ಸ್ವಾತಿ ನಕ್ಷತ್ರದ ಮಳೆ ನೀರಿಗಿದೆ ಔಷಧೀಯ ಮಹತ್ವ; ಉತ್ತರ ಕನ್ನಡ ಜನರ ಪಾಲಿಗಂತೂ ಇದು ಅಮೃತಕ್ಕೆ ಸಮಾನ !

Swati Nakshatra: ಉತ್ತರ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ಕೆಲವು ಮನೆಗಳಲ್ಲಿ ಎಷ್ಟು ಆಸ್ಥೆಯಿಂದ ಈ ಸ್ವಾತಿ ಮಹಾ ನಕ್ಷತ್ರದ ಮಳೆ ನೀರನ್ನು ಸಂಗ್ರಹಿಸುತ್ತಾರೆ ಎಂದರೆ, ಅದಕ್ಕೆಂದೇ ದೊಡ್ಡದೊಡ್ಡ ಸ್ಟೀಲ್​ ಪಾತ್ರೆಗಳು, ಹಂಡೆಗಳನ್ನು ಮೀಸಲಿಟ್ಟಿದ್ದಾರೆ.

ಸ್ವಾತಿ ನಕ್ಷತ್ರದ ಮಳೆ ನೀರಿಗಿದೆ ಔಷಧೀಯ ಮಹತ್ವ; ಉತ್ತರ ಕನ್ನಡ ಜನರ ಪಾಲಿಗಂತೂ ಇದು ಅಮೃತಕ್ಕೆ ಸಮಾನ !
ಸಾಂಕೇತಿಕ ಚಿತ್ರ

ಸ್ವಾತಿ ಮುತ್ತಿನ ಮಳೆಹನಿಯೇ..ಈ ಹಾಡು ನಾವೆಲ್ಲ ಕೇಳಿದ್ದೇವೆ. ಇಲ್ಲಿ ಸ್ವಾತಿ ಎಂಬುದು ಒಂದು ನಕ್ಷತ್ರ.  ಈ ನಕ್ಷತ್ರದಲ್ಲಿ ಬೀಳುವ ಮಳೆಯೇ ಚಿಪ್ಪಿನೊಳಗಿನ ಮುತ್ತಾಗುತ್ತದೆ ಎಂಬ ಒಂದು ನಂಬಿಕೆಯಂತೂ ಮೊದಲಿನಿಂದಲೂ ಇದೆ. ಆದರೆ ಇದಕ್ಕೂ ಮೀರಿ ಈ ಸ್ವಾತಿ ನಕ್ಷತ್ರದಲ್ಲಿ ಬೀಳುವ ಮಳೆ ನೀರಿಗೆ ಔಷಧ ಗುಣವಿದೆ. ಇದು ಅಮೃತಕ್ಕೆ ಸಮಾನ ಎಂಬುದು ಉತ್ತರ ಕನ್ನಡ ಮತ್ತು ಕರಾವಳಿಯ ಕೆಲ ಪ್ರದೇಶಗಳ ಜನರ ನಂಬಿಕೆ !

ಅಚ್ಚರಿಯಾದರೂ ಇದು ಸತ್ಯ..ಅಂದಹಾಗೆ ಈ ಸ್ವಾತಿ ಮಳೆ ಪ್ರತಿವರ್ಷ ಖಾಯಂ ಆಗಿ ಬಿದ್ದೇಬಿಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದು ಅಕ್ಟೋಬರ್​ ಕೊನೆಯಲ್ಲಿ ಶುರುವಾಗುವ ನಕ್ಷತ್ರ..ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಚಳಿಗಾಲ ಪ್ರಾರಂಭವಾಗಿದ್ದು ಇಬ್ಬನಿಯ ಹವಾಮಾನ ಇರುತ್ತದೆ. ಮಳೆಗಾಲ ಮುಕ್ತಾಯವಾಗುವ ಸಮಯ.(ಈಗ ಬಿಡಿ ವರ್ಷ ಕಾಲಾವಧಿ ಮಳೆ ಇರುತ್ತದೆ) ಆದರೂ ಸ್ವಾತಿ ನಕ್ಷತ್ರದ ಅವಧಿ ಮುಗಿಯುವುದರೊಳಗೆ ಎರಡು-ಮೂರು ಬಾರಿ ಮಳೆ ಬರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಬಾರಿ ಅಕ್ಟೋಬರ್​ 24ರಿಂದ ಶುರುವಾಗಿದ್ದ ಸ್ವಾತಿ ನಕ್ಷತ್ರ ನವೆಂಬರ್​ 6ಕ್ಕೆ ಅಂದರೆ ಇಂದಿನವರೆಗೂ ಇತ್ತು. ಉತ್ತರ ಕನ್ನಡ ಭಾಗದಲ್ಲಿ ಈ ಸಲ ಸ್ವಾತಿ ಮಳೆಗೆ ಸಮಸ್ಯೆ ಆಗಲೇ ಇಲ್ಲ. ಹಾಗಾಗಿ ಸ್ವಾತಿ ನಕ್ಷತ್ರದ ಮಳೆ ನೀರು ಸಂಗ್ರಹಣೆಯ ಕಾರ್ಯವೂ ಸ್ವಲ್ಪ ಜೋರಾಗಿಯೇ ನಡೆದಿದೆ.

