ಸ್ಪಂದನೆ | ಬನ್ನಿ ದನಿಯೆತ್ತೋಣ, ಕೆಪಿಎಸ್ಸಿ ಅವ್ಯವಸ್ಥೆ ಸರಿಪಡಿಸೋದು ನಮ್ಮೆಲ್ಲರ ಜವಾಬ್ದಾರಿ
ಈ ಸಂಸ್ಥೆಯು ತನ್ನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದಿದ್ದರೆ KPSC ಎಂಬ ಪದಕ್ಕೆ ಜನರು Karnataka Public Scamming Commission (ಕರ್ನಾಟಕ ಲೋಪಸೇವಾ ಆಯೋಗ) ಎಂದು ಮರುನಾಮಕರಣ ಮಾಡೀಯಾರು. ಕೆಪಿಎಸ್ಸಿ ಬಗ್ಗೆ ನನಗೆ ಮತ್ತು ನನ್ನಂಥ ಸಾವಿರಾರು ಯುವಜನರಿಗೆ ಇಷ್ಟೊಂದು ಸಿಟ್ಟು ಬರಲು ಕಾರಣವೂ ಇದೆ.
ಪ್ರಶ್ನೆಪತ್ರಿಕೆ ಸೋರಿಕೆ ಕಾರಣದಿಂದ ಈಚೆಗೆ ನಡೆಯಬೇಕಿದ್ದ ಎಫ್ಡಿಎ ಪರೀಕ್ಷೆ ಮುಂದೂಡಿಕೆಯಾಗಿದ್ದು ನೆನಪಿರಬೇಕು. ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಂಡಿದ್ಧ ಅಭ್ಯರ್ಥಿ ಪವಿತ್ರಾ ಡಿ. ಕೆಪಿಎಸ್ಸಿ KPSC ಕಾರ್ಯವೈಖರಿಯ ಬೇಸರ ವ್ಯಕ್ತಪಡಿಸಿ ಬರೆದಿರುವ ಪತ್ರ ಇದು. ಕೆಪಿಎಸ್ಸಿ ಸುಧಾರಣೆ ಕೇವಲ ಅಭ್ಯರ್ಥಿಗಳಿಗಷ್ಟೇ ಸೀಮಿತವಾದ ಜವಾಬ್ದಾರಿಯಲ್ಲ. ಕರ್ನಾಟಕದ ಎಲ್ಲರೂ ಇದಕ್ಕಾಗಿ ದನಿಯೆತ್ತಬೇಕು ಎಂಬ ಕಳಕಳಿ ಅವರದು.
ಕರ್ನಾಟಕ ಲೋಕಸೇವಾ ಆಯೋಗ (KPSC – Karnataka Public Service Commission) ಸಂಸ್ಥೆಯು ಪಾರದರ್ಶಕತೆಯನ್ನು ಇನ್ನಾದರೂ ಋಜುವಾತುಪಡಿಸಬೇಕು. ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ಸಂಸ್ಥೆಯ ಮೇಲೆ ನನ್ನಂಥ ಲಕ್ಷಾಂತರ ಅಭ್ಯರ್ಥಿಗಳು ಇಟ್ಟಿರುವ ನಂಬಿಕೆಗಳು ಹುಸಿಯಾಗಿವೆ. ಸಂವಿಧಾನಕ್ಕೆ ಮಸಿ ಬಳಿಯುವುದೇ ನಮ್ಮ ಪರಮಧ್ಯೇಯ. ಲಕ್ಷ್ಮೀಪುತ್ರರಿಗಷ್ಟೇ ಇಲ್ಲಿ ಮಣೆ ಎಂಬ ಅಲಿಖಿತ ನಿಯಮಕ್ಕೆ ಕೆಪಿಎಸ್ಸಿ ಇನ್ನಾದರೂ ತಿಲಾಂಜಲಿ ನೀಡಬೇಕು.
ಮುಂದಿನ ಪರೀಕ್ಷೆಗಳಲ್ಲಿಯಾದರೂ CBT (Computer Based Recruitment Test) ವ್ಯವಸ್ಥೆ ಜಾರಿಗೆ ಬರಲಿ. ಸಾಫ್ಟ್ವೇರ್ಗೆ ಸಂಬಂಧಿಸಿದ ಹಲವು ವಿಚಾರಗಳಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ. ಸಿಬಿಟಿ ವ್ಯವಸ್ಥೆ ಜಾರಿ ಮಾಡುವುದು ಕಷ್ಟವೇ?
ಈ ಸಂಸ್ಥೆಯು ತನ್ನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳದಿದ್ದರೆ KPSC ಎಂಬ ಪದಕ್ಕೆ ಜನರು Karnataka Public Scamming Commission (ಕರ್ನಾಟಕ ಲೋಪಸೇವಾ ಆಯೋಗ) ಎಂದು ಮರುನಾಮಕರಣ ಮಾಡೀಯಾರು. ಕೆಪಿಎಸ್ಸಿ ಬಗ್ಗೆ ನನಗೆ ಮತ್ತು ನನ್ನಂಥ ಸಾವಿರಾರು ಯುವಜನರಿಗೆ ಇಷ್ಟೊಂದು ಸಿಟ್ಟು ಬರಲು ಕಾರಣವೂ ಇದೆ.
‘ಬಡವರಾಗಿ ಹುಟ್ಟುವುದು ತಪ್ಪಲ್ಲ, ಬಡವರಾಗಿ ಸಾಯುವುದು ತಪ್ಪು’ ಎಂದು ಯಾರೋ ಹೇಳಿದ ಮಾತನ್ನು ಸ್ಫೂರ್ತಿಯಾಗಿಸಿಕೊಂಡು, ಉತ್ತಮ ನೌಕರಿ ಹೊಂದಿ ಹೆಮ್ಮೆಯಿಂದ ಬಾಳಬೇಕಂಬ ಆಶಯದಿಂದ ಸರ್ಕಾರಿ ನೌಕರಿ ಕನಸ ಕಟ್ಟಿಕೊಂಡವರು ಹಲವರು. ಪದವಿ ಶಿಕ್ಷಣಕ್ಕೆ ಸೇರಿದಾಗಿನಿಂದ ಸರ್ಕಾರಿ ಹುದ್ದೆ ಪಡೆಯುವ ಸಮರಾಭ್ಯಾಸ ಶುರು. ಪದವಿ ಮುಗಿಯೋದೆ ತಡ PC To DC (ಪೊಲೀಸ್ ಕಾನ್ಸ್ಟೆಬಲ್ರಿಂದ ಜಿಲ್ಲಾಧಿಕಾರಿವರೆಗೆ) ಎಲ್ಲಾ ಹುದ್ದೆಗಳಿಗೂ ಅರ್ಜಿ ಗುಜರಾಯಿಸುತ್ತಲೇ ಇರುತ್ತೇವೆ. ಒಮ್ಮೊಮ್ಮೆ ಅರ್ಜಿಯೊಂದಿಗೆ ತುಂಬಬೇಕಾದ ಶುಲ್ಕದಷ್ಟು ಹಣವೂ ನಮ್ಮ ಬಳಿ ಇರುವುದಿಲ್ಲ. ಅವರಿವರ ಬಳಿ ಸಾಲ ಮಾಡಿ ಅರ್ಜಿ ಹಾಕಿಕೊಳ್ಳುತ್ತೇವೆ.
ನಾವು ಅರ್ಜಿ ಹಾಕುವಾಗಲೂ ಹಲವರು ಆಡಿಕೊಳ್ಳುತ್ತಾರೆ. ಇಂಥವರ ಮಾತುಗಳಿಗೆ ನಾವು ಸೊಪ್ಪು ಹಾಕದೆ ಸರ್ಕಾರಿ ಸಂಸ್ಥೆಯಲ್ಲಿ ನಂಬಿಕೆಯಿಟ್ಟು, ಹಲವಾರು ನಿಂದನೆಗಳ ಸಹಿಸಿ, ಅಪವಾದಗಳ ಅವಮಾನಗಳ ಬದಿಗಿರಿಸಿ, ನಾನಾರೀತಿಯ ತ್ಯಾಗಗಳ ಮಾಡಿ, ಆಡಿಕೊಂಡವರಿಂದಲೇ ಸನ್ಮಾನದ ಹಾರ ಹಾಕಿಸಿಕೊಳ್ಳಬೇಕೆಂದು ಹಗಲಿರುಳ ಲೆಕ್ಕಿಸದೆ ಊಟ-ನಿದ್ರೆಗಳಿಗೆ ಕಡಿವಾಣ ಹಾಕಿ, ಉತ್ತಮ ತಯಾರಿಯೊಂದಿಗೆ ಪರೀಕ್ಷೆ ನಿರೀಕ್ಷಿಸುವವರಿಗೆ ಇನ್ನೊಮ್ಮೆ ಮಗದೊಮ್ಮೆ ಬರಸಿಡಿಲು ಬಡಿಯುತ್ತಲೇ ಇದೆ.
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ KPSC ನಡೆಗಳಿಗೆ ಮಾರ್ಮಿಕವಾಗಿ ಛೀಮಾರಿ ಹಾಕಿದೆ. ಕೆಪಿಎಸ್ಸಿಯಲ್ಲಿ ಆಗುತ್ತಿರುವ ತಪ್ಪುಗಳಿಗೆ ಕಾರಣ ಅಲ್ಲಿರುವ ವ್ಯವಸ್ಥೆಯದ್ದಲ್ಲ. ಆ ವ್ಯವಸ್ಥೆಯಲ್ಲಿ ನುಸುಳಿರುವ ಕೆಲ ನೀಚ ಹುಳುಗಳಿಂದ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿವೆ.
ಕೆಪಿಎಸ್ಸಿಯಲ್ಲಿರುವ ಕೆಲವರು ಮೂಕಪ್ರೇಕ್ಷಕರಾಗಿದ್ದಾರೆ. ಕೆಲವರು ಸೂತ್ರದಾರರಾಗಿದ್ದಾರೆ. KPSC ಹಾಗೂ ಕೆಲವರನ್ನು ಹೊರತುಪಡಿಸಿ ಬಹಳಷ್ಟು ಮಂದಿ ಮೇಲಿನ ಎರಡು ವರ್ಗಗಳಲ್ಲಿ ಇರಲಿದ್ದೇವೆ.
ಸಾಂವಿಧಾನಿಕ ಸಂಸ್ಥೆಯ ಅಸಂವಿಧಾನಿಕವಾದ ಪ್ರತಿ ನಡೆಯನ್ನೂ ಗುರುತಿಸಿ ತಮ್ಮತಮ್ಮಲ್ಲೇ ಅದರ ಕುರಿತು ಚರ್ಚಿಸಿ ಸಮಾಧಾನಪಟ್ಟುಕೊಳ್ಳುವವರು ಒಂದಷ್ಟು ಜನ. ಚಹಾ ಕಪ್ ಸಾಕ್ಷಿಯಲ್ಲಿ ನಡೆಯುವ ಈ ಚರ್ಚೆಗಳಲ್ಲಿ ಪರಿಹಾರಗಳನ್ನು ಸೂಚಿಸಿದ ನಂತರ ಅಷ್ಟೇ ತ್ವರಿತವಾಗಿ ಏನಾಯಿತು ಎಂಬುದನ್ನು ಮರೆತು ಮುಂದಿನ ಕೆಲಸಗಳಲ್ಲಿ ತೊಡುವವರು ಮೂಕಪ್ರೇಕ್ಷಕರಾಗಿರುತ್ತಾರೆ.
ಏನಾದರೂ ಸರಿ, ಹೇಗಾದರೂ ಸರಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಹಟಕ್ಕೆ ಬಿದ್ದವರು ತಮಗೆ ಗೊತ್ತಿಲ್ಲದೆ ಕೆಪಿಎಸ್ಸಿ ವ್ಯವಸ್ಥೆ ಹಾಳಾಗಲು ಕಾರಣರಾದ ಸೂತ್ರಧಾರರು. ಕೆಲವರು ಸ್ವತಃ ಲಕ್ಷ್ಮೀಪುತ್ರರೇ ಆಗಿರಬಹುದು, ಆದರೆ ಹಲವರು ಸಾಲಸೋಲ ಮಾಡಿಯಾದರೂ ಲಂಚಕೊಡಲು ಸಿದ್ಧರಿರುವ ಜನಸಾಮಾನ್ಯರಿದ್ದಾರೆ. ಇಂಥವರು ಇರುವವರೆಗೆ ವ್ಯವಸ್ಥೆ ಸರಿಯಾಗುವುದಿಲ್ಲ. ಸಾಮಾನ್ಯವಾಗಿ ಲಕ್ಷ್ಮೀಪುತ್ರರೇ ಆಗಿದ್ದಾರೆ. ಇಂಥವರು ಹೇಳುವ ‘ಹೇಗಾದರೂ ಸರಿ, ಏನಾದರೂ ಮಾಡಿ ಸರ್ಕಾರಿ ಕೆಲಸ ತಗೊ’ ಎಂಬ ಇಂಥವರ ಒಂದು ವಾಕ್ಯ ಅಕ್ರಮ ಮತ್ತು ಅವ್ಯವಸ್ಥೆಯನ್ನು ಬಿತ್ತುವ ಬೀಜವಾಗುತ್ತದೆ.
ಅಕ್ರಮಕ್ಕೆ ಇದು ಹೇಗೆ ಕಾರಣವಾಗುತ್ತೆ ಅಂತ ಆಶ್ಚರ್ಯವಾಗುತ್ತದೆಯೇ? ಒಂದು ದೊಡ್ಡ ಹೆಮ್ಮರದ ಮೂಲ ಸಣ್ಣ ಬೀಜವೇ ಆಗಿರುತ್ತದೆ. ಇಲ್ಲಿಯೂ ಅಷ್ಟೇ; ಮೇಲಿನ ಈ ವಾಕ್ಯ ಬರೀ ಬೀಜವಲ್ಲಾ ವಿಷಬೀಜ! ‘ಹೇಗಾದರೂ’ ಎಂಬುದು ಕಾಲಕ್ರಮೇಣ ಲಂಚಕೊಟ್ಟಾದರೂ ಎಂದು ರೂಪಾಂತರ ಹೊಂದುತ್ತದೆ. ಸಮಾಜದ ನೈತಿಕತೆಯನ್ನೇ ಹಾಳುಮಾಡುವ ಮಾತಾಗಿದೆ ಇದು. ಲಂಚನೀಡಲು ಸ್ವತಃ ನಾವೇ ಸಿದ್ದವಾದರೆ ಲಂಚ ಪಡೆಯಲು ಅಣಬೆಗಳು ಹುಟ್ಟದೆ ಇರುತ್ತವೆಯೇ? ಜವಾಬ್ದಾರಿಯುತ ಪೋಷಕರು ತಮ್ಮ ಮಕ್ಕಳಿಗೆ ‘ಚೆನ್ನಾಗಿ ಓದಿ ಸರ್ಕಾರಿ ನೌಕರಿಯ ಪಡೆದುಕೋ’ ಎನ್ನಬೇಕೇ ಹೊರತು, ‘ಹೇಗಾದರೂ ಸರಿ, ಸರ್ಕಾರಿ ನೌಕರನಾಗು’ ಎಂದು ಹೇಳಬಾರದು.
ಈಗಾಗಲೇ ಆಗಿರುವ ಅವ್ಯವಸ್ಥೆಗೆ ಹೋರಾಟವೇ ಮದ್ದು. ನಮ್ಮ ಹಕ್ಕುಗಳಿಗಾಗಿ ದನಿಯೆತ್ತುವುದು ಖಂಡಿತ ತಪ್ಪಲ್ಲಾ. ಈ ಅವ್ಯವಸ್ಥೆಯು ಕ್ಯಾನ್ಸರ್ನ ಕಣದಂತೆ, ಇದೀಗ ನಮ್ಮಲ್ಲಿ ಇದು ಹೇಗೋ ಉತ್ಪತ್ತಿಯಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಪಡೆದುಕೊಳ್ಳಲೇಬೇಕು. ಇಲ್ಲವಾದಲ್ಲಿ ಮುಂದಿನ ನಮ್ಮ ಅಸ್ತಿತ್ವವೇ ನಶಿಸಬಹುದು. ಇಲ್ಲಿ ನ್ಯಾಯ ಕೇಳುವುದು ಕೇವಲ ನೌಕರಿ ಪಡೆಯುವ ಅಭ್ಯರ್ಥಿಯ ಕರ್ತವ್ಯವಲ್ಲಾ ಬದಲಿಗೆ ಉತ್ತಮ ಸಮಾಜ ಬಯಸುವ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ. ಈಗಾಗಲೇ ಹಲವಾರು ಮಂದಿ ಹಲವಾರು ರೀತಿ ಹೋರಾಟಗಳನ್ನು ಪ್ರಾರಂಭಿಸಿದ್ದಾರೆ. ಎಲ್ಲರೂ ಸಹಕರಿಸಿ, ದನಿಗೂಡಿಸಿದರೆ ಕೆಪಿಎಸ್ಸಿಯಲ್ಲಿ ಈವರೆಗೂ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ.
(ಕೋಲಾರದ ಪವಿತ್ರಾ ಬಿಇ ಪದವೀಧರೆ, ಕೆಪಿಎಸ್ಸಿ ಸಿದ್ಧತೆ ನಡೆಸಿದ್ದರು)
ಸಾಮಾಜಿಕ ಸಮಸ್ಯೆಗಳು ಮತ್ತು ಪ್ರಚಲಿತ ವಿಚಾರಗಳ ಬಗ್ಗೆ ಲೇಖನಗಳಿಗೆ ಸ್ವಾಗತ. ನಿಮ್ಮ ಬರಹಗಳನ್ನು tv9kannadadigital@gmail.com ವಿಳಾಸಕ್ಕೆ ಇಮೇಲ್ ಮಾಡಿ.
Published On - 7:15 pm, Fri, 5 February 21