Azadi Ka Amrut Mahotsav: ಸ್ವತಂತ್ರ ಭಾರತದಲ್ಲಿ ಹಾಕಿಯ ಪಾರುಪತ್ಯ..!

Azadi ka Amrit Mahotsav: ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕದೊಂದಿಗೆ ಭಾರತೀಯ ಆಟಗಾರರು ಹಿಂತಿರುಗಿದ್ದರು.

Azadi Ka Amrut Mahotsav: ಸ್ವತಂತ್ರ ಭಾರತದಲ್ಲಿ ಹಾಕಿಯ ಪಾರುಪತ್ಯ..!
Indian Hockey Team
TV9kannada Web Team

| Edited By: Zahir PY

Aug 09, 2022 | 6:23 PM

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗಿವೆ. ಅಂದರೆ ಈ ಬಾರಿ ಭಾರತವು ತನ್ನ ಸ್ವಾತಂತ್ರ್ಯ ಅಮೃತ ಮಹೋತ್ಸವನ್ನು ಆಚರಿಸುತ್ತಿದೆ. ಕಳೆದ 75 ವರ್ಷಗಳಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಂತೆ, ಕ್ರೀಡಾಲೋಕದಲ್ಲೂ ಹಲವು ಸಾಧನೆಗೈದಿದೆ. ಈ ಸಾಧನೆಗಳನ್ನು ಮೆಲುಕು ಹಾಕುವುದಾದರೆ ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯದ ಬಳಿಕದ ಸಾಧನೆಗಳಾಗಿ  ವಿಂಗಡಿಸಬಹುದು. ಏಕೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ತಂಡವು ಕ್ರಿಕೆಟ್, ಹಾಕಿ, ಕುಸ್ತಿ ಸೇರಿದಂತೆ ಪ್ರಮುಖ ಕ್ರೀಡಾಕೂಟದಲ್ಲಿ  ಭಾಗವಹಿಸಿತ್ತು. ಅದರಲ್ಲೂ 1928ರ ಒಲಿಂಪಿಕ್ಸ್​ನಲ್ಲಿಯೇ ಹಾಕಿ ತಂಡ ಕಣಕ್ಕಿಳಿದಿತ್ತು. ಆಮ್ಸ್ಟರ್‌ಡ್ಯಾಮ್​ನಲ್ಲಿ ನಡೆದ ಆ ಒಲಿಂಪಿಕ್ಸ್​ನಲ್ಲಿ ಭಾರತ ತಂಡವು ಫೈನಲ್​ನಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು 3-0 ಗೋಲುಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಹಾಕಿ ದಂತಕಥೆ ಧ್ಯಾನ್ ಚಂದ್ ಮೂರು ಬಾರಿ ಗೋಲು ಗಳಿಸಿ ದೇಶಕ್ಕೆ ಚಿನ್ನದ ಪದಕ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ 1932 ಮತ್ತು 1936 ರಲ್ಲಿ ಭಾರತ ಹಾಕಿ ತಂಡವು ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದರು.

ಆದರೆ ಸ್ವತಂತ್ರ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದ್ದು 1948 ರಲ್ಲಿ. ಅಂದರೆ ಭಾರತವು ತನ್ನ ತ್ರಿವರ್ಣ ಪಾತಾಕೆಯಲ್ಲಿ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿದ್ದು ಈಗ ಇತಿಹಾಸ. ಇದೀಗ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಆಚರಿಸುತ್ತಿರುವ ವೇಳೆ ಹಾಕಿ ಅಂಗಳದಲ್ಲಿ, ಅದರಲ್ಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಹಾಕಿ ತಂಡ ಹೇಗೆ ಪಾರುಪತ್ಯ ಮೆರೆದಿತ್ತು ಎಂಬುದರ ಇಣುಕು ನೋಟ ಇಲ್ಲಿದೆ…

  • 1948 ರ ಲಂಡನ್ ಒಲಿಂಪಿಕ್ಸ್​ನಲ್ಲಿ ಭಾರತ ತಂಡವು ಫೈನಲ್‌ ಪ್ರವೇಶಿಸಿತು. ಫೈನಲ್‌ನಲ್ಲಿ ಭಾರತವನ್ನು ಆಳಿದ ಗ್ರೇಟ್ ಬ್ರಿಟನ್ ತಂಡದ ವಿರುದ್ಧ 4-0 ಗೋಲುಗಳ ಅಂತರದಿಂದ ಜಯ ಸಾಧಿಸಿದ್ದು ಐತಿಹಾಸಿಕ ಘಳಿಗೆಯಾಗಿತ್ತು. ಏಕೆಂದರೆ ಇದು ಸ್ವತಂತ್ರ ಭಾರತದ ಮೊದಲ ಒಲಿಂಪಿಕ್ಸ್ ಪದಕವಾಗಿತ್ತು.
  • 1952ರ ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 6-1 ಅಂತರದಿಂದ ಬಗ್ಗು ಬಡಿಯುವ ಮೂಲಕ ಭಾರತ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿತು.
  •  1956 ಮೆಲ್ಬೋರ್ನ್​ ಒಲಿಂಪಿಕ್ಸ್​ನ ಫೈನಲ್ ಪಂದ್ಯವು ಭಾರತದ ಪಾಲಿಗೆ ಮಹತ್ವದ್ದಾಗಿತ್ತು. ಏಕೆಂದರೆ ಅದೇ ಮೊದಲ ಬಾರಿ ಭಾರತ-ಪಾಕಿಸ್ತಾನ್ ಫೈನಲ್​ನಲ್ಲಿ ಮುಖಾಮುಖಿಯಾಗಿತ್ತು. ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಫೈನಲ್​ನಲ್ಲಿ ಭಾರತವು 1-0 ಅಂತರದಲ್ಲಿ ಜಯಗಳಿಸುವ ಮೂಲಕ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.
  • 1964ರ ಟೋಕಿಯೊ ಒಲಿಂಪಿಕ್ಸ್​ನ ಫೈನಲ್​ನಲ್ಲಿ ಏಷ್ಯಾದ ಪ್ರತಿಸ್ಪರ್ಧಿಗಳು ಮತ್ತೊಮ್ಮೆ ಮುಖಾಮುಖಿಯಾದರು. ಆದರೆ ಈ ಬಾರಿ ಕೂಡ ಪಾಕ್​ಗೆ ಸೋಲುಣಿಸುವ ಮೂಲಕ ಸ್ವಾತಂತ್ರ ಭಾರತವು ತನ್ನ 4ನೇ ಒಲಿಂಪಿಕ್ ಚಿನ್ನವನ್ನು ಗೆದ್ದುಕೊಂಡಿತು
  • ಟೋಕಿಯೋ ಒಲಿಂಪಿಕ್ಸ್ ಬಳಿಕ ಸತತ 3 ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ಭಾರತೀಯ ಹಾಕಿ ತಂಡ 1980ರ ಮಾಸ್ಕೋ ಒಲಿಂಪಿಕ್ಸ್ ಮೂಲಕ ಮತ್ತೊಮ್ಮೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿತು. ಫೈನಲ್​ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಹಾಕಿಯಲ್ಲಿ 5ನೇ ಚಿನ್ನದ ಪದಕ ಗೆದ್ದರು.

ಇದಾದ ಬಳಿಕ ಹಾಕಿಯಲ್ಲಿ ಭಾರತಕ್ಕೆ ಚಿನ್ನದ ಪದಕ ಲಭಿಸಿಲ್ಲ. ಕಳೆದ ಬಾರಿ ನಡೆದ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕದೊಂದಿಗೆ ಭಾರತೀಯ ಆಟಗಾರರು ಹಿಂತಿರುಗಿದ್ದರು. ಅಷ್ಟೇ ಅಲ್ಲದೆ ಈ ಬಾರಿ ನಡೆದ ಕಾಮನ್​ವೆಲ್ತ್ ಗೇಮ್ಸ್ ಬೆಳ್ಳಿ ಪದಕ ಗೆದ್ದುಕೊಂಡಿದ್ದರು.

ಇದಾಗ್ಯೂ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕಕ್ಕಾಗಿ ಭಾರತ ಕಾಯುವಿಕೆ ಮುಂದುವರೆದಿದೆ. ಅದು ಕೂಡ ಕಳೆದ 42 ವರ್ಷಗಳಿಂದ ಎಂಬುದು ವಿಶೇಷ. 2024 ರಲ್ಲಿ ಪ್ಯಾರಿಸ್​ ಒಲಿಂಪಿಕ್ಸ್ ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಭಾರತೀಯ ಹಾಕಿ ತಂಡವು ಬಂಗಾರದ ಪದಕಕ್ಕೆ ಮುತ್ತಿಕ್ಕಲಿ ಎಂದು ಆಶಿಸೋಣ.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada