Breast Cancer : ಶೆಲ್ಫಿಗೇರುವ ಮುನ್ನ ; ನನ್ನ ಎದೆ, ಬೆನ್ನಿನ ಮೇಲೆ 80 ಸ್ಟೆಪ್ಲರ್ ಪಿನ್​ ಹೊಡೆದು ಚಿತ್ತಾರ ಮಾಡಿದ ಆ ದಿನ

Journalist Krishni Shiroor : ‘ಅಂಗಾತವೇ ಮಲಗುವುದು ಅನಿವಾರ್ಯವಾಗಿತ್ತು. ಬಲಸ್ತನವನ್ನು ಸರ್ಜರಿ ಮಾಡಿ ತೆಗೆದುಹಾಕಿದ್ದರಿಂದ ಆ ಜಾಗ ತುಂಬಲು ಬೆನ್ನಿನ ಮಾಂಸ ಕತ್ತರಿಸಿ ಎದೆಯ ಭಾಗಕ್ಕೆ ಇಟ್ಟು ಸ್ಟೆಪ್ಲರ್‌ ಪಿನ್‌ ಹೊಡೆಯಲಾಗಿತ್ತು. ಬೆನ್ನಿನ ಮೇಲೆ ಪಿನ್‌ ಹೊಡೆದಿದ್ದರೂ ಅದರ ಮೇಲೆಯೇ ಮಲಗಿದೆ.’ ಕೃಷ್ಣಿ ಶಿರೂರ

Breast Cancer : ಶೆಲ್ಫಿಗೇರುವ ಮುನ್ನ ; ನನ್ನ ಎದೆ, ಬೆನ್ನಿನ ಮೇಲೆ 80 ಸ್ಟೆಪ್ಲರ್ ಪಿನ್​ ಹೊಡೆದು ಚಿತ್ತಾರ ಮಾಡಿದ ಆ ದಿನ
ಪತ್ರಕರ್ತೆ ಕೃಷ್ಣಿ ಶಿರೂರ
Follow us
ಶ್ರೀದೇವಿ ಕಳಸದ
|

Updated on:Feb 15, 2022 | 10:11 AM

New Book : ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇರುತ್ತವೆ.  ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ. ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್ ಕಳುಹಿಸಿ. ಇ ಮೇಲ್ : tv9kannadadigital@gmail.com 

*

ಕೃತಿ : ಉರಿ ಬಾನ ಬೆಳದಿಂಗಳು (ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ)

ಲೇಖಕರು : ಕೃಷ್ಣಿ ಶಿರೂರ

ಪುಟ : 136

ಬೆಲೆ: ರೂ 250.

ಮುಖಪುಟ ವಿನ್ಯಾಸ: ಗುರು ನಾವಳ್ಳಿ

ಪ್ರಕಾಶನ: ದಿಗಂತ ಪ್ರಕಾಶನ, ಹುಬ್ಬಳ್ಳಿ

*

ಪತ್ರಕರ್ತೆ ಕೃಷ್ಣಿ ಶಿರೂರ ಕಳೆದ 6 ವರುಷಗಳ ಹಿಂದೆ ಕ್ಯಾನ್ಸರ್ ಕಾಡಿದಾಗ ಎದೆಗುಂದದೆ ಹೋರಾಡಿ ಅದರಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಕುರಿತು ಆಪ್ತಸಲಹೆಗಳನ್ನು ನೀಡುವಲ್ಲಿಯೂ ತೊಡಗಿಕೊಂಡಿದ್ದಾರೆ. ಇವರು ಬರೆದ ಈ ಕೃತಿ ಇದೇ 4 (ಫೆ)ರಂದು ಹುಬ್ಬಳ್ಳಿಯ ಸ್ವಾತಿ ಹೋಟೆಲ್ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ಈ ಕೃತಿಯನ್ನು ವಿ.ಆರ್.ಎಲ್​ ಗ್ರೂಪ್​ನ ಮುಖ್ಯಸ್ಥ ವಿಜಯ ಸಂಕೇಶ್ವರ ಬಿಡುಗಡೆ ಮಾಡಲಿದ್ದಾರೆ.

*

ಏರು ನದಿಗೆ ಎದುರಾಗಿ ಈಜಿ ದಡ ಸೇರಬಹುದೇ ಜೀವ , ದಾಟಿ ಈ ಪ್ರವಾಹ! ಒಂದು ವಸ್ತು, ವಿಷಯ, ಸಂಗತಿಯನ್ನು ನಾವು ಎಷ್ಟು ಬೇಗ ನಮ್ಮದಾಗಿಸಿಕೊಳ್ಳುತ್ತೇವೋ ಅಷ್ಟು ಬೇಗ ಅದನ್ನು ಗೆಲ್ಲುವ, ಅದರೊಟ್ಟಿಗೆ ಬದುಕುವ ಗೊಂದಲ ಕಡಿಮೆಯಾಗಿ ಅದನ್ನ ಆವರಿಸಿಕೊಳ್ಳುವ ಮನಃಸ್ಥಿತಿ ಮೂಡುತ್ತದೆ. ಕ್ಯಾನ್ಸರ್ ಅನ್ನೋ ಭಯಾನಕ ಹೆಸರಿನ ಹಿಂದೆ ಇರುವ ಸಿಹಿ, ಕಹಿ, ಏರುಪೇರು ಅದರ ವಿರುದ್ಧದ ಮನಃಸ್ಥಿತಿ ಎಲ್ಲವನ್ನೂ ತಮ್ಮ ಅಕ್ಷರಗಳ ಮೂಲಕ ಜನರನ್ನು ತಲುಪೋ ಪ್ರಯತ್ನ ಮಾಡಿದ್ದಾರೆ ಕೃಷ್ಣಿ ಅವರು. ಮೂಲತಃ ವೈದ್ಯರಾಗಿ ನಾವು ಎಷ್ಟು ಪ್ರಯತ್ನಪಟ್ಟರೂ ಎಲ್ಲರನ್ನೂ ತಟ್ಟಿ ಎಬ್ಬಿಸಿ ಕಾಯಿಲೆಯ ಬಗ್ಗೆ ತಿಳಿಸುವಲ್ಲಿ ಎಲ್ಲೋ ಹಿಂದೆ ಬಿದ್ದಂತೆ ಅನ್ನಿಸುತ್ತದೆ. ಒಂದು ನಮ್ಮ ಕಾರ್ಯಶೈಲಿಯಲ್ಲಿ ಅದನ್ನು ತಿಳಿಸುವ ಬಗೆ ಮರೆತಿದ್ದೇವೆ, ಇಲ್ಲ ಎಲ್ಲರನ್ನೂ ಮುಟ್ಟುವ ಮಾಧ್ಯಮದಿಂದ ದೂರ ಉಳಿದಿದ್ದೇವೆ. ಆದ್ದರಿಂದ ವೈದ್ಯರುಗಳು ವಿಷಯಗಳನ್ನು ಸರಳವಾಗಿಸಿ ಜನರನ್ನು ಮುಟ್ಟುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಕೃತಿ ಅರಿವು ಮೂಡಿಸಲಿದೆ.

ಡಾ. ವಿನಯ ಮುತ್ತಗಿ, ರೇಡಿಯೇಷನ್ ಅಂಕಾಲಜಿಸ್ಟ್, ಹುಬ್ಬಳ್ಳಿ

*

ಕತ್ತರಿಸಿದ್ದ ಜಾಗ ಮುಚ್ಚಿದ್ದವು 80 ಪಿನ್‌ಗಳು!

ರೂಮಿಗೆ ಶಿಫ್ಟ್‌ ಆಗುತ್ತಿದ್ದಂತೆ ಸಿಸ್ಟರ್‌ ಒಬ್ಬರು ಬಿಪಿ ಚೆಕ್‌ ಮಾಡಲು ಬಂದರು. ದೇಹಕ್ಕೆ ಬಲಗೈ ಬಲುಭಾರವೆನಿಸಿತು. ತುಸು ಎತ್ತಲೂ, ಆಡಿಸಲು ಆಗದಷ್ಟು, ತುಸು ಅಲುಗಾಡಿದರೂ ಜೀವವೇ ಹೋಗುವಷ್ಟು ವೇದನೆ ಆಗುತ್ತಿತ್ತು. ಅಂಗಾತವೇ ಮಲಗುವುದು ಅನಿವಾರ್ಯವಾಗಿತ್ತು. ಬಲಸ್ತನವನ್ನು ಸರ್ಜರಿ ಮಾಡಿ ತೆಗೆದುಹಾಕಿದ್ದರಿಂದ ಆ ಜಾಗವನ್ನು ತುಂಬಲು ಬೆನ್ನಿನ ಮಾಂಸವನ್ನು ಕತ್ತರಿಸಿ ಎದೆಯ ಭಾಗಕ್ಕೆ ಇಟ್ಟು ಸ್ಟೆಪ್ಲರ್‌ ಪಿನ್‌ ಹೊಡೆಯಲಾಗಿತ್ತು. ಬೆನ್ನಿನ ಮೇಲೆ ಪಿನ್‌ ಹೊಡೆದಿದ್ದರೂ ಅದರ ಮೇಲೆ ಮಲಗಿದೆ. ಇತ್ತ ಎಡಗೈಯಲ್ಲಿ ಲಾಸ್ಟ್‌ ಕಿಮೋ ತೆಗೆದುಕೊಂಡಿದ್ದ ಜಾಗ ಸಮೇತ ಪೂರ್ತಿ ಕೈ ಊದಿಕೊಂಡೇ ಇತ್ತು. ಅದರ ನೋವು ಕಮ್ಮಿಯಾಗಿರಲಿಲ್ಲ. ಮತ್ತದೇ ಕೈಗೆ ಕ್ಯಾನುಲಾ ಚುಚ್ಚಿದ್ದು ಮತ್ತಷ್ಟು ನೋವು ಜೊತೆಯಾಗಿತ್ತು. ಒಂಥರಾ ಅರ್ಧ ದೇಹ ನೋವಿನಲ್ಲೇ ಮುಳುಗಿ ಹೋಗಿತ್ತು. ಅಬ್ಬಾ; ಯಾರಿಗೂ ಬೇಡ ಇಂಥ ಜೀವನ ವೆನಿಸಿತು. ಎಡಕ್ಕೆ ಹೊರಳಿ ಮಲಗುವ ಅಂದರೆ ಎಡಭಾಗದಲ್ಲಿ ಅಳವಡಿಸಲಾದ ಪೋರ್ಟ್‌ ಇನ್ನಿಲ್ಲವೆಂಬಷ್ಟು ನೋವು ಕೊಡುತ್ತಿತ್ತು. ಪೋರ್ಟ್‌ಅನ್ನು ದೇಹದ ಒಳಗೊತ್ತಿ ಮೇಲೆ ಹೊಲಿಗೆ ಹಾಕಿದ್ದರಿಂದ ಆ ಹೊಲಿಗೆ ದಾರಕ್ಕೆ ಧರಿಸಿದ ಬಟ್ಟೆ ತಾಗಿದರೂ ಇನ್ನಿಲ್ಲವೆಂಬಷ್ಟು ನೋವಾಗುತ್ತಿತ್ತು. ನಿಜ ಹೇಳಬೇಕಂದ್ರೆ ಕ್ಯಾನ್ಸರ್‌ ಸರ್ಜರಿಗಿಂತಲೂ ಪೋರ್ಟ್‌ ಅಳವಡಿಸಲು ಮಾಡಿದ ಸರ್ಜರಿಯೇ ಹೆಚ್ಚು ನೋವು ಕೊಟ್ಟಂತಿತ್ತು. ಬಲಭಾಗದಲ್ಲಿ ಮಗ್ಗಲು ಮಲಗಲು ಸಾಧ್ಯವೇ ಇರಲಿಲ್ಲ. ಒಟ್ಟು ಮೂರು ಭಾಗದಲ್ಲಿ ಸೀಳಿ, ಕೂಡಿಸಲು ಹೊಲಿಗೆ ಜೊತೆಗೆ ಸ್ಟೆಪ್ಲರ್‌ ಹೊಡೆದಿದ್ದರಿಂದ ಆ ಸ್ಥಿತಿ ಆ ದೇವರಿಗೇ ಪ್ರೀತಿ. ನನ್ನ ಶತ್ರುವಿಗೂ ಬೇಡಪ್ಪ ಅನ್ನಿಸಿತು. ಬಲಗೈ ತೋಳು ದೇಹದ ಜೊತೆ ಸಂಬಂಧವಿಟ್ಟುಕೊಂಡಿದೆಯೋ ಇಲ್ಲವೋ ಎಂಬಂತ ಭಾವನೆ.

