Lunar Eclipse: ನ. 8ರ ಚಂದ್ರ ಗ್ರಹಣ ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ದಾನ, ಆಚರಣೆ ಮತ್ತಿತರ ವಿವರ ಇಲ್ಲಿದೆ
Chandra Grahan 2022: ಈ ಚಂದ್ರ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38, ಮಧ್ಯ ಕಾಲ 4.29 ಹಾಗೂ ಮೋಕ್ಷ ಕಾಲ 6.19 ಆಗಿರುತ್ತದೆ. ಆದರೆ ಈ ಅವಧಿಯಲ್ಲಿ, ಅಂದರೆ ಮಧ್ಯಾಹ್ನ ಚಂದ್ರ ದರ್ಶನ ಸಾಧ್ಯವಿಲ್ಲ. ಆದರೆ ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ 20 ನಿಮಿಷದಲ್ಲಿ ಚಂದ್ರ ಗ್ರಹಣದ ದರ್ಶನ ಸಹಿತ ಇಡೀ ಗ್ರಹಣ ಮುಗಿದು ಹೋಗುತ್ತದೆ
ಚಂದ್ರ ಗ್ರಹಣ ನವೆಂಬರ್ 8ನೇ ತಾರೀಕಿನಂದು ಇರುವುದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಆ ದಿನ ರಾಹುಗ್ರಸ್ತ ಗ್ರಸ್ತೋದಯ ಚಂದ್ರ ಗ್ರಹಣ ಇದೆ. ನಿಮಗೆ ಗೊತ್ತಿರಲಿ, ಚಂದ್ರ ಗ್ರಹಣವು ಹುಣ್ಣಿಮೆಗಳಲ್ಲಿ ಮತ್ತು ಸೂರ್ಯ ಗ್ರಹಣ ಅಮಾವಾಸ್ಯೆಗಳಲ್ಲಿ ಸಂಭವಿಸುತ್ತದೆ. 4 ರಾಶಿಯವರು ಶುಭ, 4 ರಾಶಿಯವರು ಅಶುಭ ಹಾಗೂ 4 ರಾಶಿಯವರು ಮಿಶ್ರ ಫಲವನ್ನು ಈ ಗ್ರಹಣದಿಂದ ಪಡೆಯಲಿದ್ದಾರೆ. ಗ್ರಹಣವು ಮೇಷ ರಾಶಿಯಲ್ಲಿ ಆಗುತ್ತಿರುವುದರಿಂದ ಯಾವ ರಾಶಿಯವರಿಗೆ ಮೇಷವು 3, 6, 10 ಅಥವಾ 11ನೇ ಮನೆ ಆಗುತ್ತದೋ ಅಂಥವರಿಗೆ ಶುಭ. ಅಂದರೆ, ಕುಂಭ, ವೃಶ್ಚಿಕ, ಕರ್ಕಾಟಕ, ಮಿಥುನ ರಾಶಿ ಇವರಿಗೆ ಶುಭ. ಇನ್ನು ಯಾರಿಗೆ ಮೇಷ ರಾಶಿಯು 1, 4, 8 ಅಥವಾ 12ನೇ ಮನೆ ಆಗುತ್ತದೋ ಅಂಥವರಿಗೆ ಅಶುಭ ಫಲ. ಅಂದರೆ, ಮೇಷ, ಮಕರ, ಕನ್ಯಾ ಹಾಗೂ ವೃಷಭ ರಾಶಿಯವರಿಗೆ ಅಶುಭ ಫಲ. ಇನ್ನು 2, 5, 7 ಅಥವಾ 9ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತದೋ, ಅಂದರೆ ಮೀನ, ಧನುಸ್ಸು, ತುಲಾ ಹಾಗೂ ಸಿಂಹ ರಾಶಿಯವರಿಗೆ ಮಿಶ್ರ ಫಲ ಇರುತ್ತದೆ.
ಚಂದ್ರ ಗ್ರಹಣ ಕಾಲದ ವಿವರ ಹೀಗಿದೆ:
ಇನ್ನು ಈ ಚಂದ್ರ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38, ಮಧ್ಯ ಕಾಲ 4.29 ಹಾಗೂ ಮೋಕ್ಷ ಕಾಲ 6.19 ಆಗಿರುತ್ತದೆ. ಆದರೆ ಈ ಅವಧಿಯಲ್ಲಿ, ಅಂದರೆ ಮಧ್ಯಾಹ್ನ ಚಂದ್ರ ದರ್ಶನ ಸಾಧ್ಯವಿಲ್ಲ. ಆದರೆ ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ 20 ನಿಮಿಷದಲ್ಲಿ ಚಂದ್ರ ಗ್ರಹಣದ ದರ್ಶನ ಸಹಿತ ಇಡೀ ಗ್ರಹಣ ಮುಗಿದು ಹೋಗುತ್ತದೆ. ಒಟ್ಟಾರೆ ಗ್ರಹಣದ ಅವಧಿಯು 3 ಗಂಟೆ 40 ನಿಮಿಷವೇ ಆದರೂ ಕಾಣಿಸಿಕೊಳ್ಳುವುದು ಕೇವಲ ಇಪ್ಪತ್ತು ನಿಮಿಷ ಮಾತ್ರ.
ಚಂದ್ರ ಗ್ರಹಣ ಕಾಲದಲ್ಲಿ ಮಾಡಬೇಕಾದ ಕೆಲಸಗಳು
ಚಂದ್ರ ಗ್ರಹಣ ಸ್ಪರ್ಶ ಆಗುವ ಮಧ್ಯಾಹ್ನ 2.38ಕ್ಕೆ ಒಂದು ಸ್ನಾನ, ಮಧ್ಯ ಕಾಲವಾದ 4.29 ಹಾಗೂ ಮೋಕ್ಷ ಕಾಲ 6.19ಕ್ಕೆ ಒಮ್ಮೆ ಹೀಗೆ ಮೂರು ಬಾರಿ, ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡುವುದು ಶಾಸ್ತ್ರ ಸಮ್ಮತವಾದದ್ದು. ಚಂದ್ರೋದಯ ಆದ ಮೇಲೆ ಸ್ಪರ್ಶ ಸ್ನಾನ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಲ್ಲಿ ಅದನ್ನು ಬಿಟ್ಟು, ಈ ಮೇಲ್ಕಾಣಿಸಿದ ಸಮಯದಲ್ಲಿ ನಿಯಮ ಅನುಸರಿಸುವುದು ಉತ್ತಮ. ಇನ್ನು ಈ ಗ್ರಹಣ ಸಮಯದಲ್ಲಿ ದೇವರ ಸ್ಮರಣೆಗೆ, ಜಪ- ತಪಗಳಿಗೆ ವಿಶೇಷ ಆದ್ಯತೆ. ಆದ್ದರಿಂದ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಬೇರೆ ರೀತಿಯಲ್ಲಿ ಸಮಯ ಕಳೆಯುವುದಕ್ಕಿಂತ ದೇವರ ಧ್ಯಾನದಲ್ಲಿ ಮಗ್ನರಾಗಿ.
ಇದನ್ನೂ ಓದಿ: Lunar Eclipse: ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹಣದ ಪ್ರಭಾವ ಹೇಗಿರುತ್ತದೆ?
ಗ್ರಹಣ ಅಂದಾಕ್ಷಣ ಮುನ್ನೆಲೆಗೆ ಬರುವ ಮತ್ತೊಂದು ಸಂಗತಿ ಅಂದರೆ, ಅದು ದಾನಗಳದು. ಈ ಬಾರಿ ನಡೆಯುತ್ತಿರುವುದು ರಾಹುಗ್ರಸ್ತ ಚಂದ್ರಗ್ರಹಣ. ಆ ಕಾರಣಕ್ಕೆ ರಾಹುವಿನ ಸಲುವಾಗಿ ಉದ್ದಿನ ಬೇಳೆ, ಚಂದ್ರನಿಗೆ ಸಂಬಂಧಿಸಿದಂತೆ ಭತ್ತ ಅಥವಾ ಅಕ್ಕಿ, ಇದರ ಜತೆಗೆ ಚಂದ್ರಬಿಂಬವನ್ನು ವೀಳ್ಯದೆಲೆ, ಅಡಿಕೆ, ಬಾಳೆಹಣ್ಣು, ತೆಂಗಿನಕಾಯಿ, ದಕ್ಷಿಣೆ ಸಹಿತವಾಗಿ ದಾನ ಮಾಡಬೇಕು. ಇದನ್ನು ಯಾರಿಗೆ ದಾನ ಮಾಡಬೇಕು ಎಂಬ ಪ್ರಶ್ನೆ ಬರುತ್ತದೆ. ಶಾಸ್ತ್ರದಲ್ಲಿ ಉಲ್ಲೇಖ ಆಗಿರುವುದರಿಂದ ಇದನ್ನು ಬ್ರಾಹ್ಮಣರಿಗೆ ದಾನ ನೀಡಬೇಕು ಎಂದಿದೆ. ಉಳಿದಂತೆ ದಾನ ಮಾಡುವವರ ಆಯ್ಕೆಗೆ ಬಿಟ್ಟ ವಿಚಾರ. ಆದರೆ ಧಾನ್ಯಗಳ ಪ್ರಮಾಣವನ್ನು ಗಮನದಲ್ಲಿ ಇಟ್ಟುಕೊಳ್ಳಿ; ಪಡೆದುಕೊಂಡವರು ಅವುಗಳನ್ನು ಬಳಸುವಂತಿರಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ಧಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:43 pm, Sat, 5 November 22