ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?

ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?
ಸಾಂದರ್ಭಿಕ ಚಿತ್ರ

Shravan Month Festival 2021: ಭಾರತೀಯರಿಗೆ ಶ್ರಾವಣ ಮಾಸ ಬಹಳ ಮುಖ್ಯವಾದ ಮಾಸವಾಗಿದ್ದು, ಹಲವಾರು ಹಬ್ಬಗಳನ್ನು ಈ ಮಾಸದಲ್ಲಿ ಆಚರಿಸಲಾಗುತ್ತದೆ. ಆ ಹಬ್ಬಗಳ ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

TV9kannada Web Team

| Edited By: shivaprasad.hs

Aug 07, 2021 | 5:03 PM

ಶ್ರಾವಣ ಮಾಸವು ಭಾರತೀಯರಿಗೆ ಅತ್ಯಂತ ಪ್ರಮುಖವಾದ ಮಾಸ. ಶುಭ ಕಾರ್ಯಗಳಿಗೆ ಪ್ರಶಸ್ತವಾದ, ಹಬ್ಬ ಹರಿದಿನಗಳು ಹೆಚ್ಚಿರುವ ಈ ಮಾಸವನ್ನು ಬಹಳ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಬಾರಿಯ ಶ್ರಾವಣ ಮಾಸದಲ್ಲಿ ಯಾವೆಲ್ಲಾ ಹಬ್ಬಗಳು, ಎಂದು ಬರಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಭೀಮನ ಅಮವಾಸ್ಯೆ/ಕೊಡೆ ಅಮವಾಸ್ಯೆ- 8 ಆಗಸ್ಟ್: ಅವಿವಾಹಿತ ಹೆಣ್ಣು ಮಕ್ಕಳು ಹಾಗೂ ನವ ವಧುಗಳು ಆಚರಿಸುವ ಈ ಹಬ್ಬವನ್ನು ವಿವಿಧ ಪ್ರದೇಶದಲ್ಲಿ ವಿವಿಧ ಹೆಸರಿನಿಂದ ಕರೆಯುತ್ತಾರೆ. ದಕ್ಷಿಣ ಕನ್ನಡದಲ್ಲಿ ಆಟಿ ಅಮಾವಾಸ್ಯೆಯೆಂದೂ, ಉತ್ತರ ಕನ್ನಡದಲ್ಲಿ ಕೊಡೆ ಅಮಾವಾಸ್ಯೆಯೆಂದೂ ಇದನ್ನು ಕರೆಯಲಾಗುತ್ತದೆ. ವಿವಾಹಿತ ಹೆಂಗಳೆಯರು ಆಷಾಡದಲ್ಲಿ ತವರು ಮನೆಗೆ ತೆರಳುವ ಪದ್ಧತಿ ಇದೆ. ಭೀಮನ ಅಮಾವಾಸ್ಯೆಯಂದು ಅವರು ಮರಳಿ ಬಂದು, ಗಂಡನಿಗೆ ನಮಸ್ಕರಿಸಿ ಮತ್ತೆ ಜೊತೆಯಾಗುವ ಪದ್ಧತಿಯನ್ನು ಹಲವೆಡೆ ಆಚರಿಸಲಾಗುತ್ತದೆ.

ಮಂಗಳ ಗೌರಿ ವ್ರತ- 10 ಆಗಸ್ಟ್: ಪತಿಯ ದೀರ್ಘಾಯುಷ್ಯಕ್ಕಾಗಿ ಮತ್ತು ಸಂತಸದ ದಾಂಪತ್ಯ ಜೀವನಕ್ಕಾಗಿ ಮಂಗಳ ಗೌರಿ ವ್ರತವನ್ನು ಮಹಿಳೆಯರು ಆಚರಿಸುತ್ತಾರೆ. ಪಾರ್ವತಿ ದೇವಿಯನ್ನು ಈ ದಿನ ಪೂಜಿಸುವುದರಿಂದ ಕುಟುಂಬದಲ್ಲಿ ಆರೋಗ್ಯ, ಸಮೃದ್ಧಿ ನೆಲೆಯಾಗುತ್ತದೆ ಎಂಬುದು ಎಲ್ಲರ ನಂಬಿಕೆ. ಶ್ರಾವಣ ಮಾಸದ ಮೊದಲ ಮಂಗಳವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ನಾಗರ ಪಂಚಮಿ- 13 ಆಗಸ್ಟ್:  ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುವ ಈ ಹಬ್ಬದಂದು ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಹುತ್ತಗಳಿಗೆ, ದೇವಸ್ಥಾನಕ್ಕೆ ಭೇಟಿ ನೀಡಿ, ನಮಿಸಿ ಹಾಲೆರೆದು, ಹಬ್ಬವನ್ನು ಆಚರಿಸಲಾಗುತ್ತದೆ.

