ಟೆಸ್ಟ್ ಕ್ರಿಕೆಟ್ನಲ್ಲಿ ಪ್ರತಿದಿನದ ಆಟ ಮುಗಿದ ನಂತರ ಆಯಾ ದಿನದ ಬೆಸ್ಟ್ ಪರ್ಫಾರ್ಮರ್ ಅಂತ ಪ್ರಶಸ್ತಿ ನೀಡುವ ಪರಿಪಾಠವೇನಾದರೂ ಇದ್ದಿದ್ದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆಯುತ್ತಿರುವ ಮೂರನೆ ಟೆಸ್ಟ್ ಪಂದ್ಯದ ಎರಡನೆ ದಿನದಾಟದ ಪ್ರಶಸ್ತಿ ರವೀಂದ್ರ ಜಡೇಜಾಗೆ ಖಂಡಿತವಾಗಿಯೂ ದಕ್ಕುತ್ತಿತ್ತು. ಭಾರತದ ಕ್ರಿಕೆಟ್ ಪ್ರೇಮಿಗಳು ಅದಾಗಲೇ ಅವರನ್ನು ವಿಶ್ವದ ಸರ್ವಶ್ರೇಷ್ಠ ಆಲ್ರೌಂಡರ್ ಪಟ್ಟ ಕಟ್ಟಿಬಿಟ್ಟಿದ್ದಾರೆ!
ಸಿಡ್ನಿಯಲ್ಲಿ ಜಡೇಜಾ ಆಸ್ಟ್ರೇಲಿಯಾದ 4 ವಿಕೆಟ್ಗಳನ್ನು ಕಬಳಿಸಿದ್ದೂ ಅಲ್ಲದೆ ಶತಕ ಬಾರಿಸಿ ಟೀಮಿನ ಸ್ಕೋರನ್ನು ಹೆಚ್ಚಿಸುವ ಪ್ರಯತ್ನದಲ್ಲಿದ್ದ ಸ್ಟೀವ್ ಸ್ಮಿತ್ ಅವರನ್ನು ನೇರ ಎಸೆತವೊಂದರಿಂದ ರನೌಟ್ ಮಾಡಿ ಅತಿಥೇಯರ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಸ್ಕ್ವೇರ್ಲೆಗ್ನತ್ತ ಚೆಂಡನ್ನು ತಳ್ಳಿ ಎರಡು ರನ್ ಕದಿಯುವ ಯತ್ನ ಮಾಡಿದ ಸ್ಮಿತ್ ಅಲ್ಲಿರುವ ಫೀಲ್ಡರ್ ಯಾರು ಅನ್ನುವುದನ್ನು ಮರೆತು ಎರಡನೆ ರನ್ಗಾಗಿ ಓಡಿದರು. ಚೆಂಡನ್ನು ಫೀಲ್ಡ್ ಮಾಡಿ ವಿಕೆಟ್ನತ್ತ ಎಸೆಯುವಾಗ ಜಡೇಜಾಗೆ ತಾನಿದ್ದ ಸ್ಥಳದಿಂದ ಕೇವಲ ಒಂದು ವಿಕೆಟ್ ಮಾತ್ರ ಕಾಣಿಸುತ್ತಿತ್ತು. ಆದರೆ ಅವರ ಗುರಿ ಅರ್ಜುನ ಬಿಟ್ಟ ಬಾಣದಂತಿತ್ತು! ತನ್ನ ತಪ್ಪಿಗೆ ಪರಿತಪಿಸುತ್ತಾ ಅಸ್ಟ್ರೇಲಿಯಾದ ಪ್ರಿಮೀಯರ್ ಬ್ಯಾಟ್ಸ್ಮನ್ ಪೆವಿಲಿಯನ್ನತ್ತ ಬ್ಯಾಟೆಳೆದುಕೊಂಡು ವಾಪಸ್ಸಾದರು.
ಮೂರನೆ ಟೆಸ್ಟ್ನ ಮೊದಲ ದಿನ ಕೇವಲ 3 ಓವರ್ಗಳನ್ನು ಬೌಲ್ ಮಾಡಿದ್ದ ಜಡೇಜಾ, ಎರಡನೆ ದಿನವಾಗಿದ್ದ ಇಂದು ಮೊದಲ ಸೆಷನ್ನಲ್ಲಿ ಎರಡು ವಿಕೆಟ್ಗಳನ್ನು ಕಬಳಿಸಿದರು. ಅತಿಥೇಯರ ಸ್ಕೋರ್ 216/2 ಆಗಿದ್ದಾಗ ದಾಳಿಗಿಳಿದ ಜಡೇಜಾ, ಶತಕ ಬಾರಿಸುವುದು ನಿಶ್ವಿತವೆನಿಸಿದ್ದ ಮಾರ್ನಸ್ ಲಬಶೇನ್(91) ಅವರನ್ನು ಔಟ್ ಮಾಡಿದರು. ಜಡೇಜಾ ಎಸೆತ ಜನರೇಟ್ ಮಾಡಿದ ಹೆಚ್ಚುವರಿ ನೆಗೆತವನ್ನು ನಿಭಾಯಿಸಲು ವಿಫಲರಾದ ಲಬುಶೇನ್ ಅಜಿಂಕ್ಯಾ ರಹಾನೆಗೆ ಕ್ಯಾಚಿತ್ತು ಔಟಾದರು. ಅದಾದ ಕೆಲವೇ ಓವರ್ಗಳ ನಂತರ ಅ್ರಮಣಕಾರಿ ಆಟಗಾರ ಮ್ಯಾಥ್ಯೂ ವೇಡ್ರನ್ನು ಬೆಸ್ತು ಬೀಳಿಸಿ ತಮ್ಮ ಎರಡನೆ ವಿಕೆಟ್ ಗಳಿಸಿದರು.
