Ramanavami : ಕೃಷ್ಣ ದಕ್ಕಿದಂತೇ ರಾಮ ದಕ್ಕಲಾರ

ಈ ಹೊತ್ತಿನಲ್ಲಿ ರಾಮ ಎಂದರೆ ಸಹಿಸುವಿಕೆ! ಎಲ್ಲರನ್ನೂ ಎಲ್ಲವನ್ನೂ ಸಹಿಸುವಿಕೆ. ಇಲ್ಲಿ ಸಹಿಸದೇ ದಹಿಸದೇ ಬಂಧವಿಲ್ಲ ಎಂದು ಸಾರಿದವನು. ನೂರು ಪ್ರಶ್ನೆಗಳನ್ನು ತಾನು ಕೊಡದೇ ಹೋದ ಉತ್ತರಗಳ ಭಾರವನ್ನು, ನಿರಂತರ ಹುಟ್ಟುವ ನಿರೀಕ್ಷೆಗಳ ಸಹಿಸುವಿಕೆಯೇ ರಾಮ! ಅಚ್ಚರಿಯೆಂದರೆ ಹೊರಗಿನ ಅಬ್ಬರದ ರಾಮ ಒಳಮೂಡಲೇ ಇಲ್ಲ. ಹಾಗಾಗಿ ಪಾನಕದ ರಾಮ ಮತ್ತು ಭೀಮಸೇನ ಜೋಶಿಯವರು ಹಾಡಿ ಮೈಮರೆಸಿದ ‘ಸುಮತಿ ಸೀತಾರಾಮ’, ‘ಕೃಪಾ ಸರೋವರದ’ ‘ರಾಮ’ ಮಾತ್ರ ಮನದಲ್ಲಿ ಹಸಿರಾಗಿದ್ದಾನೆ. ಭದ್ರವಾಗಿದ್ದಾನೆ.

Ramanavami : ಕೃಷ್ಣ ದಕ್ಕಿದಂತೇ ರಾಮ ದಕ್ಕಲಾರ
Follow us
|

Updated on:Apr 21, 2021 | 5:55 PM

ಕಾಲೇಜಿನಲ್ಲಿ ಹಿಂದಿ ಎರಡನೇ ಭಾಷೆಯಾಗಿದ್ದಾಗ ತುಲಸೀದಾಸರ ಭಜನೆಗಳನ್ನು ಓದುವ ಅವಕಾಶವಾಗಿತ್ತು. ಆದರೆ ಬದುಕು ಬೆಳೆಯುತ್ತಿದ್ದಂತೇ ರಾಮನ ಬಗೆಗಿನ ಭಾವಗಳು ಬೇರೆಯೇ ಆಗಿ ಹೋದವು. ಸೀತೆ ನಮ್ಮಲ್ಲಿ ಹುಟ್ಟಿಬಿಟ್ಟಿದ್ದಳು. ಪ್ರಶ್ನೆಗಳನ್ನೂ ಕೇಳಲು ಕಲಿಸಿದಳು. ಆಗ ಮನಸ್ಸು ರಾಮನನ್ನು ಒಂದಷ್ಟು ಕಾಲ ಕಟಕಟೆಯಲ್ಲಿ ನಿಲ್ಲಿಸಿದ್ದುಂಟು. ರಾಮ, ತುಲಸೀದಾಸರ `ಸುಮತಿ ಸೀತಾರಾಮ…’ ಕುವೆಂಪು ಅವರ ರಾಮ, ವಾಲ್ಮೀಕಿಗಳ ರಾಮ, ದೇರಾಜೆ ಸೀತಾರಾಮಯ್ಯನವರ ರಾಮ, ಎಚ್ಚೆಸ್ವಿಯವರ ಸಂಸಾರಿಯ ರಾಮ, ಯಕ್ಷಗಾನದ ರಾಮ, ತಾಳಮದ್ದಲೆಯ ಅರ್ಥಗಾರಿಕೆಯಿಂದ ಹೊಮ್ಮಿದ ರಾಮ, ನೃತ್ಯದಲ್ಲಿ ಬಂದ ರಾಮ, ಹಾಡಿನಲ್ಲಿ ಕಂಡ ರಾಮ…

