ಆ ಮನೆಗೆ ಕೆಂಪು ರಿಬ್ಬನ್ ಕಟ್ಟುವುದು, ಹಾಲು, ತರಕಾರಿ, ಹಣ್ಣಿನವರು ಆ ಮನೆಯ ಬಳಿಯಲ್ಲೆಲ್ಲೂ ಸುಳಿದಾಡದೇ ಇರುವುದು ನಾನು ಅದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ, ನನ್ನಿಂದ ಮಗಳು, ಮನೆಯವರು ಕೂಡ ಟೆಸ್ಟ್ ಮಾಡಿಸಿಕೊಳ್ಳುವ ಸಂದರ್ಭ ಬರಬಹುದು ಎಂದು ಅಲವರಿಯುತ್ತಾ ನಾಲ್ಕು ದಿನ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆ ಮನಃಸ್ಥಿತಿಯಲ್ಲಿಯೇ ಬ್ಯಾಗನ್ನು ಪ್ಯಾಕ್ ಮಾಡಿಕೊಂಡು, ಐಸೊಲೇಶನ್ ಸೆಂಟರ್ಗೆ ಹೋದರೆ ಬೇಕಾಗಬಹುದೆಂದು ಓದಲು ಒಂದು ಬ್ಯಾಗಿನಲ್ಲಿ ಬರೀ ಪುಸ್ತಕಗಳನ್ನೇ ತುಂಬಿದ್ದೆ. ಆಮೇಲೆ ನೆಗೆಟಿವ್ ಎಂದು ರಿಪೋರ್ಟ್ ಬಂದಾಗ ಒಂದು ನಮೂನೆಯ ಸಮಾಧಾನ.
ಇದೆಲ್ಲಾ ಒತ್ತಡವನ್ನು ಕಳೆದು ಸ್ವಲ್ಪ ನಿರಾಳ ಎಂದುಕೊಳ್ಳುತ್ತಿರುವಾಗ, ಎರಡನೇ ಅಲೆಯೊಂದು ಹೀಗೆ ಅಪ್ಪಳಿಸುತ್ತದೆ ಎಂದು ಖಂಡಿತಾ ಊಹಿಸಿರಲಿಲ್ಲ. ಸಮುದ್ರದಂಚಿಗೆ ಕುಳಿತು ಅಲೆಗಳಿಗೆ ಮೈಯೊಡ್ಡುವ ಸಂತಸ ಮಾತ್ರ ಗೊತ್ತಿದ್ದ ಮನುಕುಲಕೆ ಅಲೆ ಎನ್ನುವ ಶಬ್ದವೇ ಹೀಗೆ ನಡುಕ ಹುಟ್ಟಿಸಬಹುದೆಂದು ಅಂದುಕೊಂಡಿರಲಿಲ್ಲ. ಈ ಬಾರಿ ಮಾರ್ಚ್ ಅಂತ್ಯದ ನಂತರ ಬಂದ ಅಲೆಗೆ ಬ್ಯಾಂಕ್ ಅಂತೂ ಖಂಡಿತ ಬಂದ್ ಆಗುವುದಿಲ್ಲ ಎಂದು ನಮಗೆ ಖಚಿತವಾಗಿ ಗೊತ್ತಿತ್ತು. ಆದ್ದರಿಂದ ಕಳೆದ ವರ್ಷದಂತೆ ವಿಚಲಿತರಾಗದೇ, ಲಾಕ್ಡೌನ್ ಶಬ್ದಕ್ಕಂಜದೇ ನಮ್ಮ ಕಾಯಕವನ್ನು ಸ್ಥಿತಪ್ರಜ್ಞರಾಗಿ ನಾವೆಲ್ಲಾ ಮುಂದುವರಿಸಿದ್ದೆವು. ಕಳೆದ ಬಾರಿ ಮಾರ್ಚ್ ಅಂತ್ಯವಾಗಿದ್ದರೆ, ಈ ಬಾರಿ ಬೆಳೆಸಾಲದ ಸಮಯ. ಇನ್ನೊಂದು ಮಾತನ್ನು ಹೇಳಬೇಕೆಂದರೆ, ಕೇಂದ್ರ ಕಚೇರಿಯ ಕೆಲಸಗಳು ಶಾಖೆಯ ಕೆಲಸಗಳಿಗಿಂತ ಭಿನ್ನವಾಗಿರುತ್ತವೆ. ಗ್ರಾಹಕರು ಬ್ಯಾಂಕಿಗೆ ಬರಲೀ ಬರದಿರಲೀ, ನಿತ್ಯ ಮಾಡುವಂತಹ ವಾಡಿಕೆಯ ಆಫೀಸ್ ಕೆಲಸಗಳು ಎಂದಿನ ಹಾಗೆಯೇ ಇರುತ್ತವೆ. ಕೋರ್ ಬ್ಯಾಂಕಿಂಗ್ನ ಆಗು ಹೋಗುಗಳನ್ನೆಲ್ಲಾ ಎಲ್ಲರ ಬಳಿ ವಿವರಿಸಲು ಸಾಧ್ಯವಾಗದೇ, ಬೆಳಗಿನಿಂದ ಸಂಜೆಯವರೆಗೆ ಏನು ಮಾಡುತ್ತೀರಿ ಬ್ಯಾಂಕಿನಲ್ಲಿ ಎಂದು ಕೇಳುವವರಿಗೊಂದು ನಗೆಯನ್ನು ಬೀರೋಣವೆಂದರೆ, ಅದಕ್ಕೂ ಮಾಸ್ಕ್ ಅಡ್ಡಿಯಾಗುತ್ತಿದೆ.
ಗ್ರಾಮೀಣ ಭಾಗದ ಗ್ರಾಹಕರನ್ನು ಅತಿ ಹೆಚ್ಚಾಗಿ ಹೊಂದಿರುವ ನಮ್ಮ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನಲ್ಲಿ, ಆನ್ ಲೈನ್ ಬ್ಯಾಂಕಿಂಗ್ಅನ್ನು ಅವಲಂಬಿಸಿರುವವರು ಕಡಿಮೆ ಎಂದೇ ಹೇಳಬಹುದು. ಕೊರೋನಾ ಅಲೆಯ ಹೊಡೆತದಿಂದ ತತ್ತರಿಸಿ ಹೋಗಿರುವ ಕಾರ್ಮಿಕರು, ಬೀದಿ ಬದಿಯ ಸಣ್ಣ ಪುಟ್ಟ ವ್ಯಾಪಾರಿಗಳು, ಮೋದಿ ದುಡ್ಡು ಬಂದಿದೆಯೇ ಎಂದು ಪಾಸ್ಬುಕ್ ಹಿಡಿದುಕೊಂಡು, ಮುಖಕ್ಕೆ ಅರೆಬರೆ ಮಾಸ್ಕ್ ಹಾಕಿಕೊಂಡು ಬರುವ ಚಿತ್ರಣಗಳು, ಸಣ್ಣಪುಟ್ಟ ಬಂಗಾರದ ಚೂರು ಹಿಡಿದುಕೊಂಡು ಬಂಗಾರ ಸಾಲಕ್ಕಾಗಿ ಓಡಾಡುವ ಅಜ್ಜ, ಅಜ್ಜಿಯಂದಿರು, ಜಮೀನಿಗೆ ಗೊಬ್ಬರ ಹಾಕಲು ಜಮೀನನ್ನೇ ಒತ್ತೆ ಇಡುವ ಪರಿಸ್ಥಿತಿಯಲ್ಲಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ಬರುವ ಸಣ್ಣ ಜಮೀನಿನ ರೈತರು, ಮಗಳ ಓದಿಗೆಂದು ಇಟ್ಟಿದ್ದ ಫಿಕ್ಸೆಡ್ ಹಣವನ್ನು ಆಸ್ಪತ್ರೆಗೆ ತುಂಬುವಂತಾಯಿತಲ್ಲಾ ಎಂದು ಗೋಳಾಡುತ್ತಾ ತುದಿ ಹರಿದಿರುವ ಕ್ಯಾಶ್ ಸರ್ಟಿಫಿಕೇಟನ್ನು ನಗದಾಗಿಸಲು ಬರುವ ನಡುವಯಸ್ಕರು, ಇವರೆಲ್ಲರೂ ಬದುಕಿನ ಇನ್ನೊಂದು ಮಗ್ಗುಲಿಗೆ ಕನ್ನಡಿ ಹಿಡಿಯುತ್ತಾರೆ. ಬದುಕು ಹೀಗೆ ಮುನಿಸಿಕೊಳ್ಳಬಹುದೇ? ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಾರೆ. ಬ್ಯಾಂಕಿಂಗ್ ಏಕೆ ತುರ್ತುಅಗತ್ಯತೆಗಳಲ್ಲಿ ಒಂದಾಗಿದೆ ಎನ್ನುವುದಕ್ಕೆ ಉತ್ತರವನ್ನೂ ಕಂಡುಕೊಳ್ಳುವಂತೆ ಮಾಡುತ್ತಾರೆ.
