Body Shaming ; ಸುಮ್ಮನಿರುವುದು ಹೇಗೆ? : ಪದಗಳಿಂದ ಇರಿಯದೇ ವರ್ತನೆಯಿಂದ ಸಾಯಿಸುವ ತಣ್ಣನೆಯ ಕ್ರೌರ್ಯ ಹೇಗಿರುತ್ತದೆ ಗೊತ್ತಾ?

‘ಆಕೆಯೂ ಛಲದಿಂದ ಎಲ್ಲಿಯೂ ಹೋಗಲ್ಲ ನಾನಿಲ್ಲೇ ನಿಮ್ಮನ್ನು ಗೆದ್ದುಕೊಳ್ತೀನಿ ಎನ್ನುವಂತೆ ಸಹಿಸುತ್ತಿದ್ದಳು. ಆದರೆ ಅವರಿಗೆ ಈಕೆ ಬೇಕಿದ್ದಿಲ್ಲ. ಇದು ಆಕೆಯ ವಿದ್ವತ್ತಿನಿಂದ ಅವನಿಗಾಗುತ್ತಿದ್ದ ಕೀಳರಿಮೆಯಲ್ಲ. ಅವಳು ನೋಡಲು ಚೆನ್ನಾಗಿಲ್ಲ ಎಂಬುದೇ ವಾಸ್ತವವಾಗಿತ್ತು. ಮುತ್ತೈದೆಯರು ಹೂವು ಮುಡಿಯದೇ ಇರಬಾರದು ಅಲ್ಲವಾ ಎನ್ನುವ ಆಕೆ ಸಿಕ್ಕಿದ ಚೆಂಡು ಹೂವು, ಬೋಗನ್ ವಿಲ್ಲಾವನ್ನೂ ಕಿತ್ತು ಮುಡಿದಾಗ ಜನ ಬೆನ್ನ ಹಿಂದೆ ನಕ್ಕದ್ದೂ ಇದೆ. ಹೀಗೆಲ್ಲ ಮಾಡಬೇಡಿ ಅಂತ ನಾನು ಆಕೆಗೆ ಗದರುತ್ತಿದ್ದೆ.’ ರೇಣುಕಾ ನಿಡಗುಂದಿ

Body Shaming ; ಸುಮ್ಮನಿರುವುದು ಹೇಗೆ? : ಪದಗಳಿಂದ ಇರಿಯದೇ ವರ್ತನೆಯಿಂದ ಸಾಯಿಸುವ ತಣ್ಣನೆಯ ಕ್ರೌರ್ಯ ಹೇಗಿರುತ್ತದೆ ಗೊತ್ತಾ?
ಲೇಖಕಿ ರೇಣುಕಾ ನಿಡಗುಂದಿ
Follow us
|

Updated on:Apr 15, 2021 | 5:30 PM

ಆಕೆಯನ್ನು ಶಿಲೆಯಲ್ಲಿ ಬಾಲಿಕೆಯಾಗಿ ಅರಳಿಸಿದೆವು. ಪಟದಲ್ಲಿ ದೇವತೆಯಾಗಿ ನಸುಗುಲಾಬಿ ಬಣ್ಣ ಹಚ್ಚಿ ಚೌಕಟ್ಟಿನೊಳಗೆ ಕೂರಿಸಿದೆವು. ಮತ್ತಷ್ಟು ಬಣ್ಣ ಮೆತ್ತಿ ಬಗೆಬಗೆಯ ಪೋಷಾಕು ತೊಡಿಸಿ ರಂಗಸಜ್ಜಿಕೆಯನ್ನೂ ಏರಿಸಿದೆವು. ಬೆಳ್ಳಿಪರದೆ, ಟಿವಿ, ಕಂಪ್ಯೂಟರ್​ಗಳಲ್ಲಿಯೂ ಆಕೆಯನ್ನು ಅಡಕಗೊಳಿಸಿದೆವು. ಈಗಂತೂ ಅಂಗೈನ ಪರದೆಗಳೊಳಗೆ ಆಕೆ ವಿಧವಿಧದಲ್ಲಿ ಪ್ರತ್ಯಕ್ಷಳಾಗುವಂತೆಯೂ ಮಾಡಿದೆವು. ಒಟ್ಟಿನಲ್ಲಿ ಸೌಂದರ್ಯವೆಂದರೆ ಹೀಗೇ ಎಂಬ ವ್ಯಾಖ್ಯಾನವನ್ನು ಸಹಸ್ರಾರು ವರ್ಷಗಳಿಂದ ಇಡೀ ಸಮಾಜದ ಮೆದುಳಿಗೇ ಮೊಳೆ ಬಡಿದು ಕುಳಿತೆವು. ಪೂರ್ವನಿರ್ಧರಿತ ಸೌಂದರ್ಯ ಪರಿಕಲ್ಪನೆಯ ಪರಿಣಾಮದಿಂದಾಗಿ ಆಕೆ ವ್ಯಕ್ತಿತ್ವಹೀನಳಾಗಿ ಬೆಳೆಯುವ ಅಪಾಯಕ್ಕೆ ಬಿದ್ದರೂ ಸುಮ್ಮನಿರುವುದು ಜವಾಬ್ದಾರಿತನದ ಲಕ್ಷಣವೇ? ಒಂದೊಮ್ಮೆ ತನ್ನತನದ ಬಗ್ಗೆ ತನಗೇ ಅರಿವು ಉಂಟಾಗಿ ಬೀಳಿಸಿದ ಕಂದಕಗಳಿಂದ ಎದ್ದು ಆಕೆ ಚಿಮ್ಮಬೇಕೆಂದಾಗೆಲ್ಲಾ ಅಡ್ಡವಾಗುವ ಗೋಡೆಗಳು ಒಂದೇ ಎರಡೇ?; ನೋವು, ಅವಮಾನ, ತಿರಸ್ಕಾರ ಎನ್ನುವುದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ. ದೇಹಕ್ಕೂ ಮನಸ್ಸಿಗೂ ಆದ್ಯಂತವಾಗಿ ಬೆಸೆದುಕೊಂಡಿರುವಂಥ ಆಳ, ಸೂಕ್ಷ್ಮ ಸಂಗತಿಯದು. ಇರಲಿ, ಎಷ್ಟೇ ಗಾಸಿಗೊಂಡರೂ ಧೃತಿಗೆಡದೆ ತನ್ನ ದಾರಿಯನ್ನು ತಾನೇ ನಿಚ್ಚಳವಾಗಿಸಿಕೊಳ್ಳಲು ಯೋಚನಾಶಕ್ತಿ ಅವಳಿಗೆ ಯಾವತ್ತೂ ಇದ್ದೇ ಇದೆ. ಅದಕ್ಕಾಗಿ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳುತ್ತಾಳೆ. ಇದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಹೆಣ್ಣು ತನ್ನನ್ನು ತಾನು ಕಂಡುಕೊಳ್ಳುವ ಹಾದಿಯಲ್ಲಿ ಪ್ರತಿನಿತ್ಯ ಹಾಯಬೇಕಾದ ಬೆಂಕಿಕೊಂಡಗಳಿವೆ. ತನ್ನಿಚ್ಛೆಯ ಬದುಕು, ಉದ್ಯೋಗ, ತನ್ನಿಚ್ಛೆಯ ಉಡುಪು, ಆಹಾರ, ಸಂಗಾತಿ, ಅಸ್ಮಿತೆ ಎಲ್ಲವನ್ನೂ ಆಕೆ ಈ ದೇಹ ರಾಜಕಾರಣವನ್ನು ಧಿಕ್ಕರಿಸಿ ನಿಲ್ಲುವ ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕಾದ ಅಗ್ನಿದಿವ್ಯದ ಹಾದಿ ಇನ್ನೂ ದೂರವಿದೆ ಎನ್ನುತ್ತಿದ್ದಾರೆ ದೆಹಲಿಯಲ್ಲಿ ವಾಸಿಸಿರುವ ಧಾರವಾಡ ಮೂಲದ ಕವಿ, ಲೇಖಕಿ, ಅನುವಾದಕಿ ರೇಣುಕಾ ನಿಡಗುಂದಿ. 

