Ripped Jeans; ತೀರಥ್ ಸಿಂಗ್ ಅವರಿಗೊಂದು ಪತ್ರ: ಬಸ್ಸಿನಲ್ಲಿ ಹಿಂದಿನ ಸೀಟಿನಿಂದ ತಡಕಾಡುವ ಕಾಲುಕೈಗಳಿಗೆ ಏನು ಹೇಳುತ್ತೀರಿ?
‘ಮಹಾವೀರನನ್ನು ನೋಡಿ ಕೆಟ್ಟ ಯೋಚನೆ ನಮಗೆ ಬರುವುದೇ ಹಾಗಾದರೆ ನಮ್ಮ ಆಲೋಚನಾ ರೀತಿಯಲ್ಲಿ ತಪ್ಪಿದೆ, ನೋಟದಲ್ಲಿ ತಪ್ಪಿದೆ ಅಲ್ಲವೇ? ನಿಜ ನಮ್ಮ ನೋಟ ಯೋಚನೆ ಬರೀ ದೇಹ ಅಂಗಾಂಗದ ಸುತ್ತ ಸುತ್ತುತ್ತಿರುವುದರಿಂದ ಎಲ್ಲಾ ಸಮಸ್ಯೆಗಳು ಹುಟ್ಟಿಕೊಂಡಿರುವುದು ಎಂಬುದೂ ಸತ್ಯ. ಯಾಕೆಂದರೆ ನಾವು ಅದನ್ನು ಮೀರಿ ಹೃದಯದೊಳಕ್ಕಿಳಿದು ನೋಡುವ ಪ್ರಯತ್ನವನ್ನು ಮಾಡುವುದೇ ಇಲ್ಲ. ನಮ್ಮದೇನಿದ್ದರೂ ಅಂಗಾಂಗ ಮೈಮಾಟದ ಸುತ್ತಲೇ ಯೋಚನಾ ಲಹರಿ ಸುತ್ತುವುದರಿಂದ ಅಲ್ಲೇ ಎಲ್ಲವನ್ನೂ ಅಳೆದುಬಿಡುತ್ತೇವೆ.‘ ಜ್ಯೋತಿ ಇರ್ವತ್ತೂರು
ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?
ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.
ಪರಿಕಲ್ಪನೆ : ಶ್ರೀದೇವಿ ಕಳಸದ
ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ ಜ್ಯೋತಿ ಇರ್ವತ್ತೂರು.
ತೀರಥ್ ಸಿಂಗ್ ಅವರೇ,
ಒಂದು ಹೇಳಿಕೆಯನ್ನೇನೋ ಕೊಟ್ಟಿರಿ. ನಿಜ, ಅದು ನಿಮ್ಮ ಅಭಿಪ್ರಾಯ. ನಿಮಗೆ ನಿಮ್ಮ ಅಭಿಪ್ರಾಯವನ್ನು ಮಂಡಿಸುವ ಹಕ್ಕಿದೆ. ಯಾವುದು ಸರಿ ತಪ್ಪು ಎಂಬುದು ನಾವು ತೀರ್ಪು ಕೊಡುವ ಮಟ್ಟಿಗಂತೂ ನಾನು ಬೆಳೆದಿಲ್ಲ. ಆದರೆ ಹೇಳಿಕೆಯ ಹಿಂದಿರುವ ಉದ್ದೇಶವೇನು ಎಂಬುದು ಕೂಡ ಅತ್ಯಂತ ಪ್ರಮುಖ ಮತ್ತು ಪ್ರಸ್ತುತವಾಗುತ್ತದೆ. ಆದರೆ ನಾನೂ ನನ್ನ ಅಭಿಪ್ರಾಯವನ್ನು ಹೀಗೆ ಮಂಡಿಸಬಲ್ಲೆ.
