ಮನುಷ್ಯನು ತಾನು ಎಷ್ಟೇ ಸ್ವಾವಲಂಬಿ ಎಂದು ಹೇಳಿದರೂ ಪ್ರಕೃತಿಯ ಅವಲಂಬನೆ ಇಲ್ಲದೆ ಮನುಷ್ಯನಿಗೆ ಜೀವಿಸಲು ಸಾಧ್ಯವೇ ಇಲ್ಲ. ನಾವು ತನ್ನದೆಂದು ಹೇಳುವ ವಸ್ತು ಏನಿದೆ ಅದರ ಉತ್ಪತ್ತಿಯೆನ್ನುವುದು ಪಂಚಭೂತಗಳ ಮೇಲನದಿಂದ ಆಗಿದ್ದು ಹೊರತು ನಮ್ಮ ಕಾರಣದಿಂದ ಅಲ್ಲ. ಈ ಎಲ್ಲಾ ಕಾರಣಗಳಿಂದ ಪಂಚಭೂತಗಳಾದ ಪೃಥಿವೀ – ಅಪ್ – ತೇಜ – ವಾಯು – ಆಕಾಶವೇನಿದೆ (ಭೂಮಿ – ನೀರು – ಅಗ್ನಿ – ಗಾಳಿ – ಆಕಾಶ) ಇವುಗಳಿಗೆ ಈ ವ್ಯವಸ್ಥೆಯಿಂದ ಉಪಕೃತನಾದ ಮಾನವನು ಅವಶ್ಯವಾಗಿ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಇದು ಸಂಪ್ರದಾಯವೂ ಹೌದು, ಶಾಸ್ತ್ರವೂ ಆಗಿದೆ.
ಇದರ ಹೊರತಾಗಿ ನಾವು ಕೃತಘ್ನರಾಗಿ ದುರಾಸೆಯಿಂದ ಇವುಗಳನ್ನು ಅಗೌರವಿಸಿದರೆ ವಿಪತ್ತು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ. ಇಂದಿನ ವರ್ತಮಾನದ ವಾತಾವರಣ ವೈಪರೀತ್ಯಕ್ಕೆ ಇದೂ ಒಂದು ಕಾರಣ.
ಈ ರೀತಿಯ ವಿಪತ್ತುಗಳು ಸಂಭವಿಸಿ ಆಪತ್ತು ಆಗಬಾರದೆಂಬ ಕಾರಣಕ್ಕೆ ನಮ್ಮ ಪೂರ್ವಿಕರು ಪ್ರಕೃತಿಯನ್ನು ಗೌರವಿಸುವ ಸಲುವಾಗಿ ಕೆಲವು ವಿಶೇಷ ದಿನಗಳನ್ನು ಗುರುತಿಸಿ ಆದಿನದಂದು ಆಯಾಯ ರೂಪವನ್ನು ಪೂಜಿಸುವ ಪರಿಪಾಠ ಆರಂಭಿಸಿದರು. ಅದರಲ್ಲಿ ಇಂದಿನ ದಿನ “ಭೂಮಿ ಹುಣ್ಣಿಮೆ”. ಶರದೃತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಕೊನೆಯ ದಿನ ಅಂದರೆ ಹುಣ್ಣಿಮೆಯಂದು ಭೂಮಿ ಪೂಜೆಯನ್ನು ಮಾಡುವುದು ವಿಶೇಷ.
ಈ ದಿನ ಜನರು ಎರಡು ಭಾವದಿಂದ ಭೂಮಿಯನ್ನು ಪೂಜಿಸುತ್ತಾರೆ.
ಮೊದಲನೇಯದ್ದು – ಭೂಮಿತಾಯಿಯು ತನ್ನ ಮಡಿಲಿನಲ್ಲಿ ಫಲವನ್ನ /ಫಸಲನ್ನುತುಂಬಿಕೊಂಡು ಹಚ್ಚಹಸುರಾಗಿ ಕಂಗೊಳಿಸುತ್ತಿರುತ್ತಾಳೆ. ಅಂದರೆ ತನ್ನ ಗರ್ಭದಿಂದ ಪುಷ್ಟಿಯನ್ನು ನೀಡಿ ನಮಗಾಗಿ ಫಲವನ್ನು ನೀಡಲು ಸಿದ್ಧಳಾಗಿರುವಳು ಎಂಬ ಭಾವದಿಂದ ಸ್ತ್ರೀಯರಿಗೆ ಸೀಮಂತ ಮಾಡಿದ ರೀತಿಯಲ್ಲಿ ವಿವಿಧ ತಿಂಡಿಗಳನ್ನು ಮಾಡಿ ಭೂಮಿಗೆ ಅದನ್ನು ಬಳಿಸಿ ಅರಶಿನ ಕುಂಕುಮಗಳನ್ನು ಇಟ್ಟು ವಿಶೇಷವಾಗಿ ಪೂಜಿಸುತ್ತಾರೆ.
ಎರಡನೇಯದ್ದು – ಭೂಮಾತೆಯು ಈ ದಿನದಂದು ದೊಡ್ಡವಳಾದಳು (ಮೈನೆರೆದಳು) ಎಂಬ ಭಾವದಿಂದ ವಿಶೇಷವಾಗಿ ಪೂಜಿಸುತ್ತಾರೆ.
ಈ ಮೇಲಿನ ಎರಡು ಪೂಜಾ ಭಾವಗಳೇನಿವೆ ಅವರೆಡೂ ಸಹಿತ ನಮ್ಮ ಕೃತಜ್ಞತೆಯ ರೂಪ. ವರುಷವಿಡೀ ಭೂಮಿಯನ್ನು ಅವಲಂಬಿಸಿ ಬದುಕುತ್ತೇವೆ. ಅದರಲ್ಲಿ ಉಳುಮೆ ಮಾಡುತ್ತೇವೆ, ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಅವಳ ಮಡಿಲಿನಿಂದಲೇ ಪಡೆಯುತ್ತೇವೆ. ಏನು ನಮ್ಮ ಅವಶ್ಯ ಪದಾರ್ಥಗಳಿವೆ ಅವು ಪಕ್ವವಾಗುವ ಕಾಲ ಈ ಶರದೃತುವಿನ ಆಶ್ವಿನ ಹುಣ್ಣಿಮೆಯಂದು ಎಂದು ಹಳೆಕಾಲದ ರೂಢಿಯ ಮಾತು. ಅದಕ್ಕನುಗುಣವಾಗಿ ಈ ದಿನದ ಹುಣ್ಣಿಮೆಯನ್ನು “ಭೂಮಿ ಹುಣ್ಣಿಮೆ” ಎಂಬದಾಗಿ ಆಚರಿಸುತ್ತೇವೆ.
ಮನೆಯ ಗಂಡಸರು ಇಂದಿನ ದಿನ ತಮ್ಮ ಹೊಲ, ತೋಟಗಳಿಗೆ ಹೋಗಿ ಅಲ್ಲಿ ನೆಲವನ್ನು ಶುಚಿಗೊಳಿಸಿ, ಬಾಳೆಕಂಬ ಇತ್ಯಾದಿಗಳಿಂದ ಮಂಟಮ ಮಾಡಿ, ಮಾವಿನೆಲೆಯ ತೋರಣವನ್ನು ಮಾಡುತ್ತಾರೆ/ಬೇಕು. ಮನೆಯ ಹೆಂಗಳೆಯರು ಭೂಮಿಗೆ ರಂಗವಲ್ಲಿಯನ್ನಿಟ್ಟು , ಹೂವಿನಿಂದ ಅಲಂಕರಿಸಿ , ಅರಶಿನ – ಕುಂಕುಮಗಳಿಂದ ಅರ್ಚನೆ ಮಾಡಬೇಕು. ಹಸಿರು ಬಳೆ, ಹಸಿರು ವಸ್ತ್ರ ಇತ್ಯಾದಿಗಳನ್ನು ಇಟ್ಟರೆ ಉತ್ತಮ. ಆ ನಂತರ ಮನೆಯಿಂದ ಸುಂದರವಾದ ಬುಟ್ಟಿಯನ್ನು ಸಿದ್ಧಪಡಿಸಿ (ಬುಟ್ಟಿಗೆ ದನಸಗಣಿ ಮತ್ತು ಕೆಂಪುಮಣ್ಣನ್ನು ಬೆರೆಸಿ ಹಚ್ಚಬೇಕು. ಮತ್ತು ಅದರಲ್ಲಿ ಶೇಡಿಯಿಂದ ಸುಂದರವಾಗಿ ಚಿತ್ರಬಿಡಿಸಿರಬೇಕು) ಮನೆಯಲ್ಲಿಯೇ ಮಾಡಿದ ವಿವಿಧ ಭಕ್ಷ್ಯಗಳನ್ನು ಈ ಬುಟ್ಟಿಯಲ್ಲಿರಿಸಿ ಪೂಜಾ ಸ್ಥಾನಕ್ಕೆ ಹೋಗಿ, ಅಲ್ಲಿ ಮನೆಯವರೆಲ್ಲಾ ಸೇರಿ ಪೂಜಿಸಬೇಕು. ಪೂಜೆಯ ಕೊನೆಯಲ್ಲಿ ತಾಯಿಯನ್ನು ಭಕ್ತಿಯಿಂದ ಪ್ರಾರ್ಥಿಸಿ, ಒಳ್ಳೆಯ ರೀತಿಯ ಫಸಲನ್ನು ನೀಡು ಎಂಬ ಭಾವದಿಂದ ಬುಟ್ಟಿಯಲ್ಲಿ ತಂದ ಆಹಾರವನ್ನು ಬಾಳೇ ಎಲೆಯ ಮೇಲೆ ಬಡಿಸಬೇಕು. ಆನಂತರ ಪ್ರಸಾದ ರೂಪದಲ್ಲಿ ನಾವು ಬೆಳೆದ ಪೈರು ಅಥವಾ ಏನು ಬೆಳೆದಿರುವೆವೋ ಅದನ್ನು ಮನೆಗೆ ತಂದು ಮನೆಯಲ್ಲಿ ದೇವರ ಮುಂದಿಟ್ಟು ಪೂಜಿಸಿವುದು. ಈ ರೀತಿಯಾಗಿ ಪ್ರಕೃತಿಯನ್ನು ಗೌರವಿಸುವುದು ಅಥವಾ ಪೂಜಿಸುವುದು. ಭೂಮಿಯನ್ನು ಆಶ್ರಯಿಸಿರುವ ನಮ್ಮ ಆದ್ಯ ಕರ್ತವ್ಯ.
ಡಾ.ಕೇಶವಕಿರಣ ಬಿ
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು, kkmanasvi@gamail.com