Memories : ಏಸೊಂದು ಮುದವಿತ್ತು : ಕೊಡೊಲೆ ಬಿಡೊಲೆ ಬಿಡ್ತಿಲ್ಲೇ ಮಣ್ಣೊಲೆ

Cooking : ‘ಅದು ಮಳೆಗಾಲ. ಮೊದಲ ಗೌರಿ ಹಬ್ಬ. ಮೊದಲೇ ಅತ್ತೆ, ಮಗಳ ಮನೆಗೆ ಹೋಗಿದ್ರಿಂದ ಮನೆಯ ಜವಾಬ್ದಾರಿ ಪೂರ್ತಿ ನಂದೇ. ಎಲ್ ಬೋರ್ಡ್ ಆದ ನಾನು ಪೂರ್ತಿ ಒಣಗಿರದ ಸೌದೆಗಳನ್ನು ಒಟ್ಟುಗೂಡಿಸಿ ತಂದಿಟ್ಟಿದ್ದೆ. ಹಬ್ಬಕ್ಕೆ ಅತ್ತೆನೂ ಬಂದರು, ತವರಿಂದ ಚಿಕ್ಕಮ್ಮನೂ. ಅತ್ತೆ ತಲೆನೋವೆಂದು ಮಲಗಿದರು. ಇನ್ನು ನೆಂದಿರುವ ಸೌದಿಯಲ್ಲಿ ಒಲೆ ಉರಿ ಅಂದ್ರೆ ಹೇಗೆ ಉರಿಯುತ್ತೆ?‘ ನಯನ ಆನಂದ್

Memories : ಏಸೊಂದು ಮುದವಿತ್ತು : ಕೊಡೊಲೆ ಬಿಡೊಲೆ ಬಿಡ್ತಿಲ್ಲೇ ಮಣ್ಣೊಲೆ
ಲೇಖಕಿ, ಕೃಷಿಮಹಿಳೆ ನಯನ ಆನಂದ
Follow us
ಶ್ರೀದೇವಿ ಕಳಸದ
|