2015 ರಲ್ಲಿ ದೀಪಿಕಾ ಪಡುಕೋಣರ ‘ಮೈ ಚಾಯ್ಸ್ – My Choice’ ಎಂಬ ಮಹಿಳಾ ಸಬಲೀಕರಣ, ಮಹಿಳೆಯರ ಹಕ್ಕು ಮತ್ತು ಆಯ್ಕೆಗಳ ಬಗೆಗಿನ ಗಟ್ಟಿದನಿಯ ಈ ವಿಡಿಯೋ ಅನೇಕ ಪರವಿರೋಧಗಳನ್ನು ಹುಟ್ಟುಹಾಕಿದ್ದು ನೆನಪಿರಬಹುದು. ನನ್ನ ದೇಹ ನನ್ನ ಮನಸ್ಸು ನನ್ನ ಆಯ್ಕೆ, ನಾನು ತೊಡುವ ವಸ್ತ್ರ ನನ್ನ ಆಯ್ಕೆ, ನಾನು ಮದುವೆಯಾಗುವುದು ಆಗದಿರುವುದು ನನ್ನ ಆಯ್ಕೆ, ಸೈಜ್ ಝಿರೋ ಅಥವಾ ಸೈಝ್ ಫಿಫ್ಟಿ ಅದು ನನ್ನಿಷ್ಟ. ನೆನಪಿರಲಿ ನೀನು ನನ್ನ ಆಯ್ಕೆ, ನಾನು ನಿನ್ನ ಸ್ವತ್ತಲ್ಲ. ಹಣೆಯ ಮೇಲಿನ ಸಿಂಧೂರ, ಬೆರಳಿನ ಉಂಗುರ, ಮೈಮೇಲಿನ ಆಭರಣವನ್ನು ಬದಲಿಸಬಹುದು. ಆದರೆ ನಿನ್ನ ಬಗೆಗಿನ ಪ್ರೀತಿಯನ್ನಲ್ಲ. ನನ್ನ ಆಯ್ಕೆಗಳು ನನ್ನ ಬೆರಳಚ್ಚಿನಂತೆ. ಅದು ನನ್ನನ್ನು ವಿಶಿಷ್ಟವಾಗಿಸಿದೆ. ವಿಭಿನ್ನವಾಗಿರುವುದು ನನ್ನ ಆಯ್ಕೆ. ಸಮಸ್ತ ಸೃಷ್ಟಿ ನಾನು, ಅನಂತತೆಯ ಪ್ರತೀಕ ನಾನು.

ಹೌದಲ್ಲವೇ? ನನ್ನ ದೇಹ ಹೇಗಿದ್ದರೇನು, ನಾನು ಹೇಗಿದ್ದರೇನು? ನಾನೆಂಬೋ ನನ್ನನ್ನು ಅದೆಷ್ಟು ದಿನ ನಿಮ್ಮ ಎಣಿಕೆಯಂತೆ ನಿಮ್ಮ ನಿಮ್ಮ ಆದೇಶಗಳಂತೆ ಮಣಿಸಿ ಇಟ್ಟುಕೊಳ್ಳಲು ಸಾಧ್ಯ? ಇದನ್ನೇ ದೇಹ ರಾಜಕಾರಣವೆನ್ನುವುದು. ಜಗತ್ತು, ಸಮಾಜ ಹೆಣ್ಣನ್ನು ನೋಡುವುದು ಈ ದೇಹ ರಾಜಕಾರಣದ ಮೂಸೆಯಿಂದಲೇ. ಗಂಡು ಹೆಣ್ಣು ಪರಸ್ಪರ ಸಮಾನತೆಯಿಂದ, ಗೌರವದಿಂದ ಕೃತಜ್ಞತೆಯಿಂದ ಬಾಳಬೇಕಾದಲ್ಲಿ ಪುರುಷಾಹಂಕಾರ, ಅಧಿಕಾರಗಳೇ ಮೇಲುಗೈಯಾಗಿ ಆಕೆ ದಾಸಿ ಆತ ಯಜಮಾನನಾಗುವುದೇ ಪಿತೃಸಂಸ್ಕೃತಿ. ಅವಳು ಹೇಗಿರಬೇಕು ಎಂಬುದನ್ನು ನಿರ್ಧರಿಸುವುದೂ ಈ ಮಾಲಿಕನ ಮರ್ಜಿ.

ಮಲೆಯಾಳಂನ ಸೂಕ್ಷ್ಮ ಸಂವೇದನೆಯ ಕವಿ ಗೀತಾ ಹಿರಣ್ಯನ್ ಅವರ ‘ಒಳಾಲಂಕರಣ’ ಕವಿತೆಯಲ್ಲಿ (ಅನುವಾದ ಸ. ಉಷಾ) ಬೊನ್ಸಾಯ್ ಮರಗಳನ್ನು ಹೆಣ್ಣಿಗೆ ರೂಪಕವಾಗಿ ಬಳಸಿಕೊಂಡಿದ್ದಾರೆ.

ನನ್ನೊಲವೇ, ಸಹಜ ಬೆಳವಣಿಗೆಯಿಲ್ಲದ ಬೊನ್ಸಾಯ್ ಅರಳಿಮರದ ಹಾಗೆ ನನ್ನ ಬೆಳೆಯೂ ಕಳೆಯೂ ನಿಯಂತ್ರಣಗೊಂಡಿದೆ…

ಹೆಣ್ಣಿಗೆ ಎಷ್ಟೋ ಎತ್ತರಕ್ಕೆ ಬೆಳೆಯಬಲ್ಲ ಶಕ್ತಿಯಿದ್ದಾಗಲೂ ಉದ್ದೇಶಪೂರ್ವಕವಾಗಿ ಬೆಳವಣಿಗೆಯನ್ನು ನಿಯಂತ್ರಿಸಿರುವ ಬೊನ್ಸಾಯ್ಗೂ ಹೆಣ್ಣಿಗೂ ಎಷ್ಟೊಂದು ಹೋಲಿಕೆ!

ಅವರದೇ ಇನ್ನೊಂದು ಕವಿತೆ ‘ಕ್ರಾಸ್ ಸ್ಟಿಚ್’ ನಲ್ಲಿ ‘ಎರಡು ಗೆರೆ ಸೇರಿ ಹುಟ್ಟಿದ ನಿಷೇಧ ಚಿನ್ಹೆ ಹೆಂಗಸು’! ಎನ್ನುತ್ತಾರೆ. ಹೆಣಿಕೆ ಎನ್ನುವುದು ಮಹಿಳೆಯರು ತಮ್ಮ ಅಭಿರುಚಿಗಾಗಿಯೋ, ಬಿಡುವಿನ ವೇಳೆಯನ್ನು ಕಳೆಯುವ ಟೈಂ ಪಾಸ್ ವಿದ್ಯೆ, ಕೌಶಲವೆಂದು ಅನಿಸಿದರೂ ಅವಳಿಗದು ಸರ್ವಸ್ವ. ಕ್ರಿಯಾಶೀಲತೆ ಅವಳ ಇನ್ನೊಂದು ಗುಣ. ಇತರರಿಗೆ ನಿರುಪಯುಕ್ತವಾಗಿ ಕಾಣುವ ಅವಳ ಲೋಕವನ್ನು ಚೆಲುವಾಗಿಸಿದ ಹಿಗ್ಗಿಸಿದ ಅನುಭಾವದ ಈ ಸೂಜಿ ದಾರ, ವೂಲನ್, ಕ್ರೋಶಾ, ನಿಟ್ಟಿಂಗ್ ಎಲ್ಲವೂ ಆಕೆ ಬದುಕು ಹರಿದುಹೋಗದಂತೆ ಹಿಡಿದು ಹೊಲಿಯುವ ಕ್ರಿಯೆಯಾಗಿಯೇ ಅನನ್ಯವಾಗಿ ಕಾಣತೊಡಗುತ್ತವೆ. ಕ್ರಾಸ್ ಸ್ಟಿಚ್ ನ ಉದ್ದ ಅಡ್ದ ಗೆರೆಗಳ ರೂಪಕದಂತೆಯೇ ಅವಳ ಜೀವನವೂ ವಿಲಕ್ಷಣ ಮತ್ತು ಸಂಕೀರ್ಣತೆಯ ಕಗ್ಗಂಟಾಗುವುದೂ ಉಂಟು.

body shaming

ಹೆಣಿಕೆ : ಮೀರಾ ಕುಲಕರ್ಣಿ

ಪರಸ್ಪರ ತಾವು ಅಪೂರ್ಣವೆಂದುಕೊಳ್ಳುತ್ತಲೇ ಗಂಡು ಹೆಣ್ಣಿನ ನಡುವಿನ ತಾರತಮ್ಯದ ಈ ವ್ಯವಸ್ಥೆಯಲ್ಲಿ ಶತಮಾನಗಳು ಗತಿಸಿವೆ. ಪಿತೃ ಸಂಸ್ಕೃತಿಯ ಸಾಂಸ್ಕೃತಿಕ ರಾಜಕಾರಣ ಈ ಶತಮಾನಗಳ ಸಾಗರಗಳನ್ನು ದಾಟಿ, ನದಿ ಬೆಟ್ಟಗಳನ್ನು ಸವರಿ ಬಂದರೂ ಹೆಣ್ಣು ದೇಹ ರಾಜಕಾರಣವೆಂಬ ಅಂಧಕಾರವನ್ನು ದಾಟಿ ಈಚೆಗೆ ಬರಲಾಗಿಲ್ಲ ಇನ್ನೂ. ಕಾರಣ ನಾವೆಷ್ಟೇ ಸಮಾನತೆ ಸಾಮರಸ್ಯ ಸ್ವಾವಲಂಬನೆಯ ಬಗ್ಗೆ ಪುಟಗಟ್ಟಲೆ ಬರೆದು ದಿನಗಟ್ಟಲೆ ವಿಚಾರ ಸಂಕಿರಣ, ಗೋಷ್ಠಿಗಳನ್ನು ನಡೆಸಿ ಮನೆ ತಲುಪುವಾಗ ಗಂಡನ, ಅತ್ತೆಯ ಚೂಪು ನೋಟಗಳನ್ನು ಎದುರಿಸುವುದು, ಗಂಡಸು ಮನೆಯಲ್ಲಿನ ಹೆಂಡತಿ, ಅಮ್ಮನ ಮೇಲೆ ಗುರಾಯಿಸುವ ಉದಾಹರಣೆಗಳನ್ನು ಮರೆಯುವಂತಿಲ್ಲ.

ಅವಳ ಬಣ್ಣ ಅವಳ ದೇಹ, ಅವಳ ಉಡುಗೆ ತೊಡುಗೆಗಳ ಮೂಲಕ ಅವಹೇಳನಕಾರಿ ಮಾತುಗಳಿಂದ ಇರಿದು ಅವಳು ಕೀಳರಿಮೆ, ಅವಮಾನದ ಕೋಟೆಯನ್ನು ದಾಟಿ ಬರದಂತೆ ಮಾಡುವುದೇ ಈ ವ್ಯವಸ್ಥೆ ಹುನ್ನಾರವೆಂದು ನಮ್ಮ ಶತಮಾನದ ಮಹಿಳೆಯರಿಗೆ ಅರ್ಥವಾಗಿದೆ. ಅವರು ಕಟ್ಟಿದ ಕೋಟೆಯನ್ನು ಮುರಿದು, ಹಾಕಿಟ್ಟ ಚೌಕಟ್ಟನ್ನು ಎತ್ತಿಟ್ಟು ಹೊರಬರುವ ಪ್ರತಿಯೊಬ್ಬ ಮಹಿಳೆಗೆ ಇರುವುದೊಂದೇ ಆಯುಷ್ಯ. ಬದುಕುವುದು ಸಾಧಿಸುವುದು ಅಂತ ಏನೇ ಇದ್ದರೂ ಅದು ಇದೊಂದೇ ಆಯುಷ್ಯಕಾಲದಲ್ಲಿ ಎನ್ನುವ ಸತ್ಯ ಗೊತ್ತಿದೆ. Body shaming ಅನ್ನುವ ಋಣಾತ್ಮಕತೆಯಲ್ಲಿ ಹೆಣ್ಣಿನ ಬೌದ್ಧಿಕತೆಗೆ ಯಾವ ಹೆಚ್ಚಿನ ಮನ್ನಣೆಯೂ ಇಲ್ಲ, ಹೆಣ್ಣಿನ ಸಾಹಿತ್ಯವೆಂದರೆ ಅಡುಗೆ ಮನೆಯ ಸಾಹಿತ್ಯವೆಂದು ಮೂದಲಿಸುತ್ತಿದ್ದ ಕಾಲ ಬಹಳ ಹಿಂದಿನದೇನೂ ಅಲ್ಲ.

