AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರಣು ಮಣ್ಣಿಗೆ : ಆಕೆ ತೋಯಲು ಸಿದ್ಧವಾಗಿದ್ದಾಳೆ ಅವ ಹನಿಯಬೇಕಷ್ಟೇ

‘ಮನೆಯ ಹೊರಗೆ ಬಂದರೆ ಎದುರಿಗೆ ನಂದಿಬೆಟ್ಟ ಕಾಣಬೇಕು ಎಂಬ ಆಸೆಯಿಂದ ಹಿಡಿದು ಏನೇನೋ ಕನಸು ಕಾಣುತ್ತ ಭೂಮಿ ಹುಡುಹುಡುಕಿದಾಗ ಅಂತೂ ಬೇರೊಂದು ಬೆಟ್ಟದ ಬುಡದಲ್ಲಿದ್ದ ಅರ್ಧ ಸಿದ್ಧವಾಗಿದ್ದ ತೋಟದ ಜಾಗ ಲಭಿಸಿತು. ಪುಟ್ಟ ಕಲ್ಲಿನ ಮನೆ, ಬೆಟ್ಟದ ಕಡೆಯಿಂದ ಸದಾ ಬೀಸಿ ಬರುವ ತಂಗಾಳಿ ಎಲ್ಲ ಇದ್ದರೂ ನೀರೇ ಇರಲಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಿತವಾಗಿದ್ದ ಇಳಿದು ಹೋಗಲು ಕಲ್ಲಿನ ಮೆಟ್ಟಿಲುಗಳಿದ್ದ ಅತ್ಯಂತ ಆಕರ್ಷಕವಾಗಿದ್ದ ದೊಡ್ಡ ಬಾವಿಯಿಂದ ಆ ಜಮೀನನ್ನು ಯಾವ ಕಾರಣಕ್ಕೂ ಬಿಡಬಾರದು ಎಂದೇ ತೀರ್ಮಾನಿಸಿದೆ.‘ ನೂತನ ದೋಶೆಟ್ಟಿ

ಶರಣು ಮಣ್ಣಿಗೆ : ಆಕೆ ತೋಯಲು ಸಿದ್ಧವಾಗಿದ್ದಾಳೆ ಅವ ಹನಿಯಬೇಕಷ್ಟೇ
ಹಳೆಯ ಕಲ್ಲಿನಮನೆ ಇರುವ ತೋಟದೊಡತಿ ನೂತನ ದೋಶೆಟ್ಟಿ
ಶ್ರೀದೇವಿ ಕಳಸದ
|

Updated on:Apr 30, 2021 | 2:42 PM

Share

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ಆಕೆ ತನ್ನ ಎದೆಒಡಲನ್ನು ಬಗೆದು ಸಮಸ್ತವನ್ನೂ ಧಾರೆ ಎರೆಯುತ್ತಾಳೆ. ಆದರೀವತ್ತು ‘ಭೂಮಿಯ ಒಡೆತನದ ಭಾಗ್ಯ ನಮ್ಮದಾಯಿತು’ ಎಂದು ಹೇಳಿಕೊಳ್ಳುತ್ತೇವೆ. ಇಂಥ ಅನೇಕ ಸೃಷ್ಟಿತ ಅನಿವಾರ್ಯಗಳ ಹಿಂದೆ ಬಹುದೊಡ್ಡ  ಸಾಂಸ್ಕೃತಿಕ ರಾಜಕಾರಣದ ನೆರಳಿದೆ; ಸಹಜದ ಹಾದಿಗೆ ಹೊರಳಿಕೊಳ್ಳಲು ಎಷ್ಟೊಂದು ತೊಡಕುಗಳು? ಇರಲಿ, ಇದೆಲ್ಲವೂ ಮತ್ತಷ್ಟು ಹಂಬಲಕ್ಕೂ ಛಲಕ್ಕೂ ಮುಖದೋರಲು ಸ್ಫೂರ್ತಿಯೇ. ಇಂಥ ಹಾದಿಯಲ್ಲೇ ಬದುಕುತ್ತ ಬರೆಯುತ್ತ ಪ್ರತಿಯೊಂದನ್ನೂ ಕುತೂಹಲದಿಂದ ನೋಡುತ್ತ ಬಂದವರು ಸದ್ಯ ಹಾಸನ ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂತನ ದೋಶೆಟ್ಟಿ.

