Qatar Mail : ಕಚ್ಚಾ ತೈಲದ ಬೆಲೆ ಇಳಿದಾಗ ಸಂಕಷ್ಟಕ್ಕೀಡಾಗುವ ಗಲ್ಫ್​ನ ಅನಿವಾಸಿ ಭಾರತೀಯರು

Crude Oil : ಸದ್ಯಕ್ಕೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 105.43 ಡಾಲರ್ ಇದೆ. ಅದೇನೇ ಇದ್ದರೂ, ಅನಿವಾಸಿ ಭಾರತೀಯರ ಮನದಲ್ಲಿ ಒಂದು ಚಿಂತೆ, ಕಳವಳ ಇದ್ದೇ ಇರುತ್ತದೆ. ನಾಳೆ ಹೇಗೋ ಏನೋ ಬಲ್ಲವರು ಯಾರು?

Qatar Mail : ಕಚ್ಚಾ ತೈಲದ ಬೆಲೆ ಇಳಿದಾಗ ಸಂಕಷ್ಟಕ್ಕೀಡಾಗುವ ಗಲ್ಫ್​ನ ಅನಿವಾಸಿ ಭಾರತೀಯರು
Follow us
ಶ್ರೀದೇವಿ ಕಳಸದ
|

Updated on:May 13, 2022 | 7:30 AM

Qatar Mail : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿ ಮುಖವಾದಾಗ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಕಡಿಮೆಯಾಯಿತೆಂದು ಜನರು ನಿಟ್ಟುಸಿರುಬಿಟ್ಟರೆ, ಇನ್ನೊಂದೆಡೆ ಏಕಾದರೂ ಬೆಲೆ ಕೆಳಗಿಳಿಯಿತೆಂದು ಹಿಡಿಶಾಪ ಹಾಕುವ ಭಾರತೀಯರೂ ಇದ್ದಾರೆ. ಅವರು ರಾಜಕಾರಣಿಗಳೋ ಅಥವಾ ಪೆಟ್ರೋಲ್ ಬಂಕ್ ಮಾಲೀಕರೋ ಇರಬಹುದೆಂದುಕೊಂಡರೆ ಅಲ್ಲೇ ನೀವು ತಪ್ಪು ಮಾಡುವುದು. ಗಲ್ಫ್ ರಾಷ್ಟ್ರಗಳು ಒಂದೆಡೆ ತೈಲದ ಬೆಲೆ ಕುಸಿಯಿತು ಎಂದು ತಲೆ ಮೇಲೆ ಕೈಹೊತ್ತು ಕೂತರೆ, ಅಲ್ಲಿ ನೌಕರಿ ಮಾಡುತ್ತಿರುವ ಲಕ್ಷಾಂತರ ಜನರು ತಮ್ಮ ಕೆಲಸ ಕಳೆದುಕೊಂಡು ಮರಳಿ ಮನೆಯತ್ತ ಮುಖ ಮಾಡುತ್ತಾರೆ. ತೈಲ ಸಂಪತ್ತನ್ನೇ ಅವಲಂಬಿಸಿರುವ ಗಲ್ಫ್ ರಾಷ್ಟ್ರಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು – ಗಲ್ಫ್ ಒಕ್ಕೂಟದ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಭಾರತೀಯರು, ಅದರಲ್ಲೂ ಕೇರಳದವರು ಎನ್ನುವುದು ಇಲ್ಲಿ ನೆನಪಿಡಬೇಕಾದ ಸಂಗತಿ – ಯಾವುದೇ ಮುಲಾಜಿಲ್ಲದೆ ನೌಕರಿಯಿಂದ ಕಿತ್ತೆಸೆಯುತ್ತವೆ. ಚೈತ್ರಾ ಅರ್ಜುನಪುರಿ, ಪತ್ರಕರ್ತೆ

(ಪತ್ರ 10)

