World Youth Skills Day 2021 : ಸ್ಥಳೀಯತೆಯಲ್ಲಿ ಬದುಕು ಜಾಗತಿಕದಲ್ಲಿ ಸವಾಲು

Humanity : ‘ಎಸ್​ಎಸ್​ಎಲ್​ಸಿಯ ನಂತರದ ಕಾಲೇಜು ಪಠ್ಯಗಳಲ್ಲಿ ಭಾಷೆ, ಮಾನವಿಕ ವಿಷಯಗಳು ಮರೆಯಾಗಿಬಿಟ್ಟಿವೆ. ಹೊಸ ತಲೆಮಾರಿನವರಿಗೆ ಈ ವಿಷಯಗಳು ಹೇಗೆ ಗೊತ್ತಾಗಬೇಕು? ತಾಂತ್ರಿಕ ಪರಿಣತಿಯಿಂದಷ್ಟೇ ಸಮಾಜದಲ್ಲಿ ಯಶಸ್ಸನ್ನು ಪಡೆಯಲಾಗದು. ಮೊದಲು ಮನುಷ್ಯರಾಗಬೇಕು ಅದಕ್ಕಾಗಿ ಸಹಾನುಭೂತಿ ಬೆಳೆಸಿಕೊಳ್ಳುವುದನ್ನು ಕಲಿಯಬೇಕು. ಸಮಾನತೆ ಇಲ್ಲದೇ ಇರುವಂಥ ಸ್ಪರ್ಧಾತ್ಮಕ ಮನೋಭಾವ ಹೊಂದಿರುವಂಥ ಸಮಾಜದಲ್ಲಿ ಆರ್ಥಿಕ ಉನ್ನತಿ ಸಾಧಿಸುವುದಷ್ಟೇ ಹಿರಿಮೆಯಲ್ಲ.’ ಕೇಶವ ಮಳಗಿ

World Youth Skills Day 2021 : ಸ್ಥಳೀಯತೆಯಲ್ಲಿ ಬದುಕು ಜಾಗತಿಕದಲ್ಲಿ ಸವಾಲು
Follow us
ಶ್ರೀದೇವಿ ಕಳಸದ
|

Updated on:Jul 15, 2021 | 7:44 PM

World Youth Skills Day 2021 : ಜಗತ್ತು ದಿನದಿಂದ ದಿನಕ್ಕೂ ಅಮೀಬಾದಂತೆ ಹೊರಳಾಡುತ್ತಿದೆ. ಅದರ ವೇಗಕ್ಕೆ ತಕ್ಕಂತೆ ನಮ್ಮನ್ನು ನಾವು ಹುರಿಗೊಳಿಸಿಕೊಳ್ಳುತ್ತ ನಿರ್ದಿಷ್ಟ ಆಕಾರ ಪಡೆದುಕೊಳ್ಳಲು ಶ್ರಮಿಸುತ್ತಿದ್ದೇವೆ. ಒಂದೆಡೆ ಯುವಪೀಳಿಗೆ ಓದಿಗೆ ಪೂರಕವಾದ ಕೌಶಲಗಳನ್ನು ವೃದ್ಧಿಪಡಿಸಿಕೊಳ್ಳುವ ಕೋರ್ಸ್​ಗಳಲ್ಲಿ ತಲ್ಲೀನವಾಗಿದೆ. ಇನ್ನೊಂದೆಡೆ ಓದಿಗೂ ಮಾಡುವ ಕೆಲಸಕ್ಕೂ ಸಂಬಂಧವಿಲ್ಲದಿದ್ದರೂ ಉತ್ಸಾಹದಿಂದ ತನ್ನ ಕಲಿಕಾ ಕೌಶಲವನ್ನು ಒರೆಗೆ ಹಚ್ಚಿಕೊಳ್ಳುವತ್ತ ಮಗ್ನವಾಗಿದೆ. ಮಗದೊಂದೆಡೆ ತಂತ್ರಜ್ಞಾನದಿಂದಲೇ ಅಸ್ತಿತ್ವ ಎಂಬಂತೆ ಮೆದುಳಿಗೆ ಚಕ್ರ ಕಟ್ಟಿಕೊಂಡು ಬದುಕುತ್ತಿದೆ. ಈ ಸಂದರ್ಭದಲ್ಲಿ ‘ಯುವಜನತೆ, ಕೌಶಲ ಅಭಿವೃದ್ಧಿ ಮತ್ತು ಪ್ರಸ್ತುತ ಸಮಾಜ’ ಈ ವಿಷಯವಾಗಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ನಡುವಿನ ವಿಚಾರವಂತರನ್ನು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವವರನ್ನು ಮಾತನಾಡಿಸಲಾಗಿ ಅವರಿಂದ ಹೊಮ್ಮಿದ ಅಭಿಪ್ರಾಯಗಳನ್ನು ನಿಮ್ಮ ಓದಿಗೆ ತೆರೆದಿಡಲಾಗಿದೆ.    

