Ram Navami 2022: ರಾಮನ ಕಾಣಲು ರಾಮನೇ‌ ಕೊಟ್ಟ ಉಪಾಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2022 | 7:00 AM

Ram Navami 2022:n ರಾಮನವಮೀ ಕೂಡ ಅನೇಕ ಗುಣ-ಲಕ್ಷಣಗಳನ್ನು ಹೊಂದಿರುವ ಹಬ್ಬ. ಇದನ್ನು ಚೈತ್ರಮಾಸದ ಶುಕ್ಲಪಕ್ಷದ ನವಮೀಯಂದು ವಿಶೇಷವಾಗಿ ಆಚರಿಸಲಾಗುತ್ತದೆ. ಯಾಕೆ ಅಂದೇ ಆಚರಿಸಬೇಕು? ಎಂದು ಕೇಳಿದರೆ, ಮಹಾವಿಷ್ಣು ರಾಮನಾಗಿ ಅವತರಿಸಿದ ದಿನವಿದು.

Ram Navami 2022: ರಾಮನ ಕಾಣಲು ರಾಮನೇ‌ ಕೊಟ್ಟ ಉಪಾಯ
ಶ್ರೀರಾಮಚಂದ್ರ
Follow us on

ರಾಮನವಮಿ ಬಂದಿದೆ. ರಾಮನನ್ನು ಆರಾಧಿಸುವ, ರಾಮನ ಗುಣಗಳನ್ನು ಕೀರ್ತಿಸುವ, ತನ್ಮೂಲಕ ಸಂಭ್ರಮಿಸುವ ದೃಶ್ಯ ಎಲ್ಲಡೆ ಕಾಣಸಿಗುತ್ತದೆ. ಹಬ್ಬವೆಂದರೆ ಹಾಗೆ. ಹಬ್ಬ ಬಂತೆಂದರೆ ಜೊತೆಜೊತೆಗೆ ಅದು ಸಂಭ್ರಮ- ಸಂತೋಷ, ಉತ್ಸಾಹ – ಉತ್ಸವಗಳನ್ನು ತನ್ನೊಡನೆ ಹೊತ್ತು ತರುತ್ತದೆ. ಪೂಜೆ, ಆಚರಣೆ, ಆಟ, ಊಟಗಳು ಎಲ್ಲ ಹಬ್ಬಗಳಲ್ಲಿ ಇದ್ದರೂ, ಪ್ರತಿ ಹಬ್ಬಕ್ಕೂ ಅದರದ್ದೇ ಪ್ರಾಮುಖ್ಯವಿದೆ, ಐತಿಹ್ಯವಿದೆ, ಉದ್ದಿಶ್ಯವಿದೆ ಮತ್ತು ಆಯಾಯಾ ಕಾಲಕ್ಕೊಂದು ವೈಶಿಷ್ಟ್ಯವಿದೆ.

ರಾಮನವಮೀ ಕೂಡ ಅನೇಕ ಗುಣ-ಲಕ್ಷಣಗಳನ್ನು ಹೊಂದಿರುವ ಹಬ್ಬ. ಇದನ್ನು ಚೈತ್ರಮಾಸದ ಶುಕ್ಲಪಕ್ಷದ ನವಮೀಯಂದು ವಿಶೇಷವಾಗಿ ಆಚರಿಸಲಾಗುತ್ತದೆ. ಯಾಕೆ ಅಂದೇ ಆಚರಿಸಬೇಕು? ಎಂದು ಕೇಳಿದರೆ, ಮಹಾವಿಷ್ಣು ರಾಮನಾಗಿ ಅವತರಿಸಿದ ದಿನವಿದು. ಹಾಗಾಗಿ ಅಂದು ರಾಮನವಮೀ ಆಚರಿಸುತ್ತಾರೆ ಎಂಬ ಸಾಮಾನ್ಯ ಉತ್ತರ ಬರುತ್ತದೆ. ಆ ಉತ್ತರ ನಿಜವಾದರೂ ಈ ದಿನ ಇನ್ನೊಂದಿಷ್ಟು ಮಹತ್ತ್ವವನ್ನು ಪಡೆದುಕೊಂಡಿದೆ.

