Chandra Grahan 2022: ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ? ಪುರಾಣಗಳಲ್ಲಿ ಇರುವ ಉಲ್ಲೇಖವೇನು?
ಹದಿನೈದು ದಿನಗಳ ಅಂತರದಲ್ಲಿನ ಎರಡು ಗ್ರಹಣಗಳ ಬಗ್ಗೆ ಎದುರಾದಂತಹ ವಿಚಿತ್ರಗಳ ಬಗ್ಗೆ ಪುರಾಣಗಳಲೂ ಉಲ್ಲೇಖಿಸಲಾಗಿದೆ. ಇಂಥಹ ಎರಡೆರಡು ಗ್ರಹಣಗಳು ಮಹಾಭಾರತ ಕಾಲಘಟ್ಟದಲ್ಲಿ ನಡೆದಿತ್ತು.
ಬೆಂಗಳೂರು: ನಭೋಮಂಡಲದಲ್ಲಿ ಇಂದು ವಿಸ್ಮಯವೊಂದು ನಡೆಯಲಿದೆ. ತಂಪಾದ ಆಕಾಶದಲ್ಲಿ ಬೆಳದಿಂಗಳಂತೆ ಮಿನುಗುತ್ತಿದ್ದ ಚಂದ್ರ(Moon) ರಕ್ತದಂತೆ ಕೆಂಪಾಗಿ ಕಾಣಿಸಿಕೊಳ್ಳಲಿದ್ದಾನೆ. ಕಳೆದ ಅಮಾವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣವು(Surya Grahan 2022) ಸಂಭವಿಸಿತ್ತು. ಹದಿನೈದು ದಿನಗಳ ಅಂತರದಲ್ಲಿ ಚಂದ್ರಗ್ರಹಣವು(Chandra Grahan 2022) ಸಂಭವಿಸುತ್ತಿದೆ. ಈ ಎರಡೂ ಗ್ರಹಣಗಳು ಒಂದೇ ಮಾಸದಲ್ಲಿ ಅಂದ್ರೆ ಕಾರ್ತೀಕ ಮಾಸದಲ್ಲಿ ಬಂದಿದ್ದು ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ.
ಈ ಗ್ರಹಣವನ್ನು ರಕ್ತವರ್ಣ ಚಂದ್ರ ಗ್ರಹಣ ಎನ್ನುವುದೇಕೆ?
ಈ ರಾಹುಗ್ರಸ್ತ ಚಂದ್ರಗ್ರಹಣವನ್ನ ರಕ್ತ ಚಂದ್ರಗ್ರಹಣ , ಅಥವಾ ರಕ್ತವರ್ಣ ಚಂದ್ರ ಗ್ರಹಣ ಅಂತ ಕರೆಯಲಾಗುತ್ತೆ. ಇದೀಗ ಸಂಭವಿಸುತ್ತಿರುವ ಚಂದ್ರಗ್ರಹಣವು ಪೂರ್ಣ ಪ್ರಮಾಣದ ಚಂದ್ರಗ್ರಹಣವಾಗಿದೆ, ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಹುಣ್ಣಿಮೆಯಂದು ಚಂದ್ರನು ಭೂಮಿಗೆ ಬಹಳಷ್ಟು ಹತ್ತಿರಕ್ಕೆ ಬರಲಿದ್ದಾನೆ, ದೊಡ್ಡದಾಗಿ ಕಾಣಿಸಿಕೊಳ್ಳಲಿದ್ದಾನೆ. ಇಂತಹ ಪ್ರಕ್ರಿಯೆಯನ್ನ ಸೂಪರ್ ಮೂನ್ ಅಂತ ಕರೆಯಲಾಗುತ್ತೆ. ಇನ್ನೂ ಗ್ರಹಣದ ಸಮಯದಲ್ಲಿ ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಾಗ ಚಂದ್ರ ಕಪ್ಪಾಗಿಬಿಡುತ್ತಾನೆ, ಆದ್ರೆ ಈ ಸಮಯದಲ್ಲಿ ಚಂದ್ರ ಸಂಪೂರ್ಣವಾಗಿ ಕಪ್ಪಾಗಿ ಕಾಣಿಸಿಕೊಳ್ಳದೇ ಕೆಂಪಾಗಿ ಕಾಣಿಸಿಕೊಳ್ಳುವ ಕಾರಣ ಈ ಚಂದ್ರಗ್ರಹಣವನ್ನ ರಕ್ತ ವರ್ಣ ಚಂದ್ರಗ್ರಹಣ ಅಂತ ಕರೆಯಲಾಗುತ್ತಿದೆ. ಬ್ಲಡ್ ರೆಡ್ ಸೂಪರ್ ಮೂನ್ ಅಂತ ಕರೆಯಲಾಗುತ್ತೆ.