ಇನ್ನು ಆಕೆ ಅತೀ ರೂಪವತಿ ಆಗಿದ್ದರೂ ಕೊಂಕು, ಆಗಿಲ್ಲದಿದ್ದರೂ ಕುರೂಪಿಯೆಂಬ ಮೂದಲಿಕೆ, ಬಾಯಿಬಿಟ್ಟು ಮೂದಲಿಸಿದವರನ್ನು ತಿರುಗೇಟು ಕೊಟ್ಟು ಬಾಯಿ ಮುಚ್ಚಿಸಬಹುದು. ಇಲ್ಲಾ ಅವರ ನಿರೀಕ್ಷೆಗಳನ್ನು, ಹಾಕಿದ ಲಕ್ಷ್ಮಣರೇಖೆಗಳನ್ನು ಮೀರಿ ಸಡ್ಡು ಹೊಡೆದು ಬದುಕಿಬಿಡಬಹುದು. ಆದರೆ ಏನೊಂದನ್ನೂ ಆಡದೇ ಏನೊಂದಕ್ಕೂ ತುಟಿಬಿಚ್ಚದೇ ತಣ್ಣನೆಯ ಕ್ರೌರ್ಯದಲ್ಲಿಯೇ ಸಾಯಿಸುತ್ತಾರಲ್ಲ ಅಂಥ ಗಂಡಸು ಅಂಥ ಮನೆ ಜನ, ಅಂಥ ಸಮಾಜ ಯಾವತ್ತೂ ಅಪಾಯಕಾರಿ. ಹಾಗೆ ಬದುಕಿದ ಮತ್ತು ಈಗಲೂ ಬದುಕುತ್ತಿರುವವರು ಅಸಂಖ್ಯರಿರಬಹುದು. ನನ್ನ ಪರಿಚಿತ ಆಪ್ತಗೆಳತಿಯೊಬ್ಬರು ಅಸಾಧಾರಣ ಪ್ರತಿಭಾವಂತೆ. ಅವಳ ವಿದ್ವತ್ತಿಗೆ ಆತ್ಮಸ್ಥೈರ್ಯಕ್ಕೆ ನನ್ನದೊಂದು ಸಲಾಮ್. ಆಕೆಯ ವ್ಯಕ್ತಿತ್ವವನ್ನು ಪ್ರೀತಿಸುವ ನೂರಾರು ಜನ ವಿದ್ಯಾರ್ಥಿಗಳಿದ್ದಾರೆ. ಆದರೆ ಆಕೆ ಬಯಸಿದ ಗಂಡಸು ಮಾತ್ರ ನೋವನ್ನು ಬಿಟ್ಟು ಮತ್ತೇನನ್ನೂ ಕೊಡಲಿಲ್ಲ. ಪದಗಳಿಂದ ಇರಿಯದೇ, ವರ್ತನೆಯಿಂದ ಸಾಯಿಸುವ ತಣ್ಣನೆಯ ಕ್ರೌರ್ಯ ಹೇಗಿರುತ್ತದೆ ಗೊತ್ತಾ?

ಅವಳೇನೂ ಹದಿಹರಯದ ಹುಡುಗಿಯಾಗಿದ್ದಿಲ್ಲ. ನಲವತ್ತು ಐವತ್ತರ ಮಧ್ಯದಲ್ಲಿರಬೇಕು. ಅವನೂ ಹೆಂಡತಿಯನ್ನು ಕಳೆದುಕೊಂಡ ವಿದುರ. ಇಳಿವಯಸ್ಸಿಗೆ ಒಂದು ಸಂಗಾತಿ ಬೇಕು ಎಂದಿದ್ದಕ್ಕೆ ಪರಿಚಿತರು ಇಬ್ಬರನ್ನೂ ಭೇಟಿಮಾಡಿಸಿದ ಬಳಿಕ ಆತ ಸರಳವಾಗಿ ವಿವಾಹವಾದ. ತನ್ನ ತಮ್ಮ ತಂಗಿಯರನ್ನು ದಡ ಸೇರಿಸುವುದರಲ್ಲೇ ವಯಸ್ಸಾಗಿ, ದಾಂಪತ್ಯದ ಕನಸಲ್ಲೇ ನೆರೆಗೂದಲಾದ ಆಕೆಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಸಂತಸ. ಪತಿಯೇ ಪರದೈವ, ನಸುಕಿನಲ್ಲಿ ಎದ್ದು ಅವನ ಕಾಲು ಮುಟ್ಟಿ ನಮಸ್ಕರಿಸಿ ಏಳುವಷ್ಟು ಪ್ರೀತಿಯೋ ಧನ್ಯತೆಯೋ ಅವಳಿಗೆ. ಒಟ್ಟಿನಲ್ಲಿ ಆಕೆ ಬಯಸಿದ್ದು ಆಕೆಗೆ ಸಿಕ್ಕ ಸಂತಸ ಅವಳನ್ನು ಕಂಡಾಗ ನನಗೆ ಮಾತಿನಲ್ಲಿ ಕಣ್ಣಲ್ಲಿ ವ್ಯಕ್ತವಾಗುತ್ತಿತ್ತು. ಇಲ್ಲಿ ಅವರಿಬ್ಬರ ರೂಪದ ಬಗ್ಗೆ ಹೇಳದೇ ವಿಧಿಯಿಲ್ಲ. ಯಾಕೆಂದರೆ ಬಹುಶಃ ಎಲ್ಲೋ ಅದೇ ಅವಳ ದುರಂತದ ಕಾರಣವಾಗಿರಬಹುದು ಎನ್ನುವ ಶಂಕೆ ನನ್ನದು.

