Kamsa Death: ಕಂಸನ ಮೃತ್ಯುವೂ, ದೈವ ನಿಶ್ಚಯವೂ! ಏನಿದರ ಮರ್ಮ?
The Killing of Kamsa; ಭಗವಾನ್ ಶ್ರೀಕೃಷ್ಣನ ಮಾವನಾದ ಕಂಸ ವಿಧಿಯಿಂದಾಗಿ ವಸುದೇವ ದೇವಕಿಯರನ್ನು ಒಂದೇ ಕಾರಾಗೃಹದಲ್ಲಿಟ್ಟ ಎನ್ನುವುದನ್ನು ಸಾಮಾನ್ಯವಾಗಿ ಓದಿರುತ್ತೇವೆ. ಇದೇ ಕಂಸ ಈ ಹಿಂದೆ ಕೃಷ್ಣನನ್ನು ತನ್ನ ಪಟ್ಟಣಕ್ಕೆ ಕರೆಸಿ ಕೊಲ್ಲುವ ಆಲೋಚನೆಗೆ ಪೂರಕವಾಗಿ ಹೂಡಿದ ತಂತ್ರದ ಒಳ ಮರ್ಮವೇನು??
ಈಗೊಂದು ತಿಂಗಳ ಹಿಂದಿನ ಕಥೆ. ನಾನಾಗ ಊರಿನ ಕಡೆ ಇದ್ದೆ. ಮಳೆ ಸುರಿಯುತ್ತಿದ್ದದ್ದರಿಂದ ಸಹಜವಾಗಿಯೇ ಕೊಡೆ ಹಿಡಿದುಕೊಂಡು ನಡೆದುಹೋಗುತ್ತಿದ್ದೆ. ನಿಧಾನವಾಗಿ ಮೋಡಗಳು ಮಳೆಗರೆಯುವುದನ್ನು ನಿಲ್ಲಿಸಿದರೂ ಕರೆಯೊಂದರಲ್ಲಿ ನಿರತನಾಗಿದ್ದ ನನಗೆ ಕೊಡೆಯನ್ನು ಮಡಿಚುವ ವ್ಯವಧಾನವಿಲ್ಲದ್ದರಿಂದ ಬಿಡಿಸಿದ ಕೊಡೆ ಬಿಡಿಸಿಯೇ ಇತ್ತು. ಆಗಲೇ ದಾರಿಯವರೆಗೂ ತನ್ನ ಕೈಗಳನ್ನು ಚಾಚಿದ್ದ ಮರವೊಂದರ ಮೇಲಿಂದ ಒಣಗಿದ ಕೊಂಬೆ ಮುರಿದು ಬಿದ್ದಿದ್ದು ನನ್ನದೇ ಕೊಡೆಯ ಮೇಲೆ!!
ನನಗೆ ಕೊಡೆಯನ್ನು ಮಡಿಚಬೇಕೆಂದು ಏಕೆ ಅನ್ನಿಸಲಿಲ್ಲ??
ಅದನ್ನೇ ದೇವರ ಯೋಜನೆ ಎನ್ನುವುದು!! ನಮ್ಮ ಹಿರಿಯರು ಯಾವುದೋ ಜನ್ಮದ ಪುಣ್ಯ, ವಿಧಿ ಇತ್ಯಾದಿಯಾಗಿ ಕಾಣಿಸಿರುವುದೂ ಇದನ್ನೇ!! ಇದಕ್ಕೆ ಪುರಾಣ ಪ್ರಸಿದ್ಧವಾದ ಒಂದು ಉದಾಹರಣೆಯನ್ನು ನೀಡುತ್ತೇನೆ. ತನ್ಮೂಲಕ ಸಾಮಾನ್ಯವಾಗಿ ಆ ಕಥೆ ಹರಿದು ಬಂದಿರುವ ರೀತಿಗೂ, ಅದರ ಮೂಲಕ್ಕೂ ವ್ಯತ್ಯಾಸವನ್ನೂ ತಿಳಿಯುವಂತಾಗಲಿ ಎನ್ನುವುದೇ ಆಶಯ.
