Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ: ‘ನೀವು ಟೀಚರ್ ಅಂತ ಹೆಂಗ್ ಗುರ್ತ್ ಹಿಡೀತಾವು ಹುಡ್ರು?’

|

Updated on: Mar 21, 2021 | 12:53 PM

‘ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚೂಡಿ ಹಾಕಿಕೊಂಡು ಹೋದರೆ, ಪರಿವೀಕ್ಷಕರಲ್ಲಿ ಒಬ್ಬರು ಏಕವಚನಾಮೃತದಲ್ಲಿ, ನೀ ಟೀಚರಾ? ಅಂದರು. ಒಮ್ಮೆ ತಾಲೂಕಾಫೀಸಿಗೆ ಹೋದಾಗ ಮ್ಯಾನೇಜರು, ನೀ ಟೀಚರ್ ಹಂಗ ಕಾಣ್ಸೋಲ್ಲ ಅಂದು ಅರ್ಜಿಗೆ ಸಹಿ ಹಾಕದೆ ಅರ್ಧ ದಿನ ಕಾಯಿಸಿದರು. ಇನ್ನು ಸೀರೆಯ ಕಾರಣಕ್ಕೆ ಕಾಡಿದ ಹೆಣ್ಮಕ್ಕಳ ಸಂಖ್ಯೆ ಗಂಡ್ಮಕ್ಕಳಿಗಿಂತ ದೊಡ್ಡದು. ಕೆಲವರು ಜೊತೆಗಿರುವುದು ಅವಮಾನವೆಂದುಕೊಂಡರು. ಮಾತೇ ನಿಲ್ಲಿಸಿದರು. ನಿಲ್ಲಿಸಲಿ ಬಿಡಿ! ಇಂಥ ಪಿತೃಪ್ರಭುತ್ವದ, ದ್ವೇಷಪೂರಿತ ನಡಾವಳಿಗಳನ್ನು ನಾನಂತೂ ತಿರುಗಿ ನೋಡುವುದಿಲ್ಲ.‘ ಶಿವಲೀಲಾ ಮಲ್ಲಿಕಾರ್ಜುನಪ್ಪ

Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ: ನೀವು ಟೀಚರ್ ಅಂತ ಹೆಂಗ್ ಗುರ್ತ್ ಹಿಡೀತಾವು ಹುಡ್ರು?
ಶಿವಲೀಲಾ ಮಲ್ಲಿಕಾರ್ಜುನಪ್ಪ
Follow us on

ನೀವೀಗ ಬಸ್ಸೋ, ರೈಲೋ, ವಿಮಾನವೋ ಏನೋ ಒಂದು ಏರಿ ಕುಳಿತುಕೊಳ್ಳುತ್ತೀರಿ. ನಿಮ್ಮ ಅಕ್ಕಪಕ್ಕದವರ ಬಗ್ಗೆ ಮನುಷ್ಯ ಸಹಜ ಕುತೂಹಲದ ನೋಟ ಹರಿಸುತ್ತೀರಿ; ನಿಮ್ಮದು ಯಾವ ಊರು, ಏನು ಕೆಲಸ, ಎಲ್ಲಿಗೆ ಹೊರಟಿದ್ದೀರಿ… ಸಾಗಿದ ಮಾತು ಎಲ್ಲಿಂದೆಲ್ಲಿಗೆ ಬಂದು ನಿಲ್ಲುತ್ತದೆ ಅಥವಾ ತುಂಡರಿಸಿಕೊಳ್ಳುತ್ತದೆ ಎನ್ನುವುದು ನಿಮ್ಮ ನಿಮ್ಮ ಗುಣ, ಸ್ವಭಾವ, ಅಭಿರುಚಿ, ಆಸಕ್ತಿ ಮತ್ತು ದೃಷ್ಟಿಕೋನಗಳ ಮೇಲೆ ನಿಲ್ಲುತ್ತದೆ. ಸಿಕ್ಕ ಒಂದು ಸಮಾನ ತಂತು ಸಹಜವಾಗಿ ಸಂಧಿಸಿದರೆ ಪ್ರಯಾಣ ಚೇತೋಹಾರಿ. ಇಲ್ಲವಾದರೆ ಇಳಿದ ಮೇಲೆ ಅವರ್ಯಾರೋ ನಾವ್ಯಾರೋ. ಅದು ಅಷ್ಟಕ್ಕೇ ಮುಗಿದರೆ ಸರಿ. ಆದರೆ ಸಹಪ್ರಯಾಣಿಕರು ಇಳಿದು ಹೋದಮೇಲೆಯೂ ಅವರ ವೈಯಕ್ತಿಕ ಸಂಗತಿ ಅಥವಾ ಅಭಿಲಾಷೆಗಳ ಬಗ್ಗೆ ಅನವಶ್ಯಕವಾಗಿ ನೀವು ‘ಕತ್ತರಿ’ಯಾಡಿಸಿದರೆ? ಇದು ಮಾನವೀಯತೆಯೇ, ಸಂಸ್ಕಾರವೇ?

ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತಿರತ್ ಸಿಂಗ್ ಅವರೇ, ನಮ್ಮ ದೇಶದ ಯುವಜನತೆ Ripped Jean (ಹರಿದ ಜೀನ್ಸ್​) ತೊಡುವ ಬಗ್ಗೆ ನೀವು ನಿಮ್ಮ ಅಭಿಪ್ರಾಯ ಹೇಳಿದ್ದೀರಿ. ನಮ್ಮ ಬರಹಗಾರರು ಅನುಭವಿಸಿದ ಗಳಿಗೆಗಳಿಗೆ ಜಾರಿ ವಾಸ್ತವಕ್ಕೆ ಬಂದು ನಿಮಗೆ ಪತ್ರಸ್ಪಂದನ ಮಾಡಿದ್ದಾರೆ.  

ಪರಿಕಲ್ಪನೆ : ಶ್ರೀದೇವಿ ಕಳಸದ

ಹನ್ನೊಂದು ವರ್ಷಗಳಿಂದ ಕೊಪ್ಪಳದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ, ಧಾರವಾಡ ಮೂಲದ ಶಿವಲೀಲಾ ಮಲ್ಲಿಕಾರ್ಜುನಪ್ಪ ಅವರ ಪತ್ರ ಇಲ್ಲಿದೆ.

ನಮಸ್ಕಾರ.

ಒಂದು ದಿನ ತರಬೇತಿ ನಡೀತಿತ್ತು. ಒಬ್ಬ ವಯಸ್ಸಾದ ಶಿಕ್ಷಕಿ ನನ್ನನ್ನು ಹೊರಗೆ ಕರೆದು, ‘ನೀ ಹಿಂಗ ಚೂಡಿ  ಹಾಕೊಂಬಂದ್ರ ನಮಗ ಲೇಡಿ ಟೀಚರ್ಸಿಗೆ ಮುಜುಗರ ಆಕ್ಕೈತಿ. ನಾಳಿಂದ ಸೀರಿ ಹಾಕೊಂಬಾ’ ಅಂದ್ರು. ನಾನು ಪಾಪ ಅನ್ನುವಂತೆ ನೋಡಿ ನಕ್ಕು, ‘ನೀವು ಅಷ್ಟೂರು ಸೀರಿ ಹಾಕೊಂಡಿರದು ನನಗ ಒಂಚೂರೂ ಸಮಸ್ಯೆ ಕೊಟ್ಟಿಲ್ಲ. ನಿಮ್ ಸಮಸ್ಯೆ ಯಾವ್ ಸೀಮೀದು?’ ಅಂದು ಒಳಬಂದಿದ್ದೆ.

ಹೆಣ್ಣುಮಕ್ಕಳಿಗೆ ಎಷ್ಟೊಂದು ಸಂಹಿತೆಗಳು. ಬಟ್ಟೆ, ಓದು, ಹುಟ್ಟು, ಮದುವೆ ಎಲ್ಲದಕ್ಕೂ. ಊಟ, ಉಸಿರಾಟಕ್ಕೂ ನಿಯಮಗಳು. ಅವಕಾಶ ಸಿಕ್ಕರೆ ಸಾಕು ಎದುರಾದವರೆಲ್ಲ ಒಂದು ಕೈ ನೋಡಿ ಬಿಡುವ ನೈತಿಕ ಪೋಲೀಸರು. ನಮ್ಮ ಪಾಡಿಗೆ ನಮ್ಮನ್ನ ಬಿಡುವ ಮನುಷ್ಯರು ಸಿಕ್ಕುವುದೇ ಕಷ್ಟ. ಬಹುತೇಕ ಮುಖಗಳು ಹುಬ್ಬು ಹಾರಿಸಿ, ಹುಬ್ಬು ಗಂಟಿಕ್ಕಿಕೊಂಡು ಹೊರಡೋವೇ. ಅದರಲ್ಲೂ ಉತ್ತರ ಕರ್ನಾಟಕದ ಸಣ್ಣ ಊರಲ್ಲಿ ಹುಟ್ಟಿದ ನನ್ನಂಥವಳಿಗೆ ಹುಟ್ಟೇ ಒಂದು ಸಂಹಿತೆಯಾಗುವ ತಾಪ ತಟ್ಟೇ ಇರುತ್ತದೆ.

