ಸಂಸ್ಕೃತವನ್ನು ಸಂಸ್ಕೃತಕ್ಕಾಗಿ ಅಲ್ಲ, ನಮಗಾಗಿ ಕಲಿಯಬೇಕು; ಹಾಗಿದ್ದರೆ ಕಲಿಯುವುದು ಹೇಗೆ?
ಹೆಸರೇ ಹೇಳುವಂತೆ ಸಂಸ್ಕರಿಸಲ್ಪಟ್ಟ ಭಾಷೆ ಸಂಸ್ಕೃತ. ಅಂದರೆ ಸರಿಯಾಗಿ ರೂಪುಗೊಂಡ ಭಾಷೆ. ಅದನ್ನು ಮತ್ತೆ ಯಾರೋ ಸರಿ ಮಾಡಬೇಕಾದ ಅವಶ್ಯಕತೆ ಇಲ್ಲ. ಸಂಸ್ಕೃತಭಾಷೆ ಒಂದು ಶಾಸನಕ್ಕೆ ಒಳಪಟ್ಟಿದೆ. ಆ ಶಾಸನವನ್ನು ಮೀರುವಂತಿಲ್ಲ. ಹಾಗಾಗಿ ಸಂಸ್ಕೃತ ಭಾಷೆ ತನ್ನ ಗೌರವವನ್ನು ಇಂದಿಗೂ ಉಳಿಸಿಕೊಂಡಿದ
ಸಂಸ್ಕೃತವನ್ನು ಏಕೆ ಕಲಿಯ ಬೇಕು? ಎನ್ನುವ ಪ್ರಶ್ನೆ ಪ್ರಪಂಚದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಹೌದು, ಜಗತ್ತಿನಲ್ಲಿ ಸಾವಿರಾರು ಭಾಷೆಗಳಿರುವಾಗ ಸಂಸ್ಕೃತ ಏಕೆ ಬೇಕು? ಅದನ್ನೇ ಕಲಿಯಬೇಕು ಎನ್ನುವ ಒತ್ತಡ, ಪ್ರಚಾರ, ಕಲಿಕೆಗೆ ಬೇಕಾದ ವ್ಯವಸ್ಥೆ ಎಲ್ಲವನ್ನೂ ಮಾಡುತ್ತಿರಲು ಕಾರಣವೇನು? ಉಳಿದ ಭಾಷೆಗಳಿಗೂ ಇಂತಹ ಅವಕಾಶ, ಸ್ಥಾನಮಾನ ಬೇಡವೇ? ಎನ್ನುವ ಹಲವಾರು ಪ್ರಶ್ನೆಗಳನ್ನು ಕೇಳುವವರಿದ್ದಾರೆ. ಆ ಎಲ್ಲ ಪ್ರಶ್ನೆಗಳೂ ಉತ್ತಮವಾದುದೇ, ಅದರಲ್ಲಿ ಯಾವ ಸಂದೇಹವಿಲ್ಲ. ಆದರೆ ಇದೆಲ್ಲವನ್ನೂ ಮೀರಿದ ಪ್ರಯೋಜನ, ಅನುಕೂಲ, ಸೌಂದರ್ಯ, ವಿಜ್ಞಾನ ಸಂಸ್ಕೃತಭಾಷೆಯಲ್ಲಿ ಇದೆ.
ಸಂಸ್ಕೃತದಲ್ಲಿ ಏನಿದೆ?
ಸಂಸ್ಕೃತದಲ್ಲಿ ಎಲ್ಲವೂ ಇದೆ ಎಂದರೆ ಅಪಹಾಸ್ಯವಾದೀತು. ಆದರೆ ಏನು ಅವಶ್ಯಕವಿದೆಯೋ ಅದೆಲ್ಲವೂ ಇದೆ. ಬೇಕಾಗಿರುವುದೂ ಇಷ್ಟೇ ತಾನೆ? ಯಾವದು ಸಾರ್ವಕಾಲಿಕವಾಗಿ ಅವಶ್ಯಕವೋ ಅಂತಹದ್ದನ್ನು ಮಾತ್ರ ಇಟ್ಟುಕೊಳ್ಳುವುದು, ಬೆಳೆಸುವುದು. ಅಂತಹದ್ದನ್ನು ಮಾತ್ರ ಸಂಸ್ಕೃತ ಭಾಷೆಯಲ್ಲಿ ಕಂಡುಕೊಳ್ಳಲು ಸಾಧ್ಯ. ಉದಾಹರಣೆಗೆ ಹೇಳುವುದಾದರೆ ಸ್ಮರಣಶಕ್ತಿಗೆ ಈಗಂತೂ ವಿಧವಾದ ಉಪಕರಣಗಳು, ವಿಧಾನಗಳು ನಮ್ಮ ಮಧ್ಯೆ ಇವೆ. ಆದರೆ ಹಿಂದಿನ ಕಾಲದಲ್ಲಿ ನಮ್ಮ ಬುದ್ಧಿ, ಮನಸ್ಸುಗಳಿಗೆ ಆ ಶಕ್ತಿ ಇತ್ತು. ಒಂದೊಮ್ಮೆ ಇಲ್ಲದಿದ್ದರೂ ಅದನ್ನು ಬೆಳೆಸಿಕೊಳ್ಳುವ ವಿಧಾನಗಳನ್ನು ಪ್ರಾಚೀನರು ಕಂಡುಕೊಂಡಿದ್ದರು. ಸ್ಮರಣಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ ಈಗ ಬೇರೆ ಬೇರೆ ಗೆಜೆಟ್ ಗಳನ್ನು ಅನ್ವೇಷಿಸಿ, ಮನುಷ್ಯನ ಬುದ್ಧಿಶಕ್ತಿಯನ್ನೇ ಕಡಿಮೆ ಮಾಡುವ ಎಲ್ಲ ಉಪಕರಣಗಳೂ ಇವೆ. ನಮ್ಮ ಸಾಮರ್ಥ್ಯ ಕಡಿಮೆಯಾಯಿತು ಎಂದು ದುಃಖಿಸುವುದೋ, ಹೊಸತನ್ನು ಹುಡುಕಿದೆವು ಎಂದು ಖುಷಿಪಡುವುದೋ ಗೊತ್ತಾಗದು.
ಸಂಸ್ಕೃತ ಒಂದು ವೈಜ್ಞಾನಿಕ ಭಾಷೆ:
ಸಂಸ್ಕೃತ ಅಕ್ಷರಗಳು ಆರಂಭವಾಗುವುದು ಅಕಾರದಿಂದ. ಅ ಅಕ್ಷರವು ಮನುಷ್ಯನ ಮೊದಲ ಅಕ್ಷರ. ಹುಟ್ಟುವ ಮಗುವಿನ ಅಳು ಆರಂಭವಾಗುವುದೂ ಅಕಾರದಿಂದಲೇ. ಹಾಗಾಗಿ ಅ ಎನ್ನುವುದು ಮೊದಲ ಅಕ್ಷರವಾಗಿದೆ. ಮತ್ತೆ ಕಂಠದಿಂದ ಆರಂಭವಾಗಿ ತುಟಿಯಲ್ಲಿ ಅಕ್ಷರಗಳು ಮುಕ್ತಾಯವಾಗುತ್ತವೆ. ಒಂದೊಂದು ವರ್ಗವೂ ಕಂಠದಿಂದ ಹಂತಹಂತವಾಗಿ ಬೆಳೆದು ಮುಕ್ತಾಯವಾಗುತ್ತದೆ. ಇದನ್ನು ನಾವು ಬೇರೆ ಭಾಷೆಗಳಲ್ಲಿ ನೋಡಲು ಸಿಗದು.