ಜ್ಯೋತಿಷ್ಯವಲಯದ ಪ್ರಕಾರ, ರಾಹು, ಚಂದ್ರನನ್ನು ಆವರಿಸುವ ಕಾರಣ ಇದನ್ನು ರಾಹುಗ್ರಸ್ತ ಚಂದ್ರಗ್ರಹಣ ಅಂತಾ ಹೇಳಲಾಗುತ್ತೆ. ಈ ಖಗೋಳ ವಿದ್ಯಮಾನವು ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಮೇಷ ರಾಶಿ ಭರಣೀ ನಕ್ಷತ್ರದಲ್ಲಿ ಸಂಭವಿಸುತ್ತಿದೆ.
ಸಂಪೂರ್ಣ ಚಂದ್ರಗ್ರಹಣ ಸಮಯ
ಇಂದು ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. ಸಂಜೆ 4 ಗಂಟೆ 28 ನಿಮಿಷಕ್ಕೆ ಗ್ರಹಣ ಮಧ್ಯಕಾಲ ತಲುಪಲಿದ್ದು, ಸಂಜೆ 6 ಗಂಟೆ 17 ನಿಮಿಷ ಚಂದ್ರಗ್ರಹಣ ಅಂತ್ಯವಾಗಲಿದೆ.
ರಕ್ತ ಚಂದ್ರಗ್ರಹಣವು ಎಲ್ಲೆಲ್ಲಿ ಗೋಚರಿಸಲಿದೆ?
ಈ ಬಾರಿ ಈ ರಕ್ತ ಚಂದ್ರಗ್ರಹಣವು ಭಾರತದೆಲ್ಲಡೆ ಗೋಚರಿಸಲಿದೆ. ಭಾರತದ ಕೆಲವು ಪ್ರದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಚಂದ್ರಗ್ರಹಣವು ಗೋಚರವಾದ್ರೆ ಕೆಲವಡೆ ಗ್ರಹಣಾಂತ್ಯದ ವೇಳೆ ಕಾಣಿಸಲಿದೆ,ಅಂದ್ರೆ ಮೋಕ್ಷದ ಸಮಯದಲ್ಲಿ ಕಾಣಿಸಲಿದೆ. ಅಗರ್ತಲ, ಭುವನೆಶ್ವರ್, ಡಾರ್ಜಲಿಂಗ್, ಗುವಹಾಟಿ, ಪೋರ್ಟ್ ಬ್ಲೇರ್ ಹಾಗೂ ಉತ್ತರ ಭಾರತದ ಮತ್ತಲವು ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣ ಗೋಚರಿಸಲಿದೆ.
ಇನ್ನು ದಕ್ಷಿಣ ಭಾರತದಲ್ಲಿ ಚಂದ್ರಗ್ರಹಣವು ಮುಕ್ತಾಯದ ಸಮಯದಲ್ಲಿ ಗೋಚರಿಸಲಿದೆ ಅಂದ್ರೆ ಪಾರ್ಶ್ವ ಚಂದ್ರಗ್ರಹಣವು ಸಂಭವಿಸಲಿದೆ, ಅಂತೆಯೇ ಕರ್ನಾಟಕದಲ್ಲೂ ಪಾರ್ಶ್ವ ಚಂದ್ರಗ್ರಹಣವು ಸಂಭವಿಸಲಿದೆ. ಸರಿ ಸುಮಾರು ಸಂಜೆ ಆರು ಗಂಟೆ ವೇಳೆಗೆ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಚಂದ್ರಗ್ರಹಣವು ಗೋಚರಿಸಲಿದೆ. ಇನ್ನೂ ಈ ರಕ್ತ ವರ್ಣ ಚಂದ್ರಗ್ರಹಣವು ನೇಪಾಳ , ಜಪಾನ್ , ಅಮೇರಿಕಾ , ಚೀನಾ ಸೇರಿದಂತೆ ನಾನಾ ದೇಶಗಳಲ್ಲಿ ಗೋಚರಿಸಲಿದೆ.
ಇದನ್ನೂ ಓದಿ: Lunar Eclipse: ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹಣದ ಪ್ರಭಾವ ಹೇಗಿರುತ್ತದೆ?
ಕುರುಕ್ಷೇತ್ರ ಯುದ್ಧದ ಸಮಯದಲ್ಲೂ ಇತ್ತು ಇದೇ ರೀತಿಯ ಪರಿಸ್ಥಿತಿ
ಇನ್ನು ಹದಿನೈದು ದಿನಗಳ ಅಂತರದಲ್ಲಿನ ಎರಡು ಗ್ರಹಣಗಳ ಬಗ್ಗೆ ಎದುರಾದಂತಹ ವಿಚಿತ್ರಗಳ ಬಗ್ಗೆ ಪುರಾಣಗಳಲೂ ಉಲ್ಲೇಖಿಸಲಾಗಿದೆ. ಇಂಥಹ ಎರಡೆರಡು ಗ್ರಹಣಗಳು ಮಹಾಭಾರತ ಕಾಲಘಟ್ಟದಲ್ಲಿ ನಡೆದಿತ್ತು. ಆ ನಂತರ ಕುರುಕ್ಷೇತ್ರ ಯುದ್ಧವು ಸಂಭವಿಸಿತು. ಆ ಯುದ್ಧದಲ್ಲಿ ಕೋಟ್ಯಾನು ಕೋಟಿ ಜನರು ಹಸುನೀಗಿದ್ದರು.
ಪುರಾಣಗಳ ಪ್ರಕಾರ ವ್ಯಾಸರಿಗೆ ಕುರುಕ್ಷೇತ್ರ ಯುದ್ಧದ ಮುನ್ಸೂಚನೆ ಮೊದಲೇ ಸಿಕ್ಕಿತ್ತು. ಮುಂದೆ ನಡೆಯುವ ವಿಚಿತ್ರ ಸನ್ನಿವೇಶಗಳ ಬಗ್ಗೆ ಭೀಷ್ಮಾಚಾರ್ಯರಿಗೆ ವ್ಯಾಸರು ತಿಳಿಸಿದ್ರು. ಹದಿಮೂರು ಮುಕ್ಕಾಲು ದಿನಗಳ ಅಂತರದಲ್ಲಿ ಎರಡೆರೆಡು ಗ್ರಹಣಗಳು ಬರುತ್ತೆ. ಇದು ವಿಚಿತ್ರ ಸನ್ನಿವೇಶ. ಇದು ವಿನಾಶದ ಸೂಚನೆ. ಮಹಾಯುದ್ಧ ನಡೆಯುತ್ತೆ ಅನ್ನೋ ಸೂಚನೆ ಕೊಟ್ಟಿದ್ರಂತೆ ವ್ಯಾಸರು. ಹಾಗೆ ವ್ಯಾಸರು ನುಡಿದ ಭವಿಷ್ಯ ನಿಜವಾಯಿತು.