ಅವನೇನು ಸುಂದರಾಂಗ ಅಲ್ಲದಿದ್ದರೂ ಬಿಳಿ ಚರ್ಮ ಇದ್ದುದರಿಂದ ತನ್ನನ್ನು ಸುಂದರಾಂಗನೆಂದೇ ಅಂದುಕೊಂಡಿದ್ದು ಆತ ಇವಳನ್ನು ನಡೆಸಿಕೊಳ್ಳುವ ರೀತಿಯಿಂದ ಗ್ರಹಿಸಬಹುದಿತ್ತು. ಈಕೆಯೋ ಅಸಾಧಾರಣ ಪ್ರತಿಭಾವಂತೆ. ಯಾವುದೋ ಶಾಲೆಯ ಮುಖ್ಯೋಪಾಧ್ಯಾಯಕಿಯಾಗಿದ್ದು ದಿಲ್ಲಿಗೆ ಪಿಎಚ್​.ಡಿಗಾಗಿ ಬಂದಿದ್ದಳು. ಭಾಷಾ ಶಾಸ್ತ್ರಜ್ಞೆ, ಜ್ಯೋತಿಷ್ಯ, ವೇದ ಉಪನಿಷತ್ತು, ಸಂಗೀತ, ನಾಟಕ, ಗಮಕ, ಯಕ್ಷಗಾನ, ಭಾಗವತ ಅರ್ಥಗಾರಿಕೆ, ಪಂಪ, ರನ್ನ, ಕುಮಾರವ್ಯಾಸ, ಬರೆಹ, ಹಾಡು ಏನುಂಟು ಏನಿಲ್ಲ ಅವಳಲ್ಲಿ. ಬೇಕಾದರೆ ಪೌರೋಹಿತ್ಯವನ್ನೂ ಮಾಡಬಲ್ಲಳು, ಗೃಹಪ್ರವೇಶ ಮದುವೆಗಳಂಥವನ್ನೂ ಶಾಸ್ತ್ರೋಕ್ತವಾಗಿ ಮಾಡಬಲ್ಲ ಪಾಂಡಿತ್ಯವಿತ್ತು. ಮಕ್ಕಳಿಗೂ ಮುದ್ದುಗರೆಯುವ ಈ ಆಂಟಿಯೆಂದರೆ ಅಚ್ಚುಮೆಚ್ಚು. ಜೀವನಪ್ರೀತಿಯುಳ್ಳ ಯಾರಿಗಾದರೂ ಆಕೆ ಇಷ್ಟವಾಗಿಬಿಡುತ್ತಿದ್ದಳು. ಈಗಲೂ ನನ್ನ ಮೆಚ್ಚಿನ ಗೆಳತಿ ಅವರು. ಎಲ್ಲರಿಗೂ ಇಷ್ಟವಾಗುವ ಆಕೆ ಅವನಿಗೆ ಮಾತ್ರ ಇಷ್ಟವಾಗಲೇ ಇಲ್ಲ. ಆದರೆ ಗಂಡನೆಂಬ ಆ ಪುರುಷನ ಪ್ರೀತಿಗಾಗಿ ಅಂತಃಕರಣಕ್ಕಾಗಿ ಆಕೆ ಹಲುಬುವುದನ್ನು ಕಂಡಾಗೆಲ್ಲ ಬಹಳ ಸಂಕಟವಾಗುತ್ತದೆ.

ಒಮ್ಮೆ ಹೀಗೆ ಯಾವುದೋ ಮನೆ ಜಗಳಕ್ಕೆ ದಿಲ್ಲಿಯ ಬೀದಿಯಲ್ಲಿ ಉತ್ತರ ಕರ್ನಾಟಕದ ಎಲ್ಲಾ ಹೊಲಸು ಬೈಗಳುಗಳಿಂದ ಬೈದು ಆಕೆಯನ್ನು ಬೀದಿಯಲ್ಲೇ ಒದ್ದು ಹೋಗಿದ್ದ ಅವಳ ಪತಿ. ಮನೆಯಲ್ಲಿ ಅವನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಒಬ್ಬ ಮಗನ ಮದುವೆಯಾಗಿತ್ತು. ವಯಸ್ಸಾದ ತಾಯಿಗೆ ಮತ್ತು ಮದುವೆ ಮಾಡಿಕೊಂಡ ಗಂಡಸಿಗೆ ಈಕೆ ಬೇಡವಾಗಿದ್ದಳು. ಯಾಕೆ ಏನಾಗಿದೆ, ಸರಿಯಾಗೇ ಇದ್ದಾರಲ್ಲ, ಬಹಳ ಓದಿಕೊಂಡಿದ್ದಾರೆ, ನಿಮ್ಮ ಬಗ್ಗೆ ಅಪಾರವಾದ ಪ್ರೀತಿಯಿಟ್ಟುಕೊಂಡಿದ್ದಾರೆ  ‘ಚೆನ್ನಾಗಿ ಬಾಳಿ. ಈ ವಯಸ್ಸಿನಲ್ಲಿ ಅವರಿಗೂ ಆಸರಿಕೆ ಬೇಸರಿಕೆಗೆ, ಉಂಡೆಯಾ ತಿಂದೆಯಾ ಎಂದು ಕಾಳಜಿ ಮಾಡಲು ಒಂದು ಜೀವ ಬೇಕಲ್ಲ’ ಎಂದು ಅವರ ಜಗಳವನ್ನು ಕೇಳಿದವರು ತಿಳಿ ಹೇಳುತ್ತಿದ್ದರು. ಮಕ್ಕಳ ಮದುವೆಯೂ ಆಯ್ತು. ಇತನೂ ರಿಟೈರ್ ಆದ.