ಶ್ರಾವಣ ಪುತ್ರದ ಏಕಾದಶಿ ವ್ರತ- 18 ಆಗಸ್ಟ್: ದಕ್ಷಿಣ ಭಾರತದ ಜನರು ಹೆಚ್ಚಾಗಿ ಆಚರಿಸುವ ಈ ವ್ರತವು, ಪುತ್ರ ಸಂತಾನದ ಸಿದ್ಧಿಗಾಗಿ ನಡೆಸುವ ವ್ರತವಾಗಿದೆ. ಪುತ್ರದ ಏಕಾದಶಿಯಂದು ಉಪವಾಸ ಆಚರಿಸಿದರೆ ಸಂತಾನ ಭಾಗ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ಈ ಏಕಾದಶಿಯ ಆಚರಣೆಯಿಂದ ಪೂರ್ವ ಜನ್ಮದ ಕರ್ಮಗಳೂ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.

ವರಮಹಾಲಕ್ಷ್ಮಿ ವ್ರತ- 20 ಆಗಸ್ಟ್: ಶ್ರಾವಣ ಮಾಸದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವು ಬಹಳ ವಿಶೇಷವಾದುದು. ದಕ್ಷಿಣ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹೆಸರೇ ಹೇಳುವಂತೆ ವರವನ್ನು ಕರುಣಿಸುವ, ಐಶ್ವರ್ಯಗಳನ್ನು ದಯಪಾಲಿಸುವ ಲಕ್ಷ್ಮಿಯನ್ನು ಪೂಜಿಸುವ ಹಬ್ಬವಿದು.

​ಓಣಂ- 21 ಆಗಸ್ಟ್: ಕೇರಳದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬವನ್ನು ಇತ್ತೀಚೆಗೆ ಎಲ್ಲೆಡೆ ಆಚರಿಸಲಾಗುತ್ತದೆ. ಸಾಮ್ರಾಟ ಮಹಾಬಲಿಯು ಮನೆಗೆ ಮರಳಿ ಬಂದ ಕುರುಹಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.ಹತ್ತು ದಿನಗಳವರೆಗೆ ಸಡಗರದಿಂದ ಆಚರಿಸಲಾಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯ ಎಳೆಗಳೊಂದಿಗೆ ಬೆಸೆದುಕೊಂಡಿದೆ. ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ – ಇವೆಲ್ಲವೂ ಓಣಂನ ಪ್ರಮುಖ ಆಕರ್ಷಣೆಗಳಾಗಿವೆ.

ಋಗ್ ಉಪಾಕರ್ಮ- 21 ಆಗಸ್ಟ್: ಶ್ರಾವಣ ಮಾಸದ ಶುಕ್ಲಪಕ್ಷದ  ಹುಣ್ಣಿಮೆಯೆಂದು ಋಗ್ ಉಪಾಕರ್ಮವನ್ನು ನಡೆಸಲಾಗುತ್ತದೆ. ನೂಲು ಹುಣ್ಣಿಮೆಯೆಂದೂ ಕರೆಯಲಾಗುವ ಈ ಹಬ್ಬದಂದು ಋಗ್ವೇದ ಪಾಲಿಸುವ ಬ್ರಾಹ್ಮಣರು ಜನಿವಾರವನ್ನು ಬದಲಿಸಿ ಹೊಸ ಜನಿವಾರವನ್ನು ತೊಡುತ್ತಾರೆ. ಕ್ಷತ್ರಿಯ ಮತ್ತು ವೈಶ್ಯ ಸಮುದಾಯದವರೂ ಉಪಾಕರ್ಮ ಆಚರಿಸುತ್ತಾರೆ.

ಯಜುರುಪಾಕರ್ಮ- 22 ಆಗಸ್ಟ್: ಯಜುರ್ ಉಪಾಕರ್ಮದಂದು ಯಜುರ್ವೇದ ಪಾಲಿಸುವ ಬ್ರಾಹ್ಮಣರು ಜನಿವಾರವನ್ನು ಬದಲಿಸಿಕೊಳ್ಳುತ್ತಾರೆ. ಬ್ಯಾಹ್ಮಣರಿಗೆ ಇದು ಅತ್ಯಂತ ಪ್ರಮುಖವಾದ ವಿಧಿಯಾಗಿದೆ. ಸಾಮಾನ್ಯವಾಗಿ ಇದೇ ದಿನದಂದು ಉತ್ತರ ಭಾರತ ಭಾಗದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.

ರಕ್ಷಾ ಬಂಧನ-22 ಆಗಸ್ಟ್:  ಭಾರತೀಯರು ಆಚರಿಸುವ ಒಂದು ವಿಶೇಷ ಹಬ್ಬವಿದು. ಈ ದಿನದಂದು ಸಹೋದರಿಯರು ತಮ್ಮ ಸಹೋದರನ ಕೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ಗಟ್ಟಿಗೊಳಿಸುವ ಹಬ್ಬ ಇದಾಗಿದೆ.

ರಾಘವೇಂದ್ರ ಸ್ವಾಮಿಗಳ ಆರಾಧನೆ- 23rd ಆಗಸ್ಟ್ to 25th ಆಗಸ್ಟ್: ರಾಘವೇಂದ್ರ ಸ್ವಾಮಿಗಳು ವೃಂದಾವನ ಪ್ರವೇಶ ಮಾಡಿದ ದಿನದ ಸ್ಮರಣಾರ್ಥ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ನಡೆಯುತ್ತದೆ. ವೃಂದಾವನ ಪ್ರವೇಶ ಮಾಡಿದ ದಿನ, ಹಿಂದಿನ ದಿನ ಹಾಗೂ ನಂತರದ ದಿನ ಹೀಗೆ ಮೂರು ದಿನಗಳ ಕಾಲ ಕಾರ್ಯಕ್ರಮಗಳು ನಡೆಯುತ್ತವೆ.

ಸಂಕಷ್ಟ ಚತುರ್ಥಿ- 25 ಆಗಸ್ಟ್: ಪ್ರತೀ ತಿಂಗಳು ಆಚರಿಸಲಾಗುವ ಸಂಕಷ್ಟ ಚತುರ್ಥಿಯನ್ನು ಭಾರತದ ಎಲ್ಲೆಡೆ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ. ಗಣಪತಿಯ ವಿಶೇಷ ಪೂಜೆ, ಉಪವಾಸ ಮೊದಲಾದ ವಿಧಾನಗಳಿಂದ ಈ ದಿನವನ್ನು ಆಚರಿಸಲಾಗುತ್ತದೆ. ಶ್ರಾವಣ ಸೋಮವಾರ- ಆಗಸ್ಟ್: ಶ್ರಾವಣ ಸೋಮವಾರ ಶಿವ ಭಕ್ತರಿಗೆ ವಿಶೇಷವಾದ ದಿನ. ಅಂದು ಶಿವ- ಪಾರ್ವತಿಯರನ್ನು ಪೂಜಿಸಲಾಗುತ್ತದೆ.ಧಾರ್ಮಿಕ ನಂಬಿಕೆಗಳ ಪ್ರಕಾರ ಶ್ರಾವಣ ಸೋಮವಾರದಂದು ಉಪವಾಸ ವ್ರತ ಹಾಗೂ ಮೌನ ವ್ರತದೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.

ಶ್ರಾವಣ ಶನಿವಾರ- Saturday ಸಂಪತ್ ಶ್ರಾವಣ ಶನಿವಾರವೆಂದೂ ಕರೆಯಲಾಗುವ ಈ ದಿನದಂದು ವೆಂಕಟೇಶ್ವರ,ಲಕ್ಷ್ಮಿ ಹಾಗೂ ಶನಿ ದೇವರನ್ನು ಪೂಜಿಸಲಾಗುತ್ತದೆ. ಸ್ಥಳದಿಂದ ಸ್ಥಳಕ್ಕೆ ಪೂಜೆಯಲ್ಲಿ ವ್ಯತ್ಯಾಸವಿದ್ದರೂ, ಆಚರಣೆಯ ಮೂಲ ಉದ್ದೇಶದಲ್ಲಿ ಸಾಮ್ಯತೆಯಿದೆ.

ಕೃಷ್ಣ ಜನ್ಮಾಷ್ಠಮಿ- 30 ಆಗಸ್ಟ್: ಶ್ರೀ ಕೃಷ್ಣ ಹುಟ್ಟಿದ ದಿನವನ್ನು ಗೋಕುಲಾಷ್ಟಮಿ ಅಥವಾ ಕೃಷ್ಣಾಷ್ಟಮಿ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು ಹಾಗೂ ಸೌರಮಾನದಲ್ಲಿ ಸಿಂಹಹ ಮಾಸದ ರೋಹಿಣಿ ನಕ್ಷತ್ರದ ದಿನ ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ.

Muharram- 19 ಆಗಸ್ಟ್: ಇಸ್ಲಾಂ ಧರ್ಮದ ಹೊಸ ವರ್ಷವನ್ನು ಮೊಹರಂ ಹಬ್ಬದೊಂದಿಗೆ ಆರಂಭಿಸಲಾಗುತ್ತದೆ. ಚಂದ್ರನ ದರ್ಶನದ ಆಧಾರದ ಮೇಲೆ ಈ ಹಬ್ಬವನ್ನು ನಿರ್ಧರಿಸಲಾಗುತ್ತದೆ. ಸುಮಾರು ಹತ್ತು ದಿನಗಳವರೆಗೆ ಈ ಹಬ್ಬ ನಡೆಯುತ್ತದೆ. ಇಸ್ಲಾಂ ಅನುಯಾಯಿಗಳಿಗೆ ಇದೊಂದು ಪ್ರಮುಖವಾದ ಹಬ್ಬವಾಗಿದೆ.

ಇದನ್ನೂ ಓದಿ:

Aditi Ashok: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕನ್ನಡತಿಯ ಸರ್ವಶ್ರೇಷ್ಠ ಸಾಧನೆ

(Shravan Month Festival 2021; Raksha Bandhan, Krishna Janmasthami and many more festivals details in Kannada)

Follow us on

Most Read Stories

Click on your DTH Provider to Add TV9 Kannada