*

“ಜಮೀನು ತಗೋತೀನಿ. ತೋಟ ಮಾಡ್ಬೇಕು ಅಂತ ಇದೆ” ಅಪ್ಪಾಜಿ ಎದುರು ಹೀಗೆ ಹೇಳಿದಾಗ ಶಹಬ್ಬಾಸ್ ಗಿರಿ ಸಿಗಬಹುದು ಎಂದುಕೊಂಡಿದ್ದೆ. ನನ್ನ ನಿರೀಕ್ಷೆಗೆ ವ್ಯತಿರಿಕ್ತವಾಗಿ ಅವರು, “ನಾವೆಲ್ಲ ಮಾಡಾಗಿದೆ. ಇವಳು ಈಗ ತೋಟ ಮಾಡ್ತಾಳಂತೆ” ಎಂದು ವ್ಯಂಗ್ಯವಾಡಿದಾಗ ಆಶ್ಚರ್ಯ ಹಾಗೂ ಆಘಾತ ಎರಡೂ ಒಟ್ಟಿಗೆ ಆಗಿತ್ತು. ಆದರೆ ಅದನ್ನು ಮೀರಿಸಿದ್ದು ಮಣ್ಣಿನ ಸೆಳೆತ, ಭೂಮಿಯ ಋಣ.

28 ವರ್ಷಗಳ ಹಿಂದಿನ ಮಾತು

ನನಗೆ ಕಡಲ ತಡಿಯ ಕಾರವಾರಕ್ಕೆ ವರ್ಗವಾದಾಗ, “ಆ ಊರಲ್ಲೆಲ್ಲ ಮೀನಿನ ವಾಸನೆಯಂತೆ. ಅಂಥ ಊರಿಗೆ ಹೋಗ್ತೀಯಾ?” ಎಂದು ನನ್ನ ಅತ್ತೆಯ ಮಗ ಮೂಗು ಮುರಿದಿದ್ದ. ಆದ್ದರಿಂದ ಅಳುಕಿನಿಂದಲೇ ಅಲ್ಲಿಗೆ ಹೋಗಿದ್ದೆ. ಆದರೆ ಆ ಊರ ಆರಂಭದಲ್ಲೇ ಎದುರುಗೊಳ್ಳುವ ಉದ್ದನೆಯ ಸುಂದರ ಕಡಲತೀರ, ಊರ ಮಧ್ಯದಲ್ಲೇ ರಸ್ತೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಜುಳುಜುಳು ಹರಿಯುವ ಸಣ್ಣ ಸಣ್ಣ ನೀರಿನ ಝರಿಗಳು, ಬಹುತೇಕ ಮನೆಗಳ ಮುಂದೆ ಇದ್ದ ಕೈದೋಟಗಳು, ಅವುಗಳಲ್ಲಿ ಸದಾ ತೊನೆದಾಡುವ ಅಡಿಕೆ, ತೆಂಗಿನ ಮರಗಳು, ಕಣ್ಣು ತುಂಬುವ ಹಚ್ಚ ಹಸಿರು ಮಲೆನಾಡಿನ ಸೆರಗಲ್ಲೆ ಆಡಿ ಬೆಳೆದ ನನಗೆ ನಮ್ಮ ಮನೆಯ ಹಿಂದಿನ ಹಿತ್ತಲಿನಲ್ಲೇ ಇರುವ ಭಾವನೆ ಮೂಡಿಸಿದವು. ಅಲ್ಲಿನ ಸುಂದರ ಪ್ರಕೃತಿಯಿಂದ ಆ ಊರಿನ ಸ್ನೇಹಕ್ಕೆ ಮನಸ್ಸು ಸಿದ್ಧವಾಯಿತು.

ಅದೇ ಮುಂದೆ ಅತ್ತೆಯ ಮನೆಯಾಯಿತು. ತೆಂಗು, ಅಡಿಕೆ ತೋಟದ ಮಧ್ಯದಲ್ಲಿ ಇರುವ ಹೆಂಚಿನ ಮನೆಯಲ್ಲಿ ನಮ್ಮ ವಾಸ. ಮಣ್ಣನ್ನು ಬದುಕಾಗಿಸಿಕೊಂಡು ಅದನ್ನೇ ಉಸಿರಾಡುವ ಅತ್ತೆ, ಇದ್ದ ಕೆಲವು ಗುಂಟೆ ಜಾಗದಲ್ಲಿ ಜಾಕಾಯಿ, ಕಾಳುಮೆಣಸು, ಚಿಕ್ಕು, ಪೇರಲ, ಬಾಳೆ, ಮಾವು, ಅಡಿಕೆ, ತೆಂಗು ಹೀಗೆ ಬಗೆಬಗೆಯ ಬೆಳೆಗಳನ್ನು ಜೊತೆಗೆ ಹೂವಿನ ಗಿಡಗಳನ್ನೂ ಹಾಕಿಕೊಂಡು ತಮ್ಮ 70ನೇ ವಯಸ್ಸಿನಲ್ಲೂ ಬೆನ್ನು ಬಾಗಿಸಿ ದುಡಿಯುವುದನ್ನು ದಿನವೂ ಕಂಡಾಗ ಮಣ್ಣಿನ ಮಮತೆ ಹೆಚ್ಚಾಯಿತು. ಅವರು ಬೆಳಿಗ್ಗೆ 7ಕ್ಕೆಲ್ಲ ಚಾ ಕುಡಿದು ತೋಟಕ್ಕೆ ಇಳಿದರೆ ಮಧ್ಯಾಹ್ನ 1 ರವರೆಗೂ ಅಲ್ಲೇ ಬೆವರಿಳಿಸುತ್ತಿದ್ದರು. ಅಷ್ಟರವರೆಗೆ ಒಂದೆರಡು ತೆಂಗಿನ ಗಿಡಗಳ ಗುಣಿಗಳನ್ನು ದೊಡ್ಡ ಮಾಡುವುದೊ, ಮಣ್ಣು ಏರಿಸಿ ಕೊಡುವುದೊ, ನೀರುಣಿಸುವುದೊ… ನಡೆದೇ ಇರುತ್ತಿತ್ತು. ತೋಯ್ದು ತೊಪ್ಪೆಯಾದ ಬೆವರ ದೇಹಕ್ಕೆ ಸ್ನಾನ ಮಾಡಿಸಿ ಅಂಗಳದ ತುಳಸಿಗೆ ಹೂವಿಟ್ಟು, ಊದಿನಕಡ್ಡಿ ಬೆಳಗಿ ಊಟಕ್ಕೆ ಬಂದರೆ ಹೊಟ್ಟೆ ತುಂಬಾ ಉಂಡು ನಾಲ್ಕು ಗಂಟೆಯವರೆಗೆ ಕಣ್ಣು ತುಂಬ ನಿದ್ದೆ ಮಾಡಿ ಅಂದಿನ ಆಯಾಸವನ್ನೆಲ್ಲ ಪರಿಹರಿಸಿಕೊಳ್ಳುತ್ತಿದ್ದರು.

sharanu mannige

ಗಾಳಕ್ಕೆ ಸಿಗದಿದ್ದರೆ ಮೀನೇ?