body shaming

ಹೆಣಿಕೆ : ಮೀರಾ ಕುಲಕರ್ಣಿ

ಮನೆಯಲ್ಲಿ ಆಕೆಗೆ ಊಟ ಕೊಡುತ್ತಿದ್ದಿಲ್ಲ. ಮಲಗುವ ಕೋಣೆ ಆಕೆಗೆ ಬೇರೆ ಮಾಡಿದ್ದರು. ಎದ್ದು ಆಕೆ ಒಳಬರದಂತೆ ಎರಡು ರೂಮಿನ ಆ ಫ್ಲ್ಯಾಟ್​ನ ನಡುಮನೆಯ ರೂಮಿಗೆ ಕೀಲಿ ಹಾಕುತ್ತಿದ್ದರಂತೆ, ಹೆಣ್ಣು ಮಕ್ಕಳೂ ‘ನೀನು ಹೋಗು’ ನಮಗೆ ಬೇಡ ಅನ್ನುತ್ತಿದ್ದರು. ಅತ್ತೆಯಂತೂ ಆಕೆಯನ್ನು ಸವತಿಯಂತೆ ಕಾಣುತ್ತಿದ್ದಳು, ಮಾತಿಲ್ಲ ಕತೆಯಿಲ್ಲ. ದಿನವೂ ದೂರದ ದಿಲ್ಲಿ ಯೂನಿವರ್ಸಿಟಿಯಿಂದ ಮನೆಗೆ ಮರಳಿದಾಗ ಊಟವನ್ನೂ ಇಡುತ್ತಿದ್ದಿಲ್ಲ. ಅಡುಗೆ ಮಾಡಿಕೊಂಡು ಉಣ್ಣುತ್ತಿದ್ದಳೋ ಇಲ್ಲ ಏನು ಮಾಡೋದು ಅಂತ ಇದ್ದ ಸೌತೆಕಾಯಿ, ಮೂಲಂಗಿ, ಹಿಡಿ ಅವಲಕ್ಕಿ ಇದ್ದರೆ ಅದೇ ತಿಂದು ಊಟ ಮುಗಿಸುತ್ತಿದ್ದೆ ಎಂದುದು ನೆನಪಿದೆ. ಹಿಂಸೆಗೆ ಲೆಕ್ಕವಿಲ್ಲ. ಆಕೆಯೂ ಛಲದಿಂದ ಎಲ್ಲಿಯೂ ಹೋಗಲ್ಲ ನಾನಿಲ್ಲೆ ನಿಮ್ಮನ್ನು ಗೆದ್ದುಕೊಳ್ತೀನಿ ಎನ್ನುವಂತೆ ಸಹಿಸುತ್ತಿದ್ದಳು. ಆದರೆ ಅವರಿಗೆ ಈಕೆ ಬೇಕಿದ್ದಿಲ್ಲ. ಇದು ಆಕೆಯ ವಿದ್ವತ್ತಿನಿಂದ ಅವನಿಗಾಗುತ್ತಿದ್ದ ಕೀಳರಿಮೆಯಲ್ಲ. ಅವಳು ನೋಡಲು ಚೆನ್ನಾಗಿಲ್ಲ ಎಂಬುದೇ ವಾಸ್ತವವಾಗಿತ್ತು. ಮುತ್ತೈದೆಯರು ಹೂವು ಮುಡಿಯದೇ ಇರಬಾರದು ಅಲ್ಲವಾ ಎನ್ನುವ ಆಕೆ ಸಿಕ್ಕಿದ ಚೆಂಡು ಹೂವು, ಬೋಗನ್ ವಿಲ್ಲಾವನ್ನೂ ಕಿತ್ತು ಮುಡಿದಾಗ ಜನ ಬೆನ್ನ ಹಿಂದೆ ನಕ್ಕದ್ದೂ ಇದೆ. ಹೀಗೆಲ್ಲ ಮಾಡಬೇಡಿ ಅಂತ ನಾನು ಆಕೆಗೆ ಗದರುತ್ತಿದ್ದೆ.

ಪ್ರೀತಿ ಹಾಳಾಗಲಿ, ಸ್ವಲ್ಪವೂ ಗೌರವವನ್ನು ಕೊಡದ, ಕೊನೆಗೆ ಮನುಷ್ಯಳಂತೆಯೂ ಕಾಣದ ನಿಮಗೆ ಅವನು ಬೇಕೆ? ಅವಳ ಆಪ್ತರಾದ ನಾವೆಲ್ಲ ಬಿಟ್ಟುಬಿಡಿ ಅವನನ್ನ, ನೀವೆಷ್ಟು ಓದೀದೀರಿ, ನಿಮ್ಮ ಊರಿಗೆ ಹೋಗಿ ನಿಮ್ಮ ಕೆಲಸ ಮಾಡಿಕೊಂಡಿರಿ, ನಿಮ್ಮ ಅನ್ನ ನಿಮ್ಮ ಕೈಯಲ್ಲಿದೆ. ಆತ್ಮವಿಶ್ವಾಸದಿಂದ ಬದುಕಿ. ಬೇಕಿದ್ದರೆ ಅವನೇ ನಿಮ್ಮನ್ನು ಹುಡುಕಿಕೊಂಡು ಬರ್ತಾನೆ’ ಎಂದೆಲ್ಲ ಹೇಳುತ್ತಿದ್ದೆವು. ಅವನು ಬಹಿರಂಗವಾಗಿ ‘ಆಕೆ ತನಗೆ ಬೇಕಿಲ್ಲ’ ಎನ್ನುತ್ತಿದ್ದುದು ಬಹುಶಃ ಆಕೆಗೆ ಗೊತ್ತಿರಲಿಕ್ಕಿಲ್ಲ. ಆ ಬಳಿಕ ಆಕೆಯೂ ಊರಿಗೆ ಮರಳಿದ್ದಳು, ಹೊಟ್ಟೆಗೆ ಬೇಕಲ್ಲ. ಸರಕಾರಿ ನೌಕರಿಯ ಆಕೆ ದೀರ್ಘಕಾಲದ ರಜೆ ಹಾಕಿದ್ದರೆಂದು ತೋರುತ್ತದೆ. ಇತ್ತ ಗಂಡನಿಗೂ ಒಳ್ಳೆಯದಾಯ್ತು. ಹೋಯ್ತು ಪೀಡೆ ಎಂದುಕೊಂಡನೋ ಏನೋ ಅವಳಿಗೆ ಹೇಳದೇ ಕೇಳದೆ ಅಡ್ರೆಸ್ ಕೊಡದೇ ಎಲ್ಲೋ ಹೋಗಿಬಿಟ್ಟ. ಆಗಲೂ ಬಿಡಲಿಲ್ಲ ಆಕೆ. ಅದು ಹೇಗೋ ಪತ್ತೆಮಾಡಿ ಅವನು ಗೋವೆಗೆ ಹೋಗಿದ್ದಾನೆಂದು ಸೀದಾ ಅಲ್ಲಿಗೆ ಹೋಗಿ ಕೆಲಕಾಲ ಇದ್ದುಬಂದಳು. ಅವನನ್ನು ತಿದ್ದುವ , ಒಲಿಸಿಕೊಳ್ಳುವ , ತನಗೇನೂ ಬೇಡ ನಿಮ್ಮ ನೆರಳು ನನ್ನ ಜೊತೆಗಿರಲಿ, ಎನ್ನುವ ಆಕೆ ಈಗಲೂ ನನಗೆ ಫೋನ್ ಮಾಡಿ ಹೇಳುತ್ತಾಳೆ- ‘ನನ್ನ ಪತಿಯನ್ನು ಮಾತಾಡಿಸಿ ಅವರು ಯಾಕೆ ಹಾಗೆ ಮಾಡ್ತಾರೆ, ನಾನು ಅವರನ್ನು ಏನೂ ಕೇಳುವುದಿಲ್ಲ, ಅವರು ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ಕೆಲಕಾಲ ನನ್ನೊಂದಿಗಿದ್ದು ಹೋದರೆ ಸಾಕು’ ಎಂದೆಲ್ಲ ತನ್ನ ಸಂಕಟವನ್ನು ಹೇಳಿಕೊಳ್ತಾಳೆ.