Updated on:May 29, 2021 | 5:34 PM

ಈ ಔಷಧ ಎಲ್ಲಿಂದ ಬಂದಿತು, ಯಾರು ಫಾರ್ಮ್ಯುಲಾ ಬರೆದರು, ಈ ಸೂಜಿ, ಕತ್ತರಿ, ನಳಿಕೆ, ಉಪಕರಣ, ದ್ರಾವಣ, ಆಮ್ಲಜನಕ ಯಾರು ತಯಾರಿಸಿದರು, ಹೊತ್ತು ಸಾಗಿಸಿದರು, ನಮ್ಮನ್ನು ಉಪಚರಿಸುವವರ ಮೂಲವೇನು ಹಿನ್ನೆಲೆಯೇನು, ಇಂಥ ಸ್ವಾರ್ಥಪರ ಆಲೋಚನೆಗಳು ಬರುವುದುಂಟೆ? ಜೀವವೇ ಬಾಯಿಗೆ ಬಂದಾಗ ಉಳಿಯುವುದೇನು; ಮೌನ-ಪ್ರಾರ್ಥನೆ. ಎಲ್ಲ ಸ್ವಾರ್ಥ-ಪ್ರಭಾವಗಳ ತಂತು ಕತ್ತರಿಸಿಕೊಂಡು ನಾವೆಂಬ ನಾವಷ್ಟೇ ಶುದ್ಧಾನುಶುದ್ಧವಾಗಿ ಉಳಿಯಲು ಆತ್ಮಾವಲೋಕನದ ಮಹಾಸಂದರ್ಭ ಸೃಷ್ಟಿಯಾಗಿರುವ ಈ ಹೊತ್ತಿನಲ್ಲಾದರೂ ಅರಿವು-ಅನುಕಂಪ ಶಾಶ್ವತವಾಗಿ ನಮ್ಮಲ್ಲಿ ಮನೋಗತವಾಗುವುದೆ? ಯೋಚಿಸಿ, ನರನಾಡಿಗಳಲ್ಲಿ ರಕ್ತವೇರಿಸಿಕೊಳ್ಳುವಾಗ, ಅಂಗಗಳನ್ನು ಕಸಿ ಮಾಡಿಸಿಕೊಳ್ಳುವಾಗ, ಪ್ಲಾಸ್ಮಾ ನಮ್ಮ ದೇಹ ಸೇರುವಾಗ ಹೆಣ್ಣು-ಗಂಡು-ಜಾತಿ-ಮತ-ಪಂಥ-ಗಡಿ-ಪಕ್ಷಗಳೆಂಬ ವಿಷಬೀಜಗಳು ನಮ್ಮನ್ನು ತಾಕಿದ್ದಿದೆಯೇ? ಮನೆಓಣಿಗಳಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಈತನಕವೂ ನಮ್ಮ ‘ಅಸ್ತಿತ್ವ’ ಎನ್ನುವುದಕ್ಕೆ ಎಷ್ಟೆಲ್ಲ ರೂಪದಲ್ಲಿ ಕೃತ್ರಿಮ ಮತ್ತು ಪೊಳ್ಳುತನದ ಎಳೆಗಳನ್ನು ಜೋಡಿಸಿಕೊಳ್ಳುತ್ತಿದ್ದೇವೆ? ಇವೆಲ್ಲವೂ ದಾಖಲೆಯರೂಪದಲ್ಲಿ ಜಗದ್ವ್ಯಾಪಿಯಾಗಿ ನಮ್ಮನ್ನು ಮತ್ತಷ್ಟು ಬೆತ್ತಲೆಗೊಳಿಸುತ್ತವೆ ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದಂತೆ ವರ್ತಿಸುತ್ತಿರುವ ನಾವುಗಳು ಆತ್ಮಸಾಕ್ಷಿಯನ್ನು ಮಾರಿಕೊಂಡು ಹೊರಟಿದ್ದಾದರೂ ಎಲ್ಲಿಗೆ? ಸಹಜವಾಗಿ ನಾವೆಲ್ಲ ಬದುಕಿದ್ದೆವು. ಆದರೆ ಬರುಬರುತ್ತ ಅದು ಸಾಧ್ಯವಾಗುತ್ತಿಲ್ಲವೇಕೆ, ಸಮತೋಲನ ತಪ್ಪಿದ್ದೆಲ್ಲಿ? ನಿಜವಾದ ಜ್ಞಾನವರಸಿ ಹೊರಟಲ್ಲೆಲ್ಲ ರಾಜಕಾರಣದ ಕಮಟು. ಪ್ರೀತಿ-ಸಹಬಾಳ್ವೆಯ ಹಾದಿಯಲ್ಲೆಲ್ಲ ಅನುಮಾನ, ಪ್ರತಿಷ್ಠೆಯ ಅಡ್ಡಗೋಡೆ. ಹೀಗಿರುವಾಗ ಕಂಗೆಡಿಸುತ್ತಿರುವ ವಾಸ್ತವಕ್ಕೆ, ಪರಿಸ್ಥಿತಿಯ ಅಸಹಾಯಕತೆಗೆ ನೆನಪುಗಳೇ ನೇವರಿಕೆ, ಜೀವಕ್ಕೆ ಗುಟುಕು.  

ಇದೋ ‘ಟಿವಿ9 ಕನ್ನಡ ಡಿಜಿಟಲ್ : ಏಸೊಂದು ಮುದವಿತ್ತು’ ಸರಣಿ ನಿಮ್ಮ ಓದಿಗೆ. ನಿಮ್ಮನ್ನು ವಿಚಲಿತಗೊಳಿಸುತ್ತಿರುವ ವರ್ತಮಾನದ ಯಾವ ಸಂಗತಿಗಳೂ ನಿಮ್ಮ ಬಾಲ್ಯವನ್ನು, ಕಳೆದ ಪರಿಸರವನ್ನು, ಪ್ರವಾಸಕ್ಕೆ ಹೋದ ಊರುಗಳ ವಾತಾವರಣವನ್ನು, ಇದಿರಾದ ವ್ಯಕ್ತಿಗಳ ಒಡನಾಟವನ್ನು, ಪ್ರಸಂಗಗಳನ್ನು ನೆನಪಿಸುತ್ತಿರಬಹುದು. ತಡ ಯಾಕೆ? ನಿಮ್ಮ ಬರಹದೊಂದಿಗೆ ಆಲ್ಬಮ್ಮಿಗಂಟಿರುವ ಫೋಟೋಗಳನ್ನು ಮೆಲ್ಲಗೆ ಹಾಳೆಗಳಿಂದ ಬಿಡಿಸಿ ಇಲ್ಲಿ ತೂರಿಬಿಡಿ ಇ ಮೇಲ್ : tv9kannadadigital@gmail.com

* ‘ಸಾವಯವ ಕೃಷಿ ಸಾಕಾರವಾಗುವುದು ಸ್ವಾವಲಂಬನೆಯಿಂದ ಅನ್ನುವುದು ನನ್ನ ದೃಢವಾದ ನಂಬಿಕೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಕಟ್ಟೆಯಲ್ಲಿ ವಾಸ. ಕೃಷಿಯೊಂದಿಗೆ ಕೃಷಿ ಲೇಖನ ಬರೆಯುವ ಹವ್ಯಾಸ. ನನ್ನ ಹಳ್ಳಿ ಜೀವನವೇ ಇದಕೆಲ್ಲ ಸ್ಪೂರ್ತಿ’ ಎನ್ನುವ ನಯನ ಆನಂದ್ ಒಲೆಮಹಾತ್ಮೆಯನ್ನಿಲ್ಲಿ ಹಂಚಿಕೊಂಡಿದ್ದಾರೆ. * ಅಪರೂಪಕ್ಕೆ ಗೆಳತಿಯ ಕರೆ.  ಫೋನಿನಲ್ಲಿ ಮುಳುಗಿದವಳಿಗೆ ಸೀದು ಹೋದ ವಾಸನೆ. ಓಡಿದೆ, ಅಷ್ಟರಲ್ಲಾಗಲೇ ಸಮಯ ಮೀರಿತ್ತು. ತುಂಗಾ ಕೊಡುವ ಅರ್ಧ ಲೀಟರ್ ಹಾಲು ಪಾತ್ರೆಯಿಂದಿಳಿದು ಸ್ಟೌವ್ ದಾಟಿ ಕಟ್ಟೆಯನ್ನು ಆವರಿಸಿ ಸಿಂಕ್ ತಲುಪಿತ್ತು. ಹಾಲು ಹೋದರು ಹೋಗಲಿ, ಮತ್ತೆ ಸಂಜೆ ಕೊಡುವಳು. ಆದರೆ ಆಗಿನ್ನೂ ಎಲ್ಲಾ ಒರೆಸಿದ ನನಗೆ ತಲೆ ಚಚ್ಚಿಕೊಳ್ಳುವ ಹಾಗಾಯ್ತು. ಹಾಗೇ ಮನಸ್ಸು ಇಪ್ಪತ್ಮೂರು ವರ್ಷದ ಹಿಂದಕ್ಕೋಡಿತು.