ಭಗವಾನ್ ಶ್ರೀಕೃಷ್ಣನ ಮಾವನಾದ ಕಂಸ ವಿಧಿಯಿಂದಾಗಿ ವಸುದೇವ ದೇವಕಿಯರನ್ನು ಒಂದೇ ಕಾರಾಗೃಹದಲ್ಲಿಟ್ಟ ಎನ್ನುವುದನ್ನು ಸಾಮಾನ್ಯವಾಗಿ ಪ್ರವಚನಗಳಲ್ಲಿಯೋ, ಲೇಖನಗಳಲ್ಲಿಯೂ ಓದಿರುತ್ತೇವಲ್ಲ, ಇದೇ ಕಂಸ ಈ ಹಿಂದೆ ಅರಿಷ್ಟ, ಪೂತನೀ, ತೃಣಾವರ್ತಾದಿ ವಿಶಿಷ್ಟ ಬಲಸಮನ್ವಿತರಾದ ರಾಕ್ಷಸರು ಯಾವ ಕೃಷ್ಣನ ಕೂದಲನ್ನೂ ಕೊಂಕಿಸಲು ಅಸಮರ್ಥರಾದರೋ ಅಂತಹ ಕೃಷ್ಣನನ್ನು ತನ್ನ ಪಟ್ಟಣಕ್ಕೆ ಕರೆಸಿ ಕೊಲ್ಲುವ ಆಲೋಚನೆಗೆ ಪೂರಕವಾಗಿ ಹೂಡಿದ ತಂತ್ರವೇನು?? ಮದವೇರಿದ ಕುವಲಯಾಪೀಡ ಎನ್ನುವ ತನ್ನ ಪಟ್ಟದಾನೆಯನ್ನೂ, ಯಾವುದೇ ರಾಕ್ಷಸೀ ಶಕ್ತಿಗಳಿಲ್ಲದ ಐವರು (ಚಾಣೂರ, ಮುಷ್ಟಿಕ, ಶಲ, ತೋಶಲ, ಕೂಟ) ಜಟ್ಟಿಗಳನ್ನೂ, ಕೊನೆಯಲ್ಲಿ ಗತ್ಯಂತರವಿಲ್ಲದೇ ತನ್ನ ಎಂಟು ಜನ ಸಹೋದರರನ್ನು ಮುಂದಟ್ಟಿ ಕೃಷ್ಣ-ಬಲರಾಮರನ್ನು ಕೊಲ್ಲಿಸುವುದು!! ಮಲ್ಲಯುದ್ಧ ರಂಗದ ಪ್ರವೇಶದ್ವಾರದ ತೋರಣವನ್ನು ಬೀಳಿಸಿ ಕೊಲ್ಲುವುದು!!
ಅಷ್ಟಕ್ಕೂ ಕಂಸ ಕೃಷ್ಣ-ಬಲರಾಮರನ್ನು ಕಡಿಮೆ ಎಂದೇನೂ ಎಣಿಸಿರಲಿಲ್ಲ. ಆತ ಅವರನ್ನು ಕರೆಸಿದ್ದೇ “ಯಾವನ್ನ ಬಲಮಾರೂಢೌ ರಾಮಕೃಷ್ಣೌ ಸುಬಾಲಕೌ | ತಾವದೇವ ಮಯಾ ವಧ್ಯಾವಸಾಧ್ಯೌ ರೂಢಯೌವನೌ ||”
(ಈ ರಾಮ-ಕೃಷ್ಣರು ಇನ್ನೂ ಬಾಲಕರಿದ್ದಾಗಲೇ ಇವರನ್ನು ಕೊಲ್ಲಬೇಕು. ಒಂದು ಪಕ್ಷ ಇವರು ಯೌವನಸ್ಥರಾಗಿ ಮತ್ತಷ್ಟು ಬಲಶಾಲಿಗಳಾದರೆ ಅವಧ್ಯರಾಗುತ್ತಾರೆ) ಎಂಬ ಯೋಚನೆ ಅವನ ತಲೆ ಹೊಕ್ಕಿದ್ದರಿಂದಲೇ!! ಆದರೂ ಅಲ್ಲಿ ದೈವನಿಶ್ಚಯವೇ ಬೇರೆ ಇದ್ದಿದ್ದರಿಂದ ಕಂಸ ತಲೆಗೆ ಕೆಲಸ ಕೊಟ್ಟದ್ದು ಸಾಲದಾಯಿತು. ಹೆಣ್ಣು ಕೊಟ್ಟ ಮಾವನೂ, ಆ ಕಾಲದಲ್ಲೇ ಮಹಾಪರಾಕ್ರಮಿಯೂ ಆಗಿದ್ದ ಜರಾಸಂಧ ಆತನ ಸ್ಮೃತಿಪಟಲವನ್ನು ತಟ್ಟಲಿಲ್ಲ. ಅಥವಾ ಇವನೇ ನಿರ್ಲಕ್ಷ್ಯಿಸಿದನೋ (!!). ಅದು ಹೋಗಲಿ. ತಾನೇ ಸ್ವತಃ ಕುವಲಯಾಪೀಡವನ್ನು ಬಾಲ ಹಿಡಿದು ತಿರುಗಿಸಿ ಎಸೆದವನೂ, ಪರಶುರಾಮನಿಂದ ಕೂರಲ್ಪಟ್ಟಿದ್ದ ಮಹೇಂದ್ರಪರ್ವತವನ್ನೂ, ವೈಷ್ಣವ ಧನುಸ್ಸನ್ನೂ ಎತ್ತಿದವನೂ ಆಗಿದ್ದ ಕಂಸ ಕೃಷ್ಣನೊಡನೆ ಕಾದಲೇ ಇಲ್ಲವಲ್ಲ!! ಇಂತಹ ಕಂಸ ಕೃಷ್ಣನಿಂದ ಸತ್ತದ್ದಾದರೂ ಹೇಗೆ??
