MRPL: ‘ನಮ್ಮ ನೆಲದಲ್ಲಿ ಮೊದಲು ನಮಗೆ ಉದ್ಯೋಗ ಸಿಗಲಿ’; ಎಂಆರ್​ಪಿಎಲ್ ನೇಮಕಾತಿ ಹೋರಾಟದ ವಿಶೇಷ ವರದಿ ಇಲ್ಲಿದೆ

MRPL Recruitment: ಸದ್ಯ, ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು, ಉಸ್ತುವಾರಿ ಸಚಿವರ ಜೊತೆಗಿನ ಮಾತುಕತೆಯ ಬಳಿಕ, ಎಂಆರ್​ಪಿಎಲ್​ ಸಂಸ್ಥೆಯ ಜಾಗೃತ ಆಯೋಗ ಈ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ.

MRPL: ‘ನಮ್ಮ ನೆಲದಲ್ಲಿ ಮೊದಲು ನಮಗೆ ಉದ್ಯೋಗ ಸಿಗಲಿ’; ಎಂಆರ್​ಪಿಎಲ್ ನೇಮಕಾತಿ ಹೋರಾಟದ ವಿಶೇಷ ವರದಿ ಇಲ್ಲಿದೆ
ಎಂಆರ್​ಪಿಎಲ್ ನೇಮಕಾತಿ ವಿಧಾನ ಪ್ರಶ್ನಿಸಿ ನಡೆದ ಮನೆ ಮನೆ ಪ್ರತಿಭಟನೆ
Follow us
ganapathi bhat
|

Updated on:Aug 14, 2021 | 12:41 PM

ಮಂಗಳೂರು: ಎಂಆರ್​ಪಿಎಲ್​ನಲ್ಲಿ (MRPL) ಇತ್ತೀಚೆಗೆ ನಡೆದ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಥಳೀಯ ನಾಗರಿಕರಿಗೆ ಅವಕಾಶ ನೀಡಿಲ್ಲ ಅಥವಾ ಸೂಕ್ತ ಮಾನ್ಯತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳಿಂದ ವಿವಿಧ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಜನಸಾಮಾನ್ಯರು ಸಾಮಾಜಿಕ ಜಾಲತಾಣ, ಮನೆಮನೆ ಪ್ರತಿಭಟನೆ ಮುಂತಾದ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಎಂಆರ್​ಪಿಎಲ್ ಸಂಸ್ಥೆಯಲ್ಲಿ ಸ್ಥಳೀಯರಿಗೆ ಅವಕಾಶ ಸಿಗಬೇಕು ಎಂದು ‘ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲ ಪಾಲ್’ (ತುಳುನಾಡ ಅಭಿವೃದ್ಧಿಯಲ್ಲಿ ತುಳುನಾಡ ಮಕ್ಕಳಿಗೆ ದೊಡ್ಡ ಪಾಲು) ಈ ಘೋಷಣೆಯೂ ಜೋರಾಗಿ ಕೇಳಿಬರುತ್ತಿದೆ.

ಈ ಹೋರಾಟದಲ್ಲಿ ಪಕ್ಷಾತೀತವಾಗಿ ಜನರು, ಮಹಿಳೆಯರೂ ಸೇರಿದಂತೆ ಸಾವಿರಾರು ಮಂದಿ ಭಾಗಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಬಹುಚರ್ಚೆಗೆ ಕಾರಣವಾಗಿದೆ. ಹಾಗೆಂದು ಈ ಹೋರಾಟ ನಿನ್ನೆ, ಮೊನ್ನೆಯದೇ? ಅಲ್ಲ. ಇತ್ತೀಚೆಗೆ ಜಾಲತಾಣಗಳ ಮೂಲಕ ವೇಗ ಪಡೆದುಕೊಂಡ ಈ ಹೋರಾಟ 2019ರಿಂದಲೇ ಶುರುವಾಗಿದೆ. ನೇಮಕಾತಿ ವಿಚಾರದಲ್ಲಿ ತಕರಾರು 2019ರಲ್ಲೇ ಆರಂಭವಾಗಿದೆ. ಎಂಆರ್​ಪಿಎಲ್ ನೇಮಕಾತಿಯ ವಿಚಾರದಲ್ಲಿನ ಪ್ರತಿಭಟನೆಯ ಬಗ್ಗೆ ಮುಂಚೂಣಿಯ ಹೋರಾಟಗಾರ, ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಟಿವಿ9 ಡಿಜಿಟಲ್​ನೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮುನೀರ್ ಕಾಟಿಪಳ್ಳ ಹಂಚಿಕೊಂಡಿರುವ ಮಾಹಿತಿಯನ್ನು ಪ್ರಶ್ನೋತ್ತರ ರೂಪದಲ್ಲಿ ವಿವರವಾಗಿ ಇಲ್ಲಿ ನೀಡಲಾಗಿದೆ.

