Body Shaming ; ಸುಮ್ಮನಿರುವುದು ಹೇಗೆ? : ಮುಚ್ಚಿಡುವ ಪ್ರಮೇಯವೇ ಇಲ್ಲ ಸತ್ಯವನ್ನು ಒಪ್ಪಿಕೊಂಡಿದ್ದೇನೆ…

ಶ್ರೀದೇವಿ ಕಳಸದ

|

Updated on:Apr 16, 2021 | 6:13 PM

‘ವಾಸಿಯಾಗುತ್ತದಲ್ಲ? ನನ್ನನ್ನೇ ಪ್ರಶ್ನಿಸಿದಳು. ಏನು ಉತ್ತರಿಸಲಿ? ನಕ್ಕುಬಿಟ್ಟೆ. ನನಗೇ ಗೊತ್ತಿಲ್ಲ ನನ್ನ ದಾರಿ ಎಲ್ಲಿಯವರೆಗೆ ಅಂತ. ನಾವಿಬ್ಬರೂ ಅಕ್ಕಪಕ್ಕದಲ್ಲಿ ಬಹಳಷ್ಟು ಹೊತ್ತು ಮೌನವಾಗಿ ಕಳೆದೆವು. ಯಾವುದೋ ದ್ರಾವಣ ಕೊಟ್ಟರು. ಕೈಕಾಲು ಕಟ್ಟಿದರು‌. ಕೊನೆಗೆ ಕೆನಲ್. ಆರಾಮಾಗಿ ಹಾಕಿಸಿಕೊಂಡೆ. ನೈರೋಬಿಯ ಗೆಳತಿ ಮಾತ್ರ ಕಣ್ಣೀರು. ನನ್ನ ಕೈ ಗಟ್ಟಿಯಾಗಿ ಹಿಡಿದಳು. ಮಾತು ಇಬ್ಬರಿಗೂ ಬೇಡವಾಗಿತ್ತು. ‌ಅವಳ ಕಣ್ಣೀರು ನನ್ನ ಎದೆಯೊಳಗೆ, ಕಲ್ಲಿನಂತೆ ಕುಳಿತಿದ್ದೆ. ಏನು ಮಾಡುವುದು ನನ್ನದೂ ಅದೇ ಪಯಣ. ಗೋರಿ ದೂರವಿತ್ತೋ ನಾನೇ ಗೋರಿ ತಳ್ಳುತ್ತಿದ್ದೇನೋ ಸತ್ಯ ಗೊತ್ತಿರಲಿಲ್ಲ ನನಗೆ.‘ ಅರ್ಚನಾ ಫಾಸಿ 

Body Shaming ; ಸುಮ್ಮನಿರುವುದು ಹೇಗೆ? : ಮುಚ್ಚಿಡುವ ಪ್ರಮೇಯವೇ ಇಲ್ಲ ಸತ್ಯವನ್ನು ಒಪ್ಪಿಕೊಂಡಿದ್ದೇನೆ...
ಲೇಖಕಿ ಅರ್ಚನಾ ಫಾಸಿ
Follow us