“ತಸ್ಯೋಪರಿಷ್ಟಾತ್ ಸ್ವಯಮಬ್ಜನಾಭಃ | ಪಪಾತ ವಿಶ್ವಾಶ್ರಯ ಆತ್ಮತಂತ್ರಃ ||” ಅವನನ್ನು ಆಸನದಿಂದ ಬೀಳಿಸಿದ ಕೃಷ್ಣ ತಾನೂ ಅವನ ಮೇಲೆ ಬಿದ್ದ. ಪ್ರಕರಣವೇ ಮುಗಿದುಹೋಯಿತು!! ಅತ್ತ ಅನುಗಾಲವೂ ವೈರಭಾವದಿಂದಲೇ ಕೃಷ್ಣನನ್ನು ನೆನೆಯುತ್ತಿದ್ದ ಕಾರಣದಿಂದ ಕಂಸನಲ್ಲಿದ್ದ ಕಾಲನೇಮಿಯೆಂಬ ರಾಕ್ಷಸಾಂಶವೂ ತೊಲಗಿ ಆತನಿಗೆ ಮುಕ್ತಿಯೂ ದೊರೆಯಿತು!! (“ತಂ ಕಂಸಂ ಪಾತಯಾಮಾಸ ತಸ್ಯೋಪರಿ ಪಪಾತ ಚ” ಎನ್ನುವ ವಿಷ್ಣುಪುರಾಣದ ವಾಕ್ಯದ ಅಭಿಪ್ರಾಯವೂ ಸಹ ಇದೇ ಆಗಿದೆ)
ಈ ದೈವನಿಶ್ಚಯ ಅಥವಾ ವಿಧಿ ಎನ್ನುವುದು ಇರುವುದರಿಂದಲೇ ಕೃಷ್ಣ ಅರ್ಜುನನ ನಿಮಿತ್ತದಿಂದ ಸಮಸ್ತ ಮಾನವಕುಲಕ್ಕೆ ಕರ್ಮದಲ್ಲಿ ಮಾತ್ರ ನಿಮಗೆ ಅಧಿಕಾರ. ಆಗಬೇಕಾದದ್ದು ಆಗಿಯೇ ತೀರುವುದರಿಂದ ಫಲಾಪೇಕ್ಷೆಯಿಲ್ಲದೇ ನಿಮಿತ್ತಮಾತ್ರರೂ, ನಿರ್ಲಿಪ್ತರೂ ಆಗಿ ಕರ್ಮವನ್ನು ಮಾಡಿರಿ ಎಂದು ಬೋಧಿಸುವುದು. ಶ್ರದ್ಧಾವಂತರಾದ ಶೋ(ಸಾ)ಧಕರಿಗೆ ಸವಿಸ್ತಾರವಾಗಿ ತೆರೆದುಕೊಳ್ಳುವ ಭಗವಂತ ಒಳಗಿರುವ ತಾನು “ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ” ಅಂತ ಸ್ಪಷ್ಟವಾಗಿಯೇ ಹೇಳಿಬಿಟ್ಟಿದ್ದಾನೆ. ಆ ತತ್ವವನ್ನು ಸಾಕ್ಷಾತ್ಕರಿಸಿಕೊಂಡು ಅನುಸರಿಸುವುದರಲ್ಲಿಯೇ ಎಲ್ಲ ವಿಧವಾದ ಮಾನಸಿಕ ದುಃಖಗಳಿಂದ ದೂರವಾಗುವ ಮಾರ್ಗವಿರುವುದು. ತನ್ನ ಆಳ ಅಗಲಗಳನ್ನು ತಾನು ತಿಳಿಯಬಲ್ಲವನಿಗೆ ಯಾವ ಮನಃಶಾಸ್ತ್ರಜ್ಞರೂ ಬೇಕಿಲ್ಲ. ಆದರೆ, “ಅರಿತೆವೇನು ನಾವು ನಮ್ಮ ಅಂತರಾಳವ??”
ಬರಹ: ನಚಿಕೇತ್ ಹೆಗಡೆ