ಸಿಹಿ ಮನಸಿನ ಸಹೃದಯಿ ಸಾಧಕ: ಜೇನುಕೃಷಿಗೆ ಹೊಸ ಅರ್ಥ ಕೊಟ್ಟ ಮನಮೋಹನ
ಮನಮೋಹನ ಅವರು ತಾವು ಸ್ವತಃ ಜೇನುಕೃಷಿಯಲ್ಲಿ ತೊಡಗಿಕೊಂಡಿರುವುದು ಮಾತ್ರವಲ್ಲ ಇತರರಿಗೂ ಮಾರ್ಗದರ್ಶನ ನೀಡಿದ್ದಾರೆ. ಜೇನು ಸಾಕಾಣಿಕೆ ಮಾಡುತ್ತೇವೆ ಎನ್ನುವವರಿಗೆ ಜೇನು ಕುಟುಂಬಗಳನ್ನೂ ಕೊಟ್ಟಿದ್ದಾರೆ. ಅವರ ಹದಿನೆಂಟು ವರ್ಷಗಳ ಜೇನುಕೃಷಿಯ ಅನುಭವದ ಲಾಭ ಪಡೆದು ಹಲವಾರು ಮಂದಿ ಹೊಸತಾಗಿ ಜೇನುಕೃಷಿ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ: ಪುತ್ತೂರು ತಾಲೂಕು ಬೆಟ್ಟಂಪಾಡಿಯ ಮನಮೋಹನ. ಇಂದು ಜೇನುಕೃಷಿಯಲ್ಲಿ ಮುಳುಗೆದ್ದಿರುವ ಸ್ವಾವಲಂಬಿ ಕೃಷಿಕ, ಅಂದು ಒಂದು ಪೆಟ್ಟಿಗೆಯಿಂದ ಜೇನು ಸಾಕಣೆ ಆರಂಭಿಸಿದಾಗ ಎಂಟನೇ ಕ್ಲಾಸಿನ ವಿದ್ಯಾರ್ಥಿ.
ಹುಡುಗು ಪ್ರಾಯದ ಮನಸ್ಸಿಗೆ ಜೇನು ನೊಣಗಳು ಕಚ್ಚುತ್ತವೆ ಎಂದು ಅನಿಸಲಿಲ್ಲವೇ? ಅಷ್ಟೊಂದು ಸಿಹಿಯನ್ನು ಹುಂಡು ಹುಂಡಾಗಿ ಕೊಡುವ ಜೀವಿಯೊಂದು ಕಚ್ಚಬಹುದೇ ಎಂಬ ಯೋಚನೆ ಬಂದಿರಬೇಕೇನೋ. ಅದಕ್ಕೇ, ಜೇನುಕೃಷಿ ಎಂಬ ಪದದ ಪರಿಚಯವೇ ಇಲ್ಲದ ಕಾಲದಲ್ಲಿ ಅವರಿಗೆ ಜೇನು ಸಾಕಣೆ ಆರಂಭಿಸಲು ಸಾಧ್ಯವಾಯಿತು.
ಅಂದು ಒಂದು ಪೆಟ್ಟಿಗೆಯಿಂದ ಆರಂಭವಾದ ಜೇನುಕೃಷಿ ಇಂದು ಪುತ್ತೂರಿನಿಂದ ಮೈಸೂರಿನವರೆಗೆ ಒಟ್ಟು 90 ಕಡೆಗಳಲ್ಲಿ, 2 ಸಾವಿರಕ್ಕೂ ಹೆಚ್ಚು ಗೂಡುಗಳಿಂದ ಜೇನು ನೀಡುತ್ತಿದೆ. ಸಿಹಿ ಹಂಚುತ್ತಿದೆ.
ಜೇನು ಕೃಷಿಯ ಆರಂಭಿಕ ದಿನಗಳು ಪಶುಸಾಕಾಣಿಕೆಯಲ್ಲಿ ಅಪಾರ ಒಲವಿದ್ದ ಮನಮೋಹನರಿಗೆ ಕೋಳಿ, ನಾಯಿಯ ಜೊತೆಗೆ ಜೇನುನೊಣಗಳ ಗುಂಪು ಹೆಚ್ಚೆಂದು ಕಾಣಲಿಲ್ಲ. ಊರ ಬೀದಿಯ ಅಂಗಡಿಯಿಂದ ಹಣ್ಣುಹಂಪಲು ಪೆಟ್ಟಿಗೆ ತಂದು ಜೇನು ನೊಣಗಳ ಕುಟುಂಬ ಹೆಚ್ಚಿಸಿದರು. ಪೆಟ್ಟಿಗೆಯ ಲೆಕ್ಕ, ಎರಡು, ಮೂರು, ನಾಲ್ಕು ಎಂದು ಏರುತ್ತಲೇ ಹೋಯಿತು. ಸ್ವ-ಆಸಕ್ತಿ, ಸ್ವ-ಇಚ್ಛೆಯಿಂದ ಜೇನು ನೊಣಗಳ ಸಂಗಡ ಪ್ರಾಯೋಗಿಕ ಕಲಿಕೆ ಮುಂದುವರೆಯಿತು.