ಆಕೆಯನ್ನು ಶಿಲೆಯಲ್ಲಿ ಬಾಲಿಕೆಯಾಗಿ ಅರಳಿಸಿದೆವು. ಪಟದಲ್ಲಿ ದೇವತೆಯಾಗಿ ನಸುಗುಲಾಬಿ ಬಣ್ಣ ಹಚ್ಚಿ ಚೌಕಟ್ಟಿನೊಳಗೆ ಕೂರಿಸಿದೆವು. ಮತ್ತಷ್ಟು ಬಣ್ಣ ಮೆತ್ತಿ ಬಗೆಬಗೆಯ ಪೋಷಾಕು ತೊಡಿಸಿ ರಂಗಸಜ್ಜಿಕೆಯನ್ನೂ ಏರಿಸಿದೆವು. ಬೆಳ್ಳಿಪರದೆ, ಟಿವಿ, ಕಂಪ್ಯೂಟರ್​ಗಳಲ್ಲಿಯೂ ಆಕೆಯನ್ನು ಅಡಕಗೊಳಿಸಿದೆವು. ಈಗಂತೂ ಅಂಗೈನ ಪರದೆಗಳೊಳಗೆ ಆಕೆ ವಿಧವಿಧದಲ್ಲಿ ಪ್ರತ್ಯಕ್ಷಳಾಗುವಂತೆಯೂ ಮಾಡಿದೆವು. ಒಟ್ಟಿನಲ್ಲಿ ಸೌಂದರ್ಯವೆಂದರೆ ಹೀಗೇ ಎಂಬ ವ್ಯಾಖ್ಯಾನವನ್ನು ಸಹಸ್ರಾರು ವರ್ಷಗಳಿಂದ ಇಡೀ ಸಮಾಜದ ಮೆದುಳಿಗೇ ಮೊಳೆ ಬಡಿದು ಕುಳಿತೆವು. ಪೂರ್ವನಿರ್ಧರಿತ ಸೌಂದರ್ಯ ಪರಿಕಲ್ಪನೆಯ ಪರಿಣಾಮದಿಂದಾಗಿ ಆಕೆ ವ್ಯಕ್ತಿತ್ವಹೀನಳಾಗಿ ಬೆಳೆಯುವ ಅಪಾಯಕ್ಕೆ ಬಿದ್ದರೂ ಸುಮ್ಮನಿರುವುದು ಜವಾಬ್ದಾರಿತನದ ಲಕ್ಷಣವೇ? ಒಂದೊಮ್ಮೆ ತನ್ನತನದ ಬಗ್ಗೆ ತನಗೇ ಅರಿವು ಉಂಟಾಗಿ ಬೀಳಿಸಿದ ಕಂದಕಗಳಿಂದ ಎದ್ದು ಆಕೆ ಚಿಮ್ಮಬೇಕೆಂದಾಗೆಲ್ಲಾ ಅಡ್ಡವಾಗುವ ಗೋಡೆಗಳು ಒಂದೇ ಎರಡೇ?; ನೋವು, ಅವಮಾನ, ತಿರಸ್ಕಾರ ಎನ್ನುವುದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ. ದೇಹಕ್ಕೂ ಮನಸ್ಸಿಗೂ ಆದ್ಯಂತವಾಗಿ ಬೆಸೆದುಕೊಂಡಿರುವಂಥ ಆಳ, ಸೂಕ್ಷ್ಮ ಸಂಗತಿಯದು. ಇರಲಿ, ಎಷ್ಟೇ ಗಾಸಿಗೊಂಡರೂ ಧೃತಿಗೆಡದೆ ತನ್ನ ದಾರಿಯನ್ನು ತಾನೇ ನಿಚ್ಚಳವಾಗಿಸಿಕೊಳ್ಳಲು ಯೋಚನಾಶಕ್ತಿ ಅವಳಿಗೆ ಯಾವತ್ತೂ ಇದ್ದೇ ಇದೆ. ಅದಕ್ಕಾಗಿ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳುತ್ತಾಳೆ. ಇದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

‘ಇರಲಿ, ಇದೆಲ್ಲವನ್ನೂ ಮರೆತು ನಾನು ಬಹಳ ಮುಂದೆ ನಡೆದು ಬಂದೆ. ನನ್ನ ಬದುಕು ನನ್ನ ಇಷ್ಟ ಅಂದುಕೊಂಡೇ ಹೊರಟೆ. ಯಾರು ಏನೇ ಅಂದರೂ ನಕ್ಕರೂ Who cares ಅಂದುಕೊಂಡು ನಿರಾಳವಾದೆ. ಆದರೆ ಆ ತನಕ ನಾನು ತೆತ್ತ ಬೆಲೆ? ಹೀಗೊಂದು ಮನಸ್ಥಿತಿ ನನ್ನಲ್ಲಿ ಗಟ್ಟಿಗೊಳ್ಳಬೇಕಾದರೆ ಅದೆಷ್ಟು ವರ್ಷ ಅವರಿವರ ಮಾತು ನೋಟಗಳೊಳಗೆ ಬೇಯಬೇಕಾಯಿತು? ಎಷ್ಟೇ ಓದು ಎಷ್ಟೇ ಜಗತ್ತು ಮುಂದುವರೆದರೂ ಹೆಣ್ಣಿನ ಅಗ್ನಿಪರೀಕ್ಷೆ ಮುಗಿಯುವುದೇ ಇಲ್ಲವಲ್ಲ? ಬಹುಶಃ ಆಧುನಿಕ ಕಾಲದ ಮಹಿಳೆ ಹೆಚ್ಚೇ ಮಾನಸಿಕ ನೋವು ಅನುಭವಿಸುತ್ತಾಳೇನೋ.’ ಅರ್ಚನಾ ಫಾಸಿ

