ಜೀವನವನ್ನು ಯೋಗ್ಯ ರೀತಿಯಲ್ಲಿ ಸಾಗಿಸಲು ಭಕ್ತರಿಗೆ ಮಾರ್ಗದರ್ಶನ ನೀಡುವವನೇ ದತ್ತಾತ್ರೇಯ. ಈತ ತ್ರಿಮೂರ್ತಿಗಳ ಅಂಶ. ಋಷಿ ದಂಪತಿ ಅತ್ರಿ ಹಾಗೂ ಅನುಸೂಯಾರಿಗೆ ತ್ರಿಮೂರ್ತಿಗಳು ತಮ್ಮನ್ನು ತಾವೇ ಅರ್ಪಿಸಿದ್ದರಿಂದ ಆತನನ್ನು ದತ್ತನೆಂದು ಕರೆಯಲಾಗುತ್ತದೆ. ಈ ಭಗವಾನ್ ದತ್ತಾತ್ರೇಯನ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುವ ಪ್ರಮುಖ ಹಿಂದೂ ಹಬ್ಬವೇ ದತ್ತಾತ್ರೇಯ ಜಯಂತಿ ಅಥವಾ ದತ್ತ ಜಯಂತಿ. ಮಾರ್ಗಶಿರ ಮಾಸದ ಹುಣ್ಣಿಮೆಯಂದು ಭಕ್ತರು ದತ್ತಾತ್ರೇಯನನ್ನು ಪೂಜಿಸಲು ಒಟ್ಟುಗೂಡುತ್ತಾರೆ, ಆತನ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಾರೆ. ಈ ಹಬ್ಬವು ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶವನ್ನು ನೀಡುತ್ತದೆ. ಈ ವರ್ಷ ದತ್ತ ಜಯಂತಿಯನ್ನು ಡಿಸೆಂಬರ್ 14ರಂದು ಆಚರಿಸಲಾಗುತ್ತದೆ.
– 2024ರ ದತ್ತ ಜಯಂತಿ: ಡಿಸೆಂಬರ್ 14
– ಪೂರ್ಣಿಮಾ ತಿಥಿ ಪ್ರಾರಂಭ: ಡಿ.14 ಸಂಜೆ 04:58
– ಪೂರ್ಣಿಮಾ ತಿಥಿ ಕೊನೆಗೊಳ್ಳುವುದು ಡಿ.15 ಮಧ್ಯಾಹ್ನ 02:31
ಭಗವಾನ್ ದತ್ತಾತ್ರೇಯನು ಬ್ರಹ್ಮಾಂಡದ ಮೂರು ಮೂಲಭೂತ ಅಂಶಗಳ ಏಕತೆಯನ್ನು ಸಾಕಾರಗೊಳಿಸುತ್ತಾನೆ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ (ಭಗವಾನ್ ಶಿವನ) ಸಮ್ಮಿಲನವನ್ನು ಇದು ಸಂಕೇತಿಸುತ್ತದೆ. ಸೃಷ್ಟಿಕರ್ತ, ಪೋಷಕ ಮತ್ತು ವಿನಾಶಕನಾಗಿ, ಭಗವಾನ್ ದತ್ತಾತ್ರೇಯನು ಜೀವನದ ಸಂಪೂರ್ಣ ಚಕ್ರವನ್ನು ಪ್ರತಿನಿಧಿಸುತ್ತಾನೆ. ಕೆಲವೊಮ್ಮೆ, ಅವನನ್ನು ವಿಷ್ಣುವಿನ ಅವತಾರವೆಂದು ಪೂಜಿಸಲಾಗುತ್ತದೆ. ಭಕ್ತರು ಜ್ಞಾನ, ಬುದ್ಧಿವಂತಿಕೆ ಮತ್ತು ತ್ಯಾಗದ ಸಂಕೇತವಾಗಿ ದತ್ತಾತ್ರೇಯನನ್ನು ಪೂಜಿಸುತ್ತಾರೆ. ದತ್ತ ಜಯಂತಿಯಂದು ಭಕ್ತಿಯಿಂದ ಅವನನ್ನು ನೆನೆಯುವುದರಿಂದ ಆತನ ಆಶೀರ್ವಾದದ ಜೊತೆಗೆ ಮನಸ್ಸಿಗೆ ಶಾಂತಿ ಸಿಗುತ್ತದೆ, ಅಲ್ಲದೆ ಜೀವನದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸಿಕೊಂಡು ಯಶಸ್ಸನ್ನು ಪಡೆಯಬಹುದು ಎಂದು ನಂಬಲಾಗಿದೆ.
ಈ ದಿನದಂದು, ಭಕ್ತರು ಮುಂಜಾನೆ ಬೇಗ ಎದ್ದು ಪ್ರಾರ್ಥನೆ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ. ಕೆಲವರು ಮನೆಯಲ್ಲಿ ಪೂಜೆ ಮಾಡುತ್ತಾರೆ ಅಥವಾ ದತ್ತಾತ್ರೇಯ ದೇವರಿಗೆ ಸಮರ್ಪಿತವಾದ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಕೆಲವರು ದತ್ತಾತ್ರೇಯನಿಗೆ ಸಂಬಂಧ ಪಟ್ಟ ಭಕ್ತಿಗೀತೆಗಳನ್ನು ಪಠಿಸುತ್ತಾರೆ ಮತ್ತು ದೇವರಿಗೆ ವಿಶೇಷ ಪೂಜೆ ಮತ್ತು ಅಭಿಷೇಕಗಳನ್ನು ಮಾಡುತ್ತಾರೆ. ಕೆಲವು ಭಕ್ತರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸವನ್ನು ಆಚರಿಸುತ್ತಾರೆ, ಪೂಜೆ ಮತ್ತು ಜಪವನ್ನು 1000 ಬಾರಿ ಮಾಡುತ್ತಾರೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