ಸಂಗ್ರಹಣೆ ಹೇಗೆ?
ಆಯುರ್ವೇದಲ್ಲಿ ನೀರನ್ನು ಔಷಧ ಎಂದೇ ಪರಿಗಣಿಸಲಾಗುತ್ತದೆ. ಅಜೀರ್ಣದಂಥ  ಸಮಸ್ಯೆಗಳು ಎದುರಾದಾಗ ಬರೀ ನೀರು, ದ್ರವ ಪದಾರ್ಥವನ್ನು ಮಾತ್ರ ಹೊಟ್ಟೆಗೆ ಹಾಕಿ ಎನ್ನುವುದನ್ನು ಕೇಳಿದ್ದೇವೆ. ಹಾಗಂತ ನೀರನ್ನು ಒಂದು ಸಾಮಾನ್ಯ ಪದಾರ್ಥದಂತೆ ನಾವು ನೋಡುತ್ತೇವೆ. ಆದರೆ ಉತ್ತರಕನ್ನಡದ ಜನರು ಸ್ವಾತಿ ಮಳೆ ನೀರನ್ನು ನಿಜಕ್ಕೂ ಔಷಧ ಎಂದೇ ಭಾವಿಸುತ್ತಾರೆ. ಹಾಗಾಗಿ ಈಗ ಬರುವ ಮಳೆ ನೀರನ್ನು ಸಂಗ್ರಹಿಸುತ್ತಾರೆ. ಹಾಗಂತ ಮಳೆ ನೀರು ನೆಲಕ್ಕೆ ಬಿದ್ದಮೇಲೆ ಕೆರೆ, ಹಳ್ಳಗಳಲ್ಲಿ ಇರುವುದನ್ನು ಎತ್ತಿಟ್ಟುಕೊಳ್ಳುವುದಲ್ಲ. ಆಕಾಶದಿಂದ ಬೀಳುವ ಮಳೆ ಹನಿಯನ್ನು ನೇರವಾಗಿಯೇ ಪಾತ್ರೆಯಲ್ಲಿ ಹಿಡಿಯಲಾಗುತ್ತದೆ .

ಹೀಗೆ ಸಂಗ್ರಹಿಸಿದ ನೀರನ್ನು  ತಾಮ್ರ, ಸ್ಟೀಲ್ ಅಥವಾ ಗಾಜಿನ ಬಾಟಲಿ, ಪಾತ್ರೆಗಳಲ್ಲಿ ಗಟ್ಟಿಯಾಗಿ ಮುಚ್ಚಿ, ಗಾಳಿ ಆಡದಂತೆ ಎಚ್ಚರಿಕೆ ವಹಿಸಿ ಇಟ್ಟುಕೊಳ್ಳಲಾಗುತ್ತದೆ. ಅದರಲ್ಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟರೆ ಒಂದು ವರ್ಷದವರೆಗೂ ಹಾಳಾಗುವುದಿಲ್ಲ ಎಂಬ ಕಾರಣಕ್ಕೆ ತಾಮ್ರದ ಪಾತ್ರೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ.  ಮತ್ತೆ ಬರುವ ವರ್ಷ ಸ್ವಾತಿ ನಕ್ಷತ್ರ ಶುರುವಾಗುವವರೆಗಾದರೂ ಸಾಕಾಗುವಷ್ಟು ನೀರನ್ನು ಸಾಮಾನ್ಯವಾಗಿ ಹಿಡಿದಿಟ್ಟುಕೊಳ್ಳುತ್ತಾರೆ.

