ಇಂದು ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಆರಂಭವಾಗಿ ಸಂಜೆ 5 ಗಂಟೆ 22 ನಿಮಿಷಕ್ಕೆ ಮುಗಿಯುವ ಚಂದ್ರಗ್ರಹಣ ವರ್ಷದ ನಾಲ್ಕನೇ ಹಾಗೂ ಕೊನೆಯ ಗ್ರಹಣವಾಗಿದ್ದು, ಗ್ರಹಣದ ವೇಳೆಯಲ್ಲಿ ದಿಗಂತದ ಕೆಳಗೆ ಚಂದ್ರ ಇರುವ ಕಾರಣ ಭಾರತದಲ್ಲಿ ಗೋಚರವಾಗುವುದಿಲ್ಲ.
2020ರಲ್ಲಿ ಮೊದಲು ಜನವರಿ 10, ಎರಡನೇ ಬಾರಿ ಜೂನ್ 5 ಹಾಗೂ ಜುಲೈ 5 ರಂದು ಮೂರನೇ ಬಾರಿ ಚಂದ್ರಗ್ರಹಣ ಗೋಚರವಾಗಿತ್ತು. ಅದನ್ನು ಬಿಟ್ಟು ಇಂದು (ನವೆಂಬರ್ 30) ಗೋಚರವಾಗುವ ಪೆನಂಬ್ರಲ್ ಚಂದ್ರಗ್ರಹಣ ನಾಲ್ಕನೇ ಬಾರಿಯಾಗಿದ್ದು, ಮುಂದಿನ ಚಂದ್ರಗ್ರಹಣ 2021ರ ಮೇ 26ರಂದು ನಡೆಯುತ್ತದೆ.
ಚಂದ್ರಗ್ರಹಣಕ್ಕೆ ಕಾರಣ?
ಚಂದ್ರ ಸ್ವಂತ ಬೆಳಕನ್ನು ಹೊಂದಿಲ್ಲ. ಸೂರ್ಯನ ಬೆಳಕಿನಿಂದ ಚಂದ್ರ ಪ್ರತಿದಿನ ಗೋಚರವಾಗುವುದು. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬರುತ್ತದೆ. ಸೂರ್ಯನ ಬೆಳಕು ಚಂದ್ರನನ್ನು ತಲುಪಲು ಭೂಮಿ ಅಡ್ಡವಾಗಿರುವುದರಿಂದ ಚಂದ್ರನ ಅರ್ಧ ಭಾಗ ಅಥವಾ ಸಂಪೂರ್ಣವಾಗಿ ಮುಚ್ಚುತ್ತದೆ. ಪೆನಂಬ್ರಲ್ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನ ಹೊರ ಭಾಗದ ಮೂಲಕ ಚಲಿಸುವುದರಿಂದ ಬಹಳ ಮುಸುಕಾಗಿರುತ್ತದೆ.
ಮುಂಬರುವ ಪೆನಂಬ್ರಲ್ ಚಂದ್ರಗ್ರಹಣ ಯುರೋಪ್ ಮತ್ತು ಅಮೇರಿಕ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಗೋಚರವಾಗುತ್ತದೆ. ನವೆಂಬರ್ ಚಂದ್ರಗ್ರಹಣವನ್ನು ವಿಶ್ವದ ಹಲವು ಕಡೆಗಳಲ್ಲಿ ಬೀವರ್ ಮೂನ್ ಎಂದು ಕರೆದರೆ, ಇನ್ನೂ ಕೆಲವು ಕಡೆಗಳಲ್ಲಿ ಫ್ರಾಸ್ಟಿ ಮೂನ್ ಅಥವಾ ಓಕ್ ಮೂನ್ ಎಂದು ಕರೆಯುತ್ತಾರೆ.
ಇದನ್ನೂ ಓದಿ: ಅರೆ ನೆರಳು ಚಂದ್ರಗ್ರಹಣದಿಂದ ಕಾದಿದಿಯಾ ಮಹಾ ಕಂಟಕ?
Published On - 12:31 pm, Mon, 30 November 20