ಆಗ ತವರ ನೆನಪು

ನಮ್ಮ ಬಾಲ್ಯದಲ್ಲಿ ಮನೆಯ ಹಿತ್ತಲು ಬಹಳ ಮುಖ್ಯ ಪಾತ್ರ ವಹಿಸಿದೆ. ಬೇಲಿಯ ಸಂದಿಯಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳಿಗೆ ಗುಟುಕು ಕೊಟ್ಟು ಪೋಷಿಸುವ ಹಕ್ಕಿಗಳನ್ನು, ಮಧ್ಯಾನ್ಹದ ಚುರುಕು ಬಿಸಿಲಿನಲ್ಲಿ ತಲೆಯೆತ್ತಿ ಕುಳಿತು ಬಿಸಿಲು ಕಾಯಿಸುವ ಹಾವನ್ನು, ಬುಸುಗುಡುವ ಮಿಡಿ ನಾಗರ, ಗೋದಿ ನಾಗರ, ಜಂಪ್ ಮಾಡುವ ದಪ್ಪನೆಯ ಕೆರೆ ಹಾವು ಇವುಗಳನ್ನು ನೋಡುತ್ತ ಪ್ರಕೃತಿಯ ಅನನ್ಯತೆಗೆ ಬೆರಗಾದಂತೆ ದಿನವೂ ಅರಳುವ ಮೋಹಕ ಬಣ್ಣಗಳ ಬಗೆ ಬಗೆಯ ಹೂವುಗಳನ್ನು ನೋಡಿ ಮನಸೋತಂತೆ, ಗುಬ್ಬಚ್ಚಿ, ಕಾಗೆ, ಕೆಂಬೂತ ಮೊದಲಾದ ಪಕ್ಷಿಗಳು ಸಮೀಪದಲ್ಲೆ ಪುಟು ಪುಟು ಓಡಾಡುವುದನ್ನು ಸದ್ದು ಮಾಡದೇ ಗಮನಿಸುತ್ತ ಪ್ರಕೃತಿಯೊಂದಿಗೆ ತಾದಾತ್ಮ್ಯ ಸಹಜವಾಗಿಯೇ ಬೆಳೆದಿತ್ತು. ಪಕ್ಷಿಗಳಿಂದ ಪೇರಲೆ ಹಣ್ಣನ್ನು ರಕ್ಷಿಸುವುದಕ್ಕಾಗಿ ಮಾಗುತ್ತಿರುವ ಹಣ್ಣುಗಳಿಗೆ ಬಟ್ಟೆ ಕಟ್ಟುವುದು ಮೊದಲಾದ ನಮ್ಮ ತಿಳಿವಳಿಕೆಗೆ ಬಂದಂತ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಪ್ರಕೃತಿ-ಮಾನವನ ಸಂಘರ್ಷವನ್ನೂ ಪರಿಚಯಿಸಿತ್ತು. ಮನೆಗೆ ತೀರಾ ಸಮೀಪದಲ್ಲಿದ್ದ ಹಚ್ಚ ಹಸಿರ ಗದ್ದೆ ಬಯಲು ಒಂದು ಕಾಲದಲ್ಲಿ ನಮ್ಮದೇ ಆಗಿದ್ದು ಉಳುವವನೆ ಹೊಲದೊಡೆಯ ಕಾನೂನಿನ ಪ್ರಕಾರ ನಮ್ಮ ಕೈಬಿಟ್ಟಿತ್ತು ಎಂಬುದನ್ನು ಅಪ್ಪಾಜಿಯಿಂದ ತಿಳಿದಾಗಿನಿಂದ ಆ ರಸ್ತೆಯಲ್ಲಿ ಓಡಾಡುವಾಗೆಲ್ಲ ಮನಸ್ಸು ಏನನ್ನೋ ಕಳೆದುಕೊಂಡ ಸಂಕಟಕ್ಕೆ ಗುರಿಯಾಗುತ್ತಿತ್ತು. ಇಂಥ ಅಸ್ಪಷ್ಟ ನೋವು ಮನದ ಮೂಲೆಯಲ್ಲೊಂದು ಸ್ಪಷ್ಟ ಗುರುತು ಹಾಕಿದ್ದಿರಬೇಕು.