ತಂದೆಯ ಊರು ಹಳ್ಳಿಯಾದರೂ ಹುಟ್ಟಿ ಬೆಳೆದದ್ದೆಲ್ಲ ಪಟ್ಟಣದಲ್ಲಿ. ಆದ್ದರಿಂದ ಹಳ್ಳಿ ಏನಿದ್ರೂ ‘ಪರದೆಯಲ್ಲಿ ತೋರಿಸುವಂತೆ ಮಾವಿನಕಾಯಿ, ಹುಣಸೆಕಾಯಿ, ತೂಪರೆ ಹಣ್ಣು, ಕಾರೆಹಣ್ಣು ಇಂತಹವನ್ನು ತಿನ್ನಲು ಮಾತ್ರ’ ಎಂಬಂತೆ ಬೆಳೆದಿದ್ದೆ. ಮ್ಮನ ಆರೋಗ್ಯದ ಸಮಸ್ಯೆಯಿಂದಾಗಿ ಎರಡನೇ ವರ್ಷದ ಪದವಿಯ ಕೊನೆಯ ಹಂತದಲ್ಲಿ ಕೊರಳಲ್ಲಿ ಮಾಂಗಲ್ಯ. ಅದೂ ಹಳ್ಳಿಯಲ್ಲಿರುವ ವರನ ವರಿಸಿದ್ದು ಇಂದಿಗೂ ನನಗೇ ಸೋಜಿಗ. ಮದುವೆಯಾದ ಹೊಸತರಲ್ಲಿ ಪರಿಚಯಸ್ಥರ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನನ್ನನ್ನು ನೋಡಿ ಪಿಸಿಪಿಸಿ ಮಾತಾಡಿಕೊಳ್ಳುತ್ತಿದ್ದರು ಅಕ್ಕಪಕ್ಕದವರು. ‘ಸಿಟೀಲಿದ್ದು ಮದುವೆಯಾಗಿ ಹಳ್ಳಿಗೆ ಬಂದವಳು ಇವಳೇ’ ಎಂಬುದು ಅವರ ಚರ್ಚೆಯ ಸುದ್ದಿಯೆಂದು ಆಮೇಲಾಮೇಲೆ ಗೊತ್ತಾಗ್ತಾ ಹೋಯ್ತು. ಇದೇಕಪ್ಪಾ ಇವರೆಲ್ಲ ಹೀಗೆ ಮಾತಾಡಿಕೊಳ್ತಾರೆ ಅನ್ನೋದು, ಓಡಾಟಗಳೆಲ್ಲಾ ಮುಗಿದು ಗಂಡನಮನೆಗೆ ಬಂದಾಗಲೇ ಅರಿವಿಗೆ ಬಂದಿದ್ದು.

ನನಗೂ ಅಡುಗೆಮನೆಗೂ ಅಲ್ಲಿಯವರೆಗೂ ಆಗಿ ಬಂದಿದ್ದೇ ಇಲ್ಲ. ಅಡುಗೇನೇ ಮಾಡದವಳಿಗೆ ಇನ್ನು ಒಲೆ ಹಚ್ಚಕ್ಕೆ ಬರುತ್ತಾ? ಅಲ್ಲಿಂದ ಪ್ರಾರಂಭ ನನ್ನ ಗೋಳು. ಗ್ಯಾಸ್ ಸ್ಟೌವ್ ಇರಲಿಲ್ಲ. ಇದ್ದದ್ದು ಒಂದು ಸೀಮೆಎಣ್ಣೆ ಸ್ಟೌವ್.   ಅದರಲ್ಲೂ ಮೈಮರೆತು ಉಕ್ಕಿಸಿದರೆ ಬತ್ತಿ ನೆಂದು ಬದಲಾಯಿಸಬೇಕಿತ್ತು. ಅಜ್ಜಿಮನೆಯಲ್ಲಿ ಕುಪ್ಪಿನ ಒಲೆ ಇದ್ದರೆ, ಇಲ್ಲಿ ಅಸ್ತ್ರದ ಒಲೆ. ಅಂದರೆ ಒಲೆಯ ಸುತ್ತಲೂ ಮೂರು ಕುಪ್ಪು ಇರಲಿಲ್ಲ. ಹಾಗಾಗಿ ಇದರಲ್ಲಿ ಪಾತ್ರೆಗೆ ಮಸಿಯಾಗುವ ಪ್ರಮಾಣವು ಕಡಿಮೆ.