*

ಯುವಕುಶಲಿಗಳೇ ಭಾರತದ ದೊಡ್ಡ ಶಕ್ತಿ

‘ಕೊರೊನಾ ಮಹಾ ಪಿಡುಗಿನ ಸಂದರ್ಭದಲ್ಲಿ ಅತ್ಯಂತ ಸಕ್ರಿಯ ಭಾಗಿತ್ವದಿಂದ ಸಮಾಜಕ್ಕೆ ನೆರವಾದ ಯುವ ಕುಶಲಿಗಳು ಮುಂದಿನ ಸದೃಢ ಸಮಾಜದ ನಿರ್ಮಾಣದ ಸವಾಲನ್ನು ದಿಟ್ಟವಾಗಿ ಎದುರಿಸುತ್ತಾರೆ ಎಂಬ ಭರವಸೆ ನನಗಿದೆ. ಇಂತಹ ಹಲವು ಯುವ ಕುಶಲಿಗರನ್ನು ಸ್ವತಃ ನೋಡಿರುವ ನನಗೆ, ಬೃಹತ್ ಕಾರ್ಪೊರೇಟ್ ಸಂಸ್ಥೆಗಳಿಗೆ ಸಮನಾಗಿ ಇವರು ತಮ್ಮ ಸಾಧನೆಯನ್ನು ತೋರುತ್ತಾರೆ ಎಂಬ ಅತೀವ ವಿಶ್ವಾಸ ಇದೆ. ಹಲವು ಸ್ಟಾರ್ಟ್ ಅಪ್ ಸಂಸ್ಥೆಗಳು ತೋರಿರುವ ದಕ್ಷತೆ ನನ್ನನ್ನು ಬೆರಗುಗೊಳಿಸಿದೆ. ಯುವ ಕುಶಲಿಗಳೇ ಭಾರತದ ದೊಡ್ಡ ಶಕ್ತಿ. ಕೃಷಿ ಸೇರಿದಂತೆ ಎಲ್ಲ ರಂಗಗಳಲ್ಲೂ ಅವರ ಛಾಪು ಮೂಡಲಿದೆ.’ ಬೇಳೂರು ಸುದರ್ಶನ  ಮುಖ್ಯಮಂತ್ರಿಯವರ ಇ – ಆಡಳಿತ ಸಲಹೆಗಾರರು, ಕರ್ನಾಟಕ ಸರ್ಕಾರ.

*

ಅಕಾಡೆಮಿಕ್ ಜಿಡ್ಡನ್ನು ಖೊಡವಿ

ಆರ್ಥಿಕ ಉದಾರೀಕರಣದ ನಿರ್ಧಾರ ತೆಗೆದುಕೊಂಡ ತಕ್ಷಣ ಭಾರತಕ್ಕೆ ಅವಕಾಶಗಳ ಹೆಬ್ಬಾಗಿಲೇ ತೆರೆಯಿತು. 90 ದಶಕಗಳಲ್ಲಿ ಒಂದು ಸಿನೆಮಾ ನೋಡಿದರೂ ಅದರ ಕಥಾವಸ್ತು ನಿರುದ್ಯೋಗದ ಸುತ್ತವೇ ಹೆಣೆದುಕೊಂಡಿರುತ್ತಿತ್ತು. ಅಂದರೆ ಆ ದಶಕದದಲ್ಲಿ ನಿರುದ್ಯೋಗ ಸಮಸ್ಯೆ ಅನುಭವಿಸಿದಂಥ ನಮ್ಮ ಹಿರಿಯ ತಲೆಮಾರಿನವರಿಗೆ ಈಗಲೂ ಉದ್ಯೋಗದ ಕುರಿತಾದಂಥ ಅಭದ್ರತೆ ಇದ್ದೇ ಇದೆ. ಹೆಚ್ಚಿಗೆ ಸಂಬಳಕ್ಕಿಂತ ಭದ್ರತೆ ಕೊಡುವ ಕೆಲಸವನ್ನು ಅವರು ಇಷ್ಟಪಡುತ್ತಾರೆ.  ಆದರೆ 90ರ ದಶಕದ ನಂತರ ಜಾಗತೀಕರಣಕ್ಕೆ ತೆರೆದುಕೊಂಡಾಗ ಉದ್ಯೋಗಾವಕಾಶಗಳ ವಿಷಯವಾಗಿ ಆವಿಷ್ಕಾರವೇ ಆಯಿತು. ಕಾಲ್​ ಸೆಂಟರ್, ಪ್ರೈವೇಟ್ ಐಟಿ ಸೆಕ್ಟರ್​ಗಳು ತಲೆ ಎತ್ತಿ ನಿಂತುಕೊಂಡವು.  ಪದವಿ ಓದದಿದ್ದರೂ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುತ್ತದೆ ಎನ್ನುವ ಕಾರಣಕ್ಕೆ ಉದ್ಯೋಗಾವಕಾಶಗಳು ಲಭ್ಯವಾಗತೊಡಗಿದವು. ಉದ್ಯೋಗ ಭದ್ರತೆ ಮತ್ತು ಕೆಲಸದ ವೈಖರಿ ವಿಷಯವಾಗಿ ಈಗಲೂ ಇದು ಚರ್ಚಾಸ್ಪದ ವಿಷಯವೇ.

ಹೆಚ್ಚಿನ ಓದು ಇಲ್ಲದ ಇಂಥವರಿಗೆ, ಕೆಲಸ ಮಾಡುತ್ತಲೇ ಓದಬೇಕೆನ್ನುವ ಅನಿವಾರ್ಯತೆ ಇದ್ದವರಿಗೆ ಇದೊಂದು ವರದಾನವಾಯಿತು. ಆಗಿನಿಂದ ಈ ಉದ್ಯೋಗ ಅವಕಾಶಗಳು ಹೆಚ್ಚುತ್ತ ಹೋದವು. ಆದರೆ ಉದ್ಯೋಗ ಭದ್ರತೆ ಎನ್ನುವುದು ಮರೀಚಿಕೆ ಆಯಿತು. ಇನ್ನು ಐಟಿಯಲ್ಲಿ ಲಕ್ಷಾಂತರ ಹಣ ಗಳಿಸಿದರೂ ಉದ್ಯೋಗಭದ್ರತೆ ಇಲ್ಲ. ಇಂತಹ ಸಂದರ್ಭದಲ್ಲಿ ಬರೀ ಶಿಕ್ಷಣವಿದ್ದರೆ ಸಾಲದು ಸಮಯಕ್ಕೆ ತಕ್ಕಂತೆ ನಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎನ್ನುವುದು ಅನಿವಾರ್ಯ ಉಂಟಾಯಿತು. ಈಗ ಆಟೋಮೇಷನ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಇಂಥ ತಂತ್ರಜ್ಞಾನಗಳು ದಾಪುಗಾಲಿಡುತ್ತಿವೆ. ಇದು ಬೆಳೆದ ಹಾಗೆ ಮತ್ತೆ ಮತ್ತೆ ಉದ್ಯೋಗಾವಕಾಶಗಳು ಕಡಿಮೆಯಾಗುವ ಅಪಾಯವಿದೆ. ಇನ್ನೊಂದು ದಶಕದ ನಂತರ ತಂತ್ರಜ್ಞಾನ ಅದೆಷ್ಟು ದೈತ್ಯವಾಗಿ ಬೆಳೆದು ನಿಂತಿರುತ್ತದೆ ಎಂದರೆ, ಐನೂರು ಜನರ ಕೆಲಸವನ್ನು ನೂರು ಜನರು ಮಾಡುವಂಥ ಸಾಮರ್ಥ್ಯ ತಂತ್ರಜ್ಞಾನದಿಂದ ವೃದ್ಧಿಯಾಗುತ್ತದೆ. ಈ ಎಲ್ಲಾ ಬೆಳವಣಿಗೆಗೆ ತಕ್ಕಹಾಗೆ ಕೌಶಲವನ್ನು ಬೆಳೆಸಿಕೊಂಡಿದ್ದೇವಾ ಎನ್ನುವುದು ಪ್ರಶ್ನೆ.

ಪದವೀಧರರ ಸಂಖ್ಯೆ ಹೆಚ್ಚುತ್ತಿದೆ, ನಿರುದ್ಯೋಗ ಸಮಸ್ಯೆಯೂ ಹೆಚ್ಚುತ್ತಿದೆ. ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಬೇಕಾದಂಥ ಕೌಶಲಗಳನ್ನು ಬೆಳೆಸಬೇಕಿದೆ. ಕೆಲಸದ ಸ್ಥಳದಲ್ಲಿ ಇಂದು ಪಠ್ಯವೆಲ್ಲವೂ ಔಟ್​ಡೇಟೆಡ್. ಇದು ಎಂಜಿನಿಯರಿಂಗ್ ಮತ್ತು ವಿಜ್ಞಾನ ಪಠ್ಯಕ್ಕೂ ಸಂಬಂಧಿಸಿದ್ದಾಗಿದೆ. ಹೊಸ ಕೋರ್ಸ್​ಗಳು ಹುಟ್ಟುತ್ತಲೇ ಇವೆ. ಹಾಗೆಯೇ ಹೊಸ ಉದ್ಯೋಗಾವಕಾಶಗಳೂ. ಇನ್ನೊಂದೆಡೆ ಓದಿದ ಪದವಿಗೂ ಸಿಗುವ ಕೆಲಸಕ್ಕೂ ಸಂಬಂಧವಿಲ್ಲದೆ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚುತ್ತಿದೆ. ಇದರರ್ಥ ಹೊಸ ಕಂಪೆನಿಗಳು ನಮ್ಮ ಮಾರ್ಕ್ಸ್​ ಕಾರ್ಡ್ ನೋಡುತ್ತಿಲ್ಲ. ನಮ್ಮ ಕೌಶಲ ಮತ್ತು ಸಾಮರ್ಥ್ಯಗಳನ್ನು ಪರಿಗಣಿಸುತ್ತಿವೆ. ಉಳಿದಂತೆ ಸಂಬಂಧಿಸಿದ ವಿಷಯ ಜ್ಞಾನಕ್ಕಾಗಿ ಆನ್​ಲೈನ್​ ಕೋರ್ಸ್​ಗಳು ಲಭ್ಯವಿವೆ. ಕಂಪೆನಿಯ ನಿರೀಕ್ಷೆಗೆ ತಕ್ಕಂತೆ ಇವೆಲ್ಲವನ್ನೂ ಕಲಿಯಬೇಕು ರೂಢಿಸಿಕೊಳ್ಳಬೇಕು. ಈ ಒದ್ದಾಟ ನಿರಂತರವಾಗಿರುತ್ತದೆ. ಅದಕ್ಕಾಗಿ ಜಾಣತನ, ಹುಮ್ಮಸ್ಸು ತಾಳ್ಮೆ ಬೇಕೇಬೇಕು ಹೊಸ ಕಲಿಕೆಗೆ.

ಒಟ್ಟಾರೆಯಾಗಿ ಅಕಾಡೆಮಿಕ್ ಜಗತ್ತಿನ ಜಿಡ್ಡನ್ನು ಖೊಡವಿಕೊಂಡು ಇಂದಿನ ಯುವಪೀಳಿಗೆ ನಿಲ್ಲಬೇಕಿದೆ. ಉಪನ್ಯಾಸಕರು ಅವರ ಬೌದ್ಧಿಕಶಕ್ತಿಗೆ ಪರಂಪರಾಗತ ಪಠ್ಯದಿಂದ ಕಟ್ಟಿಹಾಕುವುದನ್ನು ಬಿಡಬೇಕಿದೆ. ಕ್ಯಾಂಪಸ್ಸಿನಾಚೆಯ ಜಗತ್ತಿಗೆ ಬೇಕಾದ ಕೌಶಲಗಳನ್ನು ಕಲಿಸುವಲ್ಲಿ ಆಸಕ್ತಿ ತೋರಿಸಬೇಕಿದೆ. ಮೇಘಾ ಎಲಿಗಾರ್, ಸ್ಟಾರ್ಟ್​ಅಪ್​ ಕಂಪೆನಿಯೊಂದರ ಉದ್ಯೋಗಿ.  

World Youth Skills Day 2021

ಬೇಳೂರು ಸುದರ್ಶನ ಮತ್ತು ಮೇಘಾ ಎಲೆಗಾರ

ಒಂದಕ್ಕೇ ಅಂಟಿಕೊಂಡರೆ ಬದುಕುವುದು ಅಸಾಧ್ಯ

ಕೌಶಲ ಎಂಬ ಶಬ್ದ ಕಾಣುವುದು ಕೇಳುವುದು ನಾವು ಕೆಲಸ ಹುಡುಕಲು ಆರಂಭಿಸಿದಾಗ. ಕೆಲಸ ಪಡೆಯಲು ಇನ್ಯಾರದ್ದೋ ರೆಸ್ಯೂಮೆಯಿಂದ ಈ ಶಬ್ದವನ್ನು ನಕಲು ಮಾಡಿಕೊಂಡಿರುತ್ತೇವೆ. ನಮಗೆ ಕೌಶಲ ಇರುತ್ತವೆಯೋ ಇಲ್ಲವೋ, ಖುದ್ದು ಗಲಿಬಿಲಿ ಆಗಿದ್ದರೂ ಸಂದರ್ಶಕರಿಗೆ ಇದು ಮುಖ್ಯ ಎನ್ನುವುದು ನಮ್ಮೆಲ್ಲರಿಗೂ ತಿಳಿದಿರುತ್ತದೆ. ನಾಯಕತ್ವ ಗುಣ, ವಿಮರ್ಶಾತ್ಮಕ ಆಲೋಚನೆ, ಸಂವಹನ ಕೌಶಲ, ಸೃಜನಶೀಲತೆ, ನಾವೀನ್ಯ ದೃಷ್ಟಿಕೋನ ಹೀಗೆ ಇನ್ನಿತರೆ ಕೌಶಲಗಳನ್ನು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉಳಿಯಲು ಬೇಕಾದ ಅಸ್ತ್ರಗಳೆಂಬಂತೆ ನೋಡಿ ಸೇರಿಸಿರುತ್ತೇವೆ. ಕೆಲಸ ಸಿಗದೇ ಇದ್ದಾಗ, ಹುಟ್ಟಿನಿಂದಲೇ ನಮ್ಮಲ್ಲಿ ಆ ಕೆಲಸಕ್ಕೆ ತಕ್ಕಂತಹ ಕೌಶಲಗಳು ನಮ್ಮಲ್ಲಿ ಇಲ್ಲವೆಂಬಂತಾದಾಗ ಸಂಬಂಧಿಸಿದ ಕೋಚಿಂಗ್ ಕ್ಲಾಸ್​ಗಳನ್ನು ಸೇರಿಕೊಳ್ಳುತ್ತೇವೆ. ಇದು ಹಣಗಳಿಕೆಗೆ ಬೇಕಾದಂಥ ಕಾರ್ಯಮಾರ್ಗ. ಆದರೆ ಬದುಕಲು ಕೇವಲ ಹಣ ಮಾತ್ರ ಸಾಲದು; ಬದುಕನ್ನು ಸುಂದರವಾಗಿ ಮತ್ತು ಸ್ವಸ್ಥವಾಗಿ ಇಟ್ಟುಕೊಳ್ಳಲು ಕೌಶಲಗಳು ಬೇಕೇಬೇಕು.

ಕೊರೊನಾಗೆ ಮೊದಲು ಪರಸ್ಪರ ಅವಲಂಬಿತ ಬದುಕಿಗೆ ನಾವು ಹೆಚ್ಚು ಒಗ್ಗಿಕೊಂಡಿದ್ದೆವು. ಅಡುಗೆ ಮಾಡುವುದು ಒಂದಷ್ಟು ಜನಕ್ಕೆ ಅನಿವಾರ್ಯ ಆಗಿರದೆ, ಹೋಟೆಲ್, ಮೆಸ್, ಸ್ವಿಗ್ಗಿ, ಝೊಮ್ಯಾಟೋ, ಫಾಸ್ಟ್ ಫುಡ್ ಮೇಲೆ ಅವಲಂಬಿಸಿದ್ದೆವು. ಅಥವಾ ಮನೆಯಲ್ಲಿ ಮಾಡಿ ಹಾಕುವವರಿದ್ದರೆ ತಲೆ ಕೆಡಿಸಿಕೊಳ್ಳದೆ ತಿಂದು ಏಳುತ್ತಿದ್ದೆವು.  ವರ್ಕಿಂಗ್ ಸ್ಕಿಲ್ ಇಟ್ಟುಕೊಂಡು ಸಾವಿರ, ಲಕ್ಷ, ಕೋಟಿ ಹಣ ಗಳಿಸುತ್ತೇವೆ; ಬಟ್ಟೆ ಒಗೆಯುವ, ಮಷಿನ್ಗೆ ಹಾಕುವ ಒಣಗಿಸುವ ದರ್ದು ನಮಗೇನು? ಅಡುಗೆ ಮಾಡುವ ಉಸಾಬರಿ ನಮಗ್ಯಾಕೆ? ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬ ಮನಸ್ಥಿತಿಯಲ್ಲಿದ್ದೆವು. ಜೀವನಕೌಶಲಗಳಿಗೆ ಅಂತಹ ಪ್ರಾಮುಖ್ಯತೆ ಕೊಟ್ಟು ನೋಡುವ ಹಂತಕ್ಕೆ ನಾವು ತಲುಪಿರಲಿಲ್ಲ.

ಆದರೆ ಇಂದು ಈ ಜೀವನಕೌಶಲಗಳೇ ಅನೇಕ ಜನರ ಬದುಕನ್ನು ಕಟ್ಟಿಕೊಡುತ್ತಿವೆ. ಇದು ಆನ್​ಲೈನ್​  ಕಾಲವಾಗಿರುವುದರಿಂದ ಅನೇಕರು ತಮ್ಮ ಅಡುಗೆ, ಹಾಡು, ನೃತ್ಯ, ಬರಹ, ಮಾತುಗಾರಿಕೆ, ಓದು, ಹಾಸ್ಯ, ತೋಟಗಾರಿಕೆ ಇವನ್ನೆಲ್ಲಾ ಕೊರೊನಾ ಕಾಲದಲ್ಲಿ ಹೆಚ್ಚಾಗಿ ಆನ್​ಲೈನ್​ ಪರದೆಗಳ ಮೇಲೆ ತಂದರು. ಹೀಗೆ ಸಂದರ್ಭಕ್ಕೆ ತಕ್ಕಂತೆ ಕೌಶಲಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ನಿರುದ್ಯೋಗ ಯುವ ಜನರನ್ನು ಕಾಡುತ್ತಿರುವಾಗ ಅದು ಮಾಡಲಾಗದು ಇದು ಮಾಡಲಾಗದು ಅಥವಾ ನನಗೆ ಬರುವುದು ಇದೊಂದೇ ಕೆಲಸ ಎಂದು ಹೊಸ ಹೊಸ ಕೌಶಲಗಳನ್ನು ಕಲಿಯದೆ ಇದ್ದರೆ ಜೇಬು ಖಾಲಿಯಾಗುವುದರ ಜೊತೆಗೆ ಮಾನಸಿಕವಾಗಿಯೂ ಕುಗ್ಗಬೇಕಾಗುತ್ತದೆ. ಕೃಷಿ, ಮನೆಗೆಲಸ, ನಮ್ಮ ಹವ್ಯಾಸಗಳನ್ನು ಗಳಿಕೆಗಾಗಿ ಬಳಸುವ ಕೌಶಲವನ್ನು ಮತ್ತು ಆನ್​ಲೈನ್​ ಮೂಲಕ ಯಾವುದೇ ಕೆಲಸವನ್ನು ಚಾನಲೈಸ್ ಮಾಡುವ ಕೌಶಲವನ್ನು ಕಲಿಯುವುದು ಅನಿವಾರ್ಯ ಮತ್ತು ಅಗತ್ಯ. ಚೈತ್ರಿಕಾ ಹರಗಿ ನಾಯ್ಕ್, ಡಿಜಿಟಲ್ ಕಂಟೆಂಟ್ ರೈಟರ್.

World Youth Skills Day 2021

ಕೇಶವ ಮಳಗಿ ಮತ್ತು ಚೈತ್ರಿಕಾ ಹರಗಿ ನಾಯ್ಕ್

ಪರ್ಯಾಯ ರಾಜಕಾರಣದ ಮೂಲಕ ತಾಂತ್ರಿಕ ಸಮಾನತೆ ಸಾಧಿಸುತ್ತಿದ್ದೇವೆಯೇ?

ಬಹಳ ಸಂಕೀರ್ಣವಾದ ಒಂದು ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಜಾಗತೀಕರಣ, ಆರ್ಥಿಕ ಉದಾರೀಕರಣ ಇತ್ಯಾದಿಗಳ ನೆಲೆಯಲ್ಲಿ. ಇಲ್ಲಿ ತಂತ್ರಜ್ಞಾನ ಎನ್ನುವುದು ಯಾವಾಗಲೂ ಎಲ್ಲ ಸಮುದಾಯಗಳಿಗೂ ಸವಾಲಾಗಿರುತ್ತದೆ. ಇದು ಎಲ್ಲರಿಗೂ ಸಮಾನವಾಗಿ ಲಭ್ಯವಾಗಿರುವುದಿಲ್ಲ. ಈ ಸ್ಪರ್ಧೆಯ ಏಣಿಯಲ್ಲಿ ಮೇಲೆ ಮೇಲೆ ಹೋಗುತ್ತಿರುವವರು ಸಾಮಾಜಿಕ ಚಲನಶೀಲತೆ ಪಡೆಯುತ್ತಾರೆ ಉಳಿದವರು ಹಿಂದೆ ಹಿಂದೆ ಉಳಿಯುತ್ತಿರುತ್ತಾರೆ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ನೋಡಿದರೆ ಈ ಮೂವತ್ತು ವರ್ಷಗಳ ಶಿಕ್ಷಣದಲ್ಲಿ ಮಾನವಿಕ ವಿಷಯಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ. ತಾಂತ್ರಿಕ ವಿಷಯಗಳ ಪರಿಣತಿ ಇರುವಂಥ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದೇವೆ. ಇದು ಸಮಾಜದಲ್ಲಿ ಅಸಮಾನತೆಯನ್ನು ಸೃಷ್ಟಿ ಮಾಡುತ್ತಿದೆ.

ವಿಜ್ಞಾನ ಮತ್ತು ತಾಂತ್ರಿಕ ಪರಿಣತಿಯನ್ನು ಹೊಂದಿರುವಂಥ ಶಿಕ್ಷಣವನ್ನು ಎಲ್ಲಾ ಸಮುದಾಯಗಳೂ ಪಡೆಯಲಾರವು. ಕೆಲ ಸಮುದಾಯಗಳಷ್ಟೇ ಈ ಕ್ಷೇತ್ರಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾದಾಗ ಅಸಮಾನತೆ ಉಂಟಾಗುತ್ತದೆ. ಈ ಅಸಮಾನತೆಯನ್ನು ಹೋಗಲಾಡಿಸಬೇಕೆಂದರೆ ಮತ್ತು ಜಾಗತಿಕವಾಗಿ ಆರ್ಥಿಕ ಸಮಾನತೆಯನ್ನು ಎಲ್ಲ ಸಮುದಾಯಗಳೂ ಒಟ್ಟಾಗಿ ಸಾಧಿಸಬೇಕೆಂದರೆ, ಶಿಕ್ಷಣದಲ್ಲಿ ಮೂಲಭೂತ ಬದಲಾವಣೆ ಅವಶ್ಯಕವಿದೆ. ಆದ್ದರಿಂದ ಮಾನವಿಕ ವಿಷಯಗಳೂ ಶಿಕ್ಷಣದಲ್ಲಿ ಪ್ರಾಧಾನ್ಯ ಪಡೆಯಬೇಕು. ತಾಂತ್ರಿಕ ಶಿಕ್ಷಣದಲ್ಲಿ ಕೂಡ ಈ ದೇಶದ ಇತಿಹಾಸ, ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಮಾನವಿಕಶಾಸ್ತ್ರದ ಅರಿವು ಇಲ್ಲದಿದ್ದರೆ ಉತ್ತಮ ನಾಗರಿಕರಾಗಿ ಬದುಕುವುದು ಶಕ್ಯವಾಗಲಾರದು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಗಮನಿಸಿದರೆ, ಯಾವುದೋ ಒಂದು ವಿಷಯದ ಬಗ್ಗೆ ಯುವಜನತೆ ಚರ್ಚೆ ಶುರುಮಾಡಿದಾಗ, ತೀವ್ರ ಮತ್ತು ವಿರುದ್ಧವಾದ ಧೃವೀಕರಣಗೊಂಡ ಅಭಿಪ್ರಾಯಗಳು ಸೃಷ್ಟಿಯಾಗುವುದನ್ನು ಕಾಣುತ್ತಿದ್ದೇವೆ.