ಬದುಕು ಕ್ಷಣಕ್ಕೊಮ್ಮೆ ಬದಲಾಗಿ ಬಿಡುತ್ತದೆ. ನಾನಿನ್ನೂ ಜೆನೆಟಿಕ್​ ಅನೀಮಿಯಾ ರೋಗದಲ್ಲಿ ಶಿಶುವಾಗಿದ್ದೆ. ಆಸ್ಪತ್ರೆಯ ಮೆಟ್ಟಿಲೇರಿದ ಆ ದಿನವೇ ನನ್ನ ಜನ್ಮದಿನ, ಫೆಬ್ರವರಿ ಹನ್ನೊಂದು. ಅಣ್ಣ ಜೊತೆಗಿದ್ದ. ಅವನಿಗೆ ನನ್ನ ರೋಗದ ಬಗ್ಗೆ ಗೊತ್ತಿತ್ತು. ಆದರೆ ನನ್ನಿಂದ ಮುಚ್ಚಿಟ್ಟಿದ್ದ. ನಾನು ಏನೂ ಕೇಳಲು ಹೋಗಿರಲಿಲ್ಲ. ನನಗೆ ಗೊತ್ತಾಗಿತ್ತು ಬದುಕು ಬದಲಾಗುತ್ತಿದೆ, ನಾನು ಗಟ್ಟಿಯಾಗಬೇಕು ಅಂತ. ಅಣ್ಣ ಯಾರೊಡನೆಯೂ ಮಾತು ಬೇಡ, ಸುಮ್ಮನೆ ಕೂತಿರು ಅನ್ನುತ್ತಿದ್ದ. ಹುಡುಕಿ ಹುಡುಕಿ ಯಾರೂ ಇಲ್ಲದ ಖುರ್ಚಿಯಲ್ಲಿ ಕೂಡಿಸುತ್ತಿದ್ದ. ಅವನಿಗೆ ಭಯ. ಯಾರಾದರೂ ಮಾತನಾಡುತ್ತಾ ತಮ್ಮ ರೋಗದ ಬಗ್ಗೆ ಹೇಳಿಕೊಂಡರೆ ನಾನು ಕುಸಿದುಬಿಡುತ್ತೇನೆ ಅಂತ. ನಾನು ಮೌನಿಯಾಗಿಯೇ ಇರುತ್ತಿದ್ಧೆ ಯಾಕೆಂದರೆ ನನಗೆ ಸತ್ಯ ಗೊತ್ತಿತ್ತು. ಹಾಗಾಗಿಯೇ ನಾನು ನಿರ್ಧರಿಸಿಬಿಟ್ಟಿದ್ದೆ, ಎಷ್ಟೇ ಸಂಕಟವಾಗಲಿ ನೋವಾಗಲಿ ಸಾವು ನನ್ನನ್ನು ಎಷ್ಟೇ ಬಾಗಿಸಿದರೂ ನಾನು ಕುಸಿಯಲೇಬಾರದು ಎಂದು.

ನನ್ನ ಅಕ್ಕಪಕ್ಕದಲ್ಲಿ ಯಾರದೋ ಸೊಸೆ ಇದ್ದಳು, ಮಗಳಿದ್ದಳು, ಅಣ್ಣನಿದ್ದ, ಮಾವನಿದ್ದ, ಪುಟ್ಟ ಮಕ್ಕಳಿದ್ದರು, ತುಂಬು ಯೌವ್ವನದ ಹುಡುಗ ಹುಡುಗಿಯರಿದ್ದರು, ವಯಸ್ಸಾದವರಿದ್ದರು ಮತ್ತು ಆಗಷ್ಟೇ ಜನ್ಮಪಡೆದ ಕೂಸುಗಳಿದ್ದವು. ಅವರೆಲ್ಲರೊಳಗೆ ಕ್ಯಾನ್ಸರ್ ಎಂಬ ದೈತ್ಯ ಹೊಕ್ಕು ಕುಳಿತುಬಿಟ್ಟಿದ್ದ. ಆ ಊರು ಈ ಊರು ಯಾವುದೋ ರಾಜ್ಯ, ಸೌದಿ, ಬಾಂಗ್ಲಾ, ಆಫ್ರಿಕಾ, ನೈರೋಬಿ ಒಂದೆರಡೆ? ಈ ರೋಗ ರಕ್ತಪಿಶಾಚಿ. ಹನಿ ಕೆಳಗೆ ಬಿದ್ದರೆ ಮತ್ತೆ ಮತ್ತೆ ಎದ್ದು ಹುಟ್ಟುತ್ತದೆಯಂತೆ. ಹೀಗೆಲ್ಲ ಅವರು ನನಗೆ ಕಥೆ ಹೇಳುತ್ತಿದ್ದರು. ನಾನು ಮೌನವಾಗಿ ಕೇಳಿಸಿಕೊಳ್ಳುತ್ತಿದ್ದೆ. ಅವರೆಲ್ಲರ ಬದುಕಿನ ಮಗ್ಗುಲುಗಳಿಗೆ ಒದ್ದಾಟಗಳಿಗೆ ಕಿವಿಯಾಗುತ್ತ ಕುಳಿತಿರುತ್ತಿದ್ದೆ.  ಜೀವನ ಇಷ್ಟೊಂದು ಕ್ರೂರಿಯೆ ಅಥವಾ ಸಾವು ಇಷ್ಟೊಂದು ಸರಳವೆ? ಉತ್ತರವಿಲ್ಲದ ಪ್ರಶ್ನೆಗಳು. ಯಾರನ್ನು ಕೇಳುವುದು? ನನ್ನ ‘ಕೃಷ್ಣ’ ಮೌನವಾಗಿದ್ದಾನಾ ಅಥವಾ ನನಗೇ ಅವನ ಬಳಿ ಕೇಳುವ ಮನಸ್ಸಾಗುತ್ತಿಲ್ಲವೋ? ಗೊತ್ತಿಲ್ಲ. ಮೊಗೆಮೊಗೆದು ಸಂತೋಷ ಕೊಟ್ಟ ಅವನ ಬಳಿ ನನ್ನ ನೋವಿನ ಬಗ್ಗೆ ಈಗ ಕೇಳಿದರೆ ಕಪಾಳಿಗೆ ತೆಗೆದೆರಡು ಬಿಗಿಯಬಹುದಷ್ಟೇ! ಛೆ, ಇಡಿಯಾಗಿ ಬದುಕನ್ನು ಪ್ರೀತಿಸಿದವಳು ನಾನು, ಸಲ್ಲದು.