ಕಳೆದ ವರ್ಷದ ಅನುಭವದಿಂದ ನಾವೆಲ್ಲಾ ಈ ಬಾರಿ ಹೋದ ಬಾರಿಯಷ್ಟು ಧೈರ್ಯಗೆಟ್ಟಿರಲಿಲ್ಲ. ಆದರೆ ನಮ್ಮ ಹತ್ತಿರದವರೇ ನಮ್ಮನ್ನು ಶಾಶ್ವತವಾಗಿ ಬಿಟ್ಟು ತೆರಳಿದಂತಹ ಸುದ್ದಿಗಳು ಪದೇಪದೆ ಕಿವಿಯ ಮೇಲೆ ಬಿದ್ದಾಗ, ದಿನೇ ದಿನೆ ಕುಸಿಯುತ್ತಿರುವಂತಹ ಅನುಭವ. ಬ್ಯಾಂಕಿನಲ್ಲಿ ತಮಾಶೆ ಮಾಡುತ್ತಾ ನಾವೆಲ್ಲಾ ಒಂದು ದಿನ ಹೋಗಲೇಬೇಕು, ಕ್ಯೂನಲ್ಲಿದ್ದೇವಷ್ಟೇ ಎಂದು ನಗುತ್ತಾ ಮಾತನಾಡುವಾಗಲೂ ಏನೋ ಹೇಳಲಾಗದ ದುಗುಡ. ಬ್ಯಾಂಕ ನೌಕರರೂ ಕೊರೋನಾ ಯೋಧರು ಎಂದು ಘೋಷಿಸಲ್ಪಟ್ಟರೂ ಸಹ ವ್ಯಾಕ್ಸಿನೇಶನ್ಗೆ ಆದ್ಯತೆ ಸಿಗದೇ ಇರುವಂತಹ ವಾಸ್ತವ ಪರಿಸ್ಥಿತಿಯನ್ನು ಎದುರಿಸಬೇಕಾಗಿರುವ ಅನಿವಾರ್ಯತೆ.
ಎಲ್ಲರೂ ಆನ್ಲೈನ್ನಲ್ಲಿ ಕೆಲಸ ಮಾಡುತ್ತಾರೆ, ನೀನ್ಯಾಕೆ ಲಾಕ್ಡೌನ್ನಲ್ಲಿಯೂ ಬ್ಯಾಂಕಿಗೆ ಹೋಗುತ್ತೀಯಾ ಎಂದು ಪ್ರಶ್ನಿಸುವ ಮಗಳಿಗೆ, ಮೈ ಹೊಸೆಯಬೇಡ ದೂರವಿರು ಎಂದು ಗದರುತ್ತಾ, ನನ್ನ ಹಾಗೇ ದುರಿತ ಕಾಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಖ್ಯ ಕೋವಿಡ್ ಯೋಧರನ್ನು ನೆನಪು ಮಾಡಿಕೊಳ್ಳುತ್ತಾ ಬ್ಯಾಂಕಿಗೆ ಸಾಗುವ ಹಾದಿಯಲ್ಲಿ ಕವಿತೆಯ ಸಾಲುಗಳನ್ನು ಹುಡುಕುತ್ತಿದ್ದೇನೆ.
ಇದನ್ನೂ ಓದಿ : Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ : ವೈದ್ಯಸಿಬ್ಬಂದಿಗೆ ಹತ್ತು ಕೈಗಳನ್ನು ದಯಪಾಲಿಸು ದೇವರೇ
Published On - 3:53 pm, Wed, 19 May 21