Body Shaming; ಸುಮ್ಮನಿರುವುದು ಹೇಗೆ?: ಶ್! ಇದು ನಮ್ಮ ನಿಮ್ಮ ನಡುವೆಯೇ ಸುಳಿದಾಡಿ ಎತ್ತರೆತ್ತರಕ್ಕೇರಿರುವ ಬಿಳಿಬಿಳೀವಿಚಾರ
‘ಕುರೂಪಿ ಎನ್ನಿಸಿಕೊಂಡ ಯುವತಿಯರನ್ನು ಕುಗ್ಗಿಸುವಷ್ಟೇ ಸಹಜವಾಗಿ ‘ರೂಪವಂತೆ’ ಎನ್ನಿಸಿಕೊಂಡ ಹುಡುಗಿಯರಲ್ಲಿ, ರೂಪ ಎನ್ನುವುದು ಟೊಳ್ಳು ಆತ್ಮವಿಶ್ವಾಸ ತುಂಬಿ ಯಾರದೋ ವ್ಯರ್ಥ ಪ್ರೇಮದಲ್ಲಿ ಸಿಲುಕಿಸಿ ಆಕೆಯ ಜೀವನವನ್ನೇ ಕುಂಠಿತಗೊಳಿಸಿಕೊಳ್ಳುವಂತೆಯೂ ಮಾಡಬಲ್ಲದು. ಹಾಗೆಯೇ ಆಕೆಯೊಳಗಿನ ಸಾಧ್ಯತೆಗಳನ್ನು ಪರಿಶೀಲಿಸಲು ಅನುವು ಮಾಡಿಕೊಡದೆ ಚಿಕ್ಕ ವಯಸ್ಸಿನಲ್ಲೇ ಮದುವೆಗೊಳಪಡಿಸಿ, ಬೌದ್ಧಿಕವಾಗಿ ಕುಂಠಿತಗೊಳಿಸಿ, ಗಂಡನಿಗೋಸ್ಕರವೇ ಅಲಂಕರಿಸಿಕೊಳ್ಳುವ ಬೊಂಬೆಯನ್ನಾಗಿಯೂ ಮಾರ್ಪಡಿಸಬಲ್ಲುದು.‘ ಜಯಶ್ರೀ ಜಗನ್ನಾಥ
ಜನಪ್ರತಿನಿಧಿಗಳೇ, ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.
ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com
ಪರಿಕಲ್ಪನೆ : ಶ್ರೀದೇವಿ ಕಳಸದ
ಮೈಸೂರಿನಲ್ಲಿ ವಾಸಿಸುತ್ತಿರುವ ಅನುವಾದಕಿ, ಲೇಖಕಿ ಜಯಶ್ರೀ ಜಗನ್ನಾಥ ಪ್ರಸ್ತಾಪಿಸಿರುವ ಈ ‘ಬಿಳೀವಿಚಾರ’ದಲ್ಲಿ ಎಂಥ ಸೂಕ್ಷ್ಮತೆಯೂ ಅಪಾಯವೂ ಅಡಗಿದೆ!
‘ಸುಮಿತ್ರಾಬಾಯಿಯ ಎರಡನೇ ಮಗಳ ಮೊಳಕೈ ನೋಡಿದ್ರಾ ಬಾಳೆ ದಿಂಡು. ಕರಿ ಕುಬಸದಲ್ಲಿ ಎಂಥಾ ಚಂದ ಅಂತೀರಿ?’ ನನ್ನ ಅಜ್ಜಿಯ ಜೊತೆಯ ಗೆಳತಿಯರು ರಾಮದೇವರ ದೇವಸ್ಥಾನದಲ್ಲಿ ಪ್ರವಚನ ಕೇಳುತ್ತಿದ್ದಾಗ ನಡೆಸುತ್ತಿದ್ದ ಮಾತುಕತೆಗಳು ಬಹುತೇಕ ಹೀಗೇ ಇರುತ್ತಿದ್ದವು. ಅಜ್ಜಿಯ ಕೈ ಹಿಡಿದು ಹೋಗಿದ್ದ ನನಗೂ ಅದು ಅರ್ಥವಾಗುತ್ತಿದ್ದವು.
‘ಮಠಕ್ಕೆ ಬರುವ ಸುಮತಿಯ ಮಗಳು ಎಷ್ಟು ಲಕ್ಷಣವಾಗಿದ್ದಾಳೆ! ಆ ಬಣ್ಣ , ಮೂಗು ಸೊಂಪಾದ ಕೂದಲು! ಅವಳನ್ನು ಮಠಕ್ಕೆ ಬಂದಾಗೆಲ್ಲಾ ನೋಡುತ್ತಿದ್ದ ಸಿರಿವಂತ ದಂಪತಿಗಳು ತಮ್ಮ ಡಾಕ್ಟರ್ ಮಗನಿಗೆ ಅವಳನ್ನು ತಾವಾಗೇ ಕೇಳಿಕೊಂಡು ಮದುವೆ ನಿಶ್ಚಯಿಸಿಕೊಂಡರಂತೆ, ಅವಳ ತಂದೆತಾಯಿ ಪುಣ್ಯ ಮಾಡಿದ್ರು’ ನನ್ನ ತಾಯಿ ಕಾಲೇಜಿನಲ್ಲಿದ್ದ ನನ್ನ ಮುಂದೆ, ತಮ್ಮ ಭವಿಷ್ಯದ ಅನಿರ್ದಿಷ್ಟತೆಯನ್ನು ನನ್ನ ಆಗಬಹುದಾಗ ಆಗದೆಯೂ ಇರಬಹುದಾದ ಮದುವೆಯೊಂದಿಗೆ ಜೋಡಿಸಿ ನುಡಿಯುತ್ತಿದ್ದರು. ಅದೂ ನನಗೆ ಅರ್ಥವಾಗುತ್ತಿತ್ತು.
‘ಹಿ ಈಸ್ ಸೋ ಟಾಲ್. ಅವನಿಗೆ ಅಟ್ಲೀಸ್ಟ್ ಫೈವ್ ಸಿಕ್ಸ್ ಇರೋ ಹುಡುಗಿ ಬೇಕಂತೆ’ ಗೆಳತಿಯರು, ಕಸಿನ್ಗಳು ಯಾವುದೋ ಇಂಜಿನಿಯರ್ ಬಗ್ಗೆ ಮಾತನಾಡುವಾಗ ನನ್ನ ಐದಡಿ ದೇಹದ ಒಳಗಿದ್ದ ಮೆದುಳಿಗೆ ಅದೂ ಅರ್ಥವಾಗುತ್ತಿತ್ತು.
ಹೀಗೆ ಮಾತುಗಳು ಸಾಮಾನ್ಯವಾಗಿ ಹರಿದಾಡುತ್ತಿದ್ದರೂ ಕೆಲವರ ಬಾಯಲ್ಲಿ ಮಾತ್ರಾ ಅವು ವಿಷಪೂರಿತವಾಗುತ್ತಿದ್ದವು. ಅಂಥಾ ‘ಅತ್ತೆ’ಯರ ಮನೆಗೆ ಹೋಗುವಾಗ ಅವರು ಬಾಗಿಲು ತೆಗೆದು ನಮ್ಮನ್ನು ಮೇಲಿಂದಾ ಕೆಳಗಿನವರೆಗೆ ಅಳೆದು, ಇವಳು ಸ್ವಲ್ಪ ‘….’ ಅವರ ಹಾಗೆ ಅಲ್ಲವಾ ಅಂತ ಯಾವುದೋ ಕುರೂಪಿ ನೆಂಟ ಮಹಿಳೆಗೆ ಹೋಲಿಸುವಾಗ ಅರ್ಥವಾದರೂ ಅರ್ಥವಾಗದಂತೆ ಹಲ್ಲುಕಿರಿಯುತ್ತಿದ್ದೆ.
ಇಂಥಾ ವ್ಯಕ್ತಿಗಳಿಂದ ಕೆಲವು ಹುಡುಗಿಯರಿಗೆ ಮಾತ್ರಾ ಹುಟ್ಟಿನಿಂದಲೇ ಬರಿಯ ಹೊಗಳಿಕೆಯೇ ದೊರೆಯುತ್ತಿತ್ತು. ಎಂಥಾ ಹೊಳೆಯುವ ಬಣ್ಣ, ತೆಳುದೇಹ, ಎತ್ತರ, ಉದ್ದ ಕೂದಲು ಮಿರುಗುವ ದಂತಪಂಕ್ತಿ ಹೀಗೇ ಏನೇನೊ. ಹಾಗೆ ಹೊಗಳಿಸಿಕೊಳ್ಳುವವರ ಬಗ್ಗೆ ಅಸೂಯೆಯಾಗುತ್ತಿತ್ತು, ಆದರೆ ಹಾಗೆ ಹೊಗಳಿಸಿಕೊಳ್ಳುವವರಿಗೂ ಅದು ಮಾರಕವಾಗಬಹುದೆಂದು ಅರ್ಥವಾಗಲು ಮಾತ್ರಾ ಬಹಳ ದಶಕಗಳೇ ಕಳೆದವು.
ಎಷ್ಟೊಂದು ಹುಡುಗಿಯರಿಗೆ ಚಿಕ್ಕಂದಿನಿಂದ ಹೊಗಳಿಸಿಕೊಂಡು, ಒಂದು ಸಿರಿವಂತ ಗಂಡು ತನ್ನನ್ನು ಮೆಚ್ಚುವುದು ಖಚಿತ ಮತ್ತು ತನ್ನ ಮದುವೆ ಸುಲಭವಾಗಿ ಆಗಿ ಹೋಗುತ್ತದೆ ಎಂಬ ಭರವಸೆ ಹುಟ್ಟಿಬಿಡುತ್ತದೆ. ಅಥವಾ ತಮ್ಮ ಬಣ್ಣ ಸೌಂದರ್ಯವೇ ತಮ್ಮನ್ನು ಸಂಪತ್ತಿಗೇರಿಸುವ ಬಂಡವಾಳಗಳು ಎಂದು ಅವರು ಹೆಮ್ಮೆ ಪಡುತ್ತಿರುತ್ತಾರೆ. ಅದರೊಡನೇ ಅವರಿಗೆ ತಿಳಿಯದಂತೆಯೇ ಅಂದಚಂದ ಅಲಂಕಾರಕ್ಕೆ ಪ್ರಾಮುಖ್ಯತೆ ಕೊಡುತ್ತಾ ಹೋಗುತ್ತಾರೆ. ಕಪ್ಪು ಎಂದು ಕರೆಸಿಕೊಳ್ಳುವ ಮಕ್ಕಳಿಗೆ ಬಿಸಿಲಿನಿಂದ ತೊಂದರೆಯಾಗದು. ಆಟಪಾಟಗಳಲ್ಲಿ ಅವರು ನಿಶ್ಚಿಂತೆಯಿಂದ ಭಾಗವಹಿಸಬಲ್ಲರು. ತಮ್ಮ ಚರ್ಮದ ಬಿಳಿ ಬಣ್ಣವೇ ತಮ್ಮ ಜೀವನದ ಸೌಭಾಗ್ಯ ಎಂದು ನಂಬಿಕೊಂಡು ಬಿಟ್ಟಿರುವ ಯುವಕ ಯುವತಿಯರು ಸದಾ ತಮ್ಮ ಬಣ್ಣ ಎಲ್ಲಿ ಮಾಸುವುದೋ ತಮ್ಮ ತೂಕ ಎಲ್ಲಿ ಹೆಚ್ಚಿ ಬಿಡುವುದೋ ಎಂಬ ಕಾಳಜಿಯಲ್ಲಿ ಚಿಂತೆಗೀಡಾಗುತ್ತಿರುತ್ತಾರೆ. ಅಲ್ಲದೆ ತಮಗೇ ತಿಳಿಯದಂತೆ ತೂಕ ಹೆಚ್ಚಾಗಿರುವ, ತಮ್ಮಂತೆ ಬಿಳಿ ಬಣ್ಣವಿಲ್ಲದ ಇತರರ ಮೇಲೆ ಮನನೋಯುವಂಥ ಮಾತುಗಳನ್ನಾಡುವುದು, ಅಣಕಿಸುವುದು ಅವರಿಗೇ ತಿಳಿಯದಂತೆ ಅವರ ಮಾತುಕತೆಗಳಲ್ಲಿ ಸೇರಿಕೊಂಡುಬಿಡಬಹುದು. ಅಂಥ ಯುವತಿಯರು ತಮ್ಮ ಸಾಧ್ಯತೆಗಳೇನನ್ನೂ ಪರಿಶೀಲಿಸದೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಂಡು ಬೌದ್ಧಿಕವಾಗಿ ಕುಂಠಿತರಾಗಿ, ಗಂಡನಿಗೋಸ್ಕರವೇ ಅಲಂಕರಿಸಿಕೊಳ್ಳುವ ಬೊಂಬೆಗಳಾಗಿಬಿಟ್ಟಿರುವ ಉದಾಹರಣೆಗಳೂ ಕಡಿಮೆಯಿಲ್ಲ. ಅಥವಾ ನೋಡಿದವರೆಲ್ಲಾ, ‘ಇವಳಿಗೇನು ಫಿಲಮ್ ಸ್ಟಾರ್ ಆಗ್ತಾಳೆ’ ಎಂದು ಹೇಳುವುದನ್ನ್ನು ಕೇಳಿ, ಗ್ಲಾಮರ್ ಪ್ರಪಂಚವನ್ನು ಸೇರಿ ಅದರ ಒತ್ತಡಗಳನ್ನು ನಿಭಾಯಿಸಲಾರದೆ ಒದ್ದಾಡಿರುವ ಉದಾಹರಣೆಗಳೂ ಇವೆ.
ಇನ್ನು ಗಂಡು ಹುಡುಗರು, ಗಂಡಸರಿಗೂ ಮಹಿಳೆಯ ಸೌಂದರ್ಯ ಹೀಗೇ ಇರಬೇಕು, ಹೀಗಿದ್ದರೆ ಮಾತ್ರಾ ಅವಳು ತಮ್ಮನ್ನು ಉದ್ರೇಕಿಸಬಲ್ಲಳು ಎಂದು ತಲೆತೊಳಿಯಲಾಗಿರುತ್ತದೆ. ಚಿಕ್ಕವಯಸ್ಸಿನ ಹುಡಿಗಿಯರನೇಕರಿಗೆ ತಮ್ಮದೇ ದೈಹಿಕ ಸೌಂದರ್ಯವು ಅಪರಿಚಿತ ಗಂಡಸಿನ ಮೇಲೆ ಸಾರ್ವಜನಿಕ ಸ್ಥಳಗಳಲ್ಲಿ ಎಂಥ ಪರಿಣಾಮ ಬೀರಬಹುದು ಎಂಬ ಕೊಂಚ ಅರಿವೂ ಇರುವುದಿಲ್ಲ. ಸಮಾಜದಿಂದ ಕುರೂಪಿ ಎನ್ನಿಸಿಕೊಳ್ಳುವ ಹುಡುಗಿಯರಿಗೆ ತಂದೆತಾಯಿಯರು ವಿಶೇಷ ಗಮನವಿಟ್ಟು ಅಂತಹ ಕುಹಕಮಾತುಗಳನ್ನು ಕಡೆಗಣಿಸಿ ತಮ್ಮ ಧೈರ್ಯ ಆತ್ಮವಿಶ್ವಾಸಗಳನ್ನು ಬೆಳೆಸಿಕೊಳ್ಳುವುದನ್ನು ಹೇಳಿಕೊಡಬೇಕು ನಿಜ, ಆದರೆ ಅದೇ ರೀತಿ ಅಷ್ಟೇ ಮುಖ್ಯವಾಗಿ ಸಮಾಜವು ಸುಂದರ ಎಂದು ಹೆಸರಿಟ್ಟು ಬಿಡುವ ಹುಡುಗಿಯರಿಗೂ ಕೂಡಾ ಅಂಥಹ ಅರ್ಥವಿಲ್ಲದ ಹೊಗಳಿಕೆಗಳನ್ನು ಕಡೆಗಣಿಸಿ ತಮ್ಮ ಬೌದ್ಧಿಕ ಬೆಳೆವಣಿಗೆ ಮತ್ತು ತಮ್ಮ ಸಾಮರ್ಥ್ಯಗಳ ಸಾಧ್ಯತೆಗಳ ಬಗ್ಗೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಹೇಳಿಕೊಡಬೇಕು.