ತೋಟದ ಒಡತಿಯಾದೆ

ಮದುವೆಯಾದ ಮಾರನೇ ವರುಷ ನಮ್ಮ ಮನೆಯಿಂದ ಸುಮಾರು 15 ಕಿ.ಮೀ ದೂರದ ಹಳ್ಳಿಯೊಂದರಲ್ಲಿ ಒಂದು ಎಕರೆ ಭೂಮಿ ಕೊಂಡೆವು. ಬಾವಿಯಿತ್ತು ಅಲ್ಲಿ. ಹಾಗಾಗಿ ಸುತ್ತ ಕಾಂಪೌಂಡ್ ಹಾಕಿ, ಬಾವಿಕಟ್ಟೆ ಕಟ್ಟಿಸಿ, ಉಳಿಯಲು ಸಣ್ಣ ಮನೆಯನ್ನೂ ಕಟ್ಟಿಸಿ ಆಯಿತು. ನನ್ನ ಪತಿ ಆಗಷ್ಟೇ ಆರಂಭವಾಗಿದ್ದ ಕೊಂಕಣ ರೈಲಿನಲ್ಲಿ ರತ್ನಾಗಿರಿಗೆ ಹೋಗಿ ಅಲ್ಲಿಂದ ಮಾವು, ಪೇರಲ ಗಿಡಗಳನ್ನು ತಂದರು. ಇಷ್ಟು ಹೊತ್ತಿಗೆ ಮಗ ಹುಟ್ಟಿದ್ದ. ರಜಾದಿನಗಳಲ್ಲಿ ಅಲ್ಲಿಗೆ ಹೋಗಿ ಬೆಳೆದ ಕಳೆ ಕೀಳುವುದೇ ಮೊದಲಾದ ಕೆಲಸ ಮಾಡುತ್ತಿದ್ದೆವು. ಆಗೆಲ್ಲ ನಮ್ಮ ಕೂಸು ಮನೆಯ ಒಳಗೆ ಮಲಗಿರುತ್ತಿತ್ತು. ಊಟ-ತಿಂಡಿ ಕಟ್ಟಿಕೊಂಡು ಅಲ್ಲಿಗೆ ಹೋಗಿ ದುಡಿದು ಉಣ್ಣುವುದರಲ್ಲಿ ಸಿಗುತ್ತಿದ್ದ ಆನಂದವನ್ನು ಶಬ್ದಗಳಲ್ಲಿ ಹೇಳಲಾಗುವುದಿಲ್ಲ. ಮಗನೊಂದಿಗೆ ಗಿಡಗಳು ಬೆಳೆದವು, ಹೂ, ಕಾಯಿ, ಹಣ್ಣುಗಳಾದವು. ಅವುಗಳ ದೇಖರೇಖೆಗೆ ಒಬ್ಬನನ್ನು ಗೊತ್ತು ಮಾಡಿ ಅವನ ಸಂಸಾರ ಅಲ್ಲಿನ ಮನೆಯಲ್ಲೇ ಉಳಿಯಿತು. ತೋಟ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಅಪ್ಪಾಜಿಯನ್ನು ತೋಟಕ್ಕೆ ಕರೆದುಕೊಂಡು ಹೋಗಿದ್ದೆ. ಎಲ್ಲೆಡೆ ಓಡಾಡಿದ್ದ ಅವರು ಬಾಯಿಬಿಟ್ಟು ಏನೂ ಹೇಳದಿದ್ದರೂ ಛಲಗಾತಿ, ಮಾಡಿ ತೋರಿಸಿಬಿಟ್ಟಳು ಎಂದು ಒಳಗೇ ಖುಷಿಪಟ್ಟಿರಬೇಕು. ಆಮೇಲೆ ಬೇರೆ ಬೇರೆ ಊರುಗಳಿಂದ ನೆಂಟರು ಬಂದರೆ ತೋಟಕ್ಕೊಂದು ಟ್ರಿಪ್ ಖಾಯಂ ಇರುತ್ತಿತ್ತು. ಕೆಲವರು ಹೊಗಳಿದರೆ ಕೆಲವರು ಬಿಸಿಲಲ್ಲಿ ಬೇಯುತ್ತ ಒದ್ದಾಡುವುದು ಬೇಕಿತ್ತಾ ಇವಳಿಗೆ ಎಂದರು. ಯಾರು ಏನೇ ಅಂದರೂ ನಾವೇ ಬೆಳೆಸಿದ ಗಿಡದ ಫಲ ಉಣ್ಣುವದು ಒಂದು ಭಾಗ್ಯವೇ ಸರಿ. ಭೂಮಿ, ಮನೆಗಳು ಯೋಗಾಯೋಗ ಎಂದು ಹಿರಿಯರು ಆಗಾಗ ಹೇಳುತ್ತಿದ್ದುದನ್ನು ಕೇಳಿದ್ದೆ. ಅದನ್ನು ಅನುಭವಿಸುವ ದಿನವೂ ಬಂತು. ಕಾರವಾರದಿಂದ ಬೆಂಗಳೂರಿಗೆ ಪತಿಗೆ ವರ್ಗವಾಯಿತು. ಎಲ್ಲವನ್ನು ಹೊಂದಿಸಿಕೊಂಡು ಹಾಯಾಗಿ ಇದ್ದ ನಮಗೆ ಎಲ್ಲವನ್ನೂ ತೊರೆದು ಬರುವ ಅನಿವಾರ್ಯತೆ ಬಂತು. ನಾವು ಬಿಟ್ಟುಬಂದ ತೋಟದಲ್ಲಿ ಕಳವು ಜಾಸ್ತಿ ಆಯಿತು. ನಮ್ಮ ಕೈಗೆ ಏನೂ ಸಿಗದ ದುಃಖಕ್ಕಿಂತ ಅದನ್ನು ನೋಡಿಕೊಳ್ಳುತ್ತಿದ್ದವರೇ ಎದ್ದು ಮೇಯುವ ಬೇಲಿಗಳಾದಾಗ ಅದನ್ನು ಮಾರಬೇಕಾಯಿತು. ಅಪ್ಪಾಜಿಯ ಮಾತುಗಳಲ್ಲಿದ್ದ ಕಟು ವಾಸ್ತವದ ಅರಿವಾಯಿತು. ಹಿರಿಯರದು ಅನುಭವದ ಮಾತೇ ಅಲ್ಲವೇ?