ಹೋರಾಟದ ಆಶಯ ಮತ್ತು ಉದ್ದೇಶ ಏನು? ಎಂಆರ್​ಪಿಎಲ್​ನಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿರುವ 223 ಹುದ್ದೆಗಳ ಪೈಕಿ ಕೇವಲ 13 ಸ್ಥಾನಗಳಿಗೆ ಮಾತ್ರ ಕರ್ನಾಟಕದ ಅಭ್ಯರ್ಥಿಗಳು ನೇಮಕಗೊಂಡಿದ್ದಾರೆ. ಅದರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೇವಲ 4 ಜನರು ಆಯ್ಕೆಯಾಗಿರುವುದು. ದಕ್ಷಿಣ ಕನ್ನಡದ 2 ಹಾಗೂ ಉಡುಪಿಯ 2 ಜನರಿದ್ದಾರೆ. ನಮ್ಮ ನೆಲದಲ್ಲಿ ಸ್ಥಾಪನೆಯಾಗಿರುವ, ನಮ್ಮ ಸಂಪನ್ಮೂಲವನ್ನು ಬಳಸಿ ಅಥವಾ ಹಾಳುಮಾಡಿಯೂ ನೆಲೆಯೂರಿರುವ ಈ ಕಂಪೆನಿಯ ಕೆಲಸದ ವಿಚಾರದಲ್ಲಿ ಇಲ್ಲಿನ ಜನರಿಗೆ ಆದ್ಯತೆ ನೀಡಬೇಕು. ರಾಜ್ಯಮಟ್ಟದ ನೇಮಕಾತಿ ಮಾಡಬಹುದು. ಅಥವಾ ಇಲ್ಲಿನ ಜನರಿಗೆ ಆದ್ಯತೆ ನೀಡಿ ನೇಮಕಾತಿ ನಡೆಸಬೇಕು. ಇದು ಬೇಡಿಕೆ.

ಹೋರಾಟ 2019ರಲ್ಲೇ ಆರಂಭವಾಗಿತ್ತು. ಏನದು ವಿವರ? ಈಗ ಚರ್ಚೆಗೆ ಗ್ರಾಸವಾಗಿರುವ ನೇಮಕಾತಿ ಪ್ರಕ್ರಿಯೆಯ ಮೊದಲ ನೋಟಿಫಿಕೇಷನ್ 2019ರ ಸಪ್ಟೆಂಬರ್ ತಿಂಗಳಿನಲ್ಲಿಯೇ ಬಿಡುಗಡೆಗೊಂಡಿತ್ತು. ಒಟ್ಟು 223 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಿದ್ದರು. ಇದು ನೇಷನಲ್ ಕಾಲ್ (ರಾಷ್ಟ್ರ ಮಟ್ಟದ ನೇಮಕಾತಿ ಪ್ರಕ್ರಿಯೆ) ಆಗಿದ್ದು, ರಾಜ್ಯ ಅಥವಾ ಸ್ಥಳೀಯ ಮಟ್ಟದಲ್ಲಿ ನೇಮಕಾತಿಗೆ ಯಾವುದೇ ಆದ್ಯತೆ ನೀಡಲಿಲ್ಲ. ಆಗಲೇ ಈ ಬಗ್ಗೆ ಹೋರಾಟವನ್ನು ಕೈಗೆತ್ತಿಕೊಳ್ಳಲಾಗಿತ್ತು. ರಾಜ್ಯ ಮಟ್ಟದಲ್ಲಿ ಮತ್ತು ಸ್ಥಳೀಯರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕೆಂಬುದು ಹೋರಾಟದ ಬೇಡಿಕೆಯಾಗಿತ್ತು. ಆಗಲೂ ಪ್ರತಿಭಟನೆ, ಧರಣಿ ನಡೆದಿತ್ತು. ಎಂಆರ್​ಪಿಎಲ್ ಸಂಸ್ಥೆಯ ಗುತ್ತಿಗೆ ಆಧಾರದ ನೌಕರರು ಕೂಡ ಸಂಸ್ಥೆಯ ವಿರುದ್ಧ ಧ್ವನಿ ಎತ್ತಿದ್ದರು. ಕಾಂಟ್ರಾಕ್ಟ್ ಬೇಸಿಸ್ ಎಂಬ ಹೆಸರಿನಲ್ಲಿ 10 ವರ್ಷ ದಾಟಿದರೂ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವ ಸ್ಥಳೀಯರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಅದರಿಂದ ಎಂಆರ್​ಪಿಎಲ್​ನವರು ನೇಮಕಾತಿ ಪ್ರಕ್ರಿಯೆಯನ್ನು ನಿಧಾನ ಮಾಡಿದರೇ ಹೊರತು ರದ್ದು ಮಾಡಲಿಲ್ಲ.

