Navratri 2024: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಸ್ವರೂಪ; ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?

| Updated By: ಅಕ್ಷತಾ ವರ್ಕಾಡಿ

Updated on: Oct 02, 2024 | 12:43 PM

ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಧರ್ಮ-ಅರ್ಥ-ಕಾಮ್ಯ-ಮೋಕ್ಷ ಹೀಗೆ ಚತುರ್ವಿಧ ಫಲ ಪುರುಷಾರ್ಥಗಳು ಸಹ ದೊರೆಯುತ್ತವೆ. ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ- ಸಂತೃಪ್ತಿಯನ್ನು ಕಾಣಬಹುದು.

Navratri 2024: ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಸ್ವರೂಪ; ದೇವಿಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು?
Katyayani
Follow us on

ಆ ಜಗಜ್ಜನನಿಗೆ ಕಾತ್ಯಾಯಿನಿ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ಹಿನ್ನೆಲೆ ಇದೆ. ಕತ ಎಂಬ ಋಷಿ ಇದ್ದರು. ಅವರ ಮಗನ ಹೆಸರು ಕಾತ್ಯ. ಇದೇ ಕಾತ್ಯ ಋಷಿಯ ಗೋತ್ರದಲ್ಲಿ ಜನಿಸಿದವರು ಕಾತ್ಯಾಯನ. ಆ ಭಗವತಿಯು ತಮ್ಮ ಮನೆಯಲ್ಲಿ ಮಗಳಾಗಿ ಹುಟ್ಟಬೇಕು ಎಂಬ ಅಭೀಷ್ಟದಿಂದ ಅವರು ಕಠಿಣವಾದ ತಪಸ್ಸು ಮಾಡಿದರು. ಪ್ರಾರ್ಥನೆಯನ್ನು ಆ ದೇವಿಯ ನಡೆಸಿಕೊಟ್ಟಳು. ಕೆಲ ಸಮಯದ ನಂತರ ರಾಕ್ಷಸನಾದ ಮಹಿಷಾಸುರನ ಉಪಟಳವು ವಿಪರೀತ ಹೆಚ್ಚಾಯಿತು. ಆಗ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಹಾಗೂ ಎಲ್ಲ ದೇವತೆಗಳು ಸೇರಿ, ತಂತಮ್ಮ ತೇಜಶ್ಶಕ್ತಿಯ ಅಂಶವನ್ನು ನೀಡಿ, ಒಬ್ಬ ದೇವಿಯನ್ನು ಸೃಷ್ಟಿ ಮಾಡಿದರು. ಆಕೆಯು ಮಹಿಷಾಸುರನ ಸಂಹಾರಕ್ಕಾಗಿಯೇ ಸೃಷ್ಟಿಯಾದವಳು. ಋಷಿಗಳಾದ ಕಾತ್ಯಾಯನರು ಈ ದೇವಿಯ ಪೂಜೆಯನ್ನು ಮೊದಲಿಗೆ ಮಾಡಿದರು. ಆ ಕಾರಣದಿಂದ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂತು.

ಜತೆಗೆ ಕಾತ್ಯಾಯನರಿಗೆ ಈಕೆ ಮಗಳಾಗಿ ಹುಟ್ಟಿದಳು ಎಂಬ ಉಲ್ಲೇಖ ಸಹ ಇದೆ. ಆ ದೇವಿಯ ಅವತಾರ ಆಗಿದ್ದು ಭಾದ್ರಪದ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನದಂದು. ಆ ನಂತರ ಆಶ್ವಯುಜ ಮಾಸದ ಶುಕ್ಲ ಪಕ್ಷದ ಸಪ್ತಮಿ, ಅಷ್ಟಮಿ, ನವಮಿಯ ತನಕ ಮೂರು ದಿನ ಕಾತ್ಯಾಯನ ಋಷಿಗಳಿಂದ ಪೂಜೆಯನ್ನು ಸ್ವೀಕರಿಸಿದ ನಂತರದಲ್ಲಿ ದಶಮಿಯಂದು ಆ ದೇವಿಯು ಮಹಿಷಾಸುರನ ಸಂಹಾರ ಮಾಡಿದಳು.

ಕೃಷ್ಣನನ್ನು ಪತಿಯಾಗಿ ಪಡೆಯುವ ಬಯಕೆಯಿಂದ ಗೋಪಿಕೆಯರು ಕಾಳಿಂದಿ- ಯಮುನಾ ನದಿಯ ದಡದಲ್ಲಿ ಕಾತ್ಯಾಯನಿಯ ಪೂಜೆ ಮಾಡಿದ್ದರಂತೆ. ಆ ಮಹಾಮಾತೆಯ ವಿವರಣೆ ಹೇಗಿದೆ ಅಂದರೆ, ಆಕೆ ಬಣ್ಣ ಬಂಗಾರದಂತೆ ಹೊಳೆಯುತ್ತದೆ. ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯನ್ನು ತೋರುತ್ತಿದೆ. ಕೆಳಗಿನ ಕೈ ವರ ಮುದ್ರೆಯನ್ನು ತೋರುತ್ತಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದ್ದು, ಕೆಳಗಿನ ಕೈಯಲ್ಲಿ ಕಮಲದ ಹೂವಿದೆ. ಇನ್ನು ಈ ತಾಯಿಯ ವಾಹನವು ಸಿಂಹವಾಗಿದೆ.

ಇದನ್ನೂ ಓದಿ: Navratri 2024: ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದಮಾತಾ; ದೇವಿಯ ಪೌರಾಣಿಕ ಹಿನ್ನೆಲೆ, ಪೂಜಾಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಧರ್ಮ-ಅರ್ಥ-ಕಾಮ್ಯ-ಮೋಕ್ಷ ಹೀಗೆ ಚತುರ್ವಿಧ ಫಲ ಪುರುಷಾರ್ಥಗಳು ಸಹ ದೊರೆಯುತ್ತವೆ. ರೋಗ, ಶೋಕ, ದುಃಖ, ದಾರಿದ್ರ್ಯಗಳು ದೂರವಾಗುತ್ತವೆ. ಜನ್ಮಜನ್ಮಾಂತರದ ಪಾಪಗಳು ನಾಶ ಆಗುತ್ತವೆ. ಇಹ ಲೋಕದಲ್ಲಿ ದೇವಿಯ ಆರಾಧಕರು ಅಲೌಕಿಕವಾದ ತೇಜಸ್ಸು, ಕಾಂತಿ, ಸಮಾಧಾನ- ಸಂತೃಪ್ತಿಯನ್ನು ಕಾಣಬಹುದು.

ಕಾತ್ಯಾಯಿನಿ ದೇವಿಯನ್ನು ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಮ್ | ಪಾತು ನ: ಸರ್ವಭೀತಿಭ್ಯ: ಕಾತ್ಯಾಯನಿ ನಮೋಸ್ತುತೇ- ಹೀಗೆ ಸಹ ಆರಾಧಿಸಲಾಗುತ್ತದೆ. ಆ ದೇವಿಯ ಆರಾಧನೆಯಿಂದಾಗಿ ಭಯ ದೂರವಾಗಿ ಧೈರ್ಯ ಜೊತೆಯಾಗುತ್ತದೆ, ಏನನ್ನಾದರೂ ಸಾಧಿಸುವ ಅಚಲ ವಿಶ್ವಾಸ ಸಹ ಮೂಡುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