ಮೊದಲು ಕುರಂಬಳೆ ಇಟ್ಟು ಗರಿ ಹಚ್ಚಿ ತೆಂಗಿನ ಮಟ್ಟೆ ಇಡಬೇಕಿತ್ತು. ಗರಿ ಹಚ್ಚಲು ಸೀಮೆಎಣ್ಣೆ ಬುಡ್ಡಿದೀಪದ ಬಳಕೆ. ಏಕೆಂದರೆ ಒಂದೇ ಸಾರಿ ನನಗೆ ಗರಿ ಹಚ್ಚಕ್ಕೆ ಆಗ್ತಿರಲಿಲ್ಲ. ಪದೇಪದೆ ಕಡ್ಡಿ ಗೀರುವುದನ್ನು ತಪ್ಪಿಸಲು ಬುಡ್ಡಿ ದೀಪದ ಪ್ರಯೋಗ. ಕುರಂಬಳೆ  ಹತ್ತಿಕೊಂಡಾಗ ಎಡೆಮಟ್ಟೆ, ಗಟ್ಟಿಸೌದೆ ಇಟ್ಟರೆ ಒಲೆ ಹಚ್ಚುವ ಮೊದಲ ಹಂತದ ಕೆಲಸ ಮುಗಿದಂತೆ. ಜೋರಾಗಿ ಒಲೆ ಉರಿಯಲಿ ಎಂದು ಸೌದೆ ತರುಕುವಂತಿಲ್ಲ. ಹಾಗಾದಾಗ ಹೊಗೆ ಸುತ್ತಿಕೊಂಡು ಒಲೆ ಉರಿಯುತ್ತಿರಲಿಲ್ಲ. ಉರಿ ತೀರ ಹೆಚ್ಚಾದಾಗ ನೀರು ಚುಮುಕಿಸಿ ಬೆಂಕಿಯನ್ನು ಕಂಟ್ರೋಲ್ ಮಾಡಬೇಕಿತ್ತು.

ಮದುವೆಯಾದ ಮೊದಲ ಗೌರಿ ಹಬ್ಬ ನನಗಿನ್ನೂ ಚೆನ್ನಾಗಿ ನೆನಪಿದೆ. ಅತ್ತೆ ಹಬ್ಬಕ್ಕೆ ಮುಂಚೆ ಮಗಳ ಮನೆಗೆ ಹೋಗಿದ್ರಿಂದ ಮನೆಯ ಜವಾಬ್ದಾರಿ ಪೂರ್ತಿ ನಂದೇ. ಗೌರಿಹಬ್ಬದ ಸಮಯ ಅಂದರೆ ಮಳೆಗಾಲ. ಎಲ್ ಬೋರ್ಡ್ ಆದ ನಾನು ಪೂರ್ತಿ ಒಣಗಿರದ ಸೌದೆಗಳನ್ನು ಒಟ್ಟುಗೂಡಿಸಿ ಒಳಗೆ ತಂದಿಟ್ಟಿದೆ. ಹಬ್ಬಕ್ಕೆ ಅತ್ತೆನೂ ಬಂದರು, ತವರಿಂದ ಚಿಕ್ಕಮ್ಮನೂ ಬಂದರು. ಅತ್ತೆ ತಲೆನೋವೆಂದು ಮಲಗಿದರು. ಇನ್ನು ನೆಂದಿರುವ ಸೌದಿಯಲ್ಲಿ ಒಲೆ ಉರಿ ಅಂದ್ರೆ ಹೇಗೆ ಉರಿಯುತ್ತೆ? ಆಗಲೇ ಒಣ ಸೌದೆ, ಹಸಿ ಸೌದೆಗಳ ವ್ಯತ್ಯಾಸ ಪ್ರಾಯೋಗಿಕವಾಗಿ ಗೊತ್ತಾಯ್ತು. ಹಾಗೂ ಹೀಗೂ ಹಬ್ಬ ಮುಗಿಸಿದ್ದಾಯಿತು.

Yesondu mudavittu

ಸುಕೇಳಿ: ಬಾಳೆಹಣ್ಣಿನ ತುಂಡುಗಳನ್ನು ಬಿಸಿಲಲ್ಲಿ ಒಣಗು ಹಾಕುತ್ತಿರುವ ನಯನ.

ಒಲೆಯ ಮಧ್ಯದಲ್ಲಿ ದೊಡ್ಡ ಪಾತ್ರೆ, ರೊಟ್ಟಿ ಹೆಂಚು ಇಡುವ ರಚನೆ ಇರುತ್ತೆ.  ಅಕ್ಕ-ಪಕ್ಕ ಕೊಡೊಲೆ ಬಿಡೊಲೆ ಎಂಬ ರಚನೆಗಳಿವೆ. ಒಲೆಗೆ ಉರಿ ಇಟ್ಟಾಗ ಕೊಡೊಲೆಗೂ ಉರಿ ಹೋಗುತ್ತೆ. ಬೇಯಿಸಿದ ಅಡುಗೆಯನ್ನು ಬಿಡುವಾಗಿರುವ ಬಿಡೊಲೆ ಮೇಲೆ ಇಡಬಹುದು. ಅಡುಗೆ ಆದಮೇಲೆ ಪಾತ್ರೆಗಳ ಬಾಯಿ ಮುಚ್ಚಿ, ಒಲೆಯ ಮೇಲಿಟ್ಟು ಸೌದೆ ಆರಿಸಿದರೆ ಅದರ ಕಾವಿಗೆ ಅಡುಗೆಯೂ ಬೆಚ್ಚಗಿರುತ್ತಿತ್ತು.

