Panchamrit: ಪಂಚಾಮೃತದಲ್ಲಿ ಬಳಸುವ ಪದಾರ್ಥಗಳು ಶ್ರೇಷ್ಠ ಎನ್ನುವುದರ ಹಿಂದಿದೆ ಹಲವಾರು ಕಾರಣಗಳು!

| Updated By: ಅಕ್ಷತಾ ವರ್ಕಾಡಿ

Updated on: Feb 24, 2024 | 2:41 PM

ಪೂಜೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪಂಚಾಮೃತಕ್ಕೆ ವಿಶೇಷ ಸ್ಥಾನವಿದೆ. ಪೂಜೆಯ ನಂತರ ಪ್ರಸಾದವಾಗಿ ನೀಡಲಾಗುವ ಪಂಚಾಮೃತವನ್ನು ಅದರ ವಿಶಿಷ್ಟ ಮತ್ತು ಅದ್ಭುತ ರುಚಿಯಿಂದಾಗಿ ಮಕ್ಕಳು ಮತ್ತು ವಯಸ್ಕರು ತುಂಬಾ ಇಷ್ಟ ಪಡುತ್ತಾರೆ. ಹಾಗಾದರೆ ಇದನ್ನು ಯಾವ ಅಮೃತದಂತಹ ಪದಾರ್ಥಗಳಿಂದ ತಯಾರಿಸಲಾಗುತ್ತದೆ? ಯಾಕಾಗಿ ಈ 5 ವಸ್ತುಗಳನ್ನು ಇದರಲ್ಲಿ ಬಳಸಲಾಗುತ್ತದೆ? ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Panchamrit: ಪಂಚಾಮೃತದಲ್ಲಿ ಬಳಸುವ ಪದಾರ್ಥಗಳು ಶ್ರೇಷ್ಠ ಎನ್ನುವುದರ ಹಿಂದಿದೆ ಹಲವಾರು ಕಾರಣಗಳು!
Panchamrit
Image Credit source: Pinterest
Follow us on

ಪಂಚಾಮೃತವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರ ಮತ್ತು ಮುಖ್ಯವೆಂದು ಪರಿಗಣಿಸಲಾಗಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಾಗಲಿ ಪಂಚಾಮೃತವಿಲ್ಲದೆ ಅದನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಪಂಚಾಮೃತ ಎಂದರೆ ಐದು ಅಮೃತಗಳು ಎಂದರ್ಥ. ಜೊತೆಗೆ ಆರೋಗ್ಯಕ್ಕೂ ಅಮೃತವೆಂದು ಪರಿಗಣಿಸಲಾಗುತ್ತದೆ. ಇದನ್ನು ಪೂಜೆಯಲ್ಲಿ ನೈವೇದ್ಯಕ್ಕಾಗಿ ಅಂದರೆ ದೇವ, ದೇವತೆಗಳಿಗೆ ಆಹಾರವನ್ನಾಗಿ ಅರ್ಪಿಸಲಾಗುತ್ತದೆ. ಪಂಚಾಮೃತವನ್ನು ಕೆಲವು ಸ್ಥಳಗಳಲ್ಲಿ ಚರಣಾಮೃತ ಎಂದೂ ಕೂಡ ಕರೆಯಲಾಗುತ್ತದೆ. ಹಾಗಾದರೆ ಇದನ್ನು ಯಾವ ಅಮೃತದಂತಹ ಪದಾರ್ಥಗಳಿಂದ ತಯಾರಿಸಲಾಗುತ್ತದೆ? ಯಾಕಾಗಿ ಈ 5 ವಸ್ತುಗಳನ್ನು ಇದರಲ್ಲಿ ಬಳಸಲಾಗುತ್ತದೆ? ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಪಂಚಾಮೃತವನ್ನು ಅಮೃತವಾಗಿಸುವ ಪದಾರ್ಥಗಳ ವಿಶೇಷ ಗುಣಗಳನ್ನು ತಿಳಿಯಿರಿ;

ಹಾಲು:

ಹಾಲನ್ನು ಪೌಷ್ಠಿಕಾಂಶ ಮತ್ತು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪಂಚಾಮೃತಕ್ಕೆ ಸೇರಿಸಲಾಗುವ ಮುಖ್ಯ ಘಟಕಾಂಶವೆಂದರೆ ಅದು ಹಸುವಿನ ಹಾಲು. ಹಾಗಾಗಿಯೇ ಪಂಚಾಮೃತದಲ್ಲಿ, ಹಾಲಿನ ಪ್ರಮಾಣವನ್ನು ಇತರ ಎಲ್ಲ ವಸ್ತುಗಳಿಗಿಂತ ಹೆಚ್ಚು ಬಳಸಲಾಗುತ್ತದೆ. ಏಕೆಂದರೆ ಹಾಲು ಮನಸ್ಸನ್ನು ಶಾಂತಗೊಳಿಸುತ್ತದೆ ಅಲ್ಲದೆ ಎಲ್ಲಾ ಒತ್ತಡಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.