ಹುಡುಗಿ ಸೈಕಲ್ ಹೊಡೆಯಬಾರದು, ಈಸು ಕಲಿಯಬಾರದು, ಕೊನೆಗೆ ತಲೆಸ್ನಾನ ಮಾಡಿ ಕೂದಲು ಹರವಿಕೊಳ್ಳಲೂಬಾರದು. ಕದ್ದು ಸೈಕಲ್ ಹೊಡೆದಾಗ ಎಷ್ಟೊಂದು ಜನ ಖಾಕಿರಹಿತ ದೂರುದಾರ ಪೊಲೀಸರು. ಹೊಲ, ಮನೆ ಅಂತ ಪುರುಸೊತ್ತಿಲ್ಲದ ನಮ್ಮವ್ವನಿಗೆ, ಈ ಕೊಳೆತ ಮಿದುಳುಗಳಿಗಿಂತ ಸಿಕ್ಕಾಪಟ್ಟೆ ಉದಾರಿಯಾದ ನಮ್ಮವ್ವನಿಗೆ ಸಿಟ್ಟು ಬರುತ್ತಿತ್ತು. ‘ಅಕಿ ಇನ್ನೇನು ಹದ್ನಾರ್ ವಾರಿ ಸೀರಿ ಸುತ್ಕೊಂಡು ನಮ್ ಅಮ್ಮನಂಗ ಇರ್ಬೇಕನು? ಅಕಿ ಗೆಳತ್ಯಾರ್ ಮಾಡಿದ್ ಮಾಡ್ತಾಳ’ ಅಂತ ಬಯ್ದ ಎರಡನೇ ಇಯತ್ತೆ ಓದಿದ ನಮ್ಮವ್ವನ ಕುರಿತು ಈಗ ನನಗೆ ಹೆಮ್ಮೆ.

ಎಲ್ಲರೂ ಹೊರಿಸೋ ನೀತಿ-ನೇಮ ಪಾಲಿಸುವುದ ರಕ್ತಗತವಾಗಿಸಿಕೊಳ್ಳುವುದನ್ನು ನಮಗೆ ಕಲಿಸಲಾಗಿರತ್ತಲ್ಲ? ಅದು ನಮ್ಮ ಗುಣವೇ ಆಗಿ ಹೋಗುತ್ತದೆ. ಆದರೆ ಈ ಊಟ,ಬಟ್ಟೆ, ಬೊಟ್ಟು,ಸಂಪ್ರದಾಯ ನನಗೆ ಕಾಟ ಕೊಟ್ಟಿದ್ದು ತುಂಬಾ ಕಡಿಮೆ. ಕಾಟಗಳು ಶುರುವಾಗಿದ್ದು ಸಮಾಜದ ಅಷ್ಟೂ ಸಂಸ್ಕೃತಿ,ಮೌಲ್ಯ ರಕ್ಷಣೆಯ ಹೊಣೆ ಹೊತ್ತ(ಹೊರಿಸಿದ) ಕನ್ನಡ ಸಾಲಿ ಟೀಚರ್ ಆದಮೇಲೇಯೇ! ಹೊರಿಸಿದ್ದೆಲ್ಲ ಹೊರಲೇಬೇಕು. ಅದರಲ್ಲಿ ನನಗೆ ಬೇಸಿಗೆ ಕಾಲ ಬಂದರೆ ಸೀರೆ ಸಹವಾಸ ಸಾಕು ಅನ್ನಿಸೋದು. ಉಸಿರಾಟಕ್ಕೆ ಕಷ್ಟವಾಗೋದು. ಯಾಕೆ ಅನುಕೂಲಕ್ಕೆ, ಕಾಲಕ್ಕೆ ತಕ್ಕಂತೆ ಬಟ್ಟೆ ಹಾಕಲಾಗುತ್ತಿಲ್ಲ. ಒಂದು ಚೂಡಿದಾರ್ ಆದರೂ ಹಾಕಲು ಬಿಡಬಾರದೇ? ಅನ್ನಿಸೋದು.

