ಸ್ವಭಾವ ಪ್ರಭಾವ : ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಹೀಗಂದ ಆ ನವಯುವಕ

Harmony : ಕುಟ್ಟುತ್ತಿದ್ದ ಸುದ್ದಿ ಅರ್ಧಕ್ಕೆ ಬಿಟ್ಟು ಹೊರಗೆ ಬಂದೆ. ‘ಇದೇನ್ ಸಾರ್, ಆ ಮಕ್ಳು ಮುಸ್ಲಿಮ್ಸಾ’ ಅಂತ ಆಶ್ಚರ್ಯದಿಂದ ಕೇಳಿದರು ಮನೆಗೆ ಬಂದವರು. ‘ಇಬ್ರು ಮುಸ್ಲಿಮ್ಸ್, ಒಬ್ಬ ಕ್ರಿಶ್ಚಿಯನ್ನು, ಇಬ್ರು ಲಿಂಗಾಯಿತ್ರು, ಒಬ್ಬ ಗೌಡ, ಇಬ್ರು ಕುರುಬ್ರು, ಒಬ್ಬ ವಡ್ಡರ ಪೈಕಿ’ ಅಂದೆ.

ಸ್ವಭಾವ ಪ್ರಭಾವ : ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಹೀಗಂದ ಆ ನವಯುವಕ
ದೊಡ್ಡಬಳ್ಳಾಪುರದ ನಯಾಝ್ ತಾತನೊಂದಿಗೆ ಪತ್ರಕರ್ತ ಘನಶ್ಯಾಮ ಅವರ ಮಕ್ಕಳು
Follow us
ಶ್ರೀದೇವಿ ಕಳಸದ
|

Updated on: Mar 26, 2022 | 10:09 AM

ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.

ಪತ್ರಕರ್ತ ಡಿ.ಎಂ. ಘನಶ್ಯಾಮ ಬರಹ

ವಿವಾಹ ಆಮಂತ್ರಣ ಪತ್ರಿಕೆ ಕೊಟ್ಟು ಹೋಗಲು ಕುಟುಂಬ ಸಮೇತ ಹಿರಿಯರು ಶುಕ್ರವಾರ ಮನೆಗೆ ಬಂದಿದ್ದರು. ಗಂಡ-ಹೆಂಡತಿ, ಮಗ-ಸೊಸೆ ಮತ್ತು ಭಾವೀ ವರ ಕಾರಿನಿಂದ ಕೆಳಗಿಳಿದು ನಮ್ಮನೆಯೊಳಗೆ ಬರುವಾಗ ಅಂಗಳದಲ್ಲಿ ಮಗ, ಮಗಳ ಜೊತೆಗೆ ಅಕ್ಕಪಕ್ಕದ ಮನೆಗಳ ಒಂದಿಷ್ಟು ಮಕ್ಕಳೂ ಇದ್ದರು. ಇಷ್ಟೊಂದು ಮಕ್ಕಳಿದ್ದುದ್ದಕ್ಕೋ ಏನೋ, ಗೇಟ್ ಹತ್ತಿರವೇ ನಿಂತು ‘ಇದು ಸ್ವಾಮಿಗಳ ಮನೆ ಅಲ್ವಾ’ ಅಂತ ಕೇಳಿದ್ದರು. ‘ಹೌದು, ಬನ್ನಿಬನ್ನಿ’ ಎಂದು ಮನೆಯಲ್ಲಿದ್ದವರು ಎದ್ದು, ಬಾಗಿಲಿಗೆ ಬಂದು ಅವರ ಕೈಹಿಡಿದು ಒಳಗೆ ಕರೆತಂದರು.

