World Food Safety Day 2021: ವಿಶ್ವ ಆಹಾರ ದಿನದ ಹಿನ್ನೆಲೆ ಏನು? ಏಕಿಷ್ಟು ಮಹತ್ವ? ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ

ಪ್ರತಿವರ್ಷ ಜೂನ್ 7ರಂದು ವಿಶ್ವ ಆಹಾರ ದಿನ ಆಚರಿಸಲಾಗುತ್ತದೆ. ಇದು ಆಹಾರ ಭದ್ರತೆ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಣ ಸಂಬಂಧವನ್ನು ನೆನಪಿಸುವ ದಿನವೂ ಹೌದು. ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ತಡೆಯುವ ಮತ್ತು ನಿರ್ವಹಿಸುವ ಬಗ್ಗೆಯೂ ಈ ದಿನ ಗಮನ ಸೆಳೆಯುತ್ತದೆ.

World Food Safety Day 2021: ವಿಶ್ವ ಆಹಾರ ದಿನದ ಹಿನ್ನೆಲೆ ಏನು? ಏಕಿಷ್ಟು ಮಹತ್ವ? ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jun 06, 2021 | 9:06 PM

ಹೇಳಿಕೇಳಿ ಇದು ಕೊರೊನಾ ಕಾಲ. ‘ಪೌಷ್ಟಿಕಾಂಶಭರಿತ ತಾಜಾ ಆಹಾರವನ್ನು ಬಿಸಿಬಿಸಿಯಾಗಿ ಸೇವಿಸಿ’ ಎನ್ನುವುದು ಆರೋಗ್ಯ ಕಾರ್ಯಕರ್ತರು ಹೇಳುವ ಮೊದಲ ಕಿವಿಮಾತು. ಈ ಸಂಕಷ್ಟ ಕಾಲದಲ್ಲಿ ಬಂದಿರುವ ಆಹಾರ ಸುರಕ್ಷಾ ದಿನಕ್ಕೂ ವಿಶೇಷ ಅರ್ಥವಿದೆ. ಸರಿಯಾಗಿ ಬಳಸಿದರೆ ಆಹಾರ ಕೇವಲ ಹಸಿವು ನೀಗಿಸುವ ಸಾಧನವಷ್ಟೇ ಅಲ್ಲ, ಹಲವು ರೋಗಗಳನ್ನು ದೂರ ಇರಿಸುವ ಸಂಜೀವಿನಿ. ಎಚ್ಚರಿಕೆಯಿಲ್ಲದೆ ಕೇವಲ ಬಾಯಿರುಚಿಗಾಗಿ ಬಳಸಿದರೆ ಆಹಾರ ಎನ್ನುವುದು ರೋಗ ತರುವ ಮುಖ್ಯ ಕಾರಣವೂ ಆಗುತ್ತದೆ.

ಪ್ರತಿವರ್ಷ ಜೂನ್ 7ರಂದು ವಿಶ್ವ ಆಹಾರ ದಿನ ಆಚರಿಸಲಾಗುತ್ತದೆ. ಇದು ಆಹಾರ ಭದ್ರತೆ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಣ ಸಂಬಂಧವನ್ನು ನೆನಪಿಸುವ ದಿನವೂ ಹೌದು. ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ತಡೆಯುವ ಮತ್ತು ನಿರ್ವಹಿಸುವ ಬಗ್ಗೆಯೂ ಈ ದಿನ ಗಮನ ಸೆಳೆಯುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು (World Health Organisation – WHO) ವಿವಿಧ ವಯೋಮಾನದವರಲ್ಲಿ ಕಂಡುಬರುವ ಆಹಾರಕ್ಕೆ ಸಂಬಂಧಿಸಿದ ರೋಗಳನ್ನು ಗಮನಿಸಿ ಅದರ ಬಗ್ಗೆ ಜಾಗೃತಿ ಮೂಡಿಸಲು ಆಹಾರ ಸುರಕ್ಷಾ ದಿನದ ಪರಿಕಲ್ಪನೆಯನ್ನು ಜಾರಿಗೆ ತಂದಿತು. 2018ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಜೂನ್ 7ರಂದು ಆಹಾರ ಸುರಕ್ಷಾ ದಿನ ಆಚರಿಸಲು ನಿರ್ಧರಿಸಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಅಧೀನದಲ್ಲಿರುವ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸಲು ಕರೆ ನೀಡುತ್ತವೆ. ಇದು ಆಹಾರ ಸುರಕ್ಷಾ ದಿನದ 3ನೇ ವರ್ಷಾಚರಣೆ. ಈ ವರ್ಷದ ವಿಶ್ವ ಅಹಾರ ಸುರಕ್ಷಾ ದಿನದ ಆಶಯ ‘ಉತ್ತಮ ನಾಳೆಗಳಿಗಾಗಿ ಸುರಕ್ಷಿತ ಆಹಾರ’ (Safe food today for a healthy tomorrow) ಎನ್ನುವುದಾಗಿದೆ.

ಕೇವಲ ರುಚಿಗೆ ಮಾತ್ರ ಒತ್ತುಕೊಡದೆ ಶುಚಿಯಾದ ಆಹಾರ ಸೇವಿಸುವುದರ ಬಗ್ಗೆಯೂ ನಾವು ಗಮನಕೊಡಬೇಕು. ಆಹಾರ ಆರೋಗ್ಯದ ಮೂಲವೂ ಹೌದು, ಎಚ್ಚರ ತಪ್ಪಿದರೆ ರೋಗ ಹರಡುವ ಮುಖ್ಯ ಕಾರಣವೂ ಹೌದು. ಆಹಾರದಲ್ಲಿ ಇರಬಹುದಾದ ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಜೀವಿಗಳು ಅಥವಾ ರಾಸಾಯನಿಕಗಳು ಆರೋಗ್ಯಕ್ಕೆ ಮಾರಕವೂ ಹೌದು. ಆಹಾರವೂ ಪ್ರತಿ ಹಂತದಲ್ಲಿಯೂ ಸುರಕ್ಷಿತವಾಗಿರಬೇಕು. ಇಂಥ ತಿನಿಸುಗಳನ್ನು ಮಾತ್ರ ಸುರಕ್ಷಿತ ಎಂದು ಪರಿಗಣಿಸಲು ಸಾಧ್ಯ. ಆಹಾರ ಬೆಳೆಯುವುದು, ಕೊಯ್ಲು, ಸಂಸ್ಕರಣೆ, ದಾಸ್ತಾನು, ವಿತರಣೆ, ಅಡುಗೆ ಮತ್ತು ಸೇವನೆಯ ಹಂತಗಳಲ್ಲಿಯೂ ಸುರಕ್ಷೆಯನ್ನು ಗಮನದಲ್ಲಿರಿಸಿಕೊಳ್ಳಬೇಕು.

ಸುರಕ್ಷಿತ ಆಹಾರ ಎನ್ನುವುದು ಸರ್ಕಾರ, ರೈತರು ಮತ್ತು ಗ್ರಾಹಕರ ನಡುವಣ ಸಮಾನ ಜವಾಬ್ದಾರಿಯಾಗಿದೆ. ಕೃಷಿಭೂಮಿಯಿಂದ ಅನ್ನದ ಬಟ್ಟಲಿನವರೆಗೆ ಆಹಾರದ ಗುಣಮಟ್ಟ ಉತ್ತಮವಾಗಿರಬೇಕು. ನಮ್ಮ ಆರೋಗ್ಯಕ್ಕೆ ಯಾವುದೇ ಹಾನಿಯಾಗಬಾರದು ಎಂಬುದು ಈ ದಿನದ ಮತ್ತೊಂದು ಆಶಯವಾಗಿದೆ. ವಿಶ್ವ ಆಹಾರ ಸುರಕ್ಷಾ ದಿನದ ಮೂಲಕ ವಿಶ್ವಸಂಸ್ಥೆಯು ಆಹಾರ ಭದ್ರತೆಯನ್ನು ಸಾರ್ವಜನಿಕ ಚರ್ಚೆಯ ವಿಷಯವಾಗಿಸಲು ಯತ್ನಿಸುತ್ತದೆ. ಆಹಾರದಿಂದ ಹರಡುವ ರೋಗಗಳನ್ನು ಮಿತಗೊಳಿಸಲು ಪ್ರಯತ್ನಿಸುತ್ತದೆ. ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಜೀವಿಗಳು ಅಥವಾ ರಾಸಾಯನಿಕ ಉಳಿಕೆಗಳಿರುವ ಅಸುರಕ್ಷಿತ ಆಹಾರವು 200ಕ್ಕೂ ಹೆಚ್ಚು ರೋಗಗಳನ್ನು ಹರಡುತ್ತದೆ.

ಆಹಾರ ತಯಾರಿಕೆ ಮತ್ತು ಕೃಷಿ ವಲಯದಲ್ಲಿ ಅನುಸರಿಸುವ ಉತ್ತಮ ವಿಧಾನಗಳು ಆಹಾರದ ಮೂಲಕ ಹರಡುವ ರೋಗಗಳನ್ನು ಮಿತಗೊಳಿಸುತ್ತದೆ. ಈ ಸಂಕಷ್ಟ ಸಮಯದಲ್ಲಿ ನಾವು ಉತ್ತಮ, ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸುವ ಮೂಲಕ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಿದೆ. ಹಾಗೆ ಮಾಡಿದರೆ ಮಾತ್ರ ನಾವು ಆರೋಗ್ಯವಂತರಾಗಿ ಸಂತೋಷದಿಂದ ಬದುಕಲು ಸಾಧ್ಯವಾಗುತ್ತದೆ.

(World Food Safety Day 2021 why who startred food safety day what is the Significance all you need to know)

ಇದನ್ನೂ ಓದಿ: Health Tips: ಥೈರಾಯ್ಡ್​​ನಿಂದ ತೂಕ ಹೆಚ್ಚುತ್ತಿದೆಯಾ?.. ನಿಯಂತ್ರಣಕ್ಕೆ ಈ ಆಹಾರಗಳನ್ನು ನಿಯಮಿತವಾಗಿ ಸೇವಿಸಿ

ಇದನ್ನೂ ಓದಿ: ಆಗತಾನೇ ಋತುಮತಿಯಾದವರಿಗೆ ಏನೆಲ್ಲ ಆಹಾರ ಕೊಡಬೇಕು?- ಮುಟ್ಟಾದಾಗ ನೀರು ತುಂಬಿಕೊಂಡರೆ ಪರಿಹಾರ ಏನು? ಡಾ. ಎಚ್ ಎಸ್​ ​ಪ್ರೇಮಾ ನೀಡಿದ್ದಾರೆ ಸಲಹೆ

Published On - 8:52 pm, Sun, 6 June 21