ವಿಜ್ಞಾನದ ಪ್ರಕಾರ, ಚಂದ್ರಗ್ರಹಣ ಎನ್ನುವಂತದ್ದು ಸೌರಮಂಡಲದಲ್ಲಿ ನಡೆಯುವ ಒಂದು ಪ್ರಕ್ರಿಯೆ. ಇದ್ರಿಂದ ಯಾವುದೇ ಸಮಸ್ಯೆ ಇಲ್ಲ. ಆದ್ರೆ ಜ್ಯೋತಿಷ್ಯದ ಪ್ರಕಾರ ಈ ರಕ್ತ ಚಂದ್ರಗ್ರಹಣ ಅನೇಕ ಅವಘಡಗಳಿಗೆ ಕಾರಣವಾಗುತ್ತೆ.
ಗ್ರಹಣದ ಅವಧಿಯಲ್ಲಿ ತಾಮಸಿಕ ಶಕ್ತಿಗಳು ಬಲಗೊಳ್ಳುತ್ತವೆ. ಸಾತ್ವಿಕ, ದೈವಿಕ ಶಕ್ತಿಗಳು ಸುಪ್ತವಾಗುತ್ತವೆ, ದುಷ್ಟ ಶಕ್ತಿಗಳ ಶಕ್ತಿಯು ಅಧಿಕವಾಗುವ ಕಾರಣ ಊಹೆಗೂ ಮೀರಿದ ವಿಚಿತ್ರಗಳು ಎದುರಾಗುತ್ತವೆಂಬುವುದು ಜ್ಯೋತಿಷಿಗಳ ಅನಿಸಿಕೆಯಾಗಿದೆ.
ಇನ್ನು ಪುರಾಣಗಳ ಪ್ರಕಾರ, ನವಗ್ರಹಗಳಲ್ಲಿ ಒಬ್ಬನಾದ ಚಂದ್ರನಿಗೆ ಗ್ರಹಣ ಆವರಿಸಿದ್ರೆ, ಸೃಷ್ಟಿಯ ಮೇಲೆ ಬಹಳಷ್ಟು ಬದಲಾವಣೆಗಳಾಗುತ್ತವೆ. ಧರ್ಮಶಾಸ್ತ್ರಗಳ ಪ್ರಕಾರ, ಚಂದ್ರ ಮನಸ್ಕಾರಕನಾಗಿದ್ದು, ಗ್ರಹಣದ ಪ್ರಭಾವವು ಮನಸ್ಸಿನ ಮೇಲೆ ಬಹಳಷ್ಟು ಪ್ರಭಾವ ಬೀರುತ್ತೆ. ಮಾನಸಿಕ ರೋಗಗಳು ಉಲ್ಬಣಗೊಳ್ಳುವ, ಪ್ರೇತಬಾಧೆಗಳಂತಹ ಮನೋದೈಹಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ಹಾಗೂ ಈ ಬಾರಿಯ ರಾಹುಗ್ರಸ್ತ ಚಂದ್ರಗ್ರಹಣದ ಪ್ರಭಾವದಿಂದಾಗಿ ಜಲಕಂಟಕಗಳು ಹೆಚ್ಚಾಗುತ್ತವೆ. ಪ್ರವಾಹ ಭೀತಿಯು ಹೆಚ್ಚಾಗುತ್ತೆ. ಚಂಡಮಾರುತಗಳು ಹೆಚ್ಚಾಗುತ್ತವೆ. ರಕ್ತ ಚಂದ್ರಗ್ರಹಣದ ಪ್ರಭಾವದಿಂದ ಚಂಚಲತೆ ಹೆಚ್ಚಾಗುತ್ತೆ. ಅಂತಹ ಚಂಚಲೆತೆಯಿಂದ ತಪ್ಪು ನಿರ್ಧಾರಗಳನ್ನು ಮಾಡಲಾಗುತ್ತೆ. ಅಂತಹ ತಪ್ಪು ನಿರ್ಧಾರಗಳು ಜನರಲ್ಲಿ, ಪಕ್ಷಗಳಲ್ಲಿ ಒಡುಕು ಮೂಡಿಸುತ್ತವೆ-ಅಂತಹ ಒಡಕಿನಿಂದಾಗಿ ಕೊಲಾಹಲ ಸೃಷ್ಟಿಯಾಗುತ್ತೆಂಬ ಲೆಕ್ಕಾಚಾರವು ಜ್ಯೋತಿಷ್ಯ ವಲಯದ್ದಾಗಿದೆ.
