Jaya Ekadashi 2024 Date: ಜಯ ಏಕಾದಶಿಯ ಆಚರಣೆ ಹಿಂದಿರುವ ಸ್ವಾರಸ್ಯಕರ ಕಥೆ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 17, 2024 | 5:03 PM

ಜಯ ಏಕಾದಶಿಯು ಹಿಂದೂ ಧರ್ಮದಲ್ಲಿ ಬಹಳ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ ಮಾಘ ಮಾಸದ ಜಯ ಏಕಾದಶಿ ಇನ್ನೇನು ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಜಯ ಏಕಾದಶಿಯನ್ನು ಏಕೆ ಆಚರಿಸಲಾಗುತ್ತದೆ ಮತ್ತು ಅದರ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

Jaya Ekadashi 2024 Date: ಜಯ ಏಕಾದಶಿಯ ಆಚರಣೆ ಹಿಂದಿರುವ ಸ್ವಾರಸ್ಯಕರ ಕಥೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯನ್ನು ಅಥವಾ ಆ ದಿನವನ್ನು ಜಯ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಜನರು ಭಕ್ತಿಯಿಂದ ಉಪವಾಸವನ್ನು ಆಚರಿಸುತ್ತಾರೆ ಮತ್ತು ವಿಷ್ಣುವನ್ನು ಪೂಜಿಸುತ್ತಾರೆ. ಈ ಬಾರಿಯ ಜಯ ಏಕಾದಶಿಯ ವ್ರತವನ್ನು ಫೆ. 20 ರಂದು ಮಂಗಳವಾರ ಆಚರಣೆ ಮಾಡಲಾಗುತ್ತದೆ. ಈ ಏಕಾದಶಿಯ ಮಹತ್ವವನ್ನು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ನೀವು ಜಯ ಏಕಾದಶಿ ಉಪವಾಸವನ್ನು ಆಚರಿಸಿದರೆ, ವಿಷ್ಣುವಿನ ಆಶೀರ್ವಾದವು ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ ಈ ಹಿಂದೆ ಮಾಡಿದ ಎಲ್ಲಾ ಪಾಪಗಳಿಂದಲೂ ಮುಕ್ತಿ ಪಡೆಯಬಹುದಾಗಿದೆ.

ಜಯ ಏಕಾದಶಿ ಉಪವಾಸವನ್ನು ಏಕೆ ಆಚರಿಸಲಾಗುತ್ತದೆ?

ಪದ್ಮ ಪುರಾಣದಲ್ಲಿ ಭಗವಾನ್ ಶ್ರೀ ಕೃಷ್ಣನು ಹೇಳಿರುವ ಪ್ರಕಾರ ಈ ಏಕಾದಶಿಯ ಉಪವಾಸವನ್ನು ಆಚರಿಸುವವರು, ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಪಾಪಗಳಿಂದ ಬಿಡುಗಡೆ ಹೊಂದುವ ಮೂಲಕ ಮರಣದ ನಂತರ ಪಿಶಾಚಿಯಾಗದೆಯೇ ಮುಕ್ತಿ ಪಡೆಯಬಹುದು ಎಂದು ಉಲ್ಲೇಖವಾಗಿದೆ. ರಾಜ ಹರಿಶ್ಚಂದ್ರ ಕೂಡ ಜಯ ಏಕಾದಶಿ ದಿನದಂದು ಉಪವಾಸವನ್ನು ಆಚರಿಸಿದ್ದ ಎಂದು ಹೇಳಲಾಗುತ್ತದೆ. ಈ ದಿನವನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಬ್ರಹ್ಮ ಹತ್ಯಾ ಪಾಪಗಳಿಂದಲೂ ಕೂಡ ಮುಕ್ತಿ ಪಡೆಯಬಹುದು ಎಂದು ಭಗವಾನ್ ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಈ ಉಪವಾಸದ ಬಗ್ಗೆ ಹೇಳಿದ್ದನು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಭಕ್ತರು ಈ ಉಪವಾಸವನ್ನು ಪೂರ್ಣ ಭಕ್ತಿಯಿಂದ ಆಚರಿಸಿದರೆ, ದೆವ್ವ ಮತ್ತು ಶತ್ರು ಕಾಟಗಳನ್ನು ಎದುರಿಸಬೇಕಾಗಿಲ್ಲ ಎಂದು ನಂಬಲಾಗಿದೆ.

