ಶರಣು ಮಣ್ಣಿಗೆ : ಹಸಿರಿಲ್ಲದೆ ಉಪವಾಸ ಬಿದ್ದ ಕಣ್ಣಿಗೆ ಖಿನ್ನತೆಗೆ ಜಾರಿದ ಮನಸ್ಸಿಗೆ ಕಂಡುಕೊಂಡ ಉಪಾಯವಿದು!

|

Updated on: Apr 25, 2021 | 2:17 PM

‘ಈಗ ಅಂಗಡಿಯಿಂದ ತರಕಾರಿ ತರುವುದು ಬಹಳವೇ ಕಮ್ಮಿಯಾಗಿದೆ. ಈ ತರಹದ ಅನೇಕ ಕಮ್ಯೂನಿಟಿ ಫಾರ್ಮಿಂಗ್‍ ಬಿಝಿನೆಸ್ ಮಾಡೆಲ್‍ಗಳು ಬೆಂಗಳೂರಲ್ಲಿ ತಲೆಯೆತ್ತಿವೆ. ನೀವು ಬಾಡಿಗೆಗೆ ತೆಗೆದುಕೊಂಡ ಜಾಗದಲ್ಲಿ ಬೆಳೆದದ್ದನ್ನು ನಿಮ್ಮ ಮನೆಯವರೆಗೆ ತಲುಪಿಸುವವರೂ ಇದ್ದಾರೆ. ರೈತನ ನೆಲವನ್ನು ಮತ್ತೊಂದು ಕಾರ್ಪೋರೇಟ್‍ ಕಂಪನಿ ಕಬಳಿಸುವ ಬದಲು ಇಂತಹುದಕ್ಕೆ ಜನ ಮುಂದೆ ಬಂದರೆ ರೈತರಿಗೂ ನಮಗೂ ಪರಸ್ಪರ ಅನುಕೂಲ.‘ ಸೌರಭಾ ಕಾರಿಂಜೆ

ಶರಣು ಮಣ್ಣಿಗೆ : ಹಸಿರಿಲ್ಲದೆ ಉಪವಾಸ ಬಿದ್ದ ಕಣ್ಣಿಗೆ ಖಿನ್ನತೆಗೆ ಜಾರಿದ ಮನಸ್ಸಿಗೆ ಕಂಡುಕೊಂಡ ಉಪಾಯವಿದು!
ಲೇಖಕಿ ಸೌರಭಾ ಕಾರಿಂಜೆ
Follow us on

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ಬೆಂಗಳೂರಿನಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ ಸೌರಭಾ ಕಾರಿಂಜೆ ಲೇಖಕಿಯೂ ಕಥೆಗಾರರೂ ಹೌದು. ಮಹಾನಗರಕ್ಕೆ ಬಿದ್ದ ಮೇಲೆ ಮನಸ್ಸು ದೇಹ ಹೇಗೆ ಹಸಿರಿಗಾಗಿ, ರಾಸಾಯನಿಕಮುಕ್ತ ತರಕಾರಿಗಳಿಗಾಗಿ ಚಡಪಡಿಸಿತು. ಕೊನೆಗದಕ್ಕೆ ಏನುಪಾಯ ಕಂಡುಕೊಂಡರು ಎಂಬುದು ನಿಮ್ಮ ಓದಿಗಾಗಿ.

*

ಚಿಕ್ಕವಳಿದ್ದಾಗ ಶಾಲೆಯ ಪ್ರಾಜೆಕ್ಟ್ ಒಂದಕ್ಕೆ ಅಲಸಂಡೆ ಬೆಳೆದದ್ದು ನನ್ನ ಮಣ್ಣಿನ ಜೊತೆಗಿನ ಅತ್ಯಂತ ಹಳೆಯ ನೆನಪುಗಳಲ್ಲಿ ಒಂದು. ಕೆಲವೇ ದಿನಗಳಲ್ಲಿ ಬೆಳೆದು ಕಾಯಿಗಳನ್ನು ಬಿಡುತ್ತಿದ್ದ ಅಲಸಂಡೆ ಗಿಡವನ್ನು ನೋಡಿ ಕುಣಿದು ಕುಪ್ಪಳಿಸಿದ್ದೆ. ನನ್ನ ಸಂತೋಷ ನೋಡಿ ನಮ್ಮಜ್ಜ ಖುಷಿಯಿಂದ ನಕ್ಕಿದ್ದರು.

