ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

15 ಸಾವಿರ ಸಂಬಳದಲ್ಲಿ ತಿಂಗಳ ಅಗತ್ಯ ಖರ್ಚೇ 10 ಸಾವಿರ. ಉಳಿತಾಯ 4 ರಿಂದ 5 ಸಾವಿರ. ಪರಿಸ್ಥಿತಿ ಇಂತಿರುವಾಗ ನಿಮಗೆ 12 ಸಾವಿರದ ಮೊಬೈಲ್ ಕೊಳ್ಳುವ ಆಸೆಯಾಯಿತು. ಹೇಗೆ ಕೊಳ್ಳುವುದು? ಇಲ್ಲಿದೆ ನಾವೆಲ್ಲರೂ ಅನುಸರಿಸಬೇಕಾದ ಸುಲಭ ಮಾರ್ಗ.

  • ಗುರುಗಣೇಶ್ ಭಟ್ ಡಬ್ಗುಳಿ
  • Published On - 6:56 AM, 13 Jan 2021
ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?
ಸಾಂದರ್ಭಿಕ ಚಿತ್ರ

ಹಣ ಉಳಿಸಬೇಕೆನ್ನುವ ಆಸೆಯ ಜೊತೆಗೆ ಇತರ ಖರ್ಚು ವೆಚ್ಚಗಳನ್ನು ನಾವು ನಿಭಾಯಿಸಬೇಕಿದೆ. ದಿನನಿತ್ಯದ ಖರ್ಚುಗಳನ್ನು ಹೊರತುಪಡಿಸಿ ಆಗಾಗ ವಿಶೇಷ ಖರ್ಚುಗಳು ಪ್ರತಿಯೊಬ್ಬರಿಗೂ ಬಂದೇ ಬರುತ್ತವೆ. ಒಮ್ಮೆ ಪೇಟೆಗೆ ಹೋಗಿ ಬಂದೆವೆಂದರೆ ಕೈಯಲ್ಲಿರುವ ದುಡ್ಡೆಲ್ಲ ಖಾಲಿಯಾಗುತ್ತದೆ ಎಂದು ಒಬ್ಬ ಪೇಟೆಗೆ ಹೋಗುವುದನ್ನೇ ಬಿಟ್ಟನಂತೆ. ಇನ್ನೊಬ್ಬ ಖರ್ಚಾಗುತ್ತದೆ ಎಂದು ಊಟ, ತಿಂಡಿಯನ್ನೇ ಬಿಟ್ಟನಂತೆ. ಅಯ್ಯೋ.. ಅಷ್ಟೆಲ್ಲ ಕಷ್ಟ ಪಡುವುದು ಬೇಡ.. ನಿಗದಿತ ಆದಾಯದಲ್ಲಿ ಈ ವಿಶೇಷ ಖರ್ಚನ್ನು ನಿಭಾಯಿಸುವುದು ಹೇಗೆ? ಅಮ್ಮನಂತೆ ಡಬ್ಬದಲ್ಲಿ ಹಣ ಕೂಡಿಟ್ಟೋ, ಬ್ಯಾಂಕ್ ಅಕೌಂಟ್​ನಲ್ಲಿ ಉಳಿಸಿಯೋ ವಿಶೇಷ ಖರ್ಚುಗಳನ್ನು ಸರಿದೂಗಿಸುತ್ತಿದ್ದರೆ ನಿಮಗಾಗಿ ಇನ್ನಷ್ಟು ಸರಳ, ಸುಲಭ ದಾರಿಗಳಿವೆ. ಯಾವುದು ಎಂದು ತಲೆ ಕೆರೆದುಕೊಂಡಿರಾ? ತೀರಾ ಯೋಚನೆ ಬೇಡ, ನಮ್ಮ ಖರೀದಿಸುವ ಹವ್ಯಾಸಗಳಿಗೆ ಸ್ವಲ್ಪ ಬೇಲಿ ಹಾಕಿದರಾಯಿತು!

ಹೇಗದು? ನೀವು ಪ್ರಶ್ನೆ ಕೇಳುವ ಮುನ್ನವೇ ಉತ್ತರಿಸುತ್ತೇವೆ ಕೇಳಿ. ಈಗಾಗಲೇ ಹೇಳಿದಂತೆ ಮೂರು ಅಕೌಂಟ್​ಗಳಿಂದ ಉಳಿತಾಯದ ವಿಧಾನ ಓದಿದ್ದೀರಿ. ಆದರೆ, ಅಲ್ಲೊಂದು ಅನುಮಾನ ಮೂಡಿರಬಹುದು, ₹ 15 ಸಾವಿರದಲ್ಲಿ 10 ಸಾವಿರ ಖರ್ಚಿಗೆ ಹೋಯಿತು, ₹ 4 ಸಾವಿರ ಉಳಿತಾಯದ ಖಾತೆಗೆ, ಉಳಿದ ₹ 1 ಸಾವಿರ ಸಂಬಳದ ಅಕೌಂಟ್​ನಲ್ಲೇ ಉಳಿಯಿತು. ಸರಿ, ಹಾಗಾದರೆ ನಿಮಗೆ ಒಂದು ಮೊಬೈಲ್ ಕೊಳ್ಳುವ ಆಸೆಯಾಯಿತು. ಸ್ವಲ್ಪ ಒಳ್ಳೆಯದೇ ಇರಲಿ ಎಂದು 12 ಸಾವಿರದ ಮೊಬೈಲ್​ ಕೊಳ್ಳೋಣ ಎಂದುಕೊಂಡಿರಿ.. ‘ತಿಂಗಳ ಖರ್ಚೇ 10 ಸಾವಿರ ರೂಪಾಯಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?’ ಇದು ಸಣ್ಣ ಪ್ರಶ್ನಾರ್ಥಕ ಚಿಹ್ನೆಯಂತೂ ಅಲ್ಲವೇ ಅಲ್ಲ!