ಅಷ್ಟಕ್ಕೂ ಸ್ವಾತಿ ಮಳೆನೀರಿನ ಉಪಯೋಗಗಳೇನು?
ಸ್ವಾತಿ ನಕ್ಷತ್ರದಲ್ಲಿ ಬೀಳುವ ಮಳೆಯಲ್ಲಿ ಔಷಧೀಯ ಗುಣಗಳು ಇರುತ್ತವಂತೆ. ಸಂಗ್ರಹಿಸಿಕೊಂಡ ನೀರಿನ ಹನಿಗಳನ್ನು ಹಲವು ರೀತಿಯ ನಾಟಿ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ ಮತ್ತು ಅದು ಸತ್ಯವೂ ಹೌದು. ಇನ್ನು ಸಣ್ಣಪುಟ್ಟ ಕಿವಿ ನೋವು, ಕಣ್ಣು ಉರಿ, ನೋವುಗಳಿಗೆಲ್ಲ ಈ ನೀರಿನ ಹನಿ ಅತ್ಯುತ್ತಮ ಔಷಧ ಎನ್ನುತ್ತಾರೆ ಉತ್ತರ ಕನ್ನಡ ಭಾಗದ ಹಿರಿಯರು. ಕಾಲು ನೋವು, ಸಂದು ನೋವು, ಕೂದಲು ಉದುರುವಿಕೆ ತಡೆಯಲು ಕೂಡ ಸ್ವಾತಿ ಮಳೆ ನೀರು ಉಪಯುಕ್ತ. ಅಂದಹಾಗೆ, ಕಂತುಗುರು ಎಂಬ ಒಂದು ಸಮಸ್ಯೆ ಇಲ್ಲಿನವರಿಗೆ ಸಾಮಾನ್ಯವಾಗಿ ಕಾಡುತ್ತದೆ. ಗದ್ದೆ, ತೋಟ, ಕೆಸರು ಮಣ್ಣಿನಲ್ಲಿ ಕೆಲಸ ಮಾಡುವವರ ಕೈ-ಕಾಲುಗಳು ಉಗುರು ಹಾಳಾಗುತ್ತದೆ. ಅದು ಕೆಂಪಾಗಿ, ಸೆಪ್ಟಿಕ್​ ಆಗಿ ನೋವು ಕಾಣಿಸಿಕೊಳ್ಳುತ್ತದೆ. ಉಗುರು ಹಾಳಾಗುವ ಈ ಸಮಸ್ಯೆಯನ್ನು ಸ್ವಾತಿ ಮಳೆ ನೀರು ನಿವಾರಣೆ ಮಾಡುತ್ತದೆ ಎಂಬುದನ್ನು ಅದರಿಂದ ಗುಣಪಡಿಸಿಕೊಂಡವರೇ ಹೇಳುತ್ತಾರೆ.

ಹಾಲಿಗೆ ಹೆಪ್ಪು ಮಾಡುವ ಸಂಪ್ರದಾಯ
ಇದೊಂದು ವಿಶೇಷ ಆಚರಣೆ ಇದೆ. ಸ್ವಾತಿ ನಕ್ಷತ್ರ ಶುರುವಾದ ಮೇಲೆ ಬೀಳುವ ಹೊಸ ಮಳೆಯ ನೀರನ್ನು ಹಿಡಿದಿಟ್ಟುಕೊಂಡು, ಆ ನೀರನ್ನು ಹಾಲಿಗೆ ಹೆಪ್ಪು ಹಾಕುವಾಗ ಸೇರಿಸಿ ಹೊಸ ಮೊಸರು ಮಾಡಲಾಗುತ್ತದೆ. ಈ ಸ್ವಾತಿ ಮಳೆ ನೀರನ್ನೊಳಗೊಂಡ ಮೊಸರು ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದ್ದು, ಉತ್ತರ ಕನ್ನಡದ ಗೋಕರ್ಣ, ಕಾರವಾರದ ಕಡೆಗಳಲ್ಲಿ ಈ ಆಚರಣೆ ಇದೆ. ಅಂದಹಾಗೆ ಸ್ವಾತಿ ಮಳೆ ನೀರಿನ ಮೊಸರು ತುಂಬ ರುಚಿಯಾಗಿರುತ್ತದೆ. ವರ್ಷಕ್ಕೊಮ್ಮೆ ಈ ಮೊಸರು ಸೇವನೆ ಮಾಡಬೇಕು ಎಂಬುದು ಇಲ್ಲಿನ ಹಳೇ ಜನರ ಅಂಬೋಣ.

ಉತ್ತರ ಕನ್ನಡ ಮತ್ತು ಕರಾವಳಿ ಭಾಗದಲ್ಲಿ ಕೆಲವು ಮನೆಗಳಲ್ಲಿ ಎಷ್ಟು ಆಸ್ಥೆಯಿಂದ ಈ ಸ್ವಾತಿ ಮಹಾ ನಕ್ಷತ್ರದ ಮಳೆ ನೀರನ್ನು ಸಂಗ್ರಹಿಸುತ್ತಾರೆ ಎಂದರೆ, ಅದಕ್ಕೆಂದೇ ದೊಡ್ಡದೊಡ್ಡ ಬಕೆಟ್​, ಹಂಡೆಗಳನ್ನು ಮೀಸಲಿಟ್ಟಿದ್ದಾರೆ. ಈ ನೀರು ಕೀಟನಾಶಕ ಎಂದು ನಂಬಿರುವ ಅವರು ಮನೆಯ ಹಿತ್ತಲಿನ ಗಿಡಗಳಿಗೆ ಹುಳ ಬಿದ್ದಾಗ ಕೂಡ ಅದಕ್ಕೆ ಈ ನೀರನ್ನು ಸಿಂಪಡಣೆ ಮಾಡುವುದು ಉಂಟು. ಒಟ್ಟಾರೆ ಹೇಳಬೇಕೆಂದರೆ ಸ್ವಾತಿ ನಕ್ಷತ್ರದ ಅಪರೂಪದ ಮಳೆ ಉತ್ತರ ಕನ್ನಡಿಗರ ಪಾಲಿಗೆ ಒಂದು ವಿಶೇಷ ನೀರಂತೂ ಹೌದು. ಒಂದು ಸಣ್ಣ ಗಾಜಿನ ಬಾಟಲಿಯಲ್ಲಾದರೂ ಸಂಗ್ರಹ ಇರಬೇಕು, ಯಾವುದಕ್ಕಾದರೂ ತುರ್ತು ಸಮಯಕ್ಕೆ ಆಗುತ್ತದೆ ಎಂಬುದು ಅವರ ವಾದ. ಅಂದಹಾಗೆ ಸ್ವಾತಿ ಮಳೆಗೆ ಕೊಡುವಷ್ಟೇ ಪ್ರಾಶಸ್ತ್ಯವನ್ನು ಸ್ವಾತಿ ನಕ್ಷತ್ರದ ಬಿಸಿಲಿಗೂ ಇಲ್ಲಿನ ಜನ ನೀಡುತ್ತಾರೆ. ಮನೆಯಲ್ಲಿರುವ ರೇಷ್ಮೆ ಸೀರೆ, ಬಟ್ಟೆ ಯಾವುದೇ ಇರಲಿ ಅದನ್ನು ತಂದು ಬಿಸಿಲಿಗೆ ಹರವುತ್ತಾರೆ. ಹೀಗೆ ಮಾಡುವುದರಿಂದ ರೇಷ್ಮೆ ಬಟ್ಟೆಗೆ ಹುಳ ಬೀಳುವುದಿಲ್ಲ, ಅದು ತುಂಬ ವರ್ಷದವರೆಗೆ ಹಾಳಾಗದಂತೆ ಇರುತ್ತದೆ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ: ನನ್ನ ಮೇಲೆ ಪೆಗಾಸಸ್ ಬಳಸಿ ಗೂಢಚರ್ಯೆ ನಡೆಸಲಾಗುತ್ತಿದೆ: ಸಿದ್ದರಾಮಯ್ಯ ಆತಂಕಕ್ಕೆ ಕೇಂದ್ರ ಗೃಹ ಇಲಾಖೆ ಸ್ಪಂದನೆ

Click on your DTH Provider to Add TV9 Kannada