Garuda Purana: ದಾಂಪತ್ಯ ಜೀವನದ ಬಿರುಕಿನಿಂದ ಹಿಡಿದು ಮಕ್ಕಳು, ಹಣಕಾಸು ಸಮಸ್ಯೆ ತನಕ ಈ ಒಂದು ವಿಷಯವೇ ಪರಿಹಾರ
ಸ್ವಂತ ಮಕ್ಕಳು ಮಾತು ಕೇಳುತ್ತಿಲ್ಲ ಎಂಬ ಪರಿಸ್ಥಿತಿ ಇದ್ದರೆ ಆಗಲೂ ಸಿಟ್ಟಿಗೆ ಹೆಚ್ಚು ಮಹತ್ವ ಕೊಡದೇ ತಾಳ್ಮೆಯಿಂದಲೇ ಅವರನ್ನು ತಿದ್ದಲು ನೋಡಬೇಕು. ಅದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವುದಲ್ಲದೇ ತಪ್ಪು ಮಾಡುವ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡುತ್ತದೆ.
ಸಾಧಾರಣವಾಗಿ ಮನೆಯಲ್ಲಿ ಯಾರದ್ದಾದರೂ ಮರಣವಾದಾಗ ಗರುಡ ಪುರಾಣವನ್ನು ಕೇಳುವ ಪದ್ಧತಿ ಚಾಲ್ತಿಯಲ್ಲಿದೆ. ಮೃತರ ಕುಟುಂಬಸ್ಥರು ಗರುಡ ಪುರಾಣ ಆಲಿಸುವ ಮೂಲಕ ಸತ್ಯ, ನ್ಯಾಯ, ಧರ್ಮದ ಪಥವನ್ನು ಹಾಗೂ ಅದರ ಮಹತ್ವವನ್ನು ಅರಿಯುತ್ತಾರೆ ಎನ್ನಲಾಗುತ್ತದೆ. ಆದರೆ, ಬಹುತೇಕರು ಗರುಡ ಪುರಾಣವನ್ನು ಇಷ್ಟಕ್ಕೇ ಸೀಮಿತ ಮಾಡಿರುವುದರಿಂದ ಅದು ಸಾವಿನ ಮನೆಯಲ್ಲಿ ಆಲಿಸುವುದಕ್ಕಷ್ಟೇ ಸರಿ ಎಂಬಂತಾಗಿದೆ. ವಾಸ್ತವವಾಗಿ ಇದೊಂದು ತಪ್ಪು ಕಲ್ಪನೆಯಾಗಿದೆ. ಏಕೆಂದರೆ ಅದರಲ್ಲಿ ಸಾವು ಹಾಗೂ ಸಾವಿನ ನಂತರದ ಕ್ಷಣಗಳ ಬಗ್ಗೆ ಮಾತ್ರವಲ್ಲದೇ ನೀತಿ, ನಿಯಮ, ತ್ಯಾಗ, ಧರ್ಮದ ಪರಿಪಾಲನೆ ಕುರಿತಾಗಿಯೂ ಹಲವು ವಿಚಾರಗಳನ್ನು ನೀಡಲಾಗಿದೆ. ಗರುಡ ಪುರಾಣದಲ್ಲಿ ನೀತಿಸಾರ ಎಂಬ ಅಧ್ಯಾಯವೊಂದು ಇದ್ದು ಅದರಲ್ಲಿ ಮನುಷ್ಯ ಸುಖ, ಸಂತೋಷದ ಜೀವನಕ್ಕಾಗಿ ಏನು ಮಾಡಬೇಕು ಎಂಬುದನ್ನು ವಿವರಿಸಲಾಗಿದೆ. ಬಹುಮುಖ್ಯವಾಗಿ ತಾಳ್ಮೆಯೇ ಹಲವು ಸಂಕಷ್ಟಗಳಿಗೆ ಪರಿಹಾರ ಎಂದೂ ತಿಳಿಸಲಾಗಿದೆ.
ಬದುಕಿನಲ್ಲಿ ನೆಮ್ಮದಿ ನೆಲೆಸಬೇಕೆಂದರೆ ಗಂಡ, ಹೆಂಡತಿ ಇಬ್ಬರೂ ಒಬ್ಬರನ್ನೊಬ್ಬರು ನಂಬಿ ನಡೆಯಬೇಕು. ಯಾವ ದಂಪತಿ ಮಧ್ಯೆ ನಂಬಿಕೆ ಎಂಬ ಊರುಗೋಲು ಮುರಿದು ಹೋಗುತ್ತದೋ ಅದು ಅವರ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ವಿರಸ, ಅಪನಂಬಿಕೆ ಎನ್ನುವುದು ಮನೆಯಲ್ಲಿ ಸಂಕಟಮಯವಾದ ವಾತಾವರರಣವನ್ನು ಸೃಷ್ಟಿ ಮಾಡುವುದಲ್ಲದೇ ಮನಸ್ಸುಗಳ ಮಧ್ಯೆ ಅಂತರವನ್ನು ಹೆಚ್ಚಿಸುತ್ತದೆ. ಇದನ್ನು ತಪ್ಪಿಸಬೇಕೆಂದರೆ ಬದುಕಿನಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಬೇಕು.