ಎಸ್​ಎಸ್​ಎಲ್​ಸಿಯ ನಂತರ ಕಾಲೇಜು ಪಠ್ಯಗಳಲ್ಲಿ ಭಾಷೆ, ಮಾನವಿಕ ವಿಷಯಗಳು ಸಂಪೂರ್ಣ ಮರೆಯಾಗಿಬಿಟ್ಟಿವೆ. ಹೊಸ ತಲೆಮಾರಿನವರಿಗೆ ಈ ವಿಷಯಗಳು ಹೇಗೆ ಗೊತ್ತಾಗಬೇಕು? ತಾಂತ್ರಿಕ ಪರಿಣತಿಯಿಂದಷ್ಟೇ ಸಮಾಜದಲ್ಲಿ ಯಶಸ್ಸನ್ನು ಪಡೆಯಲಾಗದು. ಮೊದಲು ಮನುಷ್ಯರಾಗಬೇಕು ಅದಕ್ಕಾಗಿ ಸಹಾನುಭೂತಿ ಬೆಳೆಸಿಕೊಳ್ಳುವುದನ್ನು ಕಲಿಯಬೇಕು. ಸಮಾನತೆ ಇಲ್ಲದೇ ಇರುವಂಥ ಸ್ಪರ್ಧಾತ್ಮಕ ಮನೋಭಾವ ಹೊಂದಿರುವಂಥ ಸಮಾಜದಲ್ಲಿ ಆರ್ಥಿಕ ಉನ್ನತಿ ಸಾಧಿಸುವುದಷ್ಟೇ ದೊಡ್ಡದಲ್ಲ ಯಾವಾಗಲೂ. ಜಾಗತಿಕವಾಗಿ ನೋಡಿದಾಗ ಭಾರತೀಯ ಯುವಪೀಳಿಗೆ ಅದರಲ್ಲೂ ಏಷ್ಯಾ ಮತ್ತು ಆಫ್ರಿಕಾ ಸಂಸ್ಕೃತಿ ಇಡೀ ವಿಶ್ವದ ಸಂಸ್ಕೃತಿಗಳಿಗಿಂತ ಬೇರೆ ಬೇರೆ. ಯುರೋಪಿನ ವಿಚಾರಗಳಿಗೂ ಏಷ್ಯಾ ಮತ್ತು ಆಫ್ರಿಕಾ ವಿಚಾರಗಳಿಗೂ ಬಹಳ ವ್ಯತ್ಯಾಸವಿದ್ದು, ಸಮಸ್ಯೆಗಳನ್ನು ನಾವು ನೋಡುವ ದೃಷ್ಟಿಗೂ ಅವರು ನೋಡುವ ದೃಷ್ಟಿಗೂ ಭಿನ್ನತೆ ಇದ್ದೇ ಇರುತ್ತದೆ. ಆದರೆ, ಹೀಗೆ ತಥಾಕಥಿತ ಜಗತ್ತೆನ್ನುವುದೊಂದು ಇರುತ್ತದೆ; ತಂತ್ರಜ್ಞಾನದಲ್ಲಿ ಸಮಾನತೆ ಸಾಧಿಸುವುದು ಎಂದಾಕ್ಷಣ ಕಂಪ್ಯೂಟರ್ ಮೂಲಕ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಕ್ಷರರಾಗುವುದು, ಅತೀ ಸಂಕೀರ್ಣವಾದ ವಿಷಯಗಳನ್ನು ತಿಳಿದುಕೊಳ್ಳುವುದು ಅಂತಲ್ಲ. ಮತ್ತೆ ಇದು ಸರಿಯಾದ ವಿಧಾನವೇ ಅಲ್ಲ.

