ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.
ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com
ಧಾರವಾಡದ ಸಂಧ್ಯಾ ನರೇಂದ್ರ ಈಗಿರೂದು ಬೆಂಗಳೂರಿನ್ಯಾಗ. ಬ್ಯಾಸರಾದಾಗೆಲ್ಲಾ ವೀಣಾ ನುಡಸ್ತಾರು, ಚಿತ್ರಾ ಬಿಡಸ್ತಾರು. ಈಗಿಲ್ಲಿ ಸಣ್ಣವ್ರಿದ್ದಾಗಿನ ನೆನಪಗೋಳ್ನ ಹಂಗ ಹಂಗ ಸುರಳಿಹೋಳಿಗಿ ಬಿಚ್ಕೋತ ಹೋದಂಗ ಹೋಗ್ಯಾರು. ಓದ್ರಿ…
*
ಊರು ಅಂದ್ರ ಧಾರಾನಗರಿ. ಬೇಂದ್ರೆ, ಪೇಢೆ, ದೊಡ್ಡ ನಗಿ, ಸುಳ್ಳು ಜಗಳ, ಯುನಿವರ್ಸಿಟಿ, ಮೆಂಟಲ್ ಹಾಸ್ಪಿಟಲ್ ಹಿಂಗ ಯಾವುದಕ್ಕೆಲ್ಲ ಜಗತ್ಪ್ರಸಿದ್ಧ. ಧಾರವಾಡದ ಬಗ್ಗೆ ಯಾಕ ಹೇಳ್ಳೀಕತ್ತೀನಿ ಅಂದ್ರ ನನ್ನ ಬಾಲ್ಯದ ದಿನಗಳನ್ನ ಕಳೆದ ಚಂದದ ಊರು. ಇಂಥ ಧಾರವಾಡದ ಮಾಳಮಡ್ಡಿಯ ಪತ್ರಾವಳಿ ಚಾಳ್ದೊಳಗ ಒಂದು ಮೂರು ಖೋಲೀ ಅರಮನಿ. ಅದರೊಳಗ ನಮ್ಮ ಅಜ್ಜ ಪ್ರಾಥಮಿಕ ಶಾಲಾ ಶಿಕ್ಷಕ ರಾಮಣ್ಣ ಮಾಸ್ತರ್ ತಮ್ಮ ಹೆಂಡತಿ ಮತ್ತ ಎಂಟು (ಏಳು ಗಂಡು ಮತ್ತು ಒಬ್ಬಳು ಹೆಣ್ಣು ಮಗಳು, ನಮ್ಮಮ್ಮ) ಮಕ್ಕಳ ಜೋಡಿ ಸಮಾಧಾನದ ಸಂಸಾರದಲ್ಲಿ ಮಗ್ನರು.
ಈ ಎಂಟು ಮಕ್ಕಳಿಂದಾಗಿ ನಾವು ಹದಿನೆಂಟು ಮಂದಿ ಮೊಮ್ಮಕ್ಕಳು. ಮೇ ಸೂಟಿ ಬಂತಂದ್ರ ಸಾಕು ಅಜ್ಜಿ ಮನಿ ಅಂತ ಧಾರವಾಡಕ್ಕ ಓಡೂದs. ಅಜ್ಜಾ ಅಜ್ಜಿ ಅಂತೂ ಮೊಮ್ಮಕ್ಕಳು ಬರೂದನ್ನs ಕಾಯ್ತಿದ್ರು. ಹದಿನೆಂಟು ಮೊಮ್ಮಕ್ಕಳ ಗದ್ದಲಾ ಅಂದ್ರ ಅವರಿಗೂ ಭಾಳ ಪ್ರೀತಿ. ಇಡೀ ದಿನಾ ಆಟ ಆಟ ಆಟ. ಟೈಮ್ ಹೋದದ್ದs ಗೊತ್ತಾಗ್ತಿರ್ಲಿಲ್ಲ. ದಿನಾ ಪಾಳಿ ಮ್ಯಾಲೆ ಒಬ್ಬೊಬ್ಬರು ಮೊಮ್ಮಕ್ಕಳು ಅಜ್ಜನ ಕಾಲು ಒತ್ತೋದು. ಒಂದಿನಾ ಅಂತೂ ಅಜ್ಜಾ ಮಲ್ಕೊಂಡಾಗ ನಾನು ಅವಗ ಇರೋ ನಾಕು ಕೂದಲದಾಗ ಜುಟ್ಟಾ ಹಾಕಿದ್ದೆ. ಅದೇ ಟೈಮಿಗೆ ಕರೆಕ್ಟಾಗಿ ಯಾರೋ ಅವರ ಗೆಳ್ಯಾ ಬಾಗಲಾ ಬಾರಿಸಿದ್ರು. ನಿದ್ದಿಗಣ್ಣಾಗ ಅಜ್ಜಾ ಹಂಗ ಎದ್ದು ಹೋಗಿ ಬಾಗಲಾ ತಗದ್ರು ನೋಡ್ರಿ, ಒಳಗ ಬಂದ ಅಜ್ಜಾನ ಗೆಳ್ಯಾ ಏನ್ರೀ ಮಾಸ್ತರs ಇದೆಲ್ಲಾ ಅಂತ ಬಿದ್ದು ಬಿದ್ದು ನಗ್ಲಿಕ್ಕೆ ಸುರು ಮಾಡಿದ್ರು. ಎಲ್ಲಾ ಮೊಮ್ಮಕ್ಕಳ ಆಟ ನೋಡ್ರಿಪಾ ಅಂತ ಅಜ್ಜನೂ ಅವರ ಜೋಡಿ ಸೇರ್ಕೊಂಡು ತಾನೂ ನಕ್ಕ. ಅಜ್ಜಗ ಕಾಟಾ ಕೊಟ್ಟು ನಾವು ಒಳಗೆ ಹೋಗಿ ಮುಸಿ ಮುಸಿ ನಗೋದು ವಾಸ್ ಎ ಡೇಲೀ ಅಫೇರ್.
ಅಜ್ಜಾನು ಏನೂ ಕಡಿಮೆ ಇರ್ಲಿಲ್ಲಾ. ಏನಾದ್ರೂ ಚಾಷ್ಟಿ ಮಾಡ್ಕೋತ ನಮ್ಮನ್ನೂ ನಗಸ್ಕೋತ ಇರ್ತಿದ್ದ. ಮುಂಜಾನೆ ಏಳೂದ್ರಾಗ ಒಬ್ಬಕಿದು ಒಂದು ಹೆರಳು ಇನ್ನೊಬ್ಬಕಿದು ಒಂದು ಹೆರಳು ಕೂಡಿಸಿ ಗಂಟು ಹಾಕ್ತಿದ್ದ. ಅಜ್ಜನ ಮ್ಯಾಲೆ ಸಿಟ್ಟು ಬರ್ತಿತ್ತು. ಆದ್ರ ಭಾಳೊತ್ತು ಇರ್ತಿದ್ದಿಲ್ಲಾ. ಆದ್ರ ಅಜ್ಜಿ ಮಾತ್ರ ನಮಗೆಲ್ಲಾ ಮುತ್ತು ಮಣಿ ಸರ ಮಾಡಿ ಕೊರಳಿಗೆ ಹಾಕಿ ಎಷ್ಟ ಚಂದ ಕಾಣ್ತೀರವಾ ಅಂತ ಮುದ್ದು ಮಾಡಾಕಿ. ಹಾಡು ಡಾನ್ಸು ಕಲಿಸಾಕಿ. ಅದ್ರಾಗs ಖುಷಿ ಪಡಾಕಿ. ಮಣ್ಣಿಂದ ಗಣಪತಿ, ರಾಮ, ಹನುಮಪ್ಪನ್ನ ಭಾಳ ಛಂದ ಮಾಡಾಕಿ. ಅಜ್ಜಾ ದಿನಾ ಒಂದು ಹಿತ್ತಾಳೆ ಕಲಬತ್ತಿನಾಗ ಎಲಿ ಅಡಿಕಿ ಕುಟ್ಟತಿದ್ದಾ. ತಾಜಾ ಅಂಬಾಡಿ ಎಲಿ, ಹಾಲಡಕಿ ಪುಡಿ, ಸುಣ್ಣ, ಯಾಲಕ್ಕಿ, ಲವಂಗ, ಸುವಾಸಿತ ಕಾಚು ಹಾಕಿ ಸಣ್ಣಂಗ ಕುಟ್ತಿದ್ದಾ. ಎಲ್ಲಾರ್ಗೂ ಚೂರು ಚೂರು ತಿನ್ಲಿಕ್ಕೆ ಕೊಡ್ತಿದ್ದಾ. ಅದರ ರುಚಿ ಆಹಾ! ಇನ್ನೂ ನಾಲಿಗಿ ಮ್ಯಾಲ ಹಂಗ ಅದ. ನಾ ಕುಟ್ತೀನಿ, ನಾ ಕುಟ್ತೀನಿ ಅಂತ ಜಗಳ ನಮ್ದು. ಕುಟ್ಟಿದವ್ರಿಗೆ ಜಾಸ್ತಿ ಸಿಗ್ತದ ಅಂತ ಆಶಾ. ಕುಟ್ಟಿದ ಕವಳ ಒಂದ ಪ್ಲಾಸ್ಟಿಕ್ ಚೀಲದಾಗ ಹಾಕಿ ಮುಚ್ಚಿಡ್ತಿದ್ದಾ ನಮಗ ಸಿಗಬಾರದಂತ. ಅಜ್ಜಾ ಚಾಪಿ ಕೆಳಗ ನುಗ್ಗಿದ್ರ, ಅವನ ಮೊಮ್ಮಕ್ಳು ನಾವು. ರಂಗೋಲಿ ಕೆಳಗ ನುಗ್ಗವ್ರು. ಅಂತೂ ಹೆಂಗೋ ಹುಡ್ಕೂಂಡು ತಿಂದು ಖಾಲಿ ಮಾಡ್ತಿದ್ವಿ. ಮತ್ತ ಕುಟ್ಟಿ ಕೊಡ್ರಿ ಅಂತ ಗಂಟ ಬೀಳವಾ.
ನಮ್ಮ ಇಬ್ಬರು ಸೋದರ ಮಾವಂದಿರಿಗೆ ಧಾರವಾಡ ಆಕಾಶವಾಣಿ ಒಳಗ ಕೆಲಸ, ಹಂಗಾಗಿ ನಮ್ಮ ಟೋಳಿ ದಾಳಿ ಆಗಾಗ ಆಕಾಶವಾಣಿಯ ಗಿಳಿವಿಂಡು ಕಾರ್ಯಕ್ರಮದ ಮ್ಯಾಲ. ಹಿರೇಮಠ ಕಾಕಾ, ಅಕ್ಕಮ್ಮ ಜೋಡಿ ಮಾತು, ಹಾಡು ಮತ್ತು ನಾವು ಹುಡುಗರು ಸೇರಿ ಆಡಿದ ‘ಪ್ರಾಣಿಗಳಿಗೆ ಮಾತು ಬಂತು’ ನಾಟಕ ಎಲ್ಲ ನಿನ್ನೆ ಮೊನ್ನೆ ನಡಧಂಗ ಅದ. ಆ ನಾಟಕದಾಗ ಒಬ್ಬೂಬ್ರು ಒಂದೊಂದು ಪ್ರಾಣಿ ಪಾತ್ರಾ ಮಾಡಿದ್ವಿ. ಸ್ವಲ್ಪ ದಿನಾ ಅವರವರ ಹೆಸರಿನ ಬದ್ಲಿ ಎಮ್ಮಿ, ನಾಯಿ, ಬೆಕ್ಕು ಅಂತನss ಕರೀತಿದ್ವಿ.
ಅಟ್ಟದ ಮ್ಯಾಲಿನ ಮನ್ಯಾಗ ಹಾಡು ಹಾಡಿದ್ದೇ ಹಾಡಿದ್ದು ಕುಣಿದಿದ್ದೇ ಕುಣಿದಿದ್ದು. ಪ್ರವೀಣ್ ಹಾಡು, ಡ್ಯಾನ್ಸಲ್ಲಿ ಎತ್ತಿದ ಕೈ. ಅಂವಾ ಡ್ಯಾನ್ಸು ಮಾಡ್ತಿದ್ರ ನಾವು ಕಣ್ ಬಿಟ್ಕೊಂಡು ಹಂಗ ನೋಡ್ತಿದ್ವಿ. ಅವ ಈಗ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ. ನಾವ ನಾವ ಏನೇನೋ ಹೊಸಾ ಆಟಾ ಹುಡ್ಕೊಂಡು ಆಡ್ತಿದ್ವಿ. ಪಡಸಾಲಿಗೆ ಒಂದು ದುಂಡಂದು ಖಿಡಕಿ ಇತ್ತು. ಕೆಳಗ ಯಾರಾದ್ರೂ ಓಡ್ಯಾಡಿದ್ರ ಪಡಸಾಲಿ ಗ್ವಾಡಿ ಮ್ಯಾಲೆ ಅವರ ನೆರಳು ಕಾಣ್ತಿತ್ತು. ಇದನ್ನ ತೊಗೊಂಡು ಒಂದ ಕ್ರಿಯೇಟಿವ್ ಐಡಿಯಾ ಮಾಡಿದ್ವಿ. ಪಡಸಾಲಿ ಬಾಗಲಾ ಹಾಕಿ ಕತ್ತಲಿ ಮಾಡೂದು. ಇಬ್ರು ಕೆಳಗ ಹೋಗಿ ಡಾನ್ಸ್ ಮಾಡೋದು. ಗ್ವಾಡಿ ಮ್ಯಾಲೆ ನಮ್ಮ ಡಾನ್ಸ್ ನೋಡಿ ನಾವ ನಗೋದು. ಒಂದಿನಾನೂ ಬ್ಯಾಸರಾ ಅಂತ ಅನ್ಲೇ ಇಲ್ಲಾ. ರಾತ್ರಿ ಒಂದು ಝಮಖಾನಿ ಹಾಸಿ ಎಲ್ಲಾರೂ ಸಾಲ್ ಹಿಡದು ಮಲ್ಕೋಳ್ಳೂದು. ವಟಾವಟಾ ಪಿಟಿಪಟಿ ಹಂಗs ಚಾಲೂನs ಇರ್ತಿತ್ತು. ಸಾಕು ಮಕ್ಕೋರಿ ಅಂತ ಅಜ್ಜಾ ಬೈದಾಗ ಮುಸುಕು ಹಾಕ್ಕೊಂಡು ಮತ್ತ ಪಿಸಪಿಸಾ ಗುಸುಗುಸು ಸುರು.
ಆವಾಗಾವಾಗ ಮಾಮಾ ಎಲ್ಲಾರ್ನೂ ಕರ್ಕೊಂಡು ಯುನಿವರ್ಸಿಟಿ, ಉಳವಿ ಬಸಪ್ಪನ ಗುಡಿ, ಆಝಾದ್ ಪಾರ್ಕ್ ಅಂತೆಲ್ಲಾ ಸುತ್ತಸ್ತಿದ್ದ. ಹೋಟೆಲಕ್ಕ ಹೋಗಿ ಮಸಾಲಿ ದ್ವಾಸಿ ತಿನ್ನೂದಂದ್ರ ಎಲ್ಲಿಲ್ಲದ ಸಂಭ್ರಮಾ. ದ್ವಾಸಿ ತಿಂದು ಛಂದಂಗ ಕೈ ತೊಳ್ಕೋತಿದ್ದಿಲ್ಲಾ. ಆ ಮಸಾಲಿ ಘಮಾ ಹಂಗ ಭಾಳೊತ್ತಿರ್ಲಿ ಅಂತ. ಮನೀಗೆ ಬಂದು ಅಜ್ಜಾಗ ಕೈ ವಾಸ್ನಿ ತೋರ್ಸಿ ನಾ ಏನ್ ತಿಂದೀನಿ ಹೇಳು ಅನ್ನೋದು, ಅವಾ ನನ್ನ ಬಿಟ್ ತಿಂದ್ರ್ಯಾ ಅಂತ ಪ್ರೀತಿಲೇ ಒಂದು ಏಟು ಹಾಕೋದು ಭಾಳ ಮಜಾ. ಒಂದ ಸಲಾ ಅಜ್ಜಾಗ 10 ರೂಪಾಯಿ ಲಾಟರಿ ಹತ್ತಿತ್ತು. ನಾವೆಲ್ಲಾ ಪಾರ್ಟಿ ಕೊಡಸು ಅಂತ್ಹೇಳಿ ಡಬಲ್ ಖರ್ಚು ಮಾಡ್ಸಿದ್ವಿ.
ಮನಿ ಮುಂದ ಪ್ಯಾರಲ ಹಣ್ಣಿನ ಗಿಡಾ ಇತ್ತು. ಹಣ್ಣು ಆಗ್ಲಿಕ್ಕೇ ಬಿಡ್ತಿದ್ದಿಲ್ಲಾ, ಕಸಕ್ ಕಾಯಿ ತಿನ್ಕೋತ ಅಡ್ಯಾಡ್ತಿದ್ವಿ. ಹಚ್ಚಿದ ಅವಲಕ್ಕಿ ಅಂದ್ರ ಮುಗೀತು. ಕಟ್ಟಿ ಮ್ಯಾಲೆ ಕುತ್ಕೊಂಡು ತಿಂತಿದ್ರ ಆಹಾ! ಸ್ವರ್ಗ ಸುಖ. ಊಟ ಆದ ಮ್ಯಾಲೆ ಉಪ್ಪಿನಕಾಯಿ ನೆಕ್ಕೋತ ಮಜಾ ಮಾಡ್ತಿದ್ವಿ. ಒಂದಿನಾ ಈ ಗಂಡು ಹುಡುಗ್ರು ಕೆರಿಯಿಂದ ಏಡಿ ಹಿಡ್ಕೊಂಡು ಬಂದು ‘ಅಂಜುವವರ ಮ್ಯಾಲೆ ಕಪ್ಪಿ ಎಸದಂಗ’ ಅನ್ನೋರ ತರಾ ನಮ್ಮನ್ನೆಲ್ಲಾ ಹೆದರ್ಸಿದ್ರು. ಅಜ್ಜಾ ಬಂದು ಎಲ್ಲಾರ್ನೂ ಬಯ್ದು ಏಡಿ ತೊಗೊಂಡು ದೂರ ಬಿಟ್ಟು ಬಂದಿದ್ದಾ. ಆವಾಗ ಅಜ್ಜನ ಮ್ಯಾಲೆ ಸಿಟ್ಟು ಬಂದಿತ್ತು. ಆದ್ರ ನಾವೂ ವಿಚಾರ ಮಾಡಿದಾಗ ಹೌದು ಮೂಕ ಪ್ರಾಣಿಗಳಿಗೆ ಹಂಗ ತ್ರಾಸು ಕೊಡಬಾರದು ಅಂತ ಅನಸ್ತು. ಅಜ್ಜಾ ಮಾಡೂದೆಲ್ಲಾ ನಮ್ಮ ಒಳ್ಳೇದಕ್ಕ ಅಂತ ಗೊತ್ತಾತು.