ಕಾಲದ ವೈಶಿಷ್ಟ್ಯ

ಚೈತ್ರ-ಶುಕ್ಲ-ನವಮಿಯಂದು ಸಹಜವಾಗಿಯೇ ರಾಮನನ್ನು ಆರಾಧಿಸಲು ಬೇಕಾದ ಗುಣಗಳನ್ನು ಕಾಲವೇ ಹೊಂದಿರುತ್ತದೆ. ಅದನ್ನು ಗುರುತಿಸಿದ ಪ್ರಾಚೀನ ವಿಜ್ಞಾನಿಗಳಾದ ಋಷಿಗಳು ಆ ಕಾಲವನ್ನು ರಾಮನ ಆರಾಧನೆಗೆ ಮೀಸಲಿಟ್ಟರು. ಹೇಗೆ ರೈತ ತಾನು ಬೆಳೆಯುವ ಬೆಳೆಗೆ ತಕ್ಕಂತೆ ಅದಕ್ಕೆ ಸಹಕಾರಿಯಾದ ಕಾಲವನ್ನು ಗುರುತಿಸಿ, ಬೀಜ ಬಿತ್ತನೆ ಮಾಡಿ, ಸಮೃದ್ಧ ಫಸಲನ್ನು ಪಡೆಯುತ್ತಾನೋ ಹಾಗೆಯೇ ರಾಮನ ಆರಾಧನೆಗೆ ಗುರುತಿಸಿಕೊಟ್ಟ ಈ‌ ಕಾಲವನ್ನು ಸರಿಯಾಗಿ ಬಳಸಿಕೊಂಡರೆ, ರಾಮನೆಂಬ ಫಸಲನ್ನು ಪಡೆಯಬಹುದು.

ಹಬ್ಬದ ಆಚರಣೆ ಹೇಗೆ?

ಬಂಗಾರ, ಬೆಳ್ಳಿ, ಲೋಹ, ಮರ ಅವರವ ಯೋಗ್ಯತೆಗೆ ತಕ್ಕಂತೆ ಯಾವುದರಲ್ಲಾದರೂ ರಾಮನ ವಿಗ್ರಹವನ್ನು ತಯಾರಿಸಿ, ಪೂಜಿಸಬೇಕು‌. ಪೂಜೆಯ ಅನಂತರ ಸತ್ಪಾತ್ರರಿಗೆ ಅದನ್ನು ದಾನ ಮಾಡಬೇಕು. ಬೆಳಗ್ಗೆಯಿಂದ ರಾಮನನ್ನು ಆರಾಧಿಸಿ ನೈವೇದ್ಯವನ್ನು ಸ್ವೀಕರಿಸುವುದು ಅಥವಾ ದಿನಪೂರ್ತಿ ಉಪವಾಸ ಮಾಡಿ ರಾಮನನ್ನು ಆರಾಧಿಸುವ ಎರಡೂ ರೂಢಿಗಳು ಇರುವುದು ಸಂಸ್ಕೃತಿಯಲ್ಲಿ ಕಂಡು ಬರುತ್ತದೆ.

ರಾಮನನ್ನು ಹೇಗೆಲ್ಲ ಆರಾಧಿಸಬಹುದು?

ರಾಮನನ್ನು ಪೂಜಿಸುವುದು ಒಂದು ದಾರಿಯಾದರೆ, ಇನ್ನೂ ಅನೇಕ ರೀತಿಯಲ್ಲಿ ಅವನನ್ನು ಪ್ರಸನ್ನಗೊಳಿಸುವ ದಾರಿಯನ್ನು ಹಿರಿಯರು ಹೇಳಿದ್ದಾರೆ. ರಾಮನ ಕಥಾ ಶ್ರವಣ, ಗುಣ-ರೂಪಗಳ ಕೀರ್ತನೆ, ನೆನಪು ಮಾಡಿಕೊಳ್ಳುವುದು, ನಮಸ್ಕರಿಸುವುದು, ನಮ್ಮನ್ನು ಅರ್ಪಿಸಿಕೊಳ್ಳುವುದು, ಅವನ ಸಖ್ಯವನ್ನು ಸಾಧಿಸುವುದು, ನೈತ್ಯ, ಗೀತೆ, ವಾದ್ಯ ಹೀಗೆ ಅನೇಕ ದಾರಿಗಳನ್ನು ಹೇಳಿದ್ದಾರೆ. ಹೀಗೆ ರಾಮನವಮಿಯ ಆಚರಣೆಯಲ್ಲಿ ನಾವು ಪಾಲ್ಗೊಳ್ಳಬಹುದು.

ರಾಮಾಯಣದ ಪಠಣ

ವೇದದಷ್ಟೇ ಪವಿತ್ರವಾದ, ವೇದದ ಸಾರವನ್ನೇ ನೀತಿ-ಕಥೆಗಳ ಮೂಲಕ ವಿವರಿಸುವ ರಾಮಾಯಣದ ಪಾರಾಯಣವನ್ನು ಮಾಡುವುದು ರಾಮನ ಆರಾಧನೆಯೇ ಆಗುತ್ತದೆ. ಅಥವಾ ರಾಮನ ಕಥೆಯನ್ನು ನಮಗೆ ಅನುಕೂಲವಾಗುವ ಭಾಷೆಯಲ್ಲಿ ಓದುವುದು ಕೂಡ ಮಾಡಬಹುದು.

ರಾಮನಿಗೆ ನೈವೇದ್ಯವೇನು?