ತನ್ನನ್ನು ತ್ಯಜಿಸಿದ ಗಂಡಸು ತನಗೆ ಅಪಾತ್ರನು ಎಂದು ಆಕೆಯ ಅಂತರಾತ್ಮ ಹೇಳದಿರುತ್ತದೆಯೇ? ಆದರೂ ಆತ ಬರಲಿ ಎಂಬ ನಿರೀಕ್ಷೆಯಿದೆ. ತನ್ನೆಲ್ಲಾ ಅವಮಾನಗಳನ್ನು ಮೀರಿ ಆಕೆ ಮಾಡಿದ ಸಾಧನೆ ತುಂಬ ಎತ್ತರದ್ದು. ಒಂದು ಬುಡಕಟ್ಟು ಭಾಷೆಗೆ ವ್ಯಾಕರಣವನ್ನು ಬರೆದಳು, ಮಕ್ಕಳಿಗೆ ಗಮಕ, ಸಂಗೀತ, ಯೋಗ ಇತ್ಯಾದಿ ಹೇಳಿಕೊಡುತ್ತಾಳೆ. ಅನೇಕ ವಿದ್ವಾಂಸರೊಂದಿಗೆ ಸೇರಿ ಕೆಲ ಪುಸ್ತಕಗಳನ್ನೂ ಸಂಪಾದಿಸಿದ್ದಾಳೆ. ಜೀವನ ಪ್ರೀತಿ ಬತ್ತದಂತೆ ಬದುಕುವ ಆಕೆ ಎಷ್ಟೊಂದು ಜನರ ಪ್ರೀತಿಯನ್ನು ಗಳಿಸಿದ ಆಕೆ ಖಂಡಿತ ಏಕಾಂಗಿಯಲ್ಲ. ನಿನ್ನೆ ಹಳೇ ವಾಟ್ಸಪ್ ಮೆಸೇಜುಗಳನ್ನು ನೋಡುತ್ತಿದ್ದೆ, ಅವಳ ಹುಟ್ಟುಹಬ್ಬದಂದು – ಇಡೀ ದೇಶವೇ ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಿದೆ ಇದಕ್ಕಿಂತ ಖುಷಿ ಏನಿದೆ?’ ಎಂಬ ಆಕೆಯ ಸಂದೇಶ ಓದಿ ಕಣ್ಣು ಮಂಜಾದವು. ಅಗಸ್ಟ್ 15 ರಂದು ದೇಶ ಸ್ವತಂತ್ರವಾಗಿತ್ತು. ನಿಮ್ಮ ಜಾತಕದಲ್ಲಿ- ನೀವು ಎಂದೂ ಗಂಡಿನ ದಾಸ್ಯದಲ್ಲಿ ಇರದೇ ಸ್ವತಂತ್ರವಾಗಿರಲಿ ಎಂದಿರಬೇಕು’ ಎಂದು ಚೇಷ್ಟೆಗೆ ಅಂದಿದ್ದರೂ ಬಹುಶಃ ಆಕೆಗೆ ಸಮಾಧಾನವಾಗುತ್ತಿತ್ತೋ ಏನೊ.

ಅವಳನ್ನು ಬಾಳಿಸದ ಆ ವ್ಯಕ್ತಿ ನನ್ನೆದುರಿಗೆ ಸಿಕ್ಕರೆ ಕಪಾಳಕ್ಕೆ ಬಾರಿಸುವಷ್ಟು ಕೋಪ ನನ್ನೊಳಗಿದೆ. ನಿನಗೇನು ಬೇಕಿತ್ತು, ಬಿಳಿ ತೊಗಲು? ಸಂಪಿಗೆ ನಾಸಿಕ, ಸಿಂಹ ಕಟಿ, ಕುಂಭ ಕುಚ! ಏನು ಬೇಕಿತ್ತು ನಿನಗೆ? ಅವಳನ್ನು ನಿನ್ನ ತಣ್ಣನೆಯ ಕ್ರೌರ್ಯದಿಂದ ಹೊಸಕಿ ಹಾಕಿದೆನೆಂದುಕೊಂಡೆಯಾ? ಆಕೆ ಏರಿದ ಎತ್ತರವನ್ನು ನೀನು ಕಣ್ಣೆತ್ತಿ ಕೂಡ ನೋಡಲು ಯೋಗ್ಯತೆಯಿಲ್ಲದವನು. ಬಹುಶಃ ಆ ಬೆಳಕಿನ ಪ್ರಖರತೆಗೆ ನಿನ್ನ ಕಣ್ಣು ಕುಕ್ಕಬಹುದು’ ಎನ್ನಬೇಕು ಎಂದು ಮನಸ್ಸಿನಲ್ಲೇ ರಿಹರ್ಸಲ್ ಮಾಡುತಿರುತ್ತೇನೆ.

ಅಯ್ಯೋ ಈ ಒಬ್ಬ ಗಂಡಸನ್ನು ಅಂದು ಏನುಮಾಡೋಣ. ಅಗಸರವನ ಮಾತು ಕೇಳಿ ತುಂಬು ಗರ್ಭಿಣಿ ಸೀತೆಯನ್ನೇ ಕಾಡಿಗಟ್ಟಿದ ರಾಮನ ನಾಡಲ್ಲವೇ ನಮ್ಮದು? ರಾಮ ಆದರ್ಶ ಪುತ್ರ, ಆದರ್ಶ ಪತಿಯೆಂದು ಜಗತ್ತು ಮರ್ಯಾದಾ ಪುರುಷೋತ್ತಮನನ್ನು ಕೊಂಡಾಡುತ್ತಾರೆ. ಅಗ್ನಿಪರೀಕ್ಷೆಗೊಡ್ಡಿದ ರಾಮ ಒಬ್ಬ ಸಾಮಾನ್ಯ ಗಂಡಸಿನಂತೆಯೇ ನಡೆದುಕೊಳ್ಳುತ್ತಾನಲ್ಲವೇ? ಕಾಡಿನಲ್ಲಿ ಅವಳನ್ನು ಬಿಡಲು ಬಂದ ಲಕ್ಷ್ಮಣ ಇಂಥ ದಟ್ಟ ಅಡವಿಯಲ್ಲಿ ಅತ್ತಿಗೆಯನ್ನು ಏಕಾಂಗಿಯಾಗಿ ಬಿಟ್ಟು ಹೋಗಲಾರದೇ ಶೋಕಾಕುಲನಾದಾಗ ಸೀತೆಯೇ ನಾನೆಲ್ಲಿ ಒಂಟಿ- ಹರಿಯುವ ನದಿ, ಬೀಸುವ ಗಾಳಿ, ಹುಲಿ ಕರಡಿಗಳೆಲ್ಲ ನನ್ನ ಜೊತೆಗಿವೆ ಒಂಟಿಯಾಗಿರುವವನು ನಿನ್ನ ಅಣ್ಣ ರಾಮ. ಅವನಿಗೆ ಜೊತೆ ಬೇಕು ನೀನು ಹೋಗು ಎನ್ನುತ್ತಾಳೆ.