ನಮ್ಮದು ಅತ್ತ ಕರಾವಳಿಯೂ ಅಲ್ಲದ ಪೂರ್ಣ ಮಲೆನಾಡು ಅಲ್ಲದ ದಕ್ಷಿಣ ಕನ್ನಡದ ತಾಲೂಕು. ಮರದ ದಳಿಗಳ ನಡು ಚಾವಡಿಯ ಹೆಂಚಿನ ಮನೆ. ನಡುಮನೆಯೆಂದರೆ ಮನೆ ಮಕ್ಕಳ ಬೆಡ್ರೂಮೂ ಹೌದು. ಮಳೆಗಾಲವೆಂದರೆ ಬಾನು ಸೋರುತ್ತಿದೆಯೇನೋ ಎನ್ನುವಂತೇ ಧಾರಾಕಾರವಾಗಿ ಬೀಳುವ ಮಳೆ. ಗುಡುಗೆಂದರೆ ಇಲ್ಲೇ ಬುಡದಲ್ಲೇ ಬಿತ್ತು ಎನ್ನುವ ಆತಂಕ ಮೂಡಿಸುವಂಥ ಮಿಂಚು ಗುಡುಗುಗಳ ಮಳೆಗಾಲ. ಟ್ಯೂಬ್ಲೈಟ್ ಹೊತ್ತಿಕೊಂಡಂತೇ ಮಿಂಚುವಾಗ ಆ ಮಿಂಚಿನ ಬೆಳಕು ದಳಿಗಳ ಮೂಲಕ ನಡುಚಾವಡಿಯಲ್ಲಿ ಮಲಗುತ್ತಿದ್ದ ನಮ್ಮಲ್ಲಿ ಭಯ ಹುಟ್ಟಿಸುತ್ತಿತ್ತು. ಬೀಸುವ ಗಾಳಿಗೆ ತೂಗಾಡುವ ಅಡಿಕೆ ಮರಗಳು ಹೆಂಚಿನ ಮನೆ ಮೇಲೆ ಬಿದ್ದರೆ ಅನ್ನುವ ಆತಂಕದಲ್ಲಿಯೇ ನಡುಗುತ್ತಾ ರಾತ್ರೆ ಕಳೆಯುವಾಗ ಅಮ್ಮ ಬಂದು ‘ರಾಮ ರಾಮ ಅಂತ ಹೇಳ್ತಾ ಇರಿ. ಭಯವೆಲ್ಲ ದೂರವಾಗುತ್ತದೆ ಏನೂ ಆಗದು’ ಎಂದು ಹೇಳಿ ಬೆಚ್ಚನೆ ಹೊದೆಸಿ ಧೈರ್ಯದಿಂದ ಮಲಗುವಂತೇ ಹೇಳುತ್ತಿದ್ದರು. ಕಣ್ಣು ಮುಚ್ಚಿ ರಾಮನಾಮ ಹೇಳಿಕೊಂಡು ಹೀಗೆ ಬೆಳೆದದ್ದು ನನ್ನೊಳಗೆ ರಾಮ ಮೂಡಿದ್ದ ಮೊದಲ ಕ್ಷಣವಾಗಿತ್ತು. ಗೆಳತಿ ಮಹಿಮಾ ಮನೆಗೆ ವಸ್ತಿ(ರಾತ್ರೆ ಉಳಿದುಕೊಳ್ಳುವುದು)ಗೆ ಹೋಗಿದ್ದಾಗ ಅಲ್ಲಿ ಮಹಿಮಾ ಮತ್ತವಳ ಅಕ್ಕ ರೇಖಾ ರಾಮರಕ್ಷಾ ಸ್ತೋತ್ರ ಪಠನ ಮಾಡುವಾಗ ಅದರ ಲಯಕ್ಕೆ ಮನಸೋತು ನಾನೂ ಕಲಿಯಬೇಕೆನ್ನುವ ತುಡಿತ ಉಂಟಾಗಿತ್ತು. ನಮ್ಮಲ್ಲೂ ನಿತ್ಯಪ್ರಾರ್ಥನೆಯ ಒಂದಷ್ಟು ಸ್ತೋತ್ರಗಳು ಮತ್ತು ಮುಖ್ಯವಾಗಿ ಮರಾಠಿ ಅಭಂಗಗಳ ಭಜನೆ ಇದ್ದರೂ ರಾಮರಕ್ಷಾ ಸ್ತೋತ್ರ ಕೇಳಿದ್ದೇ ಗೆಳತಿಯ ಮನೆಯಲ್ಲಿ. ರಾಮ ಹೀಗೆ ನಮ್ಮ ಮನಗಳಲ್ಲಿ ತೀರಾ ಸಹಜವಾಗಿ ಅಭಯ ಕೊಡುವ, ಧೈರ್ಯ ತುಂಬುವವನಾಗಿ ಬೇರೂರಿದ್ದ. ಅಲ್ಲಿ ಆ ಹೊತ್ತಿನಲ್ಲಿ ನಿಜಕ್ಕೂ ರಾಮನ ಬೇರಾವ ಅಸ್ತಿತ್ವದ ಛಾಯೆ ಇರಲೇ ಇಲ್ಲ.

ramanavami

ಸೌಜನ್ಯ : ಅಂತರ್ಜಾಲ

ಕಾಲೇಜಿನಲ್ಲಿ ಹಿಂದಿ ಎರಡನೇ ಭಾಷೆಯಾಗಿದ್ದಾಗ ತುಲಸೀದಾಸರ ಭಜನೆಗಳನ್ನು ಓದುವ ಅವಕಾಶವಾಗಿತ್ತು. ಆದರೆ ಬದುಕು ಬೆಳೆಯುತ್ತಿದ್ದಂತೇ ರಾಮನ ಬಗೆಗಿನ ಭಾವಗಳು ಬೇರೆಯೇ ಆಗಿ ಹೋದವು. ಸೀತೆ ನಮ್ಮಲ್ಲಿ ಹುಟ್ಟಿಬಿಟ್ಟಿದ್ದಳು. ಪ್ರಶ್ನೆಗಳನ್ನೂ ಕೇಳಲು ಕಲಿಸಿದಳು. ಆಗ ಮನಸ್ಸು ರಾಮನನ್ನು ಒಂದಷ್ಟು ಕಾಲ ಕಟಕಟೆಯಲ್ಲಿ ನಿಲ್ಲಿಸಿದ್ದುಂಟು. ರಾಮ, ತುಲಸೀದಾಸರ `ಸುಮತಿ ಸೀತಾರಾಮ…’ ಕುವೆಂಪು ಅವರ ರಾಮ, ವಾಲ್ಮೀಕಿಗಳ ರಾಮ, ದೇರಾಜೆ ಸೀತಾರಾಮಯ್ಯನವರ ರಾಮ, ಎಚ್ಚೆಸ್ವಿಯವರ ಸಂಸಾರಿಯ ರಾಮ, ಯಕ್ಷಗಾನದ ರಾಮ, ತಾಳಮದ್ದಲೆಯ ಅರ್ಥಗಾರಿಕೆಯಿಂದ ಹೊಮ್ಮಿದ ರಾಮ, ನೃತ್ಯದಲ್ಲಿ ಬಂದ ರಾಮ, ಹಾಡಿನಲ್ಲಿ ಕಂಡ ರಾಮ… ಹೀಗೆ ಹತ್ತಾರು ರಾಮನ ಪ್ರತಿಮೆಗಳು ಮೂಡುತ್ತಾ, ಕಣ್ಮರೆಯಾಗುತ್ತಾ ಈಗ ರಾಮ ಎಂಬುದೊಂದು ಅಪ್ಪಟ ಆದರ್ಶವಾಗಿ ನಿಂತು ಬಿಟ್ಟಿದ್ದಾನೆ. ‘ತಿಣುಕಿದನು ಫಣಿರಾಯ ರಾಮಾಯಣದ ಭಾರದಲಿ’ ಎಂದಂತೇ ಮೂರು ಸಾವಿರಕ್ಕೂ ಹೆಚ್ಚು ರಾಮಾಯಣದ ಕಲ್ಪನೆಗಳು ನಮ್ಮಲ್ಲಿ ಹೊನಲಾಗಿ ಹರಿದದ್ದು ನೋಡಿದಾಗ ರಾಮ ಎನ್ನುವುದು ಎಷ್ಟು ದೊಡ್ಡ ಸಾಗರದಂಥ ವ್ಯಕ್ತಿತ್ವವಿರಬೇಕು ಎಂದು ಅನಿಸುತ್ತಿದೆ. ಭಕ್ತಿಯಿಂದ, ಶ್ರದ್ಧೆಯಿಂದ, ಕುತೂಹಲದಿಂದ, ಹುಳುಕಿನಿಂದ, ಹಠದಿಂದ ಯಾವ ಭಾವ ಹೊತ್ತಾದರೂ ರಾಮಾಯಣದ ಒಳಹೊಕ್ಕ ಮನಸ್ಥಿತಿಗಳಿಗೆ ರಾಮಾಯಣ ಮತ್ತು ರಾಮ ನಿರಾಸೆಗೊಳಿಸಿಲ್ಲ. ಏನನ್ನಾದರೂ ಪಡೆದುಕೊಂಡೇ ಬಂದಿದ್ದಾರೆ.

