World Sleep Day; ನಿದ್ದೆ ಎಂಬ ಪದಕವಡೆ : ನಿದ್ರಾಯೋಗ ಮತ್ತು ಮುಕ್ತ ವಿಶ್ವವಿದ್ಯಾಲಯದ ನಡುವಿನ ಬಿಟ್ಟಸ್ಥಳವಿದು

‘ಕೊನೆಯಲ್ಲಿ, ಯಾವ ಪಠ್ಯ ಪುಸ್ತಕದ ಓದೂ ನನಗೆ ನಿಜಕ್ಕೂ ಬೇಕಿಲ್ಲ ಎಂಬ ವೈರಾಗ್ಯದ ನಿರ್ಧಾರ ಮಾಡಿ ಮುಕ್ತ ವಿವಿಯ ಪದವಿಯ ಆಸೆಯನ್ನು ಪಕ್ಕಕ್ಕಿಟ್ಟೆ. ಅಚ್ಚರಿಯೆಂಬಂತೆ ಅಂದಿನಿಂದ ಮತ್ತೆ ಅನಿದ್ರೆ ನನ್ನ ಕಣ್ಣಿಗೆ ಒತ್ತಿಕೊಂಡು ಬಂದು, ನನ್ನ ಮೆದುಳು ತನ್ನ ಹಿಂದಿನ ಶೈಲಿಯಲ್ಲಿ ಸಣ್ಣ ಸದ್ದಿಗೂ ಪ್ರತಿಕ್ರಿಯಿಸಲು ಆರಂಭಿಸಿ ನಡುರಾತ್ರಿಯಲ್ಲಿ ಪಕ್ಕದ ಕೋಣೆಗೆ ಕರೆ ಹೋಗತೊಡಗಿತು.‘ ನಂದಿನಿ ಹೆದ್ದುರ್ಗ

World Sleep Day; ನಿದ್ದೆ ಎಂಬ ಪದಕವಡೆ : ನಿದ್ರಾಯೋಗ ಮತ್ತು ಮುಕ್ತ ವಿಶ್ವವಿದ್ಯಾಲಯದ ನಡುವಿನ ಬಿಟ್ಟಸ್ಥಳವಿದು
ನಂದಿನಿ ಹೆದ್ದುರ್ಗ
Follow us
ಶ್ರೀದೇವಿ ಕಳಸದ
|

Updated on:Mar 19, 2021 | 6:09 PM

ಏಳಿ, ಎದ್ದೇಳಿ! ಎದ್ದು ಬರೆಯಲು ಕುಳಿತುಕೊಳ್ಳಿ. ಎಲ್ಲಿದ್ದೀರೋ ಅಲ್ಲಿಂದಲೇ ಬರೆಯಲು ಶುರುಮಾಡಿ. ಹಾಳೆಯೋ, ಪರದೆಯೋ ಏನೋ ಒಂದು ನಿಮ್ಮ ಮುಂದೆ ತೆರೆದುಕೊಂಡಿರಲಿ. ಈಗ ಕೈಗಳೆರಡನ್ನೂ ಉಜ್ಜಿಕೊಂಡು ಆ ಖಾಲಿಚೌಕದೊಳಗೆ ನಿಮಗೆ ಕೊಟ್ಟ ಪದವನ್ನು ದಾಳಕ್ಕೆ ಹಾಕಿ. ಅಂದುಕೊಂಡಿದ್ದೇ ಬಿತ್ತಾ, ಇಲ್ಲವಾ? ಮತ್ತೆ ಮತ್ತೆ ಹಾಕಿ. ನಿಮ್ಮ ಉಸಿರು ನಿಮ್ಮ ಹಿಡಿತದಲ್ಲಿಯೇ ಇದೆ ಎಂದು ನಿಮಗನ್ನಿಸುವ ತನಕ ದಾಳ ಹಾಕುತ್ತಲೇ ಇರಿ. ಇಲ್ಲಿ ಕಣ್ಣುಮುಚ್ಚಿಕೊಂಡು ನಿವೇದಿಸಿಕೊಳ್ಳುವುದಂತೂ ಸಂಪೂರ್ಣ ನಿಷಿದ್ಧ!; ಗಾಳಿಯಲ್ಲಿ ತೇಲಿ ಹೋದ ಈ ಸಂದೇಶವನ್ನು ಫಕ್ಕನೆ ಹಿಡಿದು ಬರೆಯಲು ಕುಳಿತರು ನಮ್ಮ ನಡುವಿನ ಬರಹಪ್ರಿಯರು. ‘ವಿಶ್ವ ನಿದ್ದೆ ದಿನ – World Sleep Day’ ಪ್ರಯುಕ್ತ ‘ನಿದ್ದೆ ಎಂಬ ಪದಕವಡೆ’ ಸರಣಿ.