ಯಾವುದೋ ಟೆಸ್ಟ್​ ಇತ್ತು. ರಕ್ತ ತೆಗೆಯಬೇಕಿತ್ತು. ಪಕ್ಕದಲ್ಲಿ‌ ನೈರೊಬಿಯ ಗೆಳತಿ ಮತ್ತವಳ ಗಂಡ ಫ್ರೊಪೆಸರ್. ಇತ್ತ ಕಡೆ ಕುಳಿತವಳು ಜರ್ನಲಿಸ್ಟ್,​ ಮದುವೆಯಾಗಿ ಮೂರು ನಾಲ್ಕು ವರ್ಷವಷ್ಟೇ. ಯಾವುದೊ ಕ್ಯಾನ್ಸರ್, ಹರಕು ಮುರುಕು ಭಾಷೆಯಲ್ಲೇ ಹೇಳಿದಳು. ಕೆಂಪು ಕೆಂಪಾಗಿ ಮುದ್ದಾಗಿದ್ದಳು. ನಕ್ಕರೆ ಬೆಳದಿಂಗಳು. ವಾಸಿಯಾಗುತ್ತಲ್ಲ ನನ್ನನ್ನೇ ಪ್ರಶ್ನಿಸಿದಳು. ನಾನು ಏನು ಉತ್ತರಿಸಲಿ? ನಕ್ಕುಬಿಟ್ಟೆ. ಏನಾಗಲ್ಲ ಭಯ ಬೇಡಾ‌. ನನಗೇ ಗೊತ್ತಿಲ್ಲ ನನ್ನ ದಾರಿ ಎಲ್ಲಿಯವರೆಗೆ ಅಂತ, ನಾನೇನು ಹೇಳಲಿ? ನಾವಿಬ್ಬರೂ ಅಕ್ಕಪಕ್ಕದಲ್ಲಿ ಬಹಳಷ್ಟು ಹೊತ್ತು ಮೌನವಾಗಿ ಕಳೆದೆವು. ಯಾವುದೋ ದ್ರಾವಣ ಕೊಟ್ಟರು. ಕೈಕಾಲು ಕಟ್ಟಿದರು‌. ಕೊನೆಗೆ ಕೆನಲ್. ನಾನು ಆರಾಮಾಗಿ ಹಾಕಿಸಿಕೊಂಡೆ. ನೈರೋಬಿಯ ಗೆಳತಿ ಮಾತ್ರ ಕಣ್ಣೀರು ಹಾಕುತ್ತಿದ್ದಳು. ನನ್ನ ಕೈ ಗಟ್ಟಿಯಾಗಿ ಹಿಡಿದಳು. ಭರವಸೆಯ ಬೆಸುಗೆ, ಕಣ್ಣಲ್ಲೇ ಸಾಂತ್ವನಿಸಿದೆ. ಮಾತು ಇಬ್ಬರಿಗೂ ಬೇಡವಾಗಿತ್ತು. ‌ಅವಳ ಕಣ್ಣೀರು ನನ್ನ ಎದೆಯೊಳಗೆ, ಕಲ್ಲಿನಂತೆ ಕುಳಿತಿದ್ದೆ. ಏನು ಮಾಡುವುದು ನನ್ನದೂ ಅದೇ ಪಯಣ. ಗೋರಿ ದೂರವಿತ್ತೋ ನಾನೇ ಗೋರಿ ತಳ್ಳುತ್ತಿದ್ದೇನೋ ಸತ್ಯ ಗೊತ್ತಿರಲಿಲ್ಲ ನನಗೆ.

body shaming

ನೋಡು ಕೃಷ್ಣ; ಎದ್ದು ನಿಲ್ಲುವ ಮುನ್ನ…

ಹೇಳಿದೆನಲ್ಲ, ಅಣ್ಣ ಎಲ್ಲ‌ ಮುಚ್ವಿಟ್ಟಿದ್ದ. ಸತ್ಯ ಗೊತ್ತಿದ್ದ ನಾನು ಕಹಿಯನ್ನು ನುಂಗುತ್ತ ಮೌನಿಯಾಗುತ್ತ ಬಂದೆ. ಈಗ ಆ ನೈರೋಬಿ ಗೆಳತಿ ಈಗ ಎಲ್ಲಿದ್ದಾಳೋ, ಹೇಗಿದ್ದಾಳೋ? ಅಣ್ಣನಿಗೆ ಹೇಳಿದರೆ ಯಾಕೆ ಎಲ್ಲರೂ ಬಂದು ನಿನಗೇ ಕಥೆ ಹೇಳುತ್ತಾರೆ ಅಂತಿದ್ದ. ಬದುಕಿನ ತುಂಬ ಬಂಧಗಳು ಬೆಳೆದದ್ದು ಹೀಗೆಯೇ. ಶಾಲೆ, ಕಾಲೇಜು, ಆಫೀಸು ಎಲ್ಲೆಲ್ಲೂ ಬಂದು ಸಂಕಟವನ್ನು ನೋವುನ್ನು ಜಂಜಾಟಗಳನ್ನು ಹಂಚಿಕೊಳ್ಳುತ್ತಿದ್ದರು. ಅವರಿಗೆ ನಾನೇ ಸಾಂತ್ವನದ ಬೇರು. ಯಾರಿಗೋ ಅಕ್ಕ, ಯಾರಿಗೋ ತಂಗಿ, ಇನ್ಯಾರಿಗೋ ಗೆಳತಿ, ಮತ್ತೊಬ್ಬರಿಗೆ ಮಗಳು… ಹೀಗೆ ಸಂಬಂಧಗಳು ಬೆಳೆಯುತ್ತಲೇ ಹೋದವು. ಪ್ರೀತಿ, ವಾತ್ಸಲ್ಯ ಹಂಚುತ್ತಲೇ ಬದುಕು ಮುಂದೆ ಸಾಗಿದ್ದು. ಹಾಗೆಯೇ ಈ ರೋಗ ಗೆದ್ದಿದ್ದು. ಬದುಕು ನಮಗೆ ಸವಾಲು ಒಡ್ಡುತ್ತೆ. ಯಾರೂ ಅಶಕ್ತರಲ್ಲ. ಆದರೆ ಕೊಡುವ ಏಟನ್ನು ಸಹಿಸಿಕೊಂಡುಬಿಟ್ಟರೆ ಆ ಸಮಯ ಕಳೆದು ಹೋಗುತ್ತದೆ. ಆದರೆ ಸಹನೆಯಿಲ್ಲದ ಜನ ಆತ್ಮಹತ್ಯೆಯ ಹಾದಿ ಹಿಡಿದುಬಿಡುತ್ತಾರೆ. ಬದುಕಿರುವವರೆಗೆ ಸಂಕಟಪಟ್ಟು ಸಾಗಿಬಿಡುತ್ತಾರೆ. ತಾನಾಗಿಯೇ ಸಾವು ಬಂದರೆ ತಡೆಯಲು ಆಗುವುದಿಲ್ಲ. ಆದರೆ ನಾವೇ ತಂದುಕೊಳ್ಳುವ ಸಾವು ನ್ಯಾಯವಾದದ್ದಲ್ಲ. ಅಮ್ಮನ‌ ಕರುಳಿಗೆ ಬೆಸೆದುಕೊಂಡಾಗಲೇ ಹೋರಾಟ ಆರಂಭವಾಗಿರುತ್ತೆ. ಅವಳು ನಮ್ಮನ್ನು ಹೆತ್ತು ತಾನು ಮತ್ತೊಮ್ಮೆ ಹುಟ್ಟಿರುತ್ತಾಳೆ. ಅವಳ ಒಡಲಿಗೆ ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ಮಾತು ಎಲ್ಲೆಲ್ಲಿಗೊ ಸಾಗಿತು. ನಾನೊಂದು ಕಣವಾಗಿ ಕಳೆದುಹೋಗಲಾರೆ ನಾನು ಜ್ವಾಲೆಯಾಗಿ ಉರಿದು ಬೆಳಗಬೇಕು. ಬದುಕು ಭಾರವಲ್ಲ ಸಹನೆಯಿಂದ ಸಹಿಸಿದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ.