ಇದನ್ನೂ ಓದಿ
Image
Qatar Mail : ಮಲಯಾಳಿಗಳು ನಮ್ಮ ಕನ್ನಡದ ನಾಯಕನನ್ನು ಅನುಕರಣೆ ಮಾಡುವುದು ಕಂಡಾಗ ಬಹಳ ಖುಷಿ
Image
Qatar Mail: ಮಗು ಹುಟ್ಟಿ, ಹೆಂಡತಿ ಕತಾರಿಗೆ ಕಾಲಿಟ್ಟ ಮೇಲೆಯೇ ವಿವಾಹದ ಗುಟ್ಟು ರಟ್ಟಾಗಿದ್ದು!
Image
Qatar Mail: ಆಫೀಸಿನ ಒಳಗೆ ಹೋಗುವಂತಿಲ್ಲ ಎಂದು ಆತ ಪರವಾನಗಿ ಪತ್ರವನ್ನು ಮಡಚಿ ನನ್ನ ಕೈಗಿಟ್ಟ
Image
Qatar Mail: ‘ಐ ಡೋಂಟ್ ರೇಪ್ ಮೈ ಲೆನ್ಸ್!’ ಇದು ಭ್ರಮೆಯಲ್ಲವೆಂದು ಖಚಿತಪಡಿಸಿಕೊಂಡೆ

ಇನ್ನು ಭೂಪಟದಲ್ಲಿ ಸಣ್ಣ ಚುಕ್ಕೆಯಂತಿರುವ ಕತಾರ್​ನ ಪರಿಸ್ಥಿತಿ ಬೇರೆಯಲ್ಲ. ಈ ವರ್ಷ, ಅಂದರೆ 2022 ನವೆಂಬರ್​ನಲ್ಲಿ ಫೀಫಾ ವಿಶ್ವಕಪ್ ನಡೆಸಿಕೊಡಬೇಕಾಗಿರುವ ದೇಶವಾಗಿರುವುದರಿಂದ ಆರ್ಥಿಕ ಒತ್ತಡ ದೇಶದ ಮೇಲೆ ತುಸು ಹೆಚ್ಚೇ ಎಂದು ಹೇಳಬಹುದು. ಫೀಫಾ ವಿಶ್ವ ಕಪ್ ನಡೆಸಿಕೊಡುವುದು ಎಂದು ತೀರ್ಮಾನವಾದ ಮೇಲೆ ಮೊದಲ ಬಾರಿಗೆ, 2014ರಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್​ಗೆ 93.17 ಡಾಲರ್ ಇದ್ದದ್ದು 2015ರಲ್ಲಿ ಅಚಾನಕ್ 48.66ಕ್ಕೆ ಇಳಿದು, 2016ರಲ್ಲಿ 43.29 ಡಾಲರ್ ಗೆ ಇಳಿದುಬಿಟ್ಟಿತು. 2010ರಲ್ಲಿ ಕತಾರ್ ಫೀಫಾ ವಿಶ್ವ ಕಪ್ ಬಿಡ್ ಗೆದ್ದಾಗ 79.48 ಡಾಲರ್ ಬೆಲೆಯಿದ್ದ ಕಚ್ಚಾ ತೈಲ ಹೀಗೆ, ಐದಾರು ವರ್ಷಗಳಲ್ಲಿ ಅದೂ ವಿಶ್ವ ಕಪ್ ಸಾಗುವ ನಡುವೆಯೇ, 44.51 ಡಾಲರ್ ನಷ್ಟು ಕಡಿಮೆಯಾಗಿ ಮುಗ್ಗುರಿಸಿ ಬಿದ್ದರೆ ಏನಾಗಬೇಡ? ಈ ದೇಶದ ಆರ್ಥಿಕ ಬೆನ್ನೆಲುಬು ತೈಲ ಮತ್ತು ಅನಿಲ. ಅವುಗಳಿಂದ ಕಡಿಮೆಯಾಯಿತೆಂದು ವಿಶ್ವ ಕಪ್ ತಯಾರಿಯಲ್ಲಿ ಕಳಪೆ ಗುಣಮಟ್ಟ ತೋರಲಾಗುವುದೇ? ಅದಕ್ಕೆ ದೇಶ ತನ್ನದೇ ಆದ ಕಾರ್ಯತಂತ್ರ ರೂಪಿಸಿಕೊಂಡಿತು.

ಕೆಲಸ ಕಳೆದುಕೊಳ್ಳುವ ಭೀತಿ: ಅಗತ್ಯವಿರುವಷ್ಟೇ ನೌಕರರನ್ನು ಉಳಿಸಿಕೊಂಡು, ಉಳಿದವರನ್ನು ಮನೆಗೆ ಕಳುಹಿಸಿದ ಬಳಿಕ, ಇರುವ ನೌಕರರ ಸಂಬಳಕ್ಕೂ ಕತ್ತರಿ ಹಾಕಲಾಯಿತು. ಶೇಕಡ 25ರಷ್ಟು ಸಂಬಳ ಕಡಿಮೆ ಮಾಡುವುದರ ಜೊತೆಯಲ್ಲಿ ಭಡ್ತಿಗಳು ಶೂನ್ಯ ಮಾಡಲಾಯಿತು. ಪ್ರತಿಯೊಂದು ಸರ್ಕಾರಿ ಕಂಪನಿ ಪ್ರತಿ ಮೂರು ತಿಂಗಳಿಗೊಮ್ಮೆ ಯಾವ ನೌಕರರನ್ನು ಕೆಲಸದಿಂದ ತೆಗೆಯಬಹುದೆಂದು ಪಟ್ಟಿ ಮಾಡತೊಡಗಿದವು. ಪಟ್ಟಿ ಬರುವವರೆಗೂ ಅದರಲ್ಲಿ ತಮ್ಮ ಹೆಸರಿರಬಹುದೆನ್ನುವ ಆತಂಕದಲ್ಲೇ ದಿನ ದೂಡುತ್ತಿದ್ದ ನೌಕರರು, ಪಟ್ಟಿಯಲ್ಲಿ ತಮ್ಮ ನಿಟ್ಟುಸಿರು ಬಿಡುವ ಹಾಗೂ ಇರಲಿಲ್ಲ.

ಬಹುಶಃ ಆ ಎರಡು ವರ್ಷಗಳಲ್ಲಿ ದೇವರುಗಳಿಗೆ ಹೋದ ಬೇಡಿಕೆಗಳಲ್ಲಿ ಗಲ್ಫ್ ನ ಅನಿವಾಸಿ ಭಾರತೀಯರ ‘ಕೆಲಸ ಹೋಗದಿರಲಿ ದೇವರೇ’ ಎನ್ನುವ ಅಪ್ಲಿಕೇಷನ್ ಗಳೇ ಹೆಚ್ಚೇನೋ… ಇಲ್ಲಿ ದೇವಸ್ಥಾನಗಳಿದ್ದಿದ್ದರೆ, ಅವುಗಳ ಮುಂದೆ ಪ್ರತಿ ದಿನ ಎಷ್ಟು ಜನ ಸಾಲುಗಟ್ಟುತ್ತಿದ್ದರೋ ಏನೋ… ಎರಡು ವರ್ಷ, ಮೂರು ತಿಂಗಳಿಗೊಮ್ಮೆ ಹೊಸ ಪಟ್ಟಿ ಬರುತ್ತಿದ್ದ ಆ ದಿನಗಳನ್ನು ನಮ್ಮನ್ನೂ ಸೇರಿದಂತೆ, ಇತರೆ ಅನಿವಾಸಿ ಭಾರತೀಯರು ಎದುರಿಸಿದ್ದು ಹೇಗೆ ಎಂದು ಪದಗಳಲ್ಲಿ ಹಿಡಿದಿಡುವುದು ಸ್ವಲ್ಪ ಕಷ್ಟದ ವಿಷಯವೇ.

ಮುಂಚೆ ವರ್ಷಕ್ಕೆ ನೀಡುತ್ತಿದ್ದ 45 ದಿನಗಳ ರಜೆಯನ್ನು 35 ದಿನಗಳಿಗೆ ಇಳಿಸಲಾಯಿತು. ಪ್ರಸ್ತುತ ವರ್ಷದ ರಜಾ ದಿನಗಳನ್ನು ಮುಂದಿನ ವರ್ಷಕ್ಕೆ ವರ್ಗಾಯಿಸದಂತೆ ಹೊಸ ಕಾನೂನನ್ನು ಜಾರಿಗೊಳಿಸಲಾಯಿತು. ರಜಾ ದಿನಗಳಲ್ಲಿ ಕೆಲಸ ಮಾಡಿ, ಆ ದಿನಗಳಿಗೂ ಸಂಬಳ ಪಡೆದು ಮನೆಗೆ ರವಾನಿಸುತ್ತಿದ್ದ ಅನಿವಾಸಿ ಭಾರತೀಯರ ಅವಕಾಶಕ್ಕೆ ಅಡಕತ್ತರಿ ಹಾಕಲಾಯಿತು. ರಜಾ ದಿನಗಳನ್ನು ಬಳಸಿಕೊಳ್ಳದಿದ್ದರೆ ಅದು ನೌಕರರ ತಪ್ಪು!

ಬೆಲೆ ಹೆಚ್ಚಳ: ಇದು ಸಾಲದೆಂಬಂತೆ ಮೊದಲು ಒಂದು ಲೀಟರ್ ಪೆಟ್ರೋಲ್ ಬೆಲೆ 90 ದಿರ್ಹಾಮ್ ಇದ್ದದ್ದು ತೈಲ ಬೆಲೆ ಕುಸಿತದ ಬಳಿಕ 1.10 ರಿಯಾಲ್ ಆಯಿತು, ನಂತರ 1.30 ರಿಯಾಲ್ ಆಯಿತು. ಪ್ರಸ್ತುತ ಒಂದು ಲೀಟರ್ ಪೆಟ್ರೋಲ್ ಬೆಲೆ 2.10 ರಿಯಾಲ್, ಅಂದರೆ 44.58 ರೂಪಾಯಿ.

ಎಲ್ಲರಿಗೂ ವಾಹನ ಚಾಲನೆ ಪರವಾನಗಿ ನೀಡುತ್ತಿದ್ದ ದೇಶ ಯಾರಿಗೆ ಅನುಮತಿಯಿದೆ, ಯಾರಿಗೆ ಅನುಮತಿಯಿಲ್ಲ ಎನ್ನುವ ದೊಡ್ಡ ಪಟ್ಟಿಯೊಂದನ್ನೇ ಬಿಡುಗಡೆ ಮಾಡಿತು. ಸಾಮಾನ್ಯ ನೌಕರರು, ಮನೆಕೆಲಸ ಮಾಡುವವರು, ಗೃಹಿಣಿಯರು ಮತ್ತಿತರ ಸಣ್ಣ ಪುಟ್ಟ ಉದ್ಯೋಗದಲ್ಲಿರುವವರು ಅನುಮತಿಯಿಲ್ಲದ ಪಟ್ಟಿಯಲ್ಲಿ ಸೇರಿ ಹೋದರು. ಪ್ರಸ್ತುತ ಆ ಪಟ್ಟಿ ಸ್ವಲ್ಪ ಸಡಿಲವಾಗಿದೆ, ಆದರೆ ಹಂತಗಳ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡುವುದು ಬಹಳ ಕಠಿಣವಾಗಿದೆ.

ಇನ್ನು ವಿದ್ಯುತ್ ಮತ್ತು ನೀರಿನ ಬೆಲೆಯನ್ನು ಮೇಲೇರಿಸಲಾಯಿತು. ಇದುವರೆಗೂ ಮನೆಯ ಮಾಲೀಕರು ಬಾಡಿಗೆ ಮನೆಗಳ ಬೆಲೆಯನ್ನು ಗಗನಕುಸುಮವಾಗಿಸಿದ್ದವರು ಅಚಾನಕ್ ಬಾಡಿಗೆ ಇಳಿಸತೊಡಗಿದರು. ಎರಡು ಬೆಡ್​ರೂಮಿನ ಬೆಲೆಗೆ ನಾಲ್ಕು ಬೆಡ್​ರೂಮಿನ ಮನೆಗಳು ದೊರಕುತ್ತಿದ್ದರೂ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಜನ ಮನೆಗಳನ್ನು ಬದಲಾಯಿಸುವ ಗೋಜಿಗೇ ಹೋಗುಲಿಲ್ಲ.

ದಿನನಿತ್ಯದ ವಸ್ತುಗಳ ದರ ಹೆಚ್ಚಿ, ನಾಳೆ ಕೆಲಸವಿರುತ್ತದೆಯೋ ಇಲ್ಲವೋ ಎನ್ನುವ ಭೀತಿಯಲ್ಲಿ ಜನ, ಅದರಲ್ಲೂ ಅನಿವಾಸಿ ಭಾರತೀಯರು, ದಿನಗಳನ್ನು ದೂಡುವಂತಾಗಿಬಿಟ್ಟಿತ್ತು.