ಹುಷಾರಿಲ್ಲದಾಗ, ಅದರಲ್ಲೂ ಮುಟ್ಟಿನ ಹೊಟ್ಟೆನೋವಿರುವ ನನ್ನಂಥ ಕೆಲವರಿಗಾದರೂ ನಾಕ್ ದಿನ ಬೇಕಾದ ಬಟ್ಟೆ ಧರಿಸಲು ಅವಕಾಶ ಸಿಗಬಾರದೇ ಅನಿಸೋದು. ಸಿಸೇರಿಯನ್ ಆದ ಗೆಳತಿ, ಪರಕಾರ್ ಕಟ್ಟಾಕೂ ಆಗಾತಿಲ್ಲ, ನಾಕ್ ದಿನಾ ಸಲ್ವಾರ್ ಹಾಕಬೇಕಂದ್ರ ಹೆಡ್ಮಾಷ್ಟ್ರು ಬಿಡವಾಲ್ರು’ ಅಂತ ಗೋಳಾಡಿದ್ದಳು. ಅಷ್ಟೊಂದು ಕಷ್ಟಪಟ್ಟು ಪಾಲಿಸಬೇಕಾದ ನಿಯಮವಾ ಇದು? ಅಂತ ಪ್ರಶ್ನೆ ಹುಟ್ಟೋದು. ಹಾಗೆ ನೋಡಿದರೆ ಇಲಾಖೆಯಲ್ಲಿ ವಸ್ತ್ರ ಸಂಹಿತೆ ಕುರಿತ ಯಾವುದೇ ನಿಯಮಗಳೇ ಇಲ್ಲ. ಇದೆಲ್ಲ ಇಲ್ಲಿನ ಸೋ ಕಾಲ್ಡ್ ನೈತಿಕ ಪೊಲೀಸರು ಮಾಡಿದ ನಿಯಮಾವಳಿಗಳು ಅಂತ ಗೊತ್ತಾಯಿತು. ಸರಿ ಮೊದಲ ದಿನ ಚೂಡಿದಾರ್ ಹಾಕಿ ಮಕ್ಕಳ ಜೊತೆ ನಿರುಮ್ಮಳವಾಗಿ ಖೋಖೋ ಆಡಿದೆ. ಆ ಕಂಫರ್ಟನ್ನು ಬಿಡಲಾಗಲೇ ಇಲ್ಲದಷ್ಟು ಒಗ್ಗಿ ಹೋಯಿತು. ನಾನು ಹೇಳಿದ ತೊಂದರೆ ಶುರುವಾಗಿದ್ದೇ ಈಗ.

ಕೊಪ್ಪಳದ ಮಕ್ಕಳೊಂದಿಗೆ ಶಿವಲೀಲಾ ಟೀಚರ್

‘ನೀವು ಟೀಚರ್ ಅಂತ ಹೆಂಗ್ ಗುರ್ತ್ ಹಿಡೀತಾವು ಹುಡ್ರು?’ ‘ನಿಮಗ ಸೀರಿ ಚೆಂದ ಕಾಣತ್ತ’, ‘ಛೀ, ಗಾಳಿ ಬಿಟ್ರ ಟಾಪ್ ಮ್ಯಾಲೆ ಹಾರತ್ತ’ ಏನೆಲ್ಲ ಊಹಿಸಿದರು, ಅಂದರು. ಅರ್ಥ ಮಾಡಿಸಲು ನಾನು ತಿಣುಕಾಡಲಿಲ್ಲ. ನಕ್ಕು ಬಂದೆ. ಕೊನೆಗೆ ಸರ್ಕಾರ ಸರ್ಕಾರಿ ನೌಕರರಿಗಾಗಿ ಹೊರಡಿಸಿದ್ದ ವಸ್ತ್ರಸಂಹಿತೆಯನ್ನ ಹಿಂಪಡೆಯಿತು. ಈಗೀಗ ಸಲ್ವಾರ್ ತೊಟ್ಟ ಕೆಲವು ಹುಡುಗಿಯರು ಆಫೀಸಿನಲ್ಲಿ ಕಂಡಾಗ ಹೆಚ್ಚು ಖುಷಿಪಡುತ್ತೇನೆ. ನಮಗೆ ಬೇಕಾಗಿ ಉಂಡುಟ್ಟು ಸಂಭ್ರಮಿಸುವುದಕ್ಕೂ ಯಾರೋ ತಲೆ ಮೇಲೆ ಕಾಲಿಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ.