ಅಂಗಳದಲ್ಲಿ ಆಡುತ್ತಿದ್ದ ಮಕ್ಕಳಿಗೆ ಅವರದೇ ಲೋಕ. ಯಾವುದೋ ಮನೆಯಲ್ಲಿ ಮಗುವಿಗೆ ಅಡುಗೆಮನೆ ಸೆಟ್ ಕೊಡಿಸಿದ್ದರು. ಅದನ್ನು ತಂದಿದ್ದ ಆ ಮಗುವಿನೊಂದಿಗೆ ಇತರ ಮಕ್ಕಳು ಬೆರೆತು ಒಂದಿಷ್ಟು ಚಿಕ್ಕಚಿಕ್ಕ ಕಲ್ಲುಗಳನ್ನು ಒಟ್ಟುಗೂಡಿಸಿ, ಮನೆಯಂತೆ ಜೋಡಿಸಿಕೊಂಡಿದ್ದವು. ಅದರಲ್ಲೇ ಒಂದು ಭಾಗವನ್ನು ಅಡುಗೆಮನೆ, ಮತ್ತೊಂದು ಭಾಗವನ್ನು ದೇವರಮನೆ ಮಾಡಿಕೊಂಡಿದ್ದ ಮಕ್ಕಳು ಸತ್ಯನಾರಾಯಣ ಪೂಜೆಯ ಆಟ ಆಡುತ್ತಿದ್ದರು. ಪೂಜೆ ಮುಗಿಸಿದ ಮಕ್ಕಳು ಅಲ್ಲೇ ಇದ್ದ ಅಮೃತಬಳ್ಳಿ ಗಿಡದ ಎಲೆಗಳ ಮೇಲೆ ಪುಟ್ಟ ಕಲ್ಲುಗಳನ್ನಿಟ್ಟು ಪ್ರಸಾದ ಹಂಚೋಕೆ ಶುರು ಮಾಡಿದರು. ಎಲ್ಲರೂ ಎಲ್ಲರಿಗೂ ಗೊತ್ತಿರುವ ಬೀದಿ ಆದ್ದರಿಂದ ಬೀದಿಯಲ್ಲಿ ಕಾಣಿಸುವವರೆಲ್ಲರೂ ಈ ಮಕ್ಕಳಿಗೆ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಆಂಟಿ, ಅಂಕಲ್ಲು. ಎಲ್ಲರೂ ಎರಡೂ ಕೈ ಹಿಡಿದು ಪ್ರಸಾದ ಪಡೆಯುತ್ತಾ, ಕಣ್ಣಿಗೆ ಒತ್ತಿಕೊಂಡು ಬಾಯಿಗೆ ಹಾಕಿಕೊಳ್ಳುವಂತೆ ನಟಿಸುತ್ತಾ ನಗುತ್ತಿದ್ದರು.

ದೇವರಮನೆ ಥರ ಇದ್ದ ಜಾಗದಲ್ಲಿ ನಾಲ್ಕು ವರ್ಷದ ಮಗು ಇಬ್ರಾಹಿಂ ನಮಾಜ್ ಮಾಡೋ ಥರ ಬೆನ್ನು ಬಾಗಿಸಿ, ನೆಲಕ್ಕೆ ತಲೆಯಿಟ್ಟ. ಅದೂ ಮಕ್ಕಳ ಒಂದು ಆಟದ ಭಾಗವೇ ಆಗಿತ್ತು. ಅಲ್ಲಿದ್ದ ಇನ್ನೊಬ್ಬ ಹುಡುಗಿ, ಅವಳಮ್ಮ ಅವಳ ಅಣ್ಣನಿಗೆ ಬಯ್ಯುವಂತೆ ‘ಎದ್ದೇಳೋ ಸೋಂಬೇರಿ, ಆಜಾನ್ ಕೂಗಿದ್ರು’ ಅಂತ ರೇಗುತ್ತಿದ್ದಳು. ಉಳಿದ ಮಕ್ಕಳಿಗೆ, ಅಲ್ಲಿದ್ದ ಯಾರಿಗೂ ಅದೇನೂ ವಿಶೇಷ ಅನ್ನಿಸಲಿಲ್ಲ. ಆದರೆ ಬೇರೆ ಊರಿನಿಂದ ನಮ್ಮನೆಗೆ ಬಂದಿದ್ದ ಆ ಕುಟುಂಬಕ್ಕೆ ಮಾತ್ರ ಸೋಜಿಗ ಅನ್ನಿಸಿತ್ತು.