ನನ್ನದು ಕೃಷಿಕ ಹಿನ್ನೆಲೆಯ ಕುಟುಂಬವೇ. ತಾಲೂಕು ಶಿಕ್ಷಣಾಧಿಕಾರಿಯೂ ಆಗಿದ್ದ ನನ್ನ ಅಜ್ಜ ಕೃಷಿಯನ್ನು ಬಿಟ್ಟಿರಲಿಲ್ಲ. ಸಣ್ಣ ಮಟ್ಟಿನ ಅಡಿಕೆ, ತೆಂಗು, ಬಾಳೆ, ಹೂತೋಟ ಅಂತ ಸದಾ ಗಿಡಗಳ ನಡುವೆ ಇದ್ದವರು. ಎರಡು ನದಿಗಳು ಸೇರಿ ನಮ್ಮ ತೋಟದ ಪಕ್ಕವೇ ಹರಿಯುವಂತಹ ಸಮೃದ್ಧ ಬಾಲ್ಯ. ಮಳೆಗಾಲದಲ್ಲಿ ತುಂಬಿ ಹರಿದು ತೋಟವನ್ನು ಇನ್ನೇನು ಆಪೋಶನ ತೆಗೆದುಕೊಳ್ಳುವೆ ಎನ್ನುವಂತೆ ಉಕ್ಕುವ ನದಿಯನ್ನು ನೋಡುತ್ತಾ ನಿಂತಿರುತ್ತಿದ್ದೆ ಕಾಲದ ಪರಿವೆಯೇ ಇಲ್ಲದೆ. ನದಿಯೋ, ಮಣ್ಣೋ, ಗಿಡವೋ, ಅಳಿಲೋ ಇವುಗಳಲ್ಲಿ ಯಾವುದು ನನ್ನೊಳಗೆ ಸ್ಥಿರವಾದ ಜಾಗವನ್ನು ಮಾಡಿಕೊಂಡಿವೆ ಗೊತ್ತಿಲ್ಲ. ಇವೆಲ್ಲವುದಕ್ಕೂ ನಡುವೆ ಭಿನ್ನತೆಯೇ ಇಲ್ಲದಂತ ಪ್ರಕೃತಿಯೊಂದು ಒಳಗೆ ಹಾಸುಹೊಕ್ಕಾಗಿ ಬಿಟ್ಟಿತು, ಮತ್ತು ಅದು ಬೇರೆ ಬೇರೆ ರೀತಿಯಲ್ಲಿ ದಿನನಿತ್ಯದ ಬದುಕಿನುದ್ದಕ್ಕೂ ಆಗಾಗ ಇಣುಕುತ್ತಲೇ ಇರುತ್ತದೆ.

ವಾರಕ್ಕೊಮ್ಮೆ ಬಂದು ಹೋಗುವುದಿಲ್ಲಿಗೆ…

ಮೈಸೂರು, ನಂತರ ಬೆಂಗಳೂರಿಗೆ ಬಂದ ಹೊಸತರಲ್ಲಿ ಹಸಿರಿಲ್ಲದೆ ಒದ್ದಾಡುತ್ತಿದ್ದೆ. ಅಪ್ಪಿತಪ್ಪಿ ರೂಮಿನ ಪಕ್ಕದ ಮರದ ಮೇಲೊಂದು ಅಳಿಲು ಕಂಡರೆ ಆವತ್ತಿನ ಹುಮ್ಮಸ್ಸೇ ಬೇರೆ. ಕಣ್ಣಿಗೆ ಹಸಿರು ಬಣ್ಣದ ಬರ ಮನಸ್ಸಿಗೆ ಖಿನ್ನತೆಯನ್ನು ತಂದುಕೊಡುತ್ತಿತ್ತು. ಮದುವೆಯಾದ ಮೇಲೆ ಆದಷ್ಟು ಹಸಿರಾಗಿರುವ ವಾಸಸ್ಥಳವನ್ನೇ ಆರಿಸಿದ್ದೆ. ನನ್ನ ಸಂಗಾತಿಗೂ ಈ ಸಂವೇದನೆ ಹೆಚ್ಚಿರುವುದರಿಂದ ಅನುಷ್ಠಾನ ಸುಲಭಸಾಧ್ಯವಾಯಿತು. ಮನೆಯ ಬಾಲ್ಕನಿಯಲ್ಲಿ ಗಿಡ ಬೆಳೆಸುವ ಆಸ್ಥೆ ಜೋರಿತ್ತು.

ಸಂಬಂಧಿಯೊಬ್ಬರ ಟೆರೇಸ್ ಗಾರ್ಡನ್‍ ನೋಡಿ ಇವೆಲ್ಲ ಸಾಧ್ಯ ಅನ್ನುವ ಭರವಸೆ ಕುದುರಿತ್ತು. ಆದರೆ ಕೆಲಸದ ಒತ್ತಡದ ನಡುವೆ, ಸ್ಥಳಾವಕಾಶದ ಕೊರತೆಯೂ ಕಾರಣವಾಗಿ ನಮ್ಮ ಗಿಡ ಬೆಳೆಸುವ ಕಾರ್ಯಕ್ರಮಗಳು ಎರಡು ಬಾರಿ ವಿಫಲಗೊಂಡವು. ಮಗಳಿಗೆ ಆಹಾರ ಮಣ್ಣಿನಿಂದ ಬರುವುದು ಎಂಬ ಪ್ರಾಥಮಿಕ ಪಾಠವನ್ನೂ ಹೇಳಲಾರೆವೇ ಎಂಬುದು ಮನಸ್ಸಿನ ಮೂಲೆಯಲ್ಲೆಲ್ಲೋ ಚುಚ್ಚುತ್ತಿತ್ತು.

ನಿಧಾನಕ್ಕೆ ನಮ್ಮ ಕನಸುಗಳಲ್ಲಿ ಮಣ್ಣಿನ ಕಡೆಗಿನ ತುಡಿತದ ಜೊತೆಗೆ ಆರೋಗ್ಯದ, ಅರ್ಥಪೂರ್ಣ ಬದುಕಿನ ಪ್ರೀತಿಯೂ ಮಿಳಿತವಾಗುತ್ತಾ ಹೋಯಿತು. ಕೆಲಸಕ್ಕೆ ಸೇರಿದ ಹೊಸತರಲ್ಲಿ ಹೊರಗೇ ತಿಂದುಕೊಂಡು ಅಲೆದರೂ, ವಯಸ್ಸು ಮಾಗಿದಂತೆ ಆರೋಗ್ಯದ ಕಡೆ ಗಮನ ಸಹಜವಾಗಿಯೇ ಹೆಚ್ಚಿತು. ಆಹಾರವೇ ಔಷಧ ಅನ್ನುವ ಅರಿವಿನಿಂದಾಗಿ ಮನೆಯಡಿಗೆಯೇ ಉತ್ತಮ ಅಂತ ಶುರುವಾದದ್ದು ನಿಧಾನಕ್ಕೆ ಸಾವಯವ ಆಹಾರ ಒಳ್ಳೆಯದೆಂಬಲ್ಲಿಗೆ ಸಾಗಿತು. ಜೊತೆಗೆ ಅಡುಗೆಗೆ ಬಳಸುವ ವಸ್ತುಗಳೂ ಕೂಡಾ ಆರೋಗ್ಯಕ್ಕೆ ಇಂಬುನೀಡುವಂತಿರಬೇಕು, ಪ್ಲಾಸ್ಟಿಕ್‍, ನಾನ್-ಸ್ಟಿಕ್ ಇತ್ಯಾದಿಗಳು ಬೇಡ, ಕಬ್ಬಿಣದ, ಮರದ, ಮಣ್ಣಿನ ಪಾತ್ರೆ-ಸಾಮಾನುಗಳನ್ನು ಬಳಸುವುದು ಉತ್ತಮ, ಹೀಗೆ ನಿಧಾನಕ್ಕೆ ಪ್ರಜ್ಞಾಪೂರ್ವಕವಾಗಿ ಬದುಕುವುದು ಅಭ್ಯಾಸವಾದರೂ ಅಂಗಡಿಗಳಲ್ಲಿ ಸಾವಯವದ ಹೆಸರಲ್ಲಿ ಮಾರಾಟವಾಗುವ ತರಕಾರಿಗಿಂತ ನಾವೇ ಬೆಳೆದರೆ ಒಳ್ಳೆಯದಲ್ಲವೇ ಎಂಬುದು ಕೊರೆಯುತ್ತಲೇ ಇತ್ತು.

ಅದೇ ಸಮಯದಲ್ಲಿ ಸ್ನೇಹಿತರೊಬ್ಬರ ಮೂಲಕ ರೈತರೊಬ್ಬರ ಪರಿಚಯವಾದದ್ದು. ಅವರು ತಮ್ಮ ಹೊಲವನ್ನು ತುಂಡುತುಂಡಾಗಿ ವಿಭಜಿಸಿ ಬಾಡಿಗೆಗೆ ನೀಡುತ್ತಾರೆ. ಮತ್ತು ನಮಗೇನು ಬೇಕೋ ಅದನ್ನು ನಾವು ಬಾಡಿಗೆಗೆ ತೆಗೆದುಕೊಂಡ ಜಾಗದಲ್ಲಿ ಸಾವಯವ ವಿಧಾನದ ಮೂಲಕ ಶ್ರದ್ಧೆಯಿಂದ ಬೆಳೆಯುತ್ತಾರೆ. ಮೊದಲ ಬಾರಿಗೆ ಹೊಲ ನೋಡಲು ಹೋದ ನಮಗೆ ಇದೂ ಬೆಂಗಳೂರಾ ಅನಿಸಿ ವಿಸ್ಮಯ, ಹೊಸತನ್ನೇನೋ ನಾವೇ ಆವಿಷ್ಕರಿಸಿದೆನೆಂಬ ಸಡಗರ.

ಯಾವ ಸೊಪ್ಪಿಲ್ಲ ಇಲ್ಲಿ?

ಎರಡು ವಾರಗಳಲ್ಲಿ ಬೆಳೆದ ತರಕಾರಿಗಳನ್ನು ಮನೆಗೆ ತಂದು ತಿಂದರೆ ನಿಜಕ್ಕೂ ರುಚಿಯಲ್ಲಿ ತುಂಬಾ ಬದಲಾವಣೆ ಅನಿಸಿತು. ತರಕಾರಿಗಳಲ್ಲಿ ಒಂದೂ ಇನ್ನೊಂದರ ಗಾತ್ರವಿಲ್ಲ. ಕೆಲವನ್ನು ಹಕ್ಕಿಗಳು ತಿಂದಿರುತ್ತವೆ ಅರ್ಧಮರ್ಧ. ಕೆಲವನ್ನು ಹುಳಗಳು ಆಕ್ರಮಿಸಿಕೊಂಡಿರುತ್ತವೆ. ಮಿಕ್ಕವನ್ನು ಆಯ್ದುಕೊಂಡು ಪ್ರಕೃತಿಯ ಪ್ರಸಾದವೆಂಬಂತೆ ತಿನ್ನುವುದು ನಮ್ಮನ್ನು ಮತ್ತಷ್ಟು ವಿನೀತರನ್ನಾಗಿ ಮಾಡಿದೆ. ವಾರ ವಾರ ತೋಟಕ್ಕೆ ಹೋಗಿ ಅಲ್ಲಿ ಬೆಳೆದದ್ದನ್ನು ಕೊಯ್ದುಕೊಂಡು, ಹೊಸದಾಗಿ ಏನು ಬೆಳೆಯಬೇಕೆಂದು ನಿರ್ಧರಿಸಿ, ಫಸಲನ್ನು ಮಗಳಿಗೂ ತೋರಿಸಿ ಸಂತೋಷ ಪಡುತ್ತೇವೆ. ಮೊದಮೊದಲು ಎಲೆ ನೋಡಿ ಯಾವ ಗಿಡ ಅಂತನೂ ಗೊತ್ತಾಗದಿದ್ದಾಗ ಮಣ್ಣಿನಿಂದ ಎಷ್ಟು ದೂರ ಬಂದಿದ್ದೇವೆ ಎಂದು ಹಲುಬಿದ್ದಿದೆ. ಈಗ ನಿಧಾನಕ್ಕೆ ಇದು ಯಾವ ಗಿಡ, ಫಸಲು ಕೊಯ್ಲಿಗೆ ಸೂಕ್ತವೇ ಅಂತ ಗೊತ್ತಾಗುವ ಹಂತಕ್ಕೆ ಬಂದಿದೆ. ಮುಂದೆ ಸಮಯ ಮಾಡಿಕೊಂಡು ನಾವೇ ಕೈ ಕೆಸರಾಗಿಸಿಕೊಳ್ಳಬೇಕು ಅನ್ನುವ ಆಸೆ ಇದೆ. ಸದ್ಯಕ್ಕೆ ಹೊಲದಲ್ಲಿ ಬೆಳೆದ ಹೀರೇಕಾಯಿ, ಸೋರೆಕಾಯಿಗಳನ್ನು ನೇವರಿಸಿಯೇ ಒಂದು ಸಂಭ್ರಮ. ಎಳೆಕಾಯಿಗಳನ್ನು ಕೊಯ್ಯುವಾಗಲೊಮ್ಮೆ ಹೌಹಾರುತ್ತೇನೆ, ಬೇಗ ಆಯಿತೇನೋ ಅಂತ. “ಮತ್ತೆ ಒಂದು ವಾರ ಕಾದರೆ ತೀರಾ ಬಲಿತು ಹೋಗತ್ತೆ ಮೇಡಂ.” ಹೊಲದ ಹುಡುಗರು ವಿವೇಕ ನುಡಿಯುತ್ತಾರೆ.

ಈ ಕಾರ್ಯಕ್ರಮ ಶುರುವಾದ ಮೇಲೆ ಅಂಗಡಿಯಿಂದ ತರಕಾರಿ ತರುವುದು ಬಹಳವೇ ಕಮ್ಮಿಯಾಗಿದೆ. ಈ ತರದ ಅನೇಕ ಕಮ್ಯೂನಿಟಿ ಫಾರ್ಮಿಂಗ್‍ ಬುಸಿನೆಸ್‍ ಮಾಡೆಲ್‍ಗಳು ಬೆಂಗಳೂರಲ್ಲಿ ತಲೆಯೆತ್ತಿವೆ. ನೀವು ಬಾಡಿಗೆಗೆ ತೆಗೆದುಕೊಂಡ ಜಾಗದಲ್ಲಿ ಬೆಳೆದದ್ದನ್ನು ನಿಮ್ಮ ಮನೆಯವರೆಗೆ ತಲುಪಿಸುವವರೂ ಇದ್ದಾರೆ. ರೈತನ ನೆಲವನ್ನು ಮತ್ತೊಂದು ಕಾರ್ಪೋರೇಟ್‍ ಕಂಪನಿ ಕಬಳಿಸುವ ಬದಲು ಇಂತದಕ್ಕೆ ಜನ ಮುಂದೆ ಬಂದರೆ ರೈತರಿಗೂ ನಮಗೂ ಇಬ್ಬರಿಗೂ ಅನುಕೂಲ.

ಬಾಳೆಯೂ ಬಳ್ಳಿಗಳೂ

ನಮ್ಮ ತರಕಾರಿದಾತ ರೈತ ಬೆಂಗಳೂರಿನವರಾದರೂ ಹಳ್ಳಿಗರಾಗಿದ್ದಾರೆ. ಕೆಲವೊಂದು ಬಾರಿ ರಾಸಾಯನಿಕಗಳನ್ನು ಬಳಸದ ಕಾರಣ, ಅಥವಾ ಅಕಾಲಿಕ ಮಳೆಯೋ ಬಿಸಿಲೋ ಬಂದು ನಮ್ಮ ಜಾಗದಲ್ಲಿ ಹೆಚ್ಚೇನೂ ಫಸಲು ಬಂದಿರುವುದಿಲ್ಲ. ಇದರಿಂದಾಗಿ ನಮಗೆಲ್ಲಿ ಬೇಸರವಾದೀತೋ ಅಂತ ತಮ್ಮ ಸ್ವಂತ ಜಾಗದಲ್ಲಿ ಬೆಳದ ಫಸಲನ್ನು ಸ್ವಲ್ಪ ನಮ್ಮ ಚೀಲಕ್ಕೆ ತುಂಬುತ್ತಾರೆ. ಯಾರದ್ದೂ ಅಲ್ಲದ ಜಾಗದಲ್ಲಿ ಬೆಳೆದ ನುಗ್ಗೆಮರದಿಂದ ಸೊಪ್ಪನ್ನು ಆರಿಸಿ ಪ್ರೀತಿಯಿಂದ ಕೈಗಿಡುತ್ತಾರೆ. ಬಾಳೆ ಎಲೆ ಏನಾದರೂ ಬೇಕೇ ಅಂತ ತಾವೇ ವಿಚಾರಿಸುತ್ತಾರೆ. ಪ್ರತಿ ಬಾರಿ ಹೊಲಕ್ಕೆ ಹೋಗುವುದೂ ಒಮ್ಮೆ ಊರಿಗೆ ಹೋದ ಹಾಗೆ ಅನಿಸಿ ಮನಸ್ಸು ನಿರಾಳವಾಗುತ್ತದೆ.

ಇದನ್ನೂ ಓದಿ : Earth Day 2021 ; ‘ಶರಣು ಮಣ್ಣಿಗೆ‘ : ಆಡಿಬಂದ ಹಸಿದ ಕಂದನಂತೆ ಕೊಟ್ಟಿದ್ದನ್ನೆಲ್ಲಾ ತಿನ್ನತೊಡಗಿತು ಆ ಮಣ್ಣು

Published On - 2:14 pm, Sun, 25 April 21