sharanu mannige

ಯಾರು ತುಂಬಿದವರು ಕುಸುರುಕುಸುರಿನೊಳಗೆ ಮೆದುವನ್ನು

ಮನೆಯ ಕೈದೋಟ

ಬೆಂಗಳೂರಿನ ಸ್ವಂತ ಸೂರಿನಲ್ಲಿ ಗಿಡಗಳಿಗಾಗಿ ಸ್ವಲ್ಪ ಜಾಗ ಬಿಟ್ಟುಕೊಂಡು ಅವುಗಳ ಆರೈಕೆಯಲ್ಲಿ ಸಮಾಧಾನ ಪಡಬೇಕಾಯಿತು. ಬರುಬರುತ್ತ ಅವುಗಳ ಮೋಹ ಹೆಚ್ಚುತ್ತ ಗಿಡಗಳ ಸಂಖ್ಯೆಯೂ ಹೆಚ್ಚಿತು. ಅಕ್ಕಪಕ್ಕದವರು ಕೆಲಸಕ್ಕೆ ಹೋಗಿ ಬಂದು ಇಷ್ಟೆಲ್ಲಾ ಮಾಡ್ತೀರಾ ಎಂದು ಮೆಚ್ಚುಗೆ ಸೂಚಿಸಿದರು. ವಾರದ ಕೊನೆಯ ದಿನಗಳು ಕೈದೋಟಕ್ಕೆ ಮೀಸಲಾಗಿದ್ದವು. ಮೆಣಸಿನಕಾಯಿ, ಟೊಮೆಟೊ, ಬಸಳೆ, ಕರಿಬೇವು, ಕೊತ್ತುಂಬರಿ ಮೊದಲಾದವನ್ನು ಕೊಯ್ದು ಅಡುಗೆಗೆ ಬಳಸುವಾಗ ಉಪ್ಪು, ಖಾರದ ಜೊತೆ ಸ್ವಲ್ಪ ಜಂಬವೂ ಒಗ್ಗರಣೆಗೆ ಬೀಳುತ್ತಿತ್ತು. ಆಗಿನ್ನೂ ಟೆರೇಸ್ ಗಾರ್ಡನ್ ಅಷ್ಟು ಜನಪ್ರಿಯವಾಗಿರಲಿಲ್ಲ. ಕರ್ನಾಟಕ ಸರ್ಕಾರದ ಕೃಷಿ ಮಂತ್ರಿಗಳಾಗಿದ್ದ ಕೃಷ್ಣಭೈರೇಗೌಡರ ಪತ್ನಿ ಮೀನಾಕ್ಷಿಯವರು ಹಸಿ ಕಸ ತ್ಯಾಜ್ಯ ನಿರ್ವಹಣೆಯ ಬಗ್ಗೆ ನಮ್ಮ ಬಡಾವಣೆಯ ಕಾರ್ಯಕ್ರಮಗಳಿಗೆ ಬಂದಾಗ ಹೇಳುತ್ತಿದ್ದರು. ಕೆಲವು ಪ್ರಾತ್ಯಕ್ಷಿಕೆಗಳಾದವು. ಹಾಗೆ ನಾನೂ ಮನೆಯ ಹಸಿ ಕಸ ತ್ಯಾಜ್ಯ ನಿರ್ವಹಣೆ ಆರಂಭಿಸಿದೆ. ಅದರಿಂದ ಬಂದ ಗೊಬ್ಬರದಿಂದ ಗಿಡಗಳು ನಳನಳಿಸಿದವು. ಒಂದು ವರ್ಷವಂತೂ ದಸರಾ, ದೀಪಾವಳಿ ಹಬ್ಬಗಳಿಗೆ ಮನೆಯ ಸೇವಂತಿಗೆ ಹೂಗಳೇ ಸಾಕು ಬೇಕಾದಷ್ಟಾದವು.