ಮಕ್ಕಳ ಗಲಾಟೆ ಹೆಚ್ಚಾಗಿತ್ತು, ನ್ಯೂಸ್ ಕೇಳಿಸ್ತಾನೇ ಇರಲಿಲ್ಲ, ಕುಟ್ಟುತ್ತಿದ್ದ ಸುದ್ದಿ ಅರ್ಧಕ್ಕೆ ಬಿಟ್ಟು ಒಂದು ಗದರು ಹಾಕೋಣ ಅಂತ ಹೊರಗೆ ಬಂದೆ. ‘ಇದೇನ್ ಸಾರ್, ಆ ಮಕ್ಳು ಮುಸ್ಲಿಮ್ಸಾ’ ಅಂತ ಆಶ್ಚರ್ಯದಿಂದ ಕೇಳಿದರು ಮನೆಗೆ ಬಂದಿದ್ದ ಅತಿಥಿಗಳು. ‘ಇಬ್ರು ಮುಸ್ಲಿಮ್ಸ್, ಒಬ್ಬ ಕ್ರಿಶ್ಚಿಯನ್ನು, ಇಬ್ರು ಲಿಂಗಾಯಿತ್ರು, ಒಬ್ಬ ಗೌಡ, ಇಬ್ರು ಕುರುಬ್ರು, ಒಬ್ಬ ವಡ್ಡರ ಪೈಕಿ’ ಅಂತ ಪಟ್ಟಿ ಹೇಳಿದೆ. ಆ ಕಡೆ ಹಳ್ಳಿಯೂ ಅಲ್ಲ, ಈ ಕಡೆ ದಿಲ್ಲಿಯೂ ಅಲ್ಲ ಅನ್ನೋ ಥರದ ಊರು ನಮ್ಮದು. ಒಂದು ಏರಿಯಾದ ಎಲ್ಲರ ಮನೆ, ಎಲ್ಲರ ಜಾತಿಗಳು ಎಲ್ಲರಿಗೂ ಗೊತ್ತಿರುತ್ತೆ.

ನನ್ನ ಉತ್ತರ ಕೇಳಿಸಿಕೊಂಡ ಮೂರು ತಲೆಮಾರುಗಳ ಪ್ರತಿಕ್ರಿಯೆಯೂ ಭಿನ್ನವಾಗಿತ್ತು. ‘ನಮ್ಮೂರು ಇದ್ದಿದ್ದೇ ಹೀಗೆ, ಎಲ್ಲಾ ಹಾಳಾಗಿ ಹೋಗಿರತ್ತೆ ಅಂದ್ಕೊಂಡಿದ್ದೆ. ಇಲ್ಲ ಕಣಪ್ಪ, ಏನೂ ಹಾಳಾಗಿಲ್ಲ. ನೋಡಿ ಖುಷಿಯಾಯ್ತು’ ಎಂದು ಹಿರಿಯರು ಖುಷಿಪಟ್ಟರು. ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಅನ್ನೋದು ಅವರ ಮಗನ ಪ್ರತಿಕ್ರಿಯೆಯಾಗಿತ್ತು. ‘ಇದ್ಯಾಕೋ ಹಿಡಿಸ್ಲಿಲ್ಲ ಕಣ್ರೀ, ಬೆಳೆದ ಮೇಲೆ ಇವ್ರೇ ದೇಶ ಹಾಳ್ ಮಾಡೋರು’ ಅಂದವನು ನವಯುವಕ.

‘ರೀ ಸ್ವಾಮಿ, ನಿಮಗೆ ಹಿಡಿಸಿದ್ರು, ಹಿಡಿಸದೇ ಇದ್ರೂ ಊರು ಇದ್ದಿದ್ದೂ, ಇರೋದೂ ಹೀಗೇನೇ. ಅಕ್ಕಪಕ್ಕದ ಮನೆಯವ್ರು ನಾವು. ನಮ್ಮ ಮಕ್ಕಳು ಅಲ್ಲಿಗೆ ಹೋಗುತ್ವೆ, ಅವರ ಮಕ್ಕಳು ಇಲ್ಲಿಗೆ ಬರುತ್ವೆ. ಯಾರದೋ ಮನೆ ಆಟದ ಸಾಮಾನುಗಳು ಇನ್ಯಾರದೋ ಮನೆಗಳಲ್ಲಿ ಇರುತ್ವೆ. ಜಾತಿ-ಧರ್ಮ ಅಂತ ದೂರ ಇಡೋಕೆ ಶುರು ಮಾಡಿದ್ರೆ ಮಕ್ಕಳು ಖುಷಿಯಾಗಿ ಇರ್ತಾರಾ? ಮಕ್ಕಳನ್ನ ಪಂಜರದಲ್ಲಿ ಬೆಳೆಸೋಕೆ ಆಗತ್ತಾ? ಅವರನ್ನ ಮಕ್ಕಳಾಗಿ ಇರೋಕೆ ಬಿಟ್ಟುಬಿಡಿ. ಸಾಧ್ಯವಾದರೇ ನೀವೂ ಮಕ್ಕಳಾಗೋಕೆ ಟ್ರೈ ಮಾಡಿ. ಮಕ್ಕಳ ಮಧ್ಯ ಜಾತಿ-ಧರ್ಮ ತರಬೇಡಿ’ ಅಂತ ಹೇಳಿ ಒಳಗೆ ಹೋಗಿ ಸುದ್ದಿ ಕುಟ್ಟೋದು ಮುಂದುವರಿಸಿದೆ.

ಇದನ್ನೂ ಓದಿ : ಸ್ವಭಾವ ಪ್ರಭಾವ: ‘ಸಪ್ರೇಮ ಸಂಬಂಧಗಳು ಮತ್ತು ಕಾವಿಗೆ ಕುಳಿತ ಕೇಡು’ ಮಹಾದೇವ ಹಡಪದ ಬರಹ

ಸ್ವಲ್ಪ ಹೊತ್ತಿಗೆ ನಮ್ಮ ಮನೆ ಒಳಗೂ ಅಮೃತಬಳ್ಳಿ ಎಲೆಗಳ ಮೇಲೆ ಗುಡ್ಡೇ ಬಿಸ್ಕೀಟ್ಗಳು ಸರಬರಾಜಾಗೋದು ಕಾಣಿಸ್ತು. ಅಷ್ಟೊತ್ತು ನಮಾಜು ಮಾಡೋ ಆಟ ಆಡ್ತಿದ್ದ ಇಬ್ರಾಹಿಂ ಪ್ರಸಾದ ಹಂಚ್ತಾ ಮನೆಗೆ ಬಂದವರ ಕೈಗೂ ಇಟ್ಟ. ಮುದ್ದು ಸೂಸುವ ಮಗು ಕೊಟ್ಟ ಪ್ರಸಾದ. ಮೂರೂ ತಲೆಮಾರಿಗೂ ಅದನ್ನು ಬೇಡ ಅನ್ನಲು ಮನಸ್ಸು ಆಗಲಿಲ್ಲ. ತಾತ-ಅಪ್ಪ ಕಣ್ಣಿಗೆ ಒತ್ತಿಕೊಳ್ಳುವ ನಾಟಕ ಮಾಡಿ, ಬಾಯಿಗೆ ಹಾಕಿಕೊಂಡರು. ಆದರೆ ಮೊಮ್ಮಗ ಹಾಗೇ ಇಟ್ಟಿದ್ದ, ‘ಪಾಪ ಬತ್ತೈತೆ, ಕಣ್ಗೊತ್ಕೊಂಡು ತಿನ್ನು’ ಅಂತು ಮಗು. ಆ ಮಾತು ಕೇಳಿ ಅವನಿಗೂ ನಗು ಬಂತು. ‘ಸರಿ ಕಣಪ್ಪ, ತಿಂತೀನಿ’ ಅಂತ ಅವನೂ ಬಾಯಿಗೆ ಹಾಕ್ಕೊಂಡ. ಅದು ಮುಸ್ಲಿಮ್ ಮಗು ಅನ್ನೋದು ಅವನಿಗೂ ಮರೆತು ಹೋಗಿತ್ತು. ಅದು ಕೇವಲ ಮಗುವಷ್ಟೇ ಆಗಿತ್ತು.

ನಮ್ಮೂರು ದೊಡ್ಡಬಳ್ಳಾಪುರ ಇಂದಿಗೂ ಇರುವುದು ಹೀಗೆಯೇ. ಇವೆಲ್ಲಾ ಎಷ್ಟು ಸಹಜ ಮತ್ತು ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿದೆ ಎಂದರೆ ಇಂಥವನ್ನು ಬರೆಯಬೇಕು ಎಂದೂ ಅನ್ನಿಸುವುದಿಲ್ಲ. ಯಾರಿಗಾದರೂ ಹೇಳಿದರೆ, ಅವರೇನಾದರೂ ಕರಾವಳಿಯವರಾಗಿದ್ದರಂತೂ ಚಂದ್ರಲೋಕದ ಕಥೆ ಕೇಳಿಸಿಕೊಂಡವರಂತೆ ಹೌದಾ ಹೌದಾ ಎನ್ನುತ್ತಿರುತ್ತಾರೆ.

ಮುತ್ಯಾಲಮ್ಮನ್ನ ಕರೆಸೋ ಊರಹಬ್ಬ, ಊರ ಮುಂದಲ ಆಂಜನೇಯನ ತೇರು, ಶಿವರಾತ್ರಿ, ಯುಗಾದಿ ಎಲ್ಲವೂ ಮುಸ್ಲಿಮ್ ಕುಟುಂಬಗಳಿಗೆ ಗೊತ್ತು. ಯಾಕೆಂದರೆ ಅಂದು ಅವರು ಒಲೆ ಹೆಚ್ಚುವಂತಿಲ್ಲ. ಅಕ್ಕಪಕ್ಕದ ಮನೆಗಳಿಂದ ಅವರಿಗೆ ಊಟ-ತಿಂಡಿ, ಸಿಹಿ ಅಡುಗೆ ಸರಬರಾಜಾಗುತ್ತೆ. ಬಕ್ರೀದ್, ರಂಜಾನ್, ಈದ್ಮಿಲಾದ್ಗಳು ಹಿಂದೂಗಳಿಗೂ ಗೊತ್ತು. ಏಕೆಂದರೆ ಅಂದು ಹಿಂದೂಗಳ ಮನೆಗೆ ಬಿರಿಯಾನಿ, ಸಿಹಿ ಅಡುಗೆ ಬರುತ್ತೆ. ಸಂಪ್ರದಾಯಸ್ಥ ಬ್ರಾಹ್ಮಣರ ಮನೆಗಳಿಗೆ ಬ್ರಾಹ್ಮಣರ ಸ್ವೀಟ್ಸ್ಟಾಲ್ಗಳಿಂದಲೇ ಸ್ವೀಟ್ ಬಾಕ್ಸ್ಗಳನ್ನು ತಂದುಕೊಡುವ ವಾಡಿಕೆಯನ್ನೂ ಕೆಲ ಮುಸ್ಲಿಮ್ ಕುಟುಂಬಗಳು ಇರಿಸಿಕೊಂಡಿವೆ.

ಇನ್ನು ಕ್ರಿಸ್ಮಸ್ ಬರುವ ವಾರದ ಮೊದಲೇ ಮಕ್ಕಳು ಊರಿನ ದೊಡ್ಡ ಚರ್ಚ್ ಸುತ್ತಮುತ್ತ ಠಳಾಯಿಸುತ್ತಿರುತ್ತಾರೆ. ಗೋದಲಿಯಲ್ಲಿ ಅರಳುವ ಬಾಲ ಏಸುಸ್ವಾಮಿಯ ಮುಖ ನೋಡುವ ತವಕ ಅವರಿಗೆ. ಕ್ರಿಸ್ಮಸ್ ದಿನ ಬಣ್ಣಬಣ್ಣದ ದೀಪಗಳಲ್ಲಿ ಕಂಗೊಳಿಸುವ ಚರ್ಚ್ ಕಡೆಗೆ ಹೋದರೆ ಮಕ್ಕಳಿಗೆ ಚಾಕೊಲೇಟ್, ಕೇಕ್ ಜೊತೆಗೆ ಬಲೂನೂ ಸಿಗುತ್ವೆ. ಚಾಕೊಲೇಟ್-ಬಲೂನು ಮುಖ್ಯವೋ? ಜಾತಿ-ಧರ್ಮ ಮುಖ್ಯವೋ? ನಿಮಗೆ ಉತ್ತರ ಹೇಳೋಕೆ ಕಷ್ಟವಾದರೆ ನಿಮ್ಮ ಮಕ್ಕಳನ್ನು ಒಮ್ಮೆ ಕೇಳಿನೋಡಿ.