ಇರಲಿ. ಈಗಿಲ್ಲಿ ಆಸ್ಪತ್ರೆಯಲ್ಲಿ ನನ್ನ ಸರದಿಗಾಗಿ ಕುಳಿತೇ, ಈ ಸರಣಿಯ ವಿಷಯಕ್ಕೆ ಬರುತ್ತೇನೆ.

ಪ್ರತಿ ಹೆಣ್ಣಿಗೂ ಪ್ರತಿ ಕ್ಷಣವೂ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಲೇ ಇರಬೇಕು. ನಾನು ಸರಿ ಇದೀನಿ; ಅದು ದೇಹವೋ, ಮನಸ್ಸೊ, ಬದುಕೊ, ಕೆಲಸವೋ. ಎಲ್ಲದರಲ್ಲೂ ಅವಳು ಸವಾಲಿಗೆ ಉತ್ತರ ಹೇಳುತ್ತಲೇ ಹೋಗಬೇಕು.

ನಾನು ಬೆಳೆದದ್ದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಅಣಜಿ, ಅಪ್ಪಟ ಹಳ್ಳಿ. ಮೊದಲು ನಾನು ತುಂಬಾ ತೆಳ್ಳಗಿದ್ದೆ. ಕಡ್ಡಿಯ ಹಾಗಿದ್ದೀಯಾ. ಗಾಳಿಗೆ ಹಾರಿ ಹೋಗುತ್ತೀಯಾ, ಕಲ್ಲು ಕಟ್ಟಿಕೊಂಡು ಓಡಾಡು… ಒಂದಾ ಎರಡಾ? ಆಮೇಲೆ ಋತುಮತಿ ಆದೆ. ‌‌ಆಗ ದೇಹ ದಪ್ಪಗಾಯಿತು. ಅವರ ವರಸೆ ಬದಲು! ಒಹ್ ಏನು ದಿನದಿಂದ ದಿನ ದಪ್ಪ ಆಗುತ್ತಿದ್ದೀ? ಮದುವೆ ಯಾರು ಮಾಡಿಕೊಳ್ಳುತ್ತಾರೆ? ಇಂಥ ಪ್ರಶ್ನೆಗಳನ್ನು ಕೇಳಿ ರೋಸಿ ಹೋಗುತ್ತಿದ್ದೆ. ಯಾಕಾದರೂ ಋತುಮತಿ ಆದೆ ಅಂದುಕೊಳ್ಳುತ್ತಿದ್ದೆ. ಅದರಲ್ಲೂ ನನ್ನ ಅತ್ತೆಯ ಮಕ್ಕಳು ತೆಳ್ಳಗಿದ್ದರು. ನನ್ನ ತಂಗಿಯೂ ತೆಳ್ಳಗಿದ್ದಳು. ಹಾಗಾಗು ಮನೆಯ ಸಮಾರಂಭಗಳಲ್ಲಿ ನಾನು ಯಾವಾಗಲೂ ತಮಾಷೆಯ ವಸ್ತು.