ನೇಮಕಾತಿ ಪ್ರಕ್ರಿಯೆ ಈಗೇನಾಗಿದೆ? ಯಾವ ಹಂತ ದಾಟಿ ಬಂದಿದೆ? ನಿಧಾನಗೊಂಡಿದ್ದ ನೇಮಕಾತಿ ಪ್ರಕ್ರಿಯೆ ಕೊರೊನಾ ಮೊದಲನೇ ಅಲೆಯ ಬಳಿಕ ಮತ್ತೆ ಕಳೆದ ನವೆಂಬರ್, ಡಿಸೆಂಬರ್ ವೇಳೆಗೆ ಆರಂಭವಾಯಿತು. ಆ ವೇಳೆಗೆ, ಜನಸಾಮಾನ್ಯರು, ರಾಜಕಾರಣಿಗಳು ಸಹಿತ ಎಲ್ಲರೂ ಕೊವಿಡ್-19, ಚುನಾವಣೆ ಎಂದು ವ್ಯಸ್ತರಾಗಿದ್ದರು. ನೇಮಕಾತಿ ನೋಟಿಫಿಕೇಷನ್​ನ 223 ಅವಕಾಶಗಳಿಗೆ ಒಟ್ಟು 60 ಸಾವಿರ ಅರ್ಜಿ ಬಂದಿತ್ತು. ಅದರಲ್ಲಿ ಮೊದಲನೇ ಹಂತದ ಬಳಿಕ, ಎರಡನೇ ಹಂತಕ್ಕೆ ಒಟ್ಟು 10 ಸಾವಿರ ಅರ್ಜಿ ಸ್ವೀಕೃತವಾದವು. ಈ 10 ಸಾವಿರ ಅರ್ಜಿಗಳಲ್ಲಿ ಸ್ಥಳೀಯ ಗ್ರಾಮಗಳ, ಜಿಲ್ಲೆಯ ಮತ್ತು ರಾಜ್ಯದ ಯುವಕರೂ ಇದ್ದರು. ಆದರೆ, ಅಂತಿಮವಾಗಿ ಆಯ್ಕೆಯಾದ 223 ಅಭ್ಯರ್ಥಿಗಳಲ್ಲಿ ಕರ್ನಾಟಕ ರಾಜ್ಯದ ಕೇವಲ 13 ಮಂದಿಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ ತಲಾ ಇಬ್ಬರು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರು. ಎಂಆರ್​ಪಿಎಲ್​ಗೆ ಭೂಮಿ ನೀಡಿದ ಸ್ಥಳೀಯ ಗ್ರಾಮಗಳ ಒಬ್ಬರಿಗೂ ಕೆಲಸವಿಲ್ಲ.

