ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ

ಮಕರ ಸಂಕ್ರಾಂತಿ‌ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಧಾರ್ಮಿಕ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲು ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ವಿಶೇಷ ಅರ್ಥ, ಸಂಭ್ರಮ ಇದೆ. ಆಚರಣೆಯಲ್ಲಿ ಹಲವು ಪದ್ಧತಿಗಳಿವೆ.

ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ
ಬೆಂಗಳೂರು ಗವಿಗಂಗಾಧರೇಶ್ವರ ದೇಗುಲದಲ್ಲಿ ಸಂಕ್ರಾಂತಿಯ ದಿನ ಲಿಂಗವನ್ನು ಚುಂಬಿಸುವ ಸೂರ್ಯರಶ್ಮಿ. (ಚಿತ್ರಕೃಪೆ: facebook.com/Mantra-shlokas)

ಮಕರ ಸಂಕ್ರಾಂತಿ ಸಡಗರದ ಹಾಗೂ ಆಚರಣೆಯ ಒಳನೋಟಗಳ ಬಗ್ಗೆ ಅಧ್ಯಾತ್ಮ ಚಿಂತಕರಾದ ಡಾ.‌ಸೆಲ್ವ ಪಿಳ್ಳೈ ಅಯ್ಯಂಗಾರ್ ಮಾಹಿತಿ ನೀಡಿದ್ದಾರೆ.

ಮಕರ ಸಂಕ್ರಾಂತಿ‌ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಧಾರ್ಮಿಕ, ಸಾಂಸ್ಕೃತಿಕ ಹಬ್ಬ. ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದೂ, ತಮಿಳುನಾಡಿನಲ್ಲಿ ಪೊಂಗಲ್ ಎಂದೂ, ಆಂಧ್ರದಲ್ಲಿ ಸಂಕ್ರಮಣ ಕಾಲಾಲು ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ವಿಶೇಷ ಅರ್ಥ, ಸಂಭ್ರಮ ಇದೆ. ಆಚರಣೆಯಲ್ಲಿ ಹಲವು ಪದ್ಧತಿಗಳಿವೆ.

ಸಂಕ್ರಮಣ ಅಂದರೆ ಚೆನ್ನಾಗಿ ಕ್ರಮಿಸುವುದು ಎಂಬ ಅರ್ಥ.‌ ಚೆನ್ನಾಗಿ ಕ್ರಮಿಸುವವ ಯಾರು ಎಂದರೆ, ಅದು ಸೂರ್ಯ. ಸೂರ್ಯ ದೇವನು ತನ್ನ ಪಥ ಬದಲಿಸಿ, ಮತ್ತೊಂದು ಪಥದಲ್ಲಿ ಚಲಿಸುವ ಈ ಕಾಲವನ್ನು ಸಂಕ್ರಮಣ ಎನ್ನುತ್ತೇವೆ. ಸೂರ್ಯನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥ ಬದಲಿಸುತ್ತಾನೆ. ಆದ್ದರಿಂದ, ಮಕರ ಸಂಕ್ರಾಂತಿಯನ್ನು ಉತ್ತರಾಯಣ ಸಂಕ್ರಮಣ ಎಂದೂ ಕರೆಯುತ್ತೇವೆ.

ಆದರೆ, ಸೂರ್ಯ ನಿಶ್ಚಲನಾಗಿದ್ದಾನೆ.‌ ಹಾಗಾದರೆ, ಅವನು ಹೇಗೆ‌ ಚಲಿಸುತ್ತಾನೆ‌‌ ಎಂಬ ಪ್ರಶ್ನೆ ಬರಬಹುದು. ಸೂರ್ಯ ಇದ್ದಂತೇ ಇರುವುದು ನಿಜವಾದರೂ ಭೂಮಿ ಚಲನೆಯಿಂದ, ಸೂರ್ಯನ ಬೆಳಕು ಭೂಮಿಯ ಉತ್ತರ ಭಾಗಕ್ಕೆ ಹೆಚ್ಚಾಗಿ ಬೀಳುತ್ತದೆ. ಭೂಮಿಯ ಉತ್ತರಾರ್ಧ ಹಾಗೂ ದಕ್ಷಿಣಾರ್ಧ‌ ಭಾಗಕ್ಕೆ ಸೂರ್ಯನ ಬೆಳಕು ಬೀಳುವ ಕಾಲವನ್ನು ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಹೇಳುತ್ತೇವೆ‌. ಸೂರ್ಯನು ಈ ಚಲನೆಯ ಮೂಲಕ ಮಕರ ರಾಶಿಗೆ ಪ್ರವೇಶ ಪಡೆಯುತ್ತಾನೆ. ಹಾಗಾಗಿ ಸಂಕ್ರಮಣವನ್ನು ಮಕರ ಸಂಕ್ರಾಂತಿ ಎನ್ನುತ್ತೇವೆ.

