ಲಕ್ಷ್ಮೀನಾರಾಯಣ ಭಟ್ಟ​ ಭಾವನಮನ: ಜಾತಿ ನೋಡಿ ಪಾಠ ಮಾಡುವವರು ಎಂದಾದರೂ ಮೇಷ್ಟ್ರಾಗಲು ಸಾಧ್ಯ ಇದೆಯಾ?

‘ಲಕ್ಷ್ಮೀನಾರಾಯಣ ಭಟ್ಟರ ‘ಸೀಮಂತಿನಿ‘ ಕವನ; ಆ ಮನಸ್ಥಿತಿಯಲ್ಲಿ ಉಂಟಾದ ಮನಕಲ್ಮಶಗಳನ್ನು ತೆಗೆಯುತ್ತ ವಿಕಾಸದೆಡೆ ಅವಳ ಮನಸ್ಸನ್ನು ಹೊರಳಿಸುವುದು ಜೀವಪರತೆ, ಜೀವನಪ್ರೀತಿ, ಲೋಕದಲ್ಲಿ ಎಲ್ಲದರ ಬಗೆಗೂ ಹುಟ್ಟುವಂಥ ಪ್ರೀತಿ. ಒಟ್ಟಾರೆ ಈ ಕವನ ಸ್ತ್ರೀವಿಶಿಷ್ಟವಾದ ಅನುಭವ. ಗಂಡಿಗೂ ಹೆಣ್ಣಿನ ಮನಸ್ಥಿತಿ ಅರ್ಥ ಮಾಡಿಕೊಳ್ಳುವಂತಾಗಬೇಕು ಎಂದು ಯಾವಾಗಲೂ ಆಶಿಸುತ್ತೇವಲ್ಲ, ಅದು ಈ ಕವನದಲ್ಲಿ ಸಾಧ್ಯವಾಗಿದೆ.‘ ಡಾ. ಎಂ.ಎಸ್. ಆಶಾದೇವಿ

ಲಕ್ಷ್ಮೀನಾರಾಯಣ ಭಟ್ಟ​ ಭಾವನಮನ: ಜಾತಿ ನೋಡಿ ಪಾಠ ಮಾಡುವವರು ಎಂದಾದರೂ ಮೇಷ್ಟ್ರಾಗಲು ಸಾಧ್ಯ ಇದೆಯಾ?
ಡಾ. ಎನ್. ಎಸ್​. ಲಕ್ಷ್ಮೀನಾರಾಯಣ ಭಟ್ಟ
Follow us
ಶ್ರೀದೇವಿ ಕಳಸದ
|

Updated on:Mar 06, 2021 | 4:20 PM

ಹಿರಿಯ ಕವಿ ಎನ್​.ಎಸ್​. ಲಕ್ಷ್ಮೀನಾರಾಯಣ ಭಟ್ಟರು ತಮ್ಮ ಭಾವಗೀತೆಗಳ ಮೂಲಕ ಎಂದೆಂದಿಗೂ ನಮ್ಮೊಳಗೆ ಚಿರಸ್ಥಾಯಿ. ಸೆಂಟ್ರಲ್​ ಕಾಲೇಜಿನ ಅವರ ಅನೇಕ ವಿದ್ಯಾರ್ಥಿಗಳ ಮನಸ್ಸಿನೊಳಗೀಗ ನೆನಪುಗಳ ನುಡಿಮಾಲೆ. ಹಿರಿಯ ಲೇಖಕಿ, ವಿಮರ್ಶಕಿ ಡಾ. ಎಂ.ಎಸ್​. ಆಶಾದೇವಿ ತಮ್ಮ ಕನ್ನಡ ಮೇಷ್ಟ್ರಿಗೆ ವಿಚಾರಪೂರ್ಣ ಭಾವನಮನ ಸಲ್ಲಿಸಿದ ಚಿತ್ರಿಕೆಗಳು ನಿಮ್ಮ ಓದಿಗೆ.   

ಚಿತ್ರವತ್ತಾಗಿ ತನ್ಮಯತೆಯಿಂದ ಕಾಲದ ಪರಿವೆ ಇಲ್ಲದೆಯೇ ಪಾಠಮಾಡುವ ಮೇಷ್ಟ್ರು ಅವರು. ಕಾವ್ಯದ ಬಗ್ಗೆ ಪಾಠ ಮಾಡುವಾಗ ಕೇಳುವುದೇ ಒಂದು ಸುಖ. ಈಗವರಿಲ್ಲ ಎನ್ನುವುದು ಬಹಳೇ ನೋವು ತಂದಿದೆ. ಕಳೆದ ವರ್ಷ ಅವರು ಕಾರ್ಯಕ್ರಮವೊಂದಕ್ಕೆ ಕಾಲೆಳೆದುಕೊಂಡೇ ಬಂದಿದ್ದು ಇನ್ನೂ ಕಣ್ಮುಂದಿದೆ.