ಪರಿಕಲ್ಪನೆ : ಶ್ರೀದೇವಿ ಕಳಸದ

‘ನಿದ್ದೆ’ ಎನ್ನುವುದು ಎಲ್ಲೆಲ್ಲಿ ಹೊಕ್ಕಾಡಿ ಎಲ್ಲಿಗೆ ತಂದು ನಿಲ್ಲಿಸಿದೆ ಲೇಖಕಿ ನಂದಿನಿ ಹೆದ್ದುರ್ಗ ಅವರನ್ನು?

ನಿದ್ದೆಗೊಮ್ಮೆ ನಿತ್ಯ ಮರಣ ಎನ್ನುವ ಕವಿವಾಣಿಯೂ, ಸತ್ತಂಗೆ ನಿದ್ರೆ ಮಾಡ್ತಾನೆ ಎನ್ನುವ ಬೈಗುಳವೂ ನಿದ್ರೆಯಲ್ಲೇ ಸಾವು ಎಂಬ ಅನಾಯಾಸ ಮರಣದ ವರವೂ ನಿದ್ರೆಯ ಸರಿಗಮಗಳ ಕುರಿತು ಹೇಳುತ್ತವೆಯಾದರೂ ಇದನ್ನು ಇಲ್ಲಿ ಕುಳಿತು ಬರೆಯುತ್ತಿರುವ ನಾನೂ ನಿದ್ರೆಗಾಗಿ ಸಕಲ ಪಡಿಪದಾರ್ಥಗಳನ್ನು ತಿಂದೂ, ಸಕಲ ಕ್ರಿಯಾಕರ್ಮಗಳನ್ನು ಪೂರೈಸಿ ಕೊನೆಗೂ ಯಶ ಕಾಣದೆ ಕೈಚೆಲ್ಲಿದವಳೆ. ಅನಿದ್ರೆಯ ಸಮಸ್ಯೆ ನಮ್ಮ ವಂಶವಾಹಿನಿಯೊಳಗಿನ ಬ್ರಹ್ಮ ಬರಹವೆಂಬ ನನ್ನ ಅನುಮಾನಕ್ಕೆ ಇಂಬೂ ಕೊಡುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದರಲ್ಲಿ ಪ್ರಮುಖವಾದದ್ದು ನನ್ನ ಬಾಲ್ಯದಲ್ಲಿ ನಡುರಾತ್ರಿಯಲ್ಲಿ ಅಪ್ಪ ಅಮ್ಮನ ಕೋಣೆಯಿಂದ ಕೇಳಿಬರುತ್ತಿದ್ದ ಮಾತುಕತೆಗಳು…

‘ನಾಳೆ ಮಂಟಿ ಪಟ್ಟಿಗೆ ನಾಲ್ಕು ಹೆಣ್ಣಾಳು ಬಿಟ್ರೆ ದನಿನ್ ಗೊಬ್ರ ಹೊತ್ತು ಮುಗಿಯುತ್ತೆ.

‘ಸಿದ್ಧ, ಬೈರ ಈ ವಾರ ಸೌದೆ  ಹೊರಲಿ. ಮರಗಪಾತು ಮುಂದಿನ ವಾರದಿಂದ ಶುರು ಮಾಡದೇ ಇದ್ರೆ ರೆಕ್ಕೆ ಬರೋದು ನಿಧಾನ ಆಗ್ತದೆ.’

