
2026 ರ ಟಿ20 ವಿಶ್ವಕಪ್‌ಗೆ (T20 World Cup 2026) ಸರಿಯಾಗಿ ಒಂದು ತಿಂಗಳು ಬಾಕಿ ಇದೆ. ಈ ಮಿನಿ ವಿಶ್ವಕಪ್‌ಗಾಗಿ ಐಸಿಸಿ (ICC) ಹಾಗೂ ಆತಿಥ್ಯದ ಹಕ್ಕು ಹೊಂದಿರುವ ಬಿಸಿಸಿಐ (BCCI) ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ. ಆದರೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹೊಸ ಖ್ಯಾತೆ ತಲೆನೋವು ತಂದ್ದೊಡ್ಡಿದೆ. ಒಂದೆಡೆ ಬಾಂಗ್ಲಾದೇಶ ತಂಡ ಭಾರತದಲ್ಲಿ ಟಿ20ವಿಶ್ವಕಪ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎನ್ನುತ್ತಿದ್ದರೆ, ಇನ್ನೊಂದೆಡೆ ಬಿಸಿಸಿಐ ಕೂಡ ಈ ಸಮಯದಲ್ಲಿ ವೇಳಾಪಟ್ಟಿಯನ್ನು ಬದಲಿಸಲು ಸಾಧ್ಯವಿಲ್ಲ ಎನ್ನುತ್ತಿದೆ. ಉಭಯ ಮಂಡಳಿಗಳ ಈ ಪ್ರತಿಷ್ಠೆಯ ಹೋರಾಟವನ್ನು ಪರಿಹರಿಸುವುದು ಐಸಿಸಿಗೆ ದೊಡ್ಡ ಸವಾಲಾಗಿದೆ. ಇದೆಲ್ಲದರ ನಡುವೆ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ್ದ ಬಾಂಗ್ಲಾದೇಶವು ಈಗ “ವಿವಿಐಪ ಭದ್ರತೆ” ಒದಗಿಸಿದ್ದರೂ ಭಾರತದಲ್ಲಿ ಆಡಲು ನಿರಾಕರಿಸಿದೆ ಎಂದು ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಜನವರಿ 6 ರ ಮಂಗಳವಾರ ನಡೆಯಲಿರುವ ಆನ್‌ಲೈನ್ ಸಭೆಯಲ್ಲಿ ಐಸಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲಿದೆ. ಬಾಂಗ್ಲಾದೇಶ ಮಂಡಳಿ ಉಲ್ಲೇಖಿಸಿರುವ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು ಬಿಸಿಸಿಐ, ಬಾಂಗ್ಲಾದೇಶ ತಂಡಕ್ಕೆ ರಾಜ್ಯ ಮಟ್ಟದ ಭದ್ರತೆಯನ್ನು (ವಿವಿಐಪಿ ಭದ್ರತೆ) ಒದಗಿಸಲು ಪ್ರಸ್ತಾಪಿಸಿದೆ.
ಆದರೆ ಈ ಭರವಸೆಯ ಹೊರತಾಗಿಯೂ, ಟಿ20 ವಿಶ್ವಕಪ್‌ಗಾಗಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಸಿದ್ಧವಿಲ್ಲ ಎಂದು ಬಾಂಗ್ಲಾದೇಶ ಮಂಡಳಿಯು ಅನೌಪಚಾರಿಕವಾಗಿ ಐಸಿಸಿಗೆ ತಿಳಿಸಿದೆ ಎಂದು ವರದಿಯಾಗಿದೆ. ಇನ್ನು ಮಂಗಳವಾರ ನಡೆಯಲಿರುವ ಸಭೆಯಲ್ಲಿ ಐಸಿಸಿ, ಬಿಸಿಸಿಐನ ಪ್ರಸ್ತಾವನೆಯನ್ನು ಬಾಂಗ್ಲಾದೇಶ ಮಂಡಳಿಗೆ ಔಪಚಾರಿಕವಾಗಿ ಮಂಡಿಸಲಿದೆ. ಆದಾಗ್ಯೂ, ಈಗಾಗಲೇ ಸ್ಪಷ್ಟವಾಗಿರುವಂತೆ, ಬಿಸಿಬಿ ಈ ಪ್ರಸ್ತಾವನೆಯನ್ನು ತಿರಸ್ಕರಿಸುವ ಸಾಧ್ಯತೆಯಿದೆ.
T20 World Cup: ಭಾರತಕ್ಕೆ ಬರಲ್ಲ ಎನ್ನುತ್ತಲೇ ಟಿ20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಬಾಂಗ್ಲಾ
ಬಾಂಗ್ಲಾದೇಶ ಮಂಡಳಿಯ ನಿಲುವು, ತಾನು ಕೂಡ ಪಾಕಿಸ್ತಾನದ ಮಾರ್ಗವನ್ನು ಅನುಸರಿಸಲು ಬಯಸುತ್ತಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುತ್ತಿದೆ. ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ್ದರಿಂದ, ಭಾರತೀಯ ತಂಡದ ಪಂದ್ಯಗಳನ್ನು ಯುಎಇಯಲ್ಲಿ ನಡೆಸಲಾಯಿತು. ಪ್ರತಿಯಾಗಿ, ಪಾಕಿಸ್ತಾನ ಕೂಡ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ನಿರಾಕರಿಸಿತು. ಆ ನಂತರ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಾಯಿತು. ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ, ಪಾಕಿಸ್ತಾನ ತಂಡವು ಶ್ರೀಲಂಕಾದಲ್ಲಿ ತನ್ನ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾದೇಶ ಈಗ ಭಾರತದ ಹೊರಗೆ ತನ್ನ ಪಂದ್ಯಗಳನ್ನು ಆಯೋಜಿಸುವ ಬಗ್ಗೆ ಅದೇ ರೀತಿ ದೃಢನಿಶ್ಚಯ ಹೊಂದಿದೆ. ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಈ ಸಮಸ್ಯೆಗೆ ಯಾವ ರೀತಿಯ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Tue, 6 January 26