Navratri: ನವರಾತ್ರೆಯಲ್ಲಿ ಅಖಂಡ ದೀಪದ ಮಹತ್ವ ಏನು? ನಂದಾದೀಪದ ಅರ್ಥ, ಮಹತ್ವ ಇಲ್ಲಿದೆ
ಕೆಲವು ಸಾಂಪ್ರದಾಯಿಕ ಮನೆಗಳಲ್ಲಿ ಎರಡೂ ಸಮಯದಲ್ಲೂ ದೀಪ ಉರಿಸುವ ಕ್ರಮ ಇದೆ. ಇನ್ನೂ ಹೆಚ್ಚಿನ ಧಾರ್ಮಿಕ ನಿಯಮಗಳಿರುವ ಕಡೆಗಳಲ್ಲಿ ನಂದಾದೀಪವೇ ಇರುತ್ತದೆ.
ಜಗತ್ತಿನ ನಿತ್ಯಜೀವನದ ಪಥದಲ್ಲಿ ದೀಪ ಎಂದಾಕ್ಷಣ ಮನಸ್ಸಿನಲ್ಲಿ ಒಂದು ಬೆಳಕಿನ ಸಂಚಲನವುಂಟಾಗುತ್ತದೆ. ಏಕೆಂದರೆ ಅದರಲ್ಲಿರುವ ಪೂಜ್ಯಭಾವನೆಯೂ ಹೌದು. ಹಾಗೆಯೇ ದೀಪವೆನ್ನುವುದು ಅಂಧಕಾರವನ್ನು ದೂರೀಕರಿಸಿ ವಾತಾವರಣದೊಂದಿಗೆ / ಬಹಿರಂಗದೊಂದಿಗೆ ಅಂತರಂಗವನ್ನೂ ಬೆಳಗಿಸುತ್ತದೆ.
ಮನೆಗಳಲ್ಲಿ ಸ್ವಾಭಾವಿಕವಾಗಿ ಬೆಳಗ್ಗೆ ಅಥವಾ ರಾತ್ರೆ ದೇವತಾ ಸಾನ್ನಿಧ್ಯದಲ್ಲಿ ದೀಪ ಬೆಳಗುವ ಪದ್ಧತಿ ಇದೆ. ಕೆಲವು ಸಾಂಪ್ರದಾಯಿಕ ಮನೆಗಳಲ್ಲಿ ಎರಡೂ ಸಮಯದಲ್ಲೂ ದೀಪ ಉರಿಸುವ ಕ್ರಮ ಇದೆ. ಇನ್ನೂ ಹೆಚ್ಚಿನ ಧಾರ್ಮಿಕ ನಿಯಮಗಳಿರುವ ಕಡೆಗಳಲ್ಲಿ ನಂದಾದೀಪವೇ ಇರುತ್ತದೆ. ನಂದಾದೀಪವೆಂದರೆ ನಂದದೇ ಇರುವ ದೀಪ ಎಂದರ್ಥ. ಅಥವಾ ನಿರಂತರ ಬೆಳಗುತ್ತಲಿರುವ ದೀಪ ಎಂದರ್ಥ. ಆನಂದವನ್ನು ವೃದ್ಧಿಸುವ ಕಾರ್ಯ ಮಾಡುತ್ತದೆ. ಆ ದೀಪ ಎಂದೂ ಹೇಳಬಹುದು. ದೀಪ ಸಾಕ್ಷಭೂತವಾದ ಸ್ಥಾನವನ್ನು ಶಾಸ್ತ್ರಗಳು ನೀಡಿವೆ.