‘ಹೊಲದ ಪಟ್ಟೆಗೆ ಮುಂದಿನ ವಾರದಲ್ಲಿ ಸ್ಪ್ರೇ ಶುರು ಮಾಡಬೇಕು’

ಹೀಗೆ ಕಾಫಿ ತೋಟಕ್ಕೆ ಮಾಡಬೇಕಾದ ನಾಳಿನ, ಮುಂದಿನ ವಾರದ, ಮುಂದಿನ ತಿಂಗಳ, ಮುಂದಿನ ವರ್ಷದ ಕೆಲಸಗಳೆಲ್ಲವನ್ನೂ ಎಚ್ಚರಾದಾಗಲೆಲ್ಲ ಚರ್ಚಿಸುತ್ತಿದ್ದ ಅಪ್ಪ-ಅಮ್ಮ ನಿಜವಾಗಿಯೂ ಮಲಗುತ್ತಿದ್ದರೇ ಅಥವಾ ಅವರಿಗೂ ಅನಿದ್ರೆಯ ಸಮಸ್ಯೆ ಇತ್ತೇ ಎನ್ನುವುದು ಈಗಲೂ ಕಾಡುವ ಪ್ರಶ್ನೆ. ಇನ್ನೂ, ಒಂದು ಸಣ್ಣ ಶಬ್ದಕ್ಕೂ ಪ್ರತಿಕ್ರಿಯಿಸುವ ನನ್ನ ಮೆದುಳಿನ ಕಾರಣದಿಂದಾಗಿ ಅಪ್ಪ-ಅಮ್ಮನ ನಡುರಾತ್ರಿಯ ಮಾತುಕತೆಗಳು ನನ್ನ ಪ್ರತಿ ಇರುಳನ್ನೂ ಸಿಡಿಮಿಡಿಯಲ್ಲೇ ಮುಗಿಸುತ್ತಿದ್ದವು. ಅದು ನನ್ನ ಮಾತು-ಕೃತಿಯಲ್ಲಿ ವ್ಯಕ್ತವಾಗಿ ‘ಸಿಡುಕ್ಲಿ’ ಎನ್ನುವ ಹೆಸರು ಆಗೆಲ್ಲಾ ನನ್ನ ಅಡ್ಡನಾಮಗಳ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದಿತ್ತು. ಇನ್ನು ಮನೆವಾಸ ಮುಗಿದು ಬೋರ್ಡಿಂಗಿಗೆ ಹತ್ತಿರದ ನಗರಕ್ಕೆ ಹೋಗುವ ಕಾಲ. ಶುದ್ಧ ಸಸ್ಯಾಹಾರಿಯಾಗಿದ್ದ ನನಗೆ ಕ್ರಿಶ್ಚಿಯನ್ ಬೋರ್ಡಿಂಗಿನ ಮಾಂಸಮಡ್ಡಿಗಳನ್ನೊಳಗೊಂಡ ಆಹಾರ ಮತ್ತು ಬಟರ್ ಮಿಲ್ಕಿನಲ್ಲಿ ತೇಲುತ್ತಿದ್ದ ಜಿರಳೆಯ ಕೈಕಾಲುಗಳು ಊಟವೆಂದರೆ ಮುಖ ಹುಳ್ಳಗೆ ಮಾಡುವ ಪರಿಸ್ಥಿತಿಯನ್ನು ತಂದೊಡ್ಡಿದ್ದವು. ಅದೂ ಅಲ್ಲದೆ ತಮ್ಮನ ಅಂಗಿಯ ಸಣ್ಣ ಚುಂಗಾದರೂ ಹಿಡಿದು ಮಲಗುವ ಮಹಾ ಅಂಜುಬುರುಕಿಯಾದ ನಾನು ದೊಡ್ಡ ಹಜಾರದಲ್ಲಿ  ನಿಗದಿತ ಅಂತರದಲ್ಲಿ ಹಾಕಿದ್ದ ಮಂಚದಲ್ಲಿ ಒಬ್ಬಳೇ ಮಲಗುವ ಮಹಾಯೋಗಕ್ಕೆ ಇರುಳು ಇಳಿಯುವ ಕಾಲಕ್ಕೆ ಹೆದರಿಕೆಯಿಂದ ವ್ಯಸ್ಥಳಾಗುತ್ತಿದ್ದೆ.

ಇದೆಲ್ಲದರ ಹೊರತಾಗಿಯೂ ಓದಿನಲ್ಲಿ ನಾನು ಬಲು ಜಾಣೆ. ರಾತ್ರಿ ಹತ್ತರವರೆಗೂ ಬೋರ್ಡಿಂಗಿನಲ್ಲಿ ಸ್ಟಡಿ ಅವರ್. ಇಂಥದ್ದೇ ಒಂದು ರಾತ್ರಿ ಅಮ್ಮನ ನೆನಪು ತೀವ್ರ ಕಾಡಿ ಎಲ್ಲರೆದುರು  ಕಂಬನಿಗರೆಯಲು, ಸಿಂಬಳ ಸುರಿಸಲು ನಾಚಿಕೆಯೆನಿಸಿ ಡೆಸ್ಕಿನ ಅಡಿಯಲ್ಲಿ ಪುಸ್ತಕ ಹಿಡಿದು ಅಳುತ್ತಳುತ್ತಾ  ಓದುತ್ತ ಕುಳಿತೆ. ಕೈಯಲ್ಲಿದ್ದಿದ್ದು ನೆಚ್ಚಿನ ಜೀವಶಾಸ್ತ್ರದ ಪುಸ್ತಕ. ಪಾಠ ಆಳಕ್ಕಿಳಿದು ಅಳು ಮರೆತುಹೋಗಿ ಹತ್ತರ ಬೆಲ್ಲು ಹೊಡೆದು ಎಲ್ಲರೂ ಮಲಗಲು ಹೋದರೂ ನಾನು ಅಡಿಯಲ್ಲಿ ಕುಳಿತು ಜೀವಶಾಸ್ತ್ರದೊಳಗೆ ಮುಳುಗಿಹೋಗಿದ್ದೆ. ಬೆತ್ತ ಹಿಡಿದು ಬಂದ ಸಿಸ್ಟರ್ ‘ಏನು… ನಿದ್ರೆ ಮಾಡ್ತಿದ್ದೀಯಾ’ ಅಂತ ದೊಡ್ಡ ಸ್ವರದಲ್ಲಿ ಗದರಿ ಬೆತ್ತ ಎತ್ತಿದಾಗ ನಾನು ತಬ್ಬಿಬ್ಬಾಗಿ ‘ಇಲ್ಲ, ಓದ್ತಿದ್ದೆ… ಬೇಕಾದರೆ ಪ್ರಶ್ನೆ ಕೇಳಿ ಸಿಸ್ಟರ್’ ಎಂದವಳು ಕೈಯಲ್ಲಿದ್ದ ಪುಸ್ತಕವನ್ನು ಅವರೆಡೆಗೆ ಹಿಡಿದಿದ್ದೆ. ನನ್ನ ಮುಖಭಾವವೂ ಪ್ರಾಮಾಣಿಕತೆಯೂ ನನ್ನ ಆತ್ಮವಿಶ್ವಾಸವೂ ಸಿಸ್ಟರ್ಗೆ ಮೆಚ್ಚುಗೆಯಾಗಿ ಹೈಸ್ಕೂಲು ಮುಗಿಯುವವರೆಗೂ ತದೇಕ ಓದಿಗೆ ಉದಾಹರಿಸಲು ನನ್ನ ಹೆಸರು ಸುಲಭವಾಗಿ ಅವರ ಬಾಯಿಗೆ ಒದಗುತಿತ್ತು. ಈ ಪ್ರಸಂಗ ಗೆಳತಿಯರ ನಡುವೆ ಸಣ್ಣ ಗೌರವಕ್ಕೂ ಕಾರಣವಾಗಿತ್ತು. ಇಂತಪ್ಪ ಜಾಣ ವಿದ್ಯಾರ್ಥಿಯಾಗಿದ್ದ ನಾನು ಬಾಲ್ಯಸಹಜ ಮೂಲಭೂತ ಅವಶ್ಯಕತೆಗಳಾದ ಆಹಾರ ನಿದ್ದೆ ಎರಡಕ್ಕೂ ಕುಂದಿದ್ದರೂ ಒಳ್ಳೆಯ ಅಂಕ  ತೆಗೆದುಕೊಂಡು ಸ್ಕೂಲಿಗೆ ಸೆಕೆಂಡ್ ಬಂದು, ಭಾಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದೆ. ಆದರೆ… ವಿಧಿಲಿಖಿತವನ್ನು ಯಾರಾದರೂ ಅಳಿಸಲು ಉಂಟೆ? ಅದ್ಯಾವ ಕಾರಣಕ್ಕೋ ಹದಿನಾರನೇ ವಯಸ್ಸಿಗೆ ಮಗಳಿಗೆ ಮದುವೆ ಮಾಡಿದ ಅಪ್ಪನಿಗೆ ಅದು ತಪ್ಪು ಅನಿಸಲಿಲ್ಲ. ಅದಲ್ಲ ವಿಷಯ. ತಂತಿ ಕತ್ತರಿಸಿದ ರುದ್ರವೀಣೆಯಿಂದ ಹೊರಡುವ ಕರ್ಕಶ ಸದ್ದಿನಂತೆ ಗೊರಕೆ ಹೊಡೆಯುವ ಮಹಾನುಭಾವ ನನ್ನ ಪತಿಯಾಗಿ ಬಂದಿದ್ದು ನಿಜವಾದ ವಿಷಾದ ಯೋಗ. ಸಣ್ಣ ಸದ್ದಿಗೂ ನಿದ್ರೆ ತಪ್ಪಿ ಎದ್ದು ಕೂರುತ್ತಿದ್ದ ನನಗೆ ಪಕ್ಕದಲ್ಲಿ ಬೋರಿಗೆ ಬಂದ  ಡೀಸೆಲ್ ಇಂಜಿನ್ ಒಂದು ಮಲಗುವ ಹಾಗಾಗಿದ್ದು ನನ್ನ ಪೂರ್ವಾರ್ಜಿತದ ಕರ್ಮವೇ ಇರಬೇಕು.

ಕೊನೆಗೂ ಕೋಣೆಗಳು ಬದಲಾಗಿ ಪಕ್ಕದಲ್ಲಿದ್ದ ಮಹಾಗೋಡೆ ಗೋದಾಮುಗಳ ಹೊರತಾಗಿಯೂ ಗುಡುಗು-ಸಿಡಿಲು ತಡರಾತ್ರಿಯಲ್ಲಿ ನನ್ನ ಕಿವಿಗೆ ಬೀಳುವಾಗ ಪಕ್ಕದ ಕೋಣೆಗೆ ನನ್ನ ಕೋಣೆಯಿಂದ ಕರೆಯೊಂದು ಹೋಗುತ್ತಿತ್ತು. ‘ರೀ … ನಾನೂ ಒಂಚೂರು ಮಲಗಬೇಕು. ದಯವಿಟ್ಟು ಸೈಡಿಗೆ ತಿರುಗಿ ಮಲಗಿ, ಗೊರಕೆ ಹೊಡಿಬ್ಯಾಡಿ’ ಅನ್ನುವ ನನ್ನ ಪ್ರಾರ್ಥನೆ ಕಮ್ ಸಂತೆಯಲ್ಲೂ ನಿದ್ದೆ ಮಾಡುವ ಅವನ ಸ್ವಭಾವಕ್ಕೆ ದೊಡ್ಡ ಈರ್ಷ್ಯೆ ಸೇರಿಕೊಂಡ ಕೋರಿಕೆಗೆ ‘ಏಯ್ ನಿನ್ ಅ… ನಿನಗೆ ನಿದ್ರೆ ಬರದಿದ್ದರೆ ಅದು ನಿನ್ನ ಕರ್ಮ’ ಅಂತ ಅಂದು ಗಂಟಲು ಸರಿಪಡಿಸಿಕೊಂಡು ಇನ್ನೂ ದೊಡ್ಡದಾಗಿ ಹೊಸದಾದ ಲಯದಲ್ಲಿ ಗೊರಕೆ ಆರಂಭವಾಗುತ್ತಿತ್ತು. ಭಾಷಣಕ್ಕೆ ಒದಗುವ ನನ್ನ ಮಹಿಳಾವಾದದ ತರ್ಕ ಸಿದ್ಧಾಂತಗಳು ನನ್ನ ನಿದ್ರಾ ತೊಂದರೆಗೆ ಕಾರಣವಾಗುವ ಗೊರಕೆ ಮಹಾರಾಯನಿಗೆ ಒದಗದೆ ಕಣ್ಣ ತುದಿಯಲ್ಲಿ ಒಂದೆರಡು ಕಂಬನಿಗಳು ಹನಿಗಟ್ಟಿ ಹತ್ತಿಗಾಗಿ ತಡಕಾಡಿ ನಿಟ್ಟುಸಿರುಡುತ್ತೇನೆ.

world sleep day

ಸೌಜನ್ಯ : ಅಂತರ್ಜಾಲ

ಇದೆಲ್ಲದರ ನಡುವೆಯೂ ವಿಶ್ವ ನಿದ್ರಾ ದಿನದ ಈ ಬರಹದಲ್ಲಿ ಅಚ್ಚರಿಯ ನಾಲ್ಕು ಸಾಲುಗಳು ಇವೆ. ಅನಿದ್ರೆಯ ಸಂಕಟ, ಅತಿನಿದ್ರೆಗಳ ಮೋಹದ ನಡುವೆ ಸಾಗುತ್ತಿದ್ದ ನನ್ನ ಜೀವನ ಯಾನ ಅಕ್ಷರವೆಂಬ ಅಮಲಿನ ಪುರುಷನ ಮೋಹಕ್ಕೆ ಬಂದು ನಿಂತು, ಬರಹದಲ್ಲಿ ಅಷ್ಟಿಷ್ಟು ಹೆಸರು ಮಾಡಿ, ಅಕ್ಷರಕ್ಕೆ ದಕ್ಕಿದ ನಾಲ್ಕು ಸಾಲುಗಳು ಕವಿತೆಯೆಂಬ ಪಟ್ಟಪಡೆದು ಕವಿಗೋಷ್ಠಿಗೆ ಕರೆಬರಲು ಆರಂಭವಾಯಿತು. ವೇದಿಕೆಯಲ್ಲಿ ಕವಿಪರಿಚಯದ ಸಂದರ್ಭದಲ್ಲಿ  ಹೇಳುತ್ತಿದ್ದ ನನ್ನ ವಿದ್ಯಾರ್ಹತೆ ವಿಪರೀತ ಮುಜುಗರ ತರಿಸಿ, ಕೊನೆಪಕ್ಷ ಮುಕ್ತ ವಿವಿಯಲ್ಲಿ ಸೂಕ್ತ ಪದವಿಯನ್ನು ಪಡೆದು ನನ್ನ ಹೆಸರಿನ ಪಕ್ಕಕ್ಕೆ ಅಂಟಿಸಿಕೊಳ್ಳಬೇಕೆಂಬ ಹೆಬ್ಬಯಕೆ ಶುರುವಾಯಿತು. ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಾರ್ಡ್ ಕೂಡ ಕಾಲೇಜಿನಿಂದ ಪಡೆಯದಿದ್ದ ನಾನು, ಓದಿದ ಕಾಲೇಜಿಗೆ ಕರೆಮಾಡಿ, ಸ್ವಯಂ ಹೋಗಿ ಗುರುಗಳ ನೆರವಿನೊಂದಿಗೆ ಅಂಕಪಟ್ಟಿಯನ್ನು ಪಡೆದು ಮುಕ್ತ ವಿವಿಯ ಪದವಿಗಾಗಿ ಹಣ ಕಟ್ಟಿದೆ. ನಾಲ್ಕು ದಿನದಲ್ಲಿ ತುಸು ದೊಡ್ಡ ಗಾತ್ರದ ಪುಸ್ತಕಗಳು ಕೈ ಸೇರಿದ್ದವು. ಅಷ್ಟರಲ್ಲಾಗಲೇ ನನ್ನ ಸಂಸಾರಕ್ಕೆ ಎರಡೂವರೆ ದಶಕದ ತುಂಬಿತ್ತು.

ಅಂದು ಆರಂಭ ಶೂರತ್ವದ ಮೊದಲ ದಿನ. ನಾನು ಬೇಗ ಬೇಗ ಕೆಲಸ ಮುಗಿಸಿ ನನ್ನ  ಪಾಠ ಓದಿಕೊಳ್ಳಲು ಆರಂಭಿಸಿದೆ.ಯಾವ ಜನ್ಮದ ಪುಣ್ಯವೋ ಏನೋ!ನನ್ನ ಮೊದಲ ದಿನದ ಮೊದಲ ಪುಸ್ತಕದ ಮೊದಲ ಪಾಠವನ್ನು ಅರ್ಧ ಓದುವಷ್ಟರೊಳಗಾಗಿ ನಾನು ಹುಟ್ಟಿದಾರಭ್ಯ ಅನುಭವಿಸದಿದ್ದ ತೀವ್ರ ನಿದ್ರಾ ಬಯಕೆಯುಂಟಾಗಿ ಕೈಲಿ ಪುಸ್ತಕವನ್ನು ಹಿಡಿದೇ ಪಕ್ಕಕ್ಕೆ ಉರುಳಿಕೊಂಡವಳು ಗೊರಕೆ ಹೊಡೆಯತೊಡಗಿದೆ. ನಿಜ… ಅಕ್ಷರಶಃ ಗೊರಕೆ ಹೊಡೆಯತೊಡಗಿದೆ! ಸುದೀರ್ಘ ಎರಡು ತಾಸಿನ ಹಗಲು ನಿದ್ದೆಯ ನಂತರ ಎಚ್ಚರಾಗಿ ಸುತ್ತಲಿನ ಪ್ರಪಂಚವೆಲ್ಲವೂ ಹೊಸಹೊಸದಾಗಿ ಗೋಚರಿಸಿ ಇಲ್ಲಿವರೆಗೆ ಅನುಭವಕ್ಕೆ ದಕ್ಕಿದ ಸತ್ತಂತೆ ಮಲಗುವ ಸುಖದ ಮಂಪರಿನಲ್ಲಿ ಹಾಗೆ ಸ್ವಲ್ಪ ಹೊತ್ತು ಕುಳಿತೆ. ಸಾಯುವುದಕ್ಕೂ ಹಿಂದಿನ ಘಟನೆಗಳನ್ನು ಮೆಲುಕು ಹಾಕಿಕೊಂಡಾಗ ಆ ದಿನ ಬೆಳಿಗ್ಗೆ ಬೇಗ ಎದ್ದಿದ್ದು, ಹಿಂದಿನ ದಿನದ ದೈಹಿಕ ಶ್ರಮದ ಗದ್ದೆ ಕೆಲಸಗಳು, ರಾತ್ರಿ ಯಾಕೋ ಸಣ್ಣಗೆ ಅತ್ತಿದ್ದು ಎಲ್ಲವೂ ಸೇರಿ ಆಯಾಸವಾಗಿ ಹೀಗೆ ನಿದ್ರೆ ಹತ್ತಿದೆ ಎಂದು ಸ್ವಯಂ ಸಮಾಧಾನಿಸಿಕೊಂಡು ಅಡುಗೆ ಮನೆಗೆ ಓಡಿದೆ.

ವಿಧಿಲಿಖಿತವೋ ಹಣೆಬರಹವೋ ಯೋಗವೋ ಪ್ರಯೋಗವೋ ಗೊತ್ತಿಲ್ಲ. ಅಂದಿನಿಂದ ನನ್ನ ಮುಕ್ತ ವಿವಿಯ ಪಠ್ಯಪುಸ್ತಕಗಳನ್ನು ಓದಲು ತೆರೆದ ಹತ್ತೇ ನಿಮಿಷದಲ್ಲಿ ಒತ್ತರಿಸಿಕೊಂಡು ಬರುತ್ತಿದ್ದ ನಿದ್ರಾದೇವಿ ಇನ್ನಿಲ್ಲದಂತೆ ನನ್ನ ದೇಹ ಮನಸ್ಸುಗಳ ಮೇಲೆ ಹಕ್ಕು ಸ್ಥಾಪಿಸಿದಳು. ಈ ಬಗೆಯ ನಿದ್ರೆಯ ಯೋಗ ಅಚಾನಕ್ಕು ಒದಗಿ ನಾನು ಸಂಭ್ರಮವೋ ಭ್ರಮೆಯೋ ಎಂಬ ಗೊಂದಲದಲ್ಲಿದ್ದಾಗ ಮಕ್ಕಳು ಮತ್ತು ಮನೆಯವರಿಗೆ ನನ್ನ ಲಯಬದ್ದ ಗೊರಕೆ ಪರಮಾಶ್ಚರ್ಯ. ಹೇಗಾದರೂ ನನ್ನ  ಹೆಸರಿನ ಪಕ್ಕಕ್ಕೆ ಒಂದು ಡೆಸಿಗ್ನೇಶನ್ ಬರಲೇಬೇಕೆಂಬ ಹಠಕ್ಕೆ ಕಣ್ಣಿಗೆ ಎಣ್ಣೆ ಹಚ್ಚುವ, ರಾತ್ರಿ ಕಾಫಿ ಟೀ ಕುಡಿಯುವ, ಆಹಾರದ ಪ್ರಮಾಣ ಕಡಿಮೆ ಮಾಡುವ, ಕೊನೆಗೆ ಊಟವನ್ನೇ ಸ್ಕಿಪ್ ಮಾಡುವ ನನ್ನ ಎಲ್ಲಾ ಪ್ರಯೋಗಗಳು/ಶೋಧಗಳು ಮುಕ್ತ ವಿವಿಯ ಪಠ್ಯದ ಮುಂದೆ ಮಂಡಿಯೂರಿ ಗಾಢ ನಿದ್ರೆಯೊಂದಿಗೆ ಶರಣಾಗತಿ ಹೊಂದುತ್ತಿದ್ದವು. ಮೊದಲ ವರ್ಷದ ಪರೀಕ್ಷೆಗಳಿಗೆ ದಿನಾಂಕ ನಿಗದಿಯಾದ ಸಂದೇಶ ಬಂದಾಗ ‘ದೇವರೇ! ಎಂಥದು ಓದೇ ಇಲ್ಲವಲ್ಲ’ ಎಂಬ ಭಯಕ್ಕೆ ಹೊಸದಾಗಿ ಪುಸ್ತಕ ಹಿಡಿದದ್ದೂ ವ್ಯರ್ಥವಾಗಿ ನನ್ನದು ನಿಜ ಅರ್ಥದಲ್ಲಿ ಶೂನ್ಯ ಸಂಪಾದನೆಯಾಯಿತು.