ಕುರೂಪಿ ಎನ್ನಿಸಿಕೊಂಡ ಯುವತಿಯರನ್ನು ಕುಗ್ಗಿಸುವಷ್ಟೇ ಸಹಜವಾಗಿ ‘ರೂಪವಂತೆ’ ಎನ್ನಿಸಿಕೊಂಡ ಹುಡುಗಿಯರಲ್ಲಿ ರೂಪ ಎನ್ನುವುದು ಟೊಳ್ಳು ಆತ್ಮವಿಶ್ವಾಸ ತುಂಬಿ ಯಾರದೋ ವ್ಯರ್ಥ ಪ್ರೇಮದಲ್ಲಿ ಸಿಲುಕಿಸಿ ತಮ್ಮ ಜೀವನವನ್ನೇ ಕುಂಠಿತಗೊಳಿಸಿಕೊಳ್ಳುವಂತೆಯೂ ಮಾಡಬಲ್ಲದು.
ಅಜ್ಜಿಯರೇ ಅಮ್ಮಂದಿರೇ ಅಕ್ಕಂದಿರೇ ಅತ್ತೆಯರೇ, ಹೆಣ್ಣುಮಕ್ಕಳ ದೇಹದ ಬಗ್ಗೆ ಮಾತನಾಡುವುದನ್ನು ಬಿಟ್ಟುಬಿಡಿ. ಅವರ ಆರೋಗ್ಯ, ಮನಸ್ಥೈರ್ಯ, ಆತ್ಮವಿಶ್ವಾಸಗಳನ್ನು ಮಾತ್ರಾ ಹೆಚ್ಚಿಸಿ. ನಮ್ಮ ವಂಶವಾಹಿನಿಗಳನ್ನು ನಾವು ನಮ್ಮ ಹಿಂದಿನ ತಲೆಮಾರುಗಳಿಂದ ಪಡೆದಿರುತ್ತೇವೆ ಅವಕ್ಕೆ ನಾವು ಹೊಣೆಗಾರರಲ್ಲ. ನಮ್ಮ ನಡೆನುಡಿ, ಮಾತು ಮನಸು ಮತ್ತು ಬೌದ್ಧಿಕ ಸಾಮರ್ಥ್ಯಗಳು ವಿಕಸಿಸಲು ಸಹಕರಿಸಿ.
ಇದನ್ನೂ ಓದಿ : Body Shaming; ಸುಮ್ಮನಿರುವುದು ಹೇಗೆ?: ಒದ್ ದಾಟಿ ಬಂದು ನುಗ್ಗಾಗಿದ್ ಬದಕ್ನಾ ರಿಪೇರಿ ಮಾಡ್ಕೊಳೋ ಸಕ್ತಿ ಆಕೆಗೈತೆ!
Summaniruvudu Hege series on Body Shaming controversial statement by Dindigul Leoni and response from writer Jayashree Jagannatha
Published On - 5:00 pm, Wed, 7 April 21