ಎಪ್ಪತ್ತು ಪೆಟ್ಟಿಗೆ ಜೇನುನೊಣಗಳನ್ನು ಕೂಡಿಡುವವರೆಗೆ ಯಾವುದೇ ಕೃಷಿ ತರಬೇತಿ ಪಡೆದುಕೊಳ್ಳಲಿಲ್ಲ. 2003 ಮತ್ತು 2007ರಲ್ಲಿ ಜೇನುಕೃಷಿ ತರಬೇತಿಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಆ ಬಳಿಕ ಜೇನು ಕುಟುಂಬಗಳನ್ನು ಹೆಚ್ಚಿಸುತ್ತಲೇ ಹೋದರು. ಅಂದು ಒಂದು ಪೆಟ್ಟಿಗೆಯಿಂದ ಆರಂಭವಾದ ಜೇನುಕೃಷಿ ಇಂದು ಪುತ್ತೂರಿನಿಂದ ಮೈಸೂರಿನವರೆಗೆ ಒಟ್ಟು 90 ಕಡೆಗಳಲ್ಲಿ, 2 ಸಾವಿರಕ್ಕೂ ಹೆಚ್ಚು ಗೂಡುಗಳಿಂದ ಜೇನು ಪಡೆದು ಸಿಹಿ ಹಂಚುವಂತಾಯಿತು.
ಜೇನುಪೆಟ್ಟಿಗೆ ಹಂಚುವ ಹೊಸ ಪ್ರಯೋಗ ಪುತ್ತೂರಿನ ಬೆಟ್ಟಂಪಾಡಿಯಿಂದ ಮೈಸೂರಿನವರೆಗೆ ಹಲವರ ಜಮೀನುಗಳಲ್ಲಿ ಮನಮೋಹನ ಜೇನುಕೃಷಿ ನಡೆಸುತ್ತಾರೆ. ಅದಕ್ಕೆ ಪ್ರತಿಯಾಗಿ ಮಾಲಿಕರಿಗೆ ಜೇನುತುಪ್ಪ ಕೊಡುತ್ತಾರೆ. ಜಮೀನಿನಲ್ಲಿರುವ ಬೆಳೆಗಳ ಪರಾಗಸ್ಪರ್ಶಕ್ಕೆ ಜೇನುನೊಣಗಳು ಸಹಕರಿಸುವುದರಿಂದ ಫಸಲು ಹೆಚ್ಚಾಗುತ್ತದೆ. ಜಮೀನು ವಾರಸುದಾರರಿಗೆ ಜೇನುತುಪ್ಪದ ಉಡುಗೊರೆಯೂ ಸಿಗುತ್ತದೆ.
2 ಸಾವಿರಕ್ಕೂ ಹೆಚ್ಚು ಜೇನುಗೂಡುಗಳಿಂದ ವರ್ಷಕ್ಕೆ ಸುಮಾರು 16 ಸಾವಿರ ಕೆಜಿಯಷ್ಟು ಜೇನುತುಪ್ಪ ಪಡೆಯುತ್ತಾರೆ. ಅಂಗಡಿಗಳಿಗೆ ಜೇನು ಮಾರುವುದಿಲ್ಲ. ಜೇನು ಬೇಕಾದವರು ಮನಮೋಹನರ ಮನೆಗೇ ಬಂದು ಕೊಂಡೊಯ್ಯುತ್ತಾರೆ. ದಕ್ಷಿಣ ಕನ್ನಡದಿಂದ ಮೈಸೂರಿನವರೆಗೆ ಪೆಟ್ಟಿಗೆ ಇಟ್ಟ ಕಡೆಗಳಲ್ಲೂ ಜೇನು ಮಾರಾಟವಾಗುತ್ತದೆ. ಹೀಗೊಂದು ಸಹಕಾರ ಪದ್ಧತಿ, ಸುಲಭ ಮಾರುಕಟ್ಟೆ, ಮಾರುಕಟ್ಟೆಯ ವಿಸ್ತರಣೆ, ಸ್ವಾವಲಂಬಿ ಬದುಕು ಸೇರಿದಂತೆ ಹಲವು ಸಾಧ್ಯತೆಗಳನ್ನು ಮನಮೋಹನರ ಜೇನುಕೃಷಿ ವಿಸ್ತರಿಸಿದೆ.