ವಿದ್ಯುತ್ ಬೆಲೆ ಏರಿದ ಮೇಲೆ ಲೈಟ್ ಹಾಕಲು, ಎಸಿ ಹಾಕಲು ಕೈ ಹಿಂದೆ ಮುಂದೆ ನೋಡುವಂತಾಗಿತ್ತು. ಆದರೆ ಇಲ್ಲಿನ ಧಗೆ 50 ಡಿಗ್ರಿಗಿಂತಲೂ ಹೆಚ್ಚಿರುವುದರಿಂದ ಎಸಿ ಹಾಕದೇ ಬೇರೆ ದಾರಿಯೂ ಇರದ ಸ್ಥಿತಿ. ಗಾಯದ ಮೇಲೆ ಬರೆ ಹಾಕಿದಂತೆ ಸರ್ಕಾರ ಹೊಸದೊಂದು ಕಾನೂನನ್ನು ಬೇರೆ ಜಾರಿಗೆ ತಂದಿತ್ತು. ಉಪಯೋಗಿಸುವ ಹವಾನಿಯಂತ್ರಣ 5ಸ್ಟಾರ್ ಹೊಂದಿರುವ ಯಂತ್ರಗಳಾಗಿರಬೇಕು ಎನ್ನುವ ಹೊಸ ಕಾಯಿದೆ.

ಇನ್ನು ಸರ್ವೀಸ್ಡ್ ಅಪಾರ್ಟ್ಮೆಂಟ್ ಗಳಲ್ಲಿಯೂ ಹೊಸ ಕಾಯಿದೆ ಶುರು ಮಾಡಿದರು. ನಾವಿರುವ ಅಪಾರ್ಟ್ಮೆಂಟಿನಲ್ಲಿ ಮುಂಚೆ ಸಣ್ಣ ಪುಟ್ಟ ಕೆಲಸಗಳನ್ನೆಲ್ಲ ಉಚಿತವಾಗಿ ಮಾಡಿಕೊಡಲಾಗುತ್ತಿತ್ತು, ಆದರೆ 2015ರಿಂದ ಅದಕ್ಕೂ ಹಣ ತೆರಬೇಕಾದ ಪರಿಸ್ಥಿತಿ ಬಂದೊದಗಿತು.

ಫೈರ್ ಅಲಾರಾಂ: ತಮಾಷೆಯ ವಿಷಯವೆಂದರೆ ಇಲ್ಲಿನ ಎಲ್ಲಾ ಅಪಾರ್ಟ್​ಮೆಂಟ್​ಗಳಲ್ಲಿ ಸ್ಮೋಕ್ ಡಿಟೆಕ್ಟರ್​ಗಳನ್ನು ಅಳವಡಿಸಿರುತ್ತಾರೆ. ಅದು ಅಡುಗೆ ಮನೆಯಿರಲಿ, ಬಚ್ಚಲ ಮನೆಯಿರಲಿ ಎಲ್ಲೆಡೆ ಡಿಟೆಕ್ಟರ್​ಗಳಿವೆ. ಹಾಗಾಗಿ ಮನೆಗಳಲ್ಲಿ ಧೂಮಪಾನವೂ ನಿಷಿದ್ಧ. ಬೆಂಕಿ ಅವಘಡಗಳನ್ನು ನಿಯಂತ್ರಿಸಲು ಇದು ಒಳ್ಳೆಯ ಉಪಾಯವೇನೋ ಸರಿ, ಆದರೆ ಇದರಿಂದ ಭಾರತೀಯರಾದ ನಮ್ಮಂಥವರ ಸಂಕಷ್ಟ ಹೇಳತೀರದು. ದೇವರ ಮುಂದೆ ಗಂಧದ ಕಡ್ಡಿ ಹಚ್ಚಿದರೆ, ಕರ್ಪೂರ ಹಚ್ಚಿದರೆ ಅಲಾರಾಂ ಬಡಿದುಕೊಳ್ಳುತ್ತದೆ. ಅದು ಹಾಳಾಗಲಿ ಎಂದರೆ, ಅಡುಗೆಮನೆಯಲ್ಲಿ ಸಾಂಬಾರಿಗೆ ಒಗ್ಗರಣೆ ಹಾಕಿದರೂ ಅಲಾರಾಂ ಬಡಿದುಕೊಳ್ಳುತ್ತದಲ್ಲ!