ಶಾಸ್ತ್ರಗಳ ಪ್ರಕಾರ ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ನಿಯಮಗಳೇನು?
- ಗ್ರಹಣ ಸ್ಪರ್ಶವಾದ ತಕ್ಷಣ ಸ್ನಾನ ಮಾಡಬೇಕು.
- ಗ್ರಹಣ ಸ್ಪರ್ಶವಾದಾಗಿನಿಂದ ಮುಗಿಯುವವರೆಗೂ ಏನನ್ನೂ ತಿನ್ನಬಾರದು.
- ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಬೇಕು
- ಸ್ನಾನ ಆದ ತಕ್ಷಣ ಏನನ್ನಾದರೂ ದಾನ ಮಾಡಬೇಕು.
- ದಾನ ಮಾಡಲು ಆಗದವರು ದೇವರ ಮಂತ್ರಗಳನ್ನ ಪಠಿಸಬೇಕು .
- ಗ್ರಹಣ ಕಾಲ ಆರಂಭದಿಂದ ಮಧ್ಯಕಾಲದವರೆಗೂ ಪಿತೃಗಳನ್ನು ನೆನೆದು ತರ್ಪಣ ನೀಡಬೇಕು .
- ಗ್ರಹಣದ ನಂತರ ಸ್ನಾನ ಮಾಡಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು .
- ಪೂಜೆಯ ನಂತರ ಆಹಾರ ಸೇವಿಸಬೇಕು
- ಗ್ರಹಣ ಕಾಲದಲ್ಲಿ ನಿದ್ದೆ ಮಾಡಬಾರದು.
- ಹುಣ್ಣಿಮೆ ಗ್ರಹಣ ಕಾಲದಲ್ಲಿ ನದಿ ನೀರಿನಲ್ಲಿ ತಪಸ್ಸು ಸೂಕ್ತ
- ಹುಣ್ಣಿಮೆ ಗ್ರಹಣ ಕಾಲದಲ್ಲಿ ಮಂತ್ರಜಪ ಸಿದ್ಧಿ
- ಹುಣ್ಣಿಮೆ ಗ್ರಹಣ ಕಾಲದಲ್ಲಿ ಸಂಕಲ್ಪ ಸಿದ್ಧಿ
- ಗ್ರಹಣ ಕಾಲ ದೈವಸ್ಮರಣೆಯಿಂದ ಸಕಲ ದೋಷ ನಿವಾರಣೆ
- ಗ್ರಹಣ ಸಮಯದಲ್ಲಿ ಜಪ-ತಪ ಸೂಕ್ತ
- ಗರ್ಭಿಣಿಯರು ಎಚ್ಚರದಿಂದಿರಬೇಕು
- ದೈವ ಸ್ಮರಣೆಯಿಂದ ಧನಾತ್ಮಕ ಶಕ್ತಿ ವೃದ್ಧಿ
- ತಿನ್ನುವ ಪದಾರ್ಥಗಳ ಮೇಲೆ ದರ್ಬೆ ಹುಲ್ಲನ್ನು ಹಾಕುವುದು
Published On - 8:06 am, Tue, 8 November 22