ಮತ್ತೆ ಭೂಮಿಯ ಒಡೆತನದ ಭಾಗ್ಯ

ಬೆಂಗಳೂರಲ್ಲಿ ಭೂಮಿ ಕೊಂಡುಕೊಳ್ಳುವ ಕನಸು ಕಾಣಲೂ ಧೈರ್ಯಬೇಕು. ನನ್ನಲ್ಲಿ ಅದಕ್ಕೇನು ಕೊರತೆಯಿರಲಿಲ್ಲ. ಅದರಿಂದ ಮತ್ತೊಮ್ಮೆ ತೋಟದ ಕನಸು ಚಿಗುರಿ ರಜಾದಿನಗಳಲ್ಲಿ ಭೂಮಿಯ ಹುಡುಕಾಟ ಆರಂಭವಾಯಿತು. ಮನೆಯ ಹೊರಗೆ ಬಂದರೆ ಎದುರಿಗೆ ನಂದಿಬೆಟ್ಟ ಕಾಣಬೇಕು ಎಂಬ ಆಸೆಯಿಂದ ಹಿಡಿದು ಏನೇನೋ ಕನಸು ಕಾಣುತ್ತ ಭೂಮಿ ಹುಡುಹುಡುಕಿ ಅಂತೂ ಬೇರೊಂದು ಬೆಟ್ಟದ ಬುಡದಲ್ಲಿದ್ದ ಅರ್ಧ ಸಿದ್ಧವಾಗಿದ್ದ ತೋಟದ ಜಾಗ ಲಭಿಸಿತು. ಸುತ್ತಲೂ ಹಸಿರು, ಇಲ್ಲಿಯೂ ನಿರ್ಮಿತವಾಗಿದ್ದ ಪುಟ್ಟ ಕಲ್ಲಿನ ಮನೆ, ಬೆಟ್ಟದ ಕಡೆಯಿಂದ ಸದಾ ಬೀಸಿ ಬರುವ ತಂಗಾಳಿ ಎಲ್ಲ ಇದ್ದರೂ ನೀರೇ ಇರಲಿಲ್ಲ. ಸುಮಾರು 40 ವರ್ಷಗಳ ಹಿಂದೆ ನಿರ್ಮಿತವಾಗಿದ್ದ ಇಳಿದು ಹೋಗಲು ಕಲ್ಲಿನ ಮೆಟ್ಟಿಲುಗಳಿದ್ದ ಅತ್ಯಂತ ಆಕರ್ಷಕವಾಗಿದ್ದ ದೊಡ್ಡ ಬಾವಿಯಿಂದ ಆ ಜಮೀನನ್ನು ಯಾವ ಕಾರಣಕ್ಕೂ ಬಿಡಬಾರದು ಎಂದೇ ತೀರ್ಮಾನಿಸಿದೆ. ಮತ್ತೊಮ್ಮೆ ಭೂಮಿಯ ಒಡೆತನದ ಭಾಗ್ಯ ನಮ್ಮದಾಗಿತ್ತು. ರಾಜಸ್ಥಾನದ ಮರುಭೂಮಿಯಲ್ಲಿ ಮಳೆಕೊಯ್ಲು ಮಾಡಿ ಬೆಳೆ ಬೆಳೆಸುತ್ತಿರಬೇಕಾದರೆ ನಾವೂ ಮಾಡಬಾರದೇಕೆ ಅನ್ನಿಸಿತು. ಕಾರಣಾಂತರಗಳಿಂದ ಕೆಲಕಾಲ ಅದು ಕೈಗೂಡಲಿಲ್ಲ.