ನಾನು ಹಾಕುವ ಒಗ್ಗರಣೆ ಘಾಟಿಗೆ ಒಮ್ಮೆ ಅಲಾರಾಂ ಹೊಡೆದುಕೊಂಡು, ಬಿಲ್ಡಿಂಗಿನ ಸೆಕ್ಯೂರಿಟಿಗಳು ಏಣಿ, ಬಕೀಟುಗಳನ್ನು ಹಿಡಿದು ನಮ್ಮ ಮನೆಯ ಬಾಗಿಲು ತಟ್ಟಿರುವ ಮುಜುಗರದ ಅನುಭವಗಳು ಅದಾಗಲೇ ಮೂರ್ನಾಲ್ಕು ಸಲ ಆಗಿದ್ದವು. ಆದರೆ ಇನ್ನು ಮುಂದೆ ಆ ರೀತಿಯ ಘಟನೆಗಳಿಗೆ ಆಸ್ಪದ ಕೊಡದ ಹಾಗೆ ಅಪಾರ್ಟ್ಮೆಂಟಿನ ಆಡಳಿತ ಎಲ್ಲರ ಮನೆಗಳಿಗೂ ನೋಟೀಸ್ ಹಂಚಿತು. ಅದರ ಪ್ರಕಾರ, ಸುಮ್ಮನೆ ಫೈರ್ ಅಲಾರಾಂ ಹೊಡೆದುಕೊಂಡರೆ ಎರಡು ಬಾರಿ ಎಚ್ಚರಿಕೆ ನೀಡಿ ಸುಮ್ಮನಾಗುತ್ತಾರೆ, ಮೂರನೆಯ ಬಾರಿ ಅಲಾರಾಂ ಹೊಡೆದುಕೊಂಡರೆ 500 ರಿಯಾಲ್ ದಂಡ ವಿಧಿಸುತ್ತಾರೆ. ಅದರ ಬಳಿಕವೂ ಅಲಾರಾಂ ಹೊಡೆದುಕೊಂಡರೆ 5,000 ರಿಯಾಲ್ ದಂಡವನ್ನು ಸರ್ಕಾರಕ್ಕೆ ಪಾವತಿಸುವುದು ಮಾತ್ರವಲ್ಲ, ಮುಂದಿನ ಕ್ರಮ ಎದುರಿಸಲೂ ತಯಾರಿರಬೇಕು!