ಸಾಮಾನ್ಯ ಜನ ಹೋಗಲಿ, ಒಂದು ಸಾಂವಿಧಾನಿಕ ಸ್ಥಾನದಲ್ಲಿರುವವರು, ಜಗತ್ತಿಗೆ ತೆರೆದುಕೊಂಡವರು ನೀವಲ್ಲವೇ ಮಾನ್ಯಮುಖ್ಯಮಂತ್ರಿಗಳೇ? ನೀವು ನಿಮ್ಮಂಥವರು ಮಾತಾಡಬೇಕಾದ ವಿಷಯಗಳು ಸಾಕಷ್ಟಿರುವಾಗ ಒಬ್ಬ ಹೆಣ್ಣುಮಗಳು Ripped Jeans ಹಾಕಿದ್ದನ್ನು ಅಣಕಿಸಿ ಮಾತಾಡಿರುವುದನ್ನು ನೋಡಿ ಏಕಕಾಲಕ್ಕೆ ಕೋಪ, ಕನಿಕರ ಆಯಿತು. ತಮ್ಮ ಬಟ್ಟೆಯಿಂದ ಹಿಡಿದು ಕೈಯ ಮೊಬೈಲಿನ ತನಕ ತಂತ್ರಜ್ಞಾನ ಸಮೇತ ವಿಶ್ವಮಾನವರಾದ ಇವರು ಹೆಣ್ಣುಮಕ್ಕಳ ಬಟ್ಟೆ ವಿಷಯ ಬಂದಾಗ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಹಿಡಿದಂತೆ ದಾಳಿ ಮಾಡುವುದು ಸಹ್ಯವಲ್ಲ. ಬಟ್ಟೆ ಆಯಾ ವ್ಯಕ್ತಿಯ ಆಯ್ಕೆ. ಅಲ್ಲಿನ ಹೆಣ್ಣು ಭ್ರೂಣಹತ್ಯೆ, ಮಹಿಳಾ ಅನಕ್ಷರತೆ, ಶಿಕ್ಷಣ, ವರದಕ್ಷಿಣೆ ಸಾವುಗಳ ಕುರಿತು ಇಷ್ಟೇ ಕಾಳಜಿ ತೋರಿಸಿದರೆ ಒಳ್ಳೆಯದಿತ್ತು. ಸಮಾಜದ ಮುಖ್ಯವಾಹಿನಿಯಲ್ಲಿರುವ ಕಾರಣಕ್ಕಾದರೂ ತಮ್ಮ ನಾಲಿಗೆಯನ್ನ ಉದಾರವಾಗಿಸಿಕೊಂಡರೆ ಉತ್ತಮ. ನಮ್ಮ ಭವ್ಯ ಭಾರತದ ಸಂಸ್ಕೃತಿ ಇನ್ನೂ ಹೆಣ್ಮಕ್ಕಳ ಬಟ್ಟೆ, ಹೈ ಹೀಲ್ಸು ಮತ್ತೊಂದೆಲ್ಲಿ ಅಡಗಿ ರಕ್ಷಣೆಗಾಗಿ ಬೇಡಿಕೊಳ್ಳುವುದು ನಿಲ್ಲಲಿ. ಇವರೆಲ್ಲ ಹುಡುಗಿಯರ ಸ್ಕರ್ಟ್ಸ್, ಶಾರ್ಟ್ಸ್, ರಿಪ್ಡ್ ಜೀನ್ಸ್ ಅನ್ನೂ ಮೀರಿ ಮಾತಾಡುವಷ್ಟು ಪ್ರಬುದ್ಧರಾಗಲಿ.

ಇದನ್ನೂ ಓದಿ : Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ : ಸ್ವರ್ಗದಿಂದ ನೇರಪ್ರಸಾರದಲ್ಲಿ ಝಾನ್ಸೀಯಜ್ಜಿಯೊಂದಿಗೆ ಸೌರಭಾ

Published On - 12:46 pm, Sun, 21 March 21