ಜನಪದ ಕಾವ್ಯದಲ್ಲಿ ಸೀತೆ ಹೀಗನ್ನುತ್ತಾಳೆ,

ಬಾಳೆ ಕಡಿದಾರೆ ತೋಟ ಹಾಳಾಗಬಲ್ಲುದೆ ಬಾಳಿಸಲಾರದೇ ಮಡದೀಯ ಬಿಟ್ಟರೆ ಬಾಳೆ ಹಣ್ಣೇನೇ ಕೊಳಿಯಾಕೆ

ಅವನಿಗೆ ಹೆಂಡತಿಯನ್ನು ಬಾಳಿಸಲಾಗಿಲ್ಲ ಎನ್ನುವುದನ್ನು ಕಟಕಿಯಾಡುತ್ತಲೇ ಈ ಕಾರಣಕ್ಕೆ ತನ್ನ ಬದುಕು ಮುಗಿದುಹೋಗಬೇಕಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಾಳೆ. ತಾನು ಕೊಳೆತುಹೋಗುವ ಬಾಳೆ ಹಣ್ಣಲ್ಲ, ಎನ್ನುವ ಮೂಲಕ ಅವಳು ತನ್ನ ಉಳಿದ ಬದುಕನ್ನು ಧೈರ್ಯದಿಂದ ಆತ್ಮಗೌರವದಿಂದ ಕಳೆಯುವ ಸೂಚನೆ ನೀಡುತ್ತಾಳೆ. (ಎಮ್.ಎಸ್. ಆಶಾದೇವಿ ಅವರ ನಾರೀಕೇಳ ಅಂಕಣ ಬರಹ)

ಹೆಣ್ಣು ತನ್ನನ್ನು ತಾನು ಕಂಡುಕೊಳ್ಳುವ ಹಾದಿಯಲ್ಲಿ ಪ್ರತಿನಿತ್ಯ ಹಾಯಬೇಕಾದ ಬೆಂಕಿಕೊಂಡಗಳಿವೆ. ತನ್ನಿಚ್ಛೆಯ ಬದುಕು, ಉದ್ಯೋಗ, ತನ್ನಿಚ್ಛೆಯ ಉಡುಪು, ಆಹಾರ, ಸಂಗಾತಿ, ಅಸ್ಮಿತೆ ಎಲ್ಲವನ್ನೂ ಆಕೆ ಈ ದೇಹ ರಾಜಕಾರಣವನ್ನು ಧಿಕ್ಕರಿಸಿ ನಿಲ್ಲುವ ಹೋರಾಟದ ಮೂಲಕವೇ ದಕ್ಕಿಸಿಕೊಳ್ಳಬೇಕಾದ ಅಗ್ನಿದಿವ್ಯದ ಹಾದಿ ಇನ್ನೂ ದೂರವಿದೆ.

ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ? : ಅಜ್ಜಿ ಒತ್ತಾಯಿಸಿದ ಬಾಳಂತನದ ಪಟ್ಟಿಯನ್ನು ನಾನು ಬೇಕೆಂದೇ ಹೊಟ್ಟೆಗೆ ಕಟ್ಟಿಕೊಳ್ಳಲಿಲ್ಲ

Summaniruvudu Hege a Body Shaming series by writer Renuka Nidagundi

Published On - 3:31 pm, Thu, 15 April 21

ತಾಜಾ ಸುದ್ದಿ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ: ಮಣ್ಣು ತೆರವು ಕಾರ್ಯಾಚರಣೆ ಶುರು
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನೀರಿನಲ್ಲಿ ಈಜಿಕೊಂಡು ಹೋಗಿ ಗ್ರಾಮಗಳಿಗೆ ಬೆಳಕು ನೀಡಿದ ಪವರ್ ಮ್ಯಾನ್
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ನಟಿಯರ ಕ್ರಿಕೆಟ್: ರೋಷಾವೇಷದಲ್ಲಿ ಬ್ಯಾಟ್ ಬೀಸಿದ ಸಪ್ತಮಿ ಗೌಡ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ಕನ್ನಡಿಗರ ಉದ್ಯೋಗ ಮೀಸಲಾತಿಗೆ ವಿರೋಧಿಸಿದ ಕಿರಣ್ ಮಜುಂದಾರ್ ಸಂಸ್ಥೆಗೆ ಮಸಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ತಮಿಳುನಾಡಿನೊಂದಿಗಿನ ನೀರು ಸಂಘರ್ಷಕ್ಕೆ 1 ವರ್ಷ ವಿರಾಮ: ಕುಮಾರಸ್ವಾಮಿ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಮಿಲಿಟರಿ ಬರುವ ಕಾಲ ಬರುತ್ತೆ, ಕರೆದುಕೊಂಡು ಬರೋಣ: ಹೆಚ್​ಡಿಕೆ ಎಚ್ಚರಿಕೆ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ಪ್ರತಿ ಭಾನುವಾರ ಫ್ಯಾಮಿಲಿ ಬದಲು ಫ್ಯಾನ್ಸ್​ಗೆ ಸಮಯ ಮೀಸಲು: ಧ್ರುವ ಸರ್ಜಾ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ತಮಿಳುನಾಡಿನ ನೀರಿನ ದಾಹ ತಣಿಸಿದ ಕಾವೇರಿ, ಎಷ್ಟು ಹರಿಯುತ್ತಿದೆ ಎಂದು ನೋಡಿ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ
ವಿಡಿಯೋ: ದರ್ಶನ್ ಪ್ರಕರಣದ ಬಗ್ಗೆ ಕೊನೆಗೂ ಮಾತನಾಡಿದ ನಟ ಧ್ರುವ ಸರ್ಜಾ