ನಮ್ಮ ಹಿಂದಿನ ತಲೆಮಾರು ಮಾಡಿದ ಮತ್ತು ಇಂದಿನ ತಲೆಮಾರುಗಳು ಮಾಡುತ್ತಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯುವ ಸಾಮರ್ಥ್ಯ ಮಕ್ಕಳಿಗಿದೆ. ಪೋಷಕರಾದ ನಮಗೆ ಕೇಸರಿ ಕುಂಕುಮದ ಹಣೆ, ಬಿಳಿ ಟೋಪಿಯ ತಲೆ, ಕ್ರಾಸ್ ನೇತಾಡುವ ಕುತ್ತಿಗೆಗಿಂತಲೂ ನಮಗೆ ನಗುವ ಮಗುವಿನ ಮುಗ್ಧ ಮುಖ ಮಾತ್ರ ಕಾಣಿಸಬೇಕಿದೆ. ಮಕ್ಕಳನ್ನು ಮಕ್ಕಳಂತೆ ಇರಲು, ಮಕ್ಕಳನ್ನು ಮಕ್ಕಳಾಗಿ ಬೆಳೆಸಲು ನಾವು ಪ್ರಯತ್ನಿಸಬೇಕಿದೆ. ನಮ್ಮೂರಿನ ಜನರಿಗೆ ಇರುವಂತೆ ಹೊಂದಾಣಿಕೆಯ ಮನೋಭಾವ, ಸಹಿಷ್ಣು ಮನಸ್ಥಿತಿ ಇದ್ದರೆ ಧರ್ಮ ಮತ್ತು ಜಾತಿಗಳು ಎಂದಿಗೂ ಈ ದೇಶಕ್ಕೆ ಒಂದು ಸಮಸ್ಯೆ ಆಗಲಾರದು.

ವಿಶ್ವದೆಲ್ಲೆಡೆ ಹೆಚ್ಚುತ್ತಿರುವ ಮತೀಯ ಭಯೋತ್ಪಾದನೆ, ದೇಶ ಮತ್ತು ರಾಜ್ಯದಲ್ಲಿ ರಾಜಕಾರಣಕ್ಕಾಗಿ ಧರ್ಮವನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಅನಾಹುತಗಳನ್ನು ಗಮನಿಸಿದಾ ತುಂಬಾ ಸಲ ನನಗೆ ಹೀಗನ್ನಿಸುವುದು ಉಂಟು.

ನಮ್ಮೂರಿನ ಸಹಜ ಬದುಕಿನ ಬಗ್ಗೆ ಬರೆಯಲು ತುಂಬಾ ಹಿಂಜರಿಕೆಯಿತ್ತು. ಕರ್ನಾಟಕದಲ್ಲಿ ಏನೆಲ್ಲಾ ಬೆಳವಣಿಗೆ ನಡೆಯುತ್ತಿರುವಾಗ ನಮ್ಮೂರಿನ ಧರ್ಮಾತೀತ ನಗುವಿಗೆ ಎಲ್ಲಿ ದೃಷ್ಟಿಯಾಗುತ್ತೋ ಎನಿಸುತ್ತಿತ್ತು. ನಿಮ್ಮಲ್ಲಿ ನನ್ನ ವಿನಂತಿಯಿಷ್ಟೇ, ನಾನು ಕಂಡ ಸಹಿಷ್ಣುತೆಯ ಸುಖ, ಮಕ್ಕಳು-ಮೊಮ್ಮಕ್ಕಳಿಗೂ ಉಳಿಯಲಿ ಎಂದು ಹಾರೈಸಿ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : ಸ್ವಭಾವ ಪ್ರಭಾವ: ಪ್ರೊಫೆಸರ್ ಟೇಟ್ ಮಹಾಶಯರೂ, ಮೃತರಿಗೆ ತರ್ಪಣವೂ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