MRPL Recruitment Protest

ಎಂಆರ್​ಪಿಎಲ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ಸಿಗಬೇಕು ಎಂದು ಪ್ರತಿಭಟನೆ

ರಾಜಕಾರಣಿಗಳು ಏನು ಹೇಳುತ್ತಾರೆ? ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ, ಮನೆಮನೆ ಪ್ರತಿಭಟನೆ ನಡೆಯುತ್ತಿದೆ. ಸಂಸದರಾದ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಶಾಸಕರಾದ ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್ ಮುಂತಾದ ಎಲ್ಲರಿಗೂ ವಿಚಾರ ತಿಳಿದಿದೆ. ಅವರು ಎಂಆರ್​ಪಿಎಲ್ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸದ್ಯದ ಮಟ್ಟಿಗೆ ಮರುನೇಮಕಾತಿಯ ಭರವಸೆ ನೀಡಿದ್ದಾರೆ. ಆದರೆ, ಇದು ಕೇವಲ ಕಣ್ಣೊರೆಸುವ ಪ್ರಯತ್ನ.

ಎಂಆರ್​ಪಿಎಲ್ ನಡೆದುಕೊಂಡ ರೀತಿಯ ಮೇಲೆ ಸಿಟ್ಟಿದೆ ನಿಮಗೆ? ವಿಶೇಷ ಎಂದರೆ ಎಂಆರ್​ಪಿಎಲ್​ನ ವ್ಯವಸ್ಥಾಪಕ ನಿರ್ದೇಶಕರು (ಎಂ.ಡಿ.) ಮತ್ತು ಮಾನವ ಸಂಪನ್ಮೂಲ (ಎಚ್.ಆರ್.) ವಿಭಾಗದ ಮುಖ್ಯಸ್ಥರು ಮಂಗಳೂರಿನವರೇ ಆಗಿದ್ದಾರೆ. ಆದರೂ ಸ್ಥಳೀಯರಿಗೆ ಕೆಲಸವಿಲ್ಲ. ನಾವು ಸಿಎಸ್​ಆರ್ ಫಂಡ್ ನೀಡಿದ್ದೇವೆ ಎಂದು ಹೇಳುವ ಎಂಆರ್​ಪಿಎಲ್, ಕಂಪೆನಿಯಿಂದ ಪರಿಸರ, ಆರೋಗ್ಯ, ಜೀವನಮಟ್ಟದ ತೊಂದರೆ ಅನುಭವಿಸುತ್ತಿರುವ ಸ್ಥಳೀಯ ಗ್ರಾಮಗಳ ಜನರಿಗೆ ಏನೂ ಮಾಡಿಲ್ಲ. ಏನೂ ಕೊಟ್ಟಿಲ್ಲ. ಲಾಕ್​ಡೌನ್ ಸಂದರ್ಭದಲ್ಲಿ ಕಿಟ್ ಕೊಟ್ಟಿದ್ದೇವೆ ಎನ್ನುವ ಎಂಆರ್​ಪಿಎಲ್ ಇನ್ನೆಲ್ಲೋ ಹೋಗಿ ಮಾಡುವ ಮೊದಲು, ಸ್ಥಳೀಯರಿಗೆ ಜೀವನ ಕೊಡಬೇಕು.

ಅಂದು ಭೂಮಿ ಕೊಟ್ಟ ಮನೆಯಿಂದ ಒಬ್ಬರಿಗೆ ಕೆಲಸ ಕೊಟ್ಟರಲ್ಲ? ಅಂದು ಭೂಮಿ ಕೊಟ್ಟವರಲ್ಲಿ, ಒಂದು ಮನೆಯಿಂದ ಒಬ್ಬರಿಗೆ ಕೆಲಸ ಎಂದು ಎಂಆರ್​ಪಿಎಲ್ ಉದ್ಯೋಗ ಒದಗಿಸಿಕೊಟ್ಟಿದೆ. ಅದನ್ನು ಈಗಲೂ ಎಂಆರ್​ಪಿಎಲ್ ಸ್ಥಳೀಯರ ವಿಚಾರವಾಗಿ ಹೇಳುತ್ತದೆ. ಆದರೆ, ಅದು ಕೇವಲ ವ್ಯವಹಾರ. ಜಾಗ ಪಡೆದುಕೊಂಡ ವ್ಯವಹಾರ ಅಷ್ಟೇ. ಈಗಾಗಲೇ ಸುಮಾರು 2,800 ಎಕರೆ ಜಾಗ ಎಂಆರ್​ಪಿಎಲ್​ಗೆ ನೀಡಿದ್ದೇವೆ. ಇನ್ನೂ 1,000 ಎಕರೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಭೂಮಿ ಕೊಡುವುದಿಲ್ಲ ಎಂದಾಗ ಉದ್ಯೋಗದ ಹೆಸರಿನಲ್ಲಿ ಓಲೈಕೆ ಮಾಡುವ ಜನರು, ಬಳಿಕ 6-7 ಮಂದಿ ಕೆಲಸ ಮಾಡುತ್ತಿದ್ದ ಭೂಮಿ ಕಸಿದು, 1 ಉದ್ಯೋಗ ಕೊಟ್ಟರೆ, ಸ್ಥಳೀಯರ ಜೀವನ ಗುಣಮಟ್ಟ ಉತ್ತಮವಾಗುವುದು ಹೇಗೆ?