ಶುದ್ಧ ಮತ್ತು ಅಧಿಕ ಜೇನು ಸಂಗ್ರಹ ವರ್ಷಕ್ಕೆ 16 ಸಾವಿರ ಕೆಜಿಯಷ್ಟು ಜೇನು ಸಂಗ್ರಹಿಸುವ ಮನಮೋಹನ, ಒಂದೇ ಗೂಡಿನಿಂದ 48 ಕೆಜಿಯಷ್ಟು ಜೇನು ಸಂಗ್ರಹಿಸಿದ್ದೂ ಇದೆ. ಜೇನು ಪಕ್ವವಾದ ಮೇಲೆ ನೊಣಗಳು ತಮ್ಮ ಗೂಡನ್ನು ಸೀಲ್ ಮಾಡಿಕೊಳ್ಳುತ್ತವೆ. ಅನಂತರವೇ ನಾವು ಜೇನು ತೆಗೆಯಬೇಕು. ಕೆಲವರು ಮೂರು ನಾಲ್ಕು ದಿನಕ್ಕೆ ಗೂಡಿಗೆ ಕೈ ಹಾಕುತ್ತಾರೆ. ಅದು ಸಮಸ್ಯೆ, ಹಾಗೆ ಮಾಡಬಾರದು ಎಂದು ಜೇನು ತೆಗೆಯುವ ಪಾಠವನ್ನೂ ಮನಮೋಹನ ತಿಳಿಸಿಕೊಡುತ್ತಾರೆ.
ಜೇನು ಕೃಷಿಯನ್ನು ಎಲ್ಲರೂ ಮಾಡಬಹುದು ಜೇನುಕೃಷಿ ಉತ್ತಮ ಆದಾಯ ತಂಡುಕೊಡುತ್ತದೆ. ಆದರೆ ಪ್ರಾಯೋಗಿಕ ಕಲಿಕೆ ಬೇಕು. ಈ ಕೆಲಸ ದೈಹಿಕ ಕ್ಷಮತೆ ಬೇಡುವುದಿಲ್ಲ. ಹಿರಿಯರು, ಮಕ್ಕಳು, ಮಹಿಳೆಯರೂ ಜೇನುಕೃಷಿ ಮಾಡಬಹುದು. ಇದು ಉಳಿದ ಕೃಷಿಯಂತಲ್ಲ, ಬೇರೆ ಕೆಲಸದೊಂದಿಗೂ ಮಾಡಬಹುದು ಎಂದು ಮನಮೋಹನ ವಿವರಿಸುತ್ತಾರೆ.
ಮನಮೋಹನ ಅವರು ತಾವು ಸ್ವತಃ ಜೇನುಕೃಷಿಯಲ್ಲಿ ತೊಡಗಿಕೊಂಡಿರುವುದು ಮಾತ್ರವಲ್ಲ ಇತರರಿಗೂ ಮಾರ್ಗದರ್ಶನ ನೀಡಿದ್ದಾರೆ. ಜೇನು ಸಾಕಾಣಿಕೆ ಮಾಡುತ್ತೇವೆ ಎನ್ನುವವರಿಗೆ ಜೇನು ಕುಟುಂಬಗಳನ್ನೂ ಕೊಟ್ಟಿದ್ದಾರೆ. ಅವರ ಹದಿನೆಂಟು ವರ್ಷಗಳ ಜೇನುಕೃಷಿಯ ಅನುಭವದ ಲಾಭ ಪಡೆದು ಹಲವಾರು ಮಂದಿ ಹೊಸತಾಗಿ ಜೇನುಕೃಷಿ ಆರಂಭಿಸಿದ್ದಾರೆ.
ಜೇನುಕೃಷಿ, ಕಲಿಕೆ, ಬೆಳವಣಿಗೆಗೆ ಪ್ರೋತ್ಸಾಹ ನೀಡಿದ ತೋಟಗಾರಿಕಾ ಇಲಾಖೆಯನ್ನೂ, ಗೆಳೆಯರನ್ನೂ ಸ್ಮರಿಸಿಕೊಳ್ಳುವ ಅವರು ಹಮ್ಮುಬಿಮ್ಮಿಲ್ಲದ ಮುಕ್ತ ಮನಸ್ಸಿನ ವ್ಯಕ್ತಿ. ತಾವೂ ಬೆಳೆದು ಇತರರನ್ನೂ ಬೆಳೆಸುವ ಅವರ ಆಸಕ್ತಿಯೇ ಅವರನ್ನು ಯಶಸ್ವಿ ಕೃಷಿಕ ಮತ್ತು ಸ್ವಾವಲಂಬಿ ಉದ್ಯಮಿಯನ್ನಾಗಿಸಿದೆ ಎಂದು ಹೇಳಿದರೆ ತಪ್ಪಿಲ್ಲ.
ಸಂಪರ್ಕ ಸಂಖ್ಯೆ: 98455 76081
Published On - 4:03 pm, Thu, 24 December 20