ರಾಮದೇವರಿಗೆ ನೈವೇದ್ಯವಾಗಿ, ಹೆಸರುಬೇಳೆ – ಕಡಲೆಬೇಳೆಗಳ ಕೋಸುಂಬರಿ, ಶುಂಠೀ-ಬೆಲ್ಲ, ಪಾನಕಗಳನ್ನು ಅರ್ಪಿಸಿ, ಪ್ರಸಾದವಾಗಿ ಸ್ವೀಕರಿಸುವುದು ರೂಢಿ. ಯಾಕೆ ರಾಮದೇವರಿಗೆ ಇವುಗಳನ್ನೇ ನೈವೇದ್ಯವಾಗಿ ಅರ್ಪಿಸಬೇಕು ಎಂಬ ಪ್ರಶ್ನೆಗೆ ಕಾರಣಗಳು ಹಲವಾರು‌. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನೈವೇದ್ಯ ಪದಾರ್ಥಗಳ ಹಿಂದೆ ಆಧ್ಯಾತ್ಮಿಕ ಕಾರಣವೂ ಸೇರಿದೆ‌‌. ಅವು ರಾಮನಿಗೆ ಇಷ್ಟ, ಹಾಗಾಗಿ ಅವುಗಳನ್ನು ನೈವೇದ್ಯವಾಗಿ ಅರ್ಪಿಸಬೇಕು ಎಂದು ಸಾಮಾನ್ಯ ಕಾರಣವನ್ನು ಜನರು ಕೊಡುವುದನ್ನು ಕೇಳಿದ್ದೇವೆ. ಆ ಪದಾರ್ಥಗಳನ್ನು ಸೇವಿಸಿದರೆ ರಾಮನ ಆರಾಧನೆಗೆ ಬೇಕಾದ ರೀತಿಯಲ್ಲಿ ದೇಹ – ಮನಸ್ಸು – ದೇವತಾಕೇಂದ್ರಗಳನ್ನು ವಿಕಾಸಗೊಳಿಸಲು ಸಹಕರಿಸುತ್ತದೆ. ಹಾಗೆಯೇ ಸ್ವಾಸ್ಥ್ಯಸಂರಕ್ಷಣೆಗಾಗಿ ಆಯುರ್ವೇದ ಈ‌ ಕಾಲದಲ್ಲಿ ಸೇವಿಸಬೇಕಾದ ಆಹಾರಪದಾರ್ಥಗಳ ನಿಯಮಗಳಿಗೂ ಒಳಪಡುತ್ತದೆ. ಹಾಗಾಗಿ ಶಾಸ್ತ್ರ ವಿಧಿಸಿರುವ ನೈವೇದ್ಯವು ಆರೋಗ್ಯ-ಅಧ್ಯಾತ್ಮ ಎರಡಕ್ಕೂ ಸಹಕಾರಿಯಾಗಿದೆ.

ಪೂಜೆಗೆ ಬೇಕಾದ ಮುಖ್ಯವಾದ ದ್ರವ್ಯ

ಪೂಜೆಗೆ ಏನೇನು ಸಾಮಗ್ರಿಗಳು ಬೇಕು ಎಂದು ಕೇಳಿದರೆ, ಅರಶಿನ, ಕುಂಕುಮ, ಹೂವು, ದೀಪ ಹೀಗೆ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಅವೆಲ್ಲವೂ ಬೇಕು, ಅವೆಲ್ಲವುಗಳ ಹಿಂದೆ ಮುಖ್ಯವಾಗಿ ಬೇಕಿರುವುದು ಭಾವ. ಭಾವವೇ ಇಲ್ಲದಿದ್ದರೆ ದೇವರಿಗೆ ವಜ್ರ – ವೈಢೂರ್ಯಗಳನ್ನು ಅರ್ಪಿಸಿದರೂ ಅದಕ್ಕೆ ನಾಲ್ಕಾಣೆಯಷ್ಟೂ ಫಲವಿಲ್ಲ. ಶ್ರೀಮಂತರಲ್ಲದಿದ್ದರೂ, ಭಕ್ತಿ-ಭಾವದಿಂದ ಪತ್ರ – ಪುಷ್ಪಗಳನ್ನು ಅರ್ಪಿಸಿದರೂ ಅದಕ್ಕೆ ವಜ್ರ -ವೈಢೂರ್ಯದಷ್ಟು ಯೋಗ್ಯತೆ. ಯಾಕೆಂದರೆ ‘ಭಾವಗ್ರಾಹೀ ಜನಾರ್ದನಃ’. ದೇವರು ನಾವು ಏನನ್ನು ಕೊಟ್ಟೆವು ಎನ್ನುವುದನ್ನು ಗಮನಿಸುವುದಿಲ್ಲ. ಕೊಡುವುದರ ಹಿಂದಿರುವ ನಮ್ಮ ಭಾವವನ್ನು ಗಮನಿಸುತ್ತಾನೆ. ರಾಮನವಮೀ ರಾಮನ ಕಾಣಲು ರಾಮನೇ ಕೊಟ್ಟಿರುವ ಅವಕಾಶ. ಅದನ್ನು ಸದುಪಯೋಗಪಡಿಸಿಕೊಳ್ಳೋಣ.

ಕೃಷ್ಣಾನಂದ ಶರ್ಮಾ