ಮೊಸರು:

ಹಾಲಿನ ನಂತರ, ಮೊಸರು ಪಂಚಾಮೃತದಲ್ಲಿ ಸೇರಿಸಬೇಕಾದ ಪ್ರಮುಖ ಪದಾರ್ಥವಾಗಿದೆ. ಮೊಸರಿನಿಂದಾಗಿ ಪಂಚಾಮೃತದ ರುಚಿ ವಿಶೇಷವಾಗುತ್ತದೆ. ಇದನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ, ಪಂಚಾಮೃತದಲ್ಲಿರುವ ಮೊಸರು ಪ್ರೋಬಯಾಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮೊಸರು ದೇಹದಲ್ಲಿನ ವಾತ ದೋಷವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

ಮಧು ಅಥವಾ ಜೇನುತುಪ್ಪ:

ಜೇನುತುಪ್ಪವು ಅದರ ಸಿಹಿ ಮತ್ತು ಆರೋಗ್ಯಕರ ಅಂಶದಿಂದಾಗಿ ವಿಶೇಷವಾಗಿದೆ. ಆಯುರ್ವೇದದಲ್ಲಿ ಜೇನುತುಪ್ಪವನ್ನು ಅತ್ಯುತ್ತಮ ಔಷಧಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಇದನ್ನು ಅನೇಕ ಧಾರ್ಮಿಕ ಆಚರಣೆಗಳು ಮತ್ತು ಪೂಜೆಗಳಲ್ಲಿ ಬಳಸಲಾಗುತ್ತದೆ.

ತುಪ್ಪ:

ತುಪ್ಪವು ಅದರ ಆರೋಗ್ಯಕರ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹಿಂದೂ ಧರ್ಮದಲ್ಲಿ, ತುಪ್ಪವನ್ನು ಎಲ್ಲಾ ಧಾರ್ಮಿಕ ಮತ್ತು ಮಂಗಳಕರ ಆಚರಣೆಗಳಲ್ಲಿ ಮತ್ತು ಸಾಮಾನ್ಯ ದೈನಂದಿನ ಪೂಜೆಯಲ್ಲಿ ಬಳಸಲಾಗುತ್ತದೆ. ಇನ್ನು ಹವನದಲ್ಲಿ, ತುಪ್ಪ ಬೇಕೇ ಬೇಕು. ಇದೆಲ್ಲದರ ಜೊತೆಗೆ ತುಪ್ಪದಿಂದ ದೀಪ ಬೆಳಗಿಸಲಾಗುತ್ತದೆ. ಹಾಗಾಗಿ ದೇವರು ಮತ್ತು ದೇವತೆಗಳ ಆಶೀರ್ವಾದ ಪಡೆಯಲು ಪಂಚಾಮೃತದಲ್ಲಿ ತುಪ್ಪವನ್ನು ಬಳಸಲಾಗುತ್ತದೆ.

ಸಕ್ಕರೆ:

ಪಂಚಾಮೃತದಲ್ಲಿ ಸಿಹಿ ಅಂಶಕ್ಕಾಗಿ ಸಕ್ಕರೆಯನ್ನು ಬಳಸಲಾಗುತ್ತದೆ. ಸಕ್ಕರೆಯಿಂದಾಗಿಯೇ ಪಂಚಾಮೃತವು ತುಂಬಾ ರುಚಿಕರವಾಗಿರುತ್ತದೆ. ಇದರಲ್ಲಿ ಸಕ್ಕರೆಯನ್ನು ಸೇರಿಸುವುದರ ಅರ್ಥ ಅದರಷ್ಟೇ ಸಂತೋಷ ಮತ್ತು ಸಿಹಿಯನ್ನು ನಮ್ಮ ಜೀವನದಲ್ಲಿಯೂ ನೀಡು ಎಂದು ದೇವರು ಮತ್ತು ದೇವತೆಗಳನ್ನು ಪ್ರಾರ್ಥಿಸುವುದಾಗಿದೆ.

ತುಳಸಿ ಎಲೆಗಳು:

ತುಳಸಿ ತನ್ನ ವಿಶೇಷ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಈ ಎಲೆಗಳು, ವಿಷ್ಣು ಮತ್ತು ತಾಯಿ ಲಕ್ಷ್ಮೀ ಗೆ ತುಂಬಾ ಪ್ರಿಯವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ತುಳಸಿ ಎಲೆಗಳನ್ನು ಪೂಜೆಯಲ್ಲಿಯೂ ಬಳಸಲಾಗುತ್ತದೆ. ಪಂಚಾಮೃತದಲ್ಲಿ ತುಳಸಿ ಎಲೆಗಳನ್ನು ಸೇರಿಸುವ ಮೂಲಕ, ಪಂಚಾಮೃತವು ಬಹಳ ಪವಿತ್ರವಾಗುತ್ತದೆ. ಜೊತೆಗೆ ಇದನ್ನು ಬಳಸುವುದರಿಂದ ದೇವರ ಆಶೀರ್ವಾದವನ್ನು ಪಡೆಯಬಹುದು ಎಂದು ನಂಬಲಾಗಿದೆ.