ಸ್ಟೀವ್ ಸ್ಮಿತ್
ಜಡೇಜಾರ ಡಬಲ್ ಸ್ಟ್ರೈಕ್ನಿಂದ ಉತ್ತೆಜಿತಗೊಂಡ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ 21 ಎಸೆತಗಳನ್ನಾಡಿಯೂ ಖಾತೆ ತೆರೆಯಲು ವಿಫಲರಾಗಿದ್ದ ಕೆಮೆರಾನ್ ಗ್ರೀನ್ ಅವರನ್ನು ಎಲ್ಬಿ ಬಲೆಗೆ ಕೆಡವಿದ ಮೇಲೆ ಆಸ್ಟ್ರೇಲಿಯಾದ ಸ್ಕಿಪ್ಪರ್ ಟಿಮ್ ಪೈನ್ ಅವರ ಆಫ್ ಸ್ಟಂಪ್ ಹಾರಿಸಿದರು.
ಏತನ್ಮಧ್ಯೆ, ಕಳೆದರಡು ಟೆಸ್ಟ್ಗಳಲ್ಲಿ ದಯನೀಯವಾಗಿ ವಿಫಲರಾಗಿದ್ದ ಸ್ಮಿತ್ ತನ್ನ ಟೆಸ್ಟ್ ಕರೀಯರ್ನ 27ನೇ ಮತ್ತು ಭಾರತದ ವಿರುದ್ಧ 8ನೇ ಶತಕ ಪೂರೈಸಿದರು. ಅಟಗಾರನೊಬ್ಬನ ಫಾರ್ಮ್ ಕ್ಷಣಿಕ ಆದರೆ ಕ್ಲಾಸ್ ಶಾಶ್ವತ ಅನ್ನುವ ಮಾತೊಂದು ಕ್ರಿಕೆಟ್ನಲ್ಲಿ ಪ್ರಚಲಿತದಲ್ಲಿದೆ. ಇದನ್ನು ಸ್ಮಿತ್ ಸಿಡ್ನಿಯಲ್ಲಿಂದು ಸಾಬೀತು ಮಾಡಿದರು.
ಮತ್ತೆ ಜದ್ದು ವಿಷಯಕ್ಕೆ ಬರೋದಾದರೆ, ಲಂಚ್ ನಂತರ ಅವರು ಬೌಲಿಂಗ್ನಲ್ಲಿ ಬುಮ್ರಾ ಅವರಂಥ ನಿಖರತೆ ಪ್ರದರ್ಶಿಸಿ ಎರಡು ಯಾರ್ಕರ್ಗಳ ಮೂಲಕ ಪ್ಯಾಟ್ ಕಮ್ಮಿನ್ಸ್ ಮತ್ತು ನೇಥನ್ ಲಿಯಾನ್ ಅವರ ವಿಕೆಟ್ಗಳನ್ನು ಪಡೆದರು. ಆಮೇಲೆ, ಅದೇ ನಿಖರತೆಯಿಂದ ಸ್ಕ್ವೇರ್ಲೆಗ್ ಪೊಸಿಶನ್ನಿಂದ ವಿಕೆಟ್ಗಳತ್ತ ಚೆಂಡನ್ನು ಬೀಸಿ ಸ್ಮಿತ್ರನ್ನು ರನೌಟ್ ಮಾಡಿದರು.
ಬ್ಯಾಟಿಂಗ್, ಬೌಲಿಂಗ್ ಮತ್ತು ಫಿಲ್ಡಿಂಗ್-ಕ್ರಿಕೆಟ್ನ ಮೂರು ಆಯಾಮಗಳಲ್ಲೂ ಟೀಮಿಗೆ ಕಾಣಿಕೆ ನೀಡುತ್ತಿರುವ ಅವರು ಈ ಸರಣಿಯಲ್ಲಿ ಭಾರತಕ್ಕೆ ನಿಸ್ಸಂದೇಹವಾಗಿ ಮೋಸ್ಟ್ ವ್ಯಾಲುಯೇಬಲ್ ಆಟಗಾರ ಎನಿಸುತ್ತಿದ್ದಾರೆ.
India vs Australia Test Series ಸ್ಮಿತ್ ಸೆಂಚುರಿ.. ಜಡೇಜಾಗೆ 4 ವಿಕೆಟ್: ಆಸ್ಟ್ರೇಲಿಯಾ ಆಲೌಟ್