ಭೋ ದೀಪ ದೇವ ರೂಪಃ ತ್ವಂ ಕರ್ಮಸಾಕ್ಷೀಹ್ಯವಿಘ್ನಕೃತ್ ಅರ್ಥವೇನೆಂದರೆ ಎಲೈ ದೀಪವೇ ನೀನು ಸಾಕ್ಷಾತ್ ದೇವರೂಪವೇ ಆಗಿರುವೆ. ನೀನು ನನ್ನಿಂದ ಮಾಡಲ್ಪಡುವ ಧರ್ಮಕಾರ್ಯಕ್ಕೆ ಸಾಕ್ಷಿಯಾಗಿ, ವಿಘ್ನಬಾರದಂತೆ ನೋಡಿಕೊಳ್ಳಬೇಕು ಎಂದು. ಈ ಮಾತಿನಿಂದಲೇ ತಿಳಿಯುತ್ತದೆ ದೀಪದ ಮಹತ್ವ. ಇಂತಹ ಅಮೋಘ ಚೈತನ್ಯವಿರುವ ದೀಪ ಶುಭಾಶುಭ ಕಾರ್ಯಗಳಲ್ಲಿ ಬೇಕೇಬೇಕು.
ದೀಪಕ್ಕೆ ಮೂರು ರೀತಿಯ ಸಾಮಾಗ್ರಿಯನ್ನು ಹಾಕಿ ಬೆಳಗಿಸಬಹುದು. ಮೊದಲನೇಯದ್ದು ತುಪ್ಪದೀಪ. ತುಪ್ಪದಿಂದ ದೀಪವನ್ನು ಬೆಳಗಿ ಅದರ ದರ್ಶನವನ್ನು ಮಾಡಿದರೆ ಅತ್ಯುತ್ತಮ ಫಲ. ಎರಡನೇಯದ್ದು ತೈಲ ದೀಪ. ಅಂದರೆ ತಿಲದಿಂದ ಮಾಡಿದ ಎಣ್ಣೆಯಿಂದ ಉರಿಸಲ್ಪಟ್ಟ ದೀಪ ಎಂದರ್ಥ. ಅರ್ಥಾತ್ ಎಳ್ಳಣ್ಣೆ ದೀಪ. ಇದರಿಂದ ಉತ್ತಮ ಫಲ. ಮೂರನೇಯದ್ದು ಎಣ್ಣೆದೀಪ. ಇಲ್ಲಿ ತೆಂಗಿನಕಾಯಿಯ ಎಣ್ಣೆ ಅಥವಾ ನಾವು ಆಹಾರಕ್ಕಾಗಿ ಬಳಸುವ ಎಣ್ಣೆಯಿಂದ ದೀಪ ಬೆಳಗಿಸಬೇಕು. ಇದಕ್ಕೆ ಮಧ್ಯಮ ಫಲ. ಈ ಮೂರೂ ವಿಧಾನಕ್ಕೆ ವಾಸ್ತು ಶಾಸ್ತ್ರದಲ್ಲಿ ಮಹತ್ತರವಾದ ಸ್ಥಾನವಿದೆ ಮತ್ತು ಆಯಾ ಫಲವನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಇಂತಹ ದೀಪವನ್ನು ಸಾಧ್ಯವಾದಲ್ಲಿ ಪೂರ್ಣ ನವರಾತ್ರೆಯಲ್ಲಿ ಮೊದಲದಿನದಿಂದ ಆರಂಭಿಸಿ ಕೊನೆಯ ದಿನದ ವರೆಗೆ ವಿಚ್ಛಿತ್ತಿ ಇಲ್ಲದೇ ಬೆಳಗುವಂತೆ ಮಾಡಿದರೆ ಜ್ಯೋತಿಸ್ವರೂಪಳಾದ ಜಾತವೇದಾ ದುರ್ಗಳು ನಮಗೊದಗುವ ದುರ್ಗತಿಗಳನ್ನು ನಾಶ ಮಾಡಿ ಮಂಗಳವನ್ನುಂಟು ಮಾಡುತ್ತಾಳೆ. ಯಾರಿಗೆ ದರಿದ್ರತನ ನಾಶವಾಗಿ ಯಶಸ್ಸು ಸಿಗುವ ಬಯೆಕೆಯಿದೆಯೋ ಅವರುಗಳು ನವರಾತ್ರೆಯಲ್ಲಿ ನಂದಾದೀಪ ವ್ರತ ಮಾಡಿದರೆ ಉತ್ತಮ. ಅಂದರೆ ಪೂರ್ಣ ನವರಾತ್ರಿಯಲ್ಲಿ (ಒಂಭತ್ತೂ ದಿನವೂ) ದೀಪನಂದದಂತೆ ಸಂಕಲ್ಪಿಸಿ ತಮ್ಮ ಮನೆಯಲ್ಲೋ ಅಥವಾ ತಮ್ಮ ಪರವಾಗಿ ದೇವಾಲಯದಲ್ಲೋ ಸದಾ ದೀಪ ಉರಿವಂತೆ ಮಾಡಿರಿ. ಅವರಿಗೆ ಕಾರ್ಯಜಯ ನಿಶ್ಚಯ.
ಅಖಂಡದೀಪಕಂದೇವ್ಯಾಃ ಪ್ರೀಯತೇ ನವರಾತ್ರಕಮ್ |
ಉಜ್ವಾಲಯೇ ಅಹೋರಾತ್ರಂ ಏಕಚಿತ್ತೋಧೃತವ್ರತಃ ||”
ಈ ಮಂತ್ರವನ್ನು ಹೇಳಿ ದೀಪವನ್ನು ಮೊದಲ ನವರಾತ್ರೆಯಂದು ಬೆಳಗಿಸಬೇಕು ಹಾಗಯೇ ಒಂಭತ್ತೂ ದಿನವು ಉರಿಯುವಂತೆ ಗಮನಿಸಬೇಕು. ಹೇಗೆ ಸೂರ್ಯನ ಬೆಳಕು ಜಗತ್ತಿನ ಅಂಧಕಾರವನ್ನು ನಾಶಮಾಡುತ್ತದೋ ಅದೇ ರೀತಿ ದೇವಿಯ ಮುಂದೆ ಬೆಳಗಿದ ಜ್ಯೋತಿಯಿಂದ ನಮ್ಮ ಅಂತರಂಗ ಬೆಳಗಿ ಶುಭವೇ ಆಗುವುದು.
ನವರಾತ್ರಿಯಲ್ಲಿ ಕನಿಷ್ಠ ಒಂದು ದಿನವಾದರೂ ತುಪ್ಪದೀಪ ಬೆಳಗಿಸಿ. ಮಂಗಲವಾಗುತ್ತದೆ. ಲಲಿತಾಪಂಚಮಿಯಂದು ಹಚ್ಚುವ ದೀಪಕ್ಕೆ ಅತ್ಯಂತ ಮಹತ್ವವೂ ಇದೆ. ದೀಪವನ್ನು ಇಟ್ಟು ಅದಕ್ಕೆ ತಮಗೆ ತಿಳಿದಿರುವ ಯಾವುದದರೂ ದೇವೀ ಮಂತ್ರ/ಶ್ಲೋಕವನ್ನು ಹೇಳುತ್ತಾ ಹನ್ನೆರಡು ದೀಪ ನಮಸ್ಕಾರ ಮಾಡಿರಿ ಅಸಾಧ್ಯವೆನಿಸಿದ ಕೆಲಸವೂ ಸುಲಭವಾಗಿ ಕೂಡಿಬರುವುದು. ಮತ್ತು ಅತ್ಯಂತ ಮನ್ನಣೆಗೆ ಪಾತ್ರರಾಗುವಿರಿ. ದೀಪವನ್ನು ಬೆಳಗಿ ಸಂಭ್ರಮದಿಂದ ನವರಾತ್ರಿ ಆಚರಿಸುವ.
ಡಾ.ಕೇಶವಕಿರಣ.ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
Published On - 9:49 am, Sat, 24 September 22