ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬರಹ | ಅವರೂ ಸಾಣೆಹಳ್ಳಿಗೆ ಬಂದಿದ್ದರು, ನಾನೂ ಪೇಜಾವರ ಮಠಕ್ಕೆ ಹೋಗಿದ್ದೆ; ವಿಶ್ವೇಶ ತೀರ್ಥರ ನೆನಪು

ವಿಶ್ವೇಶ ತೀರ್ಥರು ಬೃಂದಾವನಸ್ಥರಾಗಿ ಇಂದಿಗೆ (ಡಿ.29) ಒಂದು ವರ್ಷ. ಜಾತಿ-ಮತಭೇದ ಮರೆತು ಎಲ್ಲರೊಡನೆ ಬೆರೆಯುತ್ತಿದ್ದ ವಿಶ್ವೇಶ ತೀರ್ಥರನ್ನು ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೆನಪಿಸಿಕಂಡಿದ್ದಾರೆ. ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ನಾಡಿನ ಇಬ್ಬರು ಹಿರಿಯರ ನಡುವೆ ಬೆಳೆದಿದ್ದ ಮಾನವೀಯ ಸಂಬಂಧಗಳ ನೆಲೆಯಲ್ಲಿ ಪೇಜಾವರ ಶ್ರೀಗಳ ವ್ಯಕ್ತಿತ್ವವನ್ನು ತೆರೆದಿಡುವ ಬರಹವಿದು.

  • ಗಣಪತಿ ದಿವಾಣ
  • Published On - 8:52 AM, 29 Dec 2020
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಬರಹ | ಅವರೂ ಸಾಣೆಹಳ್ಳಿಗೆ ಬಂದಿದ್ದರು, ನಾನೂ ಪೇಜಾವರ ಮಠಕ್ಕೆ ಹೋಗಿದ್ದೆ; ವಿಶ್ವೇಶ ತೀರ್ಥರ ನೆನಪು
ಪೇಜಾವರ ಮಠಾಧೀಶರಾಗಿದ್ದ ವಿಶ್ವೇಶ ತೀರ್ಥ ಸ್ವಾಮೀಜಿ

ಮಾಧ್ವ ಪರಂಪರೆಯ ಹಿರಿಯ ಯತಿಗಳಾಗಿದ್ದ ಪೇಜಾವರ ಶ್ರೀ ವಿಶ್ವೇಶ ತೀರ್ಥರು ಕೃಷ್ಣೈಕ್ಯರಾಗಿ ಇಂದಿಗೆ ಒಂದು ವರ್ಷ ಸಂದಿತು. ದೇಹದ ಆಕಾರದಲ್ಲಿ ವಾಮನನಂತಿದ್ದ ವಿಶ್ವೇಶ ತೀರ್ಥರು ಧಾರ್ಮಿಕ, ಸಾಮಾಜಿಕವಾಗಿ ತ್ರಿವಿಕ್ರಮನಂತೆ ಬೆಳೆದವರು. ಬೃಂದಾವನಸ್ಥರಾದ ಪೇಜಾವರ ಶ್ರೀಗಳ ಬಗ್ಗೆ ಮತ್ತೋರ್ವ ಗುರುಗಳಾದ, ಸಾಣೆಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಮ್ಮ ಮನದ ಮಾತುಗಳನ್ನು ‘ಟಿವಿ9 ಕನ್ನಡ ಡಿಜಿಟಲ್’ ಜೊತೆಗೆ ಹಂಚಿಕೊಂಡಿದ್ದಾರೆ. ವೈಚಾರಿಕ ಭಿನ್ನಾಭಿಪ್ರಾಯಗಳ ನಡುವೆಯೂ ಮಾನವೀಯ ಸಂಬಂಧಗಳ ನೆಲೆಯಲ್ಲಿ ಪೇಜಾವರ ಶ್ರೀಗಳು ಕಂಡ ಬಗೆಯನ್ನು ತೆರೆದಿಡುವ ಬರಹವಿದು.

ಪೂಜ್ಯ ಪೇಜಾವರ ಶ್ರೀಗಳು ನಮಗೆ ಸುಮಾರು 40 ವರ್ಷಗಳಿಂದ ಪರಿಚಯ. ನಮಗಿಂತ ತುಂಬಾ ಹಿರಿಯರು. ಮೇಧಾವಿಗಳು. ಅಂಥಾ ಪೂಜ್ಯರ ಒಡನಾಟ ಸಿರಿಗೆರೆಯ ಹಿರಿಯ ತರಳಬಾಳು ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಜೊತೆಯೂ ತುಂಬಾ ಇತ್ತು. ತರಳಬಾಳು ಮಠಕ್ಕೆ, ಸಿರಿಗೆರೆಗೆ ಹಲವು ಬಾರಿ ಆಗಮಿಸಿ ತಮ್ಮ ಪ್ರಖರವಾದ ಪಾಂಡಿತ್ಯವನ್ನು ಮೆರೆದಿದ್ದರು. ಸಾಣೇಹಳ್ಳಿಗೆ ಕೂಡ ಅವರು ಆಗಮಿಸಿದ ಕ್ಷಣಗಳು ಮನದಲ್ಲಿ ಈಗಲೂ ಹಸಿರಾಗಿವೆ.

ನಮ್ಮ ಮತ್ತು ಅವರ ನಡುವೆ ಕೆಲವು ವೈಚಾರಿಕ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಮಾನವೀಯ ಸಂಬಂಧಗಳಿಗೆ ಎಲ್ಲಿಯೂ ಧಕ್ಕೆ ಬಂದಿಲ್ಲ ಎಂಬುದನ್ನು ಬಹಳ ಪ್ರೀತಿಯಿಂದ ಹೇಳುತ್ತೇನೆ. ವೈಚಾರಿಕ ಭಿನ್ನಾಭಿಪ್ರಾಯಗಳು ಬೇರೆ, ಮಾನವೀಯ ಸಂಬಂಧಗಳು ಬೇರೆ. ಉದಾಹರಣೆಗೆ, ಮಡಿ ಸ್ನಾನ ಇತ್ಯಾದಿ ವಿಚಾರಗಳ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ವಿಚಾರವನ್ನು ನಾವು ಒಪ್ಪಿದವರಲ್ಲ. ನೇರವಾಗಿ ಅವರೊಂದಿಗೆ ಸಂವಾದ ಮಾಡಿದವರು. ಹಾಗಿದ್ದಾಗಲೂ ನಾವು ಅವರನ್ನು ಆಹ್ವಾನಿಸಿದಾಗ, ಸಾಣೇಹಳ್ಳಿಗೆ ಬಂದು, ಇಲ್ಲಿ ಮಠದಲ್ಲೇ ಪೂಜೆ ನಡೆಸುತ್ತಾ, ವಾಸ್ತವ್ಯ ಹೂಡಿ, ಒಳ್ಳೆಯ ಮಾತುಗಳನ್ನು ಹೇಳಿ, ಸಾರ್ವಜನಿಕರ ಜೊತೆಯೂ ಮಾತನಾಡಿದ್ದರು.

ವ್ಯಕ್ತಿ ದೂರ ಇದ್ದಾಗ ಕಾಣಿಸುವುದೇ ಒಂದು ರೀತಿ. ಅದೇ ವ್ಯಕ್ತಿ ಹತ್ತಿರವಾದಾಗ ಭಾವನೆಗಳು ಅರ್ಥವಾಗುವುದೇ ಒಂದು ರೀತಿ. ಹೀಗೆ, ಪೇಜಾವರ ಶ್ರೀಗಳು ನಮ್ಮ ಮಠಕ್ಕೆ ದಯಮಾಡಿಸಿದ್ದಾಗ, ಅವರ ಮಾನವೀಯ ಸಂಬಂಧಗಳ ನಿಜವಾದ ಮೌಲ್ಯ ನಮಗೆ ಪರಿಚಯವಾಯಿತು. ಪೇಜಾವರ ಮಠಕ್ಕೂ ಅವರು ನಮ್ಮನ್ನು ಆಹ್ವಾನಿಸಿದ್ದರು. ಪುಟುಪುಟು ಸಣ್ಣ ಮಗು ಓಡಾಡಿದಂತೆ ಓಡಾಡಿ, ಇಡೀ ಮಠದಲ್ಲಿ ನಮ್ಮನ್ನು ಸುತ್ತಾಡಿಸಿ, ಅದು ಹಾಗೆ, ಇದು ಹೀಗೆ ಎಂದು ವಿವರಿಸಿದ್ದರು. ಬಹಳ ಆತ್ಮೀಯತೆ ತೋರಿಸಿದ್ದರು.