ಭಾಷಾ ಸೌಂದರ್ಯ:
ಇದು ಎಲ್ಲ ಭಾಷೆಗಳಲ್ಲಿಯೂ ಇದ್ದೇ ಇರುವುದು. ಆದರೆ ಮೂಲ ಸಂಸ್ಕೃತಭಾಷೆಯಲ್ಲಿ ಸೌಂದರ್ಯ ಅದನ್ನು ಕಲಿತಾಗಲೇ ಗೊತ್ತಾಗುವುದು. ಅದಕ್ಕೂ ಹೆಚ್ಚಾಗಿ ಹೊಸ ಪದಗಳ ನಿರ್ಮಾಣವನ್ನು ಮಾಡಲು ಅವಕಾಶಗಳು ಹೆಚ್ಚಿವೆ. ಹಾಗಾಗಿಯೇ ಭಾಷೆಯಲ್ಲಿ ಸಮೃದ್ಧಿ ಇರುವುದು. ಸಂಸ್ಕೃತಭಾಷೆಯ ಪದಗಳನ್ನು ಭಾರತ ಹಾಗೂ ವಿದೇಶದ ಭಾಷೆಗಳಲ್ಲಿಯೂ ನೋಡಬಹುದು. ತದ್ಭವ ಅಥವಾ ಅಪಭ್ರಂಶವಾಗಿ ಅದನ್ನು ಬಳಸುವುದು ಇದೆ. ಸಂಸ್ಕೃತವನ್ನು ಕಲಿಯಲು ಆರಂಭಿಸಿದರೆ ಭಾಷಾಸ್ಪಷ್ಟತೆಯನ್ನು ಕಾಣಬಹುದು.
ಇದನ್ನೂ ಓದಿ: ಆರೋಗ್ಯ ವೃದ್ಥಿಗಾಗಿ ಧನು ಸಂಕ್ರಾಂತಿಯ ದಿನ ಏನು ಮಾಡಬೇಕು?
ಸಂಸ್ಕೃತ ಕಲಿಕೆಗೆ ಅವಕಾಶಗಳು :
ಈಗಾಗಲೇ ಭಾರತ ಸರ್ಕಾರ ಮೂರು ವಿಶ್ವವಿದ್ಯಾಲಯಗಳಿಗೆ ಕೇಂದ್ರೀಯ ಸ್ಥಾನಮಾನವನ್ನು ನೀಡಿದೆ. ಇಲ್ಲಿ ಪದವಿಪೂರ್ವದಿಂದ ಆರಂಭಿಸಿ ಸಂಶೋಧನೆಯವರೆಗೆ ಅಲ್ಲಿಯೇ ಅಭ್ಯಾಸವನ್ನು ಮಾಡಬಹುದು. ಜೊತೆಗೆ ವಿದ್ಯಾರ್ಥಿ ವೇತನವೂ ಸಿಗುವುದು. ಇದಲ್ಲದೆ ಸಂಸ್ಕೃತ ಕಲಿಕೆಗೆ ಅನೇಕ ಸಂಸ್ಥೆಗಳು, ಓನ್ ಲೈನ್ ಮೂಲಕ ಕಲಿಕೆಗೆ ಅವಕಾಶಗಳು ಬೇಕಾದಷ್ಟು ನಿಮಗೆ ಸಿಗಲಿದೆ. ಸ್ವತಂತ್ರವಾಗಿ ಅಧ್ಯಯನ ಮಾಡಲು ನಿಮಗೆ ಸರಳ ಭಾಷೆಯ ಸಂಸ್ಕೃತಗಳು ಪುಸ್ತಕಮಳಗೆಗಳಲ್ಲಿ, ಓನ್ ಲೈನ್‌ಗಳಲ್ಲಿ ಲಭ್ಯ.
ಸಂಸ್ಕೃತವನ್ನು ಕೇವಲ ಭಾಷೆ ಎಂದು ಮಾತ್ರಕ್ಕೆ ಕಲಿಯದೇ ಅದರಲ್ಲಿ ಇರುವ ಸತ್ತ್ವವನ್ನು, ವಿಚಾರಗಳನ್ನು ತಿಳಿದುಕೊಳ್ಳುವಕಡೆಗೂ ಮನಸ್ಸು ಮಾಡಿದರೆ ಸಂಸ್ಕೃತ ವೈಶಾಲ್ಯ, ವೈಶಿಷ್ಟ್ಯಗಳ ಅನಾವರಣವಾಗುತ್ತಾ ಹೋಗುತ್ತದೆ. ಆದರೆ ಪೂರ್ವಾಗ್ರಹ, ಊಹಾಪೋಹಗಳನ್ನು ಬಿಟ್ಟು ಮುಕ್ತಮನಸ್ಸಿನಿಂದ ಸ್ವೀಕರಿಸುವ ಮನೋಭಾವ ಮೊದಲು ಬೇಕು.
ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: