World Poetry Day; ಅದು ಅದಾಗಿಯೇ ಆದರೂ ದ್ವೀಪದೆದುರು ಹೋಳಾಗುವ ನದಿಯಂತೆ

|

Updated on: Mar 21, 2021 | 2:51 PM

ಹೇಳಿಕೇಳಿ ಕವಿತೆ; ಅಳುಕುತ್ತಲೇ ನಮ್ಮ ನಡುವಿನ ಕೆಲ ಕವಿಗಳಿಗೆ, ಕವಿತೆ ಬರೆಯದೇ ಇದ್ದ ದಿನಗಳಲ್ಲಿ ಅಥವಾ ಕವಿತೆ ಹೊಮ್ಮುವ ಮುನ್ನ ನಿಮ್ಮ ಮನಸ್ಸಿನೊಳಗೆ ಸುಳಿದಾಡುವ ಆ ನಿರಾಕಾರವನ್ನಿಲ್ಲಿ ಹಿಡಿದುಕೊಡಬಹುದೆ? ಅದು ಪುಟ್ಟ ಬರಹವೋ, ಸ್ವಗತವೋ, ಕವಿತೆಯೋ ಏನೂ ಆಗಿಲ್ಲಿ ಹರಿಯಬಹುದು ಇಲ್ಲವಾದಲ್ಲಿ ಹಾಗೇ ನಿಮ್ಮೊಳಗೇ ಇರಲಿ... ಹೀಗೆಂದು ಕೇಳಲಾಯಿತು. ಮೊದಲೇ ಹೇಳಿದಂತೆ ಅದು ಕವಿತೆ, ತಕ್ಷಣಕ್ಕೆ ತಯಾರಾಗುವ ಪಾಕವೇ? ಆದರೂ ಮೂವರು ಕವಿಗಳು ಸ್ಪಂದಿಸಲು ಪ್ರಯತ್ನಿಸಿದ್ದಕ್ಕೆ ಹೊಮ್ಮಿದ್ದು ಏನೆಂದು ನೀವೇ ಅನುಭವಿಸಿ.  

World Poetry Day; ಅದು ಅದಾಗಿಯೇ ಆದರೂ ದ್ವೀಪದೆದುರು ಹೋಳಾಗುವ ನದಿಯಂತೆ
ಇಲ್ಲಸ್ಟ್ರೇಷನ್ : ಎಸ್. ವಿಷ್ಣುಕುಮಾರ್
Follow us on

ಹೇಳಿಕೇಳಿ ಕವಿತೆ; ಅಳುಕುತ್ತಲೇ ನಮ್ಮ ನಡುವಿನ ಕೆಲ ಕವಿಗಳಿಗೆ, ಕವಿತೆ ಬರೆಯದೇ ಇದ್ದ ದಿನಗಳಲ್ಲಿ ಅಥವಾ ಕವಿತೆ ಹೊಮ್ಮುವ ಮುನ್ನ ನಿಮ್ಮ ಮನಸ್ಸಿನೊಳಗೆ ಸುಳಿದಾಡುವ ಆ ನಿರಾಕಾರವನ್ನಿಲ್ಲಿ ಹಿಡಿದುಕೊಡಬಹುದೆ? ಅದು ಪುಟ್ಟ ಬರಹವೋ, ಸ್ವಗತವೋ, ಕವಿತೆಯೋ ಏನೂ ಆಗಿಲ್ಲಿ ಹರಿಯಬಹುದು ಇಲ್ಲವಾದಲ್ಲಿ ಹಾಗೇ ನಿಮ್ಮೊಳಗೇ ಇರಲಿ… ಹೀಗೆಂದು ಕೇಳಲಾಯಿತು. ಮೊದಲೇ ಹೇಳಿದಂತೆ ಅದು ಕವಿತೆ, ತಕ್ಷಣಕ್ಕೆ ತಯಾರಾಗುವ ಪಾಕವೇ? ಆದರೂ ಮೂವರು ಕವಿಗಳು ಸ್ಪಂದಿಸಲು ಪ್ರಯತ್ನಿಸಿದ್ದಕ್ಕೆ ಹೊಮ್ಮಿದ್ದು ಏನೆಂದು ನೀವೇ ಅನುಭವಿಸಿ.  