ಧಾರವಾಡದ ರೈಲ್ವೆ ಸ್ಟೇಷನ್ ಅಂತೂ ಮರೀಲಿಕ್ಕೇ ಆಗಂಗಿಲ್ಲಾ. ದಿನಾ ಸಂಜಿಮುಂದ ಅಡ್ಯಾಡ್ಕೋತ ಹೋಗಿ ಅಲ್ಲೊಂದಿಷ್ಟು ಆಟಾ ಆಡಿ ಬರೋದು. ಯಾವುದೇ ಹೆದರಿಕೆ ಇಲ್ಲದನ ಕಣ್ಣಾಮುಚ್ಚಾಲೆ ಆಟ ಆಡ್ತಿದ್ವಿ.ಈಗಿನ ಹಂಗ ಜನಜಂಗುಳಿ ಅಷ್ಟು ಇರ್ತಿದ್ದಿಲ್ಲಾ. ಟರ್ನ ಟೇಬಲ್ ಅಂದ್ರ ನಮಗ ಈಗಿನ ವಂಡರ್ ಲಾ ಇದ್ದಂಗ. ಇಂಜಿನ್ ಜೋಡಿ ಟರ್ನ್ ಮಾಡ್ಕೊಂಡು ಬಂದು ಖುಷಿ ಪಡ್ತಿದ್ವೆಲ್ಲಾ ಆಹಾ ಬ್ಯಾಡದು! ಒಂದೊಂದ್ಸಲ ಇಂಜಿನ್ ಜೊತಿ ಅತ್ತಿಕೊಳ್ಳದ ತನಕಾ ಹೋಗ್ತಿದ್ವಿ. ಒಂದಾ ಎರಡಾ ಬಾಲ್ಯದ ನೆನಪುಗಳು. ನಮ್ಮಷ್ಟು ಆಡಿ ಆನಂದಿಸಿದವರು ಯಾರೂ ಇರ್ಲಿಕ್ಕಿಲ್ಲಾ. ಎಷ್ಟು ಪುಣ್ಯ ಮಾಡಿದ್ವಿ ಅಂತಹ ಅಜ್ಜಾ ಅಜ್ಜಿ ಕಸಿನ್ಸ್ ಪಡೀಲಿಕ್ಕೆ. ಇಂಟರ್ನೆಟ್, ಮೊಬೈಲು ಇಲ್ಲದ ದಿನಗಳ ನಮ್ಮ ಬಾಲ್ಯ ಅವಿಸ್ಮರಣೀಯ. ಪ್ರತಿಯೊಂದು ಆಟ-ಪಾಠ, ಹುಡುಗಾಟ, ನಗು-ಅಳು, ಸಿಟ್ಟು-ಸೆಡವು, ಮನಸ್ಸೆಂಬ ಕ್ಯಾಮರಾದಾಗ ಸೆರೆ ಹಿಡ್ಕೊಂಡು ಆವಾಗಾವಾಗ ನೆನಪು ಮಾಡ್ಕೊಂಡು ಆ ಅಲ್ಬಮ್ ಕಣ್ಣ ಮುಂದ ತೊಗೊಂಡು ಪುಳಕಗೊಳ್ತೀವಿ.
ಬೇಂದ್ರೆ ಮಾಸ್ತರು ಸಣ್ಣ ಸ್ವಾಮರಾ ಹಾಡಿನ್ಯಾಗ ಹೇಳ್ತಾರಲಾ ಹಂಗ ‘ಎಲ್ಲಿ ಹೋದಾವೋ ಆ ಕಾಲಾ’ ಅಂದ್ರ ಎಲ್ಲಿ ಹೋದೂಪಾ ಆ ಕಾಲ ಅಂತ ಹಳಹಳಕಿ ಅಲ್ಲಾ, ಎಲ್ಲಿ ಹೋಗ್ತಾವ ಆ ಕಾಲ ನಮ್ಮ ಜೋಡಿನs ಸದಾ ಇರ್ತಾವ ಅನ್ನೋ ಭರವಸಿ.
ಇದನ್ನೂ ಓದಿ : Memories : ಏಸೊಂದು ಮುದವಿತ್ತು : ಕೊಡೊಲೆ ಬಿಡೊಲೆ ಬಿಡ್ತಿಲ್ಲೇ ಮಣ್ಣೊಲೆ