ಇಂದಿನ ಖರೀದಿ ನಾಳೆಗೆ.. ನಾಳೆಯ ಖರೀದಿ ನಾಡಿದ್ದಿಗೆ..
ನಾವು ಹಣ ಖರ್ಚು ಮಾಡಲು ಖರ್ಚಿನ ಕೈ ಬಿಗಿಹಿಡಿಯಬೇಕು ಹೌದು. ಆದರೆ ತಲೆ ಖರ್ಚು ಮಾಡಲು ತೊಂದರೆಯಿಲ್ಲ ತಾನೇ. ಮೊಬೈಲ್ ಖರೀದಿಸುವ ಆಸೆಯನ್ನು ಒಂಚೂರು ಹತೋಟಿಯಲ್ಲಿಡಬೇಕು. ಇಂದಿನ ಖರೀದಿಯನ್ನು ನಾಳೆಗೆ ಮುಂದೂಡಬೇಕು. ನಾಳೆಯ ಖರೀದಿಯನ್ನು ನಾಡಿದ್ದಿಗೆ. ಹಾಗೆಯೇ, ಈ ತಿಂಗಳು ಖರೀದಿಸಬೇಕೆಂದಿದ್ದ ಮೊಬೈಲನ್ನು ಮುಂದಿನ ತಿಂಗಳಿಗೆ ಮುಂದೂಡಬೇಕು. ಈ ಮಧ್ಯೆ ನಿಜಕ್ಕೂ ಹೊಸ ಮೊಬೈಲ್​ನ ಅಗತ್ಯವಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕು.

ಗಮನಿಸಿ, ಖರೀದಿಯನ್ನು ಹೀಗೆ 2-3 ತಿಂಗಳಿಗೆ ಮುಂದೂಡುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎಂದು ನಿಮಗೇ ನಿಧಾನಕ್ಕೆ ಅನುಭವವೇದ್ಯವಾಗುತ್ತದೆ. ಎಷ್ಟೋ ವಸ್ತುಗಳನ್ನು ನಮಗೆ ಅಗತ್ಯವಿಲ್ಲದೆಯೂ ಖರೀದಿಸುತ್ತೇವೆ. ಅವುಗಳಿಗೆ ಕಡಿವಾಣ ಬೀಳುತ್ತದೆ. ಮೊಬೈಲ್ ಖರೀದಿಗೆಂದು ಮೂರು ತಿಂಗಳು ಒಂದಷ್ಟು ಹೆಚ್ಚು ಹಣವನ್ನೇ ಉಳಿಸಿರುತ್ತೇವೆ. ದೊಡ್ಡ ಆಸೆಗಾಗಿ ಚಿಕ್ಕ ಚಿಕ್ಕ ಆಸೆಗಳನ್ನು ತ್ಯಜಿಸುತ್ತೇವೆ. ನೋಡಿ, ನಿಮ್ಮ ಕೈಯಲ್ಲಿ ಖರ್ಚಿಗೆ ಎಂದು ತೆಗೆದಿಟ್ಟ 10 ಸಾವಿರದಲ್ಲಿ ಇನ್ನೂ 2 ಸಾವಿರ ಮಿಕ್ಕಿದೆ!

ಖರೀದಿಗೆ ಹಲವು ಮಾರ್ಗ
ಅನಗತ್ಯ ಖರೀದಿಗೆ ಕಡಿವಾಣ ನಮ್ಮ ಆರ್ಥಿಕ ಪರಿಸ್ಥಿತಿಗೆ ಬಹಳ ಅಗತ್ಯ. ಇದು ನಮಗೆ ಅರಿವಾದರೆ ಸಾಕು, ಸಹಜವಾಗಿ ಹಣ ಉಳಿತಾಯವಾಗುತ್ತದೆ. ಮೂರು ತಿಂಗಳ ಉಳಿತಾಯವನ್ನು ಒಂದೇ ಸಲ ಪಾವತಿಸಿ ಮೊಬೈಲ್ ಕೊಳ್ಳುವುದಕ್ಕಿಂತ E-Wealth ಅಕೌಂಟ್ ಮೂಲಕ ಖರೀದಿಸಿದರೆ ನಮಗೇ ಲಾಭ. ಅರಿವೇ ಗುರು ಎಂಬ ಹಿರಿಕರ ಮಾತು ಸುಳ್ಳಲ್ಲ, ಸಣ್ಣ ಸಂಬಳವೇ ಆದರೂ ಉಳಿತಾಯ ನಮ್ಮ ಕೈಯಲ್ಲೇ ಇರುತ್ತದೆ ಅಲ್ಲವೇ?

ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..