ಇದನ್ನು ಓದಿ: ಈ ಬಾರಿ ಮಹಾ ಶಿವರಾತ್ರಿ ಮಾರ್ಚ್ 8 ಅಥವಾ 9? ಶಿವ ಪೂಜೆಯ ಮಂಗಳಕರ ಸಮಯ ತಿಳಿಯಿರಿ

ಪಂಚಾಮೃತ ಮುಖ್ಯ ಎಂದು ಪರಿಗಣಿಸಿರುವುದು ಏಕೆ?

ನಂಬಿಕೆಯ ಪ್ರಕಾರ, ಪಂಚಾಮೃತವು ಐದು ಅಮೃತದಂತಹ ಪದಾರ್ಥಗಳಿಂದ ತಯಾರಾಗುತ್ತದೆ, ಆದ್ದರಿಂದ ಇದಕ್ಕೆ ಪೂಜೆಯಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಅಲ್ಲದೆ ಪಂಚಾಮೃತವು ಸಾತ್ವಿಕ ಮತ್ತು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಇದರಲ್ಲಿ ಸೇರಿಸಲಾಗುವ ಹಾಲು ಶುದ್ಧತೆ ಮತ್ತು ಶುಭದ ಸಂಕೇತವಾಗಿರುತ್ತದೆ. ಹಾಲಿನಂತೆ ನಮ್ಮ ಜೀವನವು ಶುದ್ಧವಾಗಿರಬೇಕೆನ್ನುವುದನ್ನು ಇದು ಸೂಚಿಸುತ್ತದೆ. ಇನ್ನು ಮೊಸರಿನಲ್ಲಿ ಅನೇಕ ಉತ್ತಮ ಗುಣಗಳು ಕಂಡು ಬರುತ್ತವೆ. ಜೊತೆಗೆ ಮೊಸರು ಪ್ರೀತಿಯ ಸಂಕೇತವಾಗಿದ್ದು, ನಾವು ಎಲ್ಲರನ್ನೂ ಪ್ರೀತಿಸಬೇಕೆಂಬುದನ್ನು ಸೂಚಿಸುತ್ತದೆ. ಜೇನುತುಪ್ಪವು ತುಂಬಾ ಸಿಹಿ ಮತ್ತು ದೇಹಕ್ಕೆ ಶಕ್ತಿ ಕೊಡುವ ಪದಾರ್ಥ. ಹಾಗಾಗಿ ಪಂಚಾಮೃತದಲ್ಲಿ ಜೇನುತುಪ್ಪವನ್ನು ಸೇರಿಸುವ ಮೂಲಕ, ನಡವಳಿಕೆ ಮತ್ತು ಮಾತಿನಲ್ಲಿ ಸಿಹಿ ಹಾಗೂ ಮನೋಭಾವದಲ್ಲಿ ಬಲಶಾಲಿಯಾಗಬೇಕು, ಏಕೆಂದರೆ ವ್ಯಕ್ತಿಯು ದುರ್ಬಲನಾಗಿದ್ದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಇದು ತಿಳಿಸಿ ಕೊಡುತ್ತದೆ. ಇನ್ನು ತುಪ್ಪವು ದೇಹಕ್ಕೆ ಶಕ್ತಿಯನ್ನು ಒದಗಿಸುವುದಲ್ಲದೆ, ಎಲ್ಲಾ ಸಂದರ್ಭಗಳಲ್ಲಿ ಸಕಾರಾತ್ಮಕ ಆಲೋಚನೆ ಮಾಡಲು ನೆರವಾಗುತ್ತದೆ. ಇನ್ನು ಪಂಚಾಮೃತದಲ್ಲಿ ಸೇರಿಸಲಾದ ಸಕ್ಕರೆ ಸೋಮಾರಿತನವನ್ನು ತ್ಯಜಿಸಲು ಸಹಕಾರಿಯಾಗಿದೆ. ಜೊತೆಗೆ ಎಲ್ಲರೊಂದಿಗೆ ಮಧುರ ಮಾತುಗಳನ್ನು ಆಡಬೇಕು. ಇತರರಿಗೂ ಸಂತೋಷವನ್ನು ಹಂಚಬೇಕು ಎಂಬುದನ್ನು ಇದು ಸೂಚಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:41 pm, Sat, 24 February 24