ಬಿಲ್ಡಿಂಗಿನ ನೋಟೀಸ್ ನೋಡಿ ನಾನು ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಹಾಕುವುದನ್ನೇ ನಿಲ್ಲಿಸಿಬಿಟ್ಟಿದ್ದೆ. ಹಬ್ಬದ ಅಡುಗೆಗಳಿಗೆ ಮಾತ್ರ ಕೊಬ್ಬರಿ ಎಣ್ಣೆ ಬಳಸಿ, ಉಳಿದ ದಿನಗಳಿಗೆ ಬೇರೆ ಎಣ್ಣೆ ಬಳಸುವ ಕ್ರಮ ರೂಢಿಸಿಕೊಂಡೆ. ಕಳೆದ ತಿಂಗಳು ವಿಷು ಹಬ್ಬಕ್ಕೆ ಬೆಳಂಬೆಳ್ಳಗ್ಗೆ ಇಂಜಿ ಪುಳಿ (ಶುಂಠಿ ಹುಳಿ) ಮಾಡಲು ಸ್ಟವ್ ಮೇಲೆ ಮಣ್ಣಿನ ಪಾತ್ರೆ ಇಟ್ಟು ಅದಕ್ಕೊಂದಿಷ್ಟು ಕೊಬ್ಬರಿ ಎಣ್ಣೆ ಹಾಕಿ ಕಾಯಿಸಿ, ಒಂದೆರಡು ಚಮಚೆ ಸಾಸಿವೆ ಸಿಡಿಸಿ, ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಕರಿಬೇವು ಹಾಕಿದೆ. ಅದೆಲ್ಲಿ ಕೂತಿತ್ತೋ ಹಾಳಾದ ಹೊಗೆ ಭಗ್ಗನೆ ಕಣ್ಮುಚ್ಚಿ ಬಿಡುವಷ್ಟರಲ್ಲಿ ಪಾತ್ರೆಯನ್ನೆಲ್ಲಾ ಆವರಿಸಿಕೊಂಡುಬಿಟ್ಟಿತು. ಆರು ತಿಂಗಳು, ಮೂರು ತಿಂಗಳಿಗೆ ಮಾತ್ರ ತನ್ನನ್ನು ಹೊರಗೆ ತೆಗೆಯುತ್ತಾಳೆನ್ನುವ ಸಿಟ್ಟು ಆ ಮಣ್ಣಿನ ಪಾತ್ರೆಗಿತ್ತೋ, ಅಥವಾ ವರ್ಷವೆಲ್ಲಾ ತನ್ನನ್ನು ಬಿಟ್ಟು ಬೇರೆ ಎಣ್ಣೆ ಬಳಸುತ್ತೀಯೆ ಎನ್ನುವ ಕೋಪ ಆ ಕೊಬ್ಬರಿ ಎಣ್ಣೆಗಿತ್ತೋ, ಒಟ್ಟಿನಲ್ಲಿ ಎರಡೂ ಸೇರಿ ನನಗೆ ಗಾಬರಿ ಹುಟ್ಟಿಸಿಬಿಟ್ಟವು. ಸ್ಟವ್ ಆರಿಸಿ, ಪಾತ್ರೆಯನ್ನು ಪಕ್ಕಕ್ಕಿರಿಸಿದೆ. ಫುಲ್ ಸ್ಪೀಡಿನಲ್ಲಿದ್ದ ಓಡುತ್ತಿದ್ದ ಎಕ್ಸಾಸ್ಟ್ ಫ್ಯಾನ್, ಎಸಿ, ಮುಂದೆ ಆ ಕೊಬ್ಬರಿ ಎಣ್ಣೆಯ ಹೊಗೆಯ ಆಟ ನಡೆಯುವುದಿಲ್ಲ ಎನ್ನುವ ಹಾಗೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದವು. ತೆರೆದರೂ ತೆರಯದಂಥ ಅರ್ಧ ಅಡಿ ಮಾತ್ರ ತೆರೆದುಕೊಳ್ಳುವ ಆ ಟಿಲ್ಟ್ ಅಂಡ್ ಟರ್ನ್ ಕಿಟಕಿಯ ಬಾಗಿಲನ್ನು ಓಡಿ ಹೋಗಿ ತೆರೆದೆ.

ಒಂದೆರಡು ನಿಮಿಷ ಬಿಟ್ಟು, ಮತ್ತೆ ಪಾತ್ರೆಯನ್ನು ಸ್ಟವ್ ಮೇಲಿಟ್ಟು, ಸಣ್ಣದಾಗಿ ಹೆಚ್ಚಿಟ್ಟ ಶುಂಠಿ ಹಾಕಿ ಹುರಿಯಲು ಶುರು ಮಾಡಿದೆ. ಅರೆಗಳಿಗೆಯೂ ಆಗಿರಲಿಲ್ಲ, ಬಾಗಿಲು ಬಡಿದ ಸದ್ದು. ಮತ್ತೆ ಸ್ಟವ್ ಆರಿಸಿ, ಬಾಗಿಲು ತೆರೆದರೆ, ಎದುರಿಗೆ ಕೈಯಲ್ಲಿ ವಾಕಿಟಾಕಿ ಹಿಡಿದ ಸೆಕ್ಯೂರಿಟಿ ಗಾರ್ಡ್. “ಎವೆರಿಥಿಂಗ್ ಆಲ್ ರೈಟ್, ಮ್ಯಾಮ್? ಫೈರ್ ಅಲಾರಾಂ ಫ್ರಮ್ ಯುವರ್ ಅಪಾರ್ಟ್ಮೆಂಟ್, ಮ್ಯಾಮ್,” ಎಂದವನೇ ತಲೆಯನ್ನು ಮನೆಯೊಳಗೆ ಹಾಕಿ ಇಣುಕಿ ನೋಡಿದ. ನಾನು ಎಲ್ಲಾ ಸರಿಯಾಗಿದೆ, ಏನೂ ತೊಂದರೆಯಿಲ್ಲ, ಅಡುಗೆಯ ಒಗ್ಗರಣೆ ಘಾಟಿಗೆ ಅಲಾರಾಂ ಹೊಡೆದುಕೊಂಡಿದೆ ಎಂದು ಅವನಿಗೆ ಹೇಳಿದೆ. ಅವನು ಮತ್ತೊಮ್ಮೆ, ಎಲ್ಲಾ ಸರಿಯಾಗಿದೆ ತಾನೇ ಎಂದು ಹೇಳಿ ಖಾತ್ರಿ ಪಡಿಸಿಕೊಂಡ ಮೇಲೆ ಹೊರಟು ಹೋದ. ಪುಣ್ಯಕ್ಕೆ, ಬಿಲ್ಡಿಂಗ್​ನಲ್ಲಿ ಅಲಾರಾಂ ಹೊಡೆಯಲಿಲ್ಲ, ದಂಡ ತೆರುವುದರಿಂದ ಬಚಾವಾದೆವು ಎಂದು ಸಮಾಧಾನ ಪಟ್ಟುಕೊಂಡೆ.

ಕರೋನಾ ಮಹಾಮಾರಿ: ಅದಿರಲಿ, ಒಟ್ಟಿನಲ್ಲಿ 2015-2016ರ ಕಚ್ಚಾ ತೈಲದ ಬೆಲೆ ಕುಸಿತ ಅನಿವಾಸಿ ಭಾರತೀಯರಿಗೆ ಭಾರೀ ಹೊಡೆತ ಕೊಟ್ಟಿತು ಎನ್ನುವುದನ್ನು ಮರೆಯುವ ಹಾಗಿಲ್ಲ. ಅದು ಅಷ್ಟಕ್ಕೇ ನಿಲ್ಲದೆ, 2020ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 39.68 ಡಾಲರ್ ಗೆ ಕುಸಿದಾಗ, ಕರೋನಾ ಮಹಾಮಾರಿಯೂ ಅದೂ ಜೊತೆ ಸೇರಿಕೊಂಡು ಕೊಟ್ಟ ಹೊಡೆತ ಮಾತ್ರ ಅಂತಿಂತದಲ್ಲ. ಬೇಸಿಗೆ ರಜೆಗೆಂದು ಭಾರತಕ್ಕೆ ಹೋದವರು ಮರಳಿ ಕೆಲಸಕ್ಕೆ ಬರಬಾರದೆಂದು ನೋಟಿಸ್ ಪಡೆದು ತತ್ತರಿಸಿ ಹೋದರು. ಉಳಿದ ನೌಕರರಿಗೆ ಶೇ. 40ರಷ್ಟು ಸಂಬಳ ಕಡಿತವಾಯಿತು. ಇದಕ್ಕೆ ಕರೋನಾ ಕಾರಣವೆಂದುಕೊಂಡರೂ, ಅಸಲಿಗೆ ಇದರ ಹಿಂದಿನ ಕಾರಣ ಮತ್ತದೇ ಕಚ್ಚಾ ತೈಲದ ಬೆಲೆ ಕುಸಿತ, ಅದರ ಕುಸಿತಕ್ಕೆ ಕಾರಣ ಮತ್ತದೇ ಕರೋನಾ ಎಂಬ ಮಾಹಾಮಾರಿ!

ಸದ್ಯಕ್ಕೆ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 105.43 ಡಾಲರ್ ಇದೆ. ಅದೇನೇ ಇದ್ದರೂ, ಅನಿವಾಸಿ ಭಾರತೀಯರ ಮನದಲ್ಲಿ ಒಂದು ಚಿಂತೆ, ಕಳವಳ ಇದ್ದೇ ಇರುತ್ತದೆ. ನಾಳೆ ಹೇಗೋ ಏನೋ ಬಲ್ಲವರು ಯಾರು?

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 7:26 am, Fri, 13 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