ಗಾಂಧೀಜಿಯವರು ಕೂಡ ಸಾಮುದಾಯಿಕವಾಗಿ ಪ್ರಯೋಜನಕ್ಕೆ ಬಾರದ ತಂತ್ರಜ್ಞಾನದ ಬಗ್ಗೆ ಬಹಳ ಪ್ರಬಲವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು. ನಾವು ಈವತ್ತು ಪರ್ಯಾಯ ರಾಜಕಾರಣದ ಮೂಲಕ ತಾಂತ್ರಿಕ ಸಮಾನತೆಯನ್ನು ಸಾಧಿಸಬೇಕು ಎನ್ನುವ ನಿಟ್ಟಿನಲ್ಲಿ ಮಾತನಾಡುತ್ತಿದ್ದೇನೆ. ತಂತ್ರಜ್ಞಾನವೆಂದರೆ ಸಾಫ್ಟ್​ವೇರ್, ಇಸ್ರೋ, ನಾಸಾ ಮಾತ್ರ ಅಲ್ಲ. ಕರ್ನಾಟಕದ ಮಲೆನಾಡು ಮತ್ತು ಗ್ರಾಮೀಣ ಭಾಗಗಳಲ್ಲಿ ಕೃಷಿಗೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರಗಳನ್ನು ಮಾಡಿದ ಸಾಮಾನ್ಯ ರೈತರಿದ್ದಾರೆ. ಇದು ಸಾಮಾನ್ಯರ ಬದುಕಿಗೆ ಸಹಾಯವಾಗುತ್ತಿದೆ.  ತೆಂಗಿನ ಮರ ಹತ್ತುವುದು, ಹರಿವ ನೀರಿನಿಂದ ವಿದ್ಯುತ್ ಉತ್ಪಾದಿಸುವುದು, ಇಂಗುಗುಂಡಿಗಳನ್ನು ಹೊಸ ವಿಧಾನಗಳಲ್ಲಿ ನಿರ್ಮಿಸುವುದು ಇವೂ ಆವಿಷ್ಕಾರಗಳೇ. ಆದರೆ ಈಗ ‘ವೈಜ್ಞಾನಿಕ ಆವಿಷ್ಕಾರ’ ಎನ್ನುವುದು ಇರುವವರು ಮತ್ತು ಇಲ್ಲದೇ ಇರುವವರ ಮಧ್ಯೆ ಅಪಾರವಾದ ಕಂದಕವನ್ನು ಸೃಷ್ಟಿಸುತ್ತಿದೆ.

ಸಣ್ಣ ಸಮಾಜಗಳಾಗಿ ನಮ್ಮ ನಮ್ಮ ನೆಲೆಯಲ್ಲಿ ಜನೋಪಯೋಗಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ಕೊಡಬೇಕು. ಈ ಮೂಲಕ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಾನತೆಯನ್ನು ಪಡೆಯುವ ನಿಟ್ಟಿನಲ್ಲಿ ಸಹಾಯ ಮಾಡುವ ನಿಟ್ಟಿನಲ್ಲಿ ಇರಬೇಕು. ಜಾಗತಿಕ ಆರ್ಥಿಕತೆ ಎಂದ ತಕ್ಷಣ ಎಂಎನ್​ಸಿಯಲ್ಲಿ ಕೆಲಸ ಮಾಡುವ ಮೂಲಕ ಆರ್ಥಿಕ ಸಮಾನತೆ ಸಾಧಿಸುವುದಂತಲ್ಲ. ಅಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಅಂಶಗಳೇ ಇರುವುದಿಲ್ಲ. ನಮ್ಮಲ್ಲಿ ಸ್ಥಳೀಯವಾಗಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿವೆ. ಇವೂ ಕೂಡ ಆಧುನಿಕ ಜಾಗತಿಕ ಆರ್ಥಿಕ ವ್ಯವಸ್ಥೆಗೆ ಪರ್ಯಾಯವನ್ನು ಹುಡುಕುವ ತಂತ್ರಜ್ಞಾನವನ್ನೇ ರೂಪಿಸುತ್ತಿವೆ. ಕೃಷಿ ಮತ್ತು ಗುಡಿಕೈಗಾರಿಕೆಯಲ್ಲಿ ಈ ಥರದ ಪ್ರಯತ್ನಗಳಾಗುತ್ತಿದ್ದು, ಸ್ಥಳೀಯತೆಯಲ್ಲಿ ಬದುಕುತ್ತಾ ಜಾಗತಿಕ ಸವಾಲುಗಳನ್ನು ಎದುರಿಸುವ ಪ್ರಯತ್ನಗಳಾಗುತ್ತಿವೆ. ಯುವಜನತೆ ಈ ನಿಟ್ಟಿನತ್ತ ಗಮನಹರಿಸಿ ಕೌಶಲಗಳನ್ನು ರೂಢಿಸಿಕೊಳ್ಳುವುದು ಅನಿವಾರ್ಯವಿದೆ. ಕೇಶವ ಮಳಗಿ, ಹಿರಿಯ ಸಾಹಿತಿ.

ಇದನ್ನೂ ಓದಿ : World Youth Skill Day 2021: ಯುವಜನರ ಕೌಶಲಾಭಿವೃದ್ಧಿ ರಾಷ್ಟ್ರೀಯ ಅಗತ್ಯತೆ: ಪ್ರಧಾನಿ ಮೋದಿ

Published On - 7:27 pm, Thu, 15 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