ರಾಮ ಒಂದು ಆದರ್ಶ. ಆದರ್ಶದ ಬೆನ್ನು ಹತ್ತಬಹುದೇ ಹೊರತು ಆದರ್ಶವಾಗಿ ಬದುಕುವುದು ಕಷ್ಟ. ಆ ದಾರಿಯಲ್ಲಿ ಸಾಗುವ ಹುಮ್ಮಸ್ಸು ತೋರುವುದೇ ದೊಡ್ಡ ಜಯ. ಅಪೆಂಡಿಕ್ಸ್ ಆಪರೇಷನ್ ಆಗಿ ಆಸ್ಪತ್ರೆ ಯಲ್ಲಿ ಮಲಗಿದ್ದಾಗ ನೋಡಲೆಂದು ಒಳಬಂದ ಏಳುವರ್ಷದ ಮಗಳು ‘ನೀನಿಲ್ಲದೇ ಒಬ್ಬಳೇ ಮಲಗಲು ಭಯ’ ಎಂದು ಅತ್ತಾಗ ಅರಿವಿಲ್ಲದೇ ಬಾಯಿಂದ ಬಂದ ಮಾತೇ ‘ರಾಮ ರಾಮ ಅಂತ ಹೇಳ್ತಾ ಮಲಕ್ಕೊ, ಧೈರ್ಯ ಬರುತ್ತೆ.’ ಎಂದು. ಈ ಮಾತಿಗೆ ದಶಕಗಳೇ ಸಂದರೂ ರಾಮನಾಮ ಹಚ್ಚಿದ ಹಣತೆ ಬೆಳಗುತ್ತಲೇ ಇದೆ. ಈ ಪರಂಪರೆ ಮುಂದುವರೆಯಬಹುದೇನೋ! ಏಕೆಂದರೆ ರಾಮ ಎನ್ನುವ ಹೆಸರು ಮೂಡಿಸಿದ ಅಭಯ ಅಂತಹುದು.

ಇಂದಿಗೂ ಹೊರ ಕಣ್ಣುಗಳಿಗೆ ರಾಮನ ಹೆಸರಿನೊಂದಿಗೆ ಥಳುಕು ಹಾಕಿದ ನೂರಾರು ವಿದ್ಯಮಾನಗಳಿದ್ದರೂ ಮನಸ್ಸೀಗ ಅಷ್ಟೇ ‘ರಾಮ ರಾಮ’ ಅಂಜಿಕೆ ಹೊರ ದೂಡುವ ನಾಮವಾಗಿ ಭದ್ರವಾಗಿದೆ. ಈ ಹೊತ್ತಿನಲ್ಲಿ ರಾಮ ಎಂದರೆ ಸಹಿಸುವಿಕೆ! ಎಲ್ಲರನ್ನೂ ಎಲ್ಲವನ್ನೂ ಸಹಿಸುವಿಕೆ. ಇಲ್ಲಿ ಸಹಿಸದೇ ದಹಿಸದೇ ಬಂಧವಿಲ್ಲ ಎಂದು ಸಾರಿದವನು. ನೂರು ಪ್ರಶ್ನೆಗಳನ್ನು ತಾನು ಕೊಡದೇ ಹೋದ ಉತ್ತರಗಳ ಭಾರವನ್ನು, ನಿರಂತರ ಹುಟ್ಟುವ ನಿರೀಕ್ಷೆಗಳ ಸಹಿಸುವಿಕೆಯೇ ರಾಮ! ಅಚ್ಚರಿಯೆಂದರೆ ಹೊರಗಿನ ಅಬ್ಬರದ ರಾಮ ಒಳಮೂಡಲೇ ಇಲ್ಲ. ಹಾಗಾಗಿ ಪಾನಕದ ರಾಮ ಮತ್ತು ಭೀಮಸೇನ ಜೋಶಿಯವರು ಹಾಡಿ ಮೈಮರೆಸಿದ ‘ಸುಮತಿ ಸೀತಾರಾಮ’, ‘ಕೃಪಾ ಸರೋವರದ’ ‘ರಾಮ’ ಮಾತ್ರ ಮನದಲ್ಲಿ ಹಸಿರಾಗಿದ್ದಾನೆ. ಭದ್ರವಾಗಿದ್ದಾನೆ.

* ಪರಿಚಯ : ಬೆಂಗಳೂರಿನಲ್ಲಿ ನೆಲೆಸಿರುವ ಡಾ. ದೀಪಾ ಫಡ್ಕೆ ಅವರು ಮೂಲತಃ ದಕ್ಷಿಣಕನ್ನಡದ ಬೆಳ್ತಂಗಡಿಯವರು. ನಿರೂಪಕಿ, ಕಥೆಗಾರ್ತಿ, ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ‘ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ’ ಎನ್ನುವ ವಿಷಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡಿದ್ದಾರೆ. ‘ಋತ’, ’ಹರಪನಹಳ್ಳಿ ಭೀಮವ್ವ’, ‘ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ’, ’ಲೋಕಸಂವಾದಿ’ (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿ ರಚಿಸಿದ್ದಾರೆ.

ಇದನ್ನೂ ಓದಿ : Ramanavami : ಯಕ್ಷಗಾನದ ವೇಷ ಕಳಚಿದಂತೆ ವೇಷ ಕಳಚಬಹುದೇ ರಾಮ?

ramanavami special write up by writer deepa phadke

Published On - 5:52 pm, Wed, 21 April 21

Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