ಪ್ರತಿದಿನ ಮುಂಜಾನೆ ಒಲೆಯಲ್ಲಿ ಬೂದಿ ತೆಗೆದು ಒರೆಸಬೇಕಿತ್ತು. ಒರೆಸೋಕೆ ಸಪರೇಟ್ ಬಟ್ಟೆ. ನಮ್ಮನೆಯಲ್ಲಿ ಸಿಮೆಂಟ್ ಒಲೆ ಇದ್ದಿದ್ದು. ಬೆಂಕಿಯ ಕಾವಿಗೆ ಸಿಮೆಂಟ್ ಉದುರುತ್ತಿತ್ತು. ಹಾಗಾಗಿ ಒಲೆಗೆ ಫೈನಲ್ ಟಚ್ ಮಣ್ಣಿಂದೇ.  ಹುತ್ತದ ಮಣ್ಣು ನೆನೆಹಾಕಿ ನಾದಿ ಹದ ಮಾಡಿ ಒಲೆಗೆ ಮೆತ್ತಬೇಕಿತ್ತು. ಮಣ್ಣು ಒಣಗಿದಾಗ ಸಗಣಿ ಬಗ್ಗಡ ಹಾಕಿ ನುಣುಪು ಮಾಡಿ ಚೆಂದ ಮಾಡಬೇಕಿತ್ತು. ಇದು ವಾರಕ್ಕೊಮ್ಮೆ ನಡೆಯುವ ಓವರ್ ಟೈಮ್ ಕೆಲಸ. ಈ ಓವರ್ ಟೈಮ್ ಕೆಲಸದ ಸಲುವಾಗಿ ಗಂಡನೊಂದಿಗೆ ಸಾಕಷ್ಟು  ವಾಗ್ಯುದ್ಧವೇ ಆಯಿತು. “ಅಯ್ಯೋ ಹಂಗಾಡಬೇಡ ನೀನು. ಒಲೆಯ ಕಾವು ಮಣ್ಣನ್ನು ಏನೂ ಮಾಡಲ್ಲ. ಮಣ್ಣಿಂದೇ ಒಲೆ ಹಾಕಿಸಿ ಕೊಡ್ತೀನಿ ಬಿಡು” ಎಂದು ಓವರ್ ಟೈಮ್ ಕೆಲಸಕ್ಕೆ ವಿರಾಮ ನೀಡಿದರು. ಹೀಗೆ ಪೂರ್ತಿ ಮಣ್ಣಿನ ಒಲೆಯನ್ನು ಹಾಕಿಸುವ ತೀರ್ಮಾನವಾಯಿತು. ಪತ್ರಿಕೆಯಲ್ಲಿ  ಪ್ರಕಟವಾದ ಅಚ್ಚಿನ ಒಲೆ ಹಾಕುವ ಮಹಿಳೆಯೊಬ್ಬರ ಸಂಪರ್ಕ ಸಂಖ್ಯೆ ಹುಡುಕುವಲ್ಲಿ ಗಂಡ ಯಶಸ್ವಿಯಾದರು.  ನಮ್ಮ ಪುಣ್ಯಕ್ಕೆ ಅವರು ಇದ್ದುದ್ದು ಕೇವಲ 20 ಕಿಲೋಮೀಟರ್ ದೂರದಲ್ಲಿ. ಅವರನ್ನು ಕರೆತಂದು ಒಲೆಯನ್ನು ಹಾಕಿಸಿದ್ದಾಯಿತು.