ಗಂಡ ಹೆಂಡತಿ ಎಂದಮೇಲೆ ಒಬ್ಬರಿಗೊಬ್ಬರು ಹೆಗಲಾಗಿ ಕಷ್ಟ ಸುಖ ಎರಡನ್ನೂ ಹಂಚಿಕೊಂಡು ನಡೆಯಬೇಕು. ಒಂದುವೇಳೆ ಯಾರಾದರೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರೆ ಇನ್ನೊಬ್ಬರು ಅವರ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಇದು ಅವರ ಆರೋಗ್ಯ ಸುಧಾರಿಸುವುದಷ್ಟೇ ಅಲ್ಲದೇ ಬದುಕಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಆರೈಕೆಯ ಸಂದರ್ಭದಲ್ಲಿ ಹಿಂಜರಿಯದೇ, ಸಿಡುಕು ತೋರದೇ ತಾಳ್ಮೆಯಿಂದ ಅವರನ್ನು ನೋಡಿಕೊಳ್ಳುವುದು ಬಹುಮುಖ್ಯ.
ಒಂದು ವೇಳೆ ಶತ್ರು ಅಥವಾ ಯಾರೋ ಹತ್ತಿರದವರಿಂದಲೇ ದ್ರೋಹವಾಗುತ್ತಿದೆ ಎಂದರೂ ತಾಳ್ಮೆಗೆಡದೇ ಸಾವಧಾನ ಚಿತ್ತರಾಗಿ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸಬೇಕು. ಆಗ ಮಾತ್ರ ಕಷ್ಟ ಪರಿಹಾರವಾಗುತ್ತದೆ. ಬದಲಾಗಿ ದುಡುಕು ಸ್ವಭಾವವನ್ನು ತೋರಿಸಿದರೆ ಸಮಸ್ಯೆ ಕಗ್ಗಂಟಾಗುವುದು ಖಚಿತ.
ಸ್ವಂತ ಮಕ್ಕಳು ಮಾತು ಕೇಳುತ್ತಿಲ್ಲ ಎಂಬ ಪರಿಸ್ಥಿತಿ ಇದ್ದರೆ ಆಗಲೂ ಸಿಟ್ಟಿಗೆ ಹೆಚ್ಚು ಮಹತ್ವ ಕೊಡದೇ ತಾಳ್ಮೆಯಿಂದಲೇ ಅವರನ್ನು ತಿದ್ದಲು ನೋಡಬೇಕು. ಅದು ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವುದಲ್ಲದೇ ತಪ್ಪು ಮಾಡುವ ಮುನ್ನ ನೂರು ಬಾರಿ ಯೋಚಿಸುವಂತೆ ಮಾಡುತ್ತದೆ. ಅಷ್ಟೇ ಅಲ್ಲದೇ ಪೋಷಕರೊಟ್ಟಿಗೆ ಸರಿ, ತಪ್ಪುಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೂ ಅನುವು ಮಾಡಿಕೊಡುತ್ತದೆ.
ಸತತ ಪ್ರಯತ್ನದ ನಂತರವೂ ಯಶಸ್ಸು ಲಭಿಸುತ್ತಿಲ್ಲ ಎಂದಾದಲ್ಲಿ ನೀವು ಪ್ರಯೋಗಿಸಬೇಕಾದ ಏಕೈಕ ಅಸ್ತ್ರವೆಂದರೆ ತಾಳ್ಮೆ. ಏಕೆಂದರೆ ಸೋಲು ಎದುರಾದಾಗ ಅದನ್ನು ತಾಳ್ಮೆಯಿಂದ ಎದುರಿಸದೇ ಇದ್ದಲ್ಲಿ ಅನಾವಶ್ಯಕ ಚಿಂತೆ, ಮಾನಸಿಕ ಒತ್ತಡಗಳು ತಲೆದೋರಿ ಬದುಕನ್ನು ಮತ್ತಷ್ಟು ದುರ್ಭರವಾಗಿಸುತ್ತವೆ. ಹೀಗಾಗಿ ಕಠಿಣ ಪರಿಶ್ರಮವನ್ನು ತಾಳ್ಮೆಯಿಂದ ಮುಂದುವರೆಸಿಕೊಂಡು ಹೋದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ.
ಇದನ್ನೂ ಓದಿ: ಈ ಗುಣಗಳು ನಿಮ್ಮ ಯಶಸ್ಸನ್ನು ಕಸಿದುಕೊಳ್ಳಬಹುದು; ಗರುಡ ಪುರಾಣದಲ್ಲೂ ಉಲ್ಲೇಖಿಸಿರುವ ಅಂಶಗಳೇನು?
Published On - 6:50 am, Wed, 4 August 21