ಏಕೆಂದರೆ ಕಂಕುಳವರೆಗೂ ಸೀಳಿ ಅಲ್ಲಿ ನೋಡ್ಸ್‌ಗಳನ್ನು ತೆಗೆದು ಹಾಕಿದ್ದರಿಂದ ಬಲ ತೋಳಿಗೆ ಜೀವವೇ ಇಲ್ಲವೆಂಬತಾಯಿತು. ಮರಗಟ್ಟಿದ್ದರಿಂದ ಮುಟ್ಟಿದರೂ ತಿಳಿಯದ ಸ್ಥಿತಿ. ಡ್ರೈನ್‌ ಪೈಪ್‌ನಲ್ಲಿ ರಕ್ತ, ನೀರು ಒಸರುತ್ತಲೇ ಇತ್ತು. 10 ಮಿಲಿಗೆ ಬರುವರೆಗೂ ಅದು ನನ್ನ ದೇಹದೊಂದಿಗೆ ಸಂಪರ್ಕ ಹೊಂದಿರಲೇಬೇಕು. ಮಲಗಿದಾಗಲೂ ಪಕ್ಕದಲ್ಲಿ ಹಸುಗೂಸನ್ನು ಮಲಗಿಸಿಕೊಂಡಂತೆ ಅದನ್ನು ನಾಜೂಕಾಗಿ ಇಟ್ಟುಕೊಳ್ಳಬೇಕಿತ್ತು. ಏಕೆಂದರೆ ಡ್ರೈನ್‌ ಪೈಪ್‌ಅನ್ನು ಆಪರೇಷನ್‌ ಮಾಡಿದ ಜಾಗಕ್ಕೆ ಒಳಸೇರಿಸಿ, ಹೊಲಿಗೆ ಹಾಕಿ ಫಿಕ್ಸ್‌ ಮಾಡಲಾಗಿತ್ತು. ಎಲ್ಲಿಯಾದರೂ ಎಳೆದುಕೊಂಡರೆ ಅದನ್ನು ಅನುಭವಿಸೋದು ಇನ್ನೂ ಕಷ್ಟ. ಮತ್ತೊಬ್ಬ ಸಿಸ್ಟರ್‌ ಬಂದು ಡ್ರೈನ್‌ ಬಾಕ್ಸ್‌ ಚೆಕ್‌ ಮಾಡಿ, ಅದರಲ್ಲಿ ಸಂಗ್ರವಾಗಿದ್ದ ಡಿಸ್ಚಾರ್ಜ್‌ ರಕ್ತವನ್ನು ಅಳೆದು ಅದನ್ನು ಎಂಟ್ರಿ ಮಾಡಿಕೊಂಡು ಹೋದರು.

ಅವರು ಹೊರಡುತ್ತಲೇ ಮತ್ತೊಬ್ಬ ಸಿಸ್ಟರ್‌ ವೀಲ್‌ಚೇರ್‌ ಜೊತೆ ಬಂದು, ‘ಮೇಡಂ,ಈಗೊಂದು ಎಕ್ಸರೇ ಇದೆ’ ಎಂದವಳೇ ವೀಲ್‌ಚೇರ್‌ಅನ್ನು ಬೆಡ್‌ ಪಕ್ಕಕ್ಕೆ ಆನಿಸಿ ಇಟ್ಟಳು. ಬೆಡ್‌ ಮೇಲಿನಿಂದ ತಕ್ಷಣಕ್ಕೆ ಏಳೋದು ಕಷ್ಟವೆನಿಸಿತು. ನನ್ನ ಬೆಡ್‌ ಕಿಟಕಿ ಪಕ್ಕದಲ್ಲೇ ಇದ್ದುದ್ದರಿಂದ ಏಳುವಾಗ ಎಡಗೈಯಿಂದ ಕಿಟಕಿಯ ಸರಳು ಹಿಡಿದು ಪ್ರಯಾಸವಾಗಿ ಎದ್ದೆ. ಸಿಸ್ಟರ್‌ ಬಲಗೈ ಹಿಡಿದರು. ಅಬ್ಬಾ ಎಂದು ಎದ್ದು ಕುಳಿತೆ. ಶಾಲೊಂದನ್ನು ಮೇಲೆ ಹರವಿಕೊಂಡೆ. ನಿಧಾನವಾಗಿ ವೀಲ್‌ಚೇರ್‌ ಮೇಲೆ ಡ್ರೈನ್‌ ಬಾಕ್ಸ್‌ ಸಮೇತ ಕುಳಿತೆ. ಸಿಸ್ಟರ್‌ ದೂಡಿಕೊಂಡು ಲಿಫ್ಟ್‌ ಕಡೆ ಸಾಗಿದರು. ಎಕ್ಸರೇ ರೂಮಿನ ಹೊರಗೆ ಒಂದೈದು ನಿಮಿಷ ಕಾಯೋದು ತುಸು ಹಿಂಸೆ ಎನಿಸಿತು. ಎಕ್ಸರೇ ಮಾಡೋ ಬ್ರದರ್‌ ಬಂದವರೇ, ಗೋಡೆಗೆ ತಾಗಿ ನಿಲ್ಲಲು ಹೇಳಿದರು. ಅಲುಗಾಡಬೇಡಿ ಎಂದು ಸೂಚನೆ ನೀಡಿ ಎಕ್ಸರೇ ಮಾಡಿದರು. ಅಲ್ಲಿಂದ ಮತ್ತೆ ರೂಮಿಗೆ ಬರುವುದರೊಳಗೆ ತ್ರಾಣವೇ ಇಲ್ಲದಂತಾಯಿತು. ಎಡ ಮತ್ತು ಬಲಭಾಗದ ಎದೆ ಭಾಗ, ಬಲಭಾಗದ ಬೆನ್ನಿನಲ್ಲಿ ಕತ್ತರಿ ಪ್ರಯೋಗಗಳು ನಡೆದಿದ್ದರಿಂದ ಆ ನೋವನ್ನು ಮರೆಯಲು ಯಥೇಚ್ಛವಾಗಿ ನೀಡಲಾದ ಪೇನ್‌ಕಿಲ್ಲರ್‌ ನನ್ನ ನೋವನ್ನು ತಾತ್ಕಾಲಿಕವಾಗಿ ಮರೆಸಿದ್ದವು. ನಾವೂ ಕತ್ತರಿ ಪ್ರಯೋಗ (ಎಡಿಟಿಂಗ್‌) ಮಾಡುತ್ತೇವೆ. ಆದರೆ ಪತ್ರಿಕೆಯ ವರದಿಗಳ ಮೇಲೆ. ಶಸ್ತ್ರಚಿಕಿತ್ಸಕರಿಗೂ ನಮಗೂ (ಜರ್ನಲಿಸ್ಟ್‌) ಇಷ್ಟೇ ವ್ಯತ್ಯಾಸ ನೋಡಿ.

ಪ್ರತಿನಿತ್ಯ ನಾಲ್ಕು ತಾಸಿಗೊಮ್ಮೆ ಪೇನ್‌ಕಿಲ್ಲರ್‌, ಆ್ಯಂಟಿಬಯಾಟಿಕ್‌ ಅದು ಇದು ಅಂತ ಒಟ್ಟೊಟ್ಟಿಗೇ ಮೂರ್ನಾಲ್ಕು ಗುಳಿಗೆ ನುಂಗಬೇಕಿತ್ತು. ಅದು ಕೂಡ ಒಂದೊಂದು 500, 600 ಎಂ.ಜಿ ಗುಳಿಗೆ. ಅಂಥವು ದಿನಕ್ಕೆ 15ರಷ್ಟು ಗುಳಿಗೆ ನುಂಗುತ್ತಿದ್ದೆ. ಅದರಿಂದ ದೇಹದ ಉಷ್ಣಾಂಶ ಏರುತ್ತಲೇ ಇತ್ತು. ಗುಳಿಗೆ ಪವರ್‌ ಇರುವಷ್ಟು ಹೊತ್ತು ನೋವು ಕುಗ್ಗಿದರೂ ಪವರ್‌ ಕಡಿಮೆಯಾಗುತ್ತಲೇ ನೋವು ತಾಂಡವವಾಡುತ್ತಿತ್ತು.

Shelfigeruva Munna Uri Baana Beladingalu Cancer journey of Journalist Krishni Shiroor

ಗಾಯತ್ರಿ ಮುದ್ರೆಯಲ್ಲಿ ನಿರತ ಕೃಷ್ಣಿ

ನನ್ನ ನೆಗೆಣ್ಣಿ ನಾಗರತ್ನಾ ಆಸ್ಪತ್ರೆಯಲ್ಲಿ ನನ್ನ ಜೊತೆಗಿದ್ದಳು. ವಾಷ್‌ರೂಮ್‌ಗೆ ಕರೆದೊಯ್ಯುವುದು, ತಡರಾತ್ರಿ ಔಷಧ, ಗುಳಿಗೆ ಎಲ್ಲವನ್ನೂ ಅವಳೇ ನೋಡಿಕೊಂಡಳು. ಅವಳಿಗೂ ಅಶಕ್ತತೆ ಇದ್ದಿದ್ದರಿಂದ ನಿದ್ದೆ ಸ್ವಲ್ಪ ಜಾಸ್ತಿ; ಎಷ್ಟೆಂದರೆ ಕುಳಿತಲ್ಲೇ ಜಾರಿ ಬೀಳುವಷ್ಟು. ಹಾಗೇ ನಿದ್ದೆಗೆ ಜಾರಿದ ಅವಳನ್ನು ಎಬ್ಬಿಸಲು ಮನಸ್ಸಾಗುತ್ತಿರಲಿಲ್ಲ. ಎರಡನೇ ದಿನದಿಂದ ನಾನೇ ಶ್ರಮ ಹಾಕಿ ವಾಷ್‌ರೂಂಗೆ ಹೋಗಿ ಬಂದೆ. ಆಸ್ಪತ್ರೆಯ ಗೌನ್‌ ಬದಲಾಯಿಸಲಾಯಿತು. ಸರ್ಜರಿ ಮಾಡಿದ್ದರಿಂದ ಚೆಕ್‌ಅಪ್‌ಗೆ ಅನುಕೂಲವಾಗುವ ಗೌನ್‌ ತಂದು ತೊಡಿಸುವಂತೆ ಡಾ.ಕೋರಿ ಅವರು ನನ್ನ ಚಿಕ್ಕಮ್ಮ, ಮಾಮಿಗೆ ಹೇಳಿದ್ದರಿಂದ ಅವರು ಸರ್ಜರಿ ದಿನ ಹುಬ್ಬಳ್ಳಿಯ ಕೊಪ್ಪಿಕರ್‌ ರಸ್ತೆಗೆ ಹೋಗಿ ಎರಡು ಗೌನ್‌ ತಂದಿದ್ದರು. ಅದೇನಾಗಿತ್ತೆಂದರೆ ನನಗೆ ದೊಗಳೆಯಾಗಿತ್ತು. ಚೆಂದ–ಅಂದ ಯಾರಿಗೆ ಬೇಕಿತ್ತು. ಮೈಮುಚ್ಚಲು ಬಟ್ಟೆ ಇದ್ದರೆ ಸಾಕು ಅನ್ನುವಂತ ಮನಃಸ್ಥಿತಿಯದು.

ನನಗೋ ಬೆಡ್‌ ಬಿಟ್ಟು ಏಳಲು ಕಷ್ಟಪಡಬೇಕಾಯಿತು. ಇದ್ದಿದ್ದರಲ್ಲಿ ಬೆಡ್‌ ಪಕ್ಕ ಕಿಟಕಿ ಬಂದಿದ್ದರಿಂದ ಆ ಕಿಟಕಿಯ ಸರಳುಗಳನ್ನು ಹಿಡಿದು ಪ್ರಯಾಸಪಟ್ಟಾದರೂ ಏಳುವುದನ್ನು ರೂಢಿಸಿಕೊಂಡೆ. ಬೆನ್ನಿನ ಮೇಲೆ ಹೊಡೆದ ಪಿನ್‌ಗಳ ಮೇಲೆ ಮಲಗಿದ್ದು ನನಗೆ ಮಹಾಭಾರತದಲ್ಲಿ ಬಾಣಗಳ ಮೇಲೆ ಮಲಗಿದ್ದ ಭೀಷ್ಮನನ್ನು ನೆನಪಿಸಿತು. ದೇಹದ ಎಲ್ಲೆಲ್ಲಿ ಕತ್ತರಿ ಪ್ರಯೋಗ ಆಗಿದೆಯೋ ಅನ್ನೋ ಅರಿವು ನಿಧಾನವಾಗಿ ಆಗ್ತಿತ್ತು. ಮಲಗಿದಾಗ ಬೆನ್ನಿಗೆ ಏನೋ ಒತ್ತಿದ ಅನುಭವವಾಗಿ ಎಡಗೈಯನ್ನು ಹಾಗೇ ಬೆನ್ನಿಗೆ ಒಯ್ದು ಸವರಿದೆ. ಮಧ್ಯಭಾಗದಲ್ಲಿ ಊದಿಕೊಂಡಂತಿತ್ತು. ಒಂಥರಾ ಸ್ವಲ್ಪ ಹವಾ ಇಳಿದ ಬಲೂನು ಮುಟ್ಟಿದಂತೆ. ಅಲ್ಲಿವರೆಗೂ ಸ್ಟೆಪ್ಲರ್‌ ಪಿನ್‌ ಹೊಡೆಯಲಾಗಿತ್ತು. ನನಗೆ ಅದೇನೆಂದು ಅರ್ಥವಾಗಲಿಲ್ಲ. ಡಾ.ಕೋರಿ ರೌಂಡ್ಸ್‌ಗೆ ಬಂದರು. ನಾನು ಎದ್ದು ಕೂರಲು ಪಟ್ಟ ಪ್ರಯತ್ನ ಕಂಡು ಅವರೇ ಓಡಿ ಬಂದು, ಕೂರಿಸಿದರು.

ಹೇಗಿದ್ದಿ..? ಎಂದು ಕೇಳಿದರು. ಅವರು ಕೇಳೋದೇ ಹಾಗೆ. ಅವರ ಮಾತಿನಲ್ಲಿ ತುಂಬಾ ಆತ್ಮೀಯತೆ ಇತ್ತು. ರೋಗಿಗೆ ಚಿಕಿತ್ಸೆ ಜೊತೆಗೆ ಅವರ ಡಾಕ್ಟರ್‌ ಕಡೆಯಿಂದ ಬೇಕಿರುವ ಅಗತ್ಯ ಈ ಆತ್ಮೀಯ ಭಾವವೆಂಬ ಟ್ಯಾಬ್ಲೆಟ್‌, ಡಾ.ಕೋರಿ ಡಾಕ್ಟರ್‌ ಹತ್ತಿರವಿತ್ತು. ಅದಕ್ಕೆ ಅಲ್ಲಿ ಸರ್ಜರಿಗೊಳಗಾದ ಎಲ್ಲ ರೋಗಿಗಳಿಗೂ ಕೋರಿ ಡಾಕ್ಟರ್‌ ಎಂದರೆ ಗೌರವ. ಅಷ್ಟೇ ಅಚ್ಚು ಮೆಚ್ಚು. ಎಷ್ಟೋ ಹಿರಿಯ ರೋಗಿಗಳು ಕೂಡ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೋಗುವಾಗ ಅವರ ಕಾಲಿಗೆ ಬಿದ್ದು ಹೋಗಿದ್ದನ್ನು ನಾನು ಗಮನಿಸಿದ್ದೆ. ನಿಜ ಅವರಲ್ಲಿ ಅಂಥ ದೊಡ್ಡಗುಣವಿತ್ತು.

ಡಾಕ್ಟರ್‌ ಅವರ ಪ್ರೀತಿಯ ಮಾತಿಗೆ ‘ಸ್ವಲ್ಪ ಬೆಟರ್‌. ನಿನ್ನೆಗಿಂತ ಓಕೆ’ ಅಂದೆ. ‘ಕೈಗೆ ವ್ಯಾಯಾಮ ಮಾಡಬೇಕು. ಮೇಲಕ್ಕೆ ಎತ್ತಲು ಪ್ರಯತ್ನಿಸಬೇಕು, ತಲೆ ಮೇಲೆ ಬಲಗೈಯಿಂದ ದೀರ್ಘ ಸುತ್ತ ಹಾಕಬೇಕು. ಬೆನ್ನ ಹಿಂದೆ ಕೈ ಮುಗಿಯುವುದನ್ನು ರೂಢಿಸಿಕೊಳ್ಳಲೇಬೇಕು’ ಎಂದು ಸಲಹೆ ನೀಡಿದರು. ಈ ಪರಿಸ್ಥಿತಿಯಲ್ಲಿ ಇದೆಲ್ಲ ಸುಲಭವೆನಿಸಿರಲಿಲ್ಲ. ಏಕೆಂದರೆ ಕೈಯನ್ನು ತುಸು ಅಲ್ಲಾಡಿಸಲು ಆಗದ ಸ್ಥಿತಿಯದು. ಆಯ್ತು ಡಾಕ್ಟರ್‌ ಟ್ರೈ ಮಾಡ್ತೇನೆ ಎಂದೆ. ಬೆನ್ನಿನ ಮೇಲಿನ ಊತದ ಬಗ್ಗೆ ಡಾಕ್ಟರ್‌ಅನ್ನೇ ಕೇಳಿದೆ. ಅದುಹಾಗೇ ಇರೋದು ಎಂದು ಸಣ್ಣಗೆ ನಕ್ಕರು. ಡಾ.ಕೋರಿ ಅವರ ಕಣ್ಣು ನನ್ನ ದೊಗಳೆ ಗೌನ್‌ ಮೇಲೆ ಬಿತ್ತು. ನನ್ನನ್ನು ನೋಡಿ, ಹಾಗೇ ನನ್ನ ನೆಗೆಣ್ಣಿ (ನಾಗರತ್ನ)ಯನ್ನು ನೋಡಿ, ‘ಗೌನ್‌ ಸ್ಲೀವ್‌ ಒಳಗೆ ನೀನು ಹೋಗ್ತಿಯಾ’ ಅಂಥ ಕಿಚಾಯಿಸಿದ್ರು. ನಗೋದು ಅವಳಿಗೆ ಹೇಳೋದೆ ಬೇಡ. ನನಗೂ ನಗು ತಡೆಯಲಾಗಲಿಲ್ಲ. ನಕ್ಕಿದ್ದಕ್ಕೆ ದೇಹದ ಕೆಲವು ಭಾಗಗಳು ಸಡಿಲಗೊಂಡ ಅನುಭವವಾಯಿತು.

ಅಂತೂ ಸರ್ಜರಿ ಆಗಿ ಮೂರನೇ ದಿನಕ್ಕೆ ನಾನೊಬ್ಬಳೇ ವಾಶ್‌ರೂಮ್‌ಗೆ ಹೋಗಿಬರುವಷ್ಟು ಗಟ್ಟಿಯಾದೆ. ಬಲಗೈ ಎತ್ತುವುದು ಕಷ್ಟವೆನಿಸಿದ್ದರಿಂದ ಎಡಗೈಯಲ್ಲೇ ಹಲ್ಲುಜ್ಜಿ, ಮುಖಕ್ಕೆ ಸ್ಪಲ್ವ ನೀರು ಸವರಿಕೊಂಡೆ. ಮಲಗಿ ಬೇಜಾರಾದಾಗ ರೂಮಿನಲ್ಲೇ ವಾಕ್‌ ಮಾಡುತ್ತಿದ್ದೆ.

(ಪುಸ್ತಕದ ಖರೀದಿಗಾಗಿ ಸಂಪರ್ಕಿಸಿ : 9482558576)

*

ಕೃಷ್ಣಿ ಶಿರೂರ : ಉತ್ತರ ಕನ್ನಡದ ಶಿರಸಿ ಸಮೀಪದ ಕಾನಸೂರಿನಲ್ಲಿ ಹುಟ್ಟಿ, ಅಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದಾರೆ. ಶಿರಸಿಯಲ್ಲಿ ಪದವಿ ಶಿಕ್ಷಣದ ನಂತರ ಅಲ್ಲಿನ ಸ್ಥಳೀಯ ಪತ್ರಿಕೆ ‘ಧ್ಯೇಯನಿಷ್ಠ ಪತ್ರಕರ್ತ’ದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. 13 ವರ್ಷಗಳಿಂದ ಹುಬ್ಬಳ್ಳಿ ಪ್ರಜಾವಾಣಿಯಲ್ಲಿ ಹಿರಿಯ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ, ಜಿ.ಎಸ್.ಹೆಗಡೆ ದತ್ತಿನಿಧಿ ಪ್ರಶಸ್ತಿ, ರಾಜ್ಯ ಕಾರ್ಯನಿರತರಾದ ಪತ್ರಕರ್ತರ ಸಂಘ ನೀಡುವ ಅತ್ಯುತ್ತಮ ಗ್ರಾಮೀಣ ವರದಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. Best City Reporter award by Dharwad district working journalist union. Women Achiever award by Malabar Gold n Diamonds Hubli. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಅತ್ಯುತ್ತಮ ಸ್ಕೂಪ್‌ ವರದಿಗಾಗಿ ನೀಡುವ 2018ಸಾಲಿನ ವಾರ್ಷಿಕ ಬಿ.ಎಸ್‌.ವೆಂಕಟರಾಮ್‌ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ : Journalist : ಶೆಲ್ಫಿಗೇರುವ ಮುನ್ನ; ‘ಪತ್ರಿಕೋದ್ಯಮ ಪ್ರವೇಶ’ ಸಿಬಂತಿ ಪದ್ಮನಾಭರ ಕೃತಿ ನಾಳೆಯಿಂದ ಓದಿಗೆ

Published On - 3:19 pm, Wed, 2 February 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