ಇನ್ನು ಸಂಕ್ರಾಂತಿ ನಂತರ ನಮ್ಮಲ್ಲಿ ಆಚರಿಸುವ ನಾಗರಹಬ್ಬಕ್ಕೆ ಮನೆಯೆಲ್ಲ ಶುದ್ಧವಾಗಬೇಕಿತ್ತು. ಅಡುಗೆಮನೆಯ ಗೋಡೆಗಳಿಂದ ಹಿಡಿದು ಎಲ್ಲವನ್ನು ತೊಳೆಯಬೇಕಿತ್ತು. ತೊಳೆದಷ್ಟು ಕಪ್ಪಗೆ ಬರುತ್ತಿದ್ದ ನೀರು.  ಅಬ್ಬಾ… ಒಂದಾ ಎರಡಾ ಒಲೆಯೊಂದಿಗಿನ ಒಡನಾಟ (ಒಡಲಾಟ).

ಅಂತೂ ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಗ್ಯಾಸ್ ಸಿಲಿಂಡರ್ ಉಡುಗೊರೆ ಗಂಡನಿಂದ. ಗ್ಯಾಸ್ ಇದೆಯೆಂದು ಒಲೆ ಬಳಕೆಯೇನು ಕಡಿಮೆ ಮಾಡಲಿಲ್ಲ. ತುರ್ತಿದ್ದಾಗ ಬಳಸಿಕೊಂಡು ಒತ್ತಡವಿಲ್ಲದೆ ಅಡುಗೆ ಮಾಡುವುದು ಸಾಧ್ಯವಾಯಿತು. ಇವೆಲ್ಲಾ ಟ್ರೈನಿಂಗ್ ಪಿರಿಯೆಡ್ ಮುಗಿಯೋಕೆ ವರ್ಷಗಳೇ ಬೇಕಾದವು. ಆ ದಿನಗಳಲ್ಲಿ ಲೆಕ್ಕವಿಲ್ಲದಷ್ಟು ಸಾರಿ ಕಣ್ಣು ತೇವವಾಗಿದ್ದೂ ಇದೆ. ಮಸಿಗೆ ಕೈಕಾಲುಗಳೆಲ್ಲ ಬಿರಿದುಕೊಂಡು ಸಾಕಪ್ಪ ಈ ಒಲೆಯ ಸಹವಾಸ ಎಂದು ರೋಸಿ ಹೋಗಿದ್ದಿದೆ.

12 ವರ್ಷಗಳ ನಂತರ ಹೊಸ ಮನೆ ಕನಸು ನನಸಾಗುವ ಸಮಯ. ಇಷ್ಟು ವರ್ಷಗಳ  ಅನುಭವದಿಂದ ಅಡುಗೆ ಮನೆಯಲ್ಲಿ ಒಲೆ ಬೇಡವೆಂದು ನಿರ್ಧರಿಸಿದೆ. ಆದರೆ ಹೊಸ ಸಮಸ್ಯೆ ಶುರು! ಒಲೆಯಲ್ಲಾದರೆ ಅಲ್ಲೇ ಕುಳಿತು ತರಕಾರಿ ಹೆಚ್ಚಿಕೊಂಡು ಉರಿ ಇಡುತ್ತಾ ಒಟ್ಟೊಟ್ಟಿಗೆ ಕೆಲಸವಾಗುತ್ತಿತ್ತು. ತಿಂಡಿಯ ಜೊತೆಗೆ ಕೊಡೊಲೆಯಲ್ಲಿ ಅರ್ಧ ಅಡುಗೆ ಮುಗಿದೇ ಹೋಗುತ್ತಿತ್ತು. ಹಿಂದೆಯೇ ಅಡುಗೆ ಮುಗಿಸಿ ಒಲೆಯ ಕಾವಿಗಿಟ್ಟು, ಒಲೆ ಗುಡಿಸಿ ನಿರಾಳವಾಗ್ತಿದ್ದೆ.