ನಾವು ಪೇಜಾವರ ಮಠಕ್ಕೆ ಹೋಗುತ್ತೇವೆ ಅಂದಾಗ ಅನೇಕ ವೈಚಾರಿಕರು ಪಂಡಿತಾಚಾರ್ಯ ಸ್ವಾಮಿಗಳು ಅಲ್ಲಿಗೆ ಹೋಗುವುದು ಸಾಧ್ಯವೇ? ನಮ್ಮ ನಡುವೆ ಹಲವು ವೈಚಾರಿಕ ಭಿನ್ನಾಭಿಪ್ರಾಯಗಳು ಇರುವುದರಿಂದ ಅದು ಸಾಧ್ಯವೇ ಇಲ್ಲ ಎಂದು ಮಾತನಾಡಿಕೊಂಡದ್ದು ಉಂಟು. ನಾವು ಅಲ್ಲಿಗೆ ಹೋದ ತಕ್ಷಣ, ಅವರ ವಿಚಾರಗಳನ್ನು ನಾವು ಪೂರ್ಣ ಒಪ್ಪಿಕೊಂಡಂತೆಯೂ ಅಲ್ಲ. ಅವರು ಇಲ್ಲಿಗೆ ಬಂದ ತಕ್ಷಣ ನಮ್ಮ ವಿಚಾರವನ್ನು ಒಪ್ಪಿಕೊಂಡಂತೆಯೂ ಅಲ್ಲ. ವೈಚಾರಿಕ ಸಂಘರ್ಷ ಇದ್ದಾಗಲೇ ವ್ಯಕ್ತಿತ್ವದ ವಿಕಸನ ಆಗುವುದು.

ಆ ಹಿರಿಯರು, ವೈದಿಕ ಪರಂಪರೆಯಿಂದ ಬೆಳೆದು ಬಂದಂಥ ಸ್ವಾಮೀಜಿಗಳು. ವೈದಿಕ ಪರಂಪರೆಯೊಂದಿಗೆ ಬೆಳೆದರೂ ಸಾರ್ವಜನಿಕರ ಜೊತೆ ಅವರು ಬೆರೆಯುತ್ತಿದ್ದ ರೀತಿಯೇ ಒಂದು ಸಾಧನೆ. ಇಳಿ ವಯಸ್ಸಿನಲ್ಲೂ ಎಲ್ಲರ ಜೊತೆ ಬೆರೆಯುತ್ತಿದ್ದ ಅವರು, ಸಾರ್ವಜನಿಕ ಕಾಳಜಿ ಇಟ್ಟುಕೊಂಡಿದ್ದರು. ದೀನ ದಲಿತರ ಬಗ್ಗೆ ವಿಶೇಷ ಗೌರವ ತೋರಿಸುತ್ತಿದ್ದರು. ಅಂತಹ ಹಿರಿಯರು ಲಿಂಗೈಕ್ಯರಾದಾಗ ಬೇಸರವಾಯಿತು.

ಅನೇಕ ಜನರಿಗೆ ಮಾರ್ಗದರ್ಶನ ಮಾಡಿದವರು. ಮಾನವ ಗುಣಗಳ ಸಾಕಾರಮೂರ್ತಿಯಾದಂಥವರು. ಪೇಜಾವರ ಶ್ರೀಗಳಂಥಾ ಚೇತನವನ್ನು ಮತ್ತೆ ಮತ್ತೆ ಸ್ಮರಿಸಕೊಳ್ಳುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ.

ಸಾಣೆಹಳ್ಳಿಯಲ್ಲಿ ಪೇಜಾವರ ಶ್ರೀಗಳು, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳೂ ಜೊತೆಗಿದ್ದಾರೆ.

ಬನ್ನಂಜೆ ಗೋವಿಂದಾಚಾರ್ಯರ ನೆನಪು | ಸಂಪ್ರದಾಯ-ಆಧುನಿಕತೆಯನ್ನು ಸಮನ್ವಯಿಸಿ ನೋಡಿದ ಘನ ವಿದ್ವಾಂಸ: ಮಲ್ಲೇಪುರಂ ಜಿ.ವೆಂಕಟೇಶ್