ಇದನ್ನೂ ಓದಿ: ಕನಸಿನಲ್ಲಿ ಮುರಿದ ಗಾಜನ್ನು ನೋಡುವುದು ಶುಭವೋ ಅಶುಭವೋ? ಈ ಕನಸು ಭವಿಷ್ಯದ ಸೂಚನೆ

ಜಯ ಏಕಾದಶಿ ಆಚರಣೆ ಹೇಗೆ ಪ್ರಾರಂಭವಾಯಿತು?

ದಂತಕಥೆಯ ಪ್ರಕಾರ, ಒಮ್ಮೆ ದೇವತೆಗಳು ಸ್ವರ್ಗದಲ್ಲಿ ಒಂದು ಉತ್ಸವವನ್ನು ಆಯೋಜಿಸಿದ್ದರು. ಅದರಂತೆ, ಉತ್ಸವಕ್ಕೆ ಎಲ್ಲಾ ಸಾಧುಗಳನ್ನು ಸಹ ಆಹ್ವಾನಿಸಲಾಗಿತ್ತು. ಈ ಉತ್ಸವದಲ್ಲಿ, ಗಂಧರ್ವರಿಂದ ನೃತ್ಯ ಮತ್ತು ಗಾಯನ ಕಾರ್ಯಕ್ರಮವಿತ್ತು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಪುಷ್ಯಾವತಿ ಎಂಬ ನರ್ತಕಿ ಮಾಲ್ಯವನ್ ಎಂಬ ಗಂಧರ್ವನನ್ನು ಗಮನಿಸಿದಳು ಅವನ ಅಂದವನ್ನು ನೋಡಿ ಇಷ್ಟಪಟ್ಟಳು. ಆ ಬಳಿಕ ಇಬ್ಬರೂ ಪರಸ್ಪರ ನೋಡಲು ಪ್ರಾರಂಭಿಸಿದರು. ಪುಷ್ಯಾವತಿ ಮತ್ತು ಮಾಲ್ಯವನ್ ಒಬ್ಬರನ್ನೊಬ್ಬರು ನೋಡುವುದರಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ಅವರು ಉತ್ಸವದಲ್ಲಿ ಹಾಜರಿದ್ದುದನ್ನು ಸಹ ಗಮನಿಸಲಿಲ್ಲ. ಇಬ್ಬರೂ ತಮ್ಮ ಮಿತಿಗಳನ್ನು ದಾಟಿ ಹತ್ತಿರ ಬಂದರು. ಇದನ್ನು ನೋಡಿ, ಉತ್ಸವದಲ್ಲಿ ಹಾಜರಿದ್ದ ಋಷಿ, ಮುನಿಗಳಿಗೆ ಸಿಟ್ಟು ಬಂದಿತು. ಇದನ್ನು ನೋಡಿದ ಇಂದ್ರ ದೇವನು ಪುಷ್ಯಾವತಿ ಮತ್ತು ಮಾಲ್ಯವನ್ ಇಬ್ಬರು ಕೂಡ ರಕ್ತಪಿಶಾಚಿಯಾಗಿ ಅಲೆದಾಡಿ ಎಂದು ಶಪಿಸಿದನು. ಇದರ ನಂತರ, ಇಬ್ಬರೂ ಮೋಕ್ಷ ಪ್ರಾಪ್ತಿಗಾಗಿ ಹಿಮಾಲಯದ ಶ್ರೇಣಿಗಳಲ್ಲಿ ಅಲೆದಾಡಿದರು. ತಾವು ಮಾಡಿದ ತಪ್ಪಿಗೆ ಇಬ್ಬರೂ ಪಶ್ಚಾತ್ತಾಪ ಪಟ್ಟರು ಬಳಿಕ ಸಾಕಷ್ಟು ಬಾರಿ ಋಷಿ, ಮುನಿಗಳ ಬಳಿ ಕ್ಷಮೆಯಾಚಿಸಿದ ನಂತರ, ನಾರದ ಮುನಿಗಳು ಮಾಘ ಮಾಸದ ಶುಕ್ಲಪಕ್ಷದ ಏಕಾದಶಿ ದಿನದಂದು ಉಪವಾಸ ಮಾಡಲು ಮತ್ತು ವಿಷ್ಣುವನ್ನು ಧ್ಯಾನಿಸಲು ಅವರಿಗೆ ಹೇಳಿದರು. ಇದು ಅವರನ್ನು ರಕ್ತಪಿಶಾಚಿ ಜೀವನದಿಂದ ಮುಕ್ತಗೊಳಿಸಿತು. ಹಾಗಾಗಿ ಈ ದಿನದಂದು ಉಪವಾಸ ಆಚರಣೆ ಮಾಡುವುದಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲದೆ ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯಲು ಇದು ಪ್ರಮುಖ ದಿನವಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