ಪರಿಕಲ್ಪನೆ : ಶ್ರೀದೇವಿ ಕಳಸದ

***

ಶುಂಠಿ ಕಷಾಯ: ಗುರುಗಣೇಶ ಡಬ್ಗುಳಿ

ಇಂಥಾ ಟೈಮಿನಲ್ಲಿ ಕವಿತೆ ಬರೆಯುತ್ತೇನೆ ಎಂದು ನನಗೆ ಯಾವತ್ತೂ ಗೊತ್ತಿರುವುದಿಲ್ಲ. ಅದು ಯಾವಾಗ ಬೇಕಾದರೂ ಬರಬಹುದಾದ್ದು ಮತ್ತು ಬರದೇ ಇರಬಹುದಾದದ್ದು. ನಡೆದುಕೊಂಡು ಎಲ್ಲಿಗೋ ಹೋಗುವಾಗ, ಅರೆನಿದ್ರೆ ಮಾಡುವಾಗ, ಇಡೀ ದಿನ ರೂಮಿನಲ್ಲಿ ಒಬ್ಬನೇ ಇದ್ದಾಗ ಅಥವಾ ಸಂತೆ, ಸುದ್ದಿಮನೆಯ ಗಲಾಟೆಯಲ್ಲಿರುವಾಗ. ನಮ್ಮಲ್ಲಿ ಭಯ ಮತ್ತು ಖುಷಿಗಳು ಹೇಗೆ ಹಾರ್ಮೋನಿನ ಸೃಷ್ಟಿಯೋ, ಅದೇ ತೆರದಲ್ಲಿ ಬಹುಶಃ ಕವಿತೆ ಎಂಬುದು ಕೂಡ ಒಂದು ಹಾರ್ಮೋನಿನ ಸೃಷ್ಟಿ ನನ್ನ ಪಾಲಿಗೆ. ಆ ಉತ್ಕಟ ಎದುರಾದಾಗ ಮನಸ್ಸು ದೇಹಗಳೆಂಬ ಎರಡು ಜಗುಲಿಯಲ್ಲಿ ಹಾರ್ಮೋನು ಸ್ರವಿಸುತ್ತದೆ. ಕವಿತೆ ಹುಟ್ಟುತ್ತದೆ.

ಬರೆದದ್ದು ಕವಿತೆಯೋ ಕವಿತೆಯಂತಹ ಬೇರೆಯದೋ ಎಂಬ ಗೊಂದಲವೇ ಒಂದು ನಮೂನೆಯ ರೋಚಕ. ಬರೆದರೆ ಆದಷ್ಟು ಕಡಿಮೆ ಬರೆಯಬೇಕು ಎಂದು ಅಂದುಕೊಂಡಿರುವ ನನಗೆ ಕವಿತೆ ಎಂಬುದು ‘ಬರೆಯದಿದ್ದರೂ ಇರುವುದೇ’ ಆಗಿದೆ.  ನಾನು ಜೀವಮಾನದಲ್ಲಿ ಎಷ್ಟು ಬರೆದಿದ್ದೇನೆ ಎಂಬುದನ್ನು ಲೆಕ್ಕ ಹಾಕಲು ಯಾರಿಗೂ ಕಷ್ಟವಾಗಬಾರದು. ಅಷ್ಟಕ್ಕೂ ನನ್ನ ಪಾಲಿಗೆ ಕವಿತೆ ‘ಬರೆಯುವುದು’ ಅಲ್ಲ. ಅದು ಹಾರ್ಮೋನು ಸ್ರವಿಸುವುದು. ಅದು ಹೊಳೆಯುವುದು. ಕಾಣುವುದು. ಅದಕ್ಕಾಗಿಯೇ ನನ್ನ ಬಳಿ ಯಾವಾಗಲೂ ಬರೆಯಲು ಆಗುವುದಿಲ್ಲ ಎಂದು ನಾನು ನಂಬಿದ್ದೇನೆ. ಈ ನಂಬಿಕೆ ಅತ್ಯಂತ ಸುಳ್ಳೂ ಆಗಿರಬಹುದು ಎಂಬುದು ಸಹ ನನ್ನ ನಂಬಿಕೆ.

ಅದಕ್ಕಾಗಿಯೇ:

ಅದು ಅದಾಗಿಯೇ ಆದಾಗ
ಋತು ಬಂದಾಗ ಋತು
ಬಿಟ್ಟರೆ ಹೂವು ಕಾಯಿ ಹಣ್ಣು
ತೆನೆ

ಬೀಸಿದಾಗ ಗಾಳಿ
ಆದಾಗ ತೃಪ್ತಿ.
ಬಂದಾಗಲೇ ಮಳೆ
ಚಳಿ ಜ್ವರ ಡಾಕ್ಟರು.

ಆದರೆ
ಮದುವೆ ಮಕ್ಕಳು
ಹಸಿವು

ಆಗದಿದ್ದರೆ ಶುಂಟಿ ಕಷಾಯ

ನಿರೀಕ್ಷೆ ಸಲ್ಲ

ಸೌಜನ್ಯ : ಅತಂರ್ಜಾಲ

ಚಿದಂಬರ ನರೇಂದ್ರ : ಮತ್ತೆ ಬರೆಯಹೋದರೆ ಕವಿತೆಯೇ

ರಾತ್ರಿ ನುಗ್ಗಿದ ಚಂದ್ರ
ಅಂಗಳದಲ್ಲಿ ಮಲಗಿದ್ದ ಬೆಕ್ಕು ತುಳಿದ ಸದ್ದಿಗೆ,
ಕೋಣೆಯೊಳಗಿನ ಎರಡು ನೆರಳುಗಳು
ಬೇರೆಯಾದ ಹಾಗೆ.

ಜಾರಿದ ನಕ್ಷತ್ರ ಕಂಡ ಹುಡುಗಿ
ಮುಷ್ಟಿ ಗಟ್ಟಿಮಾಡಿ
ಏನೋ ಬೇಡಿಕೊಳ್ಳುವಷ್ಟರಲ್ಲಿಯೇ
ಹಿಂದಿನಿಂದ ಬಂದ ಮೀಸೆ
ಅವಳ ಕತ್ತಿಗೆ ಚುಚ್ಚಿದ ಹಾಗೆ.

ಸ್ವತಃ ಹೆಂಡತಿಯೇ
ನಲ್ಲೆಯ ಕಾಲಿಗೆ ಗೆಜ್ಜೆ ಕಟ್ಟುತ್ತಿರುವ ಹಾಗೆ
ಮತ್ತು
ಮೂಲೆಯಲ್ಲಿ ಹಚ್ಚಿಟ್ಟ ಅಗರಬತ್ತಿಯ ಘಾಟಿಗೆ
ನಲ್ಲೆ ಉಸಿರುಗಟ್ಟಿ ಕುಸಿಯುತ್ತಿರುವ
ವಿಲಕ್ಷಣ ಕನಸಿನ ಹಾಗೆ.

ದ್ವೀಪ ಬಂತೆಂದು ಹೋಳಾದ ನದಿ
ಮತ್ತೆ ಮುಂದೆ ಸಂಧಿಸಲೇಬೇಕಾದ
ಅನಿವಾರ್ಯತೆಗಾಗಿ
ವಿಷಾದದಿಂದ ನಿಂತು ನಿಂತು
ಬಿಕ್ಕುತ್ತ ತೆವಳುವ ಹಾಗೆ

ಗೋಡೆಯ ಮೇಲಿನ
ಹಲ್ಲಿಯ ಹಿಂದೆಯೇ ಓಡಾಡುತ್ತಿದ್ದ
ಅವಳ ಕಣ್ಣುಗಳು
ಅವನು ಮಲಗಿದ ಮೇಲೆ
ದೀಪ ಆರಿಸಿದ ಹಾಗೆ.

ಎಷ್ಟು ಜಾಗ ಬದಲಿಸಿದರೂ
ಪ್ರೇಮ ಸಂಭವಿಸದ ಹಾಗೆ

ಆತಂಕದಿಂದ ಕಾಡುತ್ತದೆ
ಕವಿತೆ ಬರೆಯಿಸಿಕೊಳ್ಳದ ಸಮಯ.