ಈಗ ಹಾಗಿಲ್ಲ, ನಿಂತು ಅಡುಗೆ ಮಾಡುವ ಅನಿವಾರ್ಯ. ಕೆಲವರ್ಷ ಚಪಾತಿ, ರೊಟ್ಟಿ ಮಾಡಲು ಸ್ಟೌವ್ ಕೆಳಗೆ ಇಟ್ಟುಕೊಂಡು ಮಾಡುತ್ತಿದ್ದೆ. ಮಾಡರ್ನ್ ಕಿಚನ್ ಮಾಡಿಸಿಕೊಂಡ ಮೇಲೆ ಅದೂ ಸಾಧ್ಯವಿಲ್ಲವಾಯಿತು. ರೊಟ್ಟಿ ಮಾಡಿದರಂತೂ ಸ್ಟೌವ್ ಒರೆಸೋದೇ ದೊಡ್ಡ ತಲೆಬಿಸಿ. ಎಣ್ಣೆ ಬಾಂಡ್ಲಿ ಇಟ್ಟರೆ ಜಿಡ್ಡೆಲ್ಲಾ ಮನೆ ಆವರಿಸುತ್ತೆ.  ಮೊದಲಾದರೆ ಹೊಗೆ ಗೂಡಿನಲ್ಲಿ ಹೊರಹೋಗುತ್ತಿತ್ತು. ಮಾಡಿದ ಅಡುಗೆ ಬೆಚ್ಚಗಿರಲ್ಲಂತ ಟೈಮ್ ಟೈಮಿಗೆ ಮಾಡ್ಬೇಕು. ಸ್ವಲ್ಪ ಏನಾದರೂ ಚೆಲ್ಲಿದರೆ, ಉಕ್ಸಿದ್ರೆ ಒರೆಸೊ ಎಕ್ಸ್ಟ್ರಾ ಕೆಲಸ. ಒಲೆಯಲ್ಲಾದ್ರೆ ಬೆಳಗ್ಗೆ ಒರೆಸಿದ್ರೆ, ಇನ್ನು ನಾಳೆ ಬೆಳಗ್ಗೆಗೆ ಒರೆಸ್ತಿದ್ದಿದ್ದು. ಮಧ್ಯೆ ಅವಾಗವಾಗ ಪೊರಕೆಯಲ್ಲಿ ಗುಡಿಸಿದರೆ ಸಾಕಾಗ್ತಿತ್ತು. ಹೊಗೆ ಹೊರಬರದಂತ ಒಲೆ ಹಾಕಿಸಿಕೊಳ್ಳದೇ ದಡ್ಡತನ ಮಾಡಿಕೊಂಡೆ ಅಂತ ಹಲವು ಸಾರಿ ಒಳಗೊಳಗೆ ಕೊರಗಿದೀನಿ. ಯಾವಾಗಲೂ ನಿಂತೇ ಅಡುಗೆ ಮಾಡಿ ಆರೋಗ್ಯಕ್ಕೆಷ್ಟು ದಂಡ ತೆರಬೇಕಿದೆಯೋ?

ಉಕ್ಕಿದ ಹಾಲಿನಿಂದ ನನ್ನ ನೆನಪು ಎಳೆಎಳೆಯಾಗಿ ಹರಿದಿದೆ. “ಒಲೆಯ ಮಗ್ಗುಲ ಒರಳು ಕಲ್ಲಿನ ಚಟ್ನಿ, ಒಲೆಯ ಮೇಲಿನ ರೊಟ್ಟಿ ನೇರ ಸುತ್ತಲೂ ಕುಳಿತವರ ತಟ್ಟೆಗೆ” ಆಹಾ ಎಂಥ ಮಧುರ ನೆನಪುಗಳು. ಹಾಂ! ಹೇಳೋದು ಮರೆತೆ, “ಮನೆ ಪಕ್ಕ ನನಗೆ ಒಲೆ ಹಾಕಿಸಿ ಕೊಡಿ’’ ಎಂದು ಗಂಡನಿಗೆ ದುಂಬಾಲು ಬಿದ್ದಿದ್ದೇನೆ.

ಇದನ್ನೂ ಓದಿ : ಏಸೊಂದು ಮುದವಿತ್ತು : ಪಂಡೋರಳ ಪ್ಲಾಸ್ಟಿಕ್ ಬಾಕ್ಸ್ ತೆರೆಯುವುದಕ್ಕೂ ಮುನ್ನ

Published On - 5:23 pm, Sat, 29 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