ಸಂಸ್ಕಾರವೆಂದರೆ ಏನು ಎಂಬುದು ನನ್ನನ್ನು ಕಾಡುವ ಪ್ರಶ್ನೆ. ಎಲ್ಲವು ಕೂಡ ನಾವು ನೋಡುವ ರೀತಿಯನ್ನು ಅವಲಂಬಿಸಿರುತ್ತದೆ. ಸಂಸ್ಕಾರಕ್ಕೆ ನಾವು ನಮ್ಮದೇ ವ್ಯಾಖ್ಯಾನವನ್ನು ಕೊಡುತ್ತಲೇ ಬಂದಿದ್ದೇವೆ. ಮಹಾವೀರನನ್ನು ನೋಡಿ ಕೆಟ್ಟ ಯೋಚನೆ ನಮಗೆ ಬರುವುದೇ ಹಾಗಾದರೆ ನಮ್ಮ ಆಲೋಚನಾ ರೀತಿಯಲ್ಲಿ ತಪ್ಪಿದೆ, ನೋಟದಲ್ಲಿ ತಪ್ಪಿದೆ ಅಲ್ಲವೇ? ನಿಜ ನಮ್ಮ ನೋಟ ಯೋಚನೆ ಬರೀ ದೇಹ ಅಂಗಾಂಗದ ಸುತ್ತ ಸುತ್ತುತ್ತಿರುವುದರಿಂದ ಎಲ್ಲಾ ಸಮಸ್ಯೆಗಳು ಹುಟ್ಟಿಕೊಂಡಿರುವುದು ಎಂಬುದೂ ಸತ್ಯ. ಯಾಕೆಂದರೆ ನಾವು ಅದನ್ನು ಮೀರಿ ಹೃದಯದೊಳಕ್ಕಿಳಿದು ನೋಡುವ ಪ್ರಯತ್ನವನ್ನು ಮಾಡುವುದೇ ಇಲ್ಲ. ನಮ್ಮದೇನಿದ್ದರೂ ಅಂಗಾಂಗ ಮೈಮಾಟದ ಸುತ್ತಲೇ ಯೋಚನಾ ಲಹರಿ ಸುತ್ತುವುದರಿಂದ ಅಲ್ಲೇ ಎಲ್ಲವನ್ನೂ ಅಳೆದುಬಿಡುತ್ತೇವೆ.
ನಿಜ, ನಿಮ್ಮ ಹೇಳಿಕೆಯ ನಂತರ ವಿವಿಧ ರೀತಿಯಲ್ಲಿ ದೇಶಾದ್ಯಂತ ವಿವಿಧ ರೀತಿಯ ಚರ್ಚೆಗಳು ವಾದವಿವಾದಗಳು ನಡೆಯುತ್ತಲೇ ಇದೆ. ಆದರೆ ಇದರಿಂದ ಜನರ ಜೀವನದಲ್ಲಿ ಏನಾದರೂ ಸುಧಾರಣೆಯಾಗಿದೆಯಾ ಅಂತ ನೋಡಿದರೆ ಯಾವ ರೀತಿಯ ಸುಧಾರಣೆಯೂ ಆಗಿಲ್ಲ ಅನ್ನೋದು ನಿಜ. ಇಂತಹ ಹೇಳಿಕೆಗಳು ಪ್ರತಿ ಬಾರಿ ಸದ್ದುಗದ್ದಲವನ್ನೆಬ್ಬಿಸಿ ಮರೆಯಾಗುತ್ತಿದೆ. ಇದು ಮೊದಲ ಬಾರಿ ಇಂತಹ ಹೇಳಿಕೆಗಳು ಸದ್ದುಗದ್ದಲವನ್ನು ಎಬ್ಬಿಸುತ್ತಿರುವುದಲ್ಲ. ಹಲವು ಬಾರಿ ಇಂತಹ ಹೇಳಿಕೆಗಳನ್ನು ನೀಡಲಾಗಿದೆ. ಚರ್ಚೆಯನ್ನು ಕೂಡ ಮಾಡಲಾಗಿದೆ. ಆದರೆ ಇದರಿಂದ ಆದ ಪ್ರಯೋಜನವೇನು? ನನ್ನ ಪ್ರಕಾರ ಯಾವುದೇ ಹೇಳಿಕೆ ಚರ್ಚೆಗಳು ಬದಲಾಣೆಯ ಗಾಳಿ ಬೀಸುವಂತೆ ಮಾಡಬೇಕು ಅದರಿಂದ ಜನರಿಗೆ ಏನಾದರೂ ಪ್ರಯೋಜನವಾಗಬೇಕು. ಪ್ರಖರವಾದಿಗಳ ದಾಳಿ, ಗೊಂದಲ ಉತ್ತರವಲ್ಲ. ನಾಗರಿಕ ಸಮಾಜಕ್ಕೆ ಬೇಕಾಗಿರುವುದು ಸುಧಾರಣೆ ಮತ್ತು ನೆಮ್ಮದಿಯ ಬದುಕು.
ಶಾಲಾ ಕಾಲೇಜಿಗೆ ಹೋಗೋ ಸಂದರ್ಭದಲ್ಲಿ ಮುಖಾಮುಖಿಯಾದ ಸಂದರ್ಭದಲ್ಲಿನ ಕೆಲ ಘಟನೆಗಳನ್ನು ಪ್ರಸ್ತಾವಿಸಬೇಕೆಂದು ಅನಿಸುತ್ತಿದೆ. ರಾತ್ರಿಯಿರಲಿ ಹಗಲಿರಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂದೆ ಕೂತವರ ಕಾಲು ಕೈ ನಮ್ಮ ಮೈಯನ್ನು ಸ್ಪರ್ಶಿಸಲು ಮಾಡುತ್ತಿದ್ದ ಪ್ರಯತ್ನ ಇನ್ನೂ ಹಾಗೆ ನೆನಪಿದೆ. ಹಳ್ಳಿಯಲ್ಲಿ ಹುಟ್ಟಿದ ನಮ್ಮದು ನಾಚಿಕೆಯ ಸ್ವಭಾವ ಯಾರ ಬಳಿಯೂ ಹೇಳಲಾರದ ಸ್ಥಿತಿ. ಮನಸ್ಸಿನೊಳಗೆ ಎಲ್ಲವನ್ನು ಅನುಭವಿಸಿ ಮುದುಡಿ ಕೂತು ಪ್ರಯಾಣಿಸುತ್ತಿದ್ದ ಸಂದರ್ಭ. ಇಂತಹ ಹಲವು ಘಟನೆಗಳು ಖಂಡಿತವಾಗಿ ಸದ್ದಿಲ್ಲದೆ ಇನ್ನೂ ನಡೆಯುತ್ತಲೇ ಇರಬಹುದು. ಇಂತಹ ಘಟನೆಗಳನ್ನು ವಿರೋಧಿಸಬೇಕೆಂಬ ಅರಿವನ್ನು ಕೊಡುವ ಕುರಿತು ನಮ್ಮ ಚರ್ಚೆಗಳು ಶುರುವಾಗಬೇಕು ಅಂತ ನನಗನ್ನಿಸುತ್ತಿದೆ. ಮುಟ್ಟೆಂದರೆ ಏನು ಅನ್ನುವುದರ ಅರಿವಿಲ್ಲದ ಮನಸ್ಸುಗಳ ಮಧ್ಯೆ ಕಾಮುಕತೆಯ ಅಟ್ಟಹಾಸಕ್ಕೆ ಬಲಿಯಾಗುತ್ತಿರುವ ಕಂದಮ್ಮಗಳನ್ನು ಕಾಪಾಡುವ ಕಡೆಗೆ ಚರ್ಚೆಗಳು ಕೇಂದ್ರೀಕೃತಗೊಳ್ಳಲಿ.
ಹಾಗಂತ ಬಿಂದಾಸ್ ಬಟ್ಟೆ ಹಾಕಿದರೇನೇ ನಾವು ಮಾಡರ್ನ್ ಅನ್ನೋ ಮನೋಭಾವವನ್ನು ನಾನು ಆದರಿಸುತ್ತೇನೆ ಅನ್ನೋದು ಕೂಡ ಅರ್ಥವಲ್ಲ ಅಥವಾ ನನ್ನ ವಾದದಿಂದ ಆ ಮನೋಭಾವದವರು ಬದಲಾಗುವರೇ? ಯಾವುದು ಸರಿ ಯಾವುದು ತಪ್ಪು ಅನ್ನೋದೇ ನನಗೆ ತಿಳಿಯದ ಮತ್ತು ನಾನು ಇನ್ನೂ ಅರ್ಥ ಮಾಡಿಕೊಳ್ಳಲಾರದ ಮನಸ್ಥಿತಿ. ಮನಸ್ಸು ಹೃದಯ ಈಗ ಹೇಗೆ ಮಾಗಿದೆಯೆಂದರೆ ಬೆತ್ತಲೆಯ ಕುರಿತ ಚಿಂತನೆ ಮಹಾವೀರನ ನಗ್ನತೆ ನೋಡಿ ವೈರಾಗ್ಯದ ಭಾವ ಮೂಡುವವರೆಗೆ. ಹಾಗಂತ ಎಲ್ಲರ ಭಾವನೆಯೂ ಹಾಗಿರಬೇಕೆಂತ ಇಲ್ಲ. ಹಾಗೆಂದು ಹಾಗೆ ತಿರುಗಬೇಕೆಂಬ ವಾದವೂ ಅಲ್ಲ. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿದು ಸಾಗುವ ಹೊತ್ತಿನಲ್ಲಿ ಹೆಚ್ಚೇನೋ ಬರೆಯಬೇಕೆಂದು ತೋಚುತ್ತಿಲ್ಲ.
ಕೊನೆಯದಾಗಿ ಯಾವುದೇ ಹೇಳಿಕೆಯೂ ಅಂತಿಮವಲ್ಲ. ಅಭಿಪ್ರಾಯಗಳು ಯಾವಾಗಲೂ ಎರಡು ಮುಖವನ್ನು ಖಂಡಿತ ಹೊಂದಿರುತ್ತದೆ. ಸರಿ ತಪ್ಪು ಎಂಬುದರ ನಡುವೆ ಅದು ಗಿರಕಿ ಹೊಡೆಯುತ್ತಲೇ ಇರುತ್ತದೆ. ಮುಂದೆಯೂ ಕೂಡ.
ಇದನ್ನೂ ಓದಿ : Ripped Jeans; ತೀರಥ್ ಸಿಂಗ್ ಅವರಿಗೊಂದು ಪತ್ರ: ಗಾಜಿನ ಛಾವಣಿಯನ್ನು ಮುರಿಯುತ್ತಲೇ ಇರ್ತೀವಿ
Published On - 5:54 pm, Sun, 21 March 21