ಸೌಜನ್ಯ : ಅಂತರ್ಜಾಲ

ಕವಿತೆ ಹೆತ್ತ ಕಂದನಂತೆ : ನಾಗರೇಖಾ ಗಾಂವಕರ

ಹರಿಯುವ ನದಿಯಲ್ಲಿ ತೇಲುತ್ತ ಸಾಗುವ ಒಣಕೊಂಬೆಯ ತುಂಡೊಂದು ತನಗರಿವಿಲ್ಲದೇ ಅಲೆಯ ಏರಿಳಿತಗಳ ಅನುಭವಿಸುತ್ತಾ ಸಾಗುತ್ತದೆ. ನಡುನಡುವೆ ಬಂಡೆಗಲ್ಲೋ, ಅಥವಾ ನೀರಲ್ಲಿ ಮುರಿದುಬಿದ್ದ ಮರದ ದಿಮ್ಮಿಗಳೋ ಅದರ ಚಲನೆಗೆ ಭಂಗತರುತ್ತವೆ. ನೀರಿನ ಸೆಳವು, ಅಥವಾ ಜೋರಾಗಿ ಬೀಸುವ ಗಾಳಿ ಅದರ ದಾರಿಯ ಅಡೆತಡೆಗಳನ್ನು ನಿವಾರಿಸಿದಾಗ ಪುನಃ ಚಲಿಸತೊಡಗುತ್ತದೆ. ಹಾಗೇ ನನಗೆ ಕವಿತೆ ಎಂದರೆ ಎದೆಯೊಳಗೆ ಸುಮ್ಮನೆ ಚಲಿಸುತ್ತಲೇ ಇರುವ ಕೊಂಬೆ. ಆಗಾಗ ಅದರ ಚಲನೆಗೆ ಭಂಗ. ಮತ್ತೆ ವೇಗ ಸರಾಗ.

ಕವಿತೆ ದಕ್ಕುವ ಹೊತ್ತು ನಾನು ತಪಸ್ವಿನಿಯಾಗಲೇ ಇಲ್ಲ. ನಿತ್ಯ ಕೆಲಸದ ನಡುವೆ ಹೈರಾಣಾದ ಹೊತ್ತೆ ನನ್ನ ಕಾಡಿದವಳಿವಳು. ಈ ಗುಂಗಿ ಹುಳ ಕಿವಿಯೊಳಗೆ ಗುಂಯ್ಗುಡುವುದು ನಾನು ನನ್ನ ಕೆಲಸಗಳ ಮಧ್ಯೆ ತೊಡಗಿದಾಗ, ಇಲ್ಲ ಕೆಲಸವೆಲ್ಲಾ ಮುಗಿಸಿ ಈಗ ಮಲಗಿದರಾಯ್ತೆಂದು ದಿಂಬಿಗೆ ತಲೆ ಇಟ್ಟಾಗ. ಇಂತಹ ಏಕಾಂತದಲ್ಲಿ ಸರಸರ ಬಂದು ಹೆಗಲೇರಿದವಳನ್ನು ಹಾಗೇ ಪದಗಳಲ್ಲಿ ಅವಿತಿಡುತ್ತೇನೆ ಕೈ ಹಾಳೆಯ ಮೇಲೆ. ಮತ್ತೆ ಒಪ್ಪಗೊಳಿಸುತ್ತೇನೆ.
ಒಮ್ಮೊಮ್ಮೆ ಏನೆಲ್ಲಾ ಆಗಿಬಿಡುವುದು. ಆಳಕ್ಕೆ ಅಂಜುವ ಮನಸ್ಸು ಆಳವನ್ನೆ ಮೋಹಿಸುವ ಹಠಕ್ಕೆ ಬೀಳುವುದು. ಒಂದಕ್ಕೊಂದು ವಿರುದ್ಧ ಸಾಂದ್ರತೆಯನ್ನೆ ಮೈಗೂಡಿಸಿಕೊಂಡಿರುವ ಜಡ ಮತ್ತು ಚೇತನವೆಂಬ ಸಂಗತಿಗಳು ಮನಸ್ಸೆಂಬ ಮಾಂತ್ರಿಕ ಜಗತ್ತಿನಲ್ಲಿ ಒಂದೇ ಕಡೆ ಅವಿರ್ಭಾವಗೊಳ್ಳುವುದು. ಹೀಗಾದಾಗಲೆಲ್ಲ ತಪ್ತ ಮನಸ್ಸಿನ ತಲ್ಲಣಗಳು ಭುಗಿಲೇಳುತ್ತವೆ. ತಾಕಲಾಟದ ಭಾವಗಳೆಲ್ಲ ಮಾತಿಗಿಳಿಯುವ ಕ್ಷಣ ಕವಿತೆ ಕೈಹಿಡಿದಿದೆ., ಇವನ್ನೆಲ್ಲ ಹೊರಚಿಮ್ಮಿಸಿದ ಮರುಗಳಿಗೆ ಅದೆಂಥಾ ನಿರಾಳತೆ. ಕಂದನ ಹೆತ್ತ ತಾಯೊಬ್ಬಳ ತೃಪ್ತಭಾವದಂತೆ.

ಏಕಾಂಗಿತನದ ಅನೂಹ್ಯ ಚಹರೆಗಳು, ಸುತ್ತಮುತ್ತಲಿನ ವಾಸ್ತವ, ಭ್ರಾಮಕ ಲೋಕಗಳು, ಸಂಗತ ಅಸಂಗತ ವಿಚಾರಗಳು, ನನ್ನ ನಾ ಕಳೆದುಕೊಳ್ಳಬೇಕೆನ್ನುವ ಭಾವ ಚಿತ್ತ ವೃತ್ತಿಯಲ್ಲಿ ಮೂಡುತ್ತಾ ಕವಿತೆ ಅರಳುತ್ತದೆ. ನನ್ನೊಳಗು ಬೆಳಗುತ್ತದೆ.

ಓ ಕವಿತೆ

ಕಂಡುಂಡ ಅನುಭವಗಳ ಕಾಪಿಡುವ
ಕಂತೆ ಈ ಕವಿತೆ
ಈಕೆ ಜೀವದೊರತೆ
ಕಾಡುಮೇಡಿನ ಮೂಲಿಕೆಯ
ಗುಣದವಳು.

ಮತ್ತೆ ಕೆಲವೊಮ್ಮೆ
ಮೋಡಿ ಮಂಪರುಗೈವ
ಮರ್ಮಗುಣಿಕೆ
ಮಾಯೆ, ಮಂದಾಕಿನಿ
ಮಲಯ ಮಾರುತಕ್ಕಿಂತ
ಮಾಯಾವಿ ವನಿತೆ

ಹೊಳೆವ ನೀರಲ್ಲಿ ಹೊನ್ನ ಬಿಂಬ
ನೂಪುರದ ತಾಳ ಲಯ
ಸುಭಗ ಚಂದಿರನ ಚೆಲುವು
ಧರಣಿ ದೇವಿಯ ಹಸಿರು ಹಾಸು
ಮುತ್ತಿಡುವ ಭಾನ ರಶ್ಮಿ ರಾಶಿ.

ಅಂಗಳದಿ ಅಡಿಯಿಡುವ
ಬಾಲಲೋಲನ ನುಡಿಯಲಡಗಿದ
ನಯನಗೋಚರ,ಕರಣಕ್ಕಿಂಚರ
ಸ್ಪುರಿತೆ,ಸುಲಲಿತೆ
ತೋಚಿದ್ದ ಗೀಚಿದ್ದೆ
ಅಂಗಾಂಗ ಭರಿತೆ
ಮೈದುಂಬಿ ಚಲುವಿನಾಚಲದಿ
ಮಿರುಪ ವಿನೀತ ವನಿತೆ.

ಇದನ್ನೂ ಓದಿ : Poetry; ಅವಿತಕವಿತೆ : ಅದು ಯಾಕೆ ಬೆಕ್ಕು ಮಾತ್ರ ಇನ್ನೂ ಕಳ್ಳಬೆಕ್ಕು?

Published On - 2:16 pm, Sun, 21 March 21