ಮಕರ ಸಂಕ್ರಾಂತಿ ಯಾಕಿಷ್ಟು ಮಹತ್ವದ ಹಬ್ಬ?
ಇದು ಚಳಿಗಾಲ‌‌ ಮುಗಿಸಿ ಸೂರ್ಯ ಸೃಷ್ಟಿಯ ಕಾಲ. ಧಾರ್ಮಿಕ ನಂಬಿಕೆ ಪ್ರಕಾರ ಉತ್ತರಾಯಣದಲ್ಲಿ ದೇವಾನುದೇವತೆಗಳ ಬಾಗಿಲು ತೆರೆಯುತ್ತದೆ ಎಂಬ ಪ್ರತೀತಿ. ವೈಕುಂಠದ ಬಾಗಿಲೂ ತೆರೆದಿರುತ್ತದೆ. ಹಾಗಾಗಿ ಉತ್ತರಾಯಣ ಸಂಕ್ರಮಣದ ದಿನಕ್ಕೆ ಬಹಳ‌ ಮಹತ್ವ. ಉತ್ತರಾಯಣ ಪುಣ್ಯ ಕಾಲದಲ್ಲಿ ಸಾವು ಪಡೆದವರಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿಯೇ ಭೀಷ್ಮ, ದಕ್ಷಿಣಾಯಣದಲ್ಲಿ ಏಟು ತಿಂದು ಮಲಗಿದ್ದರೂ, ಉತ್ತರಾಯಣದ ವರೆಗೆ ಪ್ರಾಣಧಾರಣೆ ಮಾಡಿ ಮೋಕ್ಷ ಪಡೆದ ಎಂದು ಮಹಾಭಾರತದಲ್ಲಿ ಹೇಳಲಾಗಿದೆ.

ಬೆಂಗಳೂರಿನಲ್ಲಿ ಸಂಕ್ರಾಂತಿ ಹಬ್ಬದಂದು ರಾಸುಗಳನ್ನು ಕಿಚ್ಚು ಹಾಯಿಸುವ ಪದ್ಧತಿಯಿದೆ (ಚಿತ್ರ: ಪಿಟಿಐ ಸಂಗ್ರಹ)

ಸಂಕ್ರಾಂತಿಗೆ ಎಳ್ಳು ಬೆಲ್ಲ
ಸಂಕ್ರಾಂತಿಯ ಸಮಯದಲ್ಲಿ ಎಳ್ಳಿಗೆ ಅತಿ ಪ್ರಾಮುಖ್ಯತೆ ಇದೆ. ತಿಲ‌ ಸ್ನಾನ, ತಿಲ ತರ್ಪಣ, ತಿಲ ದಾನ ಹೀಗೆ ಎಂಟು ಬಗೆಯಲ್ಲಿ ಎಳ್ಳು ಬಳಕೆ ಮಾಡುವ ಕ್ರಮವಿದೆ. ಎಳ್ಳು ಹಚ್ಚಿ ಸ್ನಾನ ಮಾಡಬೇಕು. ಎಳ್ಳು ತಿನ್ನಬೇಕು.‌ ಎಳ್ಳು ದಾನ‌ ಮಾಡಬೇಕು. ‌ಪಿತೃಗಳಿಗೆ ಎಳ್ಳು ತರ್ಪಣ ಕೊಡಬೇಕು. ಎಳ್ಳನ್ನು ತಿನ್ನಬೇಕು, ಎಳ್ಳು ದಾನ ಕೊಡಬೇಕು ಎಂಬ ಕಾರಣಕ್ಕೆ ಎಳ್ಳು ಬೆಲ್ಲ ತಿಂದು ಅದನ್ನು ಹಂಚುತ್ತೇವೆ. ಇದರಿಂದ ಪಾಪ ನಾಶವಾಗುತ್ತದೆ ಎಂಬ ನಂಬಿಕೆ. ಎಳ್ಳು-ಬೆಲ್ಲ ತಿಂದು ಒಳ್ಳೇ ಮಾತಾಡು ಎಂದು ಹಿರಿಯರು ಮಕ್ಕಳಿಗೆ ಹೇಳುವುದು ವಾಡಿಕೆ.

ದೇವಾಲಯಗಳಲ್ಲಿ ವಿಶೇಷ ಪೂಜೆ
ಮಕರ ಸಂಕ್ರಾಂತಿಯಂದು ದೇಗುಲಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಸಂಕ್ರಮಣ ಅಭಿಷೇಕ ಮಾಡಲಾಗುತ್ತದೆ. ‌ಸೂರ್ಯ ರಶ್ಮಿ ಪ್ರವೇಶ ಕಾಲಕ್ಕೆ ಈ ಪೂಜಾಕಾರ್ಯ ಮಾಡುತ್ತಾರೆ. ಬೆಂಗಳೂರಿನಲ್ಲಾದರೆ, ಗವಿ ಗಂಗಾಧರೇಶ್ವರ ದೇವಾಲಯದಲ್ಲಿ, ಸೂರ್ಯ ಪ್ರವೇಶ ಕಾಲಕ್ಕೆ ಪೂಜೆ, ಅಭಿಷೇಕ ನಡೆಯುತ್ತದೆ.