ಕೆಲಸ ನೀಡಬೇಕು ಎಂಬ ಬೇಡಿಕೆಗೆ ಬಲವೇನು? 1980ರ ಕೊನೆಯಲ್ಲಿ ಎಂಆರ್​ಪಿಎಲ್ ಸ್ಥಾಪಿಸಲು ಹೊರಟಾಗ (ಆಗ ಬಿರ್ಲಾ ಖಾಸಗಿ ಕಂಪೆನಿಯಾಗಿತ್ತು ಇದು, ಈಗ ಪಬ್ಲಿಕ್ ಸೆಕ್ಟರ್ ಅಡಿಯಲ್ಲಿ ಬರುತ್ತದೆ) ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ, 50 ಸಾವಿರ ಉದ್ಯೋಗ ನೀಡುತ್ತೇವೆ. ನೀವು ಬೆಂಗಳೂರಿಗೆ, ಮುಂಬೈಗೆ ಅಥವಾ ದೂರದ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕೆ ಹೋಗುವ ಸಮಸ್ಯೆ ಇರುವುದಿಲ್ಲ ಎಂದು ಭರವಸೆ ಕೊಟ್ಟವರಿಂದ ಯಾವುದೇ ಉಪಕಾರ ಆಗಲಿಲ್ಲ.

MRPL Protest

ಎಂಆರ್​ಪಿಎಲ್ ನೇಮಕಾತಿ ವಿಚಾರದಲ್ಲಿ ಪ್ರತಿಭಟನೆ

ಹೀಗಾಗಿ ನೀವು ಉದ್ಯೋಗವಾದರೂ ನೀಡಬೇಕು ಎಂದು ಪಟ್ಟು ಹಿಡಿದದ್ದು? 1995ರ ಸಮಯದಲ್ಲಿ ಎಂಆರ್​ಪಿಎಲ್​ನ ಮಲಿನ ನೀರನ್ನು ಸಮುದ್ರಕ್ಕೆ ಬಿಡುವ ಯೋಜನೆ ಮಾಡಿದರು. ಆಗ ಮೀನುಗಾರ ಸಮುದಾಯದ ಜನರು ಆಡಳಿತದ ವಿರುದ್ಧ ತಿರುಗಿಬಿದ್ದರು. ಮೀನುಗಳ ಸಂತತಿ ಕಡಿಮೆಯಾಗುತ್ತದೆ, ಬದುಕು ಕಷ್ಟವಾಗುತ್ತದೆ ಎಂದು ಪ್ರತಿಭಟನೆ ನಡೆಸಿದರು. ಆ ಹೋರಾಟ ಜೋರಾಗಿ ಗೋಲಿಬಾರ್ ಕೂಡ ನಡೆದಿತ್ತು. ಆಗಲೂ ಉದ್ಯೋಗದ ಭರವಸೆ ನೀಡಿಯೇ ಜನರನ್ನು ಸುಮ್ಮನಾಗಿಸಿದರು.

ಪರಿಸರ ಮಾಲಿನ್ಯ ಸಮಸ್ಯೆ ಉಂಟಾಗಿದೆ, ಹಾಗಾದರೆ? ಹತ್ತಾರು ಗ್ರಾಮಗಳು, ದಕ್ಷಿಣ ಕನ್ನಡ, ಉಡುಪಿ ವಾಯು, ಜಲ, ಪರಿಸರ ಮಾಲಿನ್ಯಕ್ಕೆ ತುತ್ತಾಗಿದೆ. ನೇತ್ರಾವತಿ ನದಿಯ ನೀರು ಕುಡಿಯಲು ಸಿಗುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಎಂಆರ್​ಪಿಎಲ್​ಗೆ ಬಳಕೆಯಾಗುತ್ತಿದೆ. ನೇತ್ರಾವತಿ ನದಿಗೆ ಮೊದಲ ಅಣೆಕಟ್ಟು ಎಂಆರ್​ಪಿಎಲ್​ನದ್ದು. ನಂತರವೇ ಕುಡಿಯಲು ಬಳಕೆಯಾಗುವುದು. ಕಾರ್ಖಾನೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರ ಜೀವನ ಗುಣಮಟ್ಟ ಕುಸಿದಿದೆ. ಆರೋಗ್ಯ ಸಮಸ್ಯೆಗಳು ಇದೆ. ಇಷ್ಟನ್ನು ಅನುಭವಿಸಿ ಕುಳಿತಿರುವಾಗ ಕೊನೆಗೆ ಭರವಸೆ ಕೊಟ್ಟ ಉದ್ಯೋಗ ಕೂಡ ಇಲ್ಲ.

ಸ್ಥಳೀಯರಿಗೆ, ಎಂಆರ್​ಪಿಎಲ್​ನಿಂದ ಸಮಸ್ಯೆ ಎದುರಿಸುತ್ತಿರುವವರಿಗೆ ಏನೂ ಮಾಡಿಲ್ಲ ಎಂಬ ಸಿಟ್ಟಿದೆ ನಿಮಗೆ? ಹಲವು ಮಂದಿ ಸ್ಥಳೀಯರು 10 ವರ್ಷಗಳಿಗೂ ಹೆಚ್ಚು ಕಾಲದಿಂದ ಎಂಆರ್​ಪಿಎಲ್​ನಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಸಂಬಳ ಇನ್ನೂ 20 ಸಾವಿರ ದಾಟಿಲ್ಲ. ಎಂಆರ್​ಪಿಎಲ್ ಸಿಎಸ್​ಆರ್ ಹೆಸರಿನಲ್ಲಿ ಶಾಲೆಯೊಂದನ್ನು ತೆರೆಯಿತು. ಅದರಿಂದ ಸ್ಥಳೀಯ ಮಕ್ಕಳು ಕಲಿತು ಜ್ಞಾನ ಸಂಪಾದಿಸುತ್ತಾರೆ ಅಂದುಕೊಂಡರೆ ಅದೂ ಕಷ್ಟ. ಅಲ್ಲಿ ಕಲಿಕೆಗೆ 35,000 ಫೀಸ್ ಕಟ್ಟಬೇಕು. ಸ್ಥಳೀಯ ಗ್ರಾಮದ ಬಡಮಕ್ಕಳು ಅಷ್ಟು ಶುಲ್ಕ ತುಂಬಿ ಕಲಿಯುವುದು ಹೇಗೆ? ಎಂಆರ್​ಪಿಎಲ್​ನಲ್ಲಿ ಉದ್ಯೋಗಸ್ಥರ ಮಕ್ಕಳು ಆ ಶಾಲೆಗೆ ಸೇರಲು ಮತ್ತೂ 20,000 ಹೆಚ್ಚು ಅಂದರೆ, 55,000 ಫೀಸ್ ಕಟ್ಟಬೇಕು. 10 ಸಾವಿರ ಡೊನೇಶನ್ ಮತ್ತು 10 ಸಾವಿರ ಡೆಪಾಸಿಟ್. ಈ ರೀತಿ ಸ್ಥಳೀಯರ ಹಿತಕ್ಕಿಂತ ಸಂಕಷ್ಟಕ್ಕೆ ಕಾರಣವಾಗಿರುವ ಎಂಆರ್​ಪಿಎಲ್​ನಿಂದ ನಾವು ಉದ್ಯೋಗವನ್ನಾದರೂ ನಿರೀಕ್ಷಿಸುವುದರಲ್ಲಿ ಏನು ತಪ್ಪು?