sharanu mannige

ಯಾರವರು ಬತ್ತಿಸಿದವರು?

ಆಗ ಚಿಕ್ಕವನಿದ್ದ ಮಗ ಈಗ ಫಲ ನೀಡುವ ತೆಂಗಿನ ಮರದಂತೆ ಮಾಗಿದ್ದಾನೆ. ತನ್ನ ಓದು- ಕೆಲಸಗಳ ನಡುವೆ ನಮಗೆ ಒತ್ತಾಸೆಯಾಗಿ ನಿಂತಿದ್ದಾನೆ. ನಮ್ಮಂತೆಯೇ ಭೂಮಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾನೆ. ಅವನ ಮೇಲ್ವಿಚಾರಣೆಯಲ್ಲಿ ಈಗ ಅಲ್ಲಿ ದೊಡ್ಡ ಕೃಷಿಹೊಂಡ ಮಾಡಿಸಿದ್ದೇನೆ. ನಾವೆಲ್ಲರೂ ಮಳೆಯನ್ನು ಎದುರು ನೋಡುತ್ತಿದ್ದೇವೆ. ಈ ಬಾರಿಯ ಕಾಯುವಿಕೆಯಲ್ಲಿ ಬೇರೆಯದೇ ಆದ ತಳಮಳ, ಹೊಸತನವಿದೆ. ವೈಜ್ಞಾನಿಕವಾಗಿ ಮಾಡಿಸಿರುವುದರಿಂದ ಬಾವಿ, ಕೃಷಿ ಹೊಂಡ ಎರಡೂ ತುಂಬುತ್ತವೆ. ತೋಟದ ಭೂಮಿ ತೋಯಲು ಸಿದ್ಧವಾಗಿದೆ. ಮಳೆ ಬರಬೇಕು. ಮೀಸಲಳಿಯಬೇಕು. ನಮ್ಮ ಭೂಮ್ತಾಯಿ ಹಸಿರುಟ್ಟು ಹೆಣ್ಣಾಗಿ ನಳನಳಿಸಬೇಕು. ಮುಂದಿನ ವರುಷಗಳಲ್ಲಿ ಮಕ್ಕಳನ್ನು ಹೆರುತ್ತಾಳೆ. ನನಗೆ ಅವಳ ಬಸಿರು, ಬಾಣಂತನದ ಕೆಲಸವೋ ಕೆಲಸ. ಭೂಮಿ ಹುಣ್ಣಿಮೆಯಲ್ಲಿ ಅವಳಿಗೆ ಹೊಸ ಸೀರೆ ಉಡಿಸಿ ಉಡಿ ತುಂಬಬೇಕು.

ಇದನ್ನೂ ಓದಿ : ಶರಣು ಮಣ್ಣಿಗೆ : ಹುರಿಗಟ್ಟಿದ ರಟ್ಟೆಯೊಂದಿಗೆ ಅವುಡುಗಚ್ಚಿದ ದವಡೆಯೊಂದಿಗೆ ಇಳಕಲ್-ಇಸ್ಲಾಂಪುರದ ರೈತಮಕ್ಕಳು

Sharanu Mannige series on Agriculture by writer Nutan Doshetty

Published On - 2:19 pm, Fri, 30 April 21

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