body shaming

ಹೀಗೆಲ್ಲ ಹಬ್ಬಿದವಳು…

ಆದರೆ ನನಗೆ ಚಿಕ್ಕವಳಿದ್ದಾಗಿನಿಂದ ಒಂದು ಅಭ್ಯಾಸ ಇತ್ತು. ಕೈಗೆ ಸಿಕ್ಕಿದ ಹಾಳೆ, ಪೇಪರ್, ಪುಸ್ತಕ ಓದುತ್ತಾ ಕಳೇದು ಹೋಗುತ್ತಿದ್ದೆ. ಕ್ರಮೇಣ ನಾನು ಓದಿನಲ್ಲಿ ಎಷ್ಟು ಮುಳುಗುತ್ತ ಹೋದೆನೆಂದರೆ, ಯಾರ ಮಾತೂ ನನ್ನ ಮೇಲೆ ಪರಿಣಾಮ ಬೀರದಷ್ಟು. ಆದರೆ ಅದು ಪೂರ್ತಿ ಸಾಧ್ಯವಾಗುತ್ತಾ? ಪಾಪ ಅಮ್ಮ. ಅವಳ ಸಂಕಟ ಅವಳಿಗೆ. ಡಯಟ್ ಮಾಡು ತುಪ್ಪ ತಿನ್ನಬೇಡ, ಅನ್ನ ಉಣಬೇಡ, ವಾಕ್ ಮಾಡು, ಯೋಗ ಮಾಡು ತೂಕ ಇಳಿಸು ಎಂದು ಹೇಳುತ್ತಲೇ ಇದ್ದರು. ನಾನು ಹಾಸ್ಟೆಲ್ ಸೇರಿದ‌ ಮೇಲೂ ನನ್ನ ದಪ್ಪ, ಮುಂದಿರುವ ಹಲ್ಲಿನ ಬಗ್ಗೆ ನನ್ನ ಸುತ್ತಮುತ್ತಲಿನವರಿಂದ ಸದಾ ಪ್ರತಿಕ್ರಿಯೆಗಳು ಚಿಮ್ಮಿ ಬರುತ್ತಿದ್ದರು. ಅವೆಲ್ಲವನ್ನೂ ನುಂಗಿ ನುಂಗಿ ಅಂತೂ ಹಲ್ಲಿಗೆ ಹಲ್ಲಿಗೆ ಕ್ಲಿಪ್ ಹಾಕಿಸಿಕೊಂಡೆ. ಅದಕ್ಕಾಗಿ ಚೆನ್ನಾಗಿರುವ ಹಲ್ಲನ್ನೂ ಕೀಳಿಸಿಕೊಳ್ಳಬೇಕಾಯಿತು. ಅದಕ್ಕಾಗಿ ಅನುಭವಿಸಿದ ಮಾನಸಿಕ ನೋವಿಗೂ ಲೆಕ್ಕವಿಲ್ಲ, ಹಲ್ಲಿಗೆ ಹಲ್ಲೂ ಹಾಳು. ಈಗ ನೆನಪಿಸಿಕೊಂಡರೆ ಇದೆಲ್ಲಾ ಎಷ್ಟು ಮೂರ್ಖತನದ್ದು ಅನ್ನಿಸುತ್ತದೆ. ಆಡಿಕೊಂಡವರು ಇದನ್ನೆಲ್ಲ ಹಂಚಿಕೊಳ್ಳುತ್ತಾರಾ ಈಗ?

ಇರಲಿ, ಇದೆಲ್ಲವನ್ನೂ ಮರೆತು ನಾನು ಬಹಳ ಮುಂದೆ ನಡೆದು ಬಂದೆ. ನನ್ನ ಬದುಕು ನನ್ನ ಇಷ್ಟ ಅಂದುಕೊಂಡೇ ಹೊರಟೆ. ಯಾರು ಏನೇ ಅಂದರೂ ನಕ್ಕರೂ Who cares ಅಂದುಕೊಂಡು ನಿರಾಳವಾದೆ. ಆದರೆ ಆ ತನಕ ನಾನು ತೆತ್ತ ಬೆಲೆ? ಹೀಗೊಂದು ಮನಸ್ಥಿತಿ ನನ್ನಲ್ಲಿ ಗಟ್ಟಿಗೊಳ್ಳಬೇಕಾದರೆ ಅದೆಷ್ಟು ವರ್ಷ ಅವರಿವರ ಮಾತು ನೋಟಗಳೊಳಗೆ ಬೇಯಬೇಕಾಯಿತು? ಎಷ್ಟೇ ಓದು ಎಷ್ಟೇ ಜಗತ್ತು ಮುಂದುವರೆದರೂ ಹೆಣ್ಣಿನ ಅಗ್ನಿಪರೀಕ್ಷೆ ಮುಗಿಯುವುದೇ ಇಲ್ಲವಲ್ಲ? ಬಹುಶಃ ಆಧುನಿಕ ಕಾಲದ ಮಹಿಳೆ ಹೆಚ್ಚೇ ಮಾನಸಿಕ ನೋವು ಅನುಭವಿಸುತ್ತಾಳೇನೋ.

ಆದರೆ ಒಂದಂತೂ ನಿಜ, ನಾನು ಓದಿದ ಪುಸ್ತಕಗಳೇ ನನಗೆ ಶಕ್ತಿಯಾಗಿ ನನ್ನ ಬದುಕು ಸರಾಗವಾಗಿ ನಿರಾಳವಾಗಿ ಉಸಿರಾಡಲು ಸಾಧ್ಯವಾಗಿದ್ದು. ಬಾಲ್ಯದಲ್ಲಿಯೇ ವಿವೇಕಾನಂದ, ಗಾಂಧೀಜಿ, ರಾಮಕೃಷ್ಣ ಪರಮಹಂಸ, ಶಾರದಾದೇವಿ, ಭಗತ್​ಸಿಂಗ್​, ನೇತಾಜಿ ಸುಭಾಷ್​​ಚಂದ್ರರ ಜೀವನಗಾಥೆಗಳನ್ನು ಓದಿ ಗಟ್ಟಿಯಾಗುತ್ತಾ ಬಂದವಳು ನಾನು. ಹೀಗಾಗಿ ಜೀವನ ಸರಳವಾಯಿತು. ಕೆಲಸ ಮಾಡುವ ಜಾಗದಲ್ಲೂ ಕಾಲು ಎಳೆದಾಗ ನಾನು ಅಲ್ಲೇ ಪ್ರಶ್ನೆ ಅಲ್ಲೇ ಡ್ರಾ ಅಂತ ಉತ್ತರಿಸಿ ಜಾಗ ಖಾಲಿ ಮಾಡುತ್ತ ಬಂದವಳು. ಅದಕ್ಕೆ ನನ್ನ ಸುದ್ದಿಗೆ ನೇರವಾಗಿ ಬಾರದೆ ಇದ್ದರೂ ಬೆನ್ನ ಹಿಂದಿನ ಮಾತುಗಳಿಗೇನೂ ಕಡಿಮೆ ಇರಲಿಲ್ಲ. ನಾನು ನಕ್ಕು ಸಾಗುವುದನ್ನು ಕಲಿತೆ.

body shaming

ದಿನಪತ್ರಿಕೆ ಹಂಚುವ ಇವರಿಗೆ ಎಪ್ಪತ್ತು ರೂಪಾಯಿ ಬಾಕಿ ತೀರಿಸುವುದಿತ್ತು.

ಇದೆಲ್ಲವೂ 2019ರ ತನಕ. ನಂತರ ಜೆನೆಟಿಕ್ ಅನೀಮಿಯಾ ತನ್ನ ಕಪಿಮುಷ್ಟಿಯೊಳಗೆ ಎಳೆದುಕೊಂಡುಬಿಟ್ಟಿತು. ಅಲ್ಲಿಯ ತನಕ ಖಾಸಗಿ ಕಂಪೆನಿಯ ಸೇಲ್ಸ್​ ಡಿಪಾರ್ಟ್​ಮೆಂಟ್​ನಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಓದು, ಕವಿತೆ, ಸ್ನೇಹಿತರು, ಪ್ರವಾಸ ಅಂತೆಲ್ಲ ತಿರುಗಾಡಿಕೊಂಡಿದ್ದವಳು ಇದ್ದಕ್ಕಿದ್ದಂತೆ ತಿರುವಿಗೆ ಬಿದ್ದೆ. ಆದರೇನಂತೆ? ಆಸ್ಪತ್ರೆಯ ನಳಿಕೆಗಳ ಸಾಂಗತ್ಯವನ್ನೂ ಅಪ್ಪಿಕೊಂಡೆ. ಅಂತೂ ಈ ರೋಗದಿಂದ ಪಾರಾದೆ. ಕಿಮೋ ಥೆರಪಿಯಿಂದ ಉಂಟಾದ ಅಡ್ಡಪರಿಣಾಮಗಳಿಗಾಗಿ ಇನ್ನೆರಡು ತಿಂಗಳುಗಳ ತನಕ ಚಿಕಿತ್ಸೆ ಅನಿವಾರ್ಯ. ಇನ್ನೇನು ನನ್ನ ಸರದಿ ಬರಬಹುದು. ಡಾಕ್ಟರ್ ಬರೆದು ಕೊಡುವ ಬಣ್ಣಬಣ್ಣದ ಮಾತ್ರೆಗಳು ನನ್ನ ಹೆಸರನ್ನು ಬರೆದುಕೊಂಡು ಕಾಯುತ್ತಿರಬಹುದು. ಇಷ್ಟೆಲ್ಲಾ ಆದಮೇಲೆ ಏನು ಕೇಳುವುದು ನನ್ನ ಕೃಷ್ಣನನ್ನು?

ದೇವರು ಹೃದಯದಲ್ಲಿದ್ದಾನೆ ಅವನಿಗೆ ಸ್ಥಾವರ ಬೇಡ ಹೃದಯದಿ ಕರುಣೆ ಇಟ್ಟುಕೊಂಡರೆ ಅವನೇ ಬಂದು ವಾಸಿಸುತ್ತಾನೆ

ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ಪದಗಳಿಂದ ಇರಿಯದೇ ವರ್ತನೆಯಿಂದ ಸಾಯಿಸುವ ತಣ್ಣನೆಯ ಕ್ರೌರ್ಯ ಹೇಗಿರುತ್ತದೆ ಗೊತ್ತಾ?

ತಾಜಾ ಸುದ್ದಿ

Click on your DTH Provider to Add TV9 Kannada