MRPL Meeting with Politicians

ಎಂಆರ್​ಪಿಎಲ್ ಮುಖ್ಯಸ್ಥರೊಂದಿಗೆ ಸಚಿವ, ಶಾಸಕರ ಮಾತುಕತೆ

ಎಂಆರ್​ಪಿಎಲ್ ನೀಡಿರುವ ಪ್ರತಿಕ್ರಿಯೆ ಹೀಗಿದೆ ಈ ಹೋರಾಟಗಳಿಗೆ ಪ್ರತಿಯಾಗಿ ಮೇ ತಿಂಗಳ ಅಂತ್ಯದಲ್ಲಿ ಎಂಆರ್​ಪಿಎಲ್ ತನ್ನ ಹೇಳಿಕೆ ನೀಡಿತ್ತು. ಸಂಸ್ಥೆಯ ಶೇಕಡಾ 70ರಷ್ಟು ಉದ್ಯೋಗವನ್ನು ಕರ್ನಾಟಕದ ಜನರಿಗೆ ನೀಡಲಾಗಿದೆ ಎಂದು ತಿಳಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಕೂಡ ಯಾವುದೇ ಅನ್ಯಾಯ, ಅಕ್ರಮ ಮಾಡಿಲ್ಲ. ಪಾರದರ್ಶಕವಾಗಿ, ನಿಗದಿತ ನೀತಿಯ ಅನುಸಾರವೇ ನೇಮಕಾತಿ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿತ್ತು.

ಕಂಪೆನಿಯು ಸ್ಥಳೀಯ ಉದ್ಯಮಿಗಳಿಗೆ, ಇತರ ಸೇವಾದಾರರಿಗೆ, ವ್ಯಾಪಾರ ಉದ್ಯಮಕ್ಕೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಕೊವಿಡ್-19 ಸಂದರ್ಭದಲ್ಲಿ ಕೂಡ ಇಂಧನ ಮತ್ತು ಎಲ್​ಪಿಜಿ ನೀಡಿಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಂಡಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸುಮಾರು 50,000 ಕೋಟಿಯಷ್ಟು ಮೊತ್ತದ ತೆರಿಗೆ ಕಟ್ಟಲಾಗಿದೆ ಎಂದು ತಿಳಿಸಿತ್ತು.

ಕಳೆದ 5 ವರ್ಷದ ಅವಧಿಯಲ್ಲಿ ಸುಮಾರು 150 ಕೋಟಿ ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗೆ ನೀಡಲಾಗಿದೆ. ಶಾಲಾ ಕಟ್ಟದ ಸ್ಥಾಪನೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸ್ವಚ್ಛ ಮಂಗಳೂರು ಅಭಿಯಾನ, ಆಕ್ಸಿಜನ್ ಘಟಕಗಳ ನಿರ್ಮಾಣ ಇತ್ಯಾದಿ ಮಾಡಲಾಗಿದೆ ಎಂದು ತಿಳಿಸಿತ್ತು.

ಸದ್ಯ, ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು, ಉಸ್ತುವಾರಿ ಸಚಿವರ ಜೊತೆಗಿನ ಮಾತುಕತೆಯ ಬಳಿಕ, ಎಂಆರ್​ಪಿಎಲ್​ ಸಂಸ್ಥೆಯ ಜಾಗೃತ ಆಯೋಗ ಈ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ.

Muneer Katipalla DYFI

ಡಿವೈಎಫ್​ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ

ವರದಿ: ಗಣಪತಿ ದಿವಾಣ

ಇದನ್ನೂ ಓದಿ: Unemployment Rate: ಕೊರೊನಾ ಎರಡನೇ ಅಲೆಗೆ ಉದ್ಯೋಗ ಕಳಕೊಂಡ 1 ಕೋಟಿ ಮಂದಿ; ಶೇ 97 ಕುಟುಂಬಗಳ ಆದಾಯ ಇಳಿಕೆ

ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತರಾದ ಆಶ್ರಯ ಮನೆಯ ಜನ; ಕೆಲಸವಿಲ್ಲದೆ ಗ್ರಾಮಸ್ಥರ ಪರದಾಟ

Published On - 7:05 pm, Sun, 13 June 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್