ಸೆಂಟ್ರಲ್ ಕಾಲೇಜಿನಲ್ಲಿದ್ದಾಗ ಎಂಎ ನಲ್ಲಿ ನನಗೆ ಮೊದಲ ಸ್ಥಾನ ಬಂದಿತು. ಬ್ರಾಹ್ಮಣರಿಗೇ ರ್ಯಾಂಕ್​ ಕೊಡುತ್ತಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ನನ್ನ ಜಾತಿಯನ್ನೂ ಬರೆದು ಕೊಡುವಂತೆ ಕೇಳಿದರು. ಆಗ ಮೇಷ್ಟ್ರು ಒಂದು ಮಾತು ಹೇಳಿದರು; ಜಾತಿ ನೋಡಿ ಪಾಠ, ಮೌಲ್ಯಮಾಪನ ಮಾಡುವವರು ಎಂದಾದರೂ ಮೇಷ್ಟ್ರಾಗಲು ಸಾಧ್ಯ ಇದೆಯಾ?

ಮುಂದೆ ನನ್ನ ‘ಸ್ತ್ರೀಮತವನುತ್ತರಿಸಲಾಗದೆ’ ಪುಸ್ತಕ ಬಂದಾಗ ಫೋನ್ ಮಾಡಿ ಮಾತನಾಡಿದರು. ನಾನಾಗ ಶಿವಮೊಗ್ಗದಲ್ಲಿದ್ದೆ. ‘ನಿನ್ನ ಪುಸ್ತಕ ಬಹಳ ಇಷ್ಟವಾಯಿತು. ಸ್ತ್ರೀವಾದದ ಬಗ್ಗೆ ಬಹಳ ಕನ್ವಿನ್ಸಿಂಗ್ ಆಗಿ ಬರೆದಿದ್ದೀಯಾ. ಒಮ್ಮೆ ಭೇಟಿಯಾಗು ಎಂದರು.’ ನಂತರ ಒಂದು ದಿನ ಅವರ ಮನೆಗೆ ಹೋದೆ. ಬಹಳ ದಿನವಾದವು ನಿಮ್ಮ ಕವನ ಕೇಳಿ ಅಂದೆ. ‘ಚಿನ್ನದ ಹಕ್ಕಿ’ ಸಂಕಲನದಿಂದ ‘ಮಗಳಿಗೊಂದು ಪತ್ರ’ ಕವನ ಓದಿದರು.

ಕಾವ್ಯಕ್ಕೆ ಅದರದೇ ಆದ ಗೇಯತೆ ಇದೆ. ಹಾಗಾಗಿ ಅದಕ್ಕೆ ಸಂಗೀತದ ಊರುಗೋಲು ಬೇಡ ಎಂದು ರಾಮಚಂದ್ರ ಶರ್ಮಾ ಯಾವಾಗಲೂ ತಮಾಷೆ ಮಾಡುತ್ತಿದ್ದರು (ಕ್ಯಾಸೆಟ್ ಕವಿ ಎಂಬ ಅರ್ಥದ ಹಿನ್ನೆಲೆಯಲ್ಲಿ). ಆದರೆ ಅದನ್ನು ಒಪ್ಪಿಕೊಳ್ಳಬೇಕಲ್ವಾ ಸರ್ ಸಾಹಿತ್ಯದ ವಿದ್ಯಾರ್ಥಿಗಳಾಗಿ? ಜನಪ್ರಿಯತೆ ತಂದುಕೊಡಬಹುದು ಅದು ಬೇರೆ ಮಾತು. ಆದರೆ ಅದು ಎಲ್ಲೋ ಕಾವ್ಯಕ್ಕೆ ಅನ್ಯಾಯ ಮಾಡಿದಹಾಗೆ ಅಲ್ವಾ ಅಂದೆ. ‘ಇಲ್ಲಮ್ಮಾ ಎರಡನ್ನೂ ಸಾಧಿಸಿಕೊಂಡು ಹೋಗಬಹುದು. ಕೇಳೋ ಕಿವಿಗೆ, ಅನುಭವಿಸೋ ಮನಸಿಗೆ ಕಾವ್ಯ ಹೌದೋ ಅಲ್ವೋ ಅನ್ನೋದು ಗೊತ್ತೇ ಆಗುತ್ತೆ. ಕಾವ್ಯವನ್ನು ಇಷ್ಟಪಡುತ್ತಿದ್ದೀರೋ, ಸಂಗೀತವನ್ನು ಇಷ್ಟಪಡುತ್ತಿದ್ದೀರೋ ಅನ್ನುವುದು ಗೊತ್ತಾಗುವುದಿಲ್ಲ ಎಂದು ಯಾಕೆ ಅಂದುಕೊಳ್ಳುತ್ತೀರಿ? ಅಂದರು.

ಅವರ ‘ಹೇಳು ಹೇಳು ಶರೀಫ’ ಈವತ್ತಿನ ವಿಷಮ ಸನ್ನಿವೇಶಕ್ಕೆ, ಅಸಹಿಷ್ಣುತೆಯ ಕಾಲಕ್ಕೆ ಹೆಚ್ಚು ಸಲ್ಲುವಂಥ ಕವನ. ಉಳಿದಂತೆ ಅವರ ಭಾವಗೀತೆಗಳಲ್ಲಿ ಕೆಲವು ಭಾವತೀವ್ರತೆಯ ಕಾರಣಕ್ಕೆ ಹೆಚ್ಚು ಇಷ್ಟ. ಅವರ ‘ಸೀಮಂತಿನಿ’, ‘ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ’ ಆರ್ದ್ರ ಮನಸ್ಸಿನಿಂದ ಬರೆದ ಕವಿತೆಗಳು ಯಾವಾಗಲೂ ಆಪ್ತ. ಇವುಗಳಲ್ಲಿ ಹೆಣ್ಣಿನ ಮನಸ್ಸನ್ನು ಬಹಳ ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಾರೆ. ಇಂಥ ಕವನಗಳು ಕನ್ನಡದಲ್ಲಿ ಯಾವಾಗಲೂ ಉಳಿದುಕೊಳ್ಳುತ್ತವೆ.  ಗರ್ಭಿಣಿಯ ಮನಸ್ಥಿತಿಯನ್ನು ಸೀಮಂತಿನಿ ಕವನದಲ್ಲಿ ಕಾಣಬಹುದು. ಅವಳಲ್ಲಿ ಉಂಟಾದ ಮನಕಲ್ಮಶಗಳನ್ನು ತೆಗೆಯುತ್ತ ವಿಕಾಸದ ಕಡೆಗೆ ಅವಳ ಮನಸ್ಸನ್ನು ಹೊರಳಿಸುವುದು ಜೀವಪರತೆ, ಜೀವಪ್ರೀತಿ, ಲೋಕದಲ್ಲಿ ಎಲ್ಲದರ ಬಗೆಗೂ ಹುಟ್ಟುವಂಥ ಪ್ರೀತಿ. ಒಟ್ಟಾರೆ ಈ ಕವನ ಸ್ತ್ರೀವಿಶಿಷ್ಟವಾದ ಅನುಭವ. ಗಂಡಿಗೂ ಹೆಣ್ಣಿನ ಮನಸ್ಥಿತಿ ಅರ್ಥ ಮಾಡಿಕೊಳ್ಳುವಂತಾಗಬೇಕು ಎಂದು ಯಾವಾಗಲೂ ಆಶಿಸುತ್ತೇವಲ್ಲ, ಅದು ಈ ಕವನದಲ್ಲಿ ಸಾಧ್ಯವಾಗಿದೆ;

ಸೀಮಂತಿನಿ

ಯಾರಿವಳು? ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು? ಗಂಡನೆಂಬವನನ್ನ ಕಂಡ ಕಂಡಂತೆಯೇ ಕಂದ ಎಂಬಂತೆ ಮಮತೆಯಲಿ ಮಾತಾಡುವಳು! ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ ಉಡಿಯಲ್ಲಿ ಹಾಕಿ ಶಮಿಸಿದವಳು ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ ಬೆನ್ನ ಬಳಿ ಬಂದು ಕೊರಳಿಗೆ ತೂಗುತಿದ್ದವಳು? ಕೈಯ ಪುಸ್ತಕವನ್ನು ಕಿತ್ತು ಗೂಡೊಳಗೆಸೆದು ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು! ಕೆನ್ನೆಯಲಿ ಬೆರಳಿಟ್ಟು ಕೊರಳ ಸರ ತುಟಿಗಿಟ್ಟು ಏನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು? ಈಗ ಅದೆ ಹುಡುಗಿ ಬೇಸಿಗೆಯ ಉರಿಗಣ್ಣ ಬೆಳುದಿಂಗಳಲಿ ತೊಳೆದು ಗರ್ಭಗುಡಿ ಹಣತೆಯನು ಹಚ್ಚಿರುವಳು; ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ ಜಗದಂಬೆ ಭಾವಕ್ಕೆ ಸಂದಿರುವಳು!

ಒಲೆ ಮೇಲೆ ಅನ್ನ ಸೀಯುತ್ತಲಿದೆ ಮೊನ್ನೆ; ಎದುರಿಗೇ ಕುಳಿತು ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ ನೆಲಕಿಳಿಸಿ ಹರಿಯಬಿಡುತಿದ್ದಾಳೆ, ಒಂದೊಂದೆ! ಪೊರಕೆ ತುದಿಯಲಿ ಹಿಂದೆ ಜಿರಲೆಗಳ ಬಡಿದವಳು ಇವಳೆ? ‘ಪಾಪ’ ಎಂದರೆ – ‘ಅಹ! ಶುದ್ದ ಕನ್ನಡಿಗ’ ಎಂದು ಛೇಡಿಸಿದವಳು! ಈಗ ಹೊರಳಿದೆ ಕರಳು, ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ ಬೆಣ್ಣೆ ಬೆರಳು.

ಎಲ್ಲಿ ತರೆಮರೆಸಿಕೊಂಡುವೊ ಏನೊ ಈಗಿವಳ ಸಿನಿಮ ಹೋಟೆಲುಗಳಿಗೆ ಅಲೆವ ಚಪಲ, ಆಗೀಗ(ನನ್ನನೂ ಜೊತೆಗೆಳೆದುಕೊಂಡು!) ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲ! ಮುಡಿತುಂಬ ಹಣೆತುಂಬ ಕೈತುಂಬ ತನ್ನೆಲ್ಲ ಮಾಂಗಲ್ಯ ಸೌಭಾಗ್ಯ ಮೆರೆಸಿ, ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ, ಇವಳೀಗ ಕಾರ್ತೀಕದಾಗಸದ ಹಾಡು, ಕಣ್ಣೊ, ಹುಣ್ಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಟು, ಈಗ? ಎಂಬಂತೆ ಹುಬ್ಬೆತ್ತರಿಸಿ ನಕ್ಕು ಸ್ಪರ್ಧಿಸಿದ್ದವಳು ಈಗೆಲ್ಲ ಅಬ್ಬರ ಬಿಟ್ಟು ಕಾಲೆಳೆಯುವಳು ಏಕೊ ತೀರ. ಕನಸುಗಣ್ಣೆಗೆ ದಾರಿಯಲ್ಲು ಏನೋ ಧ್ಯಾನ, ಮೈ ಮಾತ್ರ ಇಲ್ಲಿ, ಮನಸೆಲ್ಲೊ ಹೊರಟಿದೆ ಯಾನ, ಅಡಿಗಡಿಗು ಒಂದೊಂದು ಗುಡಿಕಟ್ಟಿ ಬಾಗಿಲಲಿ ಹೊರಳಿ ಬೇಡಿದೆ ಮಗುವಿಗಭಯದಾನ. ಎಲ್ಲ ಬಾಳಲಿ ಎಂಬ ಭಾವ ಚೆಲ್ಲುತಿದೆ ಕಣ್ಣು ಅಲುಗಿದೆ ಹೊಟ್ಟೆಯೊಳಗಿರಿವ ಪುಟ್ಟ ಜೀವ; ಗಟ್ಟಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು ಉಸಿರಾಡುತಿದೆ ಮಣ್ಣ ತೇವ!

nsl bhavanamana

ಡಾ. ಎಂ.ಎಸ್. ಆಶಾದೇವಿ

ಇದನ್ನೂ ಓದಿ: ಸ್ಮರಣೆ | ಎಲ್ಲಿ ಜಾರಿತೋ ಮನವು..ಭಾವಗಳನ್ನು ಎದೆಗಿಳಿಸಿದ ಕವಿ ಲಕ್ಷ್ಮೀನಾರಾಯಣ ಭಟ್ಟ

Published On - 3:55 pm, Sat, 6 March 21

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