ರೈತಾಪಿ‌ ವರ್ಗದ ಹಬ್ಬ
ಸಂಕ್ರಾಂತಿ ರೈತವರ್ಗದ ಜನರ ಹಬ್ಬ.‌ ತಾವು ಬೆಳೆದ ದವಸ, ಧಾನ್ಯಗಳನ್ನು ಪೂಜಿಸುವ ಹಬ್ಬ. ಸಂಕ್ರಾಂತಿ, ಹೊಸ ಬೆಳೆಗಳು ಬೆಳೆದು ರೈತಾಪಿ ವರ್ಗಕ್ಕೆ ಸಿಗುವ ಕಾಲ. ಹೊಸ ಭತ್ತ, ಧಾನ್ಯಗಳ ರಾಶಿ ಪೂಜೆ ಮಾಡುವ ದಿನ. ಅದರಿಂದ, ಧಾನ್ಯಗಳ ಕೊರತೆ ಉಂಟಾಗುವುದಿಲ್ಲ ಎಂಬ ನಂಬಿಕೆ ರೈತರಿಗೆ. ಆ ದಿನ, ಕಣದ ಪೂಜೆ ಮಾಡಿ, ಊರವರು ಸೇರಿ, ಅಡುಗೆ ಮಾಡಿ, ಊಟ ಮಾಡಿ ಸಂತಸ ಹಂಚಿಕೊಳ್ಳುತ್ತಾರೆ.

ಸಂಕ್ರಾಂತಿಯ ಅಡುಗೆಯ ವಿಧಾನ
ಸಂಕ್ರಮಣದ ದಿನ ಅವರೆಕಾಳು, ಸಿಹಿಕುಂಬಳಕಾಯಿ ಬಳಸಿ ಅಡುಗೆ ಮಾಡಬೇಕು ಎಂಬ ವಾಡಿಕೆ ಇದೆ. ಕಾಲಕ್ಕೆ ತಕ್ಕಂತೆ ತಿನ್ನುವುದು ಭಾರತೀಯ ಸಂಸ್ಕೃತಿಯ ಪದ್ಧತಿ.‌ ಅದರಂತೆ, ಈ ಕಾಲದ ಬೆಳೆಯಾದ ಅವರೆಕಾಳು ಬಳಸಿ ಅಡುಗೆ ಮಾಡಿ ಊಟ ಮಾಡುವುದು ಸಂಭ್ರಮ ಆಚರಿಸಲಾಗುತ್ತದೆ.‌ ಆಂಬೊಡೆ, ಪಾಯಸ, ಅವರೆಕಾಯಿ ಚಿತ್ರಾನ್ನ ಮಾಡಿ ಕುಟುಂಬ, ಊರವರು ಜೊತೆಯಾಗಿ ಊಟ ಮಾಡಲಾಗುತ್ತದೆ.

ಭಾರತೀಯ ಹಬ್ಬಗಳೆಲ್ಲಾ ವೈಜ್ಞಾನಿಕ ಅಂಶ ಇಟ್ಟುಕೊಂಡೇ ಬಂದಿವೆ. ಇಂಥಾ ದಿನದಂದು ಭೂಮಿ ಉತ್ತರ ಭಾಗಕ್ಕೆ ತಿರುಗುತ್ತದೆ ಅನ್ನುವುದನ್ನೂ ಭಾರತೀಯರು 5 ಸಾವಿರ ವರ್ಷಗಳ ಹಿಂದೆಯೇ ತಿಳಿದಿದ್ದರು. ಅದುವೇ ಸಂಕ್ರಮಣ. ಇಂಥಾ ವಿಶೇಷವಾದ ಹಬ್ಬದ ಆಚರಣೆಯಿಂದ ಮನುಷ್ಯ ಆರೋಗ್ಯ ವೃದ್ಧಿ, ಮನಶ್ಶಾಂತಿ ಸಿಗುತ್ತದೆ.

(ನಿರೂಪಣೆ: ಗಣಪತಿ ದಿವಾಣ)

ಸಂಕ್ರಾಂತಿ ವಿಶೇಷ | ಹೀಗೆ ಮಾಡಿದ್ರೆ ರಂಗೋಲಿ ಬಿಡಿಸೋದು ತುಂಬಾ ಸುಲಭ

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು