Guruvayur: ಗುರುವಾಯೂರು ಈ ಹೆಸರಿನ ಮಹತ್ವವೇನು? ಈ ಕ್ಷೇತ್ರದ ಮಹಿಮೆಯೇನು?

ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಗುರುವಾಯೂರು ಎಂಬ ಒಂದು ಕ್ಷೇತ್ರದ ಬಗ್ಗೆ ಇಂದು ನಾವು ತಿಳಿಯೋಣ. ಇದು ದೇವರನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಇದೆ. ಇಲ್ಲಿ ಆರಾಧ್ಯ ದೇವ ಮಹಾವಿಷ್ಣು. ಆದರೆ ಅವನು ಇಲ್ಲಿ ಕೃಷ್ಣನೆಂದು ಪ್ರಸಿದ್ಧ. ಯಾಕೆ ಎಂಬುದಕ್ಕೆ ಇಲ್ಲಿದೆ ಉತ್ತರ ನೋಡಿ.

Guruvayur: ಗುರುವಾಯೂರು ಈ ಹೆಸರಿನ ಮಹತ್ವವೇನು? ಈ ಕ್ಷೇತ್ರದ ಮಹಿಮೆಯೇನು?
ಸಾಂದರ್ಭಿಕ ಚಿತ್ರ
Follow us
ಡಾ. ಗೌರಿ ಕೇಶವಕಿರಣ
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 08, 2023 | 12:07 PM

ಆಸ್ತಿಕ ಬಂಧುಗಳು ತಮ್ಮ ಮಾನಸಿಕ ನೆಮ್ಮದಿಗೋಸ್ಕರ ತೀರ್ಥಕ್ಷೇತ್ರಗಳನ್ನು ಕ್ಷೇತ್ರತೀರ್ಥಗಳನ್ನು ಸಂದರ್ಶಿಸುವುದು ಸಹಜ. ಅಲ್ಲಿನ ಕ್ಷೇತ್ರದ ಪಾವಿತ್ರ್ಯ ಸಾನ್ನಿಧ್ಯದ ಬಲದಿಂದ ತಮ್ಮ ಇಷ್ಟಾರ್ಥಗಳು ಪ್ರಾಪ್ತವಾಗುತ್ತವೆ ಎಂಬ ಅನನ್ಯ ನಂಬಿಕೆ ಅವರದ್ದು. ಅಂತೆಯೇ ಅದರಿಂದ ನೆಮ್ಮದಿಯ ಬದುಕನ್ನು ಕಟ್ಟಿಕೊಂಡು ಸುಖಮಯವಾದ ಜೀವನವನ್ನು ಅದೆಷ್ಟೋ ಸಂಸಾರಗಳು ಕಂಡಿವೆ ಮತ್ತು ಕಾಣುತ್ತಲೂ ಇವೆ. ಇದು ಸತ್ಯವೂ ಹೌದು. ಅಂತಹ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಗುರುವಾಯೂರು ಎಂಬ ಒಂದು ಕ್ಷೇತ್ರದ ಬಗ್ಗೆ ಇಂದು ನಾವು ತಿಳಿಯೋಣ. ಇದು ದೇವರನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ಇದೆ. ಇಲ್ಲಿ ಆರಾಧ್ಯ ದೇವ ಮಹಾವಿಷ್ಣು. ಆದರೆ ಅವನು ಇಲ್ಲಿ ಕೃಷ್ಣನೆಂದು ಪ್ರಸಿದ್ಧ. ಯಾಕೆ ಎಂಬುದಕ್ಕೆ ಇಲ್ಲಿದೆ ಉತ್ತರ ನೋಡಿ.

ಪುರಾಣಗಳು ಹೇಳುವಂತೆ ಇಲ್ಲಿ ಪೂಜೆಗೊಳ್ಳುತ್ತಿರುವ ಮೂರ್ತಿ ಏನಿದೆ ಇದನ್ನು ಸಾಕ್ಷಾತ್ ವೈಕುಂಠನಾಥನೇ ಬ್ರಹ್ಮದೇವರಿಗೆ ಕೊಟ್ಟಿದ್ದನು. ಚತುರ್ಮುಖ ಬ್ರಹ್ಮನು ಇದನ್ನು ಸುತಪ ಎಂಬ ಮುನಿಗೆ ನೀಡಿದನು. ಆ ಮಹಾಮುನಿಯು ಅದನ್ನು ಕಶ್ಯಪ ಪ್ರಜಾಪತಿಗೆ ಸಮರ್ಪಿಸಿದನು. ಅವನಿಂದ ಅದು ಕೃಷ್ಣನ ತಂದೆಯಾದ ವಸುದೇವನಿಗೆ ಪ್ರಾಪ್ತವಾಯಿತು. ವಸುದೇವನಿಂದ ಅದು ಕೃಷ್ಣನಿಗೆ ಲಭ್ಯವಾಗಿ ಮೊದಲಿಗೆ ಅದು ದ್ವಾರಕೆಯಲ್ಲಿ ಶ್ರೀಕೃಷ್ಣನಿಂದ ಪ್ರತಿಷ್ಠಾಪಿಸಲ್ಪಟ್ಟಿತು. ಮತ್ತು ಸಾಕ್ಷಾತ್ ಶ್ರೀಕೃಷ್ಣನ ನೇತ್ರತ್ವದಲ್ಲೇ ಅದಕ್ಕೆ ಪೂಜೆ ನಡೆಯಿತು. ಸಂದರ್ಭ ಹೇಗಿದ್ದರಬಹುದು ಎಂದು ಯೋಚಿಸಿ.

ದ್ವಾಪರಾಯುಗದ ಅಂತ್ಯದಲ್ಲಿ ದ್ವಾರಕೆ ಸಮುದ್ರದಲ್ಲಿ ಮುಳುಗುವ ಸಂದರ್ಭ ಬಂದಾಗ ಶ್ರೀಕೃಷ್ಣನು ತನ್ನ ಭಕ್ತನಾದ ಉದ್ಧವ ಬಳಿ ಈ ಮೂರ್ತಿಯನ್ನು ನೀಡಿ ದೇವಗುರು ಬೃಹಸ್ಪತಿಯ ಮೂಲಕ ಇದನ್ನು ಉತ್ತಮ ಪವಿತ್ರಕ್ಷೇತ್ರದಲ್ಲಿ ಪ್ರತಿಷ್ಠಾಪಿಸುವಂತೆ ಅಪ್ಪಣೆ ನೀಡಿದನು. ಉದ್ಧವನ ಮೂಲಕ ತನಗೆ ದೊರತ ಮೂರ್ತಿಯನ್ನು ಬೃಹಸ್ಪತಿಯು ಪ್ರತಿಷ್ಠಾಪಿಸಲು ಪವಿತ್ರ ಭೂಮಿಯನ್ನು ವಾಯುದೇವರ ಸಹಕಾರವನ್ನು ಪಡೆದು ಹುಡುಕಲಾರಂಭಿಸಿದರು. ಕೊನೆಗೆ ಪರಮೇಶ್ವರನ ಆದೇಶದಂತೆ ಪಶ್ಚಿಮ ಸಾಗರದ ಪ್ರಾಂತದದಲ್ಲಿದ್ದ ಅಂಬಾಪುರ ಎಂಬ ಗ್ರಾಮದ ಹತ್ತಿರ ಪ್ರತಿಷ್ಠಾಪಿಸಿದರು.

ಈ ಪ್ರತಿಷ್ಠೆಯನ್ನು ಗುರು (ಬೃಹಸ್ಪತಿ) ಮತ್ತು ವಾಯುವು ಮಾಡಿದ್ದರಿಂದ ಈ ಸ್ಥಾನಕ್ಕೆ ಗುರುವಾಯೂರು ಎಂಬ ಹೆಸರು ಬಂತು. ಹಾಗೆಯೇ ಶ್ರೀಕೃಷ್ಣನ ರೂಪದಲ್ಲಿ ಭಗವಂತನೇ ಇದನ್ನು ಅರ್ಚಿಸಿದ್ದರಿಂದ ಇದರಲ್ಲಿ ಕೃಷ್ಣ ಸಾನ್ನಿಧ್ಯವೇ ಅಧಿಕವಾಗಿ ಮೂಡಿಬಂದು ಇದು ಕೃಷ್ಣವಾಗಿಯೇ ಪ್ರಸಿದ್ಧಿಯನ್ನು ಹೊಂದಿತು. ಇಲ್ಲಿನ ಪ್ರತಿಷ್ಠಾ ವಿಧಿಯು ವಾಯುವಿನ ಸಾನ್ನಿಧ್ಯದಲ್ಲಿ ನಡೆದ ಕಾರಣದಿಂದಲೋ ಎಂಬಂತೆ ಇಲ್ಲಿ ನಡೆಸುವ ಎಳ್ಳೆಣ್ಣೆ ಅಭಿಷೇಕ ಏನಿದೆ ಅದನ್ನು ದೇವಾಲಯದಿಂದ ಪ್ರಸಾದವಾಗಿ ತಂದು ಹಚ್ಚುವುದರಿಂದ ವಾತರೋಗವೇ ಮೊದಲಾದ ಸಂಧಿ ಸಂಬಂಧಿತ ಖಾಯಿಲೆಗಳು ಮತ್ತು ದುರ್ಲಭವಾದ ಚರ್ಮರೋಗಗಳು ವಾಸಿಯಾದ ಹಲವಾರು ಉದಾಹರಣೆಗಳು ಇವೆ.

ಇದನ್ನೂ ಓದಿ: Garuda Purana: ಗರುಡಪುರಾಣದಲ್ಲಿ ಸ್ತ್ರೀಯರಿಗೆ ನೀಡಿದ ಸ್ಥಾನವೇನು? ಬ್ರಹ್ಮರಾಕ್ಷಸನಿಗೂ ತಪ್ಪಿಲ್ಲ ಸ್ತ್ರೀ ಶಾಪ

ಇಲ್ಲಿನ ಅಭಿಷೇಕದ ಎಳ್ಳೆಣ್ಣೆ ಅತ್ಯಂತ ಪವಿತ್ರವಾದದ್ದು. ಇಲ್ಲಿ ಸಂತಾನವಿಲ್ಲದವರು ಬೆಣ್ಣೆಯ ತುಲಾಭಾರವನ್ನು ಹರಕೆಹೊತ್ತು ಉತ್ತಮ ಸಂತಾನ ಪಡೆದ ನಿದರ್ಶನಗಳು ಸಾಕಷ್ಟಿವೆ. ಇಲ್ಲಿ ದೇವ ಗುರುವಿನ ಆಚಾರ್ಯತ್ವದಲ್ಲಿ ಪ್ರಥಮ ಪ್ರತಿಷ್ಠೆಯಾದ್ದರಿಂದ ವಿದ್ಯಾರ್ಥಿಗಳು ಉತ್ತಮ ವಿದ್ಯಾಪ್ರಾಪ್ತಿಗಾಗಿ ಇಲ್ಲಿನ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಹಾಗೆಯೇ ಪುಂ (ಗಂಡು) ಸಂತಾನಕ್ಕಾಗಿ ಇಲ್ಲಿ ಭಗವಂತನಿಗೆ ಪ್ರಿಯವಾದ ವಸ್ತುವಿನ ತುಲಾಭಾರ ಸೇವೆ ಮಾಡುವ ಪದ್ಧತಿಯೂ ಇದೆ.

ಇಲ್ಲಿ ಕೃಷ್ಣನ ಲೇಪನಕ್ಕಾಗಿ ಪ್ರತೀ ದಿನ ಶುದ್ಧ ಶ್ರೀಗಂಧವನ್ನು ಕೇಸರಿಯೊಂದಿ ತೇದು ಹಚ್ಚುತ್ತಾರೆ. ಇದನ್ನು ಪ್ರಸಾದ ರೂಪದಲ್ಲಿ ಕಳಬ ಎಂಬ ಹೆಸರಿನಿಂದ ನೀಡುತ್ತಾರೆ. ಇದು ಅತ್ಯಂತ ಪರಿಮಳವನ್ನು ತಿಂಗಳುಗಟ್ಟಲೆ ಬೀರುತ್ತದೆ. ದೇವಾಲಯದ ಪ್ರವೇಶಕ್ಕೆ ಪ್ರತಿಯೊಬ್ಬರೂ ಪರಂಪರಾಗತವಾದ ಭಾರತೀಯ ಉಡುಪನ್ನೇಧರಿಸಬೇಕು. ಇಲ್ಲಿ ಅಶಿಸ್ತಿಗೆ ಕಿಂಚಿತ್ತೂ ಅವಕಾಶವಿಲ್ಲ. ಅಂತಹ ಪವಿತ್ರ ಕ್ಷೇತ್ರ ಇದು. ಪ್ರತಿ ದಿನ ಇಲ್ಲಿ ಆನೆಯ ಮೇಲೆ ಭಗವಂತನ ಉತ್ಸವವಿದೆ. ಅದನ್ನು ನೋಡುತ್ತಿದ್ದರೆ ಸಾಕ್ಷಾತ್ ವೈಕುಂಠದಲ್ಲೇ ಇದ್ದೇವೋ ಎಂದೆನಿಸಿಬಿಡುವಷ್ಟು ಅದ್ಭುತವಾಗಿದೆ. ಇಂತಹ ಸಾನ್ನಿಧ್ಯ ಮಯವಾದ ಕ್ಷೇತ್ರದ ದರ್ಶನ ಪಾಪವನ್ನು ತೊಳೆದು ಮನಸ್ಸಿಗೆ ಪರಮ ನೆಮ್ಮದಿಯನ್ನು ನೀಡುವುದು ನಿಶ್ಚಿತ ಮತ್ತು ಅನುಭವವೇದ್ಯವೂ ಹೌದು.

ಲೇಖನ: ಡಾ.ಗೌರಿ ಕೇಶವಕಿರಣ ಬಿ

ಧಾರ್ಮಿಕಚಿಂತಕರು

Published On - 12:05 pm, Thu, 8 June 23