‘ನಿದ್ರೆ ಬರುತ್ತಿಲ್ಲ/ ಬರಲಿಲ್ಲ’ ಎನ್ನುವ ನನ್ನ ವರಾತ ಆರಂಭವಾದಾಗಲೆಲ್ಲಾ ಮಕ್ಕಳು ಓಪನ್ ಯುನಿವರ್ಸಿಟಿಯ ಡಿಗ್ರಿಗೆ ಅಪ್ಲೈ ಮಾಡಲಾ ಎನ್ನುವ ಬೆದರಿಕೆ ಹಾಕಿ ಬಾಯಿ ಮುಚ್ಚಿಸುತ್ತಾರೆ. ವಿಶ್ವ ನಿದ್ರಾ ದಿನವೆಂಬ ಈ ಸುದಿನವನ್ನು ಯಾತಕ್ಕಾಗಿ ಮಹಾನುಭವರು ಹುಟ್ಟು ಹಾಕಿದರೋ  ತಿಳಿಯುತ್ತಿಲ್ಲ. ಆದರೆ ಅನಿದ್ರೆ ಅತಿನಿದ್ರೆಗಳೆರಡನ್ನೂ ನಿಭಾಯಿಸಿದ  ಅನುಭವದ ಮೇಲೆ ಒಂದು ಸಮತೋಲನ ಸ್ಥಿತಿಗಾಗಿ ಹತ್ತನೇ ತರಗತಿಯ ಪರೀಕ್ಷೆಯನ್ನು ಮುಕ್ತ ವಿವಿಯಲ್ಲಿ ಮತ್ತೊಮ್ಮೆ ಕಟ್ಟಬಹುದೇ ಅಂತ ಯೋಚಿಸುತ್ತಿದ್ದೇನೆ.

***

ಪರಿಚಯ : ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪುಟ್ಟಹಳ್ಳಿ ಹೆದ್ದುರ್ಗದಲ್ಲಿ ವಾಸವಾಗಿರುವ ನಂದಿನಿ ಹೆದ್ದುರ್ಗ ಅವರದು ಭೂಮಿಯನ್ನು ನಂಬಿದ ಬದುಕು. ಮೆಣಸು ಮತ್ತು ಕಾಫಿ ಬೆಳೆಗಾರ್ತಿಯಾಗಿರುವ ಅವರು ‘ಅಸ್ಮಿತೆ’ ಮತ್ತು ‘ಒಳಸೆಲೆ’ ಕವನ ಸಂಕಲನ, ‘ಬ್ರೂನೋ ದಿ ಡಾರ್ಲಿಂಗ್’ ಲವಲವಿಕೆಯ ಬರಹಗಳ ಸಂಕಲನ ಪ್ರಕಟ. ‘ರತಿಯ ಕಂಬನಿ’ ಬಿಡುಗಡೆಯಾಗಲಿರುವ ಕವನ ಸಂಕಲನ. ಪ್ಲ್ಯಾಂಟೆಷನ್ ಪತ್ರಿಕೆಗೆ ನಿಯಮಿತ ಬರಹ.

ಇದನ್ನೂ ಓದಿ : World Sleep Day; ನಿದ್ದೆ ಎಂಬ ಪದಕವಡೆ : ಎಂದೂ ಹಂದಾಡದ ಮಮತೆಯೆನ್ನುವ ಪದರಗಳ ನಡುವೆ

Published